ಹೊಸ ವರ್ಷದ ಕುದುರೆ..
ಹೊಸ ವರ್ಷದ ಹೊಸ ಕುದುರೆ
ಮೇಲೇರೋದೆ ಸರಿ ಚದುರೆ
ಬೇಕೇನದಕೆ, ಹಾಳು ಮದಿರೆ ?
ಬರಿ ಹಾರೈಸೆ ಸಾಲದೆ ದೊರೆ ? ||
ಹೊಡೆಯಲಿ ಹನ್ನೆರಡಲ್ಲಿ
ಜನಜಂಗುಳಿ ಉನ್ಮಾದದಲಿ
ಕೈ ಕುಲುಕಿ ಹೇಳಿ ವಿದಾಯ
ಅಪ್ಪುತಲೆ ಹೊಸತಿಗೆ ದಾಯ ||
ಪೇಯಗಳಲ್ಲಿ ಪಾನೀಯದಲ್ಲಿ
ಬೆರೆತಿರಲಿ ನಗೆ ಉತ್ಸಾಹದಲಿ
ಕುಪ್ಪಳಿಸಿ ಕುಣಿದು ಹಾಡುತ್ತ
ಇತಿಮಿತಿ ತುಳಿದಾಡದೆ ಸುತ್ತ ||
ದಣಿದ ನೆಲಕು ಸುಸ್ತಾಗುತ್ತ
ಹೊರಟಾಗ ವಾಹನ ಮಸ್ತ
ಇರಲೆಚ್ಚರ ಬೇಕೇಕೆ ಅಪಘಾತ ?
ಹೊಸವರ್ಷದಲೇಕೆ ಶೋಕಾಘಾತ ? ||
ಕುದುರೆ ಬಾಲೆಯಿನ್ನು ಎಳಸು
ಸಾವಧಾನ ಸವಾರಿ ಕುದುರಿಸು
ಯಾರಿಗೊ ನಾಗಲೋಟದವಕಾಶ
ನಮದಿರಲಿ ಕನಿಷ್ಠ ಸಾವಕಾಶ ||
- ನಾಗೇಶ ಮೈಸೂರು
Comments
ಉ: ಹೊಸ ವರ್ಷದ ಕುದುರೆ..
>>>ಬೇಕೇನದಕೆ, ಹಾಳು ಮದಿರೆ ?
ಬರಿ ಹಾರೈಸೆ ಸಾಲದೆ ದೊರೆ ?
- ಹಾಳು ಮದಿರೆ ಎಂದಾದರೆ ಜನ ಯಾಕೆ ಅದರ ದಾಸರಾಗುತ್ತಿದ್ದರು. ಹಳೇ ನೋವನ್ನು ಮರೆಯಲು ಸಹಾಯ ಮಾಡುವ ಮದಿರೆ, ಹೊಸ ವರ್ಷ ಸ್ವಾಗತಿಸಲು ಉತ್ತಮ ಸಂಗಾತಿ...
ಮನೆಯಲ್ಲಿರುವ ಅಜ್ಜಿ, ತಾಯಿ, ಪತ್ನಿ, ಮಗಳು ಗಾಬರಿ ಕಾತರದಿಂದ ತಮ್ಮವರು ಬರುವಾಗ ಏನೂ ತೊಂದರೆಯಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿರುವರು ಎಂಬ ಆಲೋಚನೆ ಈ ಮದಿರಾಲಿಂಗನದಲ್ಲಿರುವವರಿಗೆ ಎಲ್ಲಿ ಬರುತ್ತದೆ.
In reply to ಉ: ಹೊಸ ವರ್ಷದ ಕುದುರೆ.. by ಗಣೇಶ
ಉ: ಹೊಸ ವರ್ಷದ ಕುದುರೆ..
ಗಣೇಶ್ ಜಿ,
ಯಾವುದೆ ರೀತಿಯಲಿ ಆಚರಿಸಿಕೊಂಡರು ಕ್ಷೇಮ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡಿದ್ದರೆ ಅವರಿಗೆ ಮತ್ತು ನಂಬಿಕೊಂಡವರಿಗೆ ಇಬ್ಬರಿಗೂ ಕ್ಷೇಮ. ಆ ಕನಿಷ್ಠ ಪ್ರಜ್ಞೆಯಾದರೂ ಆಚರಿಸುವ ಎಲ್ಲರಲ್ಲಿರಲಿ ಎಂದು ಆಶಿಸೋಣ. ಪ್ರತಿಕ್ರಿಯೆಗೆ ಧನ್ಯವಾದಗಳು :-)
ಉ: ಹೊಸ ವರ್ಷದ ಕುದುರೆ..
ನಾಗೇಶ ಮೈಸೂರು ರವರಿಗೆ ವಂದನೆಗಳು
'ಹೊಸ ವರುಷದ ಕುದುರೆ' ಕವನದಲಿ ತಾವು ಜಗವನ್ನು ಅದರ ಆಚರಣೆಯ ವೈಖರಿಯನ್ನು ತಮ್ಮದೆ ಆದ ವಿಶಿಷ್ಟ ಶೈಲಿಯಲ್ಲಿ ನಿರೂಪಿಸಿದ್ದೀರಿ ಓದಿ ಸಂತಸವಾಯಿತು, ಹೊಸ ವರುಷದ ಶುಭಾಶಯಗಳು.
In reply to ಉ: ಹೊಸ ವರ್ಷದ ಕುದುರೆ.. by H A Patil
ಉ: ಹೊಸ ವರ್ಷದ ಕುದುರೆ..
ಪಾಟೀಲರೆ ನಮಸ್ಕಾರ ಮತ್ತು ಧನ್ಯವಾದಗಳು. ನಿಮಗು ಹೊಸ ವರ್ಷದ ಶುಭಾಶಯಗಳು :-)