ಸಾಮಾಜಿಕ‌ ಮೌಲ್ಯಗಳ‌ ಬಗ್ಗೆ ಒಂದು ಅಭಿಪ್ರಾಯ‌

ಸಾಮಾಜಿಕ‌ ಮೌಲ್ಯಗಳ‌ ಬಗ್ಗೆ ಒಂದು ಅಭಿಪ್ರಾಯ‌

ಪ್ರಸಿದ್ಧ ಬರಹಗಾರ ಶ್ರೀ ಎಸ್.ಎಲ್.ಭೈರಪ್ಪನವರ ಕವಲು ಕಾದಂಬರಿಯ ಒಂದು ವಾಕ್ಯ 'ಓದಿದ ಗಂಡಸರೆಲ್ಲಾ ಹೆಂಗಸರಾಗುತ್ತಾರೆ. ಓದಿದ ಹೆಂಗಸರೆಲ್ಲ ಗಂಡಸರಾಗುತ್ತಾರೆ' ಸ್ವಲ್ಪ ಮಟ್ಟಿಗೆ ನಿಜವೆನಿಸುತ್ತದೆ. ಅಲ್ಲಿ ಲಿಂಗರೂಪಿ ಬದಲಾವಣೆಗಳಾಗುವುದಿಲ್ಲವಾದರೂ, ವ್ಯಕ್ತಿಯ ನಡಾವಣೆಗಳಲ್ಲಿ ವ್ಯತ್ಯಾಸ ಕಾಣಬಹುದು. ಆ ಕಾದಂಬರಿಯಲ್ಲಿ ಬರುವ ಕೆಲವೊಂದು ಪಾತ್ರಗಳು, ಸನ್ನಿವೇಶಗಳು, ನಡತೆಗಳು ಅಥವಾ ಕೆಲವೊಂದು ಘಟನೆಗಳು ನಮ್ಮೆಲ್ಲರಲ್ಲಿ ಸ್ವಲ್ಪ ಮಟ್ಟಿಗಾದರೂ ಘಟಿಸಿರುವಂತವೇ ಆಗಿವೆ. ಅದರ ತೀವ್ರತೆ ಮಾತ್ರ ವ್ಯಕ್ತಿಯಿಂದ ವ್ಯಕ್ತಿಗೆ ಅವರವರ ಭಾವ ಮತ್ತು ಗುಣ ನಡತೆಗನುಗುಣವಾಗಿ ವ್ಯತ್ಯಾಸವಿರಬಹುದು. ಉದಾಹರಣೆಗಾಗಿ ನಾನು ಇತ್ತೀಚೆಗೆ ಉದಯವಾಣಿ ದಿನಪತ್ರಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಹೂಡಿರುವ ವ್ಯಾಜ್ಯದ ಬಗ್ಗೆ ವಾದಿಗಳ ಪರ ನ್ಯಾಯವಾದಿಗಳ ಪ್ರಕಟಣೆ ಓದಿದ್ದೆ. ವಾದಿ ಪ್ರತಿವಾದಿಗಳಿಬ್ಬರೂ ಗಂಡ ಹೆಂಡತಿಯರಾಗಿದ್ದು ಕಾನೂನು ಬದ್ಧ ವಿಚ್ಛೇದನವೂ ಆಗಿರುತ್ತದೆ. ಆದರೆ ಆ ಪತಿರಾಯ ವಿಚ್ಛೇದನದ ನಂತರವೂ ತನ್ನ ವಿಚ್ಛೇದಿತ ಪತ್ನಿಯೂ ಮುಂದೆ ಮರುವಿವಾಹವಾಗಕೂಡದೆಂದು ಮತ್ತೆ ವ್ಯಾಜ್ಯ ಹೂಡುತ್ತಾನೆ. ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ಯಾಕೆ ಆ 'ಪತಿ' ವಿಚ್ಛೇದನದ ನಂತರವೂ ಆಕೆಯ ಮೇಲೆ ಮರುಮದುವೆಯಾಗಕೂಡದೆಂದು ಮತ್ತೆ ವ್ಯಾಜ್ಯ ಹೂಡಿದ್ದಾನೆ? ಈ ಸಂದರ್ಭದಲ್ಲಿ ನನ್ನ ಬುದ್ಧಿಗೆ ಹೊಳೆದದ್ದು ಎರಡೇ ಕಾರಣಗಳು. ಒಂದು ಆತ ನಿಜಕ್ಕೂ ಆಕೆಯನ್ನು ಅತಿಯಾಗಿ ಪ್ರೀತಿಸುತ್ತಿರಬಹುದು ಅಥವಾ ಆಕೆಯಿಂದ ಸಾಕಷ್ಟು ಕಷ್ಟ, ನಷ್ಟ, ನೋವು ಅನುಭವಿಸಿರಬಹುದು ಮತ್ತು ಆ ನೋವಿಗೋಸ್ಕರ ಪ್ರತೀಕಾರದ ರೂಪದಲ್ಲಿ ಈ ವ್ಯಾಜ್ಯ ಬಂದಿರಬಹುದು. ಅದೇನೇ ಇರಲಿ. ಏಸ್.ಎಲ್.ಭೈರಪ್ಪನವರು ನಿಜಕ್ಕೂ ಓರ್ವ ಮಹಾನ್ ಬರಹಗಾರರು, ದಾರ್ಶನಿಕರು ಅನ್ನುವ ಮಾತು ಒಪ್ಪಲೇಬೇಕು. ಟೀಕಾಕಾರರು ಏನೇ ಹೇಳಿದರೂ ವಾಸ್ತವದ ನೆರಳನ್ನು ಅಳಿಸುವುದು ಅಷ್ಟೊಂದು ಸುಲಭವಲ್ಲ.

ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ, ನಾತಿಚರಾಮಿ ಎಂದು ಸದಾ ನಿನ್ನ ಜೊತೆಗಿದ್ದು ನಿನ್ನನ್ನು ಅನುಸರಿಸಿಕೊಂಡಿರುತ್ತೇನೆಂದು ಹೇಳಿ ಮಂತ್ರಘೋಷಗಳ ನಡುವೆ, ವಾದ್ಯ ಘೋಷಗಳ ಜೊತೆಯಲ್ಲಿ, ಅಗ್ನಿಸಾಕ್ಷಿಯಾಗಿ ೭ ಹೆಜ್ಜೆ ತನ್ನೊಂದಿಗೆ ನಡೆದಾಗ ನಿಜಕ್ಕೂ ಆ 'ಪತಿರಾಯ' ಆ ಕ್ಷಣದಲ್ಲಿ ತಾನು ನಿಜಕ್ಕೂ ಧನ್ಯ ಎಂದು ಸುಂದರ ಕಲ್ಪನೆಗಳಲ್ಲಿ ತೊಡಗುತ್ತಾನೆ. ಅದರ ಮುಂದಿನ ವಾಸ್ತವ, ಕೆಲವರಿಗೆ ಹಲವು ತಿಂಗಳ ನಂತರ, ಕೆಲವರಿಗೆ ಮರುದಿನವೇ ಅರಿವಾಗಬಹುದು. ಅದಕ್ಕೆ ಕಾಲನಿಯಮವಿಲ್ಲ.

ಸಮೀಕ್ಷೆಯ ಪ್ರಕಾರ ಅತೀ ಹೆಚ್ಚು ವಿಚ್ಛೇದನಗಳು, ಅಪ್ರಾಪ್ತ ವಯಸ್ಸಿನಲ್ಲೇ ಲೈಂಗಿಕ ಕಾರ್ಯದಲ್ಲಿ ತೊಡಗುವವರ ಸಂಖ್ಯೆ ಪಾಶ್ಚತ್ಯ ದೇಶಗಳಲ್ಲೇ ಹೆಚ್ಚು. ವಿವಾಹ ಪೂರ್ವದಲ್ಲಿ ಮಗುವನ್ನು ಹೆತ್ತು ಸಿಂಗಲ್ ಪೇರೆಂಟ್ ಆಗಿದ್ದು, ನಂತರ ವಿವಾಹವಾಗಿ, ಅದರಲ್ಲೂ ಮಕ್ಕಳಾಗಿ, ಮತ್ತೆ ವಿಚ್ಛೇದನವಾಗಿ ಮತ್ತೆ ಮದುವೆಯಾದ ಉದಾಹರಣೆಗಳು ಅದೆಷ್ಟೋ ಇವೆ. ಆದರೆ ಇವೆಲ್ಲಾ 'ವಿವಾಹ ವಿಚ್ಛೇದನ'ಗಳಲ್ಲಿ ಪಾಶ್ಚತ್ಯದೇಶಗಳ ಕಾನೂನಿನ ಪ್ರಕಾರ ಒಂದು ವೇಳೆ ೨ ಮಕ್ಕಳ ತಾಯಿ ವಿಚ್ಛೇದನ ಪಡೆಯಲು ಬಯಸಿ ವ್ಯಾಜ್ಯ ಹೂಡಿದಲ್ಲಿ ಪತಿಯ ಮುಕ್ಕಾಲು ಭಾಗ ಆದಾಯ ಪತ್ನಿಗೆ ಕೊಡಬೇಕಾಗುತ್ತದೆ. ಆಕೆ ಅಷ್ಟಕ್ಕೇ ಸುಮ್ಮನಾಗುವುದಿಲ್ಲ. ಮಾಸಿಕ ಜೀವನ ನಿರ್ವಹಣಾ ವೆಚ್ಚವನ್ನು ವಿಚ್ಛೇದಿತ ಪತಿಯಿಂದ ಪಡಕೊಳ್ಳುತ್ತಾ ಆಕೆ ಇನ್ನೊಬ್ಬನೊಡನೆ 'ಲಿವ್ ಇನ್' ಶುರು ಮಾಡುತ್ತಾಳೆ. ಆದರೆ ಮಾನಸಿಕವಾಗಿ, ಆರ್ಥಿಕವಾಗಿ ನೋವುಂಡ ಈ ವಿಚ್ಛೇದಿತ ಪತಿ ಮುಂದೆ ಯಾವ 'ಲೈಫ್' ನಡೆಸಬಹುದು ? ನೀವೇ ಯೋಚಿಸಿ. ಈ ರೀತಿಯ ಪ್ರಕ್ರಿಯೆಗಳು ಹೆಚ್ಚುತ್ತಿರುವುದನ್ನು ಕಂಡ ಅಲ್ಲಿಯ ಸರಕಾರ ಮುಂದೆ ಅಲ್ಲಿ ವಿವಾಹಪೂರ್ವ ಒಪ್ಪಂದಗಳನ್ನು ಮಾಡಿಕೊಳ್ಳುವಂತೆ ಸೂಚಿಸಿತ್ತು. ಒಂದು ವೇಳೆ ವಿಚ್ಛೇದನವಾದಲ್ಲಿ ತಾನೆಷ್ಟು ಕೊಡಬೇಕು? ಮಕ್ಕಳಾದರೆ ಅವರ ಜವಾಬ್ದಾರಿ? ಎಲ್ಲವನ್ನೂ ಮೊದಲೇ ಒಪ್ಪಂದ ಮಾಡಿಕೊಂಡ ನಂತರ ಮದುವೆಯಾಗುತ್ತಾರೆ. ಕೆನಡಾದ ಅಂಟಾರಿಯೋ ರಾಜ್ಯದಲ್ಲಿ ವಿವಾಹ ಪೂರ್ವ ಅಗ್ರಿಮೆಂಟ್ ಇಲ್ಲದಿದ್ದಲ್ಲಿ ಮದುವೆಯನ್ನು ರಿಜಿಸ್ಟರ್ ಮಾಡಿಕೊಳ್ಳುವುದಿಲ್ಲ.

'ಹಾಫ್ ನೋಲೆಡ್ಜ್ ಡೇಂಜರಸ್' ಎನ್ನುವಂತೆ, ನನಗೇಕೋ ಈ ಅರ್ಧಂಬರ್ಧ ಆಧುನಿಕತೆ ತುಂಬಾ ಅಪಾಯಕಾರಿ ಅನ್ನಿಸ್ತಿದೆ. ಪಾಶ್ಚತ್ಯ ದೇಶಗಳ್ಳ ಅನುಕರಣೆಯಲ್ಲಿ ನಾವು ಎತ್ತ ಸಾಗುತ್ತಿದ್ದೇವೆ? ಯುಗಗಳು ಕಳೆದಂತೆ, ಕಾಲಾಂತರದಲ್ಲಿ ಧರ್ಮ, ಆಚರಣೆಯಲ್ಲಿ ಬದಲಾವಣೆಯಾಗುತ್ತದೆ. ತ್ರೇತಾಯುಗದಲ್ಲಿ ಶ್ರೀರಾಮಚಂದ್ರನ ಸೀತಾ ಪರಿತ್ಯಾಗ, ಕೃತಾಯುಗದಲ್ಲಿ ಸತ್ಯಹರಿಶ್ಚಂದ್ರನು ಸತ್ಯಪಾಲನೆಗಾಗಿ ತನ್ನ ಹೆಂಡತಿಯನ್ನು ಮಾರಿದ್ದು, ದ್ವಾಪರಯುಗದಲ್ಲಿ ಧರ್ಮರಾಯ ಜೂಜಾಟದಲ್ಲಿ ತನ್ನ ಪತ್ನಿಯನ್ನೇ ಒತ್ತೆ ಇಟ್ಟಿದ್ದು ಇದೆಲ್ಲಾ ನಮಗೆ ಈಗ ಈ ಯುಗದಲ್ಲಿ ಸರಿ ಅನಿಸುವುದಿಲ್ಲ.

ಹಿಂದಿನ ಕಾಲದಲ್ಲಿ ಮಹಿಳೆ ಮನೆಯೊಳಗೆ ಗೃಹಕೃತ್ಯಗಳಿಗೆ ಸೀಮಿತವಾಗಿದ್ದಳು. ಕೂಡು ಕುಟುಂಬ, ಮನೆಯಲ್ಲಿ ಹತ್ತಾರು ಜನ, ಅಣ್ಣ-ತಮ್ಮ, ಅಕ್ಕ-ತಂಗಿ, ನಾದಿನಿಯರು, ಎಲ್ಲರಲ್ಲೂ ಸಾಮರಸ್ಯವಿರುತ್ತಿತ್ತು. ಯಾರ ಆತ್ಮಾಭಿಮಾನಕ್ಕೂ ಧಕ್ಕೆಯಾಗುತ್ತಿರಲಿಲ್ಲ. ಯಾಕೆಂದರೆ ಅಲ್ಲಿ ಮಾತನಾಡುವವರು ಒಬ್ಬರೇ. ಮನೆಯ ಹಿರಿಯ ಯಜಮಾನನ ಮಾತಿಗೆ ಎಲ್ಲರೂ ತಲೆಬಾಗಲೇ ಬೇಕು. ಅಲ್ಲಿ ತಮ್ಮ ನಿರ್ಣಯ, ವಿಚ್ಛೇದನ ಇಂಥ ಮಾತಿಗೆ ಆಸ್ಪದವೇ ಇಲ್ಲ.

ಈಗ ಹಾಗಲ್ಲ. ಕಾಲ ಬದಲಾಗಿದೆ. ಎಲ್ಲವೂ 'ಗ್ಲೋಬಲೈಸೇಶನ್'. ಮಹಿಳೆಯೂ ಉನ್ನತ ವ್ಯಾಸಂಗ ಹಾಗೂ ಉದ್ಯೋಗ ಮಾಡುತ್ತಾಳೆ. ವಿದೇಶಗಳಿಗೆ ಹೋಗುತ್ತಾಳೆ. ಸ್ವಂತ ನಿರ್ಧಾರ-ನಿರ್ದೇಶನಗಳನ್ನೂ ನೀಡುತ್ತಾಳೆ. ಪತಿಯಾದವನೂ ಕೂಡ ದುಡಿಯುವ ಮಹಿಳೆ ಎಂಬ ಭಾವದಿಂದ ಆಕೆಯ ಕೆಲಸಗಳಲ್ಲಿ, ಭಾವನೆಗಳಲ್ಲಿ ಭಾಗಿಯಾಗಲು ಪ್ರಯತ್ನಿಸುತ್ತಾನೆ. ಪ್ರಯತ್ನಿಸಲೇ ಬೇಕು. ಆದರೆ ಅದು ಅಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ಸ್ವಾತಂತ್ರ್ಯ, ರಿಲ್ಯಾಕ್ಸ್, ಉದ್ಯೋಗ ನೆಪದಿಂದ ಬೇರೆ ಮನೆ, ಪ್ರತ್ಯೇಕ ವಾಸ, ನಂತರ ಮುಂದಿನದೆಲ್ಲಾ ನಾಟಕೀಯ ಬೆಳವಣಿಗೆಗಳು. ತಾನು, ತನ್ನ ಮಕ್ಕಳು, ತನ್ನ ಹಣ, ತನ್ನ ಸ್ವಾತಂತ್ರ್ಯ, ತನ್ನ ಸಂತೋಷ ಇಷ್ಟೇ. ಪತಿಗೆ ಹೆಚ್ಚುತ್ತಾ ಹೋಗುವ ಒತ್ತಡ, ಕಛೇರಿ ಕೆಲಸ, ಹಣಕಾಸಿನ ಚಿಂತೆ. ಅದರ ಮೇಲೆ ಮನೆಗೆ ಬಂದ ನಂತರವೂ ಹೆಚ್ಚಾಗುವ ಒತ್ತಡ, ಹೊಂದಾಣಿಕೆಯಿಲ್ಲದ ಜೀವನ, ಹಟ, ಪ್ರತಿಷ್ಠೆ, ಸ್ವಾಭಿಮಾನ, ವೃಥಾ ಕಲಹ. ಇದು ಕೇವಲ ಉದ್ಯೋಗಸ್ಥ ಕುಟುಂಬಕ್ಕೆ ಮಾತ್ರವಲ್ಲ. ಕೃಷಿಕ ಕುಟುಂಬಸ್ಥರಲ್ಲೂ ಕಾಣಬಹುದು. ಇಂಥಾ ಪರಿಸ್ಥಿತಿಯನ್ನು ತೀರಾ ನಿಭಾಯಿಸುವುದು ಕಷ್ಟವಾದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ವಿಚ್ಛೇದನದ ಪ್ರಕ್ರಿಯೆಗಳು ಆರಂಭವಾಗುತ್ತದೆ.

ಆಧುನಿಕತೆಯ ಅನುಕರಣೆಯ ಜೊತೆಗೆ ಪರಿವರ್ತನೆ ಬೇಕು. ಆದರೆ ಎಷ್ಟರಮಟ್ಟಿಗೆ? ಧನಾತ್ಮಕ ಬದಲಾವಣೆ ಒಳ್ಳೆಯದು. ಆದರೆ ಗಂಡ ಹೆಂಡಿರಲ್ಲಿ ಅದನ್ನು ನಿರ್ಧರಿಸುವವರು ಯಾರು? ಈ ವಿಷಯಕ್ಕೇ ನನಗೆ ಎಸ್.ಎಲ್.ಭೈರಪ್ಪನವರ 'ಕವಲು' ಕಾದಂಬರಿ ಇಷ್ಟವಾಗಿರೋದು. ಯಾಕೆ ಇಂಥದೇ ವಿಷಯಗಳು, ಪಾತ್ರಗಳು, ಸನ್ನಿವೇಶಗಳ ಬಗ್ಗೆ ಹತ್ತು ಹದಿನೈದು ವರ್ಷಗಳ ಹಿಂದೆ ಯಾರೂ ಬರೆದಿಲ್ಲ? ಅದಕ್ಕೆ ಉತ್ತರ 'ವಾಸ್ತವ' ಅನ್ನುವ ಪದ. ಹಾಗಾದರೆ ಒಬ್ಬ ಕಥೆಗಾರನ ಕಲ್ಪನೆಗೂ ನಿಲುಕದ್ದು ನಮ್ಮ ಸಮಾಜದಲ್ಲಿ ಆಗುತ್ತಿದೆಯೇ ? ಅಷ್ಟೊಂದು ವೇಗದ ಬದಲಾವಣೆಯೇ? ವಾಸ್ತವ ಅಷ್ಟೊಂದು ಕಹಿಯೇ? ಯೋಚಿಸಬೇಕಾದ ವಿಷಯ.

ತಾಳಿ, ಕಾಲುಂಗುರ ದಾಸ್ಯದ ಸಂಕೇತ, ಸ್ತ್ರೀ ವಿಮೋಚನೆ, ಸಮಾನತೆ, ಸಮಾಜ ಸುಧಾರಣೆ ಅನ್ನುತ್ತಾ ತಿರುಗುವ ಈಗಿನ ಮಹಿಳಾ ವಿಚಾರವಾದಿಗಳ ಖಾಸಗೀ ಜೀವನ 'ಕವಲು' ಕಾದಂಬರಿಯ ಪಾತ್ರಗಳಿಂದೇನೂ ಭಿನ್ನವಾಗಿಲ್ಲ. ಕಾಲ ಬದಲಾಗಿದೆ. ಪತಿ 'ದೇವ' ಬೇಡ. ದಿನಾ ಕಾಲಿಗೆರಗಿ ನಮಸ್ಕಾರ ಮಾಡಬೇಕಿಲ್ಲ. ಯಾವ ಪತಿಯೂ ಅಷ್ಟೊಂದು ಹಿಂದಿನ ಆಚರಣೆಗಳನ್ನು ಬಯಸುವುದಿಲ್ಲ. ಬದಲಾಗಿ ಗುರು ಹಿರಿಯರನ್ನು ಗೌರವದಿಂದ ಕಂಡು, ಕೆಲವೊಂದು ಆಚರಣೆ, ಸಂಪ್ರದಾಯಗಳನ್ನು ಪಾಲಿಸಿಕೊಂಡು, ವೃಥಾ ಕಲಹ ಮಾಡದೇ 'ಕೇಳುವ' ತಾಳ್ಮೆ ಇಬ್ಬರಲ್ಲೂ ಇದ್ದರೆ ಬಾಳೆಷ್ಟು ಸುಂದರ?