ದೇವರೊಡನೆ ಸಂದರ್ಶನ - 10

ದೇವರೊಡನೆ ಸಂದರ್ಶನ - 10

ಗಣೇಶ: ಅಪ್ಪಾ ದೇವರೇ, ನೀನು ನೀರಿನ ಮಹತ್ವ ಹೇಳಿದ ದಿನ ಬಾಯಾರಿಕೆಯಾಗಿ ಚೆನ್ನಾಗಿ ನೀರು ಕುಡಿದೆ. ಪ್ರವಾಸಕ್ಕೂ ಹೋಗಿದ್ದಾಗ ಕುಡಿದ ನೀರಿನ ವ್ಯತ್ಯಾಸದಿಂದಾಗಿ ಜ್ವರ ಸಹ ಬಂದಿತ್ತು. ಒಟ್ಟಿನಲ್ಲಿ ನೀರು ನಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮುಂದೆ ಹೇಳು, ಈ ನೀರಿಗಿಂತಲೂ ಹೆಚ್ಚಿನದಾದ ಸಂಗತಿ ಯಾವುದು?
ದೇವರು: ಅಗ್ನಿ!
ಗಣೇಶ: ಅಂದರೆ ಬೆಂಕಿ? ಅದು ಹೇಗೆ ನೀರಿಗಿಂತ ದೊಡ್ಡದಾಗುತ್ತೆ? ನೀರೇ ಬೆಂಕಿಯನ್ನು ಆರಿಸಿಬಿಡಬಹುದಲ್ಲವೇ?
ದೇವರು: ನೀರನ್ನು ವೈಜ್ಞಾನಿಕವಾಗಿ ನೀವು ಹೇಗೆ ವಿವರಿಸುತ್ತೀರಿ?
ಗಣೇಶ: ಎರಡು ಭಾಗ ಜಲಜನಕ, ಒಂದು ಭಾಗ ಆಮ್ಲಜನಕ ಸೇರಿ ನೀರು ಆಗುತ್ತದೆ ಅನ್ನುತ್ತಾರೆ.
ದೇವರು: ಜಲಜನಕ ತೀವ್ರವಾಗಿ ಜ್ವಲನಶೀಲವಾದದ್ದು. ಆಮ್ಲಜನಕ ಜ್ವಲಿಸಲು ಸಹಾಯ ಮಾಡುವಂತಹದ್ದು. ಅವೆರಡೂ ಸೇರಿದರೆ ನೀರು! ಅದು ಬೆಂಕಿಯನ್ನು ಆರಿಸುತ್ತದೆ. ನಿಮ್ಮ ಹಿಂದಿನ ಋಷಿಮುನಿಗಳು ಅಗ್ನಿ ನೀರಿನಲ್ಲಿ ಹುಟ್ಟುತ್ತದೆ ಮತ್ತು ನೀರಿನಲ್ಲಿ ವಾಸಿಸುತ್ತದೆ ಎಂದು ಸರಿಯಾಗಿಯೇ ಹೇಳಿದ್ದರು. ಆದರೆ, ನೀರಿನ ಉಗಮಕ್ಕೂ ಅಗ್ನಿ ಬೇಕು. ಮಳೆ ಹೇಗೆ ಆಗುತ್ತದೆ ಎಂಬುದು ನಿಮಗೆ ಗೊತ್ತೇ ಇದೆ ಅಲ್ಲವಾ? ಅಗ್ನಿತತ್ತ್ವದ ಪ್ರತಿನಿಧಿ ಸೂರ್ಯ ಎಲ್ಲರಿಗೂ ಬೆಳಕು ಮತ್ತು ಶಾಖ ಕೊಡುವವನಾಗಿದ್ದಾನೆ. ಸೂರ್ಯನ ಶಾಖದಿಂದ ಭೂಮಿಯ ಮೇಲಿನ ಸಾಗರ, ನದಿ, ನೀರು, ಕೆರೆ, ಕಟ್ಟೆ ಇತ್ಯಾದಿಗಳಲ್ಲಿನ ನೀರು ಆವಿಯಾಗಿ, ಮೋಡವಾಗಿ ನಂತರ ಮಳೆ ಆಗುತ್ತದೆ. ಹೀಗೆ ಈ ಚಕ್ರ ನಿರಂತರವಾಗಿ ಸುತ್ತುತ್ತಿರುತ್ತದೆ. ಸ್ವಾರ್ಥಕ್ಕಾಗಿ ಜಲಮೂಲಗಳನ್ನೇ ನಾಶ ಮಾಡುತ್ತಿರುವ ನೀವುಗಳು ಈ ಚಕ್ರ ಸುಗಮವಾಗಿ ಚಲಿಸಲು ಅಡ್ಡಿಯಾಗುತ್ತಿದ್ದೀರಿ. ಇದರಿಂದಾಗಿಯೇ ಅಕಾಲಿಕ ಮಳೆ, ಅತಿಯಾದ ಮಳೆ ಅಥವ ಮಳೆಯೇ ಆಗದಿರುವುದು ಮುಂತಾದ ಅತಿರೇಕಗಳನ್ನು ನೀವು ಕಾಣಬೇಕಾಗಿ ಬಂದಿದೆ.
ಗಣೇಶ: ಎಷ್ಟೊಂದು ವಿಚಿತ್ರ ಮತ್ತು ಆಶ್ಚರ್ಯ! ಬೆಂಕಿ ನೀರಿನಲ್ಲಿ ಹುಟ್ಟುತ್ತೆ, ಅದೇ ನೀರು ಬೆಂಕಿಯನ್ನು ಆರಿಸುತ್ತದೆ!!
ದೇವರು: ನಿಧಾನವಾಗಿ ಯೋಚನೆ ಮಾಡು. ಈ ಅಗ್ನಿ ಇದೆಯಲ್ಲಾ ಅದು ಸೃಷ್ಟಿಗೂ ಬೇಕು, ಸ್ಥಿತಿಗೂ ಬೇಕು, ಲಯಕ್ಕೂ ಅದೇ ಬೇಕು.
ಗಣೇಶ: ಒಗಟೊಗಟಾಗಿ ಅಥವ ಸೂತ್ರದ ಹಾಗೆ ಹೇಳದೆ ಬಿಡಿಸಿ ಹೇಳಿದರೆ ತಲೆಗೆ ಸುಲಭವಾಗಿ ಹೋಗುತ್ತೆ. ಯೋಚನೆ ಮಾಡಿ ಅರ್ಥ ತಿಳಿದುಕೊಳ್ಳುವಷ್ಟು ತಾಳ್ಮೆ ಎಲ್ಲರಿಗೂ ಇರಲ್ಲ. ದೇವರಾದ ನಿನಗೆ ಇದು ಗೊತ್ತಿರಲೇಬೇಕು.
ದೇವರು: ನೋಡು, ಸೃಷ್ಟಿಗೆ ಬೆಳಕು ಇರಬೇಕು, ಮಳೆ ಇರಬೇಕು, ಗಾಳಿ ಇರಬೇಕು. ಸೂರ್ಯನ ಶಾಖ ಮಳೆಗೆ ಮೂಲ. ಇನ್ನು ದೈನಂದಿನ ಚಟುವಟಿಕೆಗಳಿಗೂ ಬೆಳಕು ಬೇಕು, ಅಗ್ನಿ ಬೇಕೇ ಬೇಕು. ಸುಲಭವಾಗಿ ಹೇಳಬೇಕೆಂದರೆ ಅಡುಗೆ ಮಾಡಲೂ ಶಾಖ ಬೇಕು. ನಿನ್ನ ಬೈಕು ಓಡಿಸಲೂ ಶಾಖ ಉತ್ಪತ್ತಿ ಆಗಬೇಕು. ಇನ್ನು ಅಗ್ನಿಯ ಅನಾಹುತದಿಂದ ನಾಶ ಆಗಲೇಬೇಕು. ಹೀಗಾಗಿ ಅಗ್ನಿ ನನ್ನ ಪ್ರತಿನಿಧಿ. 
ಗಣೇಶ: ಸೂರ್ಯ ಒಂದು ಉರಿಯುತ್ತಿರುವ ನಕ್ಷತ್ರ. ಅದು ಈಗಾಗಲೇ ಅರ್ಧ ಆಯಸ್ಸು ಸವೆಸಿದೆ. ನಾಲ್ಕು ಬಿಲಿಯನ್ ವರ್ಷದ ನಂತರ ಈ ಸೂರ್ಯ ಇರುವುದಿಲ್ಲವೆನ್ನುತ್ತಾರೆ. ಆಮೇಲೆ ಏನು ಗತಿ? ನಿನ್ನ ಪ್ರತಿನಿಧಿ ಆಗ ಯಾರಾಗುತ್ತಾರೆ?
ದೇವರು: ಸೂರ್ಯ ನನ್ನ ಪ್ರತಿನಿಧಿ ಎಂದೆನೇ? ಸೂರ್ಯತತ್ವವಾದ ಅಗ್ನಿ ಸೃಷ್ಟಿ, ಸ್ಥಿತಿ, ಲಯಗಳಿಗೆ ಅದು ಕಾರಣವಾದ್ದರಿಂದ ಮತ್ತು ದೇವರನ್ನು ಈ ರೀತಿ ವರ್ಣಿಸುವ ನಿಮಗೆ ಅರ್ಥವಾಗಲೆಂದು ಅಗ್ನಿಯನ್ನು ನನ್ನ ಪ್ರತಿನಿಧಿ ಎಂದಿರುವೆ. ಈ ಬೃಹತ್ ಬ್ರಹ್ಮಾಂಡದಲ್ಲಿ ನೀವು ನೋಡುವ ಸೂರ್ಯ ಒಂದೇ ಸೂರ್ಯನಾಗಿಲ್ಲ. ಇಂತಹ ಅದೆಷ್ಟೋ ಸೂರ್ಯಮಂಡಲಗಳಿವೆ.. ನಿಮ್ಮ ಬಾಹ್ಯಾಕಾಶ ವಿಜ್ಞಾನಿಗಳೇ 500 ಸೂರ್ಯಮಂಡಲಗಳನ್ನು ಪತ್ತೆ ಹಚ್ಚಿದ್ದಾರೆ. ಈಗಲೂ ಹೊಸ ಹೊಸ ಸೂರ್ಯಮಂಡಲಗಳು ಇರುವುದನ್ನು ತಿಳಿದುಕೊಳ್ಳುತ್ತಲೇ ಇದ್ದಾರೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ ಅನ್ನೋದು ನೀವುಗಳೇ ಹೇಳುವ ಗಾದೆ. ಏನೂ ಯೋಚನೆ ಮಾಡುವ ಅಗತ್ಯವಿಲ್ಲ.
ಗಣೇಶ: ನನ್ನ ಮಿತ್ರರು ಶ್ರೀಧರ ಮತ್ತು ನಾಗರಾಜರು ವೇದ, ವೇದ ಅಂತ ಏನೇನೋ ನಮ್ಮ ತಲೆ ತಿನ್ತಾ ಇರ್ತಾರೆ. ಋಗ್ವೇದದ ಮೊದಲ ಮಂತ್ರದ ಮೊದಲ ಪದವೇ ಅಗ್ನಿ ಆಗಿದೆ ಅಂತ ಹೇಳಿ ಆ ಮಂತ್ರ ಮತ್ತು ಅದರ ಅರ್ಥ ಬರೆದುಕೊಟ್ಟಿದ್ದರು. ಹಾಂ, ಇಲ್ಲೇ ಇದೆ. ಓದ್ತೀನಿ. ಅಗ್ನಿಮೀಳೇ ಪುರೋಹಿತಂ ಯಜ್ಷಸ್ಯ ದೇವಮೃತ್ವಿಜಮ್ | ಹೋತಾರಂ ರತ್ನಧಾತಮಮ್ || ಸರ್ವಹಿತಕಾರಿ, ಜ್ಞಾನಸ್ವರೂಪ, ಜ್ಞಾನದಾತ, ಸರ್ವಪ್ರಥಮ, ಸರ್ವೋಪರಿಸ್ಥಿತ ಪರಮಾತ್ಮನನ್ನು ಸ್ತುತಿಸುತ್ತೇನೆ. ಅವನು ಬ್ರಹ್ಮಾಂಡರೂಪಿ ಯಜ್ಞದ ಪ್ರಕಾಶಕ, ಪ್ರವರ್ತಕ, ಸಮಯಾನುಸಾರ ಎಲ್ಲವನ್ನೂ ಪ್ರಾಪ್ತಗೊಳಿಸುವವನು, ಸೃಷ್ಟಿ, ಸ್ಥಿತಿ, ಲಯಕರ್ತನು, ಪ್ರಸನ್ನತೆಯನ್ನುಂಟುಮಾಡುವ ರತ್ನಾದಿಗಳನ್ನು, ಉತ್ಕೃಷ್ಟ ಅನ್ನ, ಜಲ, ಫಲಪುಷ್ಪಾದಿಗಳನ್ನು ಕರುಣಿಸುವವನೂ ಆಗಿದ್ದಾನೆ ಎಂದು ಇದರ ಅರ್ಥವಂತೆ. ನನಗೆ ಸಂಸ್ಕೃತ, ವೇದ ಇವೆಲ್ಲಾ ಅಷ್ಟಕ್ಕಷ್ಟೆ. ಏನೋ, ಇದೇ ವಿಷಯ ನೀನು ಹೇಳ್ತಾ ಇರೋದರಿಂದ ಇದನ್ನು ಓದಿದೆ ಅಷ್ಟೆ. ಇರಲಿ ಬಿಡು, ನನ್ನ ವಿಚಾರ ಹೇಳ್ತೀನಿ ಕೇಳು. ಹೋಮ, ಹವನ ಅಂತ ಮಾಡಿ ಬೆಂಕಿಗೆ ಏನೇನೋ ಹಾಕಿ ಸುಡ್ತಾರಲ್ಲಾ, ಅದು ವ್ಯರ್ಥ ಅಲ್ಲವಾ? ಎಷ್ಟೋ ಜನಕ್ಕೆ ಉಪಯೋಗ ಆಗೋದನ್ನು ಸುಡೋದು ತಪ್ಪಲ್ಲವಾ?
ದೇವರು: ಯಜ್ಞವೆಂದರೆ ಕೇವಲ ಹವನ, ಹೋಮಗಳಲ್ಲ. ಯಜ್ಞವೆಂದರೆ ಶ್ರೇಷ್ಠತಮವಾದ ಕರ್ಮಗಳು. ಈ ಅರ್ಥದಲ್ಲಿ ಒಳ್ಳೆಯ ರೀತಿಯಲ್ಲಿ ಸಹಜೀವಿಗಳ ಹಿತ ಗಮನದಲ್ಲಿರಿಸಿ ಬಾಳುವುದೇ ಯಜ್ಞ. ಅಗ್ನಿಗೆ ವಸ್ತುಗಳನ್ನು ಅರಗಿಸಿ, ವಿಭಜಿಸಿ ಅದರ ಗುಣವನ್ನು ಎಲ್ಲೆಡೆಗೆ ಹರಡುವ ಶಕ್ತಿ ಇದೆ. ಆದ್ದರಿಂದ ಯಜ್ಞದಲ್ಲಿ ಅರ್ಪಿಸುವ ಹವಿಸ್ಸುಗಳು ಸುತ್ತಮತ್ತಲಿನ ವಾತಾವರಣವನ್ನು ಶುದ್ಧಗೊಳಿಸುವಂತಹದಾಗಿರಬೇಕು, ಆಹ್ಲಾದಕರ ವಾತಾವರಣ ನಿರ್ಮಿಸುವಂತಿರಬೇಕು. ವಾತಾವರಣವನ್ನು ಕಲುಷಿತಗೊಳಿಸುವ ಯಾವುದನ್ನೂ ಹಾಕುವುದು ಸೂಕ್ತ ಅಲ್ಲ. ಅದು ಹಣ ಇರಬಹುದು, ರೇಷ್ಮೆ ಬಟ್ಟೆಯಿರಬಹುದು. ಹವಿಸ್ಸು, ಸಮಿತ್ತು, ಪದಾರ್ಥಗಳನ್ನು ಅಗ್ನಿಗೆ ಅರ್ಪಿಸುವಾಗ 'ಇದಂ ನ ಮಮ' ಎಂಬ ಮಂತ್ರ ಹೇಳುತ್ತಾರಲ್ಲಾ, ಇದರ ಅರ್ಥ, ಇದು 'ನನಗಾಗಿ ಅಲ್ಲ', ಸಕಲರ ಹಿತಕ್ಕಾಗಿ ಎಂಬುದೇ ಆಗಿದೆ.
ಗಣೇಶ: ಆಯ್ತು ದೇವ. ಅಗ್ನಿಪುರಾಣ ಮುಗಿಸಿಬಿಡು. ನಿನ್ನ ಅಂತಿಮ ಸಂದೇಶ ಹೇಳಿ ಬಿಡುಗಡೆ ಮಾಡು.
ದೇವರು (ನಗುತ್ತಾ): ಗಣೇಶ, ಈ ಅಗ್ನಿ ಐದು ವಿಧವಾಗಿದೆ - ಕಾಲಾಗ್ನಿ(ಸಮಯ), ಕ್ಷುದ್ಧಾಗ್ನಿ(ಹಸಿವು), ಶೀತಾಗ್ನಿ(ಶೀತಲ), ಕೋಪಾಗ್ನಿ(ಕ್ರೋಧ) ಮತ್ತು ಜ್ಞಾನಾಗ್ನಿ(ಜ್ಞಾನ). ನಿಮ್ಮತನವನ್ನೂ ಪ್ರತಿನಿದಿಸುವ ಸಂಗತಿಯೂ ಅಗ್ನಿಯೇ ಆಗಿದೆ. ಕಾಮಾಗ್ನಿ, ವಿರಹಾಗ್ನಿ, ಮೋಹಾಗ್ನಿ, ಮುಂತಾದ ಪದಗಳ ಬಳಕೆ ಇದನ್ನೇ ಸೂಚಿಸುತ್ತದೆ. ಹೊಟ್ಟೆಯುರಿ, ಕಣ್ಣಿನಲ್ಲೇ ಸುಡುವ ನೋಟ, ಬೆಂಕಿಯಂತಹ ಮಾತುಗಳು, ಹೀಗೆ ಅನೇಕ ಉದಾಹರಣೆಗಳನ್ನು ಕೊಡಬಹುದು. ನಿನ್ನ ಜಠರಾಗ್ನಿಯೂ ಧಗಧಗಿಸುತ್ತಿರುವುದು ಗೊತ್ತಾಗುತ್ತಿದೆ, ಮನೆಗೆ ಹೋಗಿ ಶಮನಗೊಳಿಸಿಕೋ. ಶುಭವಾಗಲಿ.
     ಮನೆಗೆ ಹೋದ ಗಣೇಶರಿಗಾಗಿ ಬಿಸಿಬಿಸಿಯಾದ ಪೂರಿ ಸಾಗು ಕಾಯುತ್ತಿತ್ತು. ಒಂದೊಂದಾಗಿ ಪೂರಿಯ ಉದರಪ್ರವೇಶವಾಗುತ್ತಿದ್ದಂತೆ ಗಣೇಶರ ಮುಖದಲ್ಲಿ ಮಂದಹಾಸ ಮೂಡಿತ್ತು. ಟಿವಿಯಲ್ಲಿ ಸುಮಧುರ ಕಂಠದ ಗಾಯಕಿಯ ಹಾಡು ಕೇಳಿಸುತ್ತಿತ್ತು.
ಸತ್ಯಪಥದಿ ಮುಂದೆ ಸಾಗಲು ಮತಿಯ ಕರುಣಿಸು ದೇವನೆ
ಸಂಪತ್ತು ಬರಲಿ ನ್ಯಾಯ ಮಾರ್ಗದಿ ನಿನ್ನ ಕರುಣೆಯ ಬಲದಲಿ |
ರಜವ ತೊಳೆದು ತಮವ ಕಳೆದು ಸತ್ತ್ವ ತುಂಬಲು ಬೇಡುವೆ
ಬಾಳ ಬೆಳಗುವ ಜ್ಯೋತಿ ನೀನೆ ವಂದನೆ ಶತ ವಂದನೆ ||
-ಕ.ವೆಂ.ನಾಗರಾಜ್.
***************
ಹಿಂದಿನ ಸಂದರ್ಶನದ ಲಿಂಕ್:  http://sampada.net/%E0%B2%A6%E0%B3%87%E0%B2%B5%E0%B2%B0%E0%B3%8A%E0%B2%A...

Comments

Submitted by kavinagaraj Thu, 01/14/2016 - 11:26

ಹಲವು ಕಾರಣಗಳಿಂದಾಗಿ ಸುಮಾರು 3 ತಿಂಗಳುಗಳು ಸಂಪದಕ್ಕೆ ಬರಲಾಗಿರಲಿಲ್ಲ ಮತ್ತು ಸಂದರ್ಶನಮಾಲೆ ಮುಂದುವರೆಸಲಾಗಿರಲಿಲ್ಲ. ಕ್ಷಮೆಯಿರಲಿ.

Submitted by H A Patil Sat, 01/16/2016 - 18:37

ಕವಿ ನಾಗರಾಜರವರಿಗೆ ವಂದನೆಗಳು
ದೇವರೊಡನೆ ಸಂದರ್ಶನ ಭಾಗ 10 ಸೊಗಸಾಗಿಮೂಡಿ ಬಂದಿದೆ, ನೀರಿನ ಕುರಿತಾದ ವಿವರಣೆ ಮನದಲ್ಲಿ ದಾಖಲಾಗುವಂತಹದು, ಧನ್ಯವಾದಗಳು.

Submitted by ಗಣೇಶ Mon, 02/08/2016 - 00:11

In reply to by H A Patil

ಪಾಟೀಲರೆ, ನೀರು ಕುಡಿದು, ಈಗ ಅಗ್ನಿ ದಾಟಿ ಆಯಿತು. :)
ಕವಿನಾಗರಾಜರೆ, ದೇವರನ್ನು ಹೀಗೆ ಕಾಯಿಸುವುದು ಸರಿ ಅಲ್ಲ.:)
>>ನನಗೆ ಸಂಸ್ಕೃತ, ವೇದ ಇವೆಲ್ಲಾ ಅಷ್ಟಕ್ಕಷ್ಟೆ. .... ನನ್ನ ವಿಚಾರ ಹೇಳ್ತೀನಿ ಕೇಳು. ಹೋಮ, ಹವನ ಅಂತ ಮಾಡಿ ಬೆಂಕಿಗೆ ಏನೇನೋ ಹಾಕಿ ಸುಡ್ತಾರಲ್ಲಾ, ಅದು ವ್ಯರ್ಥ ಅಲ್ಲವಾ? ಎಷ್ಟೋ ಜನಕ್ಕೆ ಉಪಯೋಗ ಆಗೋದನ್ನು ಸುಡೋದು ತಪ್ಪಲ್ಲವಾ?
-ಉತ್ತರ ನನಗೆ ಅರ್ಥವಾಯಿತು...ಉಳಿದ ವಿಚಾರವಂತರಿಗೆ..
>>ನನ್ನ ಮಿತ್ರರು ಶ್ರೀಧರ ಮತ್ತು ನಾಗರಾಜರು ವೇದ, ವೇದ ಅಂತ ಏನೇನೋ ನಮ್ಮ ತಲೆ ತಿನ್ತಾ ಇರ್ತಾರೆ. :)
>>ಹವಿಸ್ಸು, ಸಮಿತ್ತು, ಪದಾರ್ಥಗಳನ್ನು ಅಗ್ನಿಗೆ ಅರ್ಪಿಸುವಾಗ 'ಇದಂ ನ ಮಮ' ಎಂಬ ಮಂತ್ರ ಹೇಳುತ್ತಾರಲ್ಲಾ,
- "ನ" ಹೇಳದಿದ್ದರೆ..
ದೇವರಿಂದ ಅಗ್ನಿ ಪುರಾಣ ಕೇಳಿ,ಕ್ಷುದಾಗ್ನಿ ಜಾಸ್ತಿಯಾದ ಸಮಯದಲ್ಲಿ ಪೂರಿ ಸಾಗು ಸಿಕ್ಕಿ ತಂಪಾಯಿತು..
ಸಂದರ್ಶನದ ಮುಂದಿನ ಭಾಗ....

Submitted by kavinagaraj Thu, 02/11/2016 - 15:51

In reply to by ಗಣೇಶ

ವಂದನೆಗಳು, ಗಣೇಶರೇ. ಕಂಪ್ಯೂಟರಿನ ಸಮಸ್ಯೆಯಿಂದಾಗಿ ಮತ್ತೆ ತಡವಾಯಿತು. ದೇವರು ತಾನೇ, . . .! ಸಹಿಸಿಕೊಳ್ಳುತ್ತಾನೆ. ಅವನಿರುವುದೇ ಅದಕ್ಕೆ!!