ಅಕ್ಕ ಮತ್ತು ಚಿಟ್ಟೆ

ಅಕ್ಕ ಮತ್ತು ಚಿಟ್ಟೆ

ನೀರಿನ ಬಿಂದಿಗೆ ಹಿಡಿದು, ತೋಡಿಗೆ ನೀರು ತರಲು ಹೋಗುವಾಗ, ಅಕ್ಕ ತನ್ನೊಳಗೇ ಏನನ್ನಾದರೂ ಗೊಣಗಿಕೊಳ್ಳುತ್ತಲೇ ಇರುತ್ತಿದ್ದಳು, ಒಬ್ಬಳೇ ಮಾತನಾಡಿಕೊಂಡು ನೀರಿನ ಕೊಡ ಹೊತ್ತು ತೋಟದ ಕಾಲುಹಾದಿಯನ್ನು ದಾಟಿ, ಗದ್ದೆಯ ಅಂಚಲ್ಲಿ ನಡೆದು ಮನೆಗೆ ಬರುವಾಗ ನಾನು ಚಿಕ್ಕ ಬಿಂದಿಗೆಯಲ್ಲಿ ನೀರು ಹಿಡಿದುಕೊಂಡು ಅವಳ ಹಿಂದೆ ಸಾಗುತ್ತಿದ್ದೆ. ಆಕೆಯ ಗೊಣಗಾಟದ ಜೊತೆ, ಗದ್ದೆಯ ಪರಿಮಳವೂ ಸೇರಿಕೊಂಡು ಏನೋ ಒಂದು ರೀತಿಯ ಆನಂದ ನನಗುಂಟಾಗುತ್ತಿತ್ತು, ಆಗೆಲ್ಲ ಹೆಬ್ಬ-ಹಲಸಿನ ಹಣ್ಣು, ಮಾವಿನ ಹಣ್ಣು, ಸೊಳ್ಳೆ ಹಣ್ಣು, ಪೇರಳೆ ಹಣ್ಣು, ಚಾಪೆ ಹಣ್ಣು, ಎಲ್ಲವನ್ನು ಅಕ್ಕನೇ ನನಗೆ ಕಿತ್ತು ಕೊಡುತ್ತಿದ್ದುದು. ಕೆಲವೊಮ್ಮೆ ಅಕ್ಕನ ಹೆಗಲು ನನಗೆ ಸವಾರಿ ಮಾಡುವ ಕುದುರೆಯಾಗುತ್ತಿತ್ತು, ಕಲ್ಲು ಕೋರೆಯನ್ನು(ಜಲ್ಲಿ ಕಲ್ಲಿಗಾಗಿ ಒಡೆದ ಕಲ್ಲಿನ ಗುಡ್ಡ) ಹತ್ತುವ ನನ್ನ ಸಾಹಸಕ್ಕೆ ಪ್ರೋತ್ಸಹಿಸುತ್ತಿದ್ದುದೂ ಅವಳೇ.
ಹೀಗೆ ಯಾವ ಜಂಜಡವೂ ಅರಿಯದೇ ಬಾಲ್ಯ ಮುಂದಕ್ಕೆ ಅಡಿ ಇಡುವಾಗ, ಒಂದು ದಿನ ಅಕ್ಕ, ಕಂಬಳಿ ಹುಳದಲ್ಲಿ ಚಿಟ್ಟೆ ಮಾಡಬಹದು ಎಂಬ ಚಿದಂಬರ ರಹಸ್ಯ ಒಂದನ್ನು ನನಗೆ ಅರುಹಿದಳು, ಕಂಬಳಿ ಹುಳ ಚಿಟ್ಟೆ ಆಗುವುದು ಎಂಬ ವಿಚಾರ ನನಗೆ ಬಹಳ ಕುತೂಹಲ ಹುಟ್ಟಿಸಿತ್ತು ಆ ವಯಸ್ಸಿನಲ್ಲಿ, ನಂಬಲು ಅಸಾಧ್ಯವಾದರೂ ಬಣ್ಣ ಬಣ್ಣದ ಚಿಟ್ಟೆ ಸಿಗಬಹುದಾದರೆ ನಾವೂ ಕೂಡ ಕಂಬಳಿ ಹುಳಗಳಿಂದ ಚಿಟ್ಟೆ ಪಡೆಯೋಣ ಎಂದು  ಅವಳ ಮುಂದಾಳತ್ವದಲ್ಲಿ ನಾವಿಬ್ಬರೂ ಸೇರಿ ನಾಲ್ಕೈದು ಕಂಬಳಿ ಹುಳಗಳನ್ನು ಅಡಿಕೆ ಹಾಳೆಯ ಎಲೆಯ ಸಹಾಯದಿಂದ ಹಿಡಿದೆವು, ಅದಕ್ಕೆ ಹಸಿರು ಎಲೆಯಲ್ಲಿ ಹಾಸಿಗೆಯನ್ನು ನಿರ್ಮಿಸಿ, ಅವುಗಳು ಅಲ್ಲಿಯೇ ವಿರಮಿಸುವಂತೆ, ಹಾಗು ಹೊರ ಹೋಗದಂತೆ ವ್ಯವಸ್ತೆ ಮಾಡಿದೆವು, ಇಷ್ಟೆಲ್ಲಾ ಮಾಡುವಾಗ ಅಕ್ಕ ಬಹಳಷ್ಟು ವಿಷಯಗಳನ್ನು ನನಗೆ ಹೇಳಿಕೊಟ್ಟಳು, ಜೊತೆಗೆ ಈ ಕಂಬಳಿ ಹುಳಗಳು ಚಿಟ್ಟೆಯಾದ ನಂತರ ಎಂದಿಗೂ ನಮ್ಮ ಜೊತೆಯಲ್ಲಿಯೇ ಇರುತ್ತವೆ ಎಂದು ಹೇಳಿದ್ದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತಿತ್ತು. ಚಿಟ್ಟೆಯೊಂದನ್ನು ಗೆಳತಿಯನ್ನಾಗಿ ಪಡೆಯುವ ಕಲ್ಪನಾ ಲೋಕದಲ್ಲಿ ನಾನು ಆಗಲೇ ವಿಹರಿಸುತ್ತಿದ್ದೆ. ನಾನು ಅಕ್ಕನ ಜೊತೆ ನೀರು ತರಲು ಹೋಗುವಾಗಲೆಲ್ಲ, ಜೊತೆಗೆ ಚಿಟ್ಟೆಯೂ ಬರುತ್ತದಲ್ಲ ಎಂಬ ಕನಸು ಕಾಣಹತ್ತಿದೆ. ಹೀಗೆ ಕಂಬಳಿ ಹುಳಕ್ಕೆ ಬೆಚ್ಚಗಿನ ಹಸಿರೆಲೆಯ ಮನೆ ತಯಾರಿಸಿ, ನೀರು ತೋಡಿನ ಪಕ್ಕದ ಕಲ್ಲು ಸಂದಿಗಳ ಮಧ್ಯದಲ್ಲಿ ಅದನ್ನು ಇರಿಸಿ ಚಿಟ್ಟೆಯ ಕನಸಲ್ಲಿ ನಾವಿಬ್ಬರೂ ಮನೆಗೆ ಬಂದೆವು.
ನನಗೆ ರಾತ್ರಿ, ಚಿಟ್ಟೆಯೊಂದು ಬಂದು ಕೆನ್ನೆಯ ಮೇಲೆ ಕುಂತಂತೆ, ನಾನು ಅದರ ಜೊತೆ ಹರಟಿದಂತೆ,  ವರ್ಷಗಳು ಕಳೆದಹಾಗೆ ಚಿಟ್ಟೆ ದೊಡ್ಡದಾಗಿ ಬೆಳೆದಂತೆ, ಅದರ ಬೆನ್ನ ಮೇಲೆ ಹತ್ತಿ ನಾನು ಬೇಕಾದಲ್ಲೆಲ್ಲ ಹೋಗುವ ಹಾಗೆ, ಕನಸು ಬಿದ್ದಿತ್ತು, ಅದನ್ನು ಬೆಳಿಗ್ಗೆ ಅಕ್ಕನಿಗೆ ಹೇಳಿದಾಗ, ಅವಳಿಗೂ ಚಿಟ್ಟೆಯ ನೆನಪಾಗಿ ಇಬ್ಬರೂ, ಕಂಬಳಿ ಹುಳ ಚಿಟ್ಟೆಯಾಗಿರುವುದನ್ನು ನೋಡಲು ತೋಡಿನ ಕಡೆಗೆ ಓಡಿದೆವು, ಆದರೆ ಆಶ್ಚರ್ಯವೆಂಬಂತೆ, ಕಂಬಳಿ ಹುಳಗಳೆಲ್ಲ ಅಲ್ಲಿಂದ ಮಾಯವಾಗಿದ್ದವು, ಖಾಲಿ ಗೂಡನ್ನು ನೋಡುತ್ತಿದ್ದಂತೆ ನನಗೆ ಅಳು ಬಂದಿತು. ಅಕ್ಕ, ನನಗೆ ಸಮಾದಾನಿಸಲು, ಅಲ್ಲಿಯೇ ಹಾರುತ್ತಿದ್ದ ಹಸಿರು ಚಿಟ್ಟೆಯನ್ನು ತೋರಿಸಿ, ಅದೇ ನಮ್ಮ ಚಿಟ್ಟೆ ಎಂದು ನಂಬಿಸಿಬಿಟ್ಟಳು, ನನಗಂತೂ ಸ್ವರ್ಗಕ್ಕೆ ಮೂರೇ ಗೇಣು, ನನಗಾಗಿ ಚಿಟ್ಟೆಯೊಂದು ಹುಟ್ಟಿದೆ ಇಲ್ಲಿ ಎಂಬ ಕಲ್ಪನೆಯೇ ಬಹಳ ಖುಷಿ ಕೊಡುವಂತಿತ್ತು, ಯೋಗಾ-ಯೋಗಾ ಎನ್ನುವಂತೆ ನಾನು ಆ ಚಿಟ್ಟೆಯನ್ನು ಹಿಡಿಯಲು ಹೋದಾಗಲೂ ಅದು ಅಲ್ಲಿಂದ ಕದಲಲಿಲ್ಲ. ಆದರೆ ಅಕ್ಕ ಆ ಚಿಟ್ಟೆಯನ್ನು ಹಿಡಿಯದಂತೆ ತಡೆದಳು, ಅದಿನ್ನೂ ಎಳೆಯ ರೆಕ್ಕೆ ಹೊಂದಿದೆ; ನೀನು ಮುಟ್ಟಿದರೆ ರೆಕ್ಕೆ ಮುರಿಯಬಹುದು ಎಂದು ಎಚ್ಚರಿಸಿದಳು. ನಾನು, ನನಗಾಗಿ ಹುಟ್ಟಿದ ಒಂದು ಚಿಟ್ಟೆ, ಎಂದಿಗೂ ನನ್ನ ಜೊತೆಯಲ್ಲಿಯೇ ಇರುತ್ತದಲ್ಲ ಎಂಬ ಸಂಭ್ರಮದಲ್ಲಿ ಮನೆಗೆ ಬಂದು, ಚಿಟ್ಟೆಗೆ ಮಲಗಲು ರಟ್ಟಿನ ಬಾಕ್ಸ್ನಲ್ಲಿ ಮನೆಯ ರೀತಿ ಮಾಡಿ ಕೊಡಬೇಕು ಎಂಬ ಆಲೋಚನೆಯಲ್ಲಿದ್ದೆ, ಅದಾಗಿ ಸ್ವಲ್ಪ ಹೊತ್ತಿಗೆ ಅಕ್ಕ, “ನೀರು ತರಲು ತೋಡಿಗೆ ಹೋಗುವ ಬಾ” ಎಂದು ಕರೆಯುವುದು ಕೇಳಿಸಿತು. ಅಕ್ಕನೊಂದಿಗೆ ಓಡಿದೆ, ಮತ್ತೊಮ್ಮೆ ಚಿಟ್ಟೆಯನ್ನು ನೋಡಬಹುದಲ್ಲ ಎಂಬ ಖುಷಿಯಲ್ಲಿ,
ಆದರೆ ಅಲ್ಲಿ ನನಗೆ ವಿಷಾದ ಕಾದಿತ್ತು, ಚಿಟ್ಟೆ ಮಾಯವಾಗಿತ್ತು, ಎಷ್ಟು ಹುಡುಕಿದರೂ ಅದು ಸಿಗಲಿಲ್ಲ, ನಾನು ಜೋರಾಗಿ ಅಳಲಾರಂಬಿಸಿದೆ, ನನಗೆ ನನ್ನ ಚಿಟ್ಟೆ ಇಲ್ಲದೆ ಬದುಕೇ ಅಸಾಧ್ಯ ಎನ್ನಿಸುವಷ್ಟು ನೋವಾಗಿತ್ತು, ಅಕ್ಕ ಏನೆಲ್ಲಾ ಸಮಾದಾನ ಮಾಡಿದರೂ ನಾನು ಕರಗಲಿಲ್ಲ, ಬೇರೆ ಚಿಟ್ಟೆ ಹಿಡಿದು ಕೊಡುವೆ ಎಂದರೂ ಕೂಡ ನಾನು ಅಳು ನಿಲ್ಲಿಸಲಿಲ್ಲ. ನನಗೆ ನನ್ನ ಚಿಟ್ಟೆಯೇ ಬೇಕಿತ್ತು.

ನನ್ನ ಅಳುವಿಗೆ ಅಕ್ಕ ಮುಗುಳ್ನಗುತ್ತಲೇ ನೀರು ತುಂಬಿಕೊಂಡು, ಒಂದು ಕೈಯಲ್ಲಿ ಬಿಂದಿಗೆಯನ್ನು ಸೊಂಟದಲ್ಲಿ ಇಟ್ಟುಕೊಂಡು,ಇನ್ನೊಂದು ಕೈನಲ್ಲಿ, ನನ್ನ ಕೈ ಹಿಡಿದು ಎಳೆದುಕೊಂಡು ಮನೆಯ ಕಡೆ ನಡೆಯಲಾರಂಭಿಸಿದಳು. ನಾನು ಅಳು ನಿಲ್ಲಿಸಿರಲಿಲ್ಲ, ಒಂದು ಕೈನಲ್ಲಿ ಬಿಂದಿಗೆ, ಇನ್ನೊಂದು ಕೈನಲ್ಲಿ ನನ್ನನ್ನು ಸಂಬಾಳಿಸಿಕೊಂಡು ತೋಡಿನ ಏರಿಯ ಮೇಲೆ ನಡೆಯುವುದು ಬಹಳ ಕಷ್ಟವಿತ್ತು, ಆದರೂ ನನ್ನನ್ನು ಸಮಾಧಾನಿಸುತ್ತ ನಡೆಯುತ್ತಿರುವಾಗಲೆ, ಅವಳ ಕಾಲು ಜಾರಿತ್ತು, ಕೆಳಗೆ ಬಿದ್ದಳು, ಬಿಂದಿಗೆ ನೆಲಕ್ಕೆ ಬಿದ್ದಿತು, ತಾಮ್ರದ ಬಿಂದಿಗೆ ಆದ್ದರಿಂದ ಬಿದ್ದೊಡನೆ ನಗ್ಗಿ ಹೋಯಿತು, ಅಕ್ಕನಿಗೆ ಕಾಲು ಉಳುಕಿ ಬಹಳ ನೋವಾಗಿತ್ತು, ಕೈ ತರಚಿ ಗಾಯಗಳೂ ಆದವೂ, ತಕ್ಷಣಕ್ಕೆ ನನ್ನ ಅಳು ನಿಂತಿತು. ನಾನೇದರೂ ಜಾರಿ  ಬಿದ್ದೆನಾ ಎಂದು ಅಕ್ಕ ತನಗಾಗಿದ್ದ ನೋವನ್ನೂ ಲೆಕ್ಕಿಸದೆ ನನ್ನೆಡೆಗೆ ನೋಡಲು ಪ್ರಯತ್ನಿಸುತ್ತಿದ್ದಳು, ನಾನು ಬಿದ್ದಿಲ್ಲ ಎಂದು ಆಕೆಗೆ ತಿಳಿದಾಗ, ಅವಳ ಮುಖದಲ್ಲಿ ಸ್ವಲ್ಪ ಸಮಾಧಾನ ಕಾಣಿಸಿತು. ಆಗಲೇ ಅವಳ ಗಮನ ಬಿದ್ದು ನಗ್ಗಿ ಹೋದ ತಾಮ್ರದ ಕೊಡದ ಮೇಲೆ ಹೋದದ್ದು, ಕೊಡವನ್ನು ನೋಡುತ್ತಿದ್ದಂತೆ ಅಕ್ಕನ ಕಣ್ಣುಗಳಲ್ಲಿ ನೀರು ಹರಿಯಲಾರಂಭಿಸಿತು, ಮನೆಗೆ ಹೋದರೆ ದೊಡ್ಡವರೆಲ್ಲ ತಾಮ್ರದ ಕೊಡ ನಗ್ಗಿಸಿದ್ದಕ್ಕಾಗಿ ಬೈಯ್ಯಬಹುದೆಂದು ಅವಳಿಗೆ ಆಗಲೇ ಭಯ ಶುರುವಾಗಿತ್ತು, ಆ ಭಯದಲ್ಲಿಯೇ ಮನೆಗೆ ಬಂದೆವು, ಅಕ್ಕ ಅಂದುಕೊಂಡಂತೆ, ಅಕ್ಕನಿಗೆ ಮನೆಯ ದೊಡ್ಡವರಿಂದ ಯೇತೆಚ್ಚ ಬೈಗುಳ ದೊರಕಿತ್ತು, ಆಕೆಯ ಉಳುಕಿದ ಕಾಲಿನ ನೋವು, ಯಾರಿಗೂ ಬೇಡವಾಗಿತ್ತು, ಕಾಲು ನೋವಿಗೆ ದಿನವೂ ಉಪ್ಪಿನ ಶಾಖ ಕೊಟ್ಟುಕೊಂಡು, ವಿಕ್ಸ್ ಅನ್ನು ತಿಕ್ಕಿಕೊಂಡು ಗುಣ ಮಾಡಿಕೊಂಡಳು, ಇಷ್ಟೆಲ್ಲಾ ಆದರೂ ನನ್ನ ತಂಟೆಗಳಿಗೆ ಆಕೆ ಕಡಿವಾಣ ಹಾಕಲೇ ಇಲ್ಲ, ಕಾಲು ನೋವು ಮಾಗುತ್ತ ಬಂದಂತೆ, ನಾವಿಬ್ಬರು ಮತ್ತೊಂದು ಹೊಸ ಸಾಹಸಕ್ಕೆ ಸಿದ್ದರಾಗಿದ್ದೆವು.
(ಚಿತ್ರಕೃಪೆ ಅಂತರ್ಜಾಲ )
ಜಿ ಕೆ ನವೀನ್ ಕುಮಾರ್