ಸ್ನೇಹದ ಕಡಲಲ್ಲಿ.... ಹೀಗೆ ಸಾಗಿದೆ ನಮ್ಮ ಪಯಣ (ಬ್ಭಾಗ – 1)
ಬಾಳೊಂದು ವಿಶಾಲ ಕಡಲ ತರಹ, ಇಲ್ಲಿ ಈಜಬೇಕು, ಇದ್ದು ಜಯಿಸಬೇಕು ಅನ್ನೋ ಮಾತಿದೆ. ಆದರೆ ಜಯಿಸೊವರೆಗು ಬೇಕಾಗೊ ಸಹನೆ ಕೆಲವರಿಗೆ ಮಾತ್ರ ಇರತ್ತೆ. ಅಂಥಹ ಸಹನೆ, ಧೃಡ ನಿರ್ಧಾರ ಇತ್ಯಾದಿಗಳ ಬಗ್ಗೆ ಅರಿವು ನೀಡಿದ ನೀನೇ ಜೊತೆಯಲಿ ಇಲ್ಲವಾದಾಗ ಅವೆಲ್ಲವೂ ನನ್ನಿಂದ ಇಲ್ಲವಾಗುವುದು ಸಹಜವಲ್ಲವೆ. ಆದರೂ ಬದುಕಿನ ಬಗ್ಗೆ ನಿನಗಿರುವ ಧೃಷ್ಟಿಕೋಣ ನನಗಿಲ್ಲ. ಒಂದು ಹುಡುಗ ಹುಡುಗಿ ಕೊನೆವರೆಗೂ ಬಾರಿ ಸ್ನೇಹಿತರಾಗಿ ಉಲಿಯೋಕೆ ಸಾಧ್ಯ ಇಲ್ಲ ಅನ್ನೋ ಜನರ ಮಧ್ಯೆ ನಮ್ಮಿಬ್ಬರ ಸ್ನೇಹದ ಬಗ್ಗೆ ಹೇಳ್ಕೊಳ್ಳೋಕೆ ಹೆಮ್ಮೆ ಅನ್ಸತ್ತೆ.
ಕೆಲವೇ ದಿನಗಳ ಗೆಳೆಯ ನೀನು, ಅಷ್ಟರೊಳಗೆ ಈ ಬದುಕನ್ನ ನೀನು ವ್ಯಾಪಿಸಿಕೊಂಡ ಪರಿ ದೊಡ್ಡದಿದೆ. ಜೊತೆಯಾಗಿ ಕಳೆದಿದ್ದು ಕೆಲವೇ ಕ್ಷಣಗಳಾದರೂ, ನೀ ಕೊಟ್ಟ ನೆನಪುಗಳು ಸಾವಿರ. ಆ ನೆನಪುಗಳ ಬುತ್ತಿಯನ್ನು ಬಿಚ್ಚುತ್ತಾ ಕುಳಿತರೆ ಸಮಯ ಸಾಲದು ಬಿಡು.
ನಮ್ಮ ಮೊದಲ ಭೇಟಿ ನನಗಿನ್ನೂ ನೆನಪಿದೆ, ಆವಾಗ ನಮಗೆ ಹರೆಯದ 17 ವರ್ಷವಿರಬಹುದು. ಬೀಸಿಗೆ ರಜೆಯ ದಿನಗಳು, ದೂರದ ದಾವಣಗೆರೆಗೆ 12ನೇ ತರಗತಿಯ ಅಭ್ಯಾಸಕ್ಕೆಂದು ನಮ್ಮ ತಂದೆ ಅಲ್ಲಿ ನನ್ನ ಇರಿಸಿದ್ದು, ನೀನು ಸಹ ನಿನ್ನ ತರ್ಲೆ ಸ್ನೇಹಿತರ ಗುಂಪಿನ ಜೊತೆ ಅಲ್ಲೇ ಬಂದು ಸೇರಿದ್ದು, ಕ್ಲ್ಳಾಸಿನ ಸಮಯದಲ್ಲಿ ನೀವು ಮಾಡಿದ ಚೇಷ್ಟೆ, ಫಿಸಿಕ್ಸ್ ಲೆಕ್ಟ್ರರೆರ್ ನಿಂದ ನಿನಗಾದ ಪೂಜೆ ಯಾವ್ದನ್ನೂ ಮರೆತಿಲ್ಲ.
ಅಷ್ಟಕ್ಕೂ ಅಲ್ಲಿವರೆಗೂ ನಿನ್ನ ಹೆಸರೇನು, ನೀನು ಎಲ್ಲಿಯವನು ಅನ್ನೋ ಪ್ರಶ್ನೆಗಳಿಗೆ ನನಗಿನ್ನೂ ಉತ್ತರ ಸಿಕ್ಕಿರಲಿಲ್ಲ. ಉತ್ತರಗಳನ್ನು ಹುಡುಕೊ ಕುತೂಹಲವೂ ನನಗಿರ್ಲಿಲ್ಲ. ಜಸ್ಟ್ ಕ್ಯಾಷುವಲ್ ಎಲ್ಲ ಹುಡುಗರ್ ತರ ಇವನು ಕ್ಲಾಸ್‌ಮೇಟ್ ಅಂತಾನೆ ಇದ್ದೆ. ಆದರೆ ನನ್ನ ಭಾವನೆಗಳಿಗೆ ಮತ್ತು ನಮ್ಮ ಭೇಟಿಗೆ ಟರ್ನಿಂಗ್ ಪಾಯಂಟ್ ಸಿಕ್ಕಿದ್ದು ಅವತ್ತು ಭೋಜನಾಲಯದಲ್ಲಿ ಸಂಜೆ ನಾವು ಸಿಕ್ಕಾಗ.
ಬಹುಶಹ ಅವತ್ತು ರಜಾ ದಿನ, ನೀನು ಫ್ರೆಂಡ್ಸ್ ಜೊತೆ ಕ್ರಿಕೆಟ್ ಆಡಿ ಸುಸ್ತಾಗಿ ನೀರು ಕುಡಿಯೋಕೆ ಅಂತ ಬಂದೆ, ಸರಿಯಾಗಿ ಅದೇ ಸಮಯಕ್ಕೆ ನಿಮ್ಮ ಕಾಲೇಜಿನ ಕೆಲವು ಹುಡ್ಗೀರ್ ಜೊತೆ ನಾನು ನೀರು ತುಂಬೀಸ್ಕೊಳ್ಳೋಕೆ ಅಂತ ಅಲ್ಲಿ ಬಂದೆ. ನೀರು ಕುಡಿದು ಲೋಟ ಕೆಳ್ಗಡೆ ಇಟ್ಟು ಹೋಗೋದ್ ಬಿಟ್ಟು ವಾಪಸ್ ಅದಕ್ಕೆ ನೀರು ತುಂಬಿಸಿ ನನ್ನ ಕೈಗೆ ಕೊಟ್ಟು ಹೋದ್ರಲ್ಲಾ ಸರ್, ಆವಾಗಿಂದ ಶುರುವಾಯ್ತು ನಮ್ಮ ಹುಡ್ಗೀರು ನನ್ನ ಕಾಡ್‌ಸ್ಕೋಕೆ ಶುರು. ನಮ್ಮ ಹುಡ್ಗೀರ್ಗೆ ಮೊದ್ಲೇ ಇಷ್ಟು ಸಾಕು ಒಬ್ಬರನ್ನ ಗೋಳು ಹೊಯ್ಕೋಳ್ಳೋಕೆ. ನಿಜವಾಗ್ಲೂ ಅವನ ಹೆಸರೂ ನಂಗೊತ್ತಿಲ್ಲ ಅಂತ ಹೇಳಿದ್ರು ನಂಬಲಿಲ್ಲ, ನಂತರ ಅವರಿಂದಾನೆ ಗೊತ್ತಾಯ್ತು ನಿನ್ನ ಬಗ್ಗೆ. ತುಂಬಾನೇ ಹವಾ ಮೆಂಟೈನೇ ಮಾಡಿದೀಯಾ ಅನ್ಸತ್ತೆ ಅವತ್ತು ರಾತ್ರಿವರೆಗೂ ನಿನ್ನ ಬಗ್ಗೇನೇ ಮಾತುಗಳಾಯ್ತು. ಹ್ಮ್ ಪರವಾಗಿಲ್ಲ ಹುಡುಗ, ತರ್ಲೆ ಆದ್ರೂ ಒಳ್ಳೆಯವನು ಅನ್ಕೊಂಡು ಸುಮ್ನಾದೆ.
ಅದಾದಮೇಲೆ ನಾವು ಯಾವತ್ತೂ ನೇರವಾಗಿ ಭೇಟಿ ಮಾಡಿದ್ದೆ ಇಲ್ಲ.
ಅವತ್ತು ಕ್ಲಾಸಿನ ಕೊನೆಯ ದಿನ, ಎಲ್ಲರೂ ಅವತ್ತೇ ವಾಪಸ್ ಮನೆಗೆ ಹೊರಟು ಬಿಟ್ಟಿದ್ರು. ನಾನು, ನೀನು, ಇನ್ನೊಬ್ಬ ನಿನ್ನ ಗೆಳೆಯ ಮಾತ್ರ ಉಳ್ಕೊಂಡಿದ್ದು ಅನ್ಸತ್ತೆ. ನಮ್ಮ ಊರು ದೂರ ಆದ್ದರಿಂದ ಅಪ್ಪ ಮರುದಿನ ಬರ್ತೀನಿ ಅಂತ ಹೇಳಿದ್ರು. ಟೈಮ್ ಪಾಸ್ ಹೇಗಪ್ಪಾ ಮಾಡೋದು ಇವತ್ತು ಅಂತ ಇದ್ದಾಗ್ಲೇ ಕೇರಂ ನೆನಪಾಯ್ತು. ಆಡೋಣ ಅಂತ ಹೋದಾಗ ನೀನು ನಿನ್ನ ಫ್ರೆಂಡ್ ಆಲ್‌ರೆಡೀ ಆಡ್ತಿದ್ರಿ, ನನ್ಜೊತೆ ಯಾರು ಇರ್ಲಿಲ್ಲ. ಆವಾಗ ಸಿಕ್ಕಿದ್ದು ನಮ್ಮ ಅಡುಗೆ ಭಟ್ಟರು. ಅವರ ಜೊತೆ ಸೇರಿ ನಾಲ್ಕು ಜನ ಎಗ್ ಪಫ್ ಬೆಟ್ ಕಟ್ಟಿ ಕೇರಂ ಆಡಿದ್ದು ಇನ್ನೂ ನೆನಪಿದೆ. ಆಟವೇನೋ ಮುಗೀತು, ಆದರೆ ಪರಿಚಯವಾಗ್ಲಿಲ್ಲ. ನಮ್ಮ ಮಧ್ಯೆ ಯಾವ ಮಾತುಗಳು ಆಗ್ಲಿಲ್ಲ, ಗುಂಪಿನಲ್ಲಿ ಸೇರಿ ನಕ್ಕು ಆಟವಾಡಿದ್ದಷ್ಟೆ ನೆನಪಾಗಿ ಉಳಿಯಿತು. ಇಷ್ಟೊಂದು ಆಕ್ಟಿವ್ ಆಗಿ,ಎಲ್ಲ್ರನ್ನ ನಾಗ್ಸೊ ಹುಡ್ಗಣ್ಣ ಮಾತಾಡಿಸ್ಬೇಕು, ಪರಿಚಯ ಮಾಡ್ಕೊಳ್ಳ್ಬೇಕು ಅಂತ ಅನ್ನಸ್ತು. ಇನ್ನೇನು ಮಾತಾಡಿಸ್ಬೇಕು ಅನ್ನೋವಷ್ಟರಲ್ಲಿ ನಿಮ್ಮ ಅಪ್ಪ ಬಂದು ನಿನ್ನನ್ನ ಕರ್ಕೊಂಡು ಊರಿಗೆ ಹೋದ್ರು.
ಯಾವುದೇ ಪರಿಚಯ ಇಲ್ಲದಿದ್ರೂ, ಮುಖಾಮುಖಿ ಮಾತನಾಡಡಿದ್ರು, ಅವತ್ತು ನೀನು ಹೊದಾಗ ನನಗೆ ತುಂಬಾನೇ ಬೇಜಾರಾಯ್ತು. ಈ ಸ್ನೇಹ ಇಲ್ಲಿಗೆ ಕೊಣೇನಾ ಅಂತ ಅನ್ನಸ್ತು. ಸ್ವಲ್ಪ ಹೊತ್ತು ಜೊತೇಲಿ ಕೇರಂ ಆಡಿ ಮನ್ಸಲ್ಲಿ ಉಳಿದಿರೋ ಆ ನೆನಪಿನ ಜೊತೆಗೆ ನೀನು ಸಹ "ಕೇರಂ ಫ್ರೆಂಡ್" ಅಂತಾನೆ ಉಳ್ಕೊಂಡ್ ಬಿಟ್ಟೆ. ಆಗ ನನಗೆ ಸಿಕ್ಕಿದ್ದು "ನಾಗಜ್ಜ", ನಾವು ಅಲ್ಲಿ ಇದ್ದಷ್ಟು ದಿನ ನಮ್ಮನ್ನೆಲ್ಲ ತಮ್ಮ ಮಕ್ಕಳಂತೆ ನೋಡ್ಕೊಂಡ ನಮ್ಮ ವಾರ್ಡನ್ ತರ ಇದ್ದ "ನಾಗಜ್ಜ". ಒಂದು ರೀತಿಲಿ ಅವರೇ ನಮ್ಮ ಸ್ನೇಹನಾ ಕಾಪಾಡಿದ್ದು. ಅವತ್ತು ಅವರಿಲ್ದೆ ಇದ್ದಿದ್ರೆ ವಾಪಸ್ ನಿನ್ನ ಕಾಂಟ್ಯಾಕ್ಟ್ ಮಾಡೋಕೆ ಆಗ್ತಿರ್ಲಿಲ್ಲ. ಅವರು ಮಾಡಿದ ಸಹಾಯದಿಂದಲೇ ಇನ್ನೂ ನಿನ್ನ ಸ್ನೇಹ ನನ್ನ ಜೊತೆ ಇರೋದು.
ಬಹುಶಹ ಇವುಗಳ ಅರಿವು ಸಹ ನಿನಗಿಲ್ಲ, ಅವ್ರಿಂದ ಹೇಗೆ ಇದೆಲ್ಲ ಆಯ್ತು ಅಂತ ಯೋಚ್ನೆ ಮಾಡ್ತಿದಿಯಾ, ಮಾಡು. ಮುಂದಿನ ಪುಟಗಳಲ್ಲಿ ಎಲ್ಲ ವಿವರವಾಗಿ ಹೇಳ್ತೀನಿ. ಅಲ್ಲಿವರೆಗೂ ನಮ್ಮ ಸ್ನೇಹದ ಆಳ ಎಷ್ಟಿರ್ಬಹುದು ಅಂತ ಲೆಕ್ಕ ಹಾಕ್ತಿರು.
ಸ್ನೇಹಿತರು ಎಷ್ಟೋ ಇರಬಹುದು, ಆದರೆ
ಸ್ನೇಹದ ನಿಜವಾದ ಅರ್ಥ ತಿಳಿದಿರೋರು ಕೆಲವರು ಮಾತ್ರ.
ಸ್ನೇಹಕ್ಕೆ ಬೆಲೆ ಕೊಡೋರು ತುಂಬಾ ಇರಬಹುದು, ಆದರೆ
ಉಸಿರಿರೋವರೆಗೂ ನೀನೇ ನನ್ನ ಜೀವದ ಗೆಳೆಯ ಅಂತ ಹೇಳ್ಕೊಳ್ಳೋಳ್ಳು ನಾನೊಬ್ಳೇ.
Comments
ಉ: ಸ್ನೇಹದ ಕಡಲಲ್ಲಿ.... ಹೀಗೆ ಸಾಗಿದೆ ನಮ್ಮ ಪಯಣ (ಬ್ಭಾಗ – 1)
ಇದು ನನ್ನ ಮತ್ತು ನನ್ನ ಆತ್ಮಿಯ ಗೆಳೆಯನ ಗೆಳೆತನದ ಪಯಣ. ಬರಿ ಕಥೆಯಲ್ಲ.