ಶಿಲುಬೆ - ಮೂಲ- ಗುಲ್ಜಾರ ಸಾಹಬ್ ಅನು: ಲಕ್ಷ್ಮೀಕಾಂತ ಇಟ್ನಾಳ

ಶಿಲುಬೆ - ಮೂಲ- ಗುಲ್ಜಾರ ಸಾಹಬ್ ಅನು: ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ಶಿಲುಬೆ
      ಮೂಲ- ಗುಲ್ಜಾರ ಸಾಹಬ್
      ಅನು: ಲಕ್ಷ್ಮೀಕಾಂತ ಇಟ್ನಾಳ

ಹರಿದು ಹೋಗುತ್ತಿದೆ ಈ ನನ್ನ ಭುಜವಿದು, ಹೇ ದೇವ-ವಂದ್ಯನೆ
ಈ ನನ್ನ ಬಲ ಭುಜವು,
ಈ ಲೋಹದಂತಹ ಕಟ್ಟಿಗೆಯ ಶಿಲುಬೆಯ ಭಾರಕ್ಕೆ !
ಎಷ್ಟೊಂದು ಭಾರವಿದೆ ನೋಡು,  ನಿನಗೆ ಗೊತ್ತಿಲ್ಲವೆಂದು ಕಾಣುತ್ತದೆ !
ನನಗೆ ಭುಜವನ್ನು ಕೂಡ ಬದಲಿಸುವುದಕ್ಕೆ ಆಗುತ್ತಿಲ್ಲ
ಸ್ವಲ್ಪ  ಕೈಗೂಡಿ  ತುಸು  ಎತ್ತಿ ಹಿಡಿಯಬಾರದೇ ?

ಬೆಟ್ಟದ ಮೇಲೇರುವಾಗ ಹೆಜ್ಜೆಗಳು ನಡುಗುತ್ತಿವೆ,  ಮಣ ಭಾರಕ್ಕೆ
ಬರಿಗಾಲುಗಳಿಗೆ  ಕಡಿದ ಜಾಲಿಯ ಒಣ  ಮುಳ್ಳುಗಳು ನಟ್ಟುಬಿಟ್ಟಿವೆ
ನೋವನ್ನೆಲ್ಲ ಸಹಿಸಿ,  ಅದೆಷ್ಟೋ ಸಾರಿ ಹತ್ತಿರುವೆನಲ್ಲವೇ, ಇದೇ ಬೆಟ್ಟವನ್ನು ನಾನು
ಇಲ್ಲಿಯೇ ಒಬ್ಬಂಟಿ ತಂಗಿದ್ದ  ರಾತ್ರಿಗಳಿಗೆ ಲೆಕ್ಕವಿದೆಯೇ,  ನಿನ್ನ ಜೊತೆಯಲ್ಲೆ
ಭಜಿಸಿರುವೆ, ಪೂಜಿಸಿರುವೆ, ಮಾತಿಗಿಳಿದಿದ್ದು ನೆನಪಿಲ್ಲವೇ !

ನೀನಂತೂ ಅದೆಷ್ಟೊ 'ನಾ, ನಾ' ಎನ್ನುವ ಪರ್ವತಗಳನ್ನು ಊದಿಯೇ  ಹಾರಿಸಿರುವೆ
ನನ್ನ ಪಾದಕ್ಕೆ  ಸಣ್ಣ ಹರಳೊಂದು ನಟ್ಟಿದೆ,  ಒಂಚೂರು ….ಅದನ್ನು ತೆಗೆಯಲಾರೆಯಾ,

ಜೊತೆಯಲ್ಲೆ ಬರುತ್ತಿರುವ ಈ ರೋಮನ್ ಸಿಪಾಯಿಗಳು, ಇನ್ನಿಲ್ಲದಂತೆ ನೂಕುತ್ತಿದ್ದಾರೆ,
ಕ್ಷಣ ನಿಂತರೂ ಅವರ ಪೆಟ್ಟುಗಳು, ......ಅಬ್ಬಾ....
ಸೀದಾ ಎಲುಬಿಗೆ ನಾಟುತ್ತಿವೆ, ಓಹ್ ...ಅಸಾಧ್ಯ.....!
ಎಲ್ಲಿ ಈ ತುಟಿಗಳಿಂದ ಚೀತ್ಕಾರ ಹೊರಬಿದ್ದು ಬಿಡುವುದೋ ಎಂಬ ಆತಂಕ ನನಗೆ
ಚೀತ್ಕಾರ ಹೊಮ್ಮಿದರೆ ಈ ನಿನ್ನ ಜನವಿದ್ದಾರಲ್ಲ,
ನನ್ನನ್ನು ಬಲು ಅಸಹ್ಯವಾಗಿ ನೋಡುತ್ತಾರೆ, ಮೈಯೆಲ್ಲಾ ದ್ವೇಷದಿಂದ
ಮತ್ತೆ ನಾನೊಬ್ಬ ಕಪಟಿಯೆಂದು ತಿಳಿದುಬಿಡುತ್ತಾರೆ
ಆದರೆ, ನಾನು ನಿನ್ನ ಮಗನೆಂದು ಅವರಿಗೆ ಈಗಾಗಲೇ ಹೇಳಿಯೂ ಬಿಟ್ಟಿರುವೆನಲ್ಲಾ !

ನನ್ನ ಹಿಂದೆ ನಿನ್ನನ್ನು ಅವರೆಷ್ಟು ಅಂಜುತ್ತ  ಹುಡುಕುತ್ತಿದ್ದಾರೆಂದರೆ,
ನಿನ್ನ ಪವಾಡವೊಂದು ನಡೆದೇ ನಡೆಯುವುದೆಂಬ ಆತಂಕ, ನಂಬಿಕೆ ಅವರಲ್ಲೇ ಇದೆ!

ಹೇಳು ನೀನು ಬರುವೆಯಾ ?
ಬಂದರೂ ಯಾವಾಗ ಬರುವೆ ?
ಹೇಗೆ ಬರುವೆ ಹೇಳು ?
ನಾನಂತೂ ಕೊಂಚವಾದರೂ ಚಮತ್ಕಾರ ಎಸಗಿದ್ದೇನೆ, ಇಲ್ಲಿ ನಿನಗಾಗಿ
ಈ ನಿನ್ನ  ಮಗನಿಗಾಗಿ  ನೀನೂ ಕೂಡ ಏನಾದರೂ ಮಾಡಬಾರದೇ!

ಒಂದು  ಹುಲ್ಲು ಕಡ್ಡಿಯೂ  ಅಲುಗದು, ನಿನ್ನನುಮತಿಯಿಲ್ಲದೇ
ಒಂದು ಹಕ್ಕಿಯೂ  ಹಾರದು, ನಿನ್ನ ಸಮ್ಮತಿಯಿಲ್ಲದೇ
ನನ್ನ ಹಣೆಯ ಮೇಲಿನ ಈ ಮುಳ್ಳುಕಿರೀಟವನ್ನು ನೋಡು
ನೊಣವೊಂದು ಸಿಕ್ಕಿಹಾಕಿಕೊಂಡಿದೆ, ಹಾರಲಾಗದೇ
ನನ್ನ ಗಾಯಗಳಲ್ಲಿ ಗುಂಯ್‍ಗುಡುತ್ತ
ಬಲು ಹೊತ್ತಿನಿಂದ ಮುಳ್ಳುಗಳಲ್ಲಿ ಒದ್ದಾಡುತ್ತಿದೆ
ಕರುಣೆದೋರಿ ನಿನ್ನ ತುದಿಬೆರಳಿಂದ ಇದನಷ್ಟು ಬಿಡುಗಡೆಗೊಳಿಸಯ್ಯಾ!
ಪಾಪ! ….ಬದುಕಲಿ ಅಯ್ಯಾ,

ನನ್ನ ಹಣೆಯಿಂದ ತೊಟ್ಟಿಕ್ಕುತ್ತಿರುವ ಈ ನೆತ್ತರ ಹನಿಗಳು
ಈಗಂತೂ ಕಣ್ಣಲ್ಲೆ ಮಡುಗಟ್ಟುತ್ತಿವೆ
ನೀನೇ ಹೇಳು,   ಹೇಗೆ ಪಿಳುಕಿಸಲಿ ನೆತ್ತರುಗಣ್ಣುಗಳನ್ನು !

ನನ್ನಡೆಗೆ ನೋಡುತ್ತಿರುವೆಯೋ ಇಲ್ಲವೋ ?
ಅಥವಾ ನಾನೇ ನಿನಗೆ ಕಾಣುತ್ತಿಲ್ಲವೋ !
ಸುಳಿವನ್ನಾದರೂ ನೀಡಬಾರದೇ, ಹಾಗಂತ
ಗೊತ್ತು, ಗೊತ್ತು....ಪುರುಸೊತ್ತೆಲ್ಲಿಂದ ಬರಬೇಕು, ನೂರು ಕೆಲಸ ನಿನಗೆ!
ಅವುಗಳಲ್ಲೇ  ಮಗ್ನನಾಗಿರುವಿಯೇನೋ ?

ಒಂದು ವೇಳೆ ನನ್ನ ಸೈರಣೆಯ ಎಣ್ಣೆ ತೀರಿದರೆ,
ಮಣ್ಣಾಗುವೆಯಲ್ಲೋ  ನೀನೂ, ........ ನಿನ್ನಾ  ಪ್ರತಿಷ್ಢೆಯೂ !

ಮತ್ತೆ ಈ ಲೋಹದಂತಹ ಕಟ್ಟಿಗೆಯ ಶಿಲುಬೆ,……
ಹಾಂ, ಪರೀಕ್ಷೆ  ನಿನ್ನದೇ, ........ನನ್ನದೇನೂ ಅಲ್ಲವಲ್ಲ !

ಈ ತಲೆಗೆ ಹೊತ್ತಿಕೊಂಡಿರುವ ಜ್ವಾಲೆಯನ್ನು ತುಸು ಶಮನಿಸು,
ಗೊತ್ತು, ಗೊತ್ತು,! ನೀನೇ ಇಟ್ಟ ಕೊಳ್ಳಿ ಅದು ......ಕರ್ತ ನೀನು
ನಂದಿಸಲು ಕಿಂಚಿತ್ತೂ ಯತ್ನಿಸಿಲ್ಲ ನೀನು, ,....ನಿಜಕ್ಕೂ ನಂದಿಸುತ್ತಿರುವವನು ..ಆ ಸೂರ್ಯನು
ನಂದಿಸು, ..ನನಗಾಗಿ ಒಂದಿಷ್ಟು ಸ್ಪಂದಿಸು,

ಇದೇನಿದು ! ....ಕಣ್ಣುಗಳಿಗೆ  ಕತ್ತಲೆಯ ಮಂಪರು ಆವರಿಸುತ್ತಿದೆಯಲ್ಲಾ !

ಹಾಯ್! ಭುಜದ ಮಾಂಸದ ತುಣುಕೊಂದು ಕಿತ್ತು ಜೋತಾಡುತ್ತಿದೆ ಹೊರಬಂದು,
ಈ ಕಟ್ಟಿಗೆ ತೊಲೆಯು ತಿಕ್ಕಿದಾಗೊಮ್ಮೆ, ...ಹಾಯ್......ಈ ಎಲುವುಗಳು ನೋವಿನಿಂದ ಚೀರುತ್ತಿವೆ
ನನ್ನೀ ಸೈರಣೆ ಎಲ್ಲವೂ ನಿನಗಾಗಿ ತಾನೆ !
ಹಾಗೊಮ್ಮೆ,  ಇದೆಲ್ಲವೂ ನನಗಾಗಿ ಅಲ್ಲವೆಂದಾದರೆ
ಈ ಶಿಲುಬೆಯೂ ನನ್ನದಲ್ಲ, ......ಹೌದಲ್ಲವೇ ?
ನೀನೇ ಹೇಳು, ನೀನೇ ಬಂದು  ಹೊರಬೇಕಲ್ಲವೇ,  ನ್ಯಾಯವಾಗಿ!

ಇನ್ನು ಕೆಲವೇ ಹೆಜ್ಜೆಗಳು ಬಾಕಿ,
ನಿನ್ನನ್ನೇ  ಅಲ್ಲವೇ ಶಿಲುಬೆಗೆ ಏರಿಸುವರು ಇವರೆಲ್ಲಾ
ನೀನಲ್ಲಿಗೆ ಬರುವೆಯೇನು ?
ನನಗಂತೂ ನಿರೀಕ್ಷೆಗಳಿಲ್ಲಾ,...... ನೀನು ಬರುವಿಯೆಂದು !

ಇವರೊಂದಿಗೆ  ಈ ಮೊದಲು ವೈರವೇನಾದರೂ ಇತ್ತೆ ?
ಅಂತಹ ಖಯಾಲಿಗಳೇನಾದರು ಇವೆಯೇ ನಿನಗೂ ಆ ಸಾಮ್ರಾಟರಂತೆ ?
ನಿನ್ನ ಅಂದಾಜೇ  ಅರ್ಥವಾಗದು, ನನಗೂ!

ಇಲ್ಲಿ ಎಲ್ಲವೂ  ಗುಡ್ಡಗಾಡು....ಅಯೋಮಯ
ನಾನಲ್ಲಿಗೆ ತಲುಪುತ್ತಲೆ ಆಗುವುದೇನು,  ಗೊತ್ತಿಲ್ಲವೇನು ?
ಈ  ಗಟ್ಟಿ ತೊಲೆಗೆ ಮೊಳೆಗಳಿಂದ ಜಡಿದು ತೂಗುಹಾಕಿಬಿಡುವರು

ನನ್ನ ಈ ಜನ್ಮ ಜನನಿಯು ಕೂಡ,
ಗೊತ್ತಲ್ಲವೇ …….. ನಿನಗೆ ಅವಳು,
ಈ ಸಂದಣಿಯ ತುಳಿತಕ್ಕೆ ಸಿಲುಕಿ, ಹಿಂದೆಲ್ಲೋ ಕುಸಿದೇ  ಬಿದ್ದಿದ್ದಾಳೆ

ನಿನ್ನ ಪವಾಡಗಳ ಬಗ್ಗೆ ಹೇಳುತ್ತಿದ್ದೆನಲ್ಲಾ,
ಇವರೆಲ್ಲಾ ಅದೇ ಜನ,
ಅವುಗಳನ್ನೆಲ್ಲಾ ಕಂಡು ಇವರೆಲ್ಲ
ನಿನ್ನಲ್ಲಿ ಬಲು ವಿಶ್ವಾಸ ಹೊಂದಿದ್ದರು, ಭಯದಲ್ಲಿ
ಕಣ್ಣುಗಳ ತೆರೆದಿದ್ದರೆಲ್ಲಾ...ಆದರೂ..ನೀನೆಂದೂ ಕಾಣಲೇ ಇಲ್ಲ
ಕಿವಿಗಳನ್ನೆಲ್ಲಾ  ತೆರೆದಿದ್ದರು,....  ನೀನೆಂದೂ ಮಾತಾಡಲೇ ಇಲ್ಲ

ಸಾಂಕೇತಿಕವಾದರೂ
ನಿನ್ನ ದನಿಗೆ
ಮತ್ತೆ ನೀನಿರುವ ಪುರಾವೆಗೆ
ಕಾಲ ಮಿಂಚಿಲ್ಲವಿನ್ನೂ
ಪವಾಡದಂತೆ ಪ್ರತ್ಯಕ್ಷವಾಗಲು!
ಇಲ್ಲವಾದರೆ, ಪುರಾವೆಯಿಲ್ಲದೆ
ಊಹೆಯಾಗಿಯೇ ಉಳಿದುಬಿಡುವೆ ನೀನೂ

ಹಾಗಾದಲ್ಲಿ.....ಮುಂದಿನ ದಿನಗಳಲ್ಲಿ
ಜನಸಮುದಾಯಗಳಲ್ಲಿ ಹೆಸರಿಗೆ ಮಾತ್ರ
ಪೂಜೆಗೊಳ್ಳುವೆ , ಆರಾಧಿಸಲ್ಪಡುವೆ

ಮತ್ತೆ ಈ ಚಿನ್ಹೆಗಳಲ್ಲಿ ವೈರತ್ವ ವೃದ್ಧಿಸಿ....
ನನ್ನ ಹೆಸರಲ್ಲಿಯೂ ರಕ್ತ ಹರಿಯುವುದು

ಈಗ ನಿನ್ನ ಹೆಸರಲ್ಲಿ ಹರಿಯುತ್ತಿದೆಯಲ್ಲ,
ಹಾಂ.... ಹಾಗೆಯೇ!

(ಗುಲ್ಜಾರರ ಅತಿ ಉದ್ದದ ಕವನವಿದು)

Rating
No votes yet

Comments

Submitted by H A Patil 1 Sat, 12/26/2015 - 18:44

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ಶಿಲುಬೆ ಒಂದು ಸಾಂಧರ್ಭಿಕ ಕವನ ಏಸುವನ್ನು ಶಿಲುಬೆಗೆ ಏರಿಸುವಾಗ ಕರೆದೊಯ್ಯುವ ಮತ್ತು ಅತನ ಮನೋಭಾವ ಮತ್ತು ತಲ್ಲಣಗನು ಸಮರ್ಥವಾಗಿ ಬಿಂಬಿಸಿದೆ. ಅ ಸನ್ನಿವೇಶದ ಸಮಗ್ರ ಚಿತ್ರಣ ಮನೋ ಪರದೆಯ ಮೇಲೆ ಮೂಡಿ ಆರ್ಧವಾಗಿಸಿತು. ಜೊತೆಗೆ ಬೈಬಲ್ಲಿನ ಹಳೆ ಮತ್ತು ಹೊಸ ಒಡಂಬಡಿಕೆಗಳು ಮನದಲ್ಲಿ ಮೂಡಿ ಎಸುವಿನ ಸಮಗ್ರ ಜೀವನದ ಪರಿಚಯವಾಯಿತು. ಕವಿ ಗುಲ್ಜಾರರ ಸಮರ್ಥ ಕವನ ಅಷ್ಟೆ ಗಟ್ಟಿ ಅನುವಾದ ನಿಮ್ಮದು. ಸಂಪದದ ಈ ಹೊಸ ರೂಪದಲ್ಲಿ ನನ್ನ ಪ್ರೊಫೈಲ್ ಮತ್ತು ಬರಹಗಳು ಸಿಗುತ್ತಿಲ್ಲ, ನನ್ನ ಬರಹಗಳು ಯಾವುವೂ ಇಲ್ಲ ಎಂದು ತೋರಿಸುತ್ತದೆ. ತೊಂದರೆ ಅರ್ಥವಾಗುತ್ತಿಲ್ಲ. ಬಹಳ ದಿನಗಳ ನಂತತರ ಬಂದರೂ ಸಮರ್ಥ ಅನುವಾದದ ಮೂಲಕ ಮರಳಿದ್ದಿರಿ ದನ್ಯವಾದಗಳು.

ಹಿರಿಯರಾದ ಹನುಮಂತ ಪಾಟೀಲ ಸರ್, ತಮ್ಮ ಎಂದಿನ ಸ್ಫೂರ್ತಿದಾಯಕ ಪ್ರೋತ್ಸಾಹಕ್ಕೆ ಋಣಿ ಸರ್. ಸಂಪದದ ಹೊಸ ರೂಪದಲ್ಲಿ ಪ್ರೋಫೈಲ್ ಗಳು ಸಿಗುತ್ತಿಲ್ಲವೆಂದು ತಿಳಿಸಿದ್ದೀರಿ. ಸಂಪದದ ಸಂಪರ್ಕಕ್ಕೆ ತಾವು ಮೇಲ್ ಮಾಡಿ ತಮ್ಮ ಅಹವಾಲು ತಿಳಿಸಿದಲ್ಲಿ ಬಹುಶ: ಅವರಿಂದ ಮತ್ತೊಮ್ಮೆ ಅವುಗಳು ಸಿಗುವ ವಿಳಾಸ ಅವರು ತಿಳಿಸುವರೇನೋ ಸರ್. ಇಂಥ ವಿಷಯಗಳಲ್ಲಿ ನನಗೂ ಅಷ್ಟೊಂದು ಅರ್ಥವಾಗದು ವಿಚಾರವಿದು, ವಂದನೆಗಳು ಸರ್.

Submitted by swara kamath Tue, 12/29/2015 - 13:13

ಪ್ರಿಯ ಇಟ್ನಾಳರಿಗೆ ನಮಸ್ಕಾರಗಳು.
ಪಾಟೀಲರು ಬರೆದ ಹಾಗೆ ತಮ್ಮ ಸಾಂದರ್ಭಿಕ ಅನುವಾದ ಕವನ ಮನಮುಟ್ಟುವಂತದ್ದು ಹಾಗೂ ಓದುತ್ತಿದ್ದಂತೆ ದೃಶ್ಯಗಳ ಸರಮಾಲೆ ಕಣ್ಮುಂದೆ ಓಡುತ್ತಿರುತ್ತದೆ.
ಪಾಟೀಲರು ಬಹುಷಃ ಲಾಗ್ಇನ್ ಆಗುವಾಗ ' ನಾನು ರೋಬಟ್ ಅಲ್ಲ ' ಅನ್ನುವ ಸ್ಥಳದ ಬಾಕ್ಸನಲ್ಲಿ ರೈಟ್ ಮಾರ್ಕ ಹಾಕಿಲ್ಲ ಎಂದು ಕಾಣುತ್ತದೆ.

ಪ್ರೀಯ ರಮೇಶ ಕಾಮತ್ ಜಿ, ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯ ಸರ್, ಗುಲ್ಜಾರರಂತಹ ದೊಡ್ಡ ಕವಿವರ್ಯರನ್ನು ನಿಲುಕುವುದು ಅಸಾಧ್ಯವೇ ಅನಿಸುತ್ತದೆ. ಅದರೂ ಅವರ ಸಾಹಿತ್ಯದ ಪ್ರೇಮಿಯಾಗಿ, ಅವರ ನಜ್ಮ, ಗಝಲುಗಳ ಅನುವಾದಗಳನ್ನು ಪ್ರಯತ್ನಿಸುತ್ತಿರುತ್ತೇನೆ. ತಮ್ಮ ಎಂದಿನ ಪ್ರೋತ್ಸಾಹಕ್ಕೆ ವಂದನೆಗಳು ಸರ್.

Submitted by Huddar Shriniv… Tue, 12/29/2015 - 16:14

ಆತ್ಮೀಯ ಇಟ್ನಾಳರವರೇ, ಇದು ಅನುವಾದಿತ ಕವನ ಎನ್ನದಷ್ಟು ನವಿರಾಗಿ ಬಂದಿದೆ. ನಾನು ಮೂಲ ಕವನ ಓದಿಲ್ಲ, ಆದರೂ ಖಂಡಿತಾ ಈ ಮಾತು ಹೇಳಬಯಸುತ್ತೇನೆ.

ಪ್ರೀಯ ಹುದ್ದಾರರವರೇ, ತಮ್ಮ ಮೆಚ್ಚುಗೆಗೆ ವಂದನೆಗಳು ಸರ್, ಈ ಅನುವಾದ ನನ್ನ ಪ್ರಯತ್ವವಷ್ಟೆ ಎಂದೇ ಬಗೆದವನು ನಾನು ಸರ್. ತಮ್ಮ ಮೆಚ್ಚುಗೆ ನನ್ನನ್ನು ಇನ್ನೊಂದು ಹಂತಕ್ಕೆ ಒಯ್ದಂತಾಯಿತು.

ಪ್ರಿಯ ಶ್ರೀನಿವಾಸ ಜಿ, ಬಹುಮೂಲ್ಯ ವಿಮರ್ಶಕರು ನೀವು ನನಗೆ. ನಿಮ್ಮ ಅನಿಸಿಕೆ ಪಟ್ಟ ಪ್ರಯತ್ನಕ್ಕೆ, ಒಂದೇನೋ ನೆಮ್ಮದಿ ನೀಡುತ್ತದೆ ಮನಕ್ಕೆ,. ಏಕೆಂದರೆ ಅನುವಾದ ಸಾಕಷ್ಟು ಸಮಯ ತೆಗೆದುಕೊಳ್ಳುವ, ಬೇರೆ ಭಾಷೆಯ ಆಳಕ್ಕೆ ಇಳಿದು, ಮಾತೃಭಾಷೆಯ ಆತ್ಮದ ಭಾಷೆಗೆ ಸಂವಾದಿಸುತ್ತ ಬರೆಯುವುದು ಅಷ್ಟು ಸುಲಭವಲ್ಲವೆಂಬುದು ಬಹುತೇಕರಿಗೆ ಗೊತ್ತು. ಅದನ್ನು ಗುರುತಿಸಿ ತಾವು ಹೇಳಿದ್ದೀರಿ ಅಂತಾ ಭಾವಿಸುವೆ. ಏಕೆಂದರೆ ತಮ್ಮ ಲೇಖನಗಳನ್ನು, ಅಭಿಪ್ರಾಯಗಳನ್ನು ಗಮನಿಸಿದಾಗ ಸುಖಾ ಸುಮ್ಮನೆ ಅಭಿಪ್ರಾಯಗಳನ್ನು ಸ್ವಭಾವತ: ಹೇಳುವವರಲ್ಲ, ಹೀಗಾಗಿ ತಮ್ಮ ವಿಮರ್ಶೆಗೆ ತೂಕ ಹೆಚ್ಚು. ಇನ್ನಷ್ಟು ಬರೆಯಲು ಪ್ರೇರಣೆ ನೀಡುತ್ತದೆ. ವಂದನೆಗಳು ಸರ್....