ಟೂರ್ಸ್ ಯುದ್ಧ ನೆನಪಿಸಿದ ಪ್ಯಾರಿಸ್ ದಾಳಿ

ಟೂರ್ಸ್ ಯುದ್ಧ ನೆನಪಿಸಿದ ಪ್ಯಾರಿಸ್ ದಾಳಿ

ಪ್ಯಾರಿಸ್ ಮೇಲಿನ ಇತ್ತೀಚಿನ ಉಗ್ರ ದಾಳಿ ಇತಿಹಾಸದ ನಿರ್ಣಾಯಕ ಯುದ್ಧವೊಂದನ್ನುನೆನಪಿಸಿಕೊಳ್ಳುವಂತೆ ಮಾಡಿದೆ. ಅಂದೂ ಟೂರ್ಸ್ ಎಂಬಲ್ಲಿ ಫ್ರೆಂಚ್ ಮತ್ತು ಇಸ್ಲಾಮಿಕ್ ಶಕ್ತಿಗಳ ಬಲ ಪ್ರದರ್ಶನ ನಡೆದಿತ್ತು.
ಇಸ್ಲಾಮಿಕ್ ಸ್ಟೇಟ್ ಉಗ್ರರ ಪ್ರಮುಖ ಹಾಗೂ ಅಂತಿಮ ಉದ್ದೇಶ ವಿಶ್ವ ರಾಜಕೀಯದಲ್ಲಿ ಮರೆಯಾಗಿರುವ ಖಲೀಫಾ ಆಡಳಿತವನ್ನು ಮತ್ತೆ ಸ್ಥಾಪಿಸುವುದು ಮತ್ತು ಖಲೀಫಾ ಆಡಳಿತವನ್ನು ಇಡೀ ವಿಶ್ವ ಸಮುದಾಯದ ಮೇಲೆ ಹೇರುವುದು. ಈ ಗುರಿ ಸಾಧಿಸುವ ಹುಚ್ಚು ಸಾಹಸದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಅಲ್ಲಲ್ಲಿ ನಡೆಸುವ ಹಿಂಸಾಚಾರ, ನರಮೇಧಗಳು ವಿಶ್ವದ ಗಮನ ಸೆಳೆಯುವ ಪ್ರಯತ್ನಗಳಷ್ಟೇ. ದಿನದಿಂದ ದಿನಕ್ಕೆ ಬದಲಾಗುತ್ತಿರುವ ಇಸ್ಲಾಮಿಕ್ ಸ್ಟೇಟ್‌ನ ಯೋಜನೆಗಳು, ಹೇಳಿಕೆಗಳು ಉಗ್ರರೊಳಗಿನ ಭೀತಿ, ಆತಂಕಗಳ ಪ್ರತೀಕ. ಉಗ್ರರು ನಡೆಸುತ್ತಿರುವ ಹತ್ಯಾಕಾಂಡ ಮತ್ತು ಇಸ್ಲಾಮಿಕ್ ಉಗ್ರರ ವಿರುದ್ಧ ಅಮೆರಿಕಾ, ರಷ್ಯಾ ಮತ್ತಿತರ ವಿಶ್ವ ಶಕ್ತಿಗಳ ಕಾರ್ಯಾಚರಣೆಯ ಮಧ್ಯೆಯೆ ಇಸ್ಲಾಮಿಕ್ ಸ್ಟೇಟ್ ಪ್ಯಾರಿಸ್‌ನಲ್ಲಿ ದಾಳಿ ನಡೆಸಿ ವಿಶ್ವದ ಗಮನ ಸೆಳೆಯಿತು. ಉಗ್ರರು ನೂರಕ್ಕೂ ಹೆಚ್ಚು ಜನರ ಪ್ರಾಣ ಬಲಿ ತೆಗೆದುಕೊಂಡರು. ಇದು ವಿಶ್ವ ಮಟ್ಟದಲ್ಲಿ ಫ್ರಾನ್ಸ್ ಪರ ಅನುಕಂಪ ಮತ್ತು ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಅಲೆ ಹರಡಿಕೊಳ್ಳುವಂತೆ ಮಾಡಿತು. ಫ್ರಾನ್ಸ್ ಮೇಲೆ ಉಗ್ರರ ಆಕ್ರಮಣ ಇದೇ ಮೊದಲೇನಲ್ಲ, ಈ ಹಿಂದೆ ಚಾರ್ಲಿ ಹೆಬ್ಡೊ ದಾಳಿಯೂ ಗಮನ ಸೆಳೆದಿತ್ತು. ಪ್ಯಾರಿಸ್ ಮೇಲಿನ ಇಸ್ಲಾಮಿಕ್ ಸ್ಟೇಟ್ ದಾಳಿ ಇತಿಹಾಸವನ್ನು ಮಗದೊಮ್ಮೆ ಮೆಲುಕು ಹಾಕುವಂತೆ ಮಾಡಿದೆ. ಫ್ರೆಂಚರು ಮತ್ತು ಇಸ್ಲಾಮಿಕ್ ಶಕ್ತಿಗಳ ನಡುವಿನ ಹಳೆಯ ಸಮರವನ್ನು ನೆನಪಿಸಿದೆ.
ಸರಿ ಸುಮಾರು 1300 ವರ್ಷಗಳ ಹಿಂದೆ, ಕ್ರಿಸ್ತಶಕ 732ನೇ ಇಸವಿಯಲ್ಲಿ ನಡೆದ ‘ಟೂರ್ಸ್ ಯುದ್ಧ’ ವಿಶ್ವ ರಾಜಕೀಯದ ನಿರ್ಣಾಯಕ ಯುದ್ಧಗಳಲ್ಲೊಂದು. ಖ್ಯಾತ ಇತಿಹಾಸಕಾರ ಪೌಲ್ ಡೇವಿಸ್ ಅವರ 100 Decisive Battles: From Ancient Times to the Present ಎಂಬ ಕೃತಿಯಲ್ಲೂ ಈ ಯುದ್ಧದ ಬಗೆಗೆ ಕುತೂಹಲಕಾರಿ ವಿವರಗಳಿವೆ.ಕ್ರಿಸ್ತ ಶಕ 732ರಲ್ಲಿ ರೋಮ್ ಸಾಮ್ರಾಜ್ಯ ಪತನವಾಗಿ ಇಸ್ಲಾಮಿಕ್ ಶಕ್ತಿಗಳ ಪ್ರಭಾವ ದಟ್ಟವಾಗಿತ್ತು. ಇಸ್ಲಾಮನ್ನು ಪ್ರಪಂಚದಾದ್ಯಂತ ವಿಸ್ತರಿಸಲು ಪಣ ತೊಟ್ಟು ಉತ್ತರ ಆಫಿಕಾ, ಸ್ಪೈನ್, ಕಾಕಸಸ್ ಮತ್ತಿತರ ಮಧ್ಯ ಪ್ರಾಚ್ಯದ ಪ್ರದೇಶಗಳನ್ನು ಮಿಂಚಿನ ವೇಗದಲ್ಲಿ ವಶಪಡಿಸಿಕೊಂಡು ಉಮಯ್ಯಾದ್ ಖಲೀಫಾನ ಸೈನ್ಯ ಯುರೋಪ್‌ನತ್ತ ತನ್ನ ಚಿತ್ತ ನೆಟ್ಟಿತ್ತು. ಹೆಣಗಳ ರಾಶಿಯ ಮೇಲೆ ಖಲೀಫಾ ಅಧಿಕಾರದ ಪತಾಕೆ ನೆಟ್ಟು, ರೆಹಮಾನ್-ಅಲ್-ಗಫಿಕಿಯ ನೇತೃತ್ವದಲ್ಲಿ ಸುಮಾರು 80,000 ಸೈನಿಕರ ಸೈನ್ಯ ಯುರೋಪನ್ನು ವಶಪಡಿಸಿಕೊಳ್ಳಲು, ದಕ್ಷಿಣ ಫ್ರಾನ್ಸ್ ಪ್ರಾಂತ್ಯದ ಆಕ್ರಮಣಕ್ಕೆ ಮುಂದಾಗಿತ್ತು. ಇಂಥ ಸಂದಿಗ್ಧ ಸಮಯದಲ್ಲಿ ಉಮಯ್ಯಾದ್ಖಲೀಫಾನ ಆಕ್ರಮಣದಿಂದ ಯುರೋಪ್ ಮತ್ತು ಪಾಶ್ಚಾತ್ಯರ ಘನತೆಯನ್ನು ರಕ್ಷಿಸಿದ್ದು ಫ್ರೆಂಚ್ ಜನಾಂಗ ಎಂಬುದನ್ನು ಸ್ಮರಿಸಿಕೊಳ್ಳಬೇಕು.
ಕ್ರಿಸ್ತಶಕ 732ರಲ್ಲಿ ರೆಹಮಾನ್-ಅಲ್-ಗಫಿಕಿಯ ಸೈನ್ಯ ಯುರೋಪ್ ಬಾಗಿಲಿಗೆ ಬಂದು ನಿಂತಾಗ, ಚಾರ್ಲ್ಸ್ ಮಾರ್ಟೆಲ್ ನೇತೃತ್ವದ ಫ್ರಾಂಕ್ ಸೈನ್ಯ ಟೂರ್ಸ್ ಎಂಬ ಪ್ರದೇಶದಲ್ಲಿ ತಡೆಯಿತು. ಇಲ್ಲಿ ನಡೆದ ಯುದ್ಧವೇ ಚರಿತ್ರೆಯ ನಿರ್ಣಾಯಕ ಯುದ್ಧಗಳಲ್ಲೊಂದಾದ ಟೂರ್ಸ್ ಯುದ್ಧ. ಈ ಯುದ್ಧದ ಫಲಿತಾಂಶ ವಿಶ್ವ ರಾಜಕೀಯದ ಮುಂದಿನ ಆಗು ಹೋಗುಗಳನ್ನು ನಿರ್ಧರಿಸಿತು. ಒಂದು ವೇಳೆ ಉಮಯ್ಯಾದ್ ಖಲೀಫಾನ ಸೈನ್ಯದ ಕೈ ಮೇಲಾಗಿ ಅದು ಯುರೋಪಿನ ಭಾಗಗಳ ಮೇಲೆ ಅಧಿಪತ್ಯ ಸ್ಥಾಪಿಸಿದ್ದಲ್ಲಿ, ಪ್ರಸ್ತುತ ಶಕ್ತಿ ರಾಜಕೀಯದಲ್ಲಿ ಅಮೆರಿಕಾಕ್ಕೆ ಸರಿಸಮನಾಗಿ ಅಥವಾ ಅಮೆರಿಕಾವನ್ನೂ ಮೀರಿಸುವಂಥ ದೈತ್ಯ ‘ಸೂಪರ್ ಪವರ್’ ಆಗಿ ಖಲೀಫಾ ಛಾಪು ಮೂಡಿಸುತ್ತಿತ್ತು ಎಂದುಪೌಲ್ ಡೇವಿಸ್ ಅಭಿಪ್ರಾಯಪಡುತ್ತಾರೆ.
ಹೀಗೆ ಖಲೀಫಾನ ಆಕ್ರಮಣದ ಸಂದರ್ಭದಲ್ಲಿ ಗಂಡಾಂತರಕ್ಕೆ ತಲೆಕೊಟ್ಟು ಯುರೋಪಿನ ಗೋಡೆಯಾಗಿ ನಿಂತ ಶ್ರೇಯಸ್ಸು ಫ್ರಾನ್ಸ್‌ಗೆ ಸಲ್ಲುತ್ತದೆ. ಪ್ರಸ್ತುತ ಇಸ್ಲಾಮಿಕ್ ಸ್ಟೇಟ್‌ನ ಪ್ಯಾರಿಸ್ ದಾಳಿ ಅಂತಾರಾಷ್ಟ್ರೀಯ ಮಟ್ಟದ ಪ್ರಚಾರ ಪಡೆದು ಒಬಾಮ, ಪುಟಿನ್, ಮೋದಿಯಿಂದ ಹಿಡಿದು ಪ್ರಪಂಚದ ಬಹುತೇಕ ರಾಷ್ಟ್ರಗಳ ನಾಯಕರು ಪ್ಯಾರಿಸ್ ದಾಳಿಯನ್ನು ಉಗ್ರವಾಗಿ ಖಂಡಿಸಿರುವುದು ಖಲೀಫಾ ಮರು ಸ್ಥಾಪಿಸಲು ಹೊರಟವರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ ಮತ್ತು ಪ್ಯಾರಿಸ್ ದಾಳಿಯ ನಂತರದ ಶೀಘ್ರ ಬೆಳವಣಿಗೆಗಳನ್ನು ಗಮನಿಸಿದಾಗ ಇತಿಹಾಸ ಮರುಕಳಿಸುತ್ತಿದೆಯೇ ಎಂಬ ಪ್ರಶ್ನೆ ಮೂಡುವುದರಲ್ಲಿ ತಪ್ಪೇನಿಲ್ಲ.ಈ ಲೇಖನ ಟೂರ್ಸ್ ಯುದ್ಧ ಮತ್ತು ಫ್ರೆಂಚರ ಧೈರ್ಯ ಸಾಹಸಗಳ ವೈಭವೀಕರಿಸುವ ಪ್ರಯತ್ನವಲ್ಲ. ಮುಂದೆ 400 ವರ್ಷಗಳ ನಂತರ ಯುರೋಪಿನ ಸೇನೆ ಕ್ರುಸೇಡ್ ಹೆಸರಿನಲ್ಲಿ ನಡೆಸಿದ ರಕ್ತದೋಕುಳಿಯನ್ನು ಪ್ರಪಂಚ ಇನ್ನೂ ಮರೆತಿಲ್ಲ. ಪರಸ್ಪರ ಘರ್ಷಣೆ, ಸಂಘರ್ಷ ಚರಿತ್ರೆಯ ಪುಟಗಳಲ್ಲಿ ಸಹಜವೆಂಬಂತೆ ಬೆರೆತಿರುವಾಗ, ಯಾರನ್ನೂ ವೈಭವೀಕರಿಸುವ, ಓಲೈಸುವ ಪ್ರಶ್ನೆಯೇ ಇಲ್ಲಿಲ್ಲ.ಅಂದು ಖಲೀಫಾ ಸೈನ್ಯವನ್ನು ಫ್ರೆಂಚರು ಸಮರ್ಥವಾಗಿ ತಡೆಹಿಡಿದಿದ್ದು, ಮುಂದಿನ ದಿನಗಳಲ್ಲಿ ಖಲೀಫಾ ಪ್ರಭಾವ ನಿಧಾನವಾಗಿ ಮರೆಯಾಗಿ ಹೋಗಿದ್ದು ಚರಿತ್ರೆ ಹೇಳುವ ಕಥೆ.
 ಹೀಗೆ ಚರಿತ್ರೆಯಲ್ಲಿ ಕಾಣೆಯಾದ ಖಲೀಫಾ ಮರುಸ್ಥಾಪನೆಗಾಗಿ ಹರಸಾಹಸ ಮಾಡುತ್ತಿರುವ ಇಸ್ಲಾಮಿಕ್ ಸ್ಟೇಟ್ ಮತ್ತದರ ಪ್ರಯತ್ನಗಳನ್ನು ಗಮನಿಸಿದರೆ ಪ್ಯಾರಿಸ್ ದಾಳಿಯೊಂದಿಗೆ ವಿಶ್ವ ರಾಜಕೀಯ ಹೊಸ ಆಯಾಮಗಳತ್ತ ಮುಖ ಮಾಡುವಂತೆ ಮಾಡಿದೆ. ಈ ಸಂದರ್ಭದಲ್ಲಿ ಟೂರ್ಸ್ ಯುದ್ಧ ಚರಿತ್ರೆಯ ಪುಟವಷ್ಟೇ ಅಲ್ಲ, ಭವಿಷ್ಯದ ತಂತ್ರಗಳಿಗೆ ನೀಲ ನಕ್ಷೆಯೂ ಹೌದು.
(ಈ ಲೇಖನ 13  ಡಿಸೆಂಬರ್ 2015 ರ ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ)