ಹಾಲಿನ ಹುಡುಗಿಯ ಮೋಡ

ಹಾಲಿನ ಹುಡುಗಿಯ ಮೋಡ

ಆಕಾಶಕ್ಕೆ ಕೈ ಹಾಕಿ,
ಮೋಡಗಳನ್ನು ತಿನ್ನಬೇಕೆನ್ನುವ ತವಕ,
ಚೆನ್ನೈ ನ ಹಾಲು ಮಾರುವ ಹುಡುಗಿಯ ಕಣ್ಣಲ್ಲಿ,
 
ಮೋಡದ ಬಿಳಿ ಬಿಳಿ ಹಾಸಿಗೆಯಲ್ಲಿ
ಮಲಗಿ ನಿದ್ರಿಸಿ, 
ಅದರ ಪರಿಮಳವನ್ನು ಆಸ್ವಾದಿಸುವ ಕನಸು,
ಅವಳಿಗೆ,,,
 
ಕೆನ್ನೆ ಮೇಲೆ, ಅರಿಶಿನದ ಬದಲಿಗೆ,
ಮೋಡದ ಚೂರುಗಳನ್ನು ಉಜ್ಜಿಕೊಳ್ಳಬೇಕೆನ್ನುವ,
ತುಂಬು ಹಂಬಲ,
 
ವರ್ಷಪೂರ್ತಿ ಹಾಲು ಮಾರಿದರೂ,
ಅದರ ರುಚಿಯನ್ನು ಸವಿಯಲಾಗಲಿಲ್ಲ ಎಂಬ ಖೇದವಿಲ್ಲ,
ಅವಳಿಗೆ ಮೋಡದ ಮೇಲೆ ಮಲಗುವ ಚಿಂತೆ ಮಾತ್ರ,,,
 
ಸದಾ ಮೋಡಗಳ ಕನಸಲ್ಲಿ,
ಆಕಾಶವನ್ನು ಗೆಳೆಯನನ್ನಾಗಿ ಮಾಡಿಕೊಂಡಿದ್ದಳು,
ಮೌನ-ಮೌನ ವಾಗಿ, ಬಹಳ ಮಾತಾಡುತ್ತಿದ್ದಳು 
ಆಕಾಶದ ಜೊತೆ.
 
ಕೆನ್ನೆ ಹೊಳಪುಗೊಳ್ಳುವ ವಯಸ್ಸಲ್ಲಿ, 
ಕಿಲುಬು ಕಾಸಿಗೆ, ಬಾಲ್ಯವನ್ನು ಬಲಿಕೊಟಿದ್ದಳಾಕೆ.
ಹೊಂಬೆಳಕಿಗೆ ಆಕೆಗೆಂದು ಇದ್ದದ್ದು, ಬರಿಯ ಆಕಾಶ ಮತ್ತು ಮೋಡ,,,
 
ಅವಳ ಹಂಬಲಕ್ಕೆ ಕರಗಿ,
ಮೋಡ ಕರಗಿ, ಧಾರಾಕಾರವಾಗಿ ಸುರಿದು ಅವಳನ್ನು ಅಪ್ಪಿತ್ತು,,,,,
ಚೆನ್ನೈ ನಗರ, ಅವಳ ಮೋಡದ ಪ್ರೇಮದ ಉತ್ಕಟತೆಗೆ ಸಾಕ್ಷಿಯಾಗಿತ್ತು.
 
ಆಕೆಯ ಬಡತನಕ್ಕೆ, ಈಗ ಇಡಿ ನಗರವೇ ಸಾತು ನೀಡುತ್ತಿದೆ,,,,,
ಮುಂದಾದರೂ ಆಕೆ, ಮೋಡಗಳನ್ನು ಪ್ರೀತಿಸುವುದನ್ನು ತಡೆಗಟ್ಟಿ, ಶಾಲೆಗೇ ಕಳುಹಬೇಕಿದೆ.
ಅಲ್ಲಿ ಆಕೆಗೆ ಬದುಕನ್ನು ಪ್ರೀತಿಸಲು, ಕಲಿಸಿಕೊಡಬೇಕಿದೆ.
 
ಪ್ರಕೃತಿ ಕಾಸಿದ್ದವರ ಕೈಬೊಂಬೆ ಅಲ್ಲ ಎಂದು ಅವಳಿಂದಲೇ ತಿಳಿದಂತಿದೆ,,,,