ಮುಂಜಾವಿನ‌ ಮಾತುಗಳು ‍‍: ಪುಸ್ತಕ‌ ವಿಮರ್ಷೆ

ಮುಂಜಾವಿನ‌ ಮಾತುಗಳು ‍‍: ಪುಸ್ತಕ‌ ವಿಮರ್ಷೆ

ಚಿತ್ರ

  ಪುಸ್ತಕ‌ : ಮುಂಜಾವಿನ‌ ಮಾತುಗಳು
ಬರಹಗಾರರು : ಜಿ ಕೆ ಜಯರಾಮ್
ಪ್ರಕಾಶನ : ವಸಂತ್ ಪ್ರಕಾಶನ, 2015
 
ಕನ್ನಡದ ಎಷ್ಟೋ ಪ್ರಸಿದ್ಧ ಕವಿಗಳು ಮಲೆನಾಡಿನ ಮೂಲವುಳ್ಳವರು. ಕಬ್ಬಿಣ ಹಾಗು ಕಾಗದ ಕಾರ್ಖಾನೆಗಳು ನ್ಯೂಯಾರ್ಕ್ ನಗರದ ಡೌಂಟೌನ್ ನಷ್ಟು ಬೆಳೆದು ವಿಸ್ತಾರವಾಗುವ ಮೊದಲು ಭದ್ರಾವತಿಯು ಕೂಡ ಮಲೆನಾಡಿನ ಹವಾಮಾನವೇ ಹೊಂದಿದ್ದು  ಹೌದು. ಬಯಲುಸೀಮೆಯ ಹತ್ತಿರವೂ ಇದ್ದು, ಪ್ರಕೃತಿ ಸೌಂದರ್ಯದ ಗಂಧದ ಗುಡಿಯ ತಪ್ಪಲಲ್ಲಿ ಮುಂಜಾವಿನ ಮಂಜಿನಲ್ಲಿ, ಜಗಲಿಯಲ್ಲಿ ಕುಳಿತು, ಉಯ್ಯಾಲೆಯಾಡುವ ಮಗುವನ್ನು ನೋಡುತ್ತ, ಹಕ್ಕಿಗಳ ಇಂಚರ ಕೇಳಿ, ಬೆಳಗಿನ ಕಾಫಿಯ ರುಚಿ ಸವೆದವರು ಮಾತ್ರ ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕುವ ಹರ ಸಾಹಸ ಮಾಡುತ್ತಾರೆ ಎಂದರೆ ತಪ್ಪಾಗಲಾರದು. ಮಲೆನಾಡಿನ ಸೊಬಗು ಸವೆಯುತ್ತ, ಆಲೋಚನೆ ಎಂಬ ಗಿಳಿಯನ್ನು ಹಾರಲು ಬಿಟ್ಟು, ಸಾಹಿತ್ಯದ ವೀಣೆಯ ಮಾಧುರ್ಯಕ್ಕೆ ಪ್ರಾಸ, ಕಾವ್ಯ ರೂಪಕವಾದ "ಮುಂಜಾವಿನ ಮಾತುಗಳೇ" ಸಂಗೀತ. 
 
ಮೂಲತಹ ಭದ್ರಾವತಿಯವರಾದ ಡಾ. ಜಿ. ಕೆ. ಜಯರಾಮ್ ಅವರ "ಮುಂಜಾವಿನ ಮಾತುಗಳು" ಶುರುವಿಂದ ಕೊನೆಯವರೆಗೂ 'ಕನ್ನಡ ಸಾಹಿತ್ಯ ಸಿಗುರು ತೆಗೆದ ಕಬ್ಬಿನಂತೆ, ಉಷ್ಣ ಅಳಿದ ಹಾಲಿನಂತೆ, ಸಿಪ್ಪೆ ಸುಲಿದ ಬಾಳೆಯ ಹಣ್ಣಿನಂತೆ' ಎಂದು ಸಾರಿ ಹೇಳುತ್ತದೆ. "ಪ್ರಥಮ ಪ್ರಯತ್ನ"ದಲ್ಲಿ ಕಾವ್ಯ ಬರೆಯಲು ಪೆನ್ ಹಿಡಿದ ಕ್ಷಣದಲ್ಲಿ ಮನಸ್ಸಿನಲ್ಲಿ ಮೂಡುವ ಎಲ್ಲಾ ಯೋಚನೆಗಳು ಹಾಗು ಯಾರಿಗೋಸ್ಕರ ಈ ಕಾವ್ಯ ಸಂಕಲನ, ಯಾರು ಓದುತ್ತಾರೋ, ಯಾರು ಓದಲು ಇಷ್ಟ ಪಡುತ್ತಾರೋ, ಯಾರು ಓದಲೆಬೇಕೋ ಎಂಬ 'target audience' ಬಗ್ಗೆ ಯೊಚನೆಗೊಳಗಾದರೆ, ಈ ಕಾವ್ಯಗಳನ್ನು ಓದುತ್ತಾರೋ ಇಲ್ಲವೋ ಎಂಬ ಅಂಜಿಕೆಯನ್ನು ಬಟ್ಟಲೇಕೆ ಅರ್ಧ ಬರಿದು ಎಂದು ಯೋಚಿಸುವ ಬದಲು ಬಟ್ಟಲೇಕೆ ಅರ್ಧ ಪೂರ್ಣ ಎಂದು ನೋಡಬಹುದಲ್ಲ ಎಂದು  "ಸವಿನುಡಿಯ ಬಳುವಳಿ"ಯಿಂದ ಪುಸ್ತಕವನ್ನು ಪೂರ್ಣಗೊಳಿಸಿದ್ದರೆ. ಮಧ್ಯೆ ಹಾಸ್ಯ, ವ್ಯಂಗ್ಯ, ಮಾಹಿತಿ, ಜ್ಞಾನ ಎಲ್ಲದರಿಂದ ಅಲಂಕರಿಸಿದ್ದಾರೆ. 
 
"ಕೊನೆಯ ಮಾತು" ಪುಸ್ತಕದ ಮಧ್ಯದಲ್ಲೇಕಿದೆ ಎಂದು ಯೋಚಿಸುತ್ತಿರುವಾಗಲೇ, ಓದಲು ಶುರು ಮಾಡಿದಾಗ ತಿಳಿಯುತ್ತೆ ಒಬ್ಬ ರೈತನ ದಾರುಣ ಜೀವಗಾಥೆಯನ್ನು ಕೇವಲ ಕೆಲವು ಸಾಲಗಳಲ್ಲಿ ಎಷ್ಟು ಚಂದದಿಂದ ವಿಸ್ತರಿಸುವುದನ್ನು ನೋಡಿದರೆ ಮನಸ್ಸಿನೊಳಗಿನ ಕವಿತೆ ಹೀಗೆ ಪುಸ್ತಕ ರೂಪದಲ್ಲಿ ಬಂದಿರುವ ತರಹ ಇನ್ನು ಹೆಚ್ಚು ಕವಿತೆಗಳನ್ನು ಓದುವ ದುರಾಸೆ ಮೂಡಿಸುತ್ತೆ. ಒಂದು ಕಡೆ 'ತಾಯಿ'ಯ ಮಮತೆಯ ಬಗ್ಗೆ ವಿವರಿಸುವುದಾದರೆ ಮತ್ತೊಂದೆಡೆ ಅಹಂ ಬ್ರಹ್ಮಾಸ್ಮಿ ಎಂದು ತಿಳಿದ ಮಂತ್ರಿಯ ದರ್ಪವನ್ನು ವ್ಯಂಗ್ಯವಾಗಿ ರೂಪದಲ್ಲಿ 'ನಾನೊಬ್ಬ ಮಿನಿಸ್ಟರ್' ಹಹ ಎಂಬ ಅಟ್ಟಹಾಸದ ಹಾಡಿನ ರೂಪಕ ಪದ್ಯ. ಅಂತು  ಮಾತೆಯಿಂದ ಹಿಡಿದು ಮಡದಿಯ ವರೆಗೂ, ಕುಂಟ ನಾಯಿ ಮರಿ ಇಂದ ಹಿಡಿದು ಕನಸಿನ ಲೋಕದವರೆಗೂ ಮನಸ್ಸಿನ ಎಲ್ಲಾ ಬೇರೆ ಬೇರೆ ಭಾವನೆಗಳನ್ನು ಪುಟ್ಟ ಪುಟ್ಟ ಕವಗಳೊಂದಿಗೆ ಚಿತ್ರಿಸುವುದು ಈ ಪುಸ್ತಕದ ವಿಶೇಷ. ಖಂಡಿತ ಒಂದು ಪುಸ್ತಕ ಕೊಂಡು, ಪುಟಾಣಿ ಓದುಗರನ್ನು ಕವನಗಳಲ್ಲಿ ಆಕರ್ಶಿತರಾಗಿಸಲು ಒಂದು ಒಳ್ಳೆಯ ಪ್ರಯತ್ನ. 

Rating
No votes yet