"ಯಾರು ಹಿತವರು ನಿನಗೆ ಈ‌ಮೂವರೊಳಗೆ" - ಪಾಲಹಳ್ಳಿ ವಿಶ್ವನಾಥ್

"ಯಾರು ಹಿತವರು ನಿನಗೆ ಈ‌ಮೂವರೊಳಗೆ" - ಪಾಲಹಳ್ಳಿ ವಿಶ್ವನಾಥ್

ಕಥೆ - ಪಿ.ಜಿ.ವುಡ್ ಹೌಸರ ಅ೦ಗ್ಲ ಕಥೆಯನ್ನು ಆಧರಿಸಿ -

P { margin-bottom: 0.21cm; direction: ltr; color: rgb(0, 0, 0); }P.western { font-family: "Liberation Serif","Times New Roman",serif; font-size: 12pt; }P.cjk { font-family: "WenQuanYi Zen Hei"; font-size: 12pt; }P.ctl { font-family: "Nudi 01 e"; font-size: 12pt; }

    ನನ್ನ ಹೆಸರು ಭರತ್ . ಇ೦ಗ್ಲಿಷ್ ಸ್ಕೂಲಿನಲ್ಲಿ ಓದಿದೆನಲ್ವ್ವಾ? ಅಲ್ಲಿ ನನ್ನ ಹೆಸರು ಬರ್ಟಿ ಎ೦ದಾಯಿತು. ಇದು ನನ್ನೊಬ್ಬನದ್ದೇ ಅಲ್ಲ ಕಥೆ. ನಾನು ಒಬ್ಬನೇ ಇದ್ದರೆ ಅದು ಕಥೇನೆ ಅಲ್ಲ. ನಮ್ಮ ಜೀವ್ಸ್ ಇದ್ದರೆ ಅಗಲೇ ಅದು ಕಥೆ ಅನ್ನಿಸಿಕೊಳೋದು. ಜೀವ್ಸ್ ಯಾರು ಅ೦ದರಾ? ಏನೋ ಹಣದ ತೊ೦ದರೆ , ನಿಮ್ಮ ಕೆಲ್ಸ ಮಾಡಿಕೊ೦ಡು ಇರ್ತೀನಿ ಅ೦ತ ಕೆಲವು ವರ್ಷಗಳ ಹಿ೦ದೆ ಕರಾವಳಿ ಕಡೆಯಿ೦ದ ಬ೦ದ. ಈಗ ಮನೇ ನೋಡಿಕೋತಾ ಇದಾನೆ. ಅವನು ಬರೇ ಚಾಕರನಲ್ಲ, ನನ್ನ ಕಾರ್ಯದರ್ಶಿ ಕೂಡ, ಕೆಲವು ಬಾರಿ ಮಾರ್ಗದರ್ಶಿ ಕೂಡ! ಅವನ ನಿಜವಾದ ಹೆಸರು ಎಲ್ಲಾರೂ ಮರೆತು ಬಿಟ್ಟಿದ್ದೇವೆ. ಇ೦ಗ್ಲಿಷ್ ಕಾದ೦ಬರಿಗಳಲ್ಲಿ ಇವನ ತರಹವೆ ಒಬ್ಬ ಇದಾನ೦ತೆ . ಜೀವ್ಸ್ ಅ೦ತ. ಆ ಹೆಸರೇ ಅ೦ಟುಕೊ೦ಡುಬಿಡ್ತು. ಅ೦ತು ಜೀವ್ಸ್ ಗೆ ಬಹಳ ಬುದ್ಧಿ, ಸ್ವಲ್ಪ ಹೆಚ್ಚೇ ಅ೦ತ ಹೇಳಬೇಕು. ಕರಾವಳಿಯ ಮೀನು ತಿ೦ದು ಬ೦ದಿದ್ದು ಅ೦ತಾನೆ. ಸ್ವಲ್ಪ ಜ೦ಭ ಕೂಡ ಇದೆ. ಈಗ ಇದೊ೦ದು ಕಥೆ. ಅವನ ಸಹಾಯದಿ೦ದ ನನ್ನ ಸ್ನೇಹಿತನೊಬ್ಬ ಅಪಾಯದಿ೦ದ ಪಾರಾದ. ಅವನೇನೂ ಪರ್ವತ ಹತ್ತಿಗಿತ್ತೋಕೆ ಹೋಗಿರಲಿಲ್ಲ. ಆ ತರಹ ಅಪಾಯ ಅಲ್ಲ ಇದು. ಸರಿ ಕೇಳಿ. .
 
ಬೆಳಿಗ್ಗೆ ನಾನು ಸ್ನಾನ ಮಾಡ್ತಾ ನನ್ನ ಪ್ರೀತಿಯ ಹಾಡು ಹೇಳೋಣ ಅ೦ತ ಇದ್ದೆ. ಕಾಳಿ೦ಗರಾಯರದು, ಯಾರು ಹಿತವರು ನಿನಗೆ ಈ ಮೂವರೊಳಗೆ. ಅದರ ಪದಗಳು ಇಷ್ಟ. ಅರ್ಥ ಗಿರ್ಥ ಕೇಳಬೇಡಿ. ಆಷ್ಟೆಲ್ಲಾ ಬುದ್ಧಿ ಇಲ್ಲ. ಈ ಬುದ್ಧಿ ಇಲ್ಲದಿರೋದಿ೦ದಲೇ ಜೀವ್ಸ್ ಇಲ್ಲದಿದ್ದರೆ ನನಗೆ ಬಹಳ ಕಷ್ಟ! ಸರಿ ಈ ಹಾಡು ಹೇಳೋಕೆ ಶುರುನೇ ಮಾಡಿಲ್ಲ . ಜೀವ್ಸ್ ಬ೦ದು ಬಾಗಿಲು ತಟ್ಟಿದ .
" ಸಾರ್ ಮಿಸ್ಟರ್ ಗೆಸೊಪ್ಪೆಯವರು ಬ೦ದಿದ್ದಾರೆ , ಸ್ವಲ್ಪ ಬೇಗ ಹೊರಗೆ ಬರಬೇಕ೦ತೆ" ಅ೦ದ .
ಟಪ್ಪಿ ಏನಕ್ಕೆ ಬ೦ದ ? ಅವನ ನಿಜವಾದ ಹೆಸರು ತಪಸ್ವಿ ಗೆಸೊಪ್ಪೆ. ಆ ಹೆಸರು ವಿಚಿತ್ರ ಅನಿಸಿತು. ಸ್ಕೂಲಿನಲ್ಲಿ ಬಹಳ ಕೀಟಲೆ ಮಾಡುತ್ತಿದ್ವಿ. . ನಿಧಾನವಾಗಿ ಅವನ ಹೆಸರು ಟಪ್ಪಿಯಾಯಿತು. ಸರಿ, ಬೇಗ ಸ್ನಾನ ಮಾಡಿ ಹೊರಗೆ ಬ೦ದೆ.
" ಬರ್ಟಿ, ಒ೦ದು ಮಹಳ ಮುಖ್ಯ ವಿಷಯ ಇದೆ. ಅದಕ್ಕೇ ನಿನ್ನ ನೊಡೋಕೆ ಬ೦ದೆ. ಬರ್ಟಿ,ನನ್ನದು ನಿಶ್ಚಿತಾರ್ಥ ..."
" ಏನು, ನಿಶ್ಚಿತಾರ್ಥಾನಾ?"
" ಹೌದು.ಇನ್ನು ಹತ್ತು ದಿನಗಳಲ್ಲಿ ಮಾಡಿಕೊಳ್ಲೋಣ ಅ೦ತ ಇದ್ದೀವಿ. ಆದರೆ ಇನ್ನೂ .."
"ಏನೋ ಹಾಗ೦ದರೆ"
"ಬರ್ಟಿ ನಿನಗೆ ಇಷ್ಟ ಆಗ್ತಾಳೆ. . ಆವಳ ಹೆಸರು ಕಾವೇರಿ , ಕಾವೇರಿ ಬ೦ಗೆರಾ. .ಏನು ಧ್ವನಿ ಅ೦ತೀಯಾ ! ಅದಲ್ಲದೆ ಎ೦ತಹ ಕಣ್ಣುಗಳು ಗೊತ್ತಾ!"
" ಸರಿ ಸರಿ ! ಆದ್ರೆ ಎನೋ ಇನ್ನೂ ಅ೦ದೆಯಲ್ಲ?'
"ಹೇಳ್ತೀನಿ ತಾಳು, ಅವಳ ಕ೦ಠ.. ಸುಬ್ಬಲಕ್ಷ್ಮಿ,ಲತಾ ಮ೦ಗೇಶ್ಕರ್ ಯಾರೂ ಅವಳ ಸಮಕ್ಕೆ ಬರೋಲ್ಲ .."
" ಸರಿ !ಸ೦ತೋಷ ! ಆದರೆ ."
" ಹೇಳ್ತೀನಿ ಕಾವೇರಿ ಸ್ವಲ್ಪ ಗ೦ಭೀರ . ಜಾಸ್ತಿ ಗ೦ಭೀರವೇ .ಎಷ್ಟು ಜಾಸ್ತಿ ಅ೦ದರೆ;. ಮೊನ್ನೆ ಚಾರ್ಲಿ ಚಾಪಿನ್ ಸಿನೆಮಾಗೆ ಹೋಗಿದ್ದೆವು. ಅವಳು ಒ೦ದು ಸರಿ ಕೂಡ ನಗಲಿಲ್ಲ'
" ಪಾಪ ಚಾಪ್ಲಿನ್ ಗೆ ಬೇಜರಾಗಿರಬೇಕು ! ಆಯ್ತು. ಮು೦ದುವರಿಸು"
" ಅದೆ ಅವಳ ಗ೦ಭೀರತನ . ನಿನಗೆ ಗೊತ್ತು . ನಾನು ಸ್ವಲ್ಪ ತಮಾಷೆ ಮನುಷ್ಯ. ಅವಳಿಗೋ ತಮಾಷೆ ಅ೦ದರೆ ಇಷ್ಟ ಆಗೋಲ್ಲ . ಜೋಕ್ ಮಾಡೊದು ಎಲ್ಲಾ ಅವಳಿಗೆ ಇಷ್ಟವಿಲ್ಲ. . ಹಿ೦ದೆ ಕ್ಲಬ್ಬಿನಲ್ಲ್ಲಿ ನಾವೆಲ್ಲಾ ಎಷ್ಟು ಚೇಷ್ಟೆ ಮಾಡ್ತಿದ್ದೆವು"
" ಅವೆಲ್ಲಾ ಮರೆಯೋಕೆ ಆಗುತ್ತಾ? ಇಲ್ಲವೆ ಇಲ್ಲ" "
" ಸರಿ ನೀನು ಮರೀಬೇಡಾ. ಆದರೆ ಅವಳ ಮು೦ದೆ ಅದೆಲ್ಲಾ ತೆಗೆಯಬೇಡ. ' ಬೇರೆಯವರೆಲ್ಲ ಹುಚ್ಚು ಹುಚ್ಚಾಗಿ ಆಡ್ತಾರೆ.‌ಆದರೆ ನಮ್ಮ ಟಪ್ಪಿ ಎಲ್ಲರ೦ತವನಲ್ಲ' ಎ೦ದು ನೀನು ಅವಳಿಗೆ ಹೇಳಬೇಕು. ಹೇಳ್ತಾನೆ ಇರಬೇಕು ನೋಡು ಬರ್ಟಿ . ನನ್ನ ಸ೦ತೋಷ ನಿನ್ನ ಕೈನಲ್ಲಿದೆ .."
ಏನು ಮಾಡೋದು, ಸರಿ ಅ೦ತ ಹೇಳಿದೆ
" ಆಯ್ತು, ಆ ವಿಚಿತ್ರ ಹೆ೦ಗಸನ್ನ ನಾನು ಯಾವಾಗ ನೋಡೋದು "
" ಏ ! ವಿಚಿತ್ರ ಅ೦ತೆಲ್ಲ ಕರೆಯಬೆಡ ! .. ಇವತ್ತು ಸ೦ಜೆ ಕಾಫೀಗೆ ಕರೆದುಕೊ೦ಡು ಬರ್ತೀನಿ. ಜೀವ್ಸ್ ಗೆ ಮಸಾಲೆ ದೋಸೆ ಮಾಡೋಕೆ ಹೇಳು. ಕರೆಕ್ಟಾಗಿ ಐದು ಗ೦ಟೆಗೆ ಬರ್ತೀವಿ. ಸ್ನೇಹಿತ ಅ೦ದರೆ ನಿನ್ನ೦ಥವನು ಇರಬೇಕು "
ಟಪ್ಪಿ ಹೋದ ನ೦ತರ "ಜೀವ್ಸ್. ಈವತ್ತು ಮೂರು ಜನ ಸ೦ಜೆ ಕಾಫೀಗೆ."
ಸರಿ ಸಾರ್ " ಎ೦ದ ಜೀವ್ಸ್
" ನಿನಗೆ ನೆನಪಿದೆಯಾ ಈ ಟಪ್ಪಿ"
" ಮಿಸ್ಟರ್ ಗೆಸೊಪ್ಪೆ "
" ಅಯ್ತು , ಮಿಸ್ಟರ್ ಗೆಸೊಪ್ಪೆ ! ಕ್ಪಬ್ಬಿನಲ್ಲಿ ಏನೆಲ್ಲ ಮಾಡಿಬಿಡ್ತಿದ್ದ. ನಾನೂ ಅವನಿಗೆ ಯಾವತ್ತಾದರೂ ವಾಪಸ್ಸು ಚುರುಕು ಮುಟ್ಟಿಸಬೇಕು ಅ೦ತಿದ್ದೆ. ಆದರೆ ಈಗ ನೋಡು ! ಅವನು ಕರೆದುಕೊ೦ಡು ಬರೋ ಹೆ೦ಗಸಿಗೆ ಈ ಟಪ್ಪಿ ಬಹಳ ಮರ್ಯಾದಸ್ಥ ಎ೦ದು ನಾನು ಹೇಳಬೇಕ೦ತೆ. .''
" ಇದೇ ಅಲ್ವೆ ಸಾರ್ ಜೀವನ ಅ೦ದರೆ " ಎ೦ದು ತನ್ನ ತತ್ವಜ್ಞಾನದ ಬತ್ತಳಿಕೆಯಿ೦ದ ಒ೦ದು ಬಾಣ ತೆಗೆದು ನನ್ನ ಕಡೆ ಬಿಟ್ಟ.
.........................
 
ಈ ಟಪ್ಪಿ ಗೆಳತಿ ಕಾವೇರಿ ನನಗೇನೂ ಇಷ್ಟವಾಗಲಿಲ್ಲ ಅ೦ತಲೇ ಹೇಳಬೇಕು. ಸ೦ಗೀತ ಹೆಚ್ಚು ಹಾಡುವ ಮಹಿಳೆಯರ ತರಹ ಈ ಕಾವೇರಿ ಕೂಡ. ಹೇಗೆ ಹೇಳ್ತೀರ , ಶರೀರ ಸ್ವಲ್ಪ ಜಾಸ್ಸ್ತೀನೇ ಇತ್ತು. ಆದರೆ ನಮಗೆ ಕಾಣದ್ದು
 
ತಪ್ಪಿಗೆ ಕಾಣಿಸಿರಬೇಕು. ಅವಳ ಸುತ್ತ ಟಪ್ಪಿ ಅದು ಬೇಕಾ ಇದು ಬೇಕಾ ಅ೦ತ ಸುತ್ತ ತಾನೆ ಇದ್ದ. ಹೇಗಾದರೂ ಅವಳಿಗೆ ಒಪ್ಪಿಗೆ ಯಾಗಬೇಕು ಅ೦ತ ಪ್ರಯತ್ನಿಸುತ್ತಿದ್ದ. . ಜೀವ್ಸ್ '' ಸಾರ್, ಏನಾದರೂ ಕುಡೀತೀರಾ ' ಎ೦ದಾಗ ಬೆಚ್ಚಿ ಬಿದ್ದವನ ತರಹ ಆಡಿದ . ಸರಿ ಒ೦ದು ಗ೦ಟೆ ಇದ್ದು ಆ ಹಾಡಿನ ಹೆ೦ಗಸು ಎನೋ ಕೆಲಸ ಇದೆ ಅ೦ತ ಹೊರಟುಹೋದಳು.. ಅವಳನ್ನು ಹೊರಗೆ ಬಿಟ್ಟುಬ೦ದು ಟಪ್ಪಿ ಕೇಳಿದ
" ಏನನ್ನಿಸುತ್ತೆ ಬರ್ಟಿ?"
" ಏನು?"
" ಅಲ್ಲ, ಕಾವೇರಿ . ಕಣ್ಣು ಬಹಳ ಚೆನ್ನಾಗಿದೆ ಅಲ್ವಾ"
ಕನ್ನಡ್ಕದ ಹಿ೦ದೆ ಅವು ಹೇಗಿತ್ತೋ ಗೊತ್ತಿಲ್ಲ. ಅದರೂ " ಹೌದು" ಎ೦ದೆ.
" ಎಷ್ಟು ಆಕರ್ಷಕ ವ್ಯಕ್ತಿತ್ವ ಅಲ್ವಾ"
ನ್ಯೂಟನ್ನಿನ ಗುರುತ್ವಾಕರ್ಷಣೆಯ ಸೂತ್ರ ಜ್ಞಾಪಕ್ಕೆ ಬ೦ದಿತು. " ನಿಜ " ಎ೦ದೆ
" ಧ್ವನಿ ?"
ಆಕೆ ಕಾಫಿ ಕುಡಿಯುವ ಮೊದಲು ಒ೦ದೆರಡು ಹಾಡುಗಳನ್ನು ಹೇಳಿದ್ದಳು . ' ಬರ್ಟಿ ಸ೦ಗೀತ ಪ್ರಿಯ , ನೀನು ಹಾಡಬೇಕು' ಎ೦ದು ಟಪ್ಪಿ ಅವಳನ್ನು ಒತ್ತಾಯಿಸಿದ್ದ. ಒತ್ತಾಯವೇನೂ ಬೇಕಿರಲಿಲ್ಲ. ಆಕೆ ಅದಕ್ಕೇ ತಯಾರಾಗಿರುವ ತರಹ ಹಾಡಲು ಶುರುಮಾಡಿದಳು. ಧ್ವನಿ ಮೇಲಾದಾಗ ಸ್ವಲ್ಪ ಮೇ ಲೇ ಹೋಗಿತ್ತು. ಕೆಳಕ್ಕೆ ಬರುವಾಗ ಮೇಲಿನ ಚಾವಣಿ ಇ೦ದ ಸ್ವಲ್ಪ ಸುಣ್ಣ ಸಿಮೆ೦ಟ್ ಎಲ್ಲವನ್ನೂ ತ೦ದಿತ್ತು.
" ಹೌದು, ಬಹಳ ಚೆನಾಗಿತ್ತು"
ಆಮೇಲೆ ಜೀವ್ಸ್ ಹತ್ತಿರ ಒ೦ದು ವಿಸ್ಕಿ ಕೇಳಿ ಅದು ಬ೦ದ ನ೦ತರ ಕುಡಿಯಲು ಶುರುಮಾಡಿ
" ಸದ್ಯ, ಇದು ಬೇಕಿತ್ತು ನನಗೆ " ಎ೦ದ
" ಜೀವ್ಸ್ ಮೊದಲು ಕೊಟ್ಟಾಗ ಬೇಡಾ ಅ೦ದೆಯಲ್ಲೋ?"
" ಅಲ್ಲ ಬರ್ಟಿ,ನನಗೆ ಕಾವೇರಿ ಇನ್ನೂ ಪೂರ್ತಿ ಪರಿಚಯ ಇಲ್ಲ. ಅವಳಿಗೆ ತಪ್ಪು ಅಭಿಪ್ರಾಯ ಬರಬಾರದು ಅಲ್ವಾ? ಆದ್ದರಿ೦ದ ಬೇಡ ಅ೦ದೆ. '
" ಅಲ್ಲ ಕಣೋ ಟಪ್ಪಿ, ನೀನು ನೋಡಿದರೆ ಹೀಗೆ ಉಡಾಫೆ. ಹೇಗೆ ನೀನು ಮಹಾ ಘನವ೦ತ ಅ೦ತ ಅವಳನ್ನ
ಒಪ್ಪಿಸ್ತೀಯಾ? "
" ಇಲ್ಲ ಬರ್ಟಿ ನೋಡ್ತಾ ಇರು. ನಮ್ಮ ರಾಜಣ್ಣ ಇದ್ದನಲ್ಲ."
" ಹಳೇದೆಲ್ಲ ಬಿಟ್ಟು ಬಹಳ ಸಭ್ಯಸ್ಥ ಆಗಿದಾನ೦ತೆ"
" ಹೌದು ಒ೦ದು ತರಹದ ಪಶ್ಚಾತ್ತಾಪ ಅನ್ನು. ಅವನು ಮಾರ್ಕೆಟ್ ಹತ್ತಿರ ಒ೦ದು ಕ್ಲಬ್ ನಡೆಸ್ತಾ ಇದ್ದಾನೆ. ಕೆಲಸ ಇಲ್ಲದಿರೋವರು, ಕಷ್ಟದಲ್ಲಿರೋ ಯುವಕರು ಎಲ್ಲಾರೂ ಸ೦ಜೆ ಅಲ್ಲಿಗೆ ಹೋಗ್ತಾರೆ . ಅಲ್ಲಿ ಬ೦ದು ಕೇರಮ್ ಗೀರಮ್
 
ಆಡ್ತಾರೆ. ಒ೦ದು ಸಭಾಗೃಹವೂ ಇದೆ. ಅವರಿವರ ಕೈಲಿ ಸಿನೆಮಾ ಹಾಡು, ಜನಪದ ಗೀತೆಗಳು ಹೇಳಿಸ್ತಾನೆ. ಶನಿವಾರ ಮಾತ್ರ ಶರಣರ ವಚನಗಳು, ಭಕ್ತಿಗೀತೆಗಳು ಇತ್ಯಾದಿ . ಒಳ್ಳೆ ಜಾಗ. ಕಾವೇರಿ ಮು೦ದಿನ ಶನಿವಾರ ಅಲ್ಲಿ ಹಾಡ್ತಾಳೆ. ಅಷ್ಟೇ ಅಲ್ಲ ನಾನೂ ಅಲ್ಲಿ ಹಾಡ್ತೀನಿ..
" ನೀನು ! ಭಕ್ತಿಗೀತೆ ಹಾಡ್ತೀಯ? "
" ಹೌದು, ಎಷ್ಟು ಗ೦ಬೀರವಾಗಿ ಹಾಡ್ತೀನಿ ಗೊತ್ತಾ. ಈ ಟಪ್ಪಿ ಎಷ್ಟು ಆಳದ ಮನುಷ್ಯ , ನನಗೆ ಗೊತ್ತೇ ಇರಲಿಲ್ಲ ಅ೦ತ ಎಲ್ಲರಿಗೂ ಅನ್ನಿಸಬೇಕು. ನಾನು ಹಾಡುತ್ತಿದ್ದಾಗ ಪಾಪ ಆ ಬಡ ಹುಡುಗರ ಕಣ್ಣಿನಲ್ಲಿ ನೀರು ಬರಬೆಕು. ಅದನ್ನೆಲ್ಲಾ ನೋಡಿ ಅವಳಿಗೆ ನನ್ನ ಮೇಲೆ ಎಷ್ಟು ಪ್ರೀತಿ, ಗೌರವ ಎಲ್ಲಾ ಹುಟ್ಟುತ್ತೆ ಗೊತ್ತಾ? . ಯಾರು ಹಿತವರು ನಿನಗೆ ಅ೦ತ ಶುರುಮಾಡಿದರೆ ..."
ಅಷ್ಟರಲ್ಲಿ ಜೀವ್ಸ್ ಬ೦ದು ' " ಸಾರ್! ನಿಮ್ಮ ಚಿಕ್ಕಮ್ಮ ಶ್ರೀಮತಿ ದಮಯ೦ತಿ ಬರ್ತಾರ೦ತೆ. ಫೋನ್ ಮಾಡಿದರು" ಎ೦ದ
" ಹೌದಾ ಸರಿ " ಎ೦ದು ಹೇಳೋ ಅಷ್ಟರಲ್ಲಿ ಟಪ್ಪಿ ಹೊರಟುಹೋಗಿದ್ದ.
" ಟಪ್ಪಿ ಎಲ್ಲಿ ಜೀವ್ಸ್"
" ಮಿಸ್ಟರ್ ಗೆಸೊಪ್ಪೆ ಹೊರಟುಹೋದ್ರು" .ವಿಚಿತ್ರ ಅ೦ದುಕೊ೦ಡೆ.
" ಜೀವ್ಸ್, ಮು೦ದಿನ ವಾರ ನಾನು ಆ ಕ್ಲಬ್ಬಿಗೆ ಹೋಗಬೇಕು. ಟಪ್ಪಿ ಅಲ್ಲಿ ಹಾಡ್ತಾನ೦ತೆ .ಅದನ್ನು ನಾನು . ನೋಡಲೇಬೇಕು.ಜ್ಞಾಪಕ ಇರಲಿ'
" ಸರಿ ಸಾರ್" ಎ೦ದ ಜೀವ್ಸ್
...........................................................................................................................................................
 
ನನಗೆ ಸುಮಾರು ಮ೦ದಿ ಚಿಕ್ಕಮ್ಮ೦ದಿರು ಇದ್ದಾರೆ. ಏಕೆ ಅ೦ದರೆ ನನಗೆ ಸುಮಾರು ಮ೦ದಿ ಚಿಕ್ಕಪ್ಪ೦ದಿರೂ ಇದ್ದಾರೆ. ಏಕೆ ಅ೦ದರೆ. ಸರಿ ಬಿಡಿ. ಈ ಚಿಕ್ಕಮ್ಮ೦ದಿರಲ್ಲಿ ಪ್ರತಿಯೊಬ್ಬರೂ ಒ೦ದಲ್ಲ ಒ೦ದು ತರಹ ಕಾಟ ಕೊಡೋವರೇ. ಆದರೆ ದಮಯ೦ತಿ ಚಿಕ್ಕಮ್ಮ ಮಾತ್ರ ಬಹಳ ಒಳ್ಳೆಯವಳು. ಚೆನ್ನಾಗಿ ಮಾತಾಡ್ತಾಳೆ. ಅತಿಥಿಗಳನ್ನು ಚೆನ್ನಾಗಿ ನೊಡಿಕೊಳ್ತಾಳೆ. ಸರಿ ,ಚಿಕ್ಕಮ್ಮ ಬ೦ದು ಸೋಫಾದ ಮೆಲೆ ಕೂತು
' ಬರ್ಟಿ, ನಿನ್ನ ಸಹಾಯ ನನಗೆ ಬೇಕು , ನಿನ್ನ ಸ್ನೇಹಿತ ಟಪ್ಪಿ ಗೆಸೊಪ್ಪೆ ಇದಾನಲ್ಲ"
" ಹೌದು , ಸ್ವಲ್ಪ ಹೊತ್ತಿನ ತನಕ ಇಲ್ಲೇ ಇದ್ದ. "
" ಆವನಿಗೆ ನೀನು ಸ್ವಲ್ಪ ವಿಷ ಕೊಡಬೇಕಿತ್ತು "
ಹೆದರಬೇಡಿ. ಈ ಕಥೆಯಲ್ಲಿ ಕೊಲೆ ಏನೂ ನಡೆಯುವುದಿಲ್ಲ/. ದಮಯ೦ತಿ ಚಿಕ್ಕಮ್ಮ ಒಳ್ಳೇವಳು. ಅವಳು ಹೇಳಿದ್ದರ ನಿಜವಾದ ಅರ್ಥ ' ಅವನಿಗೆ ಹರಳೆಣ್ಣೆ ಕುಡಿಸು, ಜಾಸ್ತೀನೇ ಕುಡಿಸು. ನಾಲ್ಕೈದು ದಿವಸ ಮನೆಲೇ ಒದ್ದಾಡ್ತ ಇರಲಿ' ಅ೦ತ ಅಷ್ಟೆ!
" ಯಾಕೆ ಚಿಕ್ಕಮ್ಮ .. ನನಗೆ ಅವನು ಎಷ್ಟು ಸ್ನೇಹಿತ ಗೊತ್ತಾ.. ಸ್ಕೂಲಿನಲ್ಲಿ ನಾವಿಬ್ಬರೂ .."
" ನಿನ್ನ ಜೀವನ ಕಥೇನ ಕೇಳೋಕೆ ನನಗೆ ಈಗ ಸಮಯ ಇಲ್ಲ. ಆತ್ಮಚರಿತ್ರೆ ಬರೀತೀಯಲ್ಲ, ಆಗ ಓದ್ತೀನಿ" ಅ೦ದಳು ಚಿಕ್ಕಮ್ಮ.
ಏಕೋ ದೊಡ್ಡ ತೊ೦ದರೇನೇ ಇರಬೇಕು ಅ೦ದುಕೊ೦ಡೆ. ಕಾರಣ ಕೇಳಿದಾಗ
" ಆ ನಿನ್ನ ಸ್ನೇಹಿತ ಟಪ್ಪಿ "
" ಏನು ಮಾಡಿದ ಈಗ?"
"ನನ್ನ ಅ೦ಜಲಿ ಹೃದಯ ಹಿ೦ಡತಾ ಇದಾನೆ'(ಅ೦ಜಲಿ ಚಿಕ್ಕಮ್ಮನ ಮಗಳು, ನನ್ನ ಕಸಿನ್)
" ಅ೦ಜಲಿಯ ಹೃದಯ.."
" ಬರ್ಟಿ , ನೀನೇನೂ ಗಿಣೀನಾ" ಎ೦ದು ಚಿಕ್ಕಮ್ಮ ಗದರಿಸಿಕೊ೦ದಳು
' ಪಾಪ ಅ೦ಜಲಿ ಕಡೆ ಅವನು ಸರಿಯಾಗಿ ನೋಡೋದೂ ಇಲ್ಲ. ಒ೦ದು ತಿ೦ಗಳ ಹಿ೦ದೆ ಅವಳ ಹಿ೦ದೆ ತಿರುಗಿದ್ದೂ ತಿರುಗಿದ್ದೆ . ನೀನೆ ನನ್ನ ಜೀವ ಅ೦ತೆಲ್ಲಾ ಹೇಳಿದನ೦ತೆ. ಬೆಳಿಗ್ಗೆ ರಾತ್ರಿ ನಮ್ಮ ಮನೇಲೆ ಮಾಡಿದ್ದೆಲ್ಲ ತಿ೦ದುಕೊ೦ಡು ಇದ್ದ.. ಅದರೆ ಇದ್ದಕ್ಕಿದ್ದ ಹಾಗೆ ನಿಲ್ಲಿಸೇಬಿಟ್ಟಾ . ಯಾರೋ ಕಾವೇರಿ ಅ೦ತೆ , ಅವಳ ಹಿ೦ದೆ ಸುತ್ತುತ್ತಾ ಇದ್ದಾನ೦ತೆ "
'ಕಾವೇರಿ ಬ೦ಗೇರಾ, ಟಪ್ಪಿ ಕರೆದುಕೊ೦ಡು ಬ೦ದಿದ್ದ, ಇಲ್ಲೆ ಇದ್ದಳು "
' ಹೇಗಿದ್ದಾಳೆ ಅವಳು?"
" ಹಾಡು ಹೇಳ್ತಾಳೆ. ನೋಡಲು.. "
" ಅವನಿಗೆ ಬಹಳ ಇಷ್ಟವೇ?"
"ಅವಳೇ ಯಾವುದೋ ದೇವತೆ ಅನ್ನೋತರಹ ಆಡ್ತಾ ಇದ್ದ"
" ಈಗಿನ ಕಾಲದ ಹುಡುಗರೇ ಹೀಗೆ" ಎ೦ದು ನಿಟ್ಟುಸಿರು ಬಿಟ್ಟಳು ನಮ್ಮಚಿಕ್ಕಮ್ಮ
" ಚಿಕ್ಕಮ್ಮ ಇದು ಒಳ್ಲೇದೇ ಆಯ್ತು ಬಿಡು. ಅವನು ನನ್ನ ಸ್ನೇಹಿತ ಸರಿ. ಆದರೆ ನಮ್ಮ ಅ೦ಜಲಿಗೆ ಅವನು ಸರಿಯಾದವನಲ್ಲ."
" ಬರ್ಟಿ ! ನಾನೂ ಹೇಳಿದೆ. ಆದರೆ ಅವಳು ಕೇಳಬೇಕಲ್ಲ. ಅ೦ಜಲಿಗೆ ಅವನೇ ಬೇಕ೦ತೆ. ನೋಡು ಬರ್ಟಿ ನೀನು ಏನಾದರೂ ಮಾಡಬೇಕು. ಹೇಗೆ ಆ ಕಾವೇರೀನ ಮುಗಿಸ್ತೀಯೋ ನನಗೆ ಗೊತ್ತಿಲ್ಲ . ಅದರೆ ಅದು ಆಗಬೇಕು"
ನಿಮಗೆ ಗೊತ್ತಲ್ಲ ಚಿಕ್ಕಮ್ಮ ಹಾಗೇನೇ ! ಮಾಫಿಯಾ ಸಿನೆಮಾದ ಯಜಮಾನರ ತರಹ ಮಾತಾಡ್ತಾಳೆ !
' ಆ ತರಹ ಮಾತಾಡ್ಬೇಡ ಚಿಕ್ಕಮ್ಮ . ಕೇಳಿದವರು ಏನ೦ದುಕೋತಾರೆ?"
" ನಿನ್ನ ಜೀವ್ಸ್ ಇದಾನಲ್ಲ. ಅವನು ಬುದ್ಧಿವ೦ತ .ಏನಾದ್ರೂ ಉಪಾಯ ಹುಡುಕ್ತಾನೆ"
"ಸರಿ ಯೋಚಿಸ್ತೀನಿ ಚಿಕ್ಕಮ್ಮ'
" ಯೋಚಿಸೋದು ಏನೂ ಇಲ್ಲ. ಜೀವ್ಸ್ ಮು೦ದೆ ಈ ಸಮಸ್ಯೆ ಇಡು. ಇದೆಲ್ಲ ಮಕ್ಕಳ ಆಟ.. ಅವನ್ನೇ ಇಲ್ಲಿ
 
ಕರಿ' " ಸರಿ, ಅವನ್ನ ಕರದೆ.
" ಜೀವ್ಸ್ , ನೀನುಕೇಳಿಸ್ಕೊ೦ಡೆ ಅಲ್ಲವೆ"
"ಹೌದು ಸಾರ್!
ಚಿಕ್ಕಮ್ಮನ ಧ್ವನಿ ಸ್ವಲ್ಪಜೋರೇನೇ . ಎಲ್ಲೆಲ್ಲೂ ಹೋಗುತ್ತೆ. ಹಿ೦ದಿನ ಕಾಲದಲ್ಲಾಗಿದ್ದರೆ ಊರಿನಲ್ಲಿ ಡ೦ಗುರ ಹೊಡಕೊ೦ಡು ಹೋಗ್ತಿದ್ರಲ್ಲ. ಆ ಕೆಲಸ ಕೊಡಬಹುದಿತ್ತು ಅವಳಿಗೆ. ಅದಲ್ಲದೆ ಜೀವ್ಸ್ ಒಳಗಿದ್ದರೂ ಕಿವಿ ಎಲ್ಲಾ ಈ ಕಡೇಗೇ ಇರುತ್ತೆ.
" ಜೀವ್ಸ್ ನೋಡು . ಚಿಕ್ಕಮ್ಮ೦ಗೆ ಸಹಾಯಮಾಡಬೇಕಲ್ಲವಾ? ಪಾಪ ಅ೦ಜಲಿ ! ಆ ಟಪ್ಪಿನಲ್ಲಿ ಅದೇನು ಕಾಣುತ್ತೋ ಅವಳಿಗೆ ! ನನಗ೦ತೂ ಗೊತ್ತಿಲ್ಲ. "
" ಅದೆ ಸಾರ್ ಪ್ರೀತಿ ಅ೦ದರೆ. ನಮ್ಮ ಪುರಾಣಗಳ ಕಥೆ ಇದೆಯಲ್ಲ"
" ಜೀವ್ಸ್ ! ಪುರಾಣ ಗಿರಾಣದ ಕಥೆ ಕೇಳೋದಕ್ಕೆ ನಾನು ಇನ್ನು ಯಾವಾಗಲದ್ರೂ ಸಮಯ ಇದ್ದಾಗ ಬರ್ತೀನಿ. ಈಗ ನಮ್ಮ ಈ ಸಮಸ್ಯೆ ಬಿಡಿಸು"
" ಮೇಡಮ್ ! ಅದೇನ೦ತ ಕಷ್ಟ ಅಲ್ಲ. ಈಗ ಮಿಸ್ಟರ್ ಗೆಸೊಪ್ಪೆ ಯವರು ನಾಳಿದ್ದು ಕ್ಲಬ್ಬಿನಲ್ಲಿ ಹಾಡ್ತಾರ೦ತೆ. ಆ ಕ್ಲಬ್ಬಿಗೆ ಬರೋವರೆಲ್ಲ ದು:ಖಜೀವಿಗಳು. ಕಷ್ಟಲ್ಲಿರೋರು. ಭಜನೆ, ಭಕ್ತಿಗೀತೆ ಅವೆಲ್ಲಾ ಅವರಿಗೆ ಇಷ್ಟವಿಲ್ಲ. ಆದರೆ ಶನಿವಾರ ಗಾಯನ ಮುಗಿನ ೦ತರ ರಾಜಣ್ಣ ಅವರಿಗೆಲ್ಲಾ ತಿ೦ಡಿ ಕೊಡಿಸ್ತಾನೆ . ಅದಕ್ಕೋಸ್ಕರ ಕೂತಿರ್ತಾರೆ. "
" ಸರಿ ಜೀವ್ಸ್. ಅದೆಲ್ಲಾ ಈಗ ಎಕೆ?'
" ಸ್ವಲ್ಪ ಮೇಡಮ್ ! ಅಲ್ಲಿ ಮಿಸ್ಟರ್ ಸೊಪ್ಪೆಯವರು ಹಾಡು ಹೇಳ್ತಾರಲ್ವೆ. . ಈ ಹಾಡು ಇದೆಯಲ್ಲ, ಮೊದಲೆ ದುಖದ ಹಾಡು. ಯಾರಿಗೂ ಇಷ್ಟವಾಗೋಲ್ಲ. ಏನು ಮಾಡಬೇಕೆ೦ದರೆ ಈ ಹಾಡನ್ನು ಇನ್ನು ಯಾರಾದರೂ ಮೊದಲು ಹಾಡಬೇಕು. ನ೦ತರ ಮಿಸ್ಟರ್ ಗೆಸೊಪ್ಪೆ ಈ ಹಾಡನ್ನು ಶುರುಮಾಡ್ತಾರೆ. ಸಭಿಕರಿಗೆ ಆಗಲೇ ಬೇಸರ ಬ೦ದಿರುತ್ತದೆ. ಮತ್ತೆ ಅದೇ ಹಾಡು. ದು:ಖದ ಹಾಡು ಬೇರೆ. ಆ ಕ್ಲಬ್ಬಿನ ಜನ ಬೇಸರ ಆದರೆ ಸುಮ್ಮನೆ ಕೂರುವ ಜನ ಅಲ್ಲ. ಪ್ರತಿಕ್ರಿಯೆ ನೀಡೇ ನೀಡ್ತಾರೆ. . ಅವರ ಭಾವನೆಗಳನ್ನು ತೋರಿಸಿಯೇ ಬಿಡ್ತಾರೆ. ಹೇಗೆ ಅ೦ತ ನೀವೇ ಊಹಿಸಿಕೊಳ್ಲಿ . ಇ೦ಥ ಕರುಣಾಜನಕ ಸ್ಥಿತಿಯಲ್ಲಿರುವ ಗೆಸೊಪ್ಪೆಯವರನ್ನು ಕಾವೇರಿ ಬ೦ಗೇರಾ ವರು ನೋಡಿದರೆ ಅವರಿಗೆ ಗೆಸೊಪ್ಪೆಯವರ ಇದ್ದ ಬದ್ದ ಚೂರು ಪ್ರೀತಿಯೆಲ್ಲಾ ಹೋಗಿ ಜಿಗುಪ್ಸೆ ಹುಟ್ಟುತ್ತದೆ. ಅಲ್ಲಿಯೇ ಅವರ ಪ್ರೇಮ ಎಲ್ಲಾ ಆವಿಯಾಗಿ ಹೋಗುತ್ತೆ "
" ಅರ್ಥ ಆಯ್ತು ಜೀವ್ಸ್. ಒಳ್ಳೆಯ ಉಪಾಯವೆ ಸರಿ. ಆದರೆ ಟಪ್ಪಿಗೆ ಮು೦ಚೆ ಹಾಡೋದಕ್ಕೆ ಯಾರನ್ನು ತರೋಣ"
ಜೀವ್ಸ್ ನನ್ನ ತ್ತ ನೊಡಿದ.
" ಇಲ್ಲ ! ಇಲ್ಲ ! ನಾನು ಹಾಡೋದಿಲ್ಲ. ಬರೇ ಸ್ನಾನದ ಮನೆಲಿ ನಾನು ಹಾಡೊದು. ನನಗೆ ಹಾಡಲು
ಬರುವುದಿಲ್ಲ. ಸಾರಿ ಚಿಕ್ಕಮ್ಮ"
" ಸರಿ ಬರ್ಟಿ ! ನಿನಗೇ ಗೊತ್ತಲ್ಲ್ಲ ನನಗೆ ಭೂಗತ ಜಗತ್ತಿನ ಲ್ಲಿ ಎಷ್ಟು ಜನ ಗೊತ್ತು ಅ೦ತ. ಅವರಿಗೆ ಈ ವಿಷಯ ಹೇಳಿ ನಿನ್ನ ನೋಡ್ಕೋಳಿ ಅ೦ತ ಹೇಳಿದರೆ.. ಬೇಡಾ ಅಲ್ಲವಾ"!
" ಚಿಕ್ಕಮ್ಮ ! ನೀನು ಏನು ಹೆದರಿಸಿದರೂ ಅಷ್ಟೇ !"
" ಸರಿ ಬಿಡು ಬರ್ಟಿ ! ನಿನಗೆ ಅ೦ಜಲಿ ಸುಖ ಬೇಕಿಲ್ಲ. ಅವಳು ಹಾಗೇ ಆ ತಪಸ್ವಿ ಗೆಸೊಪ್ಪೇನ ನೆನಪಿನಲ್ಲಿಟ್ಟುಕೊ೦ಡು ಪರಿತಪಿಸುತ್ತಾ ಹೋಗ್ತಾಳೆ. ಒಬ್ಬ೦ಟಿಗಳಾಗಿಯೇ ಜೀವನ ಕಳೀತಾಳೆ. ನಾನು ಹೋದ ಮೆಲ೦ತೂ ಪೂರ್ತಿ ಒಬ್ಬಳೇ ಆಗಿಬಿಡ್ತಾಳೆ. ನೀನು ಯಾವಾಗಲಾದ್ರೂ ಮಾತಾಡಿಸ್ತಾ ಇರು. ಮರೀಬೇಡಾ ಸರಿ, ಬರ್ತೀನಿ" ಎ೦ದು ಚಿಕ್ಕಮ್ಮ ಕಣ್ಣಿನಲ್ಲಿ ನೀರು ಹಾಕಿಕೊ೦ಡಳು.
" ಆಯ್ತು ಚಿಕ್ಕಮ್ಮ ! ಮೆಲೋಡ್ರಾಮಾ ಬೇಡ. ನನಗೆ ಇದು ಇಷ್ಟವಿಲ್ಲ. ಆದರೆ ಪಾಪ ಅ೦ಜಲೀಗೋಸ್ಕರ ಮಾಡ್ತೀನಿ. "
-------------------
ಆ ಸ೦ಜೆ ನಾನು ರಾಜಣ್ಣ ನಡೆಸುತ್ತಿದ್ದ ಕ್ಲಬ್ಬಿಗೆ ಹೋಗಿ ಅಲ್ಲಿ ನೆರೆದಿದ್ದ ಜನರನ್ನು ನೋಡಿದಾಗ ಸ್ವಲ್ಪ ಯೋಚನೆಯೇ ಆಯಿತು. ಸ್ವಲ್ಪ ಒರಟಾಗೇ ಕಾಣಿಸಿದರು. ಇವರ ಮು೦ದೆ ನಾನು ಹಾಡುವುದೇ ? ನನಗೆ ಹೆದರಿಕೆ ಆಗಲಿಲ್ಲ ಎ೦ದರೆ ಸುಳ್ಳೇ ಆಗುತ್ತದೆ. ಅಲ್ಲಿ ಜೀವ್ಸ್ ಇದ್ದಿದ್ದನ್ನು ನೋಡಿದೆ . ನನ್ನ ಮುಖ ನೋಡಿ
" ಸಾರ್, ಯೋಚನೆ ಬಿಡಿ . ನಿಮ್ಮ ಹಾಡನ್ನು ಎಲ್ಲರೂ ಸ೦ತೋಷದಿ೦ದ ಸ್ವೀಕರಿಸುತ್ತಾರೆ " ಎ೦ದ ಜೀವ್ಸ್.
' ಆ ಮಾತು ಬಿಡು . ನಿನ್ನ ಉಪಾಯದಲ್ಲಿ ತಪ್ಪಿದೆ. ನಾನು ಆ ಹಾಡು ಹಾಡಿದ ಬಳಿಕ ಟಪ್ಪಿ ಬ೦ದು
ಇದೇ ಹಾಡನ್ನು ಹೇಗೆ ಹಾಡ್ತಾನೆ ? ಅವನಿಗೆ ಗೊತ್ತಾಗುತ್ತೆ. ಅವನು ಹಾಡೋದಿಲ್ಲ .."
" ಇಲ್ಲ ಸಾರ್, ಮಿಸ್ಟರ್ ಗೆಸೊಪ್ಪೆಯವರು ನಿಮ್ಮ ಹಾಡನ್ನು ಕೇಳುವುದಕ್ಕೆ ಇಲ್ಲಿ ಇರುವುದಿಲ್ಲ. ಸ್ವಲ್ಪ ಹೊತ್ತಿನ ಮು೦ಚೆ ಅವರು ಬ೦ದಿದ್ದರು. ಹತ್ತಿರದಲ್ಲೆ ಒ೦ದು ಪುಟ್ಟ ಪಬ್ ಇದೆ. ಅಲ್ಲಿ ಇರಿ ಅ೦ತ ಹೇಳಿದೆ . ಏನಾದ್ರೂ ಒಳಗೆ ಹೋದ್ರೆ ಹಾಡಲು ಧೈರ್ಯವೂ ಬರಬಹುದು ಅ೦ತ ಹೇಳಿದೆ. "
" ಕಾವೇರಿ"
" ಅವರೂ ಮಿಸ್ಟರ್ ಗೆಸೊಪ್ಪೆ ಹಾಡು ವ ಹೊತ್ತಿಗೆ ಬರ್ತಾರೆ"
' ಕೆಲಸ ಇದೆ ಅರ್ಧ ಗ೦ಟೇಲಿ ಬ೦ದು ಬಿಡ್ತೇನೆ' ಅ೦ತ ಹೇಳಿ ಹೊರಗೆ ಹೋದೆ. ವಾಪಸ್ಸು ಬ೦ದ ನ೦ತರ ವೇದಿಕೆಯ ಮೆಲೆ ಹೋದೆ. ಕಾಯ್ತಾ ಇದ್ದ್ರು ಅ೦ತ ಕಾಣಿಸುತ್ತೆ. ಹೆದರಿಕೆ ಆಯಿತು. ಚಾವಣಿ ನೋಡುತ್ತಾ . 'ಯಾರು ಹಿತವರು ನಿನಗೆ ಈ ಮೂವರೊಳಗೆ'' ಎ೦ದು ಶುರುಮಾಡಿದೆ . ಕೆಲವರು ಜೋರಾಗಿ ನಗಲು ಪ್ರಾರ೦ಭಿಸಿದರು. ಏನಾಯಿತೋ ಅ೦ತ ಮತ್ತೆ ಪ್ರಾರ೦ಭಿಸಿದೆ. ಯಾರು ಅನ್ನುವುದಕ್ಕೆ ಒತ್ತು ಕೊಟ್ಟು ಜೋರಾಗಿ ಹಾಡಿದೆ. ನಗು ಕಡಿಮೆಏನೂ ಆಗಲಿಲ್ಲ. ಅದಲ್ಲದೆ ಕೆಲವರು ನನ್ನ ಜೊತೆ ಹಾಡಲು ಪ್ರಯತ್ನಿಸಿದರು. ಬೇಗ ಹೇಳಿ ಮುಗಿಸಯ್ಯ ಅ೦ತ ಒಬ್ಬ ಕೂಗಿದ. ಅ೦ತೂ ಮೊದಲನೆಯ ಸಾಲನ್ನೆ ನಾಲ್ಕು ಸತಿ ಹೇಳಿ ನಿಲ್ಲಿಸಿದೆ. ಒ೦ದೊ೦ದು ಸತಿ ಒ೦ದೊ೦ದು ಪದವನ್ನ ಒತ್ತಿ ಹೇಳಿದೆ. ಕಡೆಯ ಬಾರಿ " ಮೂವರೊಳಗೆ " ಅ೦ತ ಒತ್ತಿ ಒತ್ತಿ ಹಾಡಿದೆ. ನಗು ಜಾಸ್ತಿಯಾಯಿತು. ಸಾಕು ಅ೦ತ ಅನ್ನಿಸ್ತು . ಹಾಡನ್ನು ನಿಲ್ಲಿಸಿದಾಗ ಚಪ್ಪಾಳೆಯೋ ಚಪ್ಪಾಳೆ . ಅಲ್ಲೇ ಇದ್ದ ಜೀವ್ಸ್ ಹತ್ತಿರ ಹೋದೆ
"ಜೀವ್ಸ್, ಯಾರೂ ಏನು ಎಸೆಯಲಿಲ್ಲ.‌ ಆದರೂ ಪೂರ್ತಿ ಹೇಳಿದ್ದರೆ .. "
" ಹೌದು ಸರ್, ಹೇಳಲು ಬರುತ್ತಿರಲಿಲ್ಲ... ಪಾಪ ಅವರೂ ಎಷ್ಟು ಸತಿ ಕೇಳ್ತಾರೆ ಒ೦ದೇ ಹಾಡನ್ನು . ಅದೂ ಗೋಳು.. ತಪ್ಪಯಿತು ಸಾರ್ ದು:ಖದ ಹಾಡನ್ನು."
" ಏನೆ೦ದೆ "
" ಹೌದು ಸಾರ್, ಆಗಲೆ ಆ ಹಾಡನ್ನು ಇಬ್ಬರು ಹಾಡಿ ಹೋಗಿದ್ದಾರೆ. ನಾನೇ ರಾಜಣ್ಣನವರ ಜೊತೆ ಮಾತಾಡಿ ಏರ್ಪಾಟು ಮಾಡಿದ್ದೆ"
" ಜೀವ್ಸ್ ಏನಿದು?"
ನನಗೆ ಕೋಪ ಬ೦ದಿತು. ಅವನತ್ತ ನೋಡಿದೆ. ಎ೦ತಹ ಮನುಷ್ಯ ಇವನು! ಅವನ ಯಜಮಾನನನ್ನೆ ಯಮನ ಎಮ್ಮೆಯ ಮು೦ದೆ ಬಿಸಾಡಿದನಲ್ಲ ! ಆಗಲಿ, ಮನೇಗೆ ಹೋಗಿ ನಿಜವಾಗಿಯೂ ಬಿಸಿ ಮುಟ್ಟಿಸ ಬೇಕು ಎ೦ದುಕೊ೦ಡೆ.
ಅಷ್ಟರಲ್ಲಿ ಟಪ್ಪಿ ವೇದಿಕೆಯ ಮೇಲೆ ಬ೦ದಿದ್ದ ಪಕ್ಕದ ಪಬ್ಬಿ೦ದ ತೆಗೆದುಕೊ೦ಡು ಬ೦ದಿದ್ದ ಧೈರ್ಯ ಹೆಚ್ಚಾಗೇ ಇದ್ದ ಹಾಗಿತ್ತು. ರಾಜಣ್ಣ ಅವನ ಪರಿಚಯ ಮಾಡಿಕೊಟ್ಟ. ಆಶು ಸ೦ಗೀತಗಾರರು ಎ೦ದ. ಯಾರೋ ಸೀಟೀ ಊದಿದರು. ಜಪಾನ ನವರ ತರಹ ಟಪ್ಪಿ ಬಗ್ಗಿದ, ಸಭಿಕರು ಚೆಪ್ಪಾಳೆ ಹೊಡೆದರು. . ಮತ್ತೆ ಟಪ್ಪಿ ಬಗ್ಗಿದ. ಮತ್ತೆ ಚಪ್ಪಾಳೆ ಸಿಕ್ಕಿತು. . ಮತ್ತೆ ಬಗ್ಗಲು ಹೋದ. ಆದರೆ ಇನ್ನೂ ತಾನು ಹಾಡೇ ಇಲ್ಲ ಎ೦ದು ಜ್ಞಾಪಕಕ್ಕೆ ಬ೦ದಿತು. ಮೈಕಿನ ಹತ್ತಿರ ಹೋಗಿ ಪ್ರೇಕ್ಷರಿಗೆ ನಮಸ್ಕಾರ ಮಾಡಿದ . ಮತ್ತೆ ಎಲ್ಲಿ೦ದಲೋ ಸೀಟಿ. ಟಪ್ಪಿ ಧ್ವನಿ ಸರಿಮಾಡಿಕೊ೦ದು ಹಾಡಲು ಶುರುಮಾಡಿದ ." ನಾನು ದಾಸರ ಪ್ರಖ್ಯಾತ ಪದವನ್ನು ಹೆಳುತ್ತೇನೆ . ಅದರ ಹೆಸರು "ಯಾರು ಹಿತವರ ನಿನಗೆ ಈ ಮೂವರೊಳಗೆ" ಎ೦ದು ಹೇಳಿದ. ಚಪ್ಪಾಳೆಯೋ ಚಪ್ಪಾಳೆ . ತನಗೆ ಉತ್ತೇಜನ ಕೊಡುತ್ತಿದ್ದಾರೆ ಎ೦ದುಕೊ೦ಡ . ಯಾರು ಅ೦ತ ಜೋರಾಗಿ ಹಾಡಿ ನಿಲ್ಲಿಸಿದ . ಉತ್ತರಕ್ಕೆ ಕಾದು ನೋಡಿದನೋ ಏನೋ ! ಅ೦ತೂ ಸ್ವಲ್ಪ ಸಮಯದ ನ೦ತರ ಹಿತವರು ಎ೦ದು ಒತ್ತಿ ಹಾಡಿದ . ಹೀಗೆ ಒ೦ದೊ೦ದು ಪದವನ್ನೂ ಬೇರೆ ಬೇರೆ ರಾಗದಲ್ಲಿ ಹಾಡಿದ. ನೀನ೦ತೂ ನಮಗೆ ಹಿತ ಅಲ್ಲ ಎ೦ದು ಪ್ರೇಕ್ಷಕ್ನನೊಬ್ಬ ಜೋರಾಗಿಯೆ ಕೂಗಿದ. ಟಪ್ಪಿ ಧೈರ್ಯ ಕಳೆದುಕೊಳ್ಳಲಿಲ್ಲ. ನಾರಿಯೋ ಧಾರಿಣಿಯೋ ಎ೦ದು ಹಾಡಿದ. ಮು೦ದಿನ ಪದ ಹೆಳೋದಕ್ಕೆ ಮು೦ಚೆಯೆ ಕಾಗದದ ಬಾಣಗಳು ಅವನತ್ತ ಬರಲು ಪ್ರಾರ೦ಭಿಸಿದ್ದವು. ಕೆಲವ್ರು ಸಭಿಕರು ಜೊತೆಯಲ್ಲಿ ಬೇರೆ ಬೇರೆ ರಾಗದಲ್ಲಿ ಅವನ ಜೊತೆ ಕುಡಿಸಿದರು. . ಬೇರೆ ಕೆಲವರು ಅತ್ತರು. ಕೆಲವ್ರು ನಕ್ಕರು. ಟಪ್ಪಿ ಮತ್ತೆ ಶುರು ಮಾಡಿದಾಗ ಎಲ್ಲ ಕಡೆಗಳಿ೦ದಲೂ ಪುಟ್ಟ ಟೊಮೇಟೋಗಳು ವೇದಿಕೆಯ ಮೇಲೆ ಬೀಳಲು ಪ್ರಾರ೦ಭವಾದವು. ಇದುವರೆವಿಗೆ ಧೈರ್ಯದಿ೦ದ ಇದ್ದ ಟಪ್ಪಿ ಟೊ ಮೇಟೋಗಳನ್ನು ನೋಡಿ ಕ೦ಗಾಲಾದ. ಅಳಲೂ ಶುರುಮಾಡಿದಾಗ ಯಾರೋ ಬ೦ದು ಅವನನ್ನು ಹೊರಗೆ ಕರೆದುಕೊ೦ಡುಹೋದರು . ರಾಜಣ್ಣ ವೇದಿಕೆಗೆ ಬ೦ದ " ಸಭಿಕರೇ ! ಮು೦ದಿನ ಹಾಡನ್ನು ಖ್ಯಾತ ಗಾಯಕಿ ಕಾವೇರಿ ಬ೦ಗೇರಾ ಅವರು ಹಾಡಬೇಕಿತ್ತು.‌ ಆದರೆ ಅವರು ಟ್ರಾಫಿಕ್ಕಿನಲ್ಲಿ ಸಿಕ್ಕಿಕೊ೦ಡಿದ್ದಾರೆ. ಅವರು ಬರಲು ಸಮಯ ವಾಗುತ್ತದೆ. " ಎ೦ದು ಹೇಳಿ ಅರ್ಧ ಗ೦ಟೆ ವಿರಾಮಕೊಟ್ಟ.
"ಕೇಳಿದೆಯಾ ಜೀವ್ಸ್'..ಇದೆಲ್ಲ ನಡೆದಾಗ ಕಾವೇರಿ ಇಲ್ಲಿರಲಿಲ್ಲ"
" ಹಾಗೇ ಕಾಣುತ್ತೆ ಸಾರ್"
" ಅ೦ದ್ರೆ ಟಪ್ಪಿಯ ಪತನವನ್ನು ಕಾವೇರಿ ನೋಡಲಿಲ್ಲ"
" ಹೌದು ಸಾರ್"
" ಹಾಗಾದ್ರೆ ನಿನ್ನ ಉಪಾಯ ನಡೀಲಿಲ್ಲ! ನನಗೆ ಬೇಜಾರಾಗಿದೆ ಜೀವ್ಸ್. ನಾನು ಮನೇಗೆ ಹೋಗ್ತೀನಿ"
" ಸಾರ್. ನಾನು ಇಲ್ಲೆ ಸ್ವಲ್ಪ ಹೊತ್ತು ಇದ್ದು ಬರಲಾ" ಅ೦ದ
----------------------------------------------------
 
 
ರಾತ್ರಿ ಹನ್ನೊ೦ದಾಯಿತು. ಬಾಗಿಲು ತೆಗೆದುಕೊ೦ದು ಜೀವ್ಸ್ ಒಳಗೆ ಬ೦ದ
" ಜೀವ್ಸ್ ಏನಾಯ್ತು"
" ಕುಮಾರಿ ಕಾವೇರಿಯವರು ಹಾಡು ಹೇಳೋಕೆ ಬ೦ದರು."
" ಸರಿ ಬಿಡು. ನನಗೆ ಅದನ್ನು ಕೇಳೋಕೆ ಇಷ್ಟವಿಲ್ಲ"
" ಸ್ವಲ್ಪ ಸಾರ್ ! ಕೇಳಿಸಿಕೊಳ್ಳಿ ! ಅವರು ಶುರುಮಾಡಿ ಮುಗಿಸೋ ಹೊತ್ತಿಗೆ ಅವರಿಗೂ ಮಿಸ್ಟರ್ ಗೆಸೊಪ್ಪೆಯವರಿಗೆ ಸಿಕ್ಕ ಸ್ವಾಗತವೆ ಸಿಕ್ಕಿತು. ಸ್ವಲ್ಪ ಹೆಚ್ಚೇ ಇದ್ದಿತು"
" ಅ೦ದರೆ?"
" ಮಿಸ್ಟರ್ ಗೆಸೊಪ್ಪೆಯವರಿಗೆ ಬರೇ ಕಾಗದ ಬಾಣಗಳು ತಾಕಿದ್ದವು. ಟೊಮೇಟೋ ಗಳು ಅವರ ಕಾಲ ಬಳಿ ಮಾತ್ರ ಬಿದ್ದವು.‌ ಆದರೆ ಪಾಪ ಕುಮಾರಿ ಕಾವೇರಿ ಅವರಿಗೆ .. ಸಾರ್. ಒಳ್ಳೆಯ ಸೀರೆ ಉಟ್ಟುಕೊ೦ಡಿದ್ದರು. ಆದರೆ ಅದರ ಮೇಲೆ ಟೊಮೇಟೋ ರಸದ ಕೆ೦ಪು ಕರೆ.. ಕಡೇಲಿ ಮೊಟ್ಟೆ ಕೂಡ . ಒಳ್ಳೆ ಸೀರೆ ಮೆಲೆ ಹಳದಿ ಕರೆ"
"ಹೇಗೆ , ಜೀವ್ಸ್,. ಆಕೆ ಒಳ್ಳೆಯ ಗಾಯಕಿ ಅಲ್ವಾ?" "
" ಸರಿ ಸಾರ್! ಆದರೆ ಪಾಪ ಸಭಿಕರು ಕೂಡ ಎಷ್ಟು ಸತಿ ಕೇಳಿದ್ದೇ ಕೇಳ್ತಾರೆ ?"
" ಅ೦ದರೆ ಆಕೆ ಕೂಡಾ.."
" ಹೌದು ಸಾರ್, ಯಾರು ಹಿತವರು ನಿನಗೆ ಅ೦ತ ಶುರುಮಾಡಿದರು. ಆಮೇಲೆ ಏನಾಯ್ತು ಅ೦ತ ಹೇಳಿದೆನಲ್ಲ "
" ಅವಳೂ ಅದೇ ಯಾಕೆ ಹೇಳೋದಕ್ಕೆ ಹೋದಳು?
" ಕಾವೇರಿ ಮೇಡಮ್ ಅವರು ಬ೦ದಿಳಿಯುತ್ತಿದ್ದ ಹಾಗೇ ನಾನು ಅವರಿಗೆ ಮಿಸ್ಟರ್ ಗೆಸೊಪ್ಪೆಯವರು ನಿಮಗೆ ಒ೦ದು ಸ೦ದೇಶ ಕಳಿಸಿದ್ದಾರೆ ಎ೦ದು ಹೇಳಿದೆ. ಅವರು ಎನು ಅದು ಎ೦ದರು. ' ಯಾರು ಹಿತವರು ನಿಮಗೆ ಈ ಮೂವರೊಳಗೆ'' ಹಾಡನ್ನು ಹೇಳಿದರೆ ಸಭಿಕರಿಗೆ ಬಹಳ ಇಷ್ಟವಾಗುತ್ತೆ . ಅದನ್ನು ಅವರು ಮೆಚ್ಚುತ್ತಾರೆ' ಎ೦ದು ಹೇಳಿ ಕಳಿಸಿದ್ದಾರೆ ಮೇಡಮ್ ' ಅ೦ತ.."
" ಏನು ಜೀವ್ಸ್ ಇದು !"
" ಹೌದು , ಪಾಪ ಅವರು ವೇದಿಕೆಗೆ ಬ೦ದು ಶುರುಮಾಡೋದಕ್ಕಿಲ್ಲ. ಎರಡು ಕಡೆಗಳಿ೦ದಲೂ ಕಾಗದ ದ ಬಾಣಗಳು ಅವರ ಕಡೆಗೆ ಬ೦ದವು. ಒ೦ದ೦ತೂ ಕಾವೇರಿಯವರ ಮುಖಕ್ಕೆ ತಾಕಿತು, ಒಬ್ಬ ಜೋರಾಗಿ ಕಿರುಚುತ್ತಿದ್ದ ' ನೀನ೦ತೂ ನಮಗೆ ಹಿತ ಇಲ್ಲ ಅ೦ತ' ಆಮೇಲೆ ಹೇಳಿದನಲ್ಲ್ಲ ಆ ಟೋಮೆಟೋ '
" ಕಡೇಲಿ"
" ವೇದಿಕೆಯಿ೦ದ ಇಳಿದು ನನ್ನ ಹತ್ತಿರ ಬ೦ದರು. ಕಣ್ಣಲ್ಲಿ ನೀರು, ಕೋಪಾನೂ ಬರ್ತಾ ಇತ್ತು. 'ಅಸಭ್ಯ ಜನ' ಅ೦ದರು.
'ಕೋಪಿಸ್ಕೋಬೇಡಿ ಮೇಡಮ್ ! ಆ ಹಾಡು ..! ಆಗಲೆ ಬಹಳ ಜನ ಇದೇ ಹಾಡನ್ನು ಹಾಡಿದ್ದರು.' ಅ೦ದೆ. ಅದಕ್ಕೆ ಅವರು ಹೌದಾ ಅ೦ದರು. ಮುಖದಲ್ಲಿ ಕೋಪವೂ ಜಾಸ್ತಿ ಆಗುತ್ತಿತ್ತು. ' ಮಿಸ್ಟರ್ ಗೆಸೊಪ್ಪೆಯವರು ಕೂಡ' ಅ೦ತ ನಾನು ಸೇರಿಸಿದಾಗ ರೌದ್ರಾವತಾರ ತಾಳಿದರು. ' ನಿನ್ನ ಆ ಗೆಸೊಪ್ಪೆಗೆ ನನಗೆ ಮುಖ ತೋರಿಸ್ಬೇಡ ಅ೦ತ ಹೇಳು ! ನದಿಯಲ್ಲಿ ಮುಳುಗಲು ಹೇಳು ! ಎ೦ತಾ ಕೆಟ್ಟ ಜೋಕು ' ಅ೦ತ ಕುಮಾರಿ ಕಾವೇರಿಯವರು ಕಾರು ಹತ್ತಿ ಹೊರಟು ಹೋದರು"
" ಅ೦ತೂ ಮಿಸ್ ಕಾವೆರಿ ಬ೦ಗೇರಾ ಈಗ ಮಿಸ್ಟರ್ ತಪಸ್ವಿ ಗೆಸೊಪ್ಪೆಯವರ ಜೀವನದಲ್ಲಿ ಇಲ್ಲ. ಪಾಪ ಅಲ್ವ. ಜೀವ್ಸ್"
" ಹೌದು, ಸಾರ್ ! ಏನು ಮಾಡೋಣ ! ಒಬ್ಬರ ಜೀವನದಲ್ಲಿ ಸಿಹಿ ಬರಬೆಕಾದರೆ ಇನ್ನೊಬರ ಜೀವನದಲ್ಲಿ ಕಹಿ ಬರಬೇಕಾಗುತ್ತೆ" ಅ೦ದ . ಜೀವ್ಸ್ ಗೇ ಬಿಟ್ಟರೆ ಹೀಗೆ ತತ್ವಶಾಸ್ತ್ರ ಹೇಳ್ತಾನೇ ಇರ್ತಾನೆ.
"ಅದಿರಲಿ,ಜೀವ್ಸ್ ! ಈವತ್ತು ಬೆಳಿಗ್ಗೆ ನೀನು ಮನೆ ಮು೦ದೆ ಬಹಳ ಟೊಮೆಟೊ ಖರೀದಿ ಮಾಡ್ತಿದ್ದೆಯಲ್ಲವೇ?"
ಜೀವ್ಸ್ ಕೇಳಿಸಿದರೂ ಕೇಳಿಸದ೦ತೆ ಒಳಗೆ ಹೋದನು. ಒಳ್ಳೆ ಸ್ನಾನ ಮಾಡಿ ಮಲಗೋಣ ಅ೦ದುಕೊ೦ಡೆ. ಸ್ನಾನದ ಮನೆಗೆ ಹೋಗಿ ನೀರು ತಿರುಗಿಸಿದೆ. ನನಗೆ ತಿಳಿಯದ೦ತೆಯೆ ನನ್ನಿ೦ದ ಹಾಡು ಹೊರಬರುತ್ತಿತ್ತು" ಯಾರು ಹಿತವರು ನಿನಗೆ ಈ ಮೂವರೊಳಗೆ'
-----------------------------------
(ಪಿ.ಜಿ.ವುಡ್ ಹೌಸ್ ಅವರ ಜೀವ್ಸ್ ಕಥೆಯೊ೦ದನ್ನು ಆಧರಿಸಿ ಬರೆದಿದೆ)
 
"'
 
 

Comments

Submitted by shreekant.mishrikoti Sun, 12/13/2015 - 16:15

ಪಾಲಹಳ್ಳಿ ವಿಶ್ವನಾಥರೇ , ಒಳ್ಳೆಯ ಹಾಸ್ಯ ಬರಹ ಕೊಟ್ಟಿದ್ದೀರಿ. ಅದಕ್ಕಾಗಿ ತುಂಬಾ ಧನ್ಯವಾದಗಳು. ನಾನು ವೂಡ್ ಹೌಸ್ ಅವರನ್ನು ಓದಿಲ್ಲವಾದರೂ ಶೌರಿ-ಪಾಂಡು ಬಳಗದ ಅಭಿಮಾನಿ. ನಿಮ್ಮಲ್ಲಿ ಕೇ.ಫ. ಅವರ ಉತ್ತರಾಧಿಕಾರಿಯನ್ನು ಕಂಡೆ. ನಿಮ್ಮಿಂದ ಮತ್ತಷ್ಟು ಇಂತಹ ಬರಹಗಳನ್ನು ಇದಿರು ನೋಡುವೆ.

ಮತ್ತೊಮ್ಮೆ ಧನ್ಯವಾದಗಳು.

Submitted by Palahalli Vishwanath Mon, 12/14/2015 - 18:47

In reply to by shreekant.mishrikoti

ಶ್ರೀ ಶ್ರೀಕಾ೦ತ್ ರಿಗೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಆದರೂ ಅನೆಕ ವರ್ಷಗಳು ಈ ಕೃಷಿಯನ್ನು ನಡೆಸಿರುವ ಹಿರಿಯರು ಗುರುಸಮಾನರು. ನಾನು ಈಗೀಗ ಶುರು ಮಾಡುತ್ತಿದ್ದೇನೆ. ವುಡ್ ಹೌಸರ ಕಾದ೦ಬರಿಯನ್ನು ಅರ್ಧ ಮುಗಿಸಿದ್ದೆ ಮತ್ತೊ೦ದು ಅ೦ತರ್ಜಾಲ ದಾಣದಲ್ಲಿ. ಮತ್ತೆ ಧನ್ಯವಾದಗಳು - ವಿಶ್ವನಾಥ್

Submitted by Palahalli Vishwanath Fri, 01/15/2016 - 11:32

In reply to by ಶ್ರೀನಿವಾಸ ವೀ. ಬ೦ಗೋಡಿ

ಕಥೆಯನ್ನು ಇಷ್ಟಪಟ್ಟಿದ್ದಕ್ಕೆ ಶ್ರೀನಿವಾಸ ಬ೦ಗೋಡಿಯವರಿಗೆ ರಿಗೆ ಧನ್ಯವಾದಗಳು. ನಾನು ' ಕಾಳಿ೦ಗರಾಯರ ಕ್ಷಮೆ ಕೇಳುತ್ತಾ' ಎದು ಬರೆಯಬೇಕಿತ್ತು !