ಭಯ

Submitted by Prakash Narasimhaiya on Sat, 01/23/2016 - 10:28

ಮನುಷ್ಯನ  ಹದಿನಾಲ್ಕು ಗುಣಗಳಲ್ಲಿ 'ಭಯ' ವು ಕೂಡ ಒಂದು ಪ್ರಬಲವಾದ ಗುಣ.  ಹದಿನಾಲ್ಕು ಗುಣಗಳಲ್ಲಿ ಕೆಲವನ್ನು ಉದಾತ್ತೀಕರಣಗೊಳಿಸಿಕೊಳ್ಳಬೇಕು. ಇನ್ನು ಕೆಲವೊಂದನ್ನು ದೈವೀಕರಿಸಿಕೊಳ್ಳಬೇಕಾಗುತ್ತದೆ. ಮತ್ತೆ ಕೆಲವೊಂದನ್ನು ಸಂಪೂಣ೯ವಾಗಿ ಇಲ್ಲವಾಗಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ಭಯ ಎಂಬುದನ್ನು  ಇಲ್ಲವಾಗಿಸಿಕೊಳ್ಳಬೇಕಾಗುತ್ತದೆ. ದೈರ್ಯದಿಂದ ಇರಲು ಅಭ್ಯಾಸ ಮಾಡಬೇಕಾಗುತ್ತದೆ. "ಧೈರ್ಯಂ ಸರ್ವತ್ರ ಸಾಧನಂ".  
 
ಭಯವಿರಬಾರದು ಎಂದರೆ ಗುರುಹಿರಿಯರಲ್ಲಿ ಭಯ-ಭಕ್ತಿ ಇರಬಾರದು ಎಂದಥರ್ವಲ್ಲ. ಕೆಲವರು ಅನಗತ್ಯವಾಗಿ, ಅನಾವಶ್ಯಕವಾಗಿ ಭಯಪಡುತ್ತಿರುತ್ತಾರೆ. ಇಂತಹವರ ಭಯವು ಎಷ್ಟು ಬಾಲಿಶವಾಗಿರುತ್ತೆಂದರೆ- ಯಾರಾದರೂ ನಮಗೆ ಏನಾದರೂ ಕೇಡು ಮಾಡಬಹುದೇನೋ  ಎಂಬ ಭಯ, ನಮಗೆ ಒಂದು ಪಕ್ಷ ಕಷ್ಟಗಳು,  ತೊಂದರೆಗಳು, ದುಃಖ -ದುಮ್ಮಾನಗಳು ಬಂದುಬಿಟ್ಟರೆ  ಏನು ಮಾಡುವುದು? ಯಾರೂ ಮನೆಯಲ್ಲಿ ಇಲ್ಲದೆ ಇದ್ದಾಗ ಆಕಸ್ಮಾತ್ತಾಗಿ  ಸಾವು ಬಂದುಬಿಟ್ಟರೆ ಏನುಗತಿ ? ಹೀಗೆ ಹಲವು ಹದಿನೆಂಟು ರೀತಿಯ ಭಯದಿಂದ ಹೆದರಿಕೊ೦ಡು ದಿನನಿತ್ಯದಲ್ಲಿ ಹಲವರು ಬದುಕಿದ್ದೂ  ಸತ್ತಂತೆ ಹೇಡಿಗಳಾಗಿ ಇರುತ್ತಾರೆ. ಇಂತಹ ಹೆದರಿಕೆಗೆ ಯಾವುದೇ ಸ್ಪಷ್ಟ ಕಾರಣವಿಲ್ಲ. ಇದು ಕೇವಲ ಇವರ ದುರ್ಬಲವಾದ ಮನಸ್ಥಿತಿ ಅಷ್ಟೇ.  ಈ ಜಗತ್ತನ್ನು ನಿರ್ವಾಹ ಮಾಡುವ ಸೃಷ್ಟಿಕತ೯ನಲ್ಲಿ, ತಾನು ದೃಢವಾಗಿ ನಂಬಿದ ಗುರುವಿನಲ್ಲಿ ಹಾಗೂ ನಮ್ಮ ಋಷಿಮುನಿಗಳು ನಮಗಾಗಿ ಬಿಟ್ಟುಹೋದ ತತ್ತ್ವ, ಸಿದ್ದಾಂತಗಳಲ್ಲಿ ಅಚಲ ನಂಬಿಕೆಯುಳ್ಳವರು ಯಾವತ್ತೂ ಹೆದರುವುದಿಲ್ಲ . ಭಗವಂತನ ಮೇಲೆ ಅಚಲವಾದ ವಿಶ್ವಾಸವಿರಿಸಿ ನೆಮ್ಮದಿಯಾಗಿ ಬದುಕುತ್ತಾರೆ. ಯಾವುದು ಆಗಲೇಬೇಕೆಂಬ ನಿಶ್ಚಯ ಭಗವಂತನ ಸಂಕಲ್ಪದಲ್ಲಿ ಆಗಿಹೊಗಿದೆಯೋ ಅದು ಆಗಿಯೇ ತೀರುತ್ತದೆ, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದೇ ರೀತಿ ಯಾವುದು ಆಗಬಾರದೆಂಬುದು ಭಗವಂತನ ಸಂಕಲ್ಪದಲ್ಲಿ ನಿಶ್ಚಯವಾಗಿದೆಯೋ ಅದನ್ನು ಆಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಅರಿತು, ಅನ್ಯಥಾ ಚಿಂತೆ ಬಿಟ್ಟು ತಮ್ಮ ಕೆಲಸ ತಾವು ಮಾಡುತ್ತಾ  ಸತ್ಯದಲ್ಲಿ ಮತ್ತು  ಧಮ೯ದಲ್ಲಿ ಬದುಕುತ್ತಾರೆ.  
 
ಧೈಯ೯ದಿಂದ ಹೆಜ್ಜೆ ಮುಂದಿಟ್ಟಾಗ ಯಶಸ್ಸು ಖಂಡಿತ. ನಾವು  ಸಂಶಯದಿಂದ ಹೆದರಿ ಹಿಂದೆ ಹೆಜ್ಜೆ ಇಟ್ಟರೆ ಸೋಲು ಅನುಭವಿಸಬೇಕಾಗುತ್ತದೆ . ಸತ್ಯಕಾಗಿ, ಧಮ೯ಕ್ಕಾಗಿ ದುಡಿಯುವ೦ತಹ  ಅವಕಾಶ ಸಿಕ್ಕಾಗ ಸಂತೋಷದಿಂದ ಸ್ವಿಕರಿಸಿ,  ಅದೆಷ್ಟೇ ಕಷ್ಟ ಬಂದರೂ ಎದುರಿಸುವ ದೃಢ ಸಂಕಲ್ಪದೊಂದಿಗೆ  ನಮ್ಮ ಮನಸ್ಸು ಗಟ್ಟಿಮಾಡಿಕೊಳ್ಳಬೇಕು. ನಾವು ನ್ಯಾಯನಿಷ್ಟುರಿಗಳಾಗಬೇಕು,  ದಾಕ್ಷಿಣ್ಯಪರರಾಗಬಾರದು. ಒಂದು ಪಕ್ಷ ಮರಣವೇ ಸಂಭವಿಸುವುದಾದರು ಅದನ್ನೇ  ಮಹಾನವಮಿ ಎಂದು ಸಂತೋಷದಿಂದ ಸಾವನ್ನು ಸ್ವೀಕರಸಲು ತಯಾರಾದಾಗ ಭಗವಂತನ ಸಹಾಯ ನಮ್ಮೊಂದಿಗೆ ಸದಾಕಾಲ ಇದ್ದೆ ಇರುತ್ತದೆ. 
 
ಅಸಂಖ್ಯಾತ ಮಹಾತ್ಮರು, ಸಂತರು, ಶರಣರು ಸತ್ಯ-ಧಮ೯ದ ಮಾಗ೯ದಲ್ಲಿ ನಡೆದು, ಪರೋಪಕಾರ ಮಾಡುತ್ತಾ ಸಮಾಜ, ರಾಷ್ಟ್ರ , ಧಮ೯ಕ್ಕಾಗಿ ಬದುಕಿ ತಮ್ಮ ಜೀವನವನ್ನು  ಸಾಥ೯ಕಪಡಿಸಿಕೊಂಡಿದ್ದಾರೆ.   ಅವರಿಗೆ ಯಾವ ಭಯವು ಕಾಡಲಿಲ್ಲ.  ಅವರ ಜೀವನದ ಆದರ್ಶವೆನ್ನೆಲ್ಲಾ  ದೇಶಕ್ಕಾಗಿ ಮುಡುಪಾಗಿಸಿ,  ನಮಗಾಗಿ ದುಡಿದಿದ್ದಾರೆ; ದೇಶಕ್ಕಾಗಿ ಮಡಿದಿದ್ದಾರೆ. ಮರಣಭಯವನ್ನು ಗೆದ್ದು ಅಮರಾತ್ಮರಾಗಿದ್ದಾರೆ. ಇಂತಹ ಮರಣಭಯವನ್ನೇ  ಗೆದ್ದವರು ಮಾತ್ರ ನಿಜವಾದ ಶರಣರಾಗಲು ಸಾಧ್ಯ. ಇಂತಹ ಆದರ್ಶ ಪುರುಷರು ಹುಟ್ಟಿದ ನಾಡಲ್ಲಿ ನಾವಿರುವುದು ನಮ್ಮ ಪರಮ ಸೌಭಾಗ್ಯವಲ್ಲವೇ? ಇಂತಹವರು ನಮಗೆ ಆದರ್ಶರಾಗಬೇಕಲ್ಲವೇ?
 
" ಚಿಂತೆ ಯಾತಕೋ? ಮನದಿ ಭ್ರಾಂತಿ ಯಾತಕೋ?" ಎಂದು ಪುರಂದರ ದಾಸರು ಕೇಳುತ್ತಾ " ನಂಬಿ ಕೆಟ್ಟವರಿಲ್ಲವೋ ರಂಗಯ್ಯನ, ನಂಬದೆ ಕೆಟ್ಟರೆ ಕೆಡಲಿ" ಎಂಬ ಆಶ್ವಾಸನೆ ಕೊಡುತ್ತಾರೆ.   ಚಿಂತೆ ಬಿಟ್ಟು ಭಗವಂತನ ಸ್ಮರಣೆ ಮಾಡುತ್ತಾ ಸತ್ಯಧರ್ಮದ ಹಾದಿಯಲ್ಲಿ ಜೀವನ ನಡೆಸುವವಗೆ ಯಾವ ಭಯವು ಕಾಡದು.