ದುಃಖಕ್ಕೆ ಲ್ಯಾಕ್ರಿಮಲ್ ಗ್ರಂಥಿ ಕರಗುವುದೇಕೆ!

ದುಃಖಕ್ಕೆ ಲ್ಯಾಕ್ರಿಮಲ್ ಗ್ರಂಥಿ ಕರಗುವುದೇಕೆ!

ಶುದ್ಧ ಸಂಜೆಯಲ್ಲಿ ದಿಶಾ ಓಡಿಬಂದು ಕೇಳಿದ ಪ್ರಶ್ನೆ, ಭಾವನೆಗೂ ಹಾಗೂ ಕಣ್ಣೀರು ಉತ್ಪತಿ ಮಾಡುವ ಲ್ಯಾಕ್ರಿಮಲ್ ಗ್ರಂಥಿಗೂ ಯಾವುದೇ ಸಂಬಂದ ಇಲ್ಲದಿದ್ದರೂ, ಭಾವನಾತ್ಮಕವಾಗಿ ದುಃಖವಾದಾಗ ಕಣ್ಣೀರು ಮಿಡಿಯುವುದು ಏಕೆ? ಎಂದು,,,,
ಸುಮ್ಮನೆ ಆಕಾಶ ನೋಡುತ್ತಾ ಯಾವುದೋ ಮೋಡದ ಮೇಲೆ ಕುಳಿತ ಅವನಿಗೆ ಅವಳ ಪ್ರಶ್ನೆ ಏನೋ ಒಂದು ರೀತಿಯ ಪುಳಕ ತಂದಿತು!! ಅದೇಕೆ ಹಾಗೆ ?? ಅವನಲ್ಲೂ ಪ್ರಶ್ನೆ ಮನೆ ಕಟ್ಟಿತು, ವಿಜ್ಞಾನದಲ್ಲಿ ಅದಕ್ಕೆ ಉತ್ತರ ಇರಬಹುದೇನೋ, ಆದರೆ ಅವನಿಗೆ ಅದು ಬೇಡವಿತ್ತು,,,, ತಕ್ಷಣಕ್ಕೆ ದಿಶಾಳಿಗೆ ಉತ್ತರಿಸುವುದು ಬೇಡವೆಂದು ಸುಮ್ಮನಾದ ಆತ, ಹಾಗೆಯೇ ಒಂದೆರಡು ದಿನಗಳನ್ನು ತಿಂದ ನಂತರ ಅವನ ಮನದಲ್ಲಿ ಪ್ರಶ್ನೆ ದಷ್ಟ ಪುಷ್ಟವಾಗಿ ಬೆಳೆಯಿತು, ಯಾಕೆ ಹಾಗೆ, ಹೃದಯದ ಭಾವಕ್ಕೆ, ಮನಸ್ಸಿನ ಭಾರಕ್ಕೆ ಕಣ್ಣು ಮಿಡಿಯುವುದು ಯಾಕೆ,,,,,,,ಭಾವನ ಸಾಗರದಲ್ಲಿಯೇ ಉತ್ತರ ಹುಡುಕಬೇಕು ಎಂದು ಮತ್ತೆ ಒಂದು ಸಂಜೆ ಆಕಾಶಕ್ಕೆ ಮುಖ ಮಾಡಿ ಕುಳಿತ, ಅವನ ಮುಖ ನೀಲಿ ಆಕಾಶದಲ್ಲಿ ಪ್ರತಿಫಲಿಸುತ್ತಿತ್ತು,,,,,
 
ಮನಸ್ಸು ಮೆದುವಾದಾಗ, ಆಲೋಚನೆಗಳು ಭಾರವಾದಾಗ, ಬಾಲ್ಯದ ಗೆಳತಿಯ ನೆನಪಾದಾಗ, ಅಮ್ಮನ ಮಡಿಲನು ನೆನೆಸಿಕೊಂಡಾಗ, ಸದಾ ಕೆಂಗಣ್ಣಿನ ಅಪ್ಪನ ಮನದೊಳಗಿನ ಪ್ರೀತಿಯ ನೆನಪಾದಾಗ, ಮಗುವಯಸ್ಸಿನ ತುಂಟತನಗಳು ನೆನಪಾದಾಗ, ಜೀವನದ ಕೊನೆಯ ವರೆಗೂ ಬರುವೆ ಎಂದು ಮಾತು ಕೊಟ್ಟ ಗೆಳತಿ ಮರುದಿನವೇ ಅಪರಿಚಿತಳಾದಾಗ, ಜೀವಕ್ಕೆ ಜೀವವಾಗಿದ್ದ ಗೆಳೆಯ ಮತ್ತೆಂದೂ ಬರದ ಜಾಗಕ್ಕೆ ಹೋದಾಗ, ಪರ್ವತದ ಎತ್ತರದಲ್ಲಿ ಪ್ರೀತಿಸಿದವಳು ಕಣ್ಮುಂದೆ ಇದ್ದರೂ, ಅವಳ ಕೈ ಹಿಡಿಯುವ ಅವಕಾಶ ದೊರೆಯದೆ ಇದ್ದಾಗ, ಕಣ್ಣು ತಂತಾನೆ ಒದ್ದೆಯಾಗುತ್ತದೆ, ಭಾವನೆಗಳಿಗೆ ಸಂಬಂದವೇ ಇರದ ಲ್ಯಾಕ್ರಿಮಲ್ ಗ್ರಂಥಿ ಕಣ್ಣೀರು ಸ್ರವಿಸುತ್ತದೆ,
 
ಹೊರಗಿನ ದೂಳಿನ ಕಣಗಳು ಕಣ್ಣಿನ ಪದರಕ್ಕೆ ತಾಗದ ಹಾಗೆ, ಲ್ಯಾಕ್ರಿಮಲ್ ಗ್ರಂಥಿ, ನೀರು ಸ್ರವಿಸುವುದರ ಮೂಲಕ ಒಂದು ತೆಳು ಪರದೆಯನ್ನು ಕಣ್ಣಿನ ಪದರದ ಮೇಲೆ ಹರಡುತ್ತದೆ , ಹೀಗೆ ಅದು ಕಣ್ಣನ್ನು ಕಾಪಾಡುತ್ತದೆ, ಆದರೆ ಹೃದಯದ ಒಳ ಹೊಕ್ಕ ಭಾವಗಳ ದೂಳಿಗೆ ಲ್ಯಾಕ್ರಿಮಲ್ ಗ್ರಂಥಿ ಹೇಗೆ ಬೇಲಿ ಹಾಕಬಲ್ಲದು?
 
ಬಹುಷ, ಶುದ್ಧ ಪ್ರೇಮವೇ ಉತ್ತರವಿರಬಹುದೇನೋ! ಹೆತ್ತ ಕುಡಿಗೆ ನೋವಾದರೆ, ಅವ್ವನ ಕರುಳು ವೇದನಿಸುವಹಾಗೆ,ಲ್ಯಾಕ್ರಿಮಲ್ ಗ್ರಂಥಿ ಹೃದಯದ ನೋವಿಗೆ, ಮನಸ್ಸಿನ ಭಾರಕ್ಕೆ ಕೊರಗುವುದೇನೋ,ಕೆಲವೊಮ್ಮೆ ಮನದೊಳಗಿನ ಭಾವಗಳು ಕಣ್ಣಲ್ಲೇ ಪ್ರತಿಫಲಿಸುವುದನ್ನು ಕಾಣಬಹುದು, ಕಣ್ಣು ಸೌಂದರ್ಯವನ್ನು ಹೇಗೆ ಸವಿಯಬಲ್ಲದೋ, ಹಾಗೇ ನೋವಿಗೂ ಮಿಡಿಯಬಲ್ಲದು, ಕಣ್ಣು ಹೊರ ಪ್ರಪಂಚದ ಕನ್ನಡಿ, ಅಥವಾ ಮನಸ್ಸಿನ ಬಾಗಿಲು ಎಂದು ಕೆಲವರು ಹೇಳುವುದುಂಟು, ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಣ್ಣನ್ನು ಟೀವಿಯ ತೆರೆ ಎನ್ನೋಣ, ಮನಸ್ಸೇ ಟೀವಿಯಾಗಲಿ, ಮನಸ್ಸಿನಲ್ಲಿ ಮೂಡಿದ ಎಲ್ಲ ತಲ್ಲಣಗಳೂ ಕಣ್ಣಿನ ಪರದೆಯಲ್ಲಿ ಕಾಣಿಸಲೇ ಬೇಕು, ಅದೇ ಕಣ್ಣಿನ ಮಹತ್ವ,,,,,,, ನಾವು ಇನ್ನೊಬ್ಬರ ಕಣ್ಣನ್ನು ಓದುವುದನ್ನೂ ಕಲಿಯುತ್ತಾ ಹೋದಂತೆ, ಅವರ ಭಾವಗಳ ಸುಳಿಯೊಳಗೆ ಸಿಕ್ಕಿಕೊಳ್ಳುತ್ತೇವೆ, ಅಲ್ಲಿನ ನೋವು, ಧೈನ್ಯತೆ, ಕೋಪ, ಸೆಡವು, ಪ್ರೇಮ, ಮುಗ್ಧತೆ, ಎಲ್ಲವೂ ನಮ್ಮಲ್ಲಿ ಪ್ರತಿಫಲಿಸಲಾರಂಭಿಸುತ್ತದೆ, ಇದನ್ನೇ ಲೈಫ್ ಆಫ್ ಪೈ ಚಿತ್ರದಲ್ಲಿ ಬೇರೊಂದು ರೀತಿಯಲ್ಲಿ ಹೇಳಿರುವುದು, ನಮ್ಮ ಭಾವನೆಗಳೇ, ನಾವು ನೋಡುವ ಪ್ರಾಣಿಗಳ ಕಣ್ಣುಗಳಲ್ಲಿ ಪ್ರತಿಫಲಿಸುತ್ತದೆ ಎಂದು,,,,
 
ಅರೇ !! ಅವನು ಆಕಾಶದಲ್ಲಿ ಮುಳುಗಿ ಸಾಯುತ್ತಿದ್ದಾನೆ, ಕಾಲು ಹಿಡಿದು ಎಳೆಯಿರಿ ಅವನನ್ನು, ಯಾರೋ ಕೂಗಿದ ಹಾಗಾಯಿತು, ಅವನು ಹಿಂತಿರುಗಿ ನೋಡಿದ, ಮಗುವೊಂದು ಸೂರ್ಯನನು ನೋಡಿ ಜೋರಾಗಿ ಅಳುತ್ತಾ ಕಿರುಚುತ್ತಿತ್ತು,,,,
 
ಮಗುವಿನ ಮುಗ್ಧ ಕಣ್ಣುಗಳಲ್ಲಿ, ಸೂರ್ಯ ಸಾಯುತ್ತಾನೆ ಎಂಬ ಭಯವಿತ್ತು.
 
ದಿಶಾ ಮತ್ತೊಮ್ಮೆ ಓಡುತ್ತಾ ಈ ಕಡೆ ಬಂದರೆ, ಅವಳ ಪ್ರಶ್ನೆಗೆ ತಾನು ಕಂಡುಕೊಂಡ ಉತ್ತರಗಳನ್ನು ಅವಳಿಗೆ ತಿಳಿಸಬೇಕೆಂದು ಅವನು ಬರೆಯಲಾರಂಭಿಸಿದ,
 
ಮಗು, ಮುಳುಗುವ ಸೂರ್ಯನನು ಕಂಡು ಅಳುತ್ತಲೇ ಇತ್ತು.
 
-ನವೀನ್ ಕುಮಾರ್ ಜಿ ಕೆ