ಪುಟಾಣಿಗಳ ಪುಸ್ತಕ ಮಾಲೆ : ಭಾಗವತದ ಕಥೆಗಳು ಪುಸ್ತಕ‌ ವಿಮರ್ಶೆ

ಪುಟಾಣಿಗಳ ಪುಸ್ತಕ ಮಾಲೆ : ಭಾಗವತದ ಕಥೆಗಳು ಪುಸ್ತಕ‌ ವಿಮರ್ಶೆ

ಚಿತ್ರ

 
ಪುಸ್ತಕ: ಭಾಗವತದ ಕಥೆಗಳು
ಲೇಖಕರು : ಶಂಕರಾನಂದ
ಪ್ರಕಾಶಕರು : ವಸಂತ ಪ್ರಕಾಶನ
 
   ನಾನು ಮುದ್ದೇಶನ ಮನೆಯ ಅಡಿಗೆ ಮನೆಯ ಅಟ್ಟದ ಮೇಲೆ ವಾಸಿಸುತ್ತಿರುವ ಇಲಿ ಮರಿ. ನನ್ನ ಹೆಸರು "ಇದೊಂದು". ಈ ಹೆಸರನ್ನು ಮುದ್ದೇಶನೇ ನನಗೆ ಕೊಟ್ಟಿರಬೇಕು. ನಾನು ಕಾಣಿಸಿದ ಕೂಡಲೆ ಮನೆಯೆಲ್ಲ ಎಲ್ಲರೂ "ಇದೊಂದು ಮತ್ತೆ ಬಂತು, ಇದೊಂದು ಎಲ್ಲಿರತ್ತೋ ಗೊತ್ತಾಗೋದೇ ಇಲ್ಲ. ಇದೊಂದು, ಅಡಿಗೆ ಮನೆ ಮಾನೆಲ್ಲ ತಿಂದುಬಿಡುತ್ತೆ" ಅಂದೂ ಅಂದೂ, "ಇದೊಂದು" ನನ್ನ ಹೆಸರೇ ಇರಬೇಕು ಅಂದುಕೊಂಡಿದ್ದೇನೆ. ಮುದ್ದೇಶನ ತಂದೆ ದೇವಸ್ಥಾನದ ಪುರೋಹಿತರು. ಆಗಾಗ ಮನೆಯಲ್ಲೂ "ಶೌನಕಾದಿ ಮುನಿಗಳು ಹೇಳಿದರೆಂದು, ಸೂತಪುರಾಣಿಕರು ಹೇಳಿದರೆಂದು, ನಾರದ ಮುನಿಗಳು ಹೇಳಿದರೆಂದು, ಧರ್ಮರಯಾನು ಹೇಳಿದನೆಂದು" ಅಂತ ಒಂದಷ್ಟು ಹೆಸರುಗಳನ್ನು ಕೇಳಿ ಕೇಳಿ, ಕೊನೆಗೆ ಯಾರು ಯಾರಿಗೆ ಹೇಳಿದರು ಎನ್ನುವುದೇ ಮರೆತುಹೋಗುತ್ತಿತ್ತು. ಅದಕ್ಕೆ ಅವರು ಓದಲು ಶುರು ಮಾಡಿದೊಡನೆ ಓಡಿ ಹೋಗಿ ಅಡಗಿಕೊಳ್ಳುತ್ತಿದ್ದೆ. 
 
   ಮುದ್ದೇಶನಿಗೆ ಒಂದು ದಿನ ಶಾಲೆಯಲ್ಲಿ ಪುಸ್ತಕ ಬಹುಮಾನವಾಗಿ ಸಿಕ್ಕಿತು. ಅದೇ ಶಂಕರಾನಂದರು ಪುಟಾಣಿಗಳಿಗೆ ಬರೆದಿರುವ "ಭಾಗವತದ ಕಥೆಗಳು" ಪುಸ್ತಕ. ನನ್ನಂತಹ ಮಕ್ಕಳಿಗೆ ಸರಳವಾಗಿ ಸಹಜ ರೀತಿಯಲ್ಲಿ ನಮ್ಮ ಪುರಾಣಗಳ ನೀತಿ ಕಥೆಗಳನ್ನು ಚಿಕ್ಕದಾಗಿ ಚೊಕ್ಕದಾಗಿ ಪ್ರೀತಿಯಿಂದ ಹೇಳುವ ಪ್ರಯತ್ನ. ನನಗಂತು ಅರ್ಥವಾಗುವ ಹಾಗೆ ಹೇಳಿದರೆ, ಕಥೆಗಳು ಅಂದರೆ ಪಂಚಪ್ರಾಣ. ಅಡಿಗೆ ಮನೆಯಲ್ಲಿ ರಾಗಿ ಮೂಟೆಗೆ ತೂತು ಮಾಡಿ ಕದ್ದು ತಿಂದು ಓಡಿಹೊಗುವಾಗಲೂ, ಯಾರೋ ಹೇಳುತ್ತಿರುವ ಕಥೆ ಕಿವಿಗೆ ಬಿದ್ದರೆ ಅಲ್ಲೇ ನಿಂತು ಕೇಳುತ್ತಾ ಎಷ್ಟೋ ಬಾರಿ ಪೊರಕೆ ಏಟು ತಪ್ಪಿಸಿಕೊಂಡು ಓಡಿರುವೆ. ಹೀಗಿರುವಾಗ ಮಹಾ ವಿಷ್ಣುವಿನ ಅವತಾರಗಳು, ಜಯ-ವಿಜಯರ ಕಥೆ ಎಲ್ಲ ಮುದ್ದಾಗಿ ಕೇಳಿ ಕಲ್ಪನಾ ಲೋಕದಲ್ಲೇ ತೇಲುವಂತಾದೆ. ಭಕ್ತರಾದ ಸತ್ಯಹರಿಶ್ಚಂದ್ರ, ಭಕ್ತ ಅಂಬರೀಷ, ಪುರೂರವರ ದೈವ ಭಕ್ತಿ ತಿಳಿಸುವ ಕಥೆಗಳೊಂದು ಕಡೆಯಾದರೆ, ವೃತಾಸುರ, ತ್ರಿಪುರಾಸುರ ಎಂಬ ರಾಕ್ಷಸರ ಅಟ್ಟಹಾಸ ತಿಳಿಸಿ ಕೊನೆಗೆ ಹೇಗೆ ಧರ್ಮ ಗೆಲ್ಲುವುದೆಂದು ತೋರಿಸುವ ರಕ್ಕಸ ವಧೆ ಕಥೆಗಳು ತುಂಬಾ ಇಷ್ಟ ನನಗೆ. ಮಾಂಧಾತು ರಾಜನ ಕಥೆಯಾ ಜೊತೆ ನಿಮಿ ಮಹಾರಾಜ ಹಾಗು ಯಯಾತಿ ಎಂಬ ಇತಿಹಾಸದ ರಾಜರ ಪರಿಚಯ ಆಗಿ ಕನಸಿನಲ್ಲೂ ನಾನು ಇವರ ಆಸ್ಥಾನದಲ್ಲಿರುವಂತೆ ಅದೇ ಕಥೆಯನ್ನು ಕಾಣುವೆ.  ಗಜೇಂದ್ರ ಮೋಕ್ಷ, ಸಮುದ್ರ ಮಂಥನ ಇಂತಹ ಸನ್ನಿವೇಶಗಳು ನಾಟ್ಯ ಮಾಡುವಂತೆ ಮಾಡುತ್ತೆ. ಒಟ್ಟಿನಲ್ಲಿ ಈ ಪುಸ್ತಕ ಮುದ್ದೇಶ ಓದುತ್ತಾ ಕುಳಿತರೆ, ಆಹಾ ಕೇಳುತ್ತಿದ್ದರೆ ಹಬ್ಬವೇ ಸರಿ. 
 
   ಪುಸ್ತಕ ಮನೆಗೆ ಬಂದಾಗಿಂದ ಈ ಕಥೆಗಳು ಕೇಳಿ ನಾನು ಇತರ ಇಲಿ ಸ್ನೇಹಿತರೊಂದಿಗೆ ಇದನ್ನು  ನಾಟಕ ರೂಪದಲ್ಲಿ ಮಾತನಾಡುತ್ತಾ ಆಟ ಆಡುತ್ತೇವೆ. '"ಇದೊಂದು" ಇನ್ನೊಂದು ಡ್ರಾಮಾ ಹೇಳಿಕೊಡೋ' ಅಂತ ನನ್ನ ಗೆಳೆಯರು ಗೋಳುಹೊಯ್ಕೊಳ್ಳುತ್ತಾರೆ. ನನ್ನ ತಾಯಿ ಅಂತು ಪದ್ಯಗಳೇ ಕಟ್ಟಿಬಿಡುತ್ತಾರೆ ಒಂದು ಕಥೆ ಹೇಳಿದ ಕೂಡಲೆ.  ಅಪ್ಪ ಅಮ್ಮ ತಪ್ಪು ಮಾಡಿದರೆ, ಅವರಿಗೆ ಈ ಕಥೆಗಳು ನೀತಿ ಪಾಠ ಹೇಳಲೂ ಸಹಯವಾಗುತ್ತೆ. ಅಲ್ಲದೆ ನನಗೆ ದೇಶ, ನಮ್ಮ ಚರಿತ್ರೆ, ಪುರಾಣ ಕಥೆಗಳು, ನದಿ, ಬೆಟ್ಟ, ಕಾಡು ಎಲ್ಲ ಪರಿಚಯ ಮಾಡಿತು ಈ ಪುಸ್ತಕ. ಮುಖ್ಯವಾಗಿ ಮುದ್ದೇಶನ ಅಪ್ಪ ಮತ್ತೆ "ಸೂತಪುರಾಣಿಕರು .... " ಎಂದು ಭಾಗವತದ ೧೮ ದೊಡ್ಡ ಗ್ರಂಥಗಳನ್ನು ಓದುವಾಗ, ಇಷ್ಟು ಪುಟ್ಟ ಒಳ್ಳೆ ಕಥೆಯನ್ನು ಯಾಕೆ ಇಷ್ಟು ಉದ್ದವಾಗಿ, ಕಷ್ಟವಾಗಿ, ಇಷ್ಟು ದಿನ, ಇಷ್ಟು ಸಲ ಓದಿ-ಓದಿದರೂ ಅವರಿಗೆ ಕಥೆ ಅರ್ಥವಾಗುವುದೇ ಇಲ್ಲವಲ್ಲ,  ನಮಗೂ ತಲೆ ಕೆಡಿಸುತ್ತಾರಲ್ಲ ಸುಲಭವಾಗಿ ಹೇಳದೆ, ನಮ್ಮ ಪುಟಾಣಿಗಳ ಪುಸ್ತಕವೇ ವಾಸಿ ಅನಿಸುತ್ತೆ. ಮಕ್ಕಳಿಗೆ ಹೇಗೆ ಹೇಳಬೇಕೋ ಅದು ಮಾತ್ರ ಅಲ್ಲದೆ, ಮಕ್ಕಳಿಗೆ ಕಥೆ ಹೇಗೆ ಹೇಳಬೇಕು ಎಂಬ ಪರಿಚಯವೂ ದೊಡ್ಡವರಿಗೆ ಮಾಡುತ್ತೆ ಈ ಪುಸ್ತಕ. ನೀವೂ ಓದಿ ಧನ್ಯವಾದ ಹೇಳುತ್ತೀರಲ್ಲ ಶಂಕರಾನಂದರವರಿಗೆ? "ಇದೊಂದು" ಹೇಳಿದರಿಂದ ನಿಮ್ಮ ತಲೆಯಲ್ಲಿ ಕಥೆಗಳ ಭಂಡಾರ ಹೆಚ್ಚಾಯಿತೆಂದು ನನಗೂ ಕಲ್ಲುಸಕ್ಕರೆ ತಿನ್ನಿಸುತ್ತೀರ ತಾನೇ? 
 

Rating
Average: 5 (1 vote)

Comments

ಧನ್ಯವಾದಗಳು. ಈ ವರುಷ‌ ಇನ್ನು ಜನರು ಹೆಚ್ಚು ಕನ್ನಡ‌ ಪುಸ್ತಕಗಳನ್ನು ಓದುವಂತಾದರೆ ಇದೇ ಕನ್ನಡಿಗರ‌ ದೊಡ್ಡ‌ ಹಬ್ಬ‌.

Submitted by ಗಣೇಶ Sun, 01/03/2016 - 22:15

ಭಾಗವತದ ಕತೆಗಳ ಪುಸ್ತಕದ ವಿಮರ್ಶೆ ಮಾಡಿದ ರೀತಿ ಚೆನ್ನಾಗಿದೆ.
>>>ನನ್ನ ಹೆಸರು "ಇದೊಂದು" :)
ಮುದ್ದೇಶನ ಮನೆ ಇಲಿಯೋ....; ಗಣೇಶನ ಮನೆ ಇಲಿ ಬಗ್ಗೆ- http://bit.ly/1kCEoYu ಇಲ್ಲಿ ಓದಿ :)

ಹಹಹ‌ ಬಹಳ‌ ಚೆನ್ನಾಗಿದೆ ನಿಮ್ಮ‍‍ ಇಲಿಯ‌ ಒಡನಾಟ‌ ಗಣೇಶ್ ಅವರೆ. ಇದನ್ನು ಮೊದಲೇ ಓದಿದ್ದರೆ ಮುದ್ದೇಶನ‌ ಮನೆಯ ಇಲಿಯನ್ನೂ ನಿಮ್ಮ‌ ಮನೆಗೆ ಕಳುಹಿಸಿ ಕಥೆ ರೋಪಿಸಬಹುದಿತ್ತು :) ನೀವು ಇಲಿಯ‌ ಯುದ್ಧದಲ್ಲಿ expert ಅಲ್ಲವೇ? ಇರಲಿ ಮತ್ತೊಂದು ಲೇಖನದ‌ ಬಗ್ಗೆ ಯೋಚಿಸುತ್ತಾಗ‌ ತಲೆಯಲ್ಲಿ ಇಲಿ ಬಿಟ್ಟಿದ್ದೀರ‌ :) ಧನ್ಯವಾದಗಳು.