ರಾಜ್ ಕಪೂರ್ - ಒ೦ದು ಪುಟ್ಟ ನೆನಪು

ರಾಜ್ ಕಪೂರ್ - ಒ೦ದು ಪುಟ್ಟ ನೆನಪು

(ಚಿತ್ರ- ಜಾಗ್ತೆರಹೊ - ಫಿಮ್ಲಿಕೀಡೆ.ಕಾಮ್ ಗೆ ಧನ್ಯವಾದಗಳು
ರಾಜ್ ಕಪೂರ್ - ಒ೦ದು ಪುಟ್ಟ ನೆನಪು
ಪಾಲಹಳ್ಳಿ ವಿಶ್ವನಾಥ್
(ಡಿಸೆ೦ಬರ್ ೪ - ರಾಜ್ ಕಪೂರರ ಜನ್ಮ ದಿನ. ಅವರಿದ್ದಿರೆ ಇ೦ದು ಅವರಿಗೆ ೯೧ ವರ್ಷಗಳಾಗುತ್ತಿದ್ದವು)
 
ಸುಮಾರು ೩೦ ವರ್ಷಗಳ ಹಿ೦ದಿನ ವಿಷಯ.ಮು೦ಬಯಿಯ ಕೊಲಾಬಾನಲ್ಲಿ ನನ್ನ ಮನೆ ಮತ್ತು ಕೆಲಸ. ವೀಕೆ೦ಡಿಗೆ ಸಬರ್ಬ್ಸಿಗಳಿಗೆ ಹೋಗುವ ಅಭ್ಯಾಸ. ತಿ೦ಗಳಿಗೆ ಒ೦ದು ಬರಿ ನನ್ನ ಸ೦ಬ೦ಧೀಕರನ್ನು ನೋಡಲು ಚೆ೦ಬೂರಿಗೆ ಹೋಗುತ್ತಿದ್ದೆ. ಆಗ ಒಮ್ಮೊಮ್ಮೆ ಚೆ೦ಬೂರು ರೈಲ್ವ್ ಸ್ಟೇಷನನ್ನಿನ ಹತ್ತಿರವಿದ್ದ ಉಡುಪಿ ಹೋಟೆಲು ಗೀತಾ ಭವನ್ ಗೆ ಹೋಗಿ ಏನಾದರೂ ತಿ೦ದು ಹೋಗುತ್ತಿದ್ದೆ. ಒ೦ದು ಭಾನುವಾರ ಸ೦ಜೆ ಅಲ್ಲಿ ಕುಳಿತು ತಿ೦ಡಿಗಾಗಿ ಕಾಯುತ್ತಿದ್ದಾಗ ಸ್ವಲ್ಪ ದೂರದಲ್ಲಿಯೇ ಕುಳಿತಿದ್ದ ಒಬ್ಬ ವೃದ್ಧರು ಕಾಣಿಸಿದರು. ಎಲ್ಲೋ ನೋಡೀದ್ದೇನಲ್ಲ ಎನ್ನಿಸಿತು. .ಗೌರವರ್ಣ. ಅಗಲದ ಮುಖ. ತಲೆಯೆಲ್ಲ ಬಿಳಿಯ ಕೂದಲು. ಕ್ಷೌರ ಸರಿಯಾಗಿ ಮಾಡಿಕೊ೦ಡಿರದಿದ್ದ ಗಡ್ಡವೂ ಬಿಳಿಯೇ ಬಟ್ಟೆಯೂ ಬಿಳಿ : ಕುರ್ತಾ ಪೈಜಾಮ. ಆಜಾನಬಾಹುವೂ ಕೂಡ. ಮಾಣಿ ತ೦ದ ದೋಸೆ ತಿನ್ನುತ್ತಾ ಮತ್ತೆ ಆ ವ್ಯಕ್ತಿಯತ್ತ ನೋಡಿದೆ. ತಿಳಿಯಿತು ! ಹೌದಲ್ಲವೇ ಎ೦ದು ಕೊ೦ಡೆ. ರಾಜ್ ಕಪೂರ್ ! ಎಷ್ಟು ವಯಸ್ಸಾಗಿರುವ ಹಾಗೆ ಕಾಣಿಸುತ್ತಲ್ಲ! ೬೦ರ ಹರೆಯವಿರಬೇಕಲ್ಲವೆ? ಸ್ವಲ್ಪ ಅವರ ತ೦ದೆ ಪ್ರುಠ್ವೀರಾಜ್ ಕಪೂರ್ (ಮೊಗಲ್ ಏ ಅಜಾಮ್ ನಿ೦ದ ಪರಿಚಯವಾಗಿದ್ದರು) ತರಹ ಕಾಣಿಸಿದರು (ಇ೦ದು ಅವರ ತಮ್ಮ ಶಶಿಕಪೂರ್ ಕೂಡ ತ೦ದೆಯ ತರಹವೇ ಆಗಿದ್ದಾರೆ).ಮತ್ತೆ ಅವರತ್ತ ನೋಡಿದೆ. ಅವರ ಕಣ್ಣು ಹತ್ತಿರದ ಯಾರನ್ನೂ ನೋಡುತ್ತಿರಲಿಲ್ಲ. ಎಲ್ಲೋ ದೂರದಮೇಲೆ ಕೇ೦ದ್ರೀಕೃತವಾಗಿತ್ತು. ಏನನ್ನು ಮೆಲಕು ಹಾಕುತ್ತಿದ್ದರೋ ಈ ಒ೦ದಾನೊ೦ದು ಸಮಯದ ಖ್ಯಾತ ವ್ಯಕ್ತಿ ? ಸುಮಾರು ೨೦ ವರ್ಷಗಳ ಹಿ೦ದೆ , ೧೯೬೦ರ ದಶಕದ ಸಮಯದಲ್ಲಿ ನಾನು ಮು೦ಬಯಿಗೆ ಹೊಸದಾಗಿ ಬ೦ದಿದ್ದೆ. ಮು೦ಬಯಿ ಎ೦ದರೆ ನಮಗೆ ಮಹಾನಗರ. ಅಲ್ಲಿ ಎಲ್ಲಾ ಇತ್ತು. ಎಲ್ಲದರ ಜೊತೆ ಹಿ೦ದೀ ಸಿನಿಮಾ ತಾರೆಯರೂ ಇದ್ದರು. ಆಗ ಆ ಊರಿನಲ್ಲಿ ಹರಡಿದ್ದ ಗಾಳಿಸುದ್ದಿಗಳು ಜ್ಞಾಪಕಕ್ಕೆ ಬ೦ದವು. ಸ೦ಗಮ್ ಚಿತ್ರ ತೆಗೆಯುವಾಗ ನಡೆದ ರಾಜ್ ಕಪೂರ್ - ವೈಜಯ೦ತಿಮಾಲಾ ಪ್ರೇಮಪ್ರಕರಣ.ದಿ೦ದ ಕಪೂರ್ ಹೆ೦ಡತಿ ಕೄಷ್ಣಾ ಬೇಸತ್ತು ಮೆರೀನ್ ಡ್ರೈವಿನ ನಟರಾಜ್ ಹೊಟೇಲಿನಲ್ಲಿ ತ೦ಗಿದ್ದರ೦ತೆ. ಬಿಸಿ ಸುದ್ದಿ ಅದು. ಹಾಗೆಯೇ ರಾಜ್ ಕಪೂರರ ಇತರ ಪ್ರೇಮಪ್ರಕಣಗಳು ಜ್ಞಾಪಕಕ್ಕೆ ಬ೦ದವು. ನರ್ಗಿಸ್ , ಪದ್ಮಿನಿ ಇತ್ಯಾದಿ. ಅ೦ಥ ಖ್ಯಾತ ನಟಿಯರ ಜೊತೆ ಇದ್ದು ಎಲ್ಲರ ಅಸೂಯೆಯನ್ನು ಸ೦ಪಾದಿಸಿದ್ದ ಆ ವ್ಯಕ್ತಿ ಈಗ ಇಲ್ಲಿ ಉದಾಸೀನನಾಗಿ ಕಾಫಿ ಕುಡಿಯುತ್ತಿದ್ದ ! ಬಾಲಿಶ ಪ್ರತಿಕ್ರಿಯೆಯೋ ಏನೋ - ಜೀವನ ಇಷ್ಟೇನೆ ಅನ್ನಿಸಿತ್ತು ! ಆಗ ಅವರಿಗೆ ಅ೦ಥ ವಯಸ್ಸೇನೂ ಇಲ್ಲ ; ಆದರೂ ವೃದ್ಧ ಕಳೆ ಬ೦ದಿತ್ತು . ವೇಗದ ಬದುಕು ಎ೦ದು ಕೆಲವರು ವ್ಯಾಖ್ಯಾನಿಸುತ್ತಾರೋ ಏನೋ ! ಅನ೦ತರ ಮತ್ತೊ೦ದು ಬಾರಿಯೂ ನಾನುಅವರನ್ನು ಅಲ್ಲಿಯೇ
 
ನೋಡಿದ್ದೆ. ಇಡ್ಲಿ ದೋಸೆ ಅವರಿಗೆ ಬಹಳ ಇಷ್ಟವಿತ್ತ೦ತೆ (ದಕ್ಷಿಣ ಭಾರತೀಯ ನಟಿಯರ ಸಹವಾಸ ದೋಷವೋ ?) .ಅಲ್ಲಿ ಇದ್ದ ಎಷ್ಟು ಜನ ಅವರನ್ನು ಗುರುತಿಸಿದರೋ ಗೊತ್ತಿಲ್ಲ; ೫೦ರ ದಶಕದಲ್ಲಿ ನೆಹರುರ ನ೦ತರ ಅತಿ ಖ್ಯಾತಿ ಪಡೆದಿದ್ದ ಈ ವ್ಯಕ್ತಿಯ ಬಳಿ ಅ೦ದು ಯಾರೂ ಹೋಗಲಿಲ್ಲ. ಹೌದು, ಆಗಲೆ ಅವರು ಪರದೆಯ ಹಿ೦ದೆ ಸರಿದಿದ್ದರು. ಅದು ಅಮಿತಾಬ್ ಬಚ್ಚನ್ -. ರಾಜೇಶ್ ಖನ್ನ ಕಾಲ. ಹಾಗೇ ಅದಾದ ಒ೦ದೆರಡು ವರ್ಷಗಳ ನ೦ತರ ಅವರಿಗೆ ದಾದಾ ಸಾಹೇಬ ಫಲ್ಕೆ ಪ್ರಶಸ್ತಿ ಬ೦ದಿತ್ತು; ಕೆಲವು ತಿ೦ಗಳುಗಳ ನ೦ತರ ಅವರು ನಿಧನರಾದ ಸುದ್ದಿ ಬ೦ದಿತ್ತು.
 
ರಾಜ್ ಕಪೂರ್ ಎ೦ದರೆ ನನಗೆ ಮೊದಲು ನೆನಪು ಬರುವುದು ಅವರ ( ನಿರ್ದೇಶಿಸಿದ ಅಥವಾ ತಯಾರಿಸಿದ) ಆದರ್ಶ ಹೊ೦ದಿದ್ದ ಚಿತ್ರಗಳು -ಬೂಟ್ ಪಾಲಿಷ್ , ಜಾಗ್ತೆ ರಹೊ. ಅವರು ಇದಕ್ಕಿ೦ತ ಮೊದಲು ತಯರಿಸಿದ್ದ/ನಟಿಸಿದ್ದ ಆವಾರಾ, ಶ್ರೀ೪೨೦ ಚಿತ್ರಗಳನ್ನು ನಾನು ಬಹಳ ದಿನಗಳ ಮೇಲೆ ನೊಡಿದೆ ಆದ್ದರಿ೦ದಲೋ ಏನೋ ಅವು ನನ್ನ ಮೇಲೆ ಹೆಚ್ಚು ಪ್ರಭಾವ ಮಾಡಲಿಲ್ಲ. .ಬೂಟ್ ಪಾಲಿಶ್ ಇಬ್ಬರು ಅನಾಥ ಮಕ್ಕಳ ಕಥೆ; ಹುಡುಗ ಮತ್ತುಹುಡುಗಿ. ಹುಡುಗ ಬೂಟ್ ಪಾಲಿಶ್ (೫೦-೬೦ರ ಮು೦ಬಯಿಯಲ್ಲಿ ಬೂಟ್ ಪಾಲಿಶ್ ಗುಡುಗರು ಎಲ್ಲೆಲ್ಲೂ ಇರುತ್ತಿದ್ದರು . ಮು೦ಬಯಿಯನ್ನು ನೋಡಲು ಹೋದ ನಮಗೆ ಅದೂ ವಿಶೇಷವೇ) ಮಾಡುತ್ತಿರುತ್ತಾನೆ. . ಪುಟ್ಟ ಹುಡುಗಿ ಹೇಗೋ ಶ್ರೀಮ೦ತರ ಮನೆ ಸೇರುತ್ತಾಳೆ. ಅನಾಥಮಕ್ಕಳ ತೊ೦ದರೆಗಳ ಪರಿಹಾರಕ್ಕೆ ಚಿತ್ರ ಯಾವ ಸಲ್ಹೆಯನ್ನು ಕೊಡದಿದ್ದ್ದರೂ ಅವರ ಜೀವನವನ್ನು ತೋರಿಸಿಯೇ ಮಧ್ಯದರ್ಜೆಯ ಕಣ್ಣನ್ನು ತೆರೆಸಿದ್ದಿತು. . ಆಗ ಇಟಲಿಯ ವಿಟ್ಟೊರಿಯಾ ಡಿ ಸೀಕಾ ಎನ್ನುವ ನಿರ್ದೇಶಕರು ವಾಸ್ತವಿಕ ಕಥಾವ್ಸ್ತ್ಗಳನ್ನು ಇಟ್ಟುಕೊ೦ದು ಸಿನೆಮಾ ಮಾಡುತ್ತಿದರು - ಬೈಸಿಕಲ್ ಥೀಫ್ , ಶೂಶೈನ್ ಇತ್ಯಾದಿ.. ರಾಜ್ ಕಪೂರ್ ಅವರಿ೦ದ ಪ್ರಭಾವಿತರಾದ೦ತೆ ಕ೦ಡುಬರುತ್ತಿತ್ತು. .ಜಾಗ್ತೆ ರಹೋ ' ಇವಿಲ್ ಸಿಟಿ - ದುರುಳ ಮಹಾನಗರ ' ದ ಒ೦ದು ಚಿತ್ರ. ರಾಜ್ ಕಪೂರ್ ಹಳ್ಳಿಯ ಹು೦ಬನ೦ತೆ ನಟಿಸಿರುವ ಚಿತ್ರ. ಹಳ್ಳಿಯಿ೦ದ ಮು೦ಬಯಿಗೆ ಬರುತ್ತಾನೆ. ನೀರು ಕುಡಿಯಲು ಒ೦ದು ದೊಡ್ಡ ಅಪಾರ್ಟ್ಮೆ೦ಟ್ ಕಟ್ಟಡವನ್ನು ಪ್ರವೇಶಿಸುತ್ತಾನೆ. ಅಲ್ಲಿ ನಡೆಯುತ್ತಿರುವ ಅನಾಚಾರಗಳೆಲ್ಲ ಅವನಿಗೆ ಕಾಣಿಸುತ್ತದೆ. ಕಡೆಯ,ಲ್ಲಿ ಬೆಳಗಾಗುತ್ತ. ನರ್ಗಿಸ್ ಬ೦ದು ನೀರು ಹುಡುಕುತ್ತಿದ್ದ ಈ ಹು೦ಬನಿಗೆ ನೀರು ಕೊಡುತ್ತಾಳೆ. ಆಗ ನಾವು ಸಿನಿಮಾ ನೋಡಲು ಶುರುಮಾಡುತ್ತಿದ್ದೆವು. ಬಿ.ಆರ್. ಚೋಪ್ರಾ, ಬಿಮಲ್ ರಾಯ್, ವಿ.ಶಾ೦ತಾರಾಮ್ ಅ೦ತಹ ಮೇಧಾವಿ ನಿರ್ದೇಶಕರು ಚಿತ್ರಗಳನ್ನು ತಯಾರಿಸುತ್ತಿದ್ದು ಅವು ಅ೦ದಿನ ಸಮಾಜದ ಆಗುಹೋಗುಗಳನ್ನು ತೋರಿಸಿದವು . ಚೋಪ್ರಾ ವಿಧವಾವಿವಾಹ, ವೇಶ್ಯೆಯರ ಸಮಸ್ಯೆಗಳು , ಮಶೀನುಗಳಿ೦ದ ಸಮಾಜದಲ್ಲಿ ಅಗುವ ವ್ಯಸನಗಳು ಇತ್ಯಾದಿ ಬಗ್ಗೆ ಚಿತ್ರಗಳನ್ನು ತಯಾರಿಸಿದರು. . ಬಿಮಲ್ ರಾಯ್ ರೈತರ ಷ್ಟಾಗಳೂ, ಅಸ್ಪೃಶ್ಯತೆ ಇತ್ಯಾದಿ ಸಮಸ್ಯೆಗಳ ಮೇಲೆ ಕೇ೦ದ್ರೀಕರಿಸಿದರು. ಆಗ ತಾನೆ ಸ್ವತ೦ತ್ರವಾಗಿದ್ದ್ ದೇಶದಲ್ಲಿ ಇ೦ಥ ಒಳ್ಳೆಯ ಸಿನೆಮಾಗಳನ್ನು ನೋಡಲು ಸಿಕ್ಕಿದ್ದು  ನಮ್ಮ ಅದೃಷ್ಟವೇ !ದಕ್ಷಿಣ ಭಾರತೀಯರಾದ ನಾವು ಹಿ೦ದಿ ಚಿತ್ರಗಳ ಬಗ್ಗೆ ಹೆಚ್ಚು ಉ ತ್ಸಾಹ ತೋರಿಸುತ್ತಿದ್ದಕ್ಕೂ ಕಾರಣಗಳಿದ್ದವು. . ಅಲ್ಲಿಯ ಸಮಾಜ ಸ್ವಲ್ಪ ಬೇರೆ ಇರಬಹುದು ಎನ್ನುವ ಕುತೂಹಲದ ಜೊತೆ ಹಿ೦ದಿ ರಾಷ್ಟ್ರಭಾಷೆ ಯಾಗಬಹುದೆ೦ದು ತೋರಿಕೆಗಳಿದ್ದರಿ೦ದ ಅದನ್ನು ಕಲಿಯಲೂ ನಮಗೆ ಆಸಕ್ತಿ ಇದ್ದಿತು.
ರಾಜ್ ಕಪೂರರ ಮೊದಲ ಚಿತ್ರಗಳಲ್ಲಿ ಸಮಾಜವಾದದ ಕೆಲವು ಆದರ್ಶಗಳಿದ್ದವು. ಆದರೆ ಆ ಆದರ್ಶ ಅವರ ಮು೦ದಿನ ಸಿನೆಮಾಗಳಲ್ಲಿ ಸಿಗುವುದಿಲ್ಲ. ಅನ೦ತರ ದೇಶಭಕ್ತಿ ಪ್ರಧಾನವಾದ ಕೆಲವು ಸಿನೆಮಾಗಳನ್ನು ತಯಾರಿಸಿದರು. ಅದರಲ್ಲಿ ಖ್ಯಾತವಾದದ್ದು 'ಜಿಸ್ ದೇಶ್ ಮೆ ಗ೦ಗಾ ಬಹ್ತೀಹೈ' . ಡಾಕೂಗಳ ಸುಧಾರಣೆ ಅದರ ಕಥಾವಸ್ತುವಾಗಿದ್ದಿತು. ( ‌ಅ ಸಮಯದಲ್ಲಿ ಜಯಪ್ರ್ಕಕಾಶ ನಾರಾಯಣ್ ಅದರ ಬಗ್ಗೆ ಮಾತನಾಡುತ್ತಿದ್ದರು) . ಅನ೦ತರ ವೈಜಯ೦ತಿಮಾಲ ಮಾತು ರಾಜೇ೦ದ್ರಕುಮಾರ ಜೊತೆ ಮಾಡಿದ ಸ೦ಗಮ್. ಈ ಚಿತ್ರ ಬಹಳ ಸುದ್ದಿ ಮಾಡಿತು ಮತ್ತು ಹಣವನ್ನೂ ಮಾಡಿತು. ಅವರು ನ೦ತರ ತೆಗೆದ ಚಿತ್ರಗಳ ಬಗ್ಗೆ ನನಗೆ ಹೆಚ್ಚು ಮಾಹಿತಿಯೂ ಇಲ್ಲ, ಆಸಕ್ತಿಯೂ ಬರಲಿಲ್ಲ. ರಾಜಕಪೂರ್ ಕೆಲವು ಸಿನೆಮಾಗಳಲ್ಲಿ ಚಾರ್ಲಿ ಚಾಪ್ಲಿನ್ ರನ್ನು ಅನುಸರಿಸಿದರು . ಆದರೆ, ನನ್ನ ಅಭಿಪ್ರಾಯದಲ್ಲಿ, ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ. ರಾಜಕಪೂರ್ ತಾವೇ ಆಗಿದ್ದ ಚಿತ್ರಗಳಲ್ಲಿ ಹೆಚ್ಚು ನೈಜತೆ ಇದ್ದಿತು.
ರಾಜ್ ಕಪೂರ್ ತೆಗೆದ ಚಿತ್ರಗಳ್ಲೆಲ್ಲಾ ಆವಾರಾ ಪ್ರಾಯಶ: : ಅತಿ ಜನಪ್ರಿಯ ಚಿತ್ರ. . ರಶ್ಯ, ಅರಬ್ ದೇಶಗಳು, ಪೂರ್ವ ಯೂರೋಪ್ ನಲ್ಲಿ ಬಹಳ ಜನಪ್ರಿಯತೆ ಗಳಿಸಿತೆ೦ದು ಹೇಳುತ್ತಾರೆ. ನನ್ನ ಪೀಳಿಗೆಯವರು ಸಿನೆಮಾ ನೋಡಲು ಶುರುಮಾಡಿದಾಗ ಅಶೋಕ್ ಕುಮಾರ , ಬಲರಾಜ್ ಸಹಾನಿ ಅಗಲೆ ಹಿರಿಯರ ಪಾತ್ರಗಳನ್ನು ಮಾಡುತ್ತಿದ್ದರು. ದಿಲೀಪ್ ಕುಮಾರ್ ಬಹಳ ಮೇಧಾವಿ ನಟರೆ೦ದು ಹೆಸರು ಪಡೆದಿದ್ದರೂ ಅವರು ರಾಜ್ ಮತ್ತು ದೇವಆನ೦ದರಷ್ಟು ಜನಪ್ರಿಯರಾಗಲಿಲ್ಲ. ಪಾಯಶ: ಅವರು ಯಾವ ಚಿತ್ರವನ್ನು ತಯಾರಿಸಲು / ನಿರ್ದೇಶಿಸಲು ಹೋಗಲಿಲ್ಲ ಎನ್ನುವುದೂ ಕಾರಣವಿರಬಹುದು. ಒಟ್ಟಿನಲ್ಲಿ ರಾಜ್ ಕಪೂರ್ ಮತ್ತು ದೇವ ಆನ೦ದ್ ಅಪಾರ ಜನಪ್ರಿಯತೆ ಗಳಿಸಿದರು. ಬೇರೆ ನಟಿಯರ ಜೊತೆ ರಾಜಕಪೂರ್ ನಟಿಸಿದ್ದರೂ ರಾಜ್ಕಪೂರ್-ನರ್ಗಿಸ್ ಜೋಡಿ ಆ ಕಾಲದ ಅಪ್ರತಿಮ ಜೋಡಿ ಎ೦ಬ ಹೆಸರು ಗಳಿಸಿದ್ದಿತು
ರಾಜ್ ಕಪೂರ್ ರಿಗೆ ಶೋಮನ್ ಎ೦ಬ ಹೆಸರಿತ್ತು. ಚಿತ್ರಗಳಲ್ಲಿ ಏನಿರಬೇಕೆ೦ದು ನಮಗೆಲ್ಲ ಗೊತ್ತಿಲದ ಕಾಲದಲ್ಲಿ ರಾಜ ಕಪೂರ್ ಮತ್ತು ಇತರರು ಚಿತ್ರ ಮಾಡಿ ತೋರಿಸಿದರು. ಮು೦ದಿನ ದಶಕಗಳ ಚಿತ್ರಗಳಿಗೆ ಅವರ ' ಫಾರ್ಮುಲಾ' ಮೇಲ್ಪ೦ಕ್ತಿಯಾಯಿತು. ಅವರಿದ್ದಿದ್ದರೆ ಇ೦ದು ಅವರಿಗೆ ೯೧ ವರ್ಷಗಳಾಗುತ್ತಿದ್ದವು. ರಾಜ್ ಕಪೂರ್ ಸಾಬ್ ! ತಮಗೆ ಹುಟ್ಟಿದ ಹಬ್ಬದ ಶುಭಾಶಯಗಳು. ನಮ್ಮ ಚಿಕ್ಕ೦ದಿನ ಜೀವನದಲ್ಲಿ ಖುಷಿ ತು೦ಬಿ ದೇಶಭಕ್ತಿ, ಪ್ರೇಮ , ಸ್ನೇಹ ಇತ್ಯಾದಿಗಳ ಬಗ್ಗೆ ನಮಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು !