ಸಂಸ್ಕೃತದ ಸುತ್ತ ತಪ್ಪು ತಿಳಿವಿನ ಹುತ್ತ

Submitted by hamsanandi on Sat, 01/23/2016 - 01:37
ಚಿತ್ರ

ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.
 
ಚೇತನಾ ಅವರು ಸೂಫಿ ತತ್ತ್ವಗಳನ್ನು ಚೆನ್ನಾಗಿ ಓದಿಕೊಂಡಿರುವುದರಿಂದ, ಅದರ ಉಲ್ಲೇಖದೊಂದಿಗೆ ತಮ್ಮ ಬರಹವನ್ನು ಆರಂಭಿಸುತ್ತಾರೆ. ನನಗೆ ಸೂಫಿ ತತ್ತ್ವಗಳ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದಿರುವುದರಿಂದ ಕೇವಲ ಆ ಭಾಗದ ಕೊನೆಯ ಎರಡು ಸಾಲುಗಳ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಈ ಇಡೀ ಬರಹದಲ್ಲಿ,  ಚೇತನಾ ಅವರ ಬರಹದ ಸಾಲುಗಳನ್ನು ಐಟಲಿಕ್ಸ್ ನಲ್ಲಿ, ನೇರಳೆ ಬಣ್ಣದಲ್ಲಿ ತೋರಿಸಿದ್ದೀನಿ:
 
ಚೇತನಾ ಹೀಗನ್ನುತ್ತಾರೆ:
 
"ಚಿಕ್ಕ ಮಗು ತನ್ನದೇ ಭಾಷೆಯಲ್ಲಿ ಎಂಥದೋ ಹೇಳತ್ತೆ. ತಾಯಿ ಹೃದಯದ ಯಾರಾದರೂ ಅದನ್ನ ಮಗುವಿನ ಭಾವದಲ್ಲೇ ಗ್ರಹಿಸಿ ಸ್ಪಂದಿಸ್ತಾರೆ. ಬೀದಿ ನಾಯಿ ಬೊಗಳುವಾಗ ಅದರ ಏರಿಳಿತ ಗ್ರಹಿಸಿಯೇ ಬರುತ್ತಿರುವವರು ಪರಿಚಿತರೋ ಅಪರಿಚಿತರೋ ಅನ್ನೋದು ತಿಳಿದುಹೋಗುತ್ತೆ. ಎಂತೆಂಥ ವ್ಯವಹಾರಗಳೆಲ್ಲ ಬರೀ ಕಣ್ಣ ಕದಲುವಿಕೆಗಳಲ್ಲಿ, ಗಂಟಲ ಹೊರಳಿನಲ್ಲಿ, ಆಂಗಿಕ ಚಲನೆಯಲ್ಲಿ ನಿರ್ಧಾರವಾಗಿ ನಡೆದುಹೋಗ್ತವೆ. ಹೀಗಿರುವಾಗ…ಹೀಗೆಲ್ಲ ಇರುವಾಗ ಕೆಲವರ ತರ್ಕ ನಗು ತರಿಸುತ್ತೆ. ಅದು ಹೇಗೆ ಜ್ಞಾನವನ್ನ ಒಂದು ಭಾಷೆಗೆ ಕಟ್ಟಿಹಾಕುತ್ತಾರೆ? "
 
ನಿಜವೇ. ಮಗುವಿನ ಮಾತು ತಾಯಿಗೇ ಆಡದಿರುವ ಪದಗಳಲ್ಲೇ ಅರ್ಥವಾಗುತ್ತೆ. ಆದರೆ ಅದರ ವ್ಯಾಪ್ತಿ ಎಷ್ಟು? ಅದರಲ್ಲಿ ಏನೇನನ್ನು ಹೇಳಬಹುದು? ಇಷ್ಟಕ್ಕೂ, ಜ್ಜಾನ ಒಂದು ಭಾಷೆಗೆ ಕಟ್ಟಿಹಾಕಲ್ಪಡದೇ ಇರುವಂಥದ್ದಿರಬಹುದು. ಆದರೆ, ಅದರ ಹಿನ್ನೆಲೆಯ ಕಾರಣದಿಂದ ಒಂದು ಭಾಷೆಯಲ್ಲಿ ಒಂದು ವಿಷಯದ ಬಗ್ಗೆ ಹೆಚ್ಚು ಅಥವಾ ಕಡಿಮೆ ತಿಳಿವು ಇದ್ದರೆ, ಅದು ಭಾಷೆಯ ಮಿತಿಯೂ ಅಲ್ಲ, ಹೆಚ್ಚುಗಾರಿಕೆಯೂ ಅಲ್ಲ. ಅದೊಂದು ಸತ್ಯ ಅಷ್ಟೇ. ಚಿಕ್ಕ ವಯಸ್ಸಿನಿಂದ ಸಂಗೀತ ಕಲಿತು ಹಾಡುತ್ತಿರುವ ಒಬ್ಬ ಕಲಾವಿದರಿಗೆ ಅದರಲ್ಲಿ ಒಬ್ಬ ಸಾಮಾನ್ಯರಿಗಿಂತ ತಿಳಿವು ಹೆಚ್ಚು ಇದ್ದರೆ, ಅದೊಂದು ಸತ್ಯ. ಅದನ್ನು ಆ ಕಲಾವಿದರ ಹೆಚ್ಚುಗಾರಿಕೆ ಅಂತ ಬೇಕಾದರೂ ತಿಳಿಯಿರಿ, ಅನುಭವ ಅಂತ ಬೇಕಾದರೂ ತಿಳಿಯಿರಿ - ಆದರೆ ಅವರಲ್ಲಿರುವ ತಿಳಿವಿಂದ ಬೇರೆಯವರಿಗೆ (ಅಂದರೆ ಸಂಗೀತ ಆಸಕ್ತಿ ಉಳ್ಳವರಿಗೆ) ಪ್ರಯೋಜನ ಇದೆ ಅನ್ನುವುದಂತೂ ದಿಟ. ಹಾಗಿದ್ದಮೇಲೆ, ಸಾವಿರಾರು ವರ್ಷ, ನಮ್ಮ ದೇಶದಲ್ಲೆ ಬೇರೆ ಬೇರೆ ಜನಪದರಲ್ಲಿ, ಬುಡಕಟ್ಟುಗಳಲ್ಲಿ, ಜನಸಾಮಾನ್ಯರಲ್ಲಿ, ತಿಳಿದವರಲ್ಲಿ ಇದ್ದ ಬಗೆ ಬಗೆಯ ಜ್ಞಾನವನ್ನು ಬರೆದಿಟ್ಟ ಕಾರಣದಿಂದ "ಸಂಸ್ಕೃತದಲ್ಲಿ ಅಪಾರ ವಾದ ಜ್ಞಾನಭಂಡಾರವಿದೆ" ಎಂಬ ಮಾತನ್ನು ಗೊತ್ತಿದ್ದೂ ಅದನ್ನು ನಿರಾಕರಿಸುವುದು, ಯಾವ ಜಾಣತನ? ಜ್ಞಾನ ಭಂಡಾರವನ್ನು ಭಾಷೆಯೊಂದಕ್ಕೆ ಕಟ್ಟುಹಾಕುವ ಅಗತ್ಯವಿಲ್ಲ. ಆದರೆ ನಮ್ಮದಲ್ಲದ ಭಾಷೆಯಲ್ಲೂ, ಜ್ಞಾನಭಂಡಾರವಿದ್ದರೆ ಅದರಲ್ಲಿ ಮೊಗೆದುಕೊಂಡು, ಕಾಳನ್ನ ಇಟ್ಟುಕೊಂಡು ಜೊಳ್ಳನ್ನ ಎಸೆಯೋದು ಒಳ್ಳೇದೋ? ಅದರ ಬದಲು, ಕೇವಲ ಇನ್ನೊಬ್ಬರ ತರ್ಕವನ್ನು ಅಲ್ಲಗಳೆಯಬೇಕೆಂದು ಅದರಲ್ಲಿ ನಮಗೆ ಸಿಗಬೇಕಾದ್ದನ್ನೂ ಎಸೆಯುವುದು ಒಳ್ಳೇದೋ?
 
“ಸಂಸ್ಕೃತ ಯಾವತ್ತೂ ತಾರತಮ್ಯ ಇಟ್ಟುಕೊಂಡೇ ಬೆಳೆದ ಭಾಷೆ. ಬಹುಶಃ ಇಂತಿಂಥವರು ಇದನ್ನು ಬಳಸಬಾರದು ಅಂತ ನಿರ್ಬಂಧವಿರಿಸಿಕೊಂಡಿದ್ದ ಭಾಷೆ ಜಗತ್ತಲ್ಲಿ ಇದೊಂದೇ ಅನ್ನಿಸತ್ತೆ. ವೇದವನ್ನ ಸಂಸ್ಕೃತದಲ್ಲಿ ಬರೆದಿಟ್ಟರು, ಶೂದ್ರರು ಓದಬಾರದು ಅಂದರು. ಒಂದು ಅಪರೂಪದ ಸಾಮಾಜಿಕ – ಆಧ್ಯಾತ್ಮಿಕ ಚಳವಳಿಯನ್ನೇ ಹುಟ್ಟುಹಾಕಿದ ಶ್ರೇಷ್ಠ ಸಾಹಿತ್ಯವೆಂದರೆ ಅದು ವಚನ ಸಾಹಿತ್ಯ. ಇಂಥಾ ಉತ್ಕೃಷ್ಟ ಸಾಹಿತ್ಯ ರಚಿಸಿದ ಮೋಚಿ, ಮಡಿವಾಳ, ಮೇಟಿಯೇ ಮೊದಲಾದವರೆಲ್ಲ ಸಂಸ್ಕೃತ ಓದಿಕೊಂಡಿದ್ದರಾ? ನಮ್ಮ ಅದೆಷ್ಟು ಜನಪದ ಹಾಡುಗಳಲ್ಲಿ, ಬುಡಕಟ್ಟು ಕಾವ್ಯಗಳಲ್ಲಿ ಅರ್ಥಶಾಸ್ತ್ರ, ನ್ಯಾಯಶಾಸ್ತ್ರಗಳು ಅಡಕವಾಗಿಲ್ಲ?”
 
ವೇದಗಳನ್ನು ಸಂಸ್ಕೃತದಲ್ಲಿ ಬರೆದಿಟ್ಟರು. ವಚನಗಳನ್ನು ಕನ್ನಡದಲ್ಲಿ ಬರೆದಿಟ್ಟರು. ಕುರುಳ್ ಅನ್ನು ತಮಿಳಲ್ಲಿ ಬರೆದಿಟ್ಟರು. ಯಾಕೆ? ಯಾಕಂದರೆ ಅದನ್ನು ಬರೆದವರು ಆಯಾ ಭಾಷೆಯಲ್ಲಿ ಮಾತನಾಡುವವರಾಗಿದ್ದರು. ತಿರುವಳ್ಳುವರ್ ಏಕೆ ಸಂಸ್ಕೃತದಲ್ಲಿ ಬರೀಲಿಲ್ಲ? ಸರ್ವಜ್ಹ ತಮಿಳಿನಲ್ಲಿ ಏಕೆ ಬರೀಲಿಲ್ಲ ಅನ್ನುವಷ್ಟೇ ನಿರರ್ಥಕ ಈ ವಾದ. ಇನ್ನು "ಭಾಷೆ ತಾರತಮ್ಯ ಇಟ್ಟುಕೊಂಡೇ ಬೆಳೆದಿದೆ" ಎನ್ನುವ ವಾದವನ್ನು ನೀವಿಡುತ್ತಿದ್ದೀರಾ  - ಆದರೆ ಹಲ ಬಗೆಯ ಜನರು ಸಂಸ್ಕೃತದಲ್ಲಿ (ಇನ್ನೂ ಆ ಭಾಷೆಯಲ್ಲಿ ಬರೆಯುವ ಕಾಲವಿದ್ದಾಗ), ಬರೆದಿರುವುದರ ಸಾಕ್ಷಿಯೇ ಇರುವಾಗ ತಾರತಮ್ಯ ಎನ್ನುವುದಕ್ಕೇನು ಅರ್ಥವಿದೆ? ಹೀಗೆ ಹೇಳುವುದರ ಮರ್ಮ ಏನು?
 
ಅಷ್ಟಕ್ಕೂ ನಾವೇ ನೋಡುವಂತೆ ಕನ್ನಡನಾಡಿನ ಹಲವು ಅರಸರನ್ನೂ ಸೇರಿದಂತೆ, ಹಿಂದಿನ ಸಾಹಿತಿಗಳು ಸಂಸ್ಕೃತದಲ್ಲಿಯೂ, ತೆಲುಗಿನಲ್ಲೂ, ಕನ್ನಡಲಲ್ಲೂ ಬರೆದಿದ್ದನ್ನು ನಾವು ನೋಡಬಹುದು - ಏಕೆ ಬೇರೆ ಬೇರೆ ಭಾಷೆಗಳಲ್ಲಿ ಬರೆದರು? ಕನ್ನಡವೊಂದರಲ್ಲೇ ಬರೆದರೆ ಆಗುತ್ತಿರಲಿಲ್ಲವೇ? ಏನಿದ್ದರೂ ಅದು ಆಯಾ ಬರಹಗಾರನಿಗೆ ಯಾರಯಾರನ್ನ ಮುಟ್ಟಬೇಕು ಎಂದು ಆಸಕ್ತಿಯಿತ್ತೋ, ಯಾವ ಭಾಷೆಯಲ್ಲಿ ಬರೆದರೆ ಹೆಚ್ಚಿನ ಜನರನ್ನು ತಲುಪುವುದು ಸಾಧ್ಯ ಎನ್ನಿಸಿತೋ, ಮತ್ತೆ ಯಾವ ಭಾಷೆಯಲ್ಲಿ ಆಯಾ ಸಾಹಿತಿಗೆ ಬರೆಯುವ ಅವಕಾಶವೂ, ಪರಿಣತಿಯೂ ಇತ್ತೋ,  ಅದಕ್ಕೆ ಅನುಗುಣವಾದ ಭಾಷೆಯನ್ನೋ/ಮಾಧ್ಯಮವನ್ನೋ  ಅವರು ಬಳಸಿಕೊಂಡರು. ಅಷ್ಟೇ ತಾನೇ?
 
ಇದೀಗ, ಚೇತನಾ ಅವರು ಬರೆದ ಬರಹ ಕನ್ನಡದ ಬದಲು ಇಂಗ್ಲಿಷ್ ನಲ್ಲಿದ್ದರೆ, ಅದು ಇನ್ನೂ ಎಷ್ಟೋ ಹೆಚ್ಚಿನ ಜನರನ್ನು ತಲುಪುತ್ತಿತ್ತೇನೋ ಅನ್ನೋದು ನನ್ನ ಹವಣಿಕೆ. ಎಷ್ಟೋ ಬಾರಿ, ನಾನೂ ಕನ್ನಡಕ್ಕಿಂತ ಇಂಗ್ಲಿಷ್ ನಲ್ಲಿ ಬರೆದರೆ ಹೆಚ್ಚು ಜನರನ್ನು ತಲುಪುತ್ತೇನೆ ಎನ್ನಿಸಿದಾಗ ನನಗೂ ಇಂಗ್ಲಿಷ್ ನಲ್ಲೇ ಬರೆಯೋ ಹಾಗಿದ್ದರೆ ಚೆನ್ನಾಗಿತ್ತು ಅನ್ನಿಸೋದುಂಟು.  ಆದರೆ ಚೇತನಾ ಅವರೇಕೆ ಕನ್ನಡದಲ್ಲೇ ಬರೆದರು? ಏಕೆಂದರೆ ಅವರಿಗೆ ಕನ್ನಡದಲ್ಲಿ ಬರವಣಿಗೆಯ ಮೇಲೆ ಹೆಚ್ಚಿನ ಹಿಡಿತ ಇರಬಹುದು, ಅಥವಾ ಕನ್ನಡದಲ್ಲೇ ಬರೆಯುವ ಆಸಕ್ತಿ ಇಂಗ್ಲಿಷ್ ನಲ್ಲೋ ಅಥವಾ ಅವರು ಅಷ್ಟೇ ಮಟ್ಟಿಗೆ ಪಳಗಿರಬಹುದಾದ ಇನ್ನೊಂದು ಭಾಷೆಯಲ್ಲೋ ಬರೆಯುವ ಆಸಕ್ತಿಗಿಂತ ಹೆಚ್ಚಿರಬಹುದು, ಇನ್ನೂ ಕೂದಲು ಸೀಳುತ್ತಾ ಹೋದರೆ, ಮಲೆನಾಡಿನವರಾದ ಚೇತನಾ ಅವರು ತಮ್ಮ ಬರಹಕ್ಕೆ ಬಳಸಿದ್ದು ಮಲೆನಾಡಿನ, ತೀರ್ಥಹಳ್ಳಿಯ ಕನ್ನಡವಲ್ಲ, ಅದರ ಬದಲಿಗೆ ಯಾವುದನ್ನ ನಾವು "ಸ್ಟಾಂಡರ್ಡ್" ಕನ್ನಡ ಎನ್ನುತ್ತೇವೋ, ಅದನ್ನು. ಅಲ್ಲವೆ? ಈಗ ಇದನ್ನೂ ನಾವು ತಾರತಮ್ಯ ಎನ್ನಲಾಗುತ್ತದೆಯೇ? ಪತ್ರಿಕೆಯ ಕನ್ನಡ ಮೇಲು, ಮಲೆನಾಡ  ಕನ್ನಡ ಕೀಳು ಅಂತಾಯ್ತೇ ಇಲ್ಲವಲ್ಲ?  ಸಂಸ್ಕೃತ ಪ್ರಾಕೃತಗಳು ಬೇರೆ ಭಾಷೆಗಳೇ ಅಲ್ಲ – ಒಂದೇ ಭಾಷೆಯ ಹಲವು ರೂಪಗಳು ಅಷ್ಟೇ. ಈಗ ಉದಾಹರಣೆಗೆ ನಾನು ಹೋಗುತ್ತೇನೆ (ಮಂಗಳೂರು ಕನ್ನಡ/ಪತ್ರಿಕೆ ಕನ್ನಡ) ವಾದರೆ , ನಾನು ಹೋಗ್ತೀನಿ ( ಹಳೇ ಮೈಸೂರು ಕನ್ನಡ), ನಾ ವೋಯ್ತೀನಿ  (ಹಳೇ ಮೈಸೂರು ಹಳ್ಳಿಯ ಕಡೆ) - ಹೀಗಿದ್ದರೂ ಬರೆಯುವಾಗ ನಾನು ಹೋಗುತ್ತೇನೆ ಎಂಬಂತಹ ರೂಪಗಳೇ ಇರುವುದನ್ನು ನಾನು ಚೇತನಾ ಅವರಿಗೆ ಹೊಸದಾಗಿ ತೋರಿಸಿಕೊಡಲೂಬೇಕಿಲ್ಲ. ಮತ್ತೆ ಈ ಎಲ್ಲ ರೂಪಗಳೂ ಕನ್ನಡವೇ, ಹೊರತು ಬೇರೆ ಬೇರೆ ಭಾಷೆಗಳಲ್ಲ ಎಂಬ ಸಮಜಾಯಿಶಿಯನ್ನೂ ತೋರಿಸಬೇಕಿಲ್ಲ ಎಂದುಕೊಂಡಿದ್ದೇನೆ.
 
ಅಲ್ಲದೆ ’ಅಗ್ನಿ’ ಪತ್ರಿಕೆಯಲ್ಲಿ ಪ್ರಕಟವಾದ ಬರಹವನ್ನು ಚೇತನಾ ಅವರು ಫೇಸ್ ಬುಕ್ ನಲ್ಲಿ ಕೂಡ ಪ್ರಕಟಿಸಿದ್ದು ಏಕೆ? ಅದರಲ್ಲಿ ಯಾವ ತಪ್ಪೂ ಇಲ್ಲ! – ಅದರ ಉದ್ದೇಶ ಹೆಚ್ಚಿನ ಜನರಿಗೆ ತಲುಪಲಿ ಎಂದಲ್ಲವೆ? ಬರೀ ಮುದ್ರಿತ ಪತ್ರಿಕೆಯಲ್ಲಿ ಬಂದಿದ್ದರೆ ನನಗೆ ಅವರ ಬರಹವನ್ನು ಓದಲೂ ಸಿಗುತ್ತಿರಲಿಲ್ಲ ಅನ್ನುವುದೂ ಅಷ್ಟೇ ನಿಜ.  ಹಾಗಿದ್ದರೆ, ಸಂಸ್ಕೃತದಲ್ಲಿ ’ಜ್ಞಾನ ಭಂಡಾರ’ ಇದೆ ಎಂದು ಎನ್ನಿಸಿದರೆ, ಹಿಂದಿನ ಶತಮಾನಗಳಲ್ಲಿ - ಈ ಭಾಷೆಯಲ್ಲಿ ಬರೆದರೆ ತಮ್ಮ ಕೆಲಸ ಹೆಚ್ಚಿನ ಜನರನ್ನು ತಲುಪುಪುತ್ತೆ, ಬಹುಕಾಲ ನಿಲ್ಲುತ್ತೆ ಅನ್ನುವುದೊಂದೇ ಬಹು ಮುಖ್ಯ ಕಾರಣ.
 
ಇನ್ನು ಮಡಿವಾಳ ಮೋಚಿ ರೈತರು ಸಂಸ್ಕೃತ ಓದಿಕೊಂಡಿದ್ದರಾ ಇಲ್ವಾ ಅನ್ನುವ ಪ್ರಶ್ನೆಗೆ ಖಚಿತ ಉತ್ತರ ನನಗೆ ಗೊತ್ತಿಲ್ಲ. ಆದರೆ ಇವತ್ತು ಯಾರನ್ನು "ಕೆಳ ತುಳಿಯಲ್ಪಟ್ಟವರು" ಎಂದು ಈಗ ಕರೆಯುತ್ತಾರೋ ಅಂತಹವರೇ ಸಂಸ್ಕೃತದಲ್ಲಿ ಬರೆದಿರುವುದು ಉಂಟು. ಸಂಸ್ಕೃತವನ್ನು ಚೆನ್ನಾಗಿ ಓದಿಕೊಂಡಿರುವ ಚೇತನಾ ಅವರಿಗೆ ಈ ವಿಷಯ ತಿಳಿಯದ್ದಲ್ಲ ಅಂದುಕೊಂಡಿದ್ದೇನೆ. ಇನ್ನು ಕನ್ನಡದ ವಚನ ಸಾಹಿತ್ಯ ಪೂರ್ತಿ ಸ್ವಯಂಭೂ ಆಗಿ ಉದ್ಭವಿಸಿದ್ದೇನೂ ಅಲ್ಲ. ಕನ್ನಡದ ಉಪನಿಷತ್ತುಗಳು ಎಂದೇ ವಚನಗಳನ್ನು ಕರೆಯುವುದೂ ಉಂಟಲ್ಲ? ಎಲ್ಲಾ ವಚನಕಾರರೂ ಸಂಸ್ಕೃತವನ್ನು ಓದಿಕೊಂಡಿಲ್ಲದಿದ್ದಿರಬಹುದು. ಆದರೆ ಹಲವರು ಓದಿಕೊಂಡಿದ್ದೂ, ಅದರಿಂದ ಪ್ರಭಾವಿತರಾದದ್ದೂ ನಿಜವೇ. ಅಷ್ಟಕ್ಕೂ ಇನ್ನೊಬ್ಬರಿಂದ ಪ್ರಭಾವಿತರಾದ ಮಾತ್ರಕ್ಕೆ  ಅದರಿಂದ ವಚನಕಾರರ ಹೆಚ್ಚುಗಾರಿಕೆಗೆ ಧಕ್ಕೆಬರುವುದೂ ಇಲ್ಲ. ಪ್ರಪಂಚದಲ್ಲಿ ಬಹುಶಃ ಎಲ್ಲ ಬರಹಗಾರರೂ ಇನ್ನೊಬ್ಬರಿಂದ ಪ್ರಭಾವಿತರಾದವರೇ!
 
ಇನ್ನು ಎಷ್ಟು ಜನಪದ ಹಾಡುಗಳಲ್ಲಿ ಅರ್ಥ ಶಾಸ್ತ್ರ, ಸ್ಯಾಯ ಶಾಸ್ತ್ರಗಳು ಅಡಕವಾಗಿಲ್ಲ  ಎನ್ನುವುದು ಸರಿಯಾದ ಮಾತೇ. ಸಂಸ್ಕೃತದಲ್ಲಿ ೧೨ ನೇ ಶತಮಾನದಲ್ಲಿ ಒಳ್ಳೇ ರಚನೆಗಳಾಗಿದ್ದವು ಎಂದ ಮಾತ್ರಕ್ಕೆ, ಕನ್ನಡದಲ್ಲಿ, ಇಂಗ್ಲಿಷ್ ನಲ್ಲಿ, ಅರೇಬಿಕ್ ನಲ್ಲಿ ಅಥವಾ ಇನ್ನೊಂದು ಮೂರನೇ ಭಾಷೆಯಲ್ಲಿ ಒಳ್ಳೇ ರಚನೆಗಳಾಗಿರಬಾರದು ಎಂದೇನೂ ಇಲ್ಲ. “ಸತ್ಯವೇ ಭಗವಂತನೆಂಬ” ನೀತಿಯ ಸಾರವಿರುವ ಪುಣ್ಯಕೋಟಿಯ ಕಥೆ ಕನ್ನಡದಲ್ಲಿದೆ. ಇದನ್ನು ಬರೆದವರು ಯಾರು ಅಂತಲೂ ಗೊತ್ತಿಲ್ಲ. ಹಾಗಂತ ಅದರ ಬೆಲೆಯೇನೂ ಕಮ್ಮಿ ಆಗೋದಿಲ್ಲ, ಎಲ್ಲರೂ ಅದನ್ನ ಒಪ್ಪಿದ್ದಾರೆ. ಅದು ಹೇಳುವ ಸಾರವನ್ನು ಗ್ರಹಿಸಿದ್ದಾರೆ, ಇನ್ನು ಕನ್ನಡಕ್ಕೆ ಪುಣ್ಯಕೋಟಿ ಕಥೆಯಿದೆ. ತಮಿಳಿನಲ್ಲಿ ಇಲ್ಲ. ಆದರೆ ತಮಿಳಿನಲ್ಲಿ ಇನ್ನೊಂದು ಅಷ್ಟೇ ಒಳ್ಳೇ, ಅಥವಾ ಅದಕ್ಕೂ ಬೇರೆಯಾದ ನೀತಿಯಿರುವ  ಕಥೆ ಇರಬಾರದೆಂದೇನಿಲ್ಲವಲ್ಲ!  ಈಗ ತಮಿಳರೂ ಪುಣ್ಯಕೋಟಿ ಕಥೆಯನ್ನ ಓದಿಕೊಂಡರೆ, ಅವರಿಗೆ ಒಂದು ಹೊಸ ತಿಳಿವು ತಿಳಿದಂತಾಗಬಹುದು ಅನ್ನುವುದನ್ನು ತಳ್ಳಿ ಹಾಕೋದಕ್ಕಾಗುತ್ತದೆಯೇನು? (ಇದರ ಜೊತೆಗೆ ಇದೇ ಪುಣ್ಯಕೋಟಿಯ ಕಥೆ  ಸಂಸ್ಕೃತದ ಪದ್ಮ  ಪುರಾಣದಲ್ಲೂ ಇದೆಯೆಂದೂ ಕೇಳಿದ್ದೇನೆ. ಪುರಾಣವೇ ಜನಪದ ಕಥೆಯಿಂದ ತೆಗೆದುಕೊಂಡಿತೋ, ಜನಪದವೇ ಪುರಾಣಕಥೆಯನ್ನು ಕನ್ನಡಕ್ಕೆ ತಂದಿತೋ ಖಚಿತವಾಗಿ ನನಗೆ ತಿಳಿದಿಲ್ಲ). 
 
ಇದೇ ರೀತಿ. ಒಬ್ಬ ಕನ್ನಡಿಗನಾಗಿ, ಮತ್ತೆ ಸಾಮಾನ್ಯ ಸಂಸ್ಕೃತದ ಓದುಗನಾಗು ನನಗೆ ಸಿಗುವುದು ಅಂತಹ ಹೊಸ ತಿಳಿವು ಅಥವಾ ನಲಿವು ಅಷ್ಟೇ. ಅಲ್ಲದೆ ನನಗೆ ಆಸಕ್ತಿ ಇರುವ ಹಲವು ವಿಷಯಗಳಲ್ಲಿ ಹೆಚ್ಚಿನ ಮಾಹಿತಿ ನನಗೆ ಸಂಸ್ಕೃತದಲ್ಲಿ ಸಿಗುತ್ತೆ ಅನ್ನುವುದೇ ನನಗೆ ಆ ಭಾಷೆಯನ್ನು ಓದುವ ಕಾರಣ. ಹಾಗಂತ ಪ್ರತಿಯೊಬ್ಬರೂ ಓದಬೇಕಾಗೂ ಇಲ್ಲ. ಸಂಸ್ಕೃತ ಭಾಷೆ ತಿಳಿಯದವರು, ಅಥವಾ ತಿಳಿದಿದ್ದರೂ,  ಅದನ್ನು ಓದಲು ಆಸಕ್ತಿ ಇಲ್ಲದಿದ್ದರೆ ಸುಮ್ಮನಿದ್ದರಾಯಿತು - ಸುಮ್ಮನೆ ಅದರ ಮೇಲೆ ಗೂಬೆ ಕೂರಿಸಬೇಕಾಗೂ ಇಲ್ಲ. ಸಂಸ್ಕೃತ ಭಾಷೆ ತಿಳಿಯದಿದ್ದವರೂ, ಆಸಕ್ತಿ ಇದ್ದರೆ, ಕೈಚೆಲ್ಲುವ ಅಗತ್ಯವೂ ಇಲ್ಲ - ಏಕೆಂದರೆ ಹಲವಾರು ಕೃತಿಗಳು ಅನುವಾದದಲ್ಲೂ ದೊರೆಯುತ್ತವೆ. ಒಟ್ಟಿನಲ್ಲಿ ಮನಸ್ಸಿದ್ದಲ್ಲಿ ಮಾರ್ಗ. ಇನ್ನು ಸ್ವಲ್ಪ ಸಂಸ್ಕೃತವನ್ನು ಓದಿಕೊಂಡಿದ್ದರಿಂದ ನನ್ನ ಮಟ್ಟಿಗೆ ಕನ್ನಡ ಓದಿಗೆ ಸಹಾಯವೇ ಆಗಿದೆ – ಅದೂ  ಕೆಲವು ಬರಹಗಾರರನ್ನು ಓದಿಕೊಳ್ಳುವಾಗ ಹೆಚ್ಚಿನ ಮಟ್ಟದಲ್ಲೇ ಆಗಿದೆ ಅನ್ನುವುದು ನಿಜವೇ. ಆದರೆ ಅದು ಎಲ್ಲರಿಗೂ ಆಗುತ್ತದೆ, ಆಗಲೇ ಬೇಕು ಎಂದಿಲ್ಲ ಬಿಡಿ.
 
“ಹೀಗೆಲ್ಲ ಇರುವಾಗ ಕೆಲವರ ತರ್ಕ ನಗು ತರಿಸುತ್ತೆ. ಅದು ಹೇಗೆ ಜ್ಞಾನವನ್ನ ಒಂದು ಭಾಷೆಗೆ ಕಟ್ಟಿಹಾಕುತ್ತಾರೆ? ಅವರು ಪಟ್ಟಿ ಬಿಚ್ಚಿಡ್ತಾರೆ, ಲೋಹ ಶಾಸ್ತ್ರ, ಆಯುರ್ವೇದ, ಭೂವಿಜ್ಞಾನ ಇತ್ಯಾದಿಗಳೆಲ್ಲ ಸಂಸ್ಕೃತದಲ್ಲಿ ಶತಶತಮಾನಗಳ ಹಿಂದೆಯೇ ಬರೆದಿಡಲ್ಪಟ್ಟಿದ್ದವು ಅಂತ. ಖಂಡಿತ ಹೌದು. ಅವೆಲ್ಲವೂ ಯಾವತ್ತೋ ಬರೆದಿಡಲ್ಪಟ್ಟಿದ್ದು ನಿಜ. 
 
ಚೇತನಾ ಅವರು ಹೇಳಿದ ತರ್ಕ ಯಾವುದು ಅಂತ ನನಗೆ ಗೊತ್ತಾಗಲಿಲ್ಲ.  "ಜ್ಞಾನ ವೆಲ್ಲವೂ ಸಂಸ್ಕೃತದಲ್ಲೇ ಇದೆ, ಬೇರೆಲ್ಲೂ ಏನೂ ಇಲ್ಲ " ಎಂದರೆ ತಪ್ಪು ತರ್ಕ. ಆದರೆ ಸಂಸ್ಕೃತವನ್ನು ಕೈಬಿಟ್ಟರೆ ಎಷ್ಟೋ ಬೆಲೆಯುಳ್ಳ ರತ್ನಗಳನ್ನು ಕಲ್ಲು ಎಂದು ಕೈಬಿಟ್ಟವರ ಪರಿಸ್ಥಿತಿ ನಮ್ಮದಾಗುತ್ತೆ ಎನ್ನುವುದು ಸರಿಯಾದ ತರ್ಕ. ಅಲ್ಲಿ ಇರುವ ವಿಷಯವನ್ನು ಸ್ವಲ್ಪ ಅಧ್ಯಯನ ಮಾಡಿದರೆ ನಮಗೆ ನಮ್ಮ ಪರಂಪರೆ ತಿಳಿಯುತ್ತೆ ಎನ್ನುವುದು ಸರಿಯಾದ ತರ್ಕ. ಆ ಮಾತು ಚೇತನಾ ಅವರೇ ಹೇಳಿರುವ ಮಾತಿಗೂ ಸರಿಹೊಂದುತ್ತೆ ಅನ್ನುವುದೂ ಸರಿಯಾದ ತರ್ಕವೇ. 
 
"ಆದರೆ ಆ ಎಲ್ಲ ಜ್ಞಾನವೂ ಸಂಸ್ಕೃತ ಬಲ್ಲವರಿಗೆ ಮಾತ್ರ ತಿಳಿದಂಥವೇ? ಹಾಗಾದರೆ ಆಯುರ್ವೇದದಲ್ಲಿರುವ ರೋಗನಿದಾನಗಳಿಗೆ ಸರಿಸಾಟಿಯಾಗಿ ಮನೆಮದ್ದು ಕೊಡ್ತಿದ್ದ ಜನಸಾಮಾನ್ಯರ ತಿಳಿವನ್ನು ಏನಂತ ಗುರುತಿಸಬೇಕು? "
 
ಪುಸ್ತಕ ಸಂಸ್ಕೃತದಲ್ಲಿದ್ದರೆ ಆ ಜ್ಞಾನ ಸಂಸ್ಕೃತ ಬಲ್ಲವರಿಗೆ ಮಾತ್ರ ತಿಳಿದಂಥದ್ದು ಅಂತ ಯಾರು ಹೇಳಿದರು? ರಾಜ ರಾಜ ಚೋಳನ ಬೃಹದೀಶ್ವರ ದೇವಸ್ಥಾನ ಕಟ್ಟುವಾಗ ಕೆಲಸ ಮಾಡಿದವರಿಗೆಲ್ಲ ಸಂಸ್ಕೃತ ಬರದೇ ಇದ್ದಿರಬಹುದು. ಕೆಲವರು ಮಾತ್ರ ಶಿಲ್ಪ ಶಾಸ್ತ್ರದ ಪುಸ್ತಕ ಓದಿದ್ದವರಿದ್ದಿರಬಹುದು, ಬಹುಪಾಲು ಜನರು , ಪ್ರಾಯೋಗಿಕವಾಗಿ ಮಾತ್ರ ತಿಳಿದವರಿದ್ದಿರಬೇಕು. ಅಂದಿಗೆ ಏಕೆ? ಇವತ್ತಿಗೂ ಇದು ನಿಜವೇ – ಒಂದು ಕಂಪ್ಯೂಟರ್ ಪ್ರೋಗ್ರಾಮ್ ಬರೆಯುವ ಎಲ್ಲರಿಗೂ, ಕಂಪೈಲರ್ ಟೆಕ್ನಾಲಜಿ ಗೊತ್ತಿರೋದಿಲ್ಲವಲ್ಲ ಹಾಗೆಂದುಕೊಳ್ಳಿ. ಅಥವಾ ಐಪ್ಯಾಡ್ ಮೇಲೆ ಚಿತ್ರ ಬರೆಯುವ ಕಲಾವಿದರಿಗೆ, ಆ ಪ್ರೋಗ್ರಾಮ್ ನ ಹಿಂದಿರುವ ಮೂಲತತ್ವ ಗೊತ್ತಿರಬೇಕಿಲ್ಲವಲ್ಲ ಹಾಗಂದುಕೊಳ್ಳಿ. ಅಥವಾ, ಕಟ್ಟಡ ಕಟ್ಟುವ ಮೇಸ್ತ್ರಿಗೆ ಯಾಕೆ ಕಂಬ ಎಷ್ಟು ದಪ್ಪ ಇರಬೇಕು, ಎಷ್ಟು ಕಬ್ಬಿಣ ದ ಕಂಬಿಗಳು ಹಾಕಬೇಕು ಎನ್ನುವುದು ತಿಳಿದಿದ್ದರೂ, ಅದರ ಹಿಂದಿರುವ ಸಿವಿಲ್ ಎಂಜಿನಿಯರಿಂಗ್ ನ ಪೂರ್ಣ ಮಾಹಿತಿ ಇಲ್ಲದೇ ಹೋಗಬೇಕಿಲ್ಲವಲ್ಲ, ಹಾಗೆಂದುಕೊಳ್ಳಿ.
 
ಹಾಗಾಗಿ ಈ ದಿನ, ನಮ್ಮ ಮಟ್ಟಿಗೆ ಹೇಳುವುದಾದರೆ, ಆ ದೇವಸ್ಥಾನವನ್ನು ಕಟ್ಟುವಾಗ ಇದ್ದ ಕೆಲಸಗಾರರಿಗೆಲ್ಲ ಸಂಸ್ಕೃತ ಗೊತ್ತಿದ್ದೇ ಕಟ್ಟಿದರೇ ಅನ್ನುವ ಪ್ರಶ್ನೆಗಿಂತ ಆವಾಗ ಯಾವ ತತ್ತ್ವಗಳನ್ನು ಬಳಸಿ ಕಟ್ಟಿದ್ದರು ಅನ್ನುವುದನ್ನು ಅರ್ಥ ಮಾಡಿಕೊಳ್ಳಲು ನಮಗೆ ಹಳೆಯ ಶಿಲ್ಪಶಾಸ್ತ್ರ ಗ್ರಂಥಗಳು ದಾರಿ ತೋರುತ್ತವೆ.  ಅದು ಓದದಿದ್ದರೆ, ನಷ್ಟ ಯಾರಿಗೆ? ನಮಗೇ ಅಲ್ಲವೆ? ಕಟ್ಟುವುದಕ್ಕಿಂತ ಕೆಡವುವುದು ಸುಲಭ. ಕಲಿಯುವುದಕ್ಕಿಂತ ಮರೆಯುವುದು ಸುಲಭ. ಆಯುರ್ವೇದದಲ್ಲಿ ಮನೆ ಮದ್ದಿಗಿಂತ ಹೆಚ್ಚಿನದೇನೂ ಇಲ್ಲದೇ ಇರಬಹುದು - ಆದರೆ, ಮನೆಮದ್ದನ್ನು ಮಾಡುವವರೊಬ್ಬರಿಲ್ಲದಿದ್ದಾಗ, ಆಯುರ್ವೇಗ ಗ್ರಂಥವೊಂದರಲ್ಲಿ ಯಾವುದೋ ಒಂದು ಜಡ್ದಿಗೆ ಚಿಕಿತ್ಸೆ ಹೇಳಿದ್ದರೆ ಅದನ್ನು ಅನುಸರಿಸುವುದೂ ಸಾಧ್ಯ ತಾನೇ?  ಆಯುರ್ವೇದವನ್ನ ಓದಿದರೆ ಮನೆ ಮದ್ದನ್ನು ಬಿಸಾಕಿ ಅಂತಲೂ, ಸೂರ್ಯ ಸಿದ್ಧಾಂತ  ಓದಿದರೆ, ಇವತ್ತು ಮನೆಯಲ್ಲಿ ಹಾಕಿಕೊಂಡಿರುವ ಕ್ಯಾಲೆಂಡರ್ ಅನ್ನು ಹೊರಗೆಸೆಯಿರೀ ಅಂತಲೂ ಅಲ್ಲವಲ್ಲ!
 
"ಉನ್ನತ ವರ್ಗದವರಿಗೆ ಮಾತ್ರ ಸಂಸ್ಕೃತದ ಓದು, ಬರಹ, ಮಾತುಗಳಿಗೆ ಅವಕಾಶವಿದ್ದ ಕಾಲವದು. ಮಿಕ್ಕಂತೆ ಪಾಲಿ, ಪ್ರಾಕೃತ, ಪೈಶಾಚಿಕ ಭಾಷೆಯಲ್ಲಿ ಜನಸಾಮಾನ್ಯರು ಮಾತಾಡ್ತಿದ್ದರು. ಸಂಸ್ಕೃತ ನಾಟಕಗಳನ್ನ ಗಮನಿಸಿದರೆ ಯಾವೆಲ್ಲ ವರ್ಗಗಳಿಗೆ ಸಂಸ್ಕೃತದ ಅನುಮತಿಯಿತ್ತು ಮತ್ತು ಯಾರೆಲ್ಲರಿಗೆ ನಿರಾಕರಣೆಯಿತ್ತು ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ."
 
ಈ ವಾದವನ್ನು ಹಲವಾರು ಜನ ಮುಂದಿಡುವುದನ್ನು  ಕೇಳಿದ್ದೇನೆ. ಇದು ಒಂದು ತಪ್ಪು ಅಭಿಪ್ರಾಯದಿಂದ ಉಂಟಾಗಿದೆ ಅಲ್ಲದೇ ಮತ್ತೇನಿಲ್ಲ. ಇದನ್ನು ಸ್ವಲ್ಪ ವಿಶದವಾಗಿಯೇ ಹೀಗೆ ವಿವರಿಸಬಹುದು. ಕನ್ನಡದಲ್ಲೂ ಹಲವಾರು ಕವಲುಗಳಿವೆ. ಎಷ್ಟೋ ಜನರು ಕೆಲವು ಸಂದರ್ಭಗಳಲ್ಲಿ, ಕೆಲವು ಜನರೊಡನೆ ಒಂದು ಒಳನುಡಿಯಲ್ಲಿ ಮಾತಾಡಿದರೆ, ಇನ್ನೊಂದು ಸಂದರ್ಭದಲ್ಲಿ, ಇನ್ನೊಂದು ವ್ಯಕ್ತಿಯೊಡನೆ ಮಾತಾಡುವಾಗ ಬೇರೆಯ ಶೈಲಿಯಲ್ಲಿ ಮಾತಾಡುವುದನ್ನೂ ನೋಡಬಹುದು. ಹಾಗೆಂದು, ಒಬ್ಬರು ಇಂಥದ್ದೇ ಶೈಲಿಯಲ್ಲಿ ಮಾತಾಡಬೇಕೆಂಬ ಕಟ್ಟುಪಾಡಿದೆಯೇನು? ಇಲ್ಲ! ಈಗ ನಾನು ಮನೆಯಲ್ಲಿ ಮಾತನಾಡುವಾಗ ಈ ಬರಹದಲ್ಲಿ ಬಳಸುವ ಭಾಷೆಯಲ್ಲಿ ಮಾತಾಡುತ್ತೇನೇನು? ಇಲ್ಲ ( ನಾನ್ ಮನೇಲ್ ಮಾತಾಡೋವಾಗ ಇಲ್ ಬರ್ದ್ ಭಾಷೇಲಿ ಮಾತಾಡ್ತೀನೇನು? – ಇದು ನಾನು ಮಾತನಾಡುವ ರೀತಿ! ಹೀಗೇ ಹಲವಾರು ಪ್ರಾದೇಶಿಕ ರೀತಿಗಳಿದ್ದೇ ಇರುತ್ತವೆ ಎಲ್ಲ ನುಡಿಗಳಲ್ಲೂ). ಅದೇ ರೀತಿ, ಹಿಂದಿದ್ದ ಮಾಗಧಿ  ಶೌರಸೇನೀ ಮಹಾರಾಷ್ಟೀ ಮೊದಲಾದ ಪ್ರಾಕೃತಗಳೆಲ್ಲ ಸಂಸ್ಕೃತದ ಬೇರೆ ಬೇರೆ ಮುಖಗಳೇ ಆಗಿವೆ. ಪಾಲಿಯೂ  ಮಾಗಧಿಯನ್ನು ಹೋಲುವ ಭಾಷೆಯೆಂದು ಕೇಳಿದ್ದೇನೆ. 
 
ಸಂಸ್ಕೃತ ನಾಟಕಗಳಲ್ಲಿ ಬೇರೆ ಬೇರೆ ಪಾತ್ರಗಳು ಸಂಸ್ಕೃತ, ಮತ್ತು ಇತರ ಪ್ರಾಕೃತಗಳಲ್ಲಿ ವ್ಯವಹರಿಸುತ್ತವೆ. ಆದರೆ ಎಲ್ಲಾ ಪಾತ್ರಗಳೂ ಮಾತನಾಡುವುದೂ ಎಲ್ಲಾ ಉಳಿದ ಪಾತ್ರಗಳಿಗೂ ಅರ್ಥವೂ ಆಗುತ್ತದೆ. ಅಂದರೇನರ್ಥ? ಇಂದು ಕರ್ನಾಟಕದ ಒಂದೂರಿನಲ್ಲಿ ಬೇರೆ ಬೇರೆ ಕಡೆಯವರು  ಒಂದೆಡೆ ಸೇರಿದಾಗ, ಎಲ್ಲರೂ ತಮ್ಮ ತಮ್ಮ ಒಳನುಡಿಗಳಲ್ಲಿ ವ್ಯವಹರಿಸುತ್ತಲೇ ಹೋಗುತ್ತಾರಲ್ಲ. ಅದೇ ರೀತಿ. ಮತ್ತೆ, ಇಂಥ ಪಾತ್ರಗಳು ಇಂತಹದ್ದೇ ಪ್ರಾಕೃತ ವನ್ನು ಮಾತನಾಡುತ್ತವೆ ಎಂದು ಹೇಳಿದರೆ ಅದು ನಿಜ ಜೀವನದಲ್ಲಿ ಹೇಗೆ ನಡೆಯುತ್ತಿತ್ತೋ ಅದನ್ನೇ ನಾಟಕದಲ್ಲಿ ತೋರಿಸುವ ಯತ್ನ ಅಷ್ಟೇ. ಕನ್ನಡ ಸಿನೆಮಾದಲ್ಲಿ ಅಂಗಡಿ ಶೆಟ್ಟರು ತೆಲುಗು ಮಿಶ್ರಿತ ಕನ್ನಡದಲ್ಲೂ, ಸೇಟ್ ಜೀ ಯು ಹಿಂದಿ ಬೆರೆಸಿದ ಕನ್ನಡದಲ್ಲೂ,  ಆಸ್ಪತ್ರೆಯ ನರ್ಸ್ ಮಲೆಯಾಳಿ ಶೈಲಿಯ ಕನ್ನಡದಲ್ಲೂ ಮಾತನಾಡುವುದು ಎಷ್ಟು ಕಡೆ ಬಂದಿಲ್ಲ? ಏಕೆಂದರೆ ಅದು ನಮ್ಮ ದಿನ ಜೀವನದಲ್ಲಿ ನೋಡಿರುವಂತಹ ವಿಷಯ. ಈ ಸಂದರ್ಭದಲ್ಲಿ ನಾನು ಇತ್ತೀಚೆಗೆ ಬರೆದು ಆಡಿಸಿದ ನಾಟಕವೊಂದರಲ್ಲಿದ್ದ ನನ್ (ಕ್ರೈಸ್ತ ಸನ್ಯಾಸಿನಿ) ಒಬ್ಬಾಕೆಯ ಪಾತ್ರದ ಮಾತುಗಳನ್ನು ಬರೆದಾಗ, ಆ ಪಾತ್ರಕ್ಕೆ  ತುಸು ಮಲೆಯಾಳಿ ಲೇಪವನ್ನಿಟ್ಟಿದ್ದೂ ನೆನಪಿಗೆ ಬಂತು. ಆ ರೀತಿಯ ಮಾತು ಇರಬೇಕೆಂದು ಯಾವ “ನೂತನ ನಾಟ್ಯ ಶಾಸ್ತ್ರ” ದಲ್ಲಿ ಇಲ್ಲದಿದ್ದರೂ ಪ್ರಯೋಗರಂಜಕವೆಂದು ಮಾಡಿದ್ದೆನಷ್ಟೆ. ಇದೇ ರೀತಿ, ಹಿಂದೆ ಸಂಸ್ಕೃತನಾಟಗಳಲ್ಲಿ ಇರುವ ಇಂತಿಂತಹ ಪಾತ್ರ ಇಂತಿಂತಹ ರೀತಿಯಲ್ಲಿ ಮಾತಾಡುತ್ತವೆ ಅನ್ನುವುದು ಕೂಡ, ಇದೇ ಕಾರಣಕ್ಕೆ. ಆ ಸಂದರ್ಭಕ್ಕೆ ನಾವು ಯಾವುದನ್ನು “ಸಂಸ್ಕೃತ” ಎಂದು ಕರೆಯುತ್ತೇವೋ, ಅದನ್ನು ಮಾತಾಡುತ್ತಿದ್ದವರು ಕೆಲವು ಶೈಕ್ಷಣಿಕ ಮತ್ತು ಔದ್ಯೋಗಿಕ ಹಿನ್ನೆಲೆಯಿದ್ದವರು ಮಾತ್ರ ಆಗಿರುತ್ತಿದ್ದರು. ಉಳಿದವರು ಬೇರೆ ಬೇರೆ ಪ್ರಾಕೃತಗಳನ್ನಾಡುತ್ತಿದ್ದರು ಎಂದ ಮಾತ್ರಕ್ಕೆ, ಅವರು ಮಾತಾಡುವಹಾಗಿರಲಿಲ್ಲ ಎಂದು ನಿರ್ಧರಿಸುವುದು ತಪ್ಪಾಗುತ್ತದೆ.
 
ಇನ್ನು ಸಂಸ್ಕೃತದ  ಭಾಷಾ ಶೈಲಿಯಲ್ಲಿ ಇಂತಹ ವಿಷಯವನ್ನು ವಿವರಿಸುವಾಗ – ಅದು “descriptive” ಆಗಿದ್ದರೂ, ಅದು ’prescriptive ’ ಎಂಬಂತೆ ತೋರುತ್ತೆ. ಅದೂ ಕೂಡ ಇಂತಹ ತಪ್ಪು ಕಲ್ಪನೆ ಬರುವುದಕ್ಕೆ ಮುಖ್ಯ ಕಾರಣ. ಸರಳವಾದ ಉದಾಹರಣೆ = ಸಂಗೀತದಿಂದ – ಮೋಹನ ರಾಗವು ಆರೋಹಣ ಅವರೋಹಣಗಳಲ್ಲಿ ಮಧ್ಯಮ ನಿಷಾದ ಸ್ವರಗಳನ್ನು ಬಿಡುತ್ತದೆ . ಇಂತಹ ವಿಷಯವನ್ನ ಸಂಸ್ಕೃತದಲ್ಲಿ ಬರೆದಿರುವ ಶ್ಲೋಕಗಳನ್ನು ಓದಿದರೆ ಅದು “ಮೋಹನ ರಾಗಕ್ಕೆ ಆರೋಹಣ ಅವರೋಹಣದಲ್ಲಿ ಮಧ್ಯಮ ನಿಷಾದ ಸ್ವರಗಳನ್ನು ಬಿಟ್ಟು ಬಿಡಬೇಕು” ಈ ರೀತಿ ಬರೆದಂತೆ ಅನ್ನಿಸುತ್ತೆ. ಅದೇ ರೀತಿಯೇ, “ಸ್ತ್ರೀ ಪಾತ್ರಗಳು ಮಹಾರಾಷ್ಟ್ರೀ ಪ್ರಾಕೃತವನ್ನೂ, ಬೌದ್ಧ ಶ್ರಮಣಕರು ಮಾಗಧೀ ಪ್ರಾಕೃತವನ್ನೂ ಮಾತಾಡಬೇಕು” ಎಂಬ ರೀತಿಯ ಸಾಲಿದ್ದರೆ, ಅದರ ಅರ್ಥ ಅಂದಿನ ದಿನಗಳಲ್ಲಿ ಅಂತಹ ವ್ಯಕ್ತಿಗಳು ಅಂತಹ ಒಳನುಡಿಗಳಲ್ಲಿ ಮಾತಾಡುತ್ತಿದ್ದರು ಎಂದಷ್ಟೇ. ಅದಕ್ಕೆ ಹೆಚ್ಚೂ ಇಲ್ಲ , ಕಡಿಮೆಯೂ ಇಲ್ಲ.
 
"ಹೀಗಿದ್ದಾಗ, ಜನಸಾಮಾನ್ಯರು ಆಯುರ್ವೇದ ಓದಿಯಂತೂ ಮನೆಮದ್ದು ಕಲಿತಿರಲಿಕ್ಕೆ ಸಾಧ್ಯವಿಲ್ಲ, ಅಲ್ವಾ? ಮೆಹರೂಲಿಯ ಕಂಬ ನಿರ್ಮಿಸಿದ್ದು ಲೋಹ ಶಾಸ್ತ್ರ ಬರೆದ ಪಂಡಿತನೋ ಅಥವಾ ಅನಾಮಧೇಯ ಕಮ್ಮಾರನೋ? ಹಂಪಿಯ ಸಂಗೀತ ಹೊಮ್ಮುವ ಕಂಬ ಕೆತ್ತಿದವನು ಸಂಸ್ಕೃತದ ವಾಸ್ತುಗ್ರಂಥಗಳನ್ನ ಓದಿಕೊಂಡಿದ್ದ ಪಂಡಿತನಾ? ಹೆರಿಗೆ ಮಾಡಿಸುವ ಸೂಲಗಿತ್ತಿಯರು ಅದ್ಯಾವ ಗ್ರಂಥ ಓದಿಕೊಂಡವರು?" 
 
ಮೆಹರಾಲಿಯ ಕಂಬವನ್ನು ಮಾಡಿದ್ದವನು ಕಮ್ಮಾರನೇ ಆದರೂ, ಅದನ್ನು ದಾಖಲಿಸಿದವನು ಲೋಹ ಶಾಸ್ತ್ರ ಬರೆದ ಪಂಡಿತ ಎಂದು ಒಪ್ಪಿಕೊಳ್ಳುವುದಕ್ಕೆ ಹಿಂಜರಿಕೆಯೇಕೆ (ಈಗ ಯಾವ ಲೋಹಶಾಸ್ತ್ರದಲ್ಲೂ ಮೆಹರಾಲಿಯ ಕಂಬದ ಫಾರ್ಮುಲಾ ಏನು ಎಂದು ಬರೆದಿರುವಂತೆ ಕಾಣುವುದಿಲ್ಲ, ಮಾತಿಗೆ ಹೇಳಿದೆ!)  ಇದೇ ರೀತಿಯೇ ಹಂಪೆಯ ಸಂಗೀತ ಕಂಬ ಕಟ್ಟಿದವನು ಶಿಲ್ಪಿಯೇ ಇರಬಹುದು, ಆದರೆ ಯಾವರೀತಿ ಅಂತರಗಳು ಇರಬೇಕು, ಹೇಗೆ ನಾದ ಹೊಮ್ಮಬೇಕು ಎಂದು ನಿರ್ಧರಿಸಿದವನು ಒಬ್ಬ ಸಂಗೀತ ಬಲ್ಲವನೇ ತಾನೇ? ಸೂಲಗಿತ್ತಿಗೆ ಗ್ರಂಥ ಬೇಡದೇ ಇರಬಹುದು – ಆದರೆ ಎಲ್ಲ ಅನುಭವಕ್ಕೆ ಬಂದ ವಿಷಯಗಳನ್ನು ಉಳಿಸುವ ಒಂದು ದಾರಿಯೇ ಪುಸ್ತಕಗಳು ಅಲ್ಲವೇ? ಚೇತನಾ ಅವರ ಪುಸ್ತಕ ಸಂಗ್ರಹದ ಚಿತ್ರಗಳನ್ನು ನೋಡಿರುವ ನನಗೆ, ಅವರು ಈ ಮಾತಿಗೆ ಒಪ್ಪಿಯೇ ಒಪ್ಪುತ್ತಾರೆ ಎನ್ನುವ ನಂಬುಗೆ!  ಈ ಪುಸ್ತಗಳು ಆಗ ಹೆಚ್ಚಿಗೆ ಸಂಸ್ಕೃತದಲ್ಲಿದ್ದವು, ಅದನ್ನು ಮೆಚ್ಚೋಣ, ಓದೋಣ ಬಳಸೋಣ. ಇವತ್ತು ಇಂತಹ ಜ್ಜಾನ ಕನ್ನಡದಲ್ಲೋ ಇಂಗ್ಲಿಷ್ ನಲ್ಲೋ ಮತ್ತೊಂದು  ಭಾಷೆಯಲ್ಲೋ ಇವೆ. ಈಗಿನ ಸಂದರ್ಭಕ್ಕೆ ಬೇಕಾದ್ದನ್ನು ಇಂದಿನ ಪುಸ್ತಕಗಳಲ್ಲಿ ನೋಡೋಣ. ಆಟೋಮೊಬೈಲ್ ಇಂಜಿನಿಯರಿಂಗ್ ವಿಷಯವನ್ನೋ , ಕ್ಯಾನ್ಸರ್ ಸಂಶೋಧನೆಯ ವಿಷಯವೋ ನಮಗೆ ಸಂಸ್ಕೃತದಲ್ಲಿ ಸಿಗಲಾರದು. ಆದರೆ, ಭಾರತೀಯ ಸಾಂಪ್ರದಾಯಿಕ ಸಂಗೀತವೋ, ಗಣಿತವೋ, ಶಿಲ್ಪವೋ, ಅದರ ಬಗ್ಗೆ ಹೆಚ್ಚಿನ ತಿಳುವಳಿಕೆ ಬೇಕಾದಾಗ ಸಂಸ್ಕೃತವನ್ನು ಆಶ್ರಯಿಸೋಣ! ಗುಣಕ್ಕೆ ಮತ್ಸರವೇ?
 
“ಸ್ಪಷ್ಟವಾಗಿ ಹೇಳುವುದಾದರೆ, ಸಂಸ್ಕೃತ ನನಗೆ ಹೊಸ ಅರಿವು ನೀಡಿದ ಭಾಷೆಯಾಗಲಿಲ್ಲ. ಅದು ನನಗೆ ಕಲಿಕೆಯ ಖುಷಿ ನೀಡಿದ ಭಾಷೆಯಾಯ್ತು ಅಷ್ಟೇ. ಬಾಣ, ಕಾಳಿದಾಸ, ದಂಡಿ ಮೊದಲಾವರ ಪದಚಮತ್ಕಾರಗಳನ್ನು ಓದೋದು ನಿಜಕ್ಕೂ ಚೆಂದ. ಹಾಗೇ ಭಗವದ್ಗೀತೆ, ಉಪನಿಷತ್ತು ಮೊದಲಾದವನ್ನು ಯಾರ ವ್ಯಾಖ್ಯಾನದ ಊರುಗೋಲೂ ಇಲ್ಲದೆ ನನಗೆ ನಾನೇ ಅರ್ಥ ಮಾಡಿಕೊಳ್ಳೋಕೂ ಅದು ಸಹಾಯ ಮಾಡಿತು.” 
 
ಇದು ಚೇತನಾ ಅವರ ವೈಯಕ್ತಿಕ ಅಭಿಪ್ರಾಯ. ಇದಕ್ಕೆ ಟಿಪ್ಪಣಿ ಹಾಕುವಂತಹದ್ದೇನೂ ನನ್ನಲ್ಲಿಲ್ಲ. ಹೆಚ್ಚು ಕಡಿಮೆ ನನ್ನ ಅಭಿಪ್ರಾಯವೂ ಇದೇ ಆದರೂ, ಕೆಲವು ವಿಷಯಗಳಲ್ಲಿ  (ಉದಾ: ಸಂಗೀತ) ಸಂಸ್ಕೃತ ನನಗೆ ಹೊಸ ಅರಿವನ್ನು ನೀಡಿದ ಭಾಷೆ ಆಯಿತು ಎಂದು ಹೇಳಬಲ್ಲೆ ಅಷ್ಟೇ.
 
“ನನ್ನ ಗ್ರಹಿಕೆಯಂತೆ, ಸಂಸ್ಕೃತ ಒಂಥರಾ ಗಣಿತದಂಥ ಭಾಷೆ. ಕೆಲವು ವಾಕ್ಯಗಳು ಒಂದು ಫಾರ್ಮುಲಾ ಥರವೋ ಥೀರಮ್ ಥರವೋ ಇರ್ತವೆ. ಅವನ್ನ ಬಿಡಿಸೋದು, ಅರ್ಥ ಕಂಡುಹಿಡಿಯೋದು, ಅದರಲ್ಲಿ ಹುದುಗಿಡಲಾದ ಮಾಹಿತಿ ಡಿಕೋಡ್ ಮಾಡೋದು – ಇವೆಲ್ಲ ತಲೆಗೆ ಸಾಕಷ್ಟು ಕಸರತ್ತು ಕೊಡುವ ಅಂಶಗಳು. ವೇದಮಂತ್ರಗಳು, ಉಪನಿಷತ್ತುಗಳು, ಸಾಗರ ಮೀರುವಷ್ಟು ಪ್ರಮಾಣದ ಕಥೆಗಳು ಏನೆಲ್ಲ ಇವೆ! ಈ ಭಾಷೆಗೆ ತನ್ನದೇ ಆದ ಚೆಂದವಿದೆ. ಒಂದು ಸಲ ಹಿಡಿತ ಸಿಕ್ಕುಬಿಟ್ಟರೆ ಸಂಸ್ಕೃತ ಓದುವ ಸುಖವೇ ಬೇರೆ!”
 
ಇದಕ್ಕೂ ಮೇಲಿನ ಟಿಪ್ಪಣಿಯೇ ಡಿಟೋ-ಡಿಟೋ. ಇನ್ನೂ ನನಗೆ ಸಂಸ್ಕೃತ ಪೂರ್ತಿ ಹಿಡಿತಕ್ಕೆ ಸಿಕ್ಕಿದೆ ಎನ್ನಲಾರೆ, ಹಾಗಾಗಿ , ಚೇತನಾ ಅವರು ವಿವರಿಸಿರುವ ಸುಖವನ್ನು ಪಡೆಯಲು ಕಾಯುತ್ತೇನೆ!
 
“ಹೀಗೆಲ್ಲ ಇದ್ದೂ ಈ ಭಾಷೆ ನೆಲ ಕಚ್ಚಿದ್ದೇಕೆ?”
 
ಸಂಸ್ಕೃತ ನೆಲ ಕಚ್ಚಿದ್ದು ಅನ್ನುವುದೇ ಅರ್ಥವಿಲ್ಲದ ಮಾತು. ಪಂಪನ ಕನ್ನಡ ನೆಲ ಕಚ್ಚಿದ್ದೇಕೆ? ಆಂಡಯ್ಯನ ಕನ್ನಡ ನೆಲ ಕಚ್ಚಿದ್ದೇಕೆ? ರತ್ನಾಕರವರ್ಣಿಯ ಕನ್ನಡ ನೆಲಕಚ್ಚಿದ್ದೇಕೆ? ಮುದ್ದಣನ ಕನ್ನಡ ನೆಲಕಚ್ಚಿದ್ದೇಕೆ? ಕುಮಾರವ್ಯಾಸನ ಕನ್ನಡ ನೆಲಕಚ್ಚಿದ್ದೇಕೆ? ಎಂದಂತಾಯಿತು. ಸರಿಯಾಗಿ ಹೇಳಿದರೆ, ಈ ಯಾವ ಕನ್ನಡಗಳೂ ನೆಲ ಕಚ್ಚಲಿಲ್ಲ, ಅದರ ಬದಲು ಬದಲಾಗುತ್ತಾ ಹೋಗಿ, ಇಂದಿನ ಕನ್ನಡವಾಗಿದೆ. ಇನ್ನೂ ಬದಲಾಗುತ್ತಿದೆ. ಸಂಸ್ಕೃತ ಅಂತೆಯೇ ಬದಲಾಗಿ ಇಂದಿನ ಹಲವು  ಉತ್ತರ ಭಾರತದ ಭಾಷೆಗಳಾಗಿದೆ ಅಷ್ಟೇ.
 
“ಈ ಭಾಷೆ ಸಮಗ್ರವಾಗಿಲ್ಲದ ಕಾರಣ ಇದನ್ನು ಕಲಿಯುವುದರಿಂದ ಅಂಥಾ ಉಪಯೋಗಗಳೇನೂ ಇಲ್ಲ ಅಂತಲೇ ನನಗನಿಸುತ್ತೆ.”
 
ನಿಮ್ಮ ಅಭಿಪ್ರಾಯ ನಿಮ್ಮ ಮಟ್ಟಿಗೆ ಸರಿಯೇ ಇರಬಹುದು. ಅದನ್ನು ಬದಲಾಯಿಸುವ ಪ್ರಯತ್ನವನ್ನೇನೂ ಮಾಡಬೇಕಿಲ್ಲ. ಅಂತೆಯೇ ಉಪಯೋಗ ಅನುಪಯೋಗಗಳೂ ತೀರ ವೈಯಕ್ತಿಕ. ಒಬ್ಬಟ್ಟನ್ನು ಸಿಹಿ ಚಪಾತಿ , ಚಿರೋಟಿಯನ್ನು ಸಿಹಿ ಪೂರಿ ಅಂತ ಅಂದವರನ್ನು ನೋಡಿದೀನಿ.  ನನಗೆ  ಒಬ್ಬಟ್ಟು ಇಷ್ಟವಾದ ಮಾತ್ರಕ್ಕೆ ಇನ್ನೊಬ್ಬರಿಗೆ ಅದು ಸಿಹಿ ಚಪಾತಿ ಅನ್ನಿಸುವುದನ್ನು ನಾನು ತಡೆಯಲಾರೆ.
 
“ಯಾಕಂದರೆ ಈ ಭಾಷೆಯ ಸಾಹಿತ್ಯ ತನ್ನ ರಚನೆಯ ಕಾಲದ ಜನಸಾಮಾನ್ಯರ ಬದುಕು ಬವಣೆಗಳನ್ನ ತೆರೆದಿಡೋದಿಲ್ಲ. ಇದೇನಿದ್ದರೂ ಧರ್ಮ, ಅಧ್ಯಾತ್ಮ, ತತ್ತ್ವ, ಕಲೆ ಮೊದಲಾದ ವಿಲಾಸಿಗರ ಅಥವಾ ಹೊಟ್ಟೆ ತುಂಬಿದವರ ಬದುಕನ್ನು ಹೇಳುತ್ತದೆ”.
 
ಇದನ್ನು ನೀವು ಇಡೀ ಸಂಸ್ಕೃತ ಸಾಹಿತ್ಯವನ್ನು ಜಾಲಾಡಿ ಈ ತೀರ್ಮಾನಕ್ಕೆ  ಬಂದಿರುವುದಾದರೆ, ನೀವು ಸರಿಯೇ ಇರಬಹುದು, ನಾನು ಮಾಡಿಲ್ಲವಾದ್ದರಿಂದ ಇದರ ಬಗ್ಗೆ ಹೆಚ್ಚಾಗಿ ಹೇಳಲಾರೆ! ಆದರೆ ಎಷ್ಟೋ ಕಡೆ ಜೀವನದ ಎಲ್ಲ ಸ್ತರಗಳ ಜನ ಜೀವನದ ಬಗ್ಗೆಯೂ ಬರೆದಿರುವುದನ್ನು ನಾನು ಓದಿರುವ ಸುಭಾಷಿತಗಳಿಂದ ಬಲ್ಲೆ. ಜೊತೆಗೆ ಧರ್ಮ ಆಧ್ಯಾತ್ಮ ಕಲೆ ಇವ್ಯಾವುದೂ ಬರೀ ವಿಲಾಸಿಗರ ಅಥವಾ ಹೊಟ್ಟೆ ತುಂಬಿದವರಿಗೆ ಮಾತ್ರ ಸಂಬಂಧಿಸಿದ್ದಲ್ಲ ಅನ್ನುವುದು ಮಾತ್ರ ಖಚಿತ!  ಕಲೆ ಅನ್ನುವುದು ಜನಸಾಮಾನ್ಯರಿಗಲ್ಲ ಅನ್ನುವ ಅಭಿಪ್ರಾಯವೇ ಬುಡವಿಲ್ಲದ್ದು.
 
“ಯಾವ ಭಾಷೆ ಸಂಸ್ಕೃತಿಯ ಸಮಗ್ರ ದರ್ಶನ ಮಾಡಿಸೋದಿಲ್ಲವೋ, ಯಾವ ಭಾಷೆಯನ್ನು ಬಳಸಿ ಯಾವುದೇ ಸಾಮಾಜಿಕ ಕ್ರಾಂತಿ ನಡೆದಿರೋದಿಲ್ವೋ, ಯಾವ ಭಾಷೆ ಭಿನ್ನ ವರ್ಗಗಳ ಜನ ಸಮುದಾಯವನ್ನ ಬೆಸೆಯೋದಿಲ್ವೋ, ಅಂಥ ಭಾಷೆಗೇನು ಮಹತ್ವ!?”
 
 ಎಲ್ಲವನ್ನೂ ಒಂದೇ ಕಣ್ಗಾಪಿನೊಳಗಿಂದ ನೋಡುವುದರಲ್ಲಿ ಅರ್ಥವಿಲ್ಲ. – “ಯಾವ ಭಾಷೆಯು ರಾಕ್ ಮ್ಯೂಸಿಕ್ ಬಗ್ಗೆ ಸಮಗ್ರ ದರ್ಶನ ಮಾಡಿಕೊಡೋಕೆ ಸಾಧ್ಯವಿಲ್ಲವೋ, ಯಾವ ಭಾಷೆಗೆ ಸಾವಿರ ವರ್ಷ ಇತಿಹಾಸ ಇಲ್ವೋ, ಯಾವ ಭಾಷೆಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಮಾಡೋಕೆ ಸಾಧ್ಯವಿಲ್ಲವೋ ಅಂತಹ ಭಾಷೆಗೇನು ಮಹತ್ವ” ಅಂತ ನಾನು ಪ್ರಶ್ನೆ ಕೇಳಿದರೆ ಎಷ್ಟು ಅನರ್ಥವಾಗಿರುತ್ತೋ ಅದೇ ರೀತಿ ಇದೆ ಈ ಪ್ರಶ್ನೆ ಅಷ್ಟೇ.
 
ಕೊಸರು:
 
ಇನ್ನು ಯಾವುದೋ ಕಾಲದಲ್ಲಿ ಮನು ಸ್ಮೃತಿಯಲ್ಲೋ ಮತ್ತೊಂದು ಸ್ಮೃತಿಯಲ್ಲೋ ಹೇಳಿದ ಮಾತನ್ನೇ ಎಷ್ಟು ದಿನ ಮತ್ತೆ ಮತ್ತೆ ಹೇಳುತ್ತಾ ಇರೋಣ ಚೇತನಾ ಅವರೆ? ಶೂದ್ರ ಸಂಸ್ಕೃತ ಓದಬಾರದು ಅಂತ ಹೇಳಿದ್ದರು ಅಂತ ನೀವಂತೀರ. ಆದರೆ, ನಾನೀಗ ಸದ್ಯದಲ್ಲಿ ಓದುತ್ತಿರುವ  ವೇಮ ಭೂಪಾಲನ ಶೃಂಗಾರ ದೀಪಿಕೆಯಲ್ಲಿ ಆತ ತಾನು ಶೂದ್ರ ಕುಲಕ್ಕೆ ಸೇರಿದ ವೇಮರೆಡ್ಡೀ ಭೂಪಾಲನೆಂದು ತಾನೇ ಬರೆದುಕೊಂಡಿದ್ದಾನೆ. ಸೊಗಸಾಗಿದೆ , ಅಮರುಕ ಶತಕಕ್ಕೆ ಆತ ಬರೆದ ವ್ಯಾಖ್ಯಾನ. ಅವನ ಕಿವಿಗೆ ಯಾರೂ ಸೀಸ ಹೊಯ್ಯಲಿಲ್ಲವಲ್ಲ? ವೇಮ ಭೂಪತಿ ತನ್ನ ಬಗ್ಗೆ ತಾನು ಬರೆದುಕೊಂಡ ಮಾತನ್ನು ನಾನು ಹೇಳಿದ್ದೇನೆ – ನೀವು ಸೀಸ ಹೊಯ್ಯುವ ಮಾತು ಬರೆದದ್ದಕ್ಕೆ. ಇಲ್ಲವಾದರೆ ಈ ಪ್ರಸ್ತಾಪ ಮಾಡುವ ಅಗತ್ಯವಿರಲಿಲ್ಲ.
 
ಭಾರತದಲ್ಲಿ ಇವತ್ತು ನಾವು ಪಾಲಿಸ್ತಿರೋದು ಅಂಬೇಡ್ಕರ್ ಸಂವಿಧಾನ. ಅಂಬೇಡ್ಕರ್ ಸ್ಮೃತಿ. ಇವತ್ತು ಯಾವ ಭಾಷೆ ಕಲಿಯೋಕೋ ಓದೋಕೂ ತಿಳಿಯೋಕೂ ಯಾರಪ್ಪಣೆಯೂ ಬೇಕಾಗಿಲ್ಲ! ಇಂತಹ ಸಂದರ್ಭದಲ್ಲಿ,  ಮತ್ತೆ ಮತ್ತೆ “ಇಷ್ಟಕ್ಕೂ ಸಂಸ್ಕೃತ ಯಾವತ್ತೂ ತಾರತಮ್ಯ ಇಟ್ಟುಕೊಂಡೇ ಬೆಳೆದ ಭಾಷೆ. ಬಹುಶಃ ಇಂತಿಂಥವರು ಇದನ್ನು ಬಳಸಬಾರದು ಅಂತ ನಿರ್ಬಂಧವಿರಿಸಿಕೊಂಡಿದ್ದ ಭಾಷೆ ಜಗತ್ತಲ್ಲಿ ಇದೊಂದೇ ಅನ್ನಿಸತ್ತೆ. “ ಎಂಬ ಮಾತುಗಳನ್ನೇ ಮತ್ತೆ ಮತ್ತೆ  ಇನ್ನೆಷ್ಟು ವರ್ಷ ಆಡುತ್ತಿರೋದು ಹೇಳಿ? ಸಂಸ್ಕೃತದಲ್ಲಿ ಏನಿದೆಯೋ ಏನಿಲ್ಲವೋ, ಬೇಕಾದವರು ಓದಿ ತಿಳಿದುಕೊಳ್ಳಲಿ ಬಿಡಿ. ನೀವಾಗಲೇ ಓದಿಕೊಂಡು ಅದರಲ್ಲಿ ಹುರುಳಿಲ್ಲ , ಬರೀ ಜಳ್ಳು ಅಂತ ನಿರ್ಧರಿಸಿದ್ದೀರ. ಬೇರೆಯವರಿಗೂ, ತಾವೇ  ಓದಿಕೊಂಡು ಅದರಲ್ಲಿ ಹುರುಳಿದೆಯೋ ಜಳ್ಳಿದೆಯೋ ಕಾಳಿದೆಯೋ ಅಂತ ನಿಶ್ಚಯಿಸೋಕೆ ಅವಕಾಶ ಕೊಡಿ. ನಿಮ್ಮ ಕೊನೇ ಮಾತು ನಿಜ. ಯಾವ ಭಾಷೆಗೂ ಯಾರ ಶಿಫಾರಸ್ಸೂ ಬೇಕಾಗಿಲ್ಲ. ಹಾಗೆ ಯಾವ ಭಾಷೆಗೂ ಯಾರ ಹೀಗಳೆತವೂ ಬೇಕಾಗಿಲ್ಲ.
 
ಈ ವಿಷಯದ ಬಗ್ಗೆ ಇಷ್ಟು ಟಿಪ್ಪಣಿಹಾಕಬೇಕಾದಂತೆ, ನನ್ನ ಅಲೋಚನೆಯನ್ನು ಹೊಮ್ಮಿಸುವಂತೆ ಆಗಿದ್ದುದ್ದಕ್ಕೆ,  ಚೇತನಾ ತೀರ್ಥಹಳ್ಳಿ ಅವರಿಗೆ ನಾನು ಆಭಾರಿ. ನಮಸ್ತೇ.
 
-ಹಂಸಾನಂದಿ
 
ಕೊ.ಕೊ: ಒಂದು ಲಹರಿಯಲ್ಲಿ ಬರೆಯುತ್ತ ಹೋಗಿದ್ದರಿಂದ - ಮುಗಿಸಿದ ಮೇಲೆ ಅಲ್ಲಲ್ಲಿ ನಾನು ಕೆಲವು ಕಡೆ ಚೇತನಾ ಅವರಿಗೆ ನೇರವಾಗಿ ಪ್ರಶ್ನಿಸಿದಂತೆಯೂ, ಉತ್ತರಿಸಿದಂತೆಯೂ, ಕೆಲವು ಕಡೆ ಪರೋಕ್ಷವಾಗಿ ಬರೆದಂತೆಯೂ ಆಗಿದೆ. ಆದರೆ ಇಷ್ಟ್ಯು ಉದ್ದ ಉತ್ತರ ಬೆಳೆದಮೇಲೆ ಮತ್ತೆ ಎಲ್ಲ ಕಡೆ ಹೋಗಿ ತಿದ್ದಿ ಒಂದೇ ರೂಪಕ್ಕೆ ತರಲಾಗಲಿಲ್ಲ. ಆದರೆ. ಓದಿದವರಿಗೆ ಒಟ್ಟಾರೆ ಅಭಿಪ್ರಾಯವನ್ನು ಅರಿಯಲು ತೊಡಕಾಗುವುದಿಲ್ಲವೆಂದು ಭಾವಿಸಿರುವೆ! ಹಾಗೇ ಒಂದಷ್ಟು ಅಚ್ಚಿನ ತಪ್ಪುಗಳೂ ಉಳಿದುಕೊಂಡಿರಬಹುದು. ಮನ್ನಿಸಿ. 

Rating
No votes yet

Comments

Huddar Shriniv…

Fri, 01/29/2016 - 14:52

ಹಂಸಾನಂದಿಯವರೇ, ಅಗ್ನಿ ಪತ್ರಿಕೆಯ ಚೇತನಾ ಅವರ ಬರಹಕ್ಕೆ ಸುಂದರವಾಗಿ ಉತ್ತರಿಸಿದ್ದೀರಿ. ಚೇತನಾ ಅವರ ಲೇಖನ ನಿಮಿತ್ಯವಾಗಿ ನಮಗೂ ನಿಮ್ಮಿಂದ ಒಳ್ಳೆ ಲೇಖನ ಸಿಕ್ಕ ಹಾಗಾಯಿತು.
ನಿಮ್ಮ ಜನಸಂಖ್ಯೆ ಇಷ್ಟು... ನಿಮ್ಮ ಸಾಕ್ಷರರ ಸಂಖ್ಯೆ ಇಷ್ಟು ......ನೀವು ಇನ್ನಷ್ಟು ಸಾಕ್ಷರರನ್ನಾಗಿಸಬೇಕು.....ಅಂದರೆ ಮಾತ್ರ ನಾವು ನಿಮಗೆ IMF ನಿಂದ LOAN ಕೊಡುತ್ತೇವೆ..... ಎನ್ನುವ ಕಾಲದಲ್ಲಿ ನಾವಿದ್ದೇವೆ. ಸಂಸ್ಕೃತ ಹೀಗೆ ಒತ್ತಾಯದಿಂದ ಸರಕಾರ ಕಲಿಸಿದ ಭಾಷೆಯಲ್ಲ.
ವಂದನೆಗಳು.

CanTHeeRava

Sat, 01/30/2016 - 05:45

ಹಂಸಾನಂದಿ ಅವರೇ, ನಾನು ಚೇ. ತೀರ್ಥಹಳ್ಳಿ ಅವರು ಬರೆದ ಲೇಖನ ಓದಿಲ್ಲ. ಸಂಸ್ಕೃತದ ಬಗ್ಗೆ ನನಗೆ ಗೌರವ ಇದೆ. ಆದರೆ, ಸಂಸ್ಕೃತದಲ್ಲಿ ಏನು ಇದ್ದರೂ ಅದೊಂದು ಅಪೂರ್ವ ಮಾಹಿತಿ, ಜ್ಞಾನ ಬೀಜ, ಇತ್ಯಾದಿ ಭಾವಗಳು ಇರುವುದನ್ನು ನೀವೂ ಒಪ್ಪುತ್ತೀರಿ. ಸಂದರ್ಭಕ್ಕೆ ಹೊಂದುತ್ತದೋ ಇಲ್ಲವೋ, ಸಂಸ್ಕೃತದ ಶ್ಲೋಕವೋ, ಉಕ್ತಿಯನ್ನೋ ಉದ್ಧರಿಸಿದರೆ, ಜನರೆಲ್ಲಾ "ಆಹಾ, ಓಹೋ" ಎಂದು ಗೋಣಾಡಿಸುವನ್ನು ನೋಡಿಲ್ಲವೇ ತಾವು ? ಅದು ಎಷ್ಟರ ಮಟ್ಟಿಗೆ ಅರ್ಥವಾಯ್ತು? ಯಾವ ಪುಣ್ಯಾತ್ಮ (ಪಾಪಾತ್ಮನೂ ಆಗಿರಬಹುದು) ಎಂಥ ಸಂದರ್ಭಕ್ಕಾಗಿ ಹೇಳಿದ್ದ ಅನ್ನೋ ವಿಚಾರ ಹಾಗಿರಲಿ. ಸಂಸ್ಕೃತದಲ್ಲಿದೆ ಅಂದ ಮಾತ್ರಕ್ಕೆ ಅದನ್ನು ಅಪೂರ್ವವಾದ ಸಾಹಿತ್ಯವೆಂದು ಪೂಜಿಸುವ ಭಾವನೆಯಷ್ಟೇ ನನಗೆ ಅಪಥ್ಯ.

>>ಸಂಸ್ಕೃತದ ಶ್ಲೋಕವೋ, ಉಕ್ತಿಯನ್ನೋ ಉದ್ಧರಿಸಿದರೆ, ಜನರೆಲ್ಲಾ "ಆಹಾ, ಓಹೋ" ಎಂದು ಗೋಣಾಡಿಸುವನ್ನು ನೋಡಿಲ್ಲವೇ ತಾವು ? ಅದು ಎಷ್ಟರ ಮಟ್ಟಿಗೆ ಅರ್ಥವಾಯ್ತು? ಯಾವ ಪುಣ್ಯಾತ್ಮ ...
-ಕಾರ್ಲ್ ಮಾರ್ಕ್ಸ್ ಈ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ-" In bourgeois society capital is independent and has individuality, while the living person is dependent and has no individuality........."
ಇಂತಹ ಡಯಲಾಗ್ ಉದುರಿಸಿದರೆ ಕ್ಲಾಪ್ಸೇ ಕ್ಲಾಪ್ಸ್ ಹೊಡೆಯುವವರಿಗೂ ಅದೂ ಅರ್ಥವಾಗಿರುತ್ತದೆ ಎಂದರ್ಥವಲ್ಲ...ಅಲ್ಲಿ ಕಾರ್ಲ್ಮಾರ್ಕ್ಸ್ ಶಬ್ದ ಕಿವಿಗೆ ಬಿತ್ತಲ್ಲ..ಅಷ್ಟು ಸಾಕು ಮೆಚ್ಚುಗೆ ಸೂಚಿಸಲು...
ಯಾವುದೇ ಭಾಷೆಯನ್ನು ಹೀಗಳೆಯುವುದು ಅದೂ ಅದರಲ್ಲಿ ಪಾಂಡಿತ್ಯಪಡೆದವರು ಮಾಡುವುದು ಸರಿಯಲ್ಲ. ನಾನೂ ಚೇತನ ಅವರ ಲೇಖನ ಓದಿಲ್ಲ, ಆದರೆ ಹಂಸಾನಂದಿಯವರು ಅವರ ಹೇಳಿಕೆ ಹಾಗೂ ತಮ್ಮ ಪ್ರತಿಕ್ರಿಯೆ ತಿಳಿಸುವ ಮೂಲಕ ಅವರಿಗೂ ನಮಗೂ ಅರ್ಥವಾಗುವಂತೆ ಮಾಡಿದ್ದಾರೆ. ನಮಗ್ಯಾಕೆ ಇದೆಲ್ಲಾ ಎಂದು ಸುಮ್ಮನಿರದೇ ಪ್ರತಿಕ್ರಿಯೆ ನೀಡಿದ ಹಂಸಾನಂದಿಯವರಿಗೆ ಧನ್ಯವಾದಗಳು.

ಮಾನ್ಯ ಗಣೇಶ್, ಸಂಸ್ಕೃತ ಭಾಷೆಯ ಸ್ಥಾನ ಮಾನವನ್ನು ಪ್ರಶ್ನಿಸುವ ಉದ್ದೇಶ ಯಾರಿಗೂ ಇರುವುದಿಲ್ಲ. ತಾವು ಕಾರ್ಲ್ ಮಾರ್ಕ್ಸ್ ಅಥ್ವಾ ಸ್ವಾಮಿ ವಿವೇಕಾನಂದರ ಹೆಸರು ಹೇಳಿ ಅಸಾಂದಾರ್ಭಿಕ ನುಡಿಮುತ್ತನ್ನು ಉದಾಹರಿಸಿರುವುದು ಸರಿಯೇ. ನೀವು ಹಂಸಾನಂದಿ ಅವರ ಪ್ರತಿಕ್ರಿಯೆಯ ಲೇಖನದ ಉದ್ದೇಶವನ್ನು ಗಮನಿಸಿದಂತಿಲ್ಲ. "ಯಾವುದೋ ಕಾಲದಲ್ಲಿ ನಡೆದ ಅನ್ಯಾಯಗಳನ್ನು ಎಷ್ಟರವರೆಗೆ ಎಳೆದುಕೊಳ್ಳುತ್ತಾ ಹೋಗುತ್ತೀರಿ?" ಎಂಬ ಅರ್ಥ ಕೊಡುವ ಅವರ ಪ್ರತಿಕ್ರಿಯೆಯನ್ನು ಗಮನಿಸಿ. ಮೂಲ ಲೇಖಕಿಯ ಉದ್ದೇಶವೂ ಸಂಸ್ಕೃತವನ್ನು ಹೀಗಳೆಯುವುದಾಗಿರಿಲಿಕ್ಕಿಲ್ಲ. ಸಂಸ್ಕೃತದ ಸುತ್ತ (ಭಾಷೆಯ ತಪ್ಪಿಲ್ಲ) ಬೆಳೆದಿರುವ "ತಾನು ಶ್ರೇಷ್ಠ, ಅಸಮಾನ" ಎಂಬ ಅಹಂ ಹುತ್ತವನ್ನು "ಕಾರ್ಲ್ಮಾರ್ಕ್ಸ್ ಅಥ್ವಾ ವಿವೇಕಾನಂದ"ರ ಕಟ್ಟಾಭಿಮಾನಿಗಳು ಪೂಜಿಸುತ್ತಾರಲ್ಲಾ.. ಅದನ್ನಷ್ಟೇ ಗಮನಿಸಿ.

Aravind M.S

Tue, 03/01/2016 - 15:23

ಇಂಗ್ಲೀಶಿನಲ್ಲಿಯೂ ಹಲವಾರು ಲ್ಯಾಟಿನ್ ಶಬ್ದಗಳು ಬಂದಿರುತ್ತವೆ. ಆದರೂ ಉಳಿಸಿಕೊಂಡಿದ್ದಾರೆ ಏಕಿರಬಹುದು ? ಈ ಪ್ರಶ್ನೆಗೆ ಉತ್ತರ ಮತ್ತು ಕನ್ನಡ ‍‍‍‍‍‍‍‍‍‍‍‍‍‍‍ಸಂಸ್ಕೃತದ ನಂಟಿಗೂ ಇರುವ ಉತ್ತರ ಒಂದೇ ಆಗಲಾರದೆ ! ದಾಸರ ಪದಗಳು ಕನ್ನಡದಲ್ಲೇ ಇದ್ದೂ ಅದರ ಉಲ್ಲೇಖ ಏಕೆ ಮಾಡಲು ಜನ ಹಿಂಜರಿವರೋ ಕಾಣದು (ನನ್ನ ಸಹಜ ಕುತೂಹಲ !! ). ಅವು ಶರಣರ ಪದಗಳಷ್ಟೇ ಶ್ರೇಷ್ಟವಲ್ಲ ಎಂಬ ಅಭಿಪ್ರಾಯವೋ ಇಲ್ಲಾ ಅದು ವಚನದಷ್ಟು
ಜನ ಜಾಗೃತಿ ಮಾಡಿಲ್ಲವೆಂದೋ.
ಒಟ್ಟಿನಲ್ಲಿ ಹಂಸಾನಂದಿಯವರ ಲೇಖನ ಹಲವು ವಿಚಾರಗಳನ್ನು ಹೊರ ತಂದಿದೆ, ವಂದನೆಗಳು
‍ ಅರವಿಂದ

Aravind M.S

Tue, 03/01/2016 - 15:43

ದಾಸರ‌ ಪದಗಳು ಅಷ್ಟೇ ಅಲ್ಲ, ಕನಕದಾಸರ ಕೃತಿಗಳು, ಕನ್ನಡಕ್ಕೆ ಅನುವಾದಿತ ಸಂಸ್ಕೃತ ರಚನೆಗಳು ಪ್ರಕಟವಾಗುವುದೇ ಕಡಿಮೆ. ಇದೂ ಒಂದು ಥರಾ ತಾರತಮ್ಯ ಅಲ್ಲವೇ.

Aravind M.S

Tue, 03/01/2016 - 15:44

ದಾಸರ‌ ಪದಗಳು ಅಷ್ಟೇ ಅಲ್ಲ, ಕನಕದಾಸರ ಕೃತಿಗಳು, ಕನ್ನಡಕ್ಕೆ ಅನುವಾದಿತ ಸಂಸ್ಕೃತ ರಚನೆಗಳು ಪ್ರಕಟವಾಗುವುದೇ ಕಡಿಮೆ. ಇದೂ ಒಂದು ಥರಾ ತಾರತಮ್ಯ ಅಲ್ಲವೇ.

Iynanda Prabhukumar

Fri, 03/04/2016 - 12:16

ಹಂಸನಂದಿಯವರ ಬರೆಹ ತರ್ಕಬದ್ಧವಾಗಿದೆ.
ಸಂಸ್ಕೃತದ ಆದಿ ಕವಿ ವಾಲ್ಮೀಕಿ ಬೇಡನಾಗಿದ್ದ. ಅವನೇನು ಬರೇ ರಾಮನಾಮವನ್ನು ಜಪಿಸಿ, ಋಷಿಯಾಗಿ, ರಾಮಾಯಣವನ್ನು ಬರೆದನೆಂದರೆ ನಂಬಲಾಗದು. ದರೋಡೆ ಮಾಡುವದನ್ನು ಬಿಡು, ಎಂದು ತಿಳಿಹೇಳಿದ ನಾರದರಲ್ಲೋ, ಸಪ್ತರ್ಷಿಗಳಲ್ಲೋ ಸಂಸ್ಕೃತ, ವೇದೋಪನಿಷತ್ತು, ಇತ್ಯಾದಿಗಳನ್ನು ಕಲಿತೇ ರಾಮಾಯಣವನ್ನು ಬರೆದ. ಹೀಗೆಯೇ ಅವಿದ್ಯಾವಂತ ಕುರುಬನೊಬ್ಬನು ಒಂದು ರಾತ್ರಿಯೆಲ್ಲಾ ಕಾಳೀಗುಡಿಯಲ್ಲಿ ಜಪ ಮಾಡಿ ದಿನಬೆಳಗಾಗುತ್ತಲೇ ಕವಿ ಕಾಳಿದಾಸನಾದನೇನು? ನಿಶ್ಚಿತವಾಗೂ ಇಲ್ಲ. ಅಂದರೆ ಆಗಲೇ ಸಂಸ್ಕೃತವನ್ನು ಬ್ರಾಹ್ಮಣರಲ್ಲದವರೂ ಕಲಿತಿದ್ದರು.
ಭಾಷೆಯೊಂದರಲ್ಲಿ ಆಗುವ ಪ್ರಗತಿಯೂ ಕ್ರಾಂತಿಯಲ್ಲವೇ? ನಮ್ಮ ಭಾರತೀಯ ಎಲ್ಲಾ ಭಾಷೆಗಳೂ ಸಂಸ್ಕೃತದಿಂದ ಹುಟ್ಟಿ ಬಂದಿಲ್ಲ; ಆದರೆ ಸಂಸ್ಕೃತವನ್ನು ಯಥೇಚ್ಚವಾಗಿ ಸೇರಿಸಿಕೊಂಡು ಸಮೃದ್ಧವಾಗಿ ಬೆಳೆದ ಕನ್ನಡವೂ ಸೇರಿದಂತೆ ಇತರ ಭಾಷೆಗಳಲ್ಲಾದ ಕ್ರಾಂತಿ ಸಾಮಾಜಿಕ ಕ್ರಾಂತಿಯ ಅಂಗ ಎಂದು ನನ್ನ ಅನ್ನಿಸಿಕೆ.