ಶಿವರಾಮ ಕಾರಂತರ ‘ಬೆಟ್ಟದ ಜೀವ’

ಶಿವರಾಮ ಕಾರಂತರ ‘ಬೆಟ್ಟದ ಜೀವ’

ಪುಸ್ತಕದ ಲೇಖಕ/ಕವಿಯ ಹೆಸರು
K Shivarama Karantha (1902-1997)
ಪ್ರಕಾಶಕರು
SBS Publishers
ಪುಸ್ತಕದ ಬೆಲೆ
₹ 72

ಶಿವರಾಮ ಕಾರಂತರ ‘ಬೆಟ್ಟದ ಜೀವ’ (1935?) ಕಾದಂಬರಿಯನ್ನು ನಾನು ಮೊದಲು ಓದಿದ್ದು ಸುಮಾರು ಹನ್ನೆರಡು ವರ್ಷಗಳ ಹಿಂದೆ.  ಎಲ್ಲವೂ ಸ್ವಲ್ಪ ಮರೆತಂತಾಗಿತ್ತು.  ಹಾಗಾಗಿ ಈ ವಾರ ಮತ್ತೊಮ್ಮೆ ಓದಿದೆ.  ಕಥೆಯ ಹಿಂದು-ಮುಂದುಗಳನ್ನು ನಾನು ವಿವರಿಸುವ ಗೋಜಿಗೆ ಹೋಗುವುದಿಲ್ಲ.  ಅದು ಓದಿ ತಿಳಿದರೇನೆ ಸರಿ.  ‘ಬೆಟ್ಟದ ಜೀವ’ದ ಮುಖ್ಯ ಪಾತ್ರ ಕಟ್ಟದ ಗೋಪಾಲಯ್ಯ ಅವರದು.   ಕರ್ನಾಟಕದ ಪಶ್ಚಿಮ ಘಟ್ಟಗಳ ಭಾಗವಾದ ಕುಮಾರ ಪರ್ವತ, ಶೇಷ ಪರ್ವತ, ಸಿದ್ಧ ಪರ್ವತ, ಹೀಗೆ ಕಳಂಜಿಮಲೆಗಳ ಚಿತ್ರವನ್ನು ಬಿಡಿಸುವಾಗಲೆಲ್ಲಾ ಕಾರಂತರು ಗೋಪಾಲಯ್ಯನವರ ವ್ಯಕ್ತಿತ್ವವನ್ನೇ ವಿವರಿಸುತ್ತಿರುವುದು ಸ್ಪಷ್ಟ.  ಉದಾಹರಣೆಗೆ ಇದನ್ನು ನೋಡಿ
“ಹಿಂದಿನ ದಿನ ಅದೇ ಬೆಟ್ಟ ನನಗೆ ಮೊಸರು ಗದ್ದೆಯಲ್ಲಿ ನಿಂತ ನೀಲ ಕಡೆಗೋಲಿನಂತೆ ಕಾಣಿಸಿತ್ತು.  ಇಂದು ಹಿಮದ ಮೊಸರಿರಲಿಲ್ಲ.  ನನ್ನೆದುರಿನ ಬೆಟ್ಟ ತನ್ನ ದಿಟ್ಟತನದಿಂದ, ಔನ್ನತ್ಯದಿಂದ ನನ್ನಂಥ ಎಷ್ಟೆಲ್ಲಾ ವ್ಯಕ್ತಿಗಳ ಎದೆಯನ್ನು ಭೀತಿಗೊಳಿಸಿ ತಲ್ಲಣಿಸಿರಬೇಕೋ ತಿಳಿಯೆ….ಸೂರ್ಯನ ರಶ್ಮಿಗಳು ಬೆಟ್ಟದ… ಹಸುರನ್ನೆಲ್ಲ ಬೆಳಕಿಂದ ತೋಯ್ದುಬಿಟ್ಟಾಗ… ಆ ಕಠಿಣವೂ ನಿರ್ದಾಕ್ಷಿಣ್ಯವೂ ಆಗಿ ನಿಂತ ಬೆಟ್ಟಕ್ಕೆ ಒಂದು ಬದಿಯಲ್ಲಿ ಮೃದುವಾದ ಹೃದಯವಿದ್ದಂತೆ ಕಂಡಿತು (ಪು 94) “
ಇಂಥ ವ್ಯಕ್ತಿತ್ವವೇದ್ಯ ನಿರೂಪಣೆಯಿಂದ ಗೋಪಾಲಯ್ಯನವರೇ ಕಣ್ಣು ಮುಂದೆ ಬರುತ್ತಾರೆ.  ಬೆಟ್ಟದೊಂದಿಗೆ ಬದುಕುವುದಕ್ಕೆ ಬೆಟ್ಟವೇ ಆಗಿರಬೇಕು. ಕಾದಂಬರಿಯಲ್ಲಿ ಇನ್ನೂ ಅನೇಕ ಎಳೆಗಳಿವೆ.  ಅವು ಮಾನವ ಧರ್ಮದ ಹಲವು ಮುಖಗಳ ಅನ್ವೇಷಣೆಯಾಗಿ ಬೆಳೆಯುತ್ತವೆ.
          “ಬದುಕುವುದು ಹೊನ್ನಿಗಾಗಿ ಅಲ್ಲ (ಪು 46)” ಮತ್ತು “ಮನುಷ್ಯ ಅನುಕಂಪ ಬೇಡುವ ಜೀವಿ (ಪು 59)”
ಎಂಬ ಗೋಪಾಲಯ್ಯನವರ ಎರಡು ಬೇರೆ ಬೇರೆ ಹೇಳಿಕೆಗಳು ಅವರ ಜೀವನ ಸಿದ್ಧಾಂತದ ಸಾರಾಂಶ ಎಂದರೆ ತಪ್ಪಲ್ಲ.  ಆ ಎರಡರಲ್ಲಿ ಯಾವುದು ಹೆಚ್ಚು ಎಂದರೆ ಸ್ವಲ್ಪ ಕಷ್ಟವಾಗುತ್ತದೆ.  ಈ ಎರಡೂ ತತ್ವಗಳು ಒಟ್ಟಿಗೇ ಇರುವಂಥವು.  ಗೋಪಾಲಯ್ಯ ಮತ್ತು ಶಂಕರಮ್ಮ ದಂಪತಿಗಳ ಹಾಗೆ. ಒಂದು ತೀರಿಕೊಂಡರೆ ಇನ್ನೊಂದಕ್ಕೆ ದಿಕ್ಕಿಲ್ಲ.  ದಿಕ್ಕಿಲ್ಲದ ಮೇಲೆ ಯಾವುದೂ ದಕ್ಕಲ್ಲ.
“ನಾವಿಬ್ಬರಿದ್ದೇವೆ.  ಇಬ್ಬರೂ ಒಂದೇ ಗಳಿಗೆಗೆ ತೀರಿಕೊಂಡರೆ ಚಿಂತೆಯಿಲ್ಲ. … ಆದರೆ ಯಮನ ಮನಸ್ಸಿಗೆ ಬಂದು ಜತೆಗೆಟ್ಟ ಜೋಡಿ ಉಳಿಯುವುದಾದರೆ, ಉಳಿದವರ ಪಾಡೇನು?” (ಪು 31).
ಇಷ್ಟೆಲ್ಲಾ ಹೇಳಿ ಕಾಡಿನ ಬಗ್ಗೆ ಕಾಡಿನಲ್ಲೇ ಇರುವವರ ಅಭಿಪ್ರಾಯದ ಬಗ್ಗೆ ಎರಡು ಮಾತು ಹೇಳಲೇಬೇಕು.  ಇಲ್ಲದಿದ್ದರೆ ಕಾದಂಬರಿಯು ವ್ಯಕ್ತ ಪಡಿಸುವ “ಯಾರ ಋಣ ಯಾರನ್ನು ಎಲ್ಲಿ ಬಿಗಿದಿದೆಯೋ” ಎಂಬ ಭಾವಕ್ಕೆ ನ್ಯಾಯ ಸಿಗುವುದಿಲ್ಲ.  ಕಾದಂಬರಿಯ ಪಾತ್ರ ಶಿವರಾಮನಂತೆ (ಕಾರಂತರಂತೆ) ಪಟ್ಟಣವಾಸಿಯಾದ ನನಗೆ “ಕಾಡು, ಬೆಟ್ಟ, ನದಿ” ಎಂದಾಕ್ಷಣ ಕವಿ ಮನಸ್ಸು ಜಾಗೃತವಾಗುತ್ತದೆ.  ಅಂತಹ ಜಾಗಕ್ಕೆ ನನ್ನಂಥವರು ಹೋದರೆ ‘ಸ್ವರ್ಗವೇ!’ ಎಂದು ಬೆರಗುಗೊಳ್ಳಬಹುದು (ನಿಮ್ಮ ಊರು ಕೈಲಾಸವಯ್ಯಾ! ಪು 23).  ಆದರೆ, “ಬೆಟ್ಟದ ಜೀವ” ಗೋಪಾಲಯ್ಯನಂಥವರು ಇರುವುದೇ ಮುಕ್ಕಾಲು ವಾಸಿ ಅರಣ್ಯದಲ್ಲಿ, ಕಾಲು ವಾಸಿ ಗೊಂಡಾರಣ್ಯದಲ್ಲಿ!  ಕುಮಾರ ಪರ್ವತದ ಸೆರಗಿನಲ್ಲಿದ್ದ ಕೆಳಬೈಲಿನಲ್ಲಿ ಹರಡಿದ್ದ ಮರಗಳಾಗಲೀ ಬೆಟ್ಟಗಳಾಗಲೀ ಅಲ್ಲೇ ವಾಸಿಸುವವರಿಗೆ ಕೊಡುವ ನಿತ್ಯದ ಸಲುಗೆಯಿಂದ ಯಾವ ಬೆಟ್ಟಕ್ಕೂ, ಮರಕ್ಕೂ ಮನ್ನಣೆ ಇರುವುದಿಲ್ಲ.  ಸ್ವರ್ಗದಲ್ಲಿರುವವರಿಗೆ ಸ್ವರ್ಗ ನೀರಸವಾಗುವುದು ನಿಚ್ಚಳ.
ಗೋಪಾಲಯ್ಯನವರ ಈ ಹೇಳಿಕೆಗಳು ಸಾಕ್ಷಿಗೆ ಸಾಕು.
“ದರಿದ್ರ ಕಾಡಿನ ಹಾದಿಯೇ ಹಾಗೆ.  ಕಾಣಲಿಕ್ಕೆ ಯಾವಾಗಲೂ ಹತ್ತಿರವೇ.  ನಡೆದರೆ ಮುಗಿಯುವಂತೆ ಇಲ್ಲ”. (ಪು 41)…ಊರಲ್ಲಿ ಹೆಣ ಸುಡುವುದಾದರೂ ಕಷ್ಟವೇ! ಕಾಡಲ್ಲಿ ಸಾಯುವುದಂತು ತೀರ ಸುಲಭ, ಹೆಣ ಸುಡುವುದಂತು ಮತ್ತೂ ಸುಲಭ. ಇಲ್ಲಿ ಬದುಕುವುದೇ ಸ್ವಲ್ಪ ಕಷ್ಟ ನೋಡಿ (ಪು 144) ……… ಮನುಷ್ಯನಿಗೆ ತಾನು ಬದುಕಿ ಉಳಿದ ಮೇಲಲ್ಲವೇ ವೇದಾಂತದ ಪಾಠ? ಬದುಕುವುದಕ್ಕೆ ಮೊದಲೇ ವೇದಾಂತವನ್ನು ಹೇಳಿ ಫಲವಿಲ್ಲ (ಪು. 137)”
ಅಷ್ಟು ಸಾಕೆನಿಸುತ್ತದೆ. ಇಷ್ಟು ಹೇಳಿದ ಮೇಲೂ ನೀವು (“ಬೆಟ್ಟದ ಜೀವ” ಇನ್ನೂ ಓದಿಲ್ಲದಿದ್ದರೆ) ಈ ಕಾದಂಬರಿಯನ್ನು ಓದಲು ಉತ್ಸುಕರಾಗದಿದ್ದರೆ ಏನೂ ಮಾಡಲಾರೆ. ಮೊದಲಿಗೆ ಹೇಳಿದ್ದಂತೆ ನಾನು “ಬೆಟ್ಟದ ಜೀವ” ವನ್ನು ಓದಿ ಹನ್ನೆರಡು ವರ್ಷಗಳಾಗಿದ್ದವು.  ಹನ್ನೆರಡು ವರ್ಷಗಳಲ್ಲಿ ನನ್ನ ಬುದ್ಧಿಮತ್ತೆ ಎಷ್ಟು ವಿಕಸಿಸಿದೆಯೋ ಗೊತ್ತಿಲ್ಲ.  ಆದರೆ, ಈ ಹನ್ನೆರಡು ವರ್ಷಗಳಲ್ಲಿ ನನಗೆ ಆತ್ಮೀಯರಾಗಿದ್ದ ಅನೇಕ ಹಿರಿಯ ಜೀವಗಳು ಕಣ್ಮರೆಯಾಗಿ, ಆ ಅನುಭವದ ಹಿನ್ನೆಲೆಯಲ್ಲಿ “ಬೆಟ್ಟದ ಜೀವ”ದ  ಮರುಓದು ಮೊದಲಿಗಿಂತಲೂ ಹೆಚ್ಚು ಅರ್ಥವತ್ತಾಗಿತ್ತು ಎನಿಸಿತು.