ಹೊಟ್ಟೆ ನೋವು
ಹೊಟ್ಟೆ ನೋವಿನ ವಿಶ್ವರೂಪ ಇಂತೆಂದು ಹೇಳಿ ಮುಗಿಸಲಾಗದ ವಿಪರೀತದ ಪ್ರವರ... ಏನೊ ಕಾರಣಕ್ಕೆ ತನುವೊಳಗಿನ ಇಂಜಿನ್ನು ಗಬ್ಬೆದ್ದು ಹೋಗಿ ಅದರ ಅಂಗದೊಳಗಿನ ಕಲ್ಲಾಗಿಯೊ, ಭಿತ್ತಿಯೊಳಗಿನ ಹುಣ್ಣಾಗಿಯೊ, ಸಾರಿಗೆ ವ್ಯೂಹವನ್ನು ಕಲುಷಿತಗೊಳಿಸಿದ ಸರಕಿನ ರೂಪದಲ್ಲೊ ಸಾಕ್ಷಾತ್ಕಾರಗೊಂಡಾಗ ಬಹುತೇಕ ಕಾಣಿಸಿಕೊಳ್ಳುವ ಪ್ರಕಟ ರೂಪವೆಂದರೆ ಹೊಟ್ಟೆನೋವಾಗಿ. ಅಪರೂಪಕ್ಕೊಮ್ಮೆ ಬಂದು ಹೋಗುವ ಅತಿಥಿ ರೂಪದಿಂದ ಹಿಡಿದು ಪದೇ ಪದೇ ಬಂದು ಕಾಡಿ ಜೀವ ಹಿಂಡುವ ನಕ್ಷತ್ರಿಕ ರೂಪದವರೆಗೆ ಅದರ ವೈವಿಧ್ಯತೆಗೇನೂ ಕೊರತೆಯಿಲ್ಲ. ಇನ್ನು ತಿಂಗಳು ತಿಂಗಳ ನೈಸರ್ಗಿಕ ಪ್ರಕ್ರಿಯೆಯ ನೆಪದಲ್ಲಿ ತಪ್ಪದೆ ಬಂದು ಕಾಡುವ ಹೊಟ್ಟೆನೋವನ್ನು ಸಹಿಸುವ ಹೆಂಗಳೆಯರ ಅನುಭವವೂ ಪ್ರತಿ ಹೆಣ್ಣಿಗೆ ಪರಿಚಿತವಾದದ್ದೆ. ಇನ್ನು ಬಾಯಿಬಿಟ್ಟು ಹೇಳಲಾಗದೆ ಹೊಟ್ಟೆನೋವಿಂದ ಅತ್ತು ರಂಪಾಟ ಮಾಡುವ ಹಸುಗಂದಗಳನ್ನು ರಮಿಸಿ ಮಲಗಿಸಲು ಗ್ರೈಫ್ ವಾಟರ್ ಕುಡಿಸಿ ಮಲಗಿಸುವ ಪರಿ ಯಾವ ತಾಯಿಗೆ ತಾನೆ ಗೊತ್ತಿರದು ಹೇಳಿ ? ಹೀಗೆ ಯಾವುದಾದರೊಂದು ರೂಪದಲ್ಲಿ ಎಲ್ಲರನ್ನು ಕಾಡಿರಬಹುದಾದ ಹೊಟ್ಟೆನೋವಿನ ಉದ್ದ ಅಗಲ ವ್ಯಾಪ್ತಿ ಸಾಕಷ್ಟು ದೊಡ್ಡದೆಂದೆ ಹೇಳಬಹುದು.
ಮೂಲ ಯಾವುದೆ ಇದ್ದರು ಅದು ಬಂದಾಗ ಕಾಡುವ ಪರಿ ಮಾತ್ರ ಅಸಾಧಾರಣವೆಂದೆ ಹೇಳಬೇಕು.. ಹೊಟ್ಟೆಯೊಳಗಿಂದೆಲ್ಲೊ ಆರಂಭವಾಗಿ ಕರುಳಿಂದ ಹಿಡಿದು ಸಿಕ್ಕ ಸಿಕ್ಕ ಅಂಗವನ್ನೆಲ್ಲ ನಿಧಾನವಾಗಿ ವ್ಯಾಪಿಸುತ್ತ , ತಂತಾನೆ ಹರಡಿಕೊಂಡು ನಿಂತೆಡೆ ನಿಲ್ಲದೆ ಚಲಿಸುತ್ತ, ಕೆಲವೆಡೆ ಠಿಕಾಣಿ ಹಾಕಿ ಹಿಂಡಿ, ನುಲಿದು, ನಲಿಯುತ್ತ ಅನಾಯಾಸ ನರ್ತನ ಮಾಡತೊಡಗಿದರೆ ಅದನ್ನು ಅನುಭವಿಸುವ ಜೀವಿಯ ಯಾತನೆ ಆ ದೇವರಿಗೆ ಪ್ರೀತಿ. ಧಾರಾಳವಾಗಿ ನೀರು ಕುಡಿಯುವುದರಿಂದ ಹಿಡಿದು, ಎಣ್ಣೆ ಸೇವೆ, ಎಳನೀರು, ನೀರು ಮಜ್ಜಿಗೆ, ನಿಂಬೆ ಪಾನಕ, ಸೋಡಾ, ಜೀರಿಗೆ ನೀರುಗಳೆಲ್ಲದರ ಸೇವೆ ಮಾಡಿಸಿಕೊಂಡು ಅದೆಲ್ಲಕ್ಕು ಬಗ್ಗದಿದ್ದರೆ ಕೊನೆಗೆ ಒಂದು ಕೈಲಿ ಹೊಟ್ಟೆ ಹಿಡಿದುಕೊಂಡೆ ಡಾಕ್ಟರರ ಬಾಗಿಲಿಗು ಹತ್ತಿಸುವ ಈ ನೋವು ತಾನಿರುವ ತನಕ ವಿಲವಿಲ ಒದ್ದಾಡಿಸಿ, ನೆಲದ ಮೇಲೆಲ್ಲ ಬಿದ್ದೆದ್ದು ಹೊರಳಾಡುವಂತೆ ಮಾಡಿ, ಅತೀ ಸಹಿಷ್ಣುಗಳೆಂಬ ಹಣೆಪಟ್ಟಿ ಹೊತ್ತವರಲ್ಲು ಕಣ್ಣೀರು ಬರೆಸಿ ಕಂಗೆಡಿಸಬಲ್ಲ ತಾಕತ್ತು ಇದರದು. ತಿನ್ನುವ ಸಾಮಾನ್ಯ ಪ್ರಕ್ರಿಯೆಯೂ ಅಳತೆ ಮೀರಿದರೆ ಹೊಟ್ಟೆನೋವಿಗೆ ಮೂಲಕಾರಣವಾಗಿ ಆ ತಿನ್ನುವಾಟಕ್ಕೆ ಕಡಿವಾಣ ಹಾಕುವ ಖಳನಾಯಕನಾಗುವುದು ಇದರ ಮತ್ತೊಂದು ಸಾಮಾನ್ಯ ಮುಖ.
ಅಂತಹ ಹೊಟ್ಟೆನೋವಿನೊಂದು ಗಳಿಗೆಯನ್ನು ಪದರೂಪದಲ್ಲಿ ಹಿಡಿವ ಯತ್ನ - ಈ ಕವನ :-)
ಹೊಟ್ಟೆ ನೋವು
____________________________________
ಹೊಕ್ಕಳಿನಾಳದಲೊಂದು ಬೆಕ್ಕು ಹೊಕ್ಕಂತೆ
ತನ್ನೇ ನುಲಿದು ನುಲಿಸುತ ಹಿಂಡಿ ಸೊಪ್ಪಾದಂತೆ
ತಿರುತಿರುಗಿ ಮರಳಿ ಗಿರಿಗಿಟ್ಟಲೆ ಸುತ್ತು
ಬಿಟ್ಟರೆಗಳಿಗೆ ಯಾತನೆ ನೆನಪಲೆ ಸೊರಗಿತ್ತು ||
ಎಲ್ಲಿತ್ತೊ ? ಹೇಗಿತ್ತೊ ? ಯಾವ ಊರಿನ ಕುತ್ತೊ
ಯಾಕಿಲ್ಲಿ ಬಂದಿತ್ತೊ ಒಳ ಅಂಗಣದಲಿ ಕುತೂ
ಏನಾಟ..! ಪರದಾಟ..!! ತಿದಿ ಒತ್ತಿದಂತೆ ಗೂಟ
ಖಾಲಿ ಬಯಲಲ್ಲದೆಡೆ ಕ್ರೀಡೆಯಾಡಿಸಿ ಸಂಕಟ ||
ಇದ್ದಕ್ಕಿದ್ದಂತೆದ್ದು ಭುಗಿಲೆದ್ದ ಬೆಂಕಿಯ ಕಾವು
ಜನ್ಮಾಂತರದೆಲ್ಲಾ ಕರ್ಮ ಮೂರ್ತವಾದಂತೆ ನೋವು
ಯಾತನೆಯದು ಪದಕೆ ಸಿಗದು ವಿಲವಿಲ ಒದ್ದಾಟ
ಲೆಕ್ಕಿಸದೆಲೆ ಸುತ್ತಮುತ್ತ, ನೆಲಕೆ ಬಿದ್ದು ಹೊರಳಾಟ ||
ಜೀವ ಹಿಂಡುವ ಪರಿ, ಕರುಳಲದರಾ ನಗಾರಿ
ಜಠರದಲೊ ನಾಳದಲೊ ಕೋಶವೆಲ್ಲ ಸವಾರಿ
ಸವರಿ ನೇವರಿಸೊ ಮೃದುಲ, ಕಾಡುವುದು ಸರಿಯೆ?
ಕೇಳುವುದಾರ ಜಪ್ಪಿ, ಬಿಡದ ನೋವೊ ನರಹರಿಯೆ ||
ದಿವ್ಯ ಗಳಿಗೆಯದು ನಿರಾಳ, ಬಿಟ್ಟುಹೋದಾಗ ಸವತಿ
ಕಕ್ಕಿ ಹೊರ ದಬ್ಬಿ ಬೇಡದ ಕಕ್ಕುಲತೆ ಯಾಕೋ ಅತಿ
ಅಂದುಕೊಳುವಾಗಲೆ ಮತ್ತೆ ಮರುಕಳಿಸಿ ಥಟ್ಟನೆ
ಕಾಡುವ ಹೊತ್ತಲಿ ಜತೆಗಿಲ್ಲದೆ ಹೋದವನ ನೆನೆದೆನೆ ||
Comments
ಉ: ಹೊಟ್ಟೆ ನೋವು
ಕವನ ಸೊಗಸಾಗಿ ಮೂಡಿಬಂದಿದ್ದರೂ, ಮರೆತಿದ್ದ "ಹೊಟ್ಟೆನೋವು" ಹಾಗೂ ಅದರ ಅನುಭವವನ್ನು ಸಂಪೂರ್ಣವಾಗಿ ನಮ್ಮ ಮನಃಪಟಲದಲ್ಲಿ ಮೂಡಿಸಿದ್ದು ಅಕ್ಷಮ್ಯ ಅಪರಾಧ. ರಾಯರು ದಂಡ ತೆರಬೇಕಾದೀತು!
In reply to ಉ: ಹೊಟ್ಟೆ ನೋವು by santhosha shastry
ಉ: ಹೊಟ್ಟೆ ನೋವು
ಏನು ಸ್ವಾಮಿ ಇದು ಅನ್ಯಾಯ ? ಅನುಭವವನ್ನ ಒಳ್ಳೆ ಮಲ್ಲಿಗೆ ದಂಡೆ ತರ ಕಟ್ಟಿಕೊಟ್ಟಿದ್ದಕ್ಕೆ 'ಪ್ರಚಂಡ, ಉದ್ದಂಡ' ಅಂತೆಲ್ಲ ಬಿರುದು ಬಾವಲಿ ಕೊಡೋದು ಬಿಟ್ಟು, ಬರೆದ ಅಪರಾಧಕ್ಕೆ ತಲೆದಂಡ ಅನ್ನೊ ಮಾತಾಡ್ತಿರಲ್ಲ ? ಯಾವುದಕ್ಕು ಒಂದ್ಸಾರಿ ನಮ್ ಡಾಕ್ಟರ ಹತ್ತಿರ ಕೇಳಿ ಔಷಧಿ ತೆಗೆದಿಟ್ಟುಕೊಂಡಿರ್ತೀನಿ ಬಿಡಿ ( ಅದೇನೊ ಜೆಲೊಸಿಲ್ ಎಂಪಿಎಸ್ ಅಂತೇನೊ ರಾಮಬಾಣದ ಔಷಧಿ ಇರಬೇಕು - ಗ್ಯಾಸ್ಟ್ರಿಕ್ಕಿನವರಿಗೆ ಕೊಡೋದು); ದಂಡ ಕಟ್ಟಿ ಅಂದೊರಿಗೆಲ್ಲ ಅದನ್ನೆ ಒಂದು ಬಾಟಲ್ ಫ್ರೀ ಆಗಿ ಕೊಟ್ಟುಬಿಡೋಣ :-) (ಅಂದಹಾಗೆ ಆ ಔಷಧಿ ಇನ್ನು ಇದೆಯಾ ಹೆಸರು ಬದಲಾಯಿಕೊಂಡಿದೆಯಾ ಗೊತ್ತಿಲ್ಲ - ತೀರಾ ಸಿಗೋದೆ ಇಲ್ಲಾಂದ್ರೆ ಯಾವುದಾದರೂ ಅಜ್ಜಿ ಲೇಹ್ಯವನ್ನ ಹುಡುಕಿದರಾಯ್ತು!)
ಉ: ಹೊಟ್ಟೆ ನೋವು
ಹೊಟ್ಟೆನೋವಿನ ಪ್ರವರ ಚೆನ್ನಾಗಿದೆ !
ಹಿಂದೊಮ್ಮೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕನ್ನಡದ ವ್ಯಾಕರಣದ ಜೊತೆ ಹೋಲಿಸಿ ಒಂದು ಕವನ ಬರೆದಿದ್ದೆ ಸಿಕ್ಕರೆ ಇಲ್ಲಿ ಅಂಟಿಸುತ್ತೇನೆ
In reply to ಉ: ಹೊಟ್ಟೆ ನೋವು by partha1059
ಉ: ಹೊಟ್ಟೆ ನೋವು
ಕವನ : ಶಕಟರೇಫನೊ ಇವನು ಅನುಕರಣಾವ್ಯಯನೊ?
-----------------------------------------------
ಸಮೋಸ ಎಂದು ತಿಂದರೆ ಎದೆಯಲ್ಲಿ ರಾತ್ರಿಯೆಲ್ಲ ತಿದಿ
ಸಿಹಿ ಎಂದು ಮೆಚ್ಚುತ್ತ ತಿಂದರೆ ಹಗಲು ತಲೆಯಲ್ಲಿ ಶೂಲೆ
ಅಂಗಾತ ಮಲಗಿದರೆ ಎದೆಯಲ್ಲಿ ಚಳುಕು ಚಳುಕು
ಎದ್ದು ಕುಳಿತರೆ ಉದರದಿ ಎಂತದೊ ಗುಳು ಗುಳು
ದೇಹದಲ್ಲಿ ನೋವಿನ ಹರಿದಾಟ ಎಡಗೈನಿಂದ ಬಲಗೈಗೆ
ಮತ್ತದೆ ನೋವಿನ ನಲಿದಾಟ ಕುಣಿದಾಟ ತಲೆಯಿಂದ ಕಾಲಿಗೆ
ನಿಷ್ಪಾಪಿ ಎಂದು ನಿರ್ಲಕ್ಷಿಸಸಿದಿರಿ ಇವನ ಶಕಟರೇಫನ
ತಿರ್ರನೆ ತಿರುವುವನು ಹೊಟ್ಟೆಯಲ್ಲಿ ಒಮ್ಮೆ
ಡರ್ರನೆ ಕೂಗುವನು ಊರ್ದ್ವಮುಖಿ ಇನ್ನೊಮ್ಮೆ
ಪುರ್ರನೆ ಶಬ್ದ ಮಾಡುವನು ಅಧೋಮುಖಿ ಮತ್ತೊಮ್ಮೆ
ಎಲ್ಲರೆದುರು ಮಾನ ಕಳೆಯುವನು ಇವನು
ಗ್ಯಾಸ್ಟ್ರಿಕ್ ಎಂಬ ತುಂಟನು
ಇವನು ಶಕಟರೇಫನೊ ಇಲ್ಲ ಅನುಕರಣಾವ್ಯಯನೊ
In reply to ಉ: ಹೊಟ್ಟೆ ನೋವು by partha1059
ಉ: ಹೊಟ್ಟೆ ನೋವು
'ವ್ಯಾಕರಣ'ದ ಅಲಂಕಾರಣ ಚೆನ್ನಾಗಿದೆ ! ವ್ಯಾಕರಣದ ಅಲಂಕಾರವೊ ಅಥವ ನೋವಿನ ಅಭರಣವೊ - ಎರಡರಲ್ಲು, ಕಾಡುವ ಅಸಮಾಧಾನವೆ ಹೀರೊ.. :-)
ಉ: ಹೊಟ್ಟೆ ನೋವು
ನಿಜವಾದ ಹೊಟ್ಟೆನೋವಿನವರ ಪಾಡು ಚೆನ್ನಾಗಿ ವಿವರಿಸಿರುವಿರಿ, ನಾಗೇಶರೇ. ಇನ್ನೊಂದು ತರಹದ ಹೊಟ್ಟೆನೋವಿನವರೂ ಇರುತ್ತಾರೆ, ನೋಡಿ:
ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ |
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವವರಾರು ಮೂಢ ||
In reply to ಉ: ಹೊಟ್ಟೆ ನೋವು by kavinagaraj
ಉ: ಹೊಟ್ಟೆ ನೋವು
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಆ ಹೊಟ್ಟೆ ನೋವಿಗೆ ಔಷಧಿಯೆ ಇಲ್ಲ ಬಿಡಿ.. :-)
ಮನುಜ ಮತ್ಸರದೆ ತತ್ತರಿಸಿ
ಉತ್ಸವಮೂರ್ತಿಯ ಶಪಿಸೆ
ಕುಂದೇನು ಮೂಲವಿಗ್ರಹಕೆ ?
ಮಂಗನಾಟದ ಮಂದಿಯ ಲೆಕ್ಕ ||