ಧರ್ಮೋ ರಕ್ಷತಿಃ ರಕ್ಷಿತಃ

ಧರ್ಮೋ ರಕ್ಷತಿಃ ರಕ್ಷಿತಃ

ಬೈಬಲ್ ನ ನೋಅಃ ಮತ್ತು ಅವನ ನೌಕೆ ಹಾಗು ಭಾಗವತದ ಮತ್ಸ್ಯಾವತಾರ ತಿಳಿಸುವ ರೀತಿ, ಪದಗಳು, ಸಂದರ್ಭ ಬೇರೇ ಆದರೂ ಒಂದೇ ಸಾರಾಂಶವಲ್ಲವೇ? ಒಂದೇ ಸನ್ನಿವೇಶವನ್ನು ನೋಡುವ ವಿವಿಧ ದೃಷ್ಟಿಕೋಣಗಳಲ್ಲವೇ? ಒಂದರಲ್ಲಿ ದೀರ್ಘವಾಗಿ ಉಲ್ಲೇಖಿಸುವುದನ್ನು, ಮತ್ತೊಂದರಲ್ಲಿ ಸಂಕ್ಷಿಪ್ತವಾಗಿ ಹೇಳಿ, ಮತ್ತೊಂದು ವಿಷಯಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ ವಿನಃ ಇದನ್ನು ಆಳವಾಗಿ ಅಧ್ಯಯನ ಮಾಡದ ಮೂಡರಿಗೆ ಬೇರೆ ಬೇರೆಯಾಗಿ ಕಾಣುವುದರಲ್ಲಿ ಆಶ್ಚರ್ಯವೇನಿದೆ? ಮಕ್ಕಳ ಕಥೆಯ ಪುಸ್ತಕ ಓದಿದ ಹಾಗೆ ಬರಿ ಕಥೆಯಾಗಿ ಪರಿಗಣಿಸಿದರೆ, ಎರಡು ಅಚ್ಚಿನಂತೆ ಕಾಣದಿರಬಹುದು. ಆದರೆ ಇದರಲ್ಲಿ ಒಂದಷ್ಟು ಪದಗಳನ್ನು ತೆಗೆದುಕೊಂಡು ವಾದ, ವಿವಾದ ಸೃಷ್ಟಿ ಮಾಡಿಕೊಂಡು "ನಾವು ಡಿಫ಼ರೆಂಟ್" ಎಂದು ಒಂದು ಪೊಳ್ಳು "ವೈಯಕ್ತಿಕ ವ್ಯಕ್ತಿತ್ವ" ಸೃಷ್ಟಿ ಮಾಡಿಕೊಳ್ಳುವವರ ಸಂಖ್ಯೆಯೇ ಹೆಚ್ಚಾಗುತ್ತಿರುವಾಗ, ಧಾರ್ಮಿಕ ಅಸಹಿಷ್ಣುತೆ ಹೆಚ್ಚಾಗುತ್ತಿರುವಾಗ, ಎಲ್ಲಾ ಧರ್ಮಗಳ ಸಾರಾಂಶ ಒಂದೆ ಎಂಬ "ಪಾಸಿಟಿವ್ ರೀ-ಇಂಫ಼ೋರ್ಸ್ಮೆಂಟ್" ಅರಿವು ಮೂಡಿಸುವುದು ಹೇಗೆ? ಅನೇಕ ಸನ್ನಿವೇಷಗಳಿವೆ. ಆಯಾ ಪ್ರಾಂತ್ಯದ ಜನರಿಗೆ, ತಮ್ಮ ಸಂಸ್ಕ್ರುತಿಯ ಪ್ರಕಾರ ತಿಳಿಹೇಳುವ ಮೌಲ್ಯಗಳನ್ನು, ಒಂದೇ ಕಾಗೆ ನೀರು ಕುಡಿಯುವ ನೀತಿ ಕಥೆಯನ್ನು ಎಲ್ಲರ ಮನೆಗಳಲ್ಲು ಮಕ್ಕಳು ಬೇರೆ ಬೇರೆ ಪದಗಳೊಂದಿಗೆ, ವಿವಿಧ ಭಾಷೆಗಳಲ್ಲಿ, ವೈವಿಧ್ಯಮ ರೀತಿಯಲ್ಲಿ ಹೇಳುವುದಿಲ್ಲವೇ? ಹಾಗೆಯೇ, ಧರ್ಮಗಳ ಸಾರಾಂಶ ಒಂದೇ, ಆದರೂ ಏಕೆ ನಾವು ಒಂದೆ ಎಂದು ನೋಡದೆ ನಮ್ಮ ಸ್ವಂತಿಕೆಯನ್ನು ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಎಲ್ಲರೂ ಒಂದೇ ಎನ್ನುವುದನ್ನು ಮರೆತು ಏಕೆ ಹೊಡೆದಾಡುತ್ತೇವೆ ಎಂದು ಒಂದು ಸಣ್ಣ ಉದಾಹರಣೆಯೊಂದಿಗೆ ಆತ್ಮಾವಲೋಕನ.
 
ಬೈಬಲ್ ನಲ್ಲಿ ನೋಅಃ ಕಥೆಯ ಉಲ್ಲೇಖದಲ್ಲಿ ಲಮೇಚ್ ಎಂಬುವರು ಮಗ ನೋಅಃನಿಗೆ ಜನುಮವಿತ್ತಾಗ "ದೇವರು ಶಪಿಸಿದ ಭೂಮಿಯಿಂದ ಹುಟ್ಟಿದ ಈ ಮಗುವು ನಮಗೆಲ್ಲಾ ಭೂಮಿಯ ಮೇಲಿನ ನಮ್ಮ ಕರ್ಮಗಳ ಬಂಧನದಿಂದ ಮುಕ್ತಿ ದೊರಕಿಸುತ್ತಾನೆ" ಎಂದು ಭವಿಶ್ಯವಾಣಿ ನುಡಿದರು. ನೋಅಃಗೆ ೫೦೦ ವರ್ಶಗಳಾದ ನಂತರ ನೋಅಃ ಶಂ, ಹಂ ಹಾಗು ಜಪೆಥ್ ಎಂಬ ಮಕ್ಕಳಿಗೆ ಜನುಮವಿತ್ತರು. ನೋಅಃ ಆ ಕಾಲಕ್ಕೆ ಬಹಳ ಪ್ರಾಮಾಣಿಕರಾಗಿದ್ದರು. ಭೂಮಿಯಲ್ಲಿ ಕರಾಳ ಕೃತ್ಯಗಳು ಹೆಚ್ಚುತ್ತಿದ್ದ ಆ ಕಾಲದಲ್ಲಿ ಇಂತಹ ತೇಜಸ್ವಿ, ದೈವಭಕ್ತ ಹಾಗು ಸರಳ, ಪ್ರಮಾಣಿಕ ಜೀವಿ ಸಾಮನ್ಯವಾಗಿ ಕಂಡುಬರುತ್ತಿರಲಿಲ್ಲ. ಒಂದು ದಿನ ದೇವರು ನೋಅಃ ಮುಂದೆ ಪ್ರತ್ಯಕ್ಷವಾಗಿ ಹೇಳುತ್ತಾರೆ. "ಈ ಭೂಮಿಯಲ್ಲಿ ಕಪಟ, ವಂಚನೆ, ಬ್ರಷ್ಟತೆ ಎಲ್ಲಾ ಅಪಾರವಾಗಿ ಹಬ್ಬಿ ಹೋಗಿದೆ. ಈ ಭೂಮಿಯನ್ನು ನಾನು ಪೂರ್ತಿಯಾಗಿ ನಾಶ ಮಾಡಿಬಿಡುತ್ತೇನೆ. ನೀನು ಸಿಪ್ರಸ್ ಮರದದಿಂದ ಒಂದು ನೌಕೆ ನಿರ್ಮಿಸು. ನೌಕೆಯ ಉದ್ದ ೩೦೦ ಚದುರಡಿ ಆದರೆ, ಅದರ ಅಗಲ ೫೦ ಚದುರಡಿ ಹಾಗು ಎತ್ತರ ೩೦ ಚದುರಡಿಗಳಂತೆ ಹಡುಗನ್ನು ನಿರ್ಮಾಣ ಮಾಡು. ಈ ನೌಕೆಗೆ ಒಂದು ಮೇಲ್ಛಾವಣಿ ಕೂಡ ನಿರ್ಮಿಸು. ಬಾಗಿಲುಗಳಿಟ್ಟು ಮೂರು ಮಹಡಿಗಳಂತೆ ನಿರ್ಮಿಸು. ಜಲ ಪ್ರಳಯವಗುತ್ತೆ. ಭೂಮಿಯ ಮೇಲಿರುವ ಸಮಸ್ತ ಜೀವರಾಶಿಗಳು ನಾಶವಾಗುತ್ತೆ. ನೀನು, ನಿನ್ನ ಪತ್ನಿ, ನಿನ್ನ ಮಕ್ಕಳು, ಸೊಸೆಯಂದಿರು ಆ ನೌಕೆಯೊಳಗೆ ಹೋಗಬೇಕು. ನಿನ್ನ ಜೊತೆ ಜೀವಂತವಾದ ಪ್ರತಿಯೊಂದು ಜೀವಿಯ, ಪ್ರಾಣಿಯ, ಪಕ್ಷಿಯ ಎರಡು ಬಗೆ - ಒಂದು ಹೆಣ್ಣು ಒಂದು ಗಂಡು ಆ ನೌಕೆಯಲ್ಲಿ ಕರೆದುಕೊಂಡು ಹೋಗು. ಎಲ್ಲಾ ತರಹದ ಭೋಜನ ಸಾಮಗ್ರಿಗಳನ್ನು ಶೇಖರಿಸು" ಎಂದು ದೇವರು ನೋಅಃ ಗೆ ಹೇಳಿದರು. ಆಗ ನೋಅಃ ಗೆ ೬೦೦ ವರ್ಷವಾಗಿತ್ತು. ನೋಅಃ ನೌಕೆಯಲ್ಲಿ ಎಲ್ಲಾ ಜೀವಿಗಳನ್ನು ಕರೆದುಕೊಂಡು ಹೋದ ಮೇಲೆ ಏಳು ದಿನಕ್ಕೆ ಜಲ ಪ್ರಳಯ ಶುರುವಾಯಿತು. ಒಂದೆ ಸಮನೆ ಮಳೆ ೪೦ ದಿನ ಹಾಗು ೪೦ ರಾತ್ರಿಗಳು ನಿರಂತರವಾಗಿ ಸುರಿಯಿತು. ಕೊನೆಗೆ ಮಳೆ ನಿಂತಾಗ ನೋಅಃ ನೌಕೆಯಲ್ಲಿದ್ದ ಜೀವಿಗಳೊಡನೆ ಮತ್ತೆ ಸಂತತಿ ಶುರು ಮಾಡಿದ ಎನ್ನುವುದು ಬೈಬಲ್ ನ ಕಥೆ.
 
ಭಾಗವತದಲ್ಲಿ ಪರೀಕ್ಷಿದ್ರಾಜನು ಮತ್ಸ್ಯಾವತಾರವನ್ನೆತ್ತಿ ಮಹಾ ವಿಷ್ಣುವು ಮಾಡಿದ ಕರ್ಮಗಳನ್ನು ಪ್ರಶ್ನಿಸಿದಾಗ, ಶುಕಮಹಾಮುನಿಗಳ ಮಾತುಗಳನ್ನು  ಸೂತಪುರಾಣಿಕರು ಹೇಳುತ್ತಾರೆ. ಸತ್ಯವ್ರತ ಎಂಬ ಉದಾರಿಯೂ, ದೈವಭಕ್ತನೂ ಆದ ರಾಜರ್ಷಿಯು ನೀರಿನಲ್ಲಿ ತರ್ಪಣ ಕೊಡುತ್ತಿದ್ದಾಗ ಒಂದು ಸಣ್ಣ ಮೀನು ಬೊಗಸೆಯಲ್ಲಿ ಬಂತು. ಆಗ ಸತ್ಯವ್ರತನು ಆ ಮೀನನ್ನು ಮತ್ತೆ ನೀರಲ್ಲಿ ಬಿಟ್ಟುಬಿಟ್ಟನು. ಆಗ ಮೀನು ನದಿಯ ದೊಡ್ಡ ಮೀನು ತನ್ನನ್ನು ತಿಂದುಬಿಡುವುದೆಂದು ಅವನಲ್ಲಿ ರಕ್ಷಣೆ ಕೋರಿತು. ಅದನ್ನು ಎತ್ತಿಕೊಂಡು ಹೋಗಿ ಕಮಂಡಲುವಿನಲ್ಲಿ ಹಾಕಿದನು. ಅದು ಒಂದೇ ದಿನದಲ್ಲಿ ಕಮಂಡಲು ಪೂರ್ತಿ ಬೆಳೆದುಬಿಟ್ಟಿತು. ನಂತರ ಅದನ್ನು ಮಡಿಕೆಯಲ್ಲಿ ಹಾಕಿದರೆ, ಅದರ ತುಂಬ ಬೆಳೆಯಿತು. ಹಾಗೆಯೇ, ಸಣ್ಣ ಕೊಳ, ದೊಡ್ಡ ಕೊಳ, ಸರೋವರಗಳು ಎಲ್ಲದರಲ್ಲಿ ಬಿಟ್ಟಾಗಲು ಬೆಳೆಯುತ್ತಲೇ ಹೋಯಿತು. ಆಗ ಸತ್ಯವ್ರತಿನಿಗೆ ಅರಿವಾಯಿತು ಇದು ಭಗವಂತನ ರೂಪವೇ ಮತ್ಸ್ಯ ಅವತಾರದಲ್ಲಿ ಬಂದಿರುವುದೆಂದು. ಆಗ ಭಗವಂತನು ಸತ್ಯವ್ರತಿನಿಗೆ ಹೀಗೆ ಹೇಳಿದನು "ಇಂದಿನಿಂದ ಏಳನೆಯ ದಿನ ಭೂಲೋಕವೇ ಮೊದಲಾದ ಮೂರು ಲೋಕಗಳೂ ಪ್ರಳಯ ಜಲದಲ್ಲಿ ಮುಳುಗಿ ಹೋದಾಗ ನನ್ನ ಪ್ರೇರಣೆಯಂತೆ ನಿನ್ನ ಬಳಿ ವಿಶಾಲವಾದ ನೌಕೆಯೊಂದು ಬರುವುದು. ಆಗ ನೀನು ಸಮಸ್ತ ಪ್ರಾಣಿಗಳ ಸೂಕ್ಷ್ಮಶರೀರಗಳನ್ನು ತೆಗೆದುಕೊಂಡು ಸಪ್ತರ್ಷಿಗಳೊಡನೆ ಆ ನೌಕೆಯಲ್ಲಿ ಹತ್ತಬೇಕು. ಎಲ್ಲಾ ಬಗೆಯ ಸಸ್ಯಗಳು, ಮೂಲಿಕೆಗಳನ್ನು, ಬೀಜಗಳನ್ನು ತೆಗೆದುಕೊಳ್ಳಬೇಕು. ಆ ಸಮಯದಲ್ಲಿ ಎಲ್ಲಾ ಕಡೆಯೂ ಮಹಾಸಾಗರವೇ ಕಂಡುಬರುತ್ತದೆ". ಹೀಗೆ ಹೇಳಿದಮೇಲೆ ಸತ್ಯವ್ರತನು ಹೀಗೆಯೇ ಮಾಡಿದನು, ಏಳನೆಯ ದಿನಕ್ಕೆ ಜೋರಾದ ಮಳೆ ಶುರುವಾಯಿತು. ಆಗ ನೌಕೆಯು ಪ್ರಕಟವಾಗಿ ಮತ್ಸ್ಯ ರೂಪದಲ್ಲಿನ ಭಗವಂತನೂ ಪ್ರಕಟವಾದನು. ನೌಕೆಯನ್ನು ಅದರೋಳಗಿನ ಸತ್ಯವ್ರತ ಹಾಗು ಅವನು ಶೇಖರಿಸಿದ್ದ ಎಲ್ಲಾ ಜೀವಿಗಳನ್ನು ನೌಕೆಯೊಂದಿಗೆ, ಪ್ರಳಯಕಾಲದ ಸಮುದ್ರದಲ್ಲಿ, ಬ್ರಹ್ಮನು ಮಲಗಿದ್ದಾಗ ಸಪ್ತರ್ಷಿಗಳು ಹಾಗು ಸತ್ಯವ್ರತನಿಗೆ ತತ್ತ್ವವನ್ನು ಉಪದೇಶಿಸಿದನು. ಅದೇ ಸತ್ಯವ್ರತನು ಮುಂದಿನ ಮನ್ವಂತರದಲ್ಲಿ ವೈವಸ್ವತ ಮನುವಾಗಿ ಸ್ರುಷ್ಟಿ ಮುಂದುವರೆಸಿದನು ಎನ್ನುವುದು ಭಾಗವತದ ಉಲ್ಲೇಖ. 
 
ಎರಡೂ ಸಾಮನ್ಯವಾಗಿ ಕೇಳಿರುವ ಕಥೆಗಳೇ. ಎರಡರಲ್ಲಿಯೂ ಹೇಳುವ ರೀತಿಯಾಗಲಿ, ಒತ್ತು ಕೊಡುವ ವಿಷಯಗಳಾಗಲಿ ಬೇರೆಯಾದರೂ ಅಂತರಾತ್ಮ ಒಂದೆ ಅಲ್ಲವೇ? ಇದನ್ನು ಭಕ್ತಿಪೂರ್ವಕವಾಗಿಯಾದರೂ ಅರ್ಥ ಮಾಡಿಕೊಳ್ಳಬಹುದು, ಮನೋಧರ್ಮದ ದೃಷ್ಟಿಯಿಂದಲಾದರೂ ನೋಡಬಹುದು, ಸಾಂಕೇತಿಕವಾಗಿಯಾದರೂ ನೋಡಬಹುದು. ನೀತಿ ಒಂದೆ. "ಧರ್ಮೋ ರಕ್ಷತಿಃ ರಕ್ಷಿತಃ" - ಧರ್ಮವನ್ನು ರಕ್ಷಿಸುವವನನ್ನು ಆ ದೇವರೇ ರಕ್ಷಿಸುವನು ಎನ್ನುವ ಮಾತನ್ನು ನಾವು ಎರಡೂ ಧರ್ಮದ ಕಥೆಗಳಲ್ಲಿ ನೋಡಬಹುದು. ಇಂತಹ ನೂರಾರು ಉದಾಹರಣೆಗಳು ಯಾವುದೇ ಎರಡು ಧರ್ಮ ಗ್ರಂಥಗಳನ್ನು ವಿಷ್ಲೇಷಿಸಿ ನೋಡಿದರು ಸಿಗುತ್ತದೆ. ಅನೇಕತೆಯಲ್ಲಿ ಏಕತೆ ಕಾಣಬೇಕಾದ ನಾವು ಏಕತೆಯಲ್ಲಿ ಅನೇಕತೆ ಹುಡುಕಿಕೊಂಡು ಹೋಗುತ್ತಿರುವುದು ಮಾಯೆ, ಅಥವ ಸೃಷ್ಟಿಯ ವಿಸ್ಮಯವಲ್ಲದೇ ಬೇರೇ ಏನು?
 
 

Rating
No votes yet