' ಯೂ.ಆರ್.ಅನಂತಮೂರ್ತಿಯವರ ಕೆಲವು ಕಥೆಗಳ ಅವಲೋಕನ '

' ಯೂ.ಆರ್.ಅನಂತಮೂರ್ತಿಯವರ ಕೆಲವು ಕಥೆಗಳ ಅವಲೋಕನ '

ಚಿತ್ರ

(ಭಾಗ-1)
ಅನಂತಮೂರ್ತಿ ನಿಜವಾದ ಅರ್ಥದಲ್ಲಿ ಅಪ್ಪಟ ಪ್ರಜಾಪ್ರಭುತ್ವವಾದಿ. ಸೂಕ್ಷ್ಮವಾಗಿ ಅವರ ವೈಯಕ್ತಿಕ ಮತ್ತು ಸಾಮಾಜಿಕ ಜೀವನವನ್ನು ಅವಲೊಕಿಸಿದರೆ ಇದು ತಿಳಿದು ಬರುತ್ತದೆ. ಈ ಕಾರಣಗಳಿಂದಾಗಿಯೆ ಅವರು ತಮ್ಮ ಪ್ರತಿಭೆಯನ್ನು ಚುರುಕಾಗಿ ಇರಿಸಿ ಕೊಂಡಿದ್ದರು. ಆ ಮೂಲಕ ಹೊರ ಹೊಮ್ಮಬಹುದಾದ ಹೊಳಹುಗಳನ್ನು ಬರವಣಿಗೆ ಮತ್ತು ಉಪನ್ಯಾಸಗಳ ಮೂಲಕ ಹಂಚಿ ಕೊಳ್ಳುತ್ತಿದ್ದರು. ಅವರ ಗುರುಗಳಾದ ಕಮಕೋಡು ನರಸಿಂಹ ಶಾಸ್ತ್ರೀಗಳು, ಗೆಳೆಯ ಕೆ.ವಿ.ಸುಬ್ಬಣ್ಣ ಮತ್ತೂ ಲೋಹಿಯಾವಾದಿ ಶಾಂತವೇರಿ ಗೋಪಾಲಗೌಡ ಮುಂತಾದವರು ಇವರ ವ್ಯಕ್ತಿತ್ವ ವಿಕಸನಕ್ಕೆ ಕಾರಣರಾದವರು. ಇವರಲ್ಲದೆ ರಾಜ್ಯದ ಮತ್ತು ದೇಶದ ಧೀಮಂತರಿದ್ದಾರೆ. ಇವರೆಲ್ಲರ ಒಡನಾಟದ ಮೂಲಕ ಅವರು ತಮ್ಮ ಸಂವೇದನೆಯನ್ನು ರೂಪಿಸಿ ಕೊಂಡಿದ್ದರು.. ಇವರು 1950 ರ ಸುಮಾರಿಗೆ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದರು.. ಆಗ ನವೋದಯದ ಕುವೆಂಪು, ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಶಿವರಾಮ ಕಾರಂತ, ಗೋಕಾಕ ಮತ್ತು ಇತರರು ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕು ನೀಡಿದ್ದರು. ಈ ಕಾಲಘಟ್ಟದಲ್ಲಿ ಅನಂತ ಮೂರ್ತಿ ಮತ್ತು ಅವರ ಸಮಕಾಲೀನ ಬರಹಗಾರರು ತಮ್ಮ ಬರವಣಿಗೆಯ ವೈಚಾರಿಕತೆ ಮತ್ತೂ ರೂಪ ರೇಷೆಗಳನ್ನು ಕಂಡು ಕೊಂಡರು.. ಆಗ ನಮ್ಮ ದೇಶ ಸ್ವತಂತ್ರಗೊಂಡು ನಮ್ಮವರೆ ಆಡಳಿತದ ಚುಕ್ಕಾಣಿ ಹಿಡಿದು ಜನ ಸಾಮಾನ್ಯರ ಬದುಕು ನಿರೀಕ್ಷಿತ ಮಟ್ಟ ಮುಟ್ಟದಿದ್ದಾಗ ಹುಟ್ಟಿಕೊಂಡ ಚಳುವಳಿಯು ನವ್ಯದ ರೂಪ ಪಡೆಯಿತು.

ಅನಂತ ಮೂರ್ತಿಯವರು ತಮ್ಮ 23 ರ ತಾರುಣ್ಯದಲ್ಲಿಯೆ ‘ಎಂದೆಂದೂ ಮುಗಿಯದ ಕಥೆ’ ಬರೆದರು. ಇದರ ಕಥಾನಕ ಎಷ್ಟು ಗಟ್ಟಿಯಾದುದು ಮತ್ತು ಪ್ರಜಾ ಪ್ರಭುತ್ವವಾದುದು ಎಂದರೆ ಒಬ್ಬ ಲೇಖಕ ತನ್ನ ಬದುಕು ಬರಹದಲ್ಲಿ ಮಾಗಿ ತನ್ನ ಇಳಿ ವಯಸ್ಸಿನಲ್ಲಿ ಬರೆಯ ಬಹುದಾದಂತಹುದನ್ನು ಅವರು ತಮ್ಮ ಎಳೆವಯದಲ್ಲೆ ಬರೆದರು ಎನ್ನುವುದು ಅವರ ವೈಚಾರಿಕತೆ ಮತ್ತು ಅಭಿವ್ಯಕ್ತಿ ಕ್ರಮಕ್ಕೆ ಸಂದ ಮನ್ನಣೆ ಎನ್ನ ಬಹುದು. ಜೈವಿಕ ಚಟುವಟಿಕೆಯನ್ನು ಮನುಷ್ಯ ಕ್ಷಣ ಕ್ಷಣಕ್ಕೂ ಮಾಡುತ್ತಲೆ ಇರುತ್ತಾನೆ. ವಯಸ್ಸಾದವರು ಅದರಲ್ಲಿಯೂ ವಿಶೇಷವಾಗಿ ಮುದುಕಿಯರು ತಮ್ಮ ಬಾಲ್ಯದಲ್ಲಿ ಕೇಳಿದ ಮತ್ತು ಅರಗಿಸಿಕೊಂಡುದನ್ನು ತಮ್ಮ ಮೊಮ್ಮಕ್ಕಳಿಗೆ ಹೇಳುವುದೆ ಈ ಕಥೆಯ ಕಥಾವಸ್ತು. ಹುಟ್ಟು ಸಾವುಗಳ ನಮ್ಮ ಚಕ್ರೀಯ ಬದುಕಿನಲ್ಲಿ ಅದು ಅಷ್ಟಕ್ಕೆ ಮುಗಿದು ಹೋಗದೆ ಚಿಗುರುತ್ತಾ ಇರಬೇಕು. ಹೀಗಾಗಿ ನಮ್ಮ ಜೈವಿಕ ಪ್ರಪಂಚ ತನ್ನದೆ ಆದ ಲಯದಲ್ಲಿ ಸಾಗುತ್ತ ಬಂದಿದೆ. ಪ್ರಸ್ತುತ ಜೀವನವನ್ನು ಒಪ್ಪಿಕೊಂಡವರು ತಮ್ಮ ಸುತ್ತ ಮುತ್ತಲಿನ ಪ್ರತಿಯೊಬ್ಬರನ್ನು ಘನೆತೆ ಗೌರವಗಳಿಂದ ಕಾಣಬೇಕು ಎನ್ನುವುದು ಅವರ ಅನಿಸಿಕೆ. ಕೌಟುಂಬಿಕ ಸಾಮಾಜಿಕ ಧಾರ್ಮಿಕ ಮತ್ತು ರಾಜಕೀಯ ರಂಗಗಳಲ್ಲಿ ಒಳ್ಳೆಯ ಸಾರ್ವತ್ರಿಕ ಬದಲಾವಣೆ ಗಳನ್ನು ಬಯಸದ ಶಕ್ತಿ ಕೇಂದ್ರಗಳ ಆಲೋಚನಾ ಕ್ರಮವನ್ನು ಪ್ರಶ್ನಿಸುತ್ತ ಸರ್ವಾಧಿಕಾರಿ ಧೋರಣೆಯವರನ್ನು ಧಿಕ್ಕರಿಸುತ್ತ ಬಂದವರು.

ಲೇಖಕರಲ್ಲಿ ಎರಡು ವಿಧಗಳಿವೆ, ಒಂದು ವರ್ಗದ ಲೇಖಕ ಪ್ರಸ್ತುತವಾಗಿ ಇರುವುದನ್ನೆ ಚೆಂದವಾಗಿ ಹೇಳುತ್ತ ಹೋಗುವುದು ಒಂದು ವಿಧವಾದರೆ ಇನ್ನೊಂದು ವರ್ಗದ ಲೇಖಕ ಜನ ಸಮುದಾಯದ ಬದುಕಿನಲ್ಲಿ ಬದಲಾವಣೆಗಳನ್ನು ನಿರಂತರವಾಗಿ ಬಯಸುವವನು ಅಲ್ಲದೆ ಪ್ರಸ್ತುತ ಜೀವನದ ಇಕ್ಕಟ್ಟು ಬಿಕ್ಕಟ್ಟುಗಳನ್ನು ಬಿಡಿಸಿ ಕೊಳ್ಳುತ್ತ ಸಮೃದ್ಧವಾಗಿ ಸಾಗಬೇಕು ಎಂದು ಚಿಂತಿಸುವವನು. ಈ ಎರಡು ಅತಿಗಳನ್ನು ಒಂದು ಬಿಂದುವಿನಲ್ಲಿ ಏಕತ್ರಗೊಳಿಸುವ ಲೇಖಕ ಅವರಾಗಿರಲಿಲ್ಲ. ಅವರು ತಮ್ಮ ನಿಶ್ಚಿತ ಅಭಿಪ್ರಾಯಗಳನ್ನು ಹೇಳದೆ ಬೌದ್ಧಿಕ ಪಯಣದಲ್ಲಿ ಸಂಗಾತಿಗಳಾಗಬೇಕೆಂದು ಬಯಸುವವರಾಗಿದ್ದರು.. ಸ್ವಂತ ಆಲೋಚನಾ ಕ್ರಮ ಪ್ರತಿಯೊಬ್ಬರದಾಗಬೇಕು ಎನ್ನುವುದು ಅವರ ವಾಂಙ್ಮಯವಾಗಿತ್ತು. ನಂತರದಲ್ಲಿ ಅವರು ಬರೆದ ‘ತಾಯಿ’ ಕಥೆ ಸೂಕ್ಷ್ಮ ಆಯಾಮಗಳಲ್ಲಿ ಬಿಚ್ಚಿ ಕೊಳ್ಳುತ್ತ ಸಾಗುವ ಒಂದು ಸಮರ್ಥ ಕಥಾನಕ. ಇದರ ನಾಯಕಿ ಒಬ್ಬ ತರುಣ ವಿಧವೆ ಆಕೆಗೊಂದು ಗಂಡು ಮಗುವಿದೆ. ಆಕೆ ಬೇರೊಬ್ಬನನ್ನು ಮರು ಮದುವೆಯಾಗುತ್ತಾಳೆ. ಆಕೆಯ ಮೊದಲ ಗಂಡನಿಂದಾದ ಆ ಮಗನಿಗೆ ತಾಯಿಯ ಈ ಎರಡನೆ ಸಂಬಂಧ ಇಷ್ಟವಿಲ್ಲದ್ದು. ಸೂಕ್ಷ್ಮ ಸಂವೇದನೆಗಳ ಈ ಕಥಾನಕದ ನಿರೂಪಣೆ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ಜೀವನದ ಈ ಸಂಧರ್ಭಗಳು ನಮ್ಮ ಸುತ್ತ ಮುತ್ತ ಘಟಿಸುತ್ತಲೆ ಇರುತ್ತವೆ. ಈ ಕಥೆಯಿರುವ ಸಂಕಲನಕ್ಕೆ ಮುನ್ನುಡಿಯನ್ನು ಬರೆದ ಅಡಿಗರು ‘ಈ ಕಥೆಗಾರ ಎಷ್ಟು ಕ್ರಿಟಿಕಲ್ ಆಗಿ ಬರೆದಿದ್ದಾರೆ ಎಂದರೆ ಈ ಮನುಷ್ಯ ಮುಂದೆ ಸಾಹಿತ್ಯವಲ್ಲದ್ದನ್ನು ಯಾವತ್ತೂ ಬರೆಯಲಾರ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಇವರ ಎರಡನೆಯ ಕಥಾ ಸಂಕಲನ ‘ಪ್ರಶ್ನೆ’ ಹೊರ ಬಂದಾಗ ಈ ಲೇಖಕ ಬಹಳ ಬೆಳೆದಿದ್ದರು. ಇದಕ್ಕೆ ಮುನ್ನುಡಿಯನ್ನು ಬರೆದ ಖ್ಯಾತ ಸಾಹಿತ್ಯ ಮತ್ತು ಸಂಗೀತ ಪಂಡಿತ ರಾಜೀವ ತಾರಾನಾಥರು ‘ಅನಂತಮೂರ್ತಿ ಕಥನ ಪರಂಪರೆಗೆ ಒಂದು ಹೊಸ ದಿಕ್ಕನ್ನು ತೋರಿಸಿದರು ಅಲ್ಲದೆ ಇದರಲ್ಲಿ ಕಾವ್ಯಾತ್ಮಕತೆಯನ್ನು ತಂದವರು’ ಎಂದು ದಾಖಲಿಸಿದ್ದಾರೆ. ಅನಂತಮೂರ್ತಿಯವರ ಖ್ಯಾತ ಕಥೆ ‘ಘಟಶ್ರಾದ್ಧ’ ಈ ಕಥಾ ಸಂಕಲನದಲ್ಲಿದೆ. ಇದನ್ನು ಚಲನಚಿತ್ರವಾಗಿ ನಿರ್ದೇಶಿಸಿದ ಗಿರೀಶ ಕಾಸರವಳ್ಳಿ ದೇಶದ ಅತ್ಯುತ್ತಮ ನಿರ್ದೇಶಕರ ಪೈಕಿ ಒಬ್ಬರೆಂದು ಪ್ರಸಿದ್ಧರಾದರು. ಭಾರತದ ಅತ್ಯುತ್ತಮ ಒಂದು ನೂರು ಚಲನಚಿತ್ರಗಳ ಪಟ್ಟಿಯಲ್ಲಿ ಈ ಕಥೆಯಾಧಾರಿತ ಸಿನೆಮಾ ಸ್ಥಾನ ಪಡೆದುದು ಒಂದು ಹೆಗ್ಗಳಿಕೆ.ಇದೊಂದು ಶ್ರೇಷ್ಟ ಕಥೆ ಮತ್ತು ಚಲನಚಿತ್ರ ಏಕಾಗಿ ಅಂದರೆ ಇದು ಪರಂಪರೆಯೊಳಗಿನ ಹಿಂಸೆಯನ್ನು ತೋರಿಸುತ್ತ ಓದುಗನನ್ನು ಮತ್ತು ನೋಡುಗನನ್ನು ಯೋಚನೆಗೆ ಹಚ್ಚುವ ಕಥೆ. ಈ ಕಥೆಯ ಕಥಾನಾಯಕಿ ಒಂದು ಅಗ್ರಹಾರದ ಯಮುನ ಎನ್ನುವ ಒರ್ವ ವಿಧವೆ, ಇನ್ನೊಬ್ಬ ನಾಣಿ ಅದೇ ಅಗ್ರಹರದ ಓರ್ವ ಮುಗ್ಧ ಬಾಲಕ. ಈ ವಿಧವೆ ವಯೋಸಹಜ ಧರ್ಮದಲ್ಲಿ ಒಬ್ಬನೊಂದಿಗೆ ಪ್ರೇಮಪಾಶದಲ್ಲಿ ಸಿಲುಕಿ ದುರ್ಬಲ ಗಳಿಗೆ ಯೊಂದರಲ್ಲಿ ಮೈಮರೆತು ಮೈ ಒಪ್ಪಿಸುತ್ತಾಳೆ ಪರಿಣಾಮ ಆಕೆ ಗರ್ಭ ಧರಿಸುತ್ತಾಳೆ. ಆಕೆಯ ತಂದೆ ಅಗ್ರಹಾರದ ವಟುಗಳಿಗೆ ವೇದಾಧ್ಯಯನ ಮಾಡಿಸುವ ಗುರು. ಈ ಗುರುಕುಲಕ್ಕೆ ಬರುವ ವಟುಗಳು ಯುವಕರು, ಅದೇ ಗುರುಕುಲಕ್ಕೆ ನಾಣಿಯೂ ಬರುತ್ತಿರುತ್ತಾನೆ. ಆ ಯುವಕರೋ ಅಸಾಧ್ಯ ಪ್ರಳಯಾಂತಕರು ! ಗುರು ಪುತ್ರಿ ಯಮುನಳ ಪ್ರೇಮ ಪ್ರಕರಣ ಹೇಗೋ ಅವರಿಗೆ ತಿಳಿದು ಬಿಡುತ್ತದೆ. ಸಂಧರ್ಭ ದೊರೆತಾಗಲೆಲ್ಲ ಅವರು ಕೊಂಕು ಮಾತುಗಳನ್ನಾಡಿ ಅವಳನ್ನು ಘಾಸಿಗೊಳಿಸಿ ಒಂದು ರೀತಿಯ ವಿಕೃತ ಸಂತೋಷ ಪಡುವುದು ನಾಣಿಗೆ ಒಂದು ರೀತಿಯ ಇರಿಸು ಮುರಿಸಿನ ಸ್ಥಿತಿ. ಸಮಾಜದ ನಿಂದನೆಗೆ ಹೆದರಿ ಯಮುನ ಗರ್ಭಪಾತ ಮಾಡಿಸಿ ಕೊಳ್ಳಲು ಹೋಗುವಾಗ ಧೈರ್ಯಕ್ಕೆಂದು ತನ್ನ ಜೊತೆಗೆ ನಾಣಿಯನ್ನು ಕರೆದೊಯ್ಯುತ್ತಾಳೆ. ಆಕೆಯ ಅಸಹಾಯಕತೆ ಗುರುಕುಲದ ಹಿರಿಯ ಸಹಪಾಠಿಗಳ ದುಷ್ಟ ಬುದ್ಧಿ ಅವರ ಕೊಂಕು ಮಾತುಗಳು ಆತನನ್ನು ಘಾಸಿಗೊಳಿಸುವ ಪರಿಯನ್ನು ಅನಂತಮೂರ್ತಿಗಳು ಅಷ್ಟೆ ಪರಿಣಾಮಕಾರಿಯಾಗಿ ಕಥೆಯಲ್ಲಿ ಮತ್ತು ಗಿರೀಶ ಕಾಸರವಳ್ಳಿ ತೆರೆಯ ಮೇಲೆ ಪಡಿ ಮೂಡಿಸಿದ್ದಾರೆ.

ಯಮುನಳ ಗರ್ಭಧಾರಣೆ ಮತ್ತು ಗರ್ಭಪಾತದ ವಿಷಯ ತಿಳಿದ ಆಕೆಯ ತಂದೆ ತನ್ನ ಮಗಳು ಯಮುನೆಯ ಘಟಶ್ರಾದ್ಧ ಮಾಡುತ್ತಾರೆ. ಆಕೆಯ ಅಸಹಾಯಕ ಪರಿಸ್ಥಿತಿಯ ದುರ್ಲಾಭ ಪಡೆಯಲು ಪಾದ್ರಿಯೊಬ್ಬ ಆಕೆಯನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಮನವೊಲಿಸಲು ಪ್ರಯತ್ನಿಸುತ್ತಾನೆ. ಹತ್ತೊಂಭತ್ತನೆ ಶತಮಾನದ ಈ ಕಥಾನಕದ ಸಂಧರ್ಭದ ಕಾಲದಲ್ಲಿ ಭಾರತವನ್ನು ಸಂಪೂರ್ಣವಾಗಿ ಆವರಿಸಿ ಕೊಂಡಿದ್ದ ಬ್ರಿಟೀಶ್ ಆಡಳಿತ ವ್ಯವಸ್ಥೆ ನಮ್ಮ ದೇಶದ ಸಾಮಾಜಿಕ ಆರ್ಥಿಕ ರಾಜಕೀಯ ಮತ್ತು ಶೈಕ್ಷಣಿಕ ಜೀವನದಲ್ಲಿ ಮಾಡಿದ ಪಲ್ಲಟಗಳನ್ನು ದಾಖಲಿಸುತ್ತ ಸಾಗುವ ಕಥಾನಕವಿದು. ಇದೊಂದು ವಸಾಹತುಶಾಹಿಯ ಕಪಿ ಮುಷ್ಟಿಯಲ್ಲಿ ಸಿಲುಕಿದ ನಮ್ಮ ದೇಶದ ಒಂದು ಮಾದರಿಯಾಗಿ ರೂಪಗೊಂಡಿದೆ. ಇಲ್ಲಿ ವಸಾಹತಿಕರಣವೆಂದರೆ ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ದೌರ್ಬಲ್ಯಗಳನ್ನು ಹಾಗೂ ನೂನ್ಯತೆಗಳನ್ನು ದೊಡ್ಡದು ಮಾಡಿ ತಮ್ಮ ಧರ್ಮಕ್ಕೆ ಅಸಹಾಯಕ ವ್ಯಕ್ತಿಗಳನ್ನು ಮತಾಂತರಿಸಿ ಕೊಳ್ಳುವುದು ವಸಾಹತಿಕರಣದ ಒಳ ರೂಪ.

ಇನ್ನೊಂದು ಕಥೆ ‘ಪ್ರಕೃತಿ’ ಇದರ ಕಥಾನಕದ ನಾಯಕ ಸಂಕಪ್ಪಯ್ಯ ಗ್ರಾಮೀಣ ಪರಿಸರದಲ್ಲಿಯೆ ತನ್ನ ಬದುಕನ್ನು ಕಟ್ಟಿಕೊಳ್ಳಲು ಹಂಬಲಿಸುವವ. ಮಲೆನಾಡಿನ ಕೃಷಿಕರು ಅಡಿಕೆ ತೋಟ ಮಾಡುತ್ತ ಬಂದವರು ಅದನ್ನೆ ಮುಂದುವರಸಿಕೊಂಡು ಹೋಗುವುದು ಅನೂಚಾನವಾಗಿ ನಡೆದುಕೊಂಡು ಬಂದ ಸಂಪ್ರದಾಯ. ಆದರೆ ಇಲ್ಲಿ ಸಂಕಪ್ಪಯ್ಯ ತನ್ನ ನೆಲದಲ್ಲಿ ಕಿತ್ತಳೆ ಹಣ್ಣಿನ ತೋಟ ಮಾಡುವ ಹಂಬಲದವನು. ಆದರೆ ಈತನ ಹೆಂಡತಿ ಸೀತಮ್ಮ ಹೊಸತನಕ್ಕೆ ಹಂಬಲಿಸುವವಳು. ಇವರ ದಾಂಪತ್ಯಕ್ಕೆ ಮೂರು ಮಕ್ಕಳು ಎರಡು ಹೆಣ್ಣು ಒಂದು ಗಂಡು. ಹಿರಿಯವಳು ಲಕ್ಷ್ಮೀ, ಕಿರಿಯವಳು ಶಾಂತ ಆಕೆ ತನ್ನ ಅಪ್ಪಯ್ಯನನ್ನು ಬಹಳ ಹಚ್ಚಿಕೊಂಡ ಹುಡುಗಿ ಆಕೆಯನ್ನು ಹೊರತು ಪಡಿಸಿ ಉಳಿದವರ ಜೊತೆಗೆ ಆತನದು ವೈಚಾರಿಕ ಸಂಘರ್ಷದ ಬದುಕು. ಹಳ್ಳಿ ಜೀವಂತಿಕೆಯಿಂದ ಕೂಡಿದ ಪರಿಸರ ಎಂದು ಅತನಿಗೆ ಅನ್ನಿಸಿದರೆ ಆತನ ಮಗನಿಗೆ ಅದು ಜೀವಂತಿಕೆಯನ್ನು ಕಳೆದುಕೊಂಡಂತಹುದು. ಇಲ್ಲಿ ನೆಮ್ಮದಿಯ ಬದುಕನ್ನು ಕಟ್ಟಿ ಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಆತನ ಅನಿಸಿಕೆ. ಹೀಗಾಗಿ ಆತ ನಗರ ಪ್ರದೇಶಕ್ಕೆ ಹೋಗಿ ಹೋಟೆಲ್ ನಡೆಸಬೇಕು ಹಣ ಗಳಿಸಬೇಕು ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಹಂಬಲದವನು. ಮಗನ ಈ ಧೋರಣೆಗೆ ತಂದೆ ಸಂಕಪ್ಪಯ್ಯನ ವಿರೋಧವಿದೆ ಅನ್ನ ಮಾರಿ ಬದುಕುವುದು ಸಂಕಪ್ಪಯ್ಯನ ದೃಷ್ಟಿಯಲ್ಲಿ ಸಂಸ್ಕøತಿ ವಿರೋಧಿ ಎನಿಸುತ್ತದೆ. ಕಿತ್ತಳೆ ತೋಟ ಮಾಡುವ ಮೂಲಕ ಬದುಕಿಗೆ ಬದಲಾವಣೆ ತಂದು ಕೊಳ್ಳುವ ಹಂಬಲದ ಸಂಕಪ್ಪಯ್ಯನ ಪ್ರಯೋಗಶೀಲತೆಗೆ ಮಗನ ವಿರೋಧವಿದೆ. ಹಿರಿಯ ಮಗಳು ವಿಧವೆ ಆಕೆ ಶಾನುಭೋಗನ ಮಗನ ಜೊತೆ ಸಂಬಂಧವಿರಿಸಿ ಕೊಂಡಿದ್ದಾಳೆ, ಅದು ಸಂಕಪ್ಪಯ್ಯನನ್ನು ಬಹಳವಾಗಿ ಕಾಡುತ್ತದೆ. ವಲಸೆಯ ಬದುಕು ಮತ್ತು ಬದಲಾವಣೆಯ ಚಾರಿತ್ರಿಕ ಅನಿವಾರ್ಯತೆಯನ್ನು ಸಾಂಕೇತಿಕವಾಗಿ ನಿರೂಪಿಸುವ ಒಂದು ಶ್ರೇಷ್ಟ ಕಥಾನಕವಿದು.

‘ಕಾರ್ತಿಕ’ ಇವರ ಇನ್ನೊಂದು ಮನೋ ವಿಶ್ಲೇಷಣಾತ್ಮಕ ಕಥೆ ಇದರ ಕಥಾ ನಾಯಕ ರಾಘವ ಸೂಕ್ಷ್ಮ ಜೀವಿ. ಸ್ವಭಾವ ವೈರುಧ್ಯದ ಕಾರಣಗಳಿಂದಾಗಿ ಈತನ ದಾಂಪತ್ಯದಲ್ಲಿ ಹೇಳಿ ಕೊಳ್ಳುವಂತಹ ಸಾಂಗತ್ಯವಿಲ್ಲ. ಪರಕೀಯತೆಗೆ ಹೊಂದಿಕೊಳ್ಳದ ಬಿಕ್ಕಟ್ಟಿನಲ್ಲಿ ಅರಳಿಕೊಳ್ಳುವ ಕಥಾನಕವಿದು. ಈತ ಪತ್ನಿ ಛಾಯಾ ಮತ್ತು ಅಪ್ಪನನ್ನು ಮೀರುವುದು ಅವರಿಗಿಂತ ಭಿನ್ನವಾಗಿ ಬದುಕುವುದು ಯಾವಾಗ ಎಂದು ಯೋಚಿಸುವವನು. ಅಜ್ಜ ಮಗ ಮತ್ತು ಮೊಮ್ಮಗ ಹೀಗೆ ಮೂರು ತಲೆಮಾರುಗಳನ್ನು ಒಳಗೊಳ್ಳುವ ಸಂಘರ್ಷದಲ್ಲಿ ಬಿಚ್ಚಿ ಕೊಳ್ಳುವ ಕಥೆ ಇದು. ಪೂರ್ವದ ಒಳ್ಳೆಯದರ ಜೊತೆಗೆ ಪಶ್ಚಿಮದ ಒಳ್ಳೆಯದನ್ನೂ ಅಳವಡಿಸಿ ಕೊಳ್ಳಬೇಕು, ಇದಮ್ಮಿಥ್ಥಂ ಎನ್ನುವುದು ಬದುಕಿನ ಧೋರಣೆಯಾಗಬಾರದೆಂಬುದನ್ನು ನವಿರಾಗಿ ಹೇಳುತ್ತ ಬಿಚ್ಚಿಕೊಳ್ಳುವ ಯೋಚನೆಗೆ ಹಚ್ಚುವ ಸತ್ವಪೂರ್ಣ ಕಥಾನಕ.

ಅನಂತ ಮೂರ್ತಿಯವರ ಇನ್ನೊಂದು ಪ್ರಮುಖ ಕಥೆ ‘ಮೌನಿ’. ಇದು ಘಟ್ಟದ ಕೆಳಗಿನಿಂದ ಮೇಲೆ ಮಲೆನಾಡಿಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳುವ ಎರಡು ಭಿನ್ನ ಗುಣ ಸ್ವಭಾವಗಳ ವ್ಯಕ್ತಿಗಳಾದ ಅಪ್ಪಣ್ಣ ಭಟ್ಟ ಮತ್ತು ಕುಪ್ಪಣ್ಣ ಭಟ್ಟರ ಬದುಕಿನ ಮೂಲಕ ಹರಡಿಕೊಳ್ಳುವ ಕಥಾನಕ. ಕುಪ್ಪಣ್ಣ ಸತ್ಯವನ್ನು ಮುಖಕ್ಕೆ ರಾಚುವಂತೆ ಹೇಳುವ ಕಠೋರ ಸ್ವಭಾವದ ನಿಷ್ಟುರ ವ್ಯಕ್ತಿ ಹೀಗಾಗಿ ಈತ ಜನಪ್ರಿಯನಲ್ಲ. ಅಪ್ಫಣ್ಣ ಭಟ್ಟರದು ಇದಕ್ಕೆ ತದ್ವಿರುದ್ಧವಾದ ಸ್ವಭಾವ ಮತ್ತು ನಡವಳಿಕೆಯ ವ್ಯಕ್ತಿ. ಇಬ್ಬರೂ ಮಠದ ಜಮೀನನ್ನು ಗೇಣಿಗೆ ಪಡೆದು ಬದುಕು ಪ್ರಾರಂಭಿಸಿದವರು. ಕುಪ್ಪಣ್ಣ ಭಟ್ಟರದು ಕಷ್ಟ ಕೋಟಲೆಯ ಬದುಕು. ಇವರಿಗೆ ಯಾವಾಗಲೂ ಕಾಯಿಲೆಯಿಂದ ನರಳುವ ಹೆಂಡತಿ ಮತ್ತು ಮದುವೆಗೆ ಬೆಳೆದು ನಿಂತ ಮಗಳು ಹಾಗೆಯೆ ಸಿಡಿಮಿಡಿ ಸ್ವಭಾವದ ನೇರ ನಡೆ ನುಡಿಯ ವಿಧವೆ ಅಕ್ಕ ಇದ್ದಾರ. ಆದರೆ ಬದುಕಿನ ಪಯಣದಲ್ಲಿ ಸೋತು ನಿಂತಿರುವ ಕುಪ್ಪಣ್ಣ ಭಟ್ಟರು ಬಹುತೇಕ ಮೌನಿ. ಆದರೆ ಬಾಯಿ ತೆರೆದರೋ ಬೆಂಕಿಯುಂಡೆಗಳನ್ನುಗುಳುವ ಅತೃಪ್ತ. ಇವರಿಗೆ ತಾವು ಉಳುವ ಭೂಮಿಯ ಗೇಣಿಯನ್ನು ಸಹ ಮಠಕ್ಕೆ ಕಟ್ಟಲು ಆಗಿಲ್ಲ.

ಅಪ್ಪಣ್ಣ ಭಟ್ಟರದು ಜಗದ ರೀತಿ ನೀತಿ ತಿಳಿದ ಪರಿಸರವನ್ನು ಅನುಕೂಲಕ್ಕೆ ಬಳಸಿಕೊಂಡ ಎಲ್ಲ ರೀತಿಯಿಂದಲೂ ಯಶಸ್ವಿಯಾದ ಬದುಕು. ಕಾಲ ಕಾಲಕ್ಕೆ ತಾನು ಉಳುವ ನೆಲದ ಗೇಣಿಯನ್ನು ಮಠಕ್ಕೆ ಸಲ್ಲಿಸುತ್ತ ಬಂದಿದ್ದಾರೆ. ಆದರೆ ಅವರಿಗೆ ಕುಪ್ಪಣ್ಣ ಭಟ್ಟರನ್ನು ಕಂಡರೆ ಆಗುವುದಿಲ್ಲ. ಯಾಕೆಂದರೆ ಅವರ ನೇರ ನಡೆ ನುಡಿಗಳು ತನಗೆ ಜೀ ಹುಜೂರ್ ಎನ್ನದ ಸ್ವಭಾವ, ಗೇಣಿ ಕೊಡುವಲ್ಲಿ ತಪ್ಪಿದ ಕುಪ್ಪಣ್ಣ ಭಟ್ಟರ ಕುರಿತು ಮಠಕ್ಕೆ ದೂರು ಹೇಳಿ ಅವರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಾರೆ. ಅಪ್ಪಣ್ಣ ಭಟ್ಟರ ಕುತಂತ್ರ ಕುಪ್ಪಣ್ಣ ಭಟ್ಟರ ತಮ್ಮದೆ ಸರಿ ಎನ್ನುವ ನಿಲುವು ಅವರು ನಿಂತ ನೆಲಕ್ಕೆ ವಿದಾಯ ಹೇಳುವ ಪ್ರಸಂಗ ಬರುತ್ತದೆ. ಆದರೂ ಜೀವನ ಸಂಗ್ರಾಮದಲ್ಲಿ ಸೋತ ಕುಪ್ಪಣ್ಣ ಭಟ್ಟರು ಮೌನಿಯಾಗಿ ಮನೆಯ ಮುಂದೆ ಗರ ಬಡಿದವರಂತೆ ಕುಳಿತು ಕೊಳ್ಳುತ್ತಾರೆ. ಅವರು ಉಳುಮೆ ಮಾಡುತ್ತಿದ್ದ ಜಮೀನನ್ನು ಮಠ ಅಪ್ಫಣ್ಣ ಭಟ್ಟರಿಗೆ ಗೇಣಿಗೆ ಕೊಡುತ್ತದೆ. ಕುಪ್ಪಣ್ಣ ಭಟ್ಟರ ಮನೆಯ ಹತ್ತಿರ ಬರುವ ಅಪ್ಪಣ್ಣ ಭಟ್ಟರಿಗೆ ಮನೆಯ ಮುಂದೆ ಮೌನವಾಗಿ ಕುಳಿತ ಕುಪ್ಪಣ್ಣ ಭಟ್ಟರು ಕಾಣುತ್ತಾರೆ. ಅವರೊಂದಿಗೆ ಮಾತಿಗಿಳಿದು ಉಪಾಯವಾಗಿ ಅವರನ್ನು ಅಲ್ಲಿಂದ ಹೊರಡಿಸಲು ಸಾಮೋಪಾಯ ಬೇಧೋಪಾಯಗಳ ಸಹಿತ ಎಲ್ಲ ವರಸೆಗಳನ್ನು ಅಪ್ಪಣ್ಣ ಭಟ್ಟರು ಉಪಯೋಗಿಸುತ್ತಾರೆ. ಅದೇ ಮೌನದಲ್ಲಿ ಕುಪ್ಪಣ್ಣ ಭಟ್ಟರು ಕುಳಿತಿರುತ್ತಾರೆ.

ಎರಡು ಮೌಲ್ಯಗಳ ಜೀವನ ಕ್ರಮವನ್ನು ಎಲ್ಲ ಸೂಕ್ಷ್ಮ ಒಳ ನೋಟಗಳಿಂದ ತೋರಿಸುತ್ತ ಹೋಗುವ ಲೇಖಕರ ಕಥನ ಕ್ರಮ ಹಲವಾರು ದಿಕ್ಕುಗಳಲ್ಲಿ ಜೀವನದ ಮೌಲ್ಯಗಳ ಹುಡುಕಾಟ ಒಂದು ಬಹುಶೃತ ಬರವಣಿಗೆಯ ಕ್ರಮವಾಗಿ ಓದುಗನ ಮನ ತಟ್ಟುತ್ತದೆ. ಹೀಗಾಗಿ ಈ ಕಥೆಯು ಮೂಲಕ ಮೌನ ಹೆಚ್ಚು ಮಾತನಾಡುತ್ತದೆ. ಮೌನದ ಶಕ್ತಿ ಮಾತಿಗಿಲ್ಲ ಎಂಬುದನ್ನು ಮನದಟ್ಟು ಮಾಡಿ ಕೊಡುತ್ತದೆ. ಅನಂತಮೂರ್ತಿಯವರ ಒಳಗೊಬ್ಬ ಮಾನವ ಬದುಕಿನ ಸತ್ಯ ಶೋಧಕನೊಬ್ಬನಿದ್ದಾನೆ. ಹೀಗಾಗಿ ಅವರು ಗ್ರಾಮೀಣ ನಗರ ದೇಶ ಕಾಲಗಳ ಮೀರಿ ವಿಶ್ವ ವ್ಯಾಪಕ ಸಾಂಸ್ಕøತಿಕ ಚಿಂತಕರಾಗಿ ಕಂಡು ಬರುತ್ತಾರೆ. ಹೀಗಾಗಿ ಸಾಹಿತಿಗೆ ಸಾವುಂಟು ಆದರೆ ಆತನ ಕೃತಿಗಳಿಗೆ ಸಾವಿಲ್ಲ, ಅವು ಚಿರಂತನ ಹಾಗೆಯೆ ನಿತ್ಯ ನೂತನವಾದುವು ಎನಿಸಿಕೊಳ್ಳುತ್ತವೆ.

ಚಿತ್ರಕೃಪೆ; ವಿಕಿಪೀಡಿಯದಿಂದ ಆಯ್ದದ್ದು

(ಮುಂದುವರಿದುದು)

*

Rating
No votes yet