' ಯೂ.ಆರ್.ಅನಂತಮೂರ್ತಿಯವರ ಕೆಲವು ಕಥೆಗಳ ಅವಲೋಕನ ' (ಭಾಗ-2)

Submitted by H A Patil on Sat, 01/23/2016 - 15:50
ಚಿತ್ರ

                          
                 
     ‘ಸೂರ್ಯನ ಕುದುರೆ’ ಅನಂತ ಮೂರ್ತಿಯವರ ಇನ್ನೊಂದು ಪ್ರಾತಿನಿಧಿಕ ಕಥೆ, ಅವರ ಬದುಕು ಪ್ರಾರಂಭವಾದದ್ದೆ ಮಲೆನಾಡಿನ ಪರಿಸರದಿಂದ. ಅವರು ನಮ್ಮ ಕಾಲದ ಯಾವತ್ತಿಗೂ ನಿಲ್ಲಬಲ್ಲ ಸಾಂಸ್ಕೃತಿಕ ಚಿಂತಕ ಈ ಕಾಲದ ಸವಾಲುಗಳಿಗೆ ಅವರು ನೇರವಾಗಿ ಸ್ಪಂದಿಸಿದ್ದಾರೆ. ಅವರಿಗೆ ಸಾಹಿತ್ಯವೆನ್ನುವುದು ಕೇವಲ ಅಭಿವ್ಯಕ್ತಿ ಕ್ರಮವಾಗಿರಲಿಲ್ಲ ಅದರಾಚೆಗೂ ಅವರ ಚಿಂತನೆ ಇತ್ತು. ಬರಿಯ ಪ್ರಚಾರಕ್ಕಾಗಿ ಅವರು ಬರೆಯಲಿಲ್ಲ. ಪ್ರಸಿದ್ಧ ಆಂಗ್ಲ ಲೇಖಕ ಜಾರ್ಜ ಆರ್ವೆಲ್ ಲೇಖಕ ವರ್ಗವನ್ನು ನಾಲ್ಲು ನೆಲೆಗಳಲ್ಲಿ ಗುರುತಿಸಿದ್ದಾನೆ. ಪ್ರಸಿದ್ಧಿಗಾಗಿ ಬರೆಯುವವರು, ಮತ್ತು ಶಬ್ದಗಳ ಸೌಂದರ್ಯಕ್ಕೊಸ್ಕರ ಬರೆಯುವವರಾದರೆ ಕೆಲರು ತಮ್ಮ ಕೆಲವು ಅನಿಸಿಕೆಗಳನ್ನು ಶಬ್ದಗಳ ರೂಪದಲ್ಲಿ ಹಿಡಿದಿಡುವವರಾದರೆ ಇನ್ನೊಂದು ವರ್ಗ ಜೊತೆಗೆ ಮುಂದಿನ ಪೀಳಿಗೆಗೆ ಅವುಗಳನ್ನು ದಾಟಿಸುವುದು ಮತ್ತೊಂದು ಕಾರಣ ಎಂದಿದ್ದಾನೆ. ಬಹುಶಃ ಈ ಮಾನದಂಡಗಳಲ್ಲಿ ಅನಂತಮೂರ್ತಿಯವರನ್ನು ಗುರುತಿಸುವುದಾದಲ್ಲಿ ಅವರು ಸೌಂದರ್ಯ ಮತ್ತು ರಾಜಕೀಯ ಕಾರಣಗಳಿಗೋಸ್ಕರ ಬರೆದಾಗ ಯಶಸ್ವಿಯಾಗಿದ್ದಾರೆ ಎನಿಸುತ್ತದೆ. ಅವರ ಬರವಣಿಗೆಯಲ್ಲಿ ಆಗಾಗ ಕಾಣಿಸಿಕೊಳ್ಳುವ ರಾಜಕೀಯ ಈಗಿನ ಪಕ್ಷ ರಾಜಕಾರಣ ಹೊರತು ಪಡಿಸಿದ್ದು ಎಂಬುದನ್ನು ಗಮನಿಸಬೇಕು.. ಅವರು ಬಳಸುವ ರಾಜಕಾರಣ ಎನ್ನುವ ಪದ ಮತ್ತು ಆಲೋಚನಾ ಕ್ರಮ ಎಲ್ಲರ ಬದುಕು ಹಸನಾಗಬೇಕೆಂಬುದು, ಅಭಿವೃದ್ಧಿ ಪದದ ಬದಲು ಸರ್ವೋದಯ ಎಂಬುದನ್ನು ಅವರು ಪ್ರತಿಪಾದಿಸಿದ್ದರು.  ರಾಜಕೀಯವೆನ್ನುವುದು ಕೇವಲ ಸೀಮಿತ ಚೌಕಟ್ಟಿನಲ್ಲಿ ಬಂಧಿತವಾಗದೆ ಸಾಹಿತ್ಯಕ ಮಾನದಂಡಗಳನ್ನು ಅದು ತಲುಪಬೇಕು ಎನ್ನುವ ಆಶಯ ಅವರದಾಗಿತ್ತು. ಅವರು ತಮ್ಮ ಕೃತಿಗಳಲ್ಲಿ ಎತ್ತಿದ ವಿಷಯಗಳು ಬರಿ ಚರ್ಚೆ ಮಾತ್ರ ಆಗಿರಲಿಲ್ಲ ಅವು ಜೀವನದ ಶೋಧ ಗಳಾದುದು ವಿಶೇಷ. ಯಾಕೆಂದರೆ ಚರ್ಚೆಯಲ್ಲಿ ಸತ್ಯದ ಹುಡುಕಾಟವಿರುವುದಿಲ್ಲ ಇಲ್ಲಿ ಬರಿ ಮಾಹಿತಿ ಸಂಗ್ರಹಣೆ ಮತ್ತು ಅವುಗಳ ಪ್ರತಿಪಾದನೆ ಮಾತ್ರ ಇರುತ್ತದೆ. ಆದರೆ ಇದು ಸತ್ಯದ ಶೋಧವಾಗುವುದಿಲ್ಲ. ಬರಿ ಚರ್ಚೆ ಮಾಡುವ ಬರವಣಿಗೆ ಅವರಿಗೆ ಇಷ್ಟವಾಗುವುದಿಲ್ಲ. ಸಾಹಿತ್ಯ ಶೋಧದ ಜೊತೆಗೆ ಅದು ಒಂದು ಹುಡುಕಾಟವಾಗಬೇಕು ಎನ್ನುವ ನಿಲುವು ಅವರದಾಗಿದ್ದು ಅವರ ಕೃತಿಗಳಲ್ಲಿ ಬರುವ ಪಾತ್ರಗಳು ಜೀವನದ ಶೋಧ ಮಾಡುತ್ತವೆ. ಅವರು ಸೃಷ್ಟಿಸುವ ಪಾತ್ರಗಳ ಮುಖಾಮುಖಿಗಳು ಕೇವಲ ಚರ್ಚೇಗೆ ಸೀಮಿತವಾಗುವುದಿಲ್ಲ ಅವು ಶೋಧನೆಯ ಮಾರ್ಗವಾಗುತ್ತವೆ. 
 
     ‘ಸೂರ್ಯನ ಕುದುರೆ’ ಕಥೆಯಲ್ಲಿಯೂ ಒಂದು ಶೋಧ ಕಂಡು ಬರುತ್ತದೆ. ಈ ಕೃತಿಯಲ್ಲಿ ಅವರು ಹೇಳುವ ಮಾತುಗಳ ಬಗೆಗೆಯೆ ಅವರಲ್ಲಿ ಅನುಮಾನಗಳಿವೆ. ಅವರು ತಮ್ಮ ಆತ್ಮಕಥೆ ಸುರಗಿಯಲ್ಲಿ ಈ ಕಥೆ ಹುಟ್ಟಿಕೊಂಡ ಕ್ಷಣದ ಬಗೆಗೆ ದಾಕಲಿಸಿದ್ದಾರೆ. ಅವರು ಒಮ್ಮೆ ತಮ್ಮ ಮನೆಯಲ್ಲಿ ಮಾರ್ಕ್ಸ ನ ಕೃತಿಯೊಂದನ್ನು ಓದುತ್ತ ಕುಳಿತಿದ್ದಾಗ ಅವರ ಮಗಳು ಕೀಟವೊಂದನ್ನು ತೋರಿಸಿ ಅದು ಏನೆಂದು ಪ್ರಶ್ನಿಸುತ್ತಾಳೆ. ಅದಕ್ಕೆ ಅವರು ಅದು ಸೂರ್ಯನ ಕುದುರೆ ಎಂದು ಉತ್ತರಿಸುತ್ತಾರೆ. ಈ ಸಂಧರ್ಭದಲ್ಲಿ ಚಿಗುರೊಡೆದು ಬೆಳೆದ ಉತ್ತಮ ಕಥೆ ಇದು. ಕಾರ್ಲಮಾಕ್ರ್ಸ್ ಏಶಿಯಾ ಮತ್ತು ಭಾರತ ಕುರಿತು ಮಾತನಾಡುವಾಗ ಇಲ್ಲಿನ ಗ್ರಾಮೀಣ ಬದುಕನ್ನು ಒಟ್ಟರ್ಥದಲ್ಲಿ ಗ್ರಾಮ ಮೌಢ್ಯವೆಂದು ಕರೆದು ಬಿಡುತ್ತಾನೆ. ಫ್ಯೂಡಲಿಸಂ, ಕ್ಯಾಪಿಟ್ಯಾಲಿಸಂ ಮತ್ತು ಸೋಸಿಯಾಲಿಸಂಗಳು ಬಂದರೂ ಗ್ರಾಮಗಳು ಮೌಢ್ಯಗಳ ಕೂಪಗಳು ಯಾಕೆಂದರೆ ಇಲ್ಲಿ ಚಲನೆಯಿಲ್ಲ.ಮಾರ್ಕ್ಸನಿಗೆ ಹಳ್ಳಿ ಎನ್ನುವುದು ಬರಿ ಮೌಢ್ಯದ ಸಂಕೇತ ಜೊತೆಗೆ ಹಳ್ಳಿಗರು ಹಿಂದುಳಿದವರು ಎನ್ನುತ್ತಾನೆ. ಆತನ ಈ ಧೋರಣೆ ಅನಂತಮೂರ್ತಿ ಯವರಿಗೆ  ಕಿರಿ ಕಿರಿ ಎನಿಸುತ್ತದೆ. ಹೀಗಾಗಿ ಅವರಿಗೆ ‘ಸೂರ್ಯನ ಕುದುರೆ’ ಒಂದು ಶ್ರೇಷ್ಟ ರೂಪಕವಾಗಿ ಕಂಡು ಬರುತ್ತದೆ. ಈ ಕಥೆಯಲ್ಲಿ ಒಂದು ಸಾಮಾನ್ಯ ಕೀಟ ಸೂರ್ಯನ ಕುದುರೆಯಾಗಿ ಮಾರ್ಪಟ್ಟಿದೆ. ಉನ್ನತ ಆಶಯಗಳ ನಮ್ಮ ಗ್ರಾಮ್ಯ ಬದುಕನ್ನು ಮತ್ತು ನಮ್ಮ ಗ್ರಾಮೀಣರು ಈ ಜೀವ ಜಾಲದೊಳಗಿನ ಸೂರ್ಯ ಮತ್ತು ಮಿಡತೆಗಳ ಸಂಬಂಧವನ್ನು ಸೂಚಿಸುವಾಗ ಅದನ್ನು ಬರಿ ಮೌಢ್ಯವೆಂದು ಹೇಗೆ ಕರೆಯಲು ಸಾಧ್ಯ  ಎಂಬ ಯೋಚನೆ ಅವರದಾಗುತ್ತದೆ. ಅವರು ತಮ್ಮ ಗ್ರಾಮ್ಯ ಬದುಕಿನಲ್ಲಿ ಕಂಡ ವ್ಯಕ್ತಿಯನ್ನು ಹಡೆ ವೆಂಕಟ ಎಂಬ ಪಾತ್ರದ ಮೂಲಕ ಸೃಷ್ಟಿಸಿ ಎಲ್ಲ ಸ್ಥೂಲ ವಿವರಗಳನ್ನೂ ಮೀರಿ ಒಂದು ಕಥೆ ರೂಪಗೊಳ್ಳುತ್ತ ಹೋಗುತ್ತದೆ.
 
     ಈ ಕಥೆಯ ನಿರೂಪಕ ಅನಂತು ಎನ್ನುವ ವ್ಯಕ್ತಿ ಕಥಾನಾಯಕ ಹಡೆ ವೆಂಕಟನ ಸ್ನೇಹಿತ. ವೆಂಕಟನ ಗುಣ ಸ್ವಭಾವಗಳನ್ನು ಒಪ್ಪದ ಆತನ ಹೆಂಡತಿಗೆ ಮಗ ಮುಖ್ಯ. ಇದೊಂದು ನವ್ಯ ಧೋರಣೆಯ ಕಥಾನಕ ಯೋಚನಾ ಕ್ರಮದಲ್ಲಿ ಬಿಚ್ಚಿಕೊಳ್ಳುತ್ತ ಸಾಗುತ್ತದೆ. ಈ ಕಥೆಯ ನಿರೂಪಕ ಅನಂತು ಹಡೆ ವೆಂಕಟನ ಬಾಲ್ಯ ಸ್ನೇಹಿತ ಇವರಿಬ್ಬರ ಮರುಭೇಟಿ ಕಥಾ ನಿರೂಪಣೆಗೆ ಒಂದು ರೀತಿಯ ಚಾಲನೆಯನ್ನು ನೀಡುತ್ತದೆ. ಇಡಿ ಕಥೆಯಲ್ಲಿ ಆಗುವಂತಹುದು ಜೀವನದ ಶೋಧ ಇಲ್ಲಿ ರೋಚಕತೆಯಿದೆ ರಾಜಕೀಯವೂ ಇದೆ, ಎಲ್ಲದನ್ನೂ ತಾರ್ಕಿಕವಾಗಿ ನೋಡುವುದು ಲೇಖಕರ ಒಂದು ವಿಧಾನ. ನಿರೂಪಕ ಅನಂತು ಮಾತನಾಡುವುದು ಈ ಧಾಟಿಯಲ್ಲಿ ಇಲ್ಲಿ ರಾಜಕೀಯ ಪ್ರಣಾಲಿಗಳ ರೂಪ ರೇಷೆಗಳಿವೆ ಇದಕ್ಕೆ ತದ್ವಿರುದ್ಧವಾದುದು ಕಥಾನಾಯಕ ಹಡೆ ವೆಂಕಟನ ಸ್ವಭಾವ. ಈತ ಗ್ರಾಮದಲ್ಲಿ ಎಲ್ಲರಿಗೂ ಬೇಕಾದವನು ತನ್ನ ಆಪ್ತರೆಲ್ಲರಿಗೂ ಅಭ್ಯಂಜನ ಮಾಡಿಸುವುದು ಈತನಿಗೆ ಪ್ರೀತಿಯ ಸಂಗತಿ. ಇಲ್ಲಿ ಕಥೆ ಚಾಲನೆ ಪಡೆಯುವುದು ಮಾತುಕತೆಯ ಮೂಲಕ. ವೆಂಕಟ ತನ್ನ ವಿಚಾರ ಹೇಳುತ್ತ ಹೋಗುವಾಗ ಅನಂತು ವ್ಯಕ್ತ ಪಡಿಸುವ ವಿಚಾರ ದುರಹಂಕಾರದ್ದು ಎಂಬ ಧೋರಣೆ ವೆಂಕಟನದು. ಈ ರೀತಿ ಸಂವಾದದ ರೂಪದಲ್ಲಿ ಕಥೆ ಸಾಗುತ್ತದೆ. ಹೀಗೆ ಎರಡು ರೀತಿಯ ತರ್ಕ ಮತ್ತು ಅನುಭವಗಳ ಮಧ್ಯೆ ವಿಮರ್ಶೆಗೊಳ್ಳುತ್ತ ಹೋಗುವಂತಹುದು, ಯಾಕೆ ಇದು ಶೋಧವಾಗುತ್ತದೆ ಎಂದರೆ ಅವರಿಬ್ಬರಲ್ಲಿ ಮುಕ್ತತೆಯಿದೆ. ಕೊನೆಯ ಹಂತಕ್ಕೆ ಬಂದಾಗ ಒಂದು ರೀತಿಯ ಹೊಸ ದರ್ಶನವನ್ನು ಸೂಚಿಸುತ್ತಿರಬಹುದೆ ಎನ್ನುವ ಪ್ರಶ್ನೆ ಓದುಗನನ್ನು ಕಾಡುತ್ತದೆ. ಥಿಸೆಸ್ ಮತ್ತು ಯಾಂಟಿ ಥಿಸೆಸ್‍ಗಳ ಮೂಲಕ ಬಿಚ್ಚಿಕೊಳ್ಳುವ ಕಥಾನಕದ ನಿರೂಪಕ ಅನಂತುವಿನ ದೃಷ್ಟಿಯಲ್ಲಿ ವೆಂಕಟ ಒಬ್ಬ ನಿಷ್ಪ್ರಯೋಜಕ ವ್ಯಕ್ತಿ ಎನ್ನುವುದರ ಜೊತೆಗೆ ಅವನಲ್ಲಿಯೂ ಒಂದು ಅರ್ಥವಿದೆ ಎಂದು ಯೋಚಿಸುವವನು. ಇಲ್ಲಿ ರಾಜಕೀಯವೆಂದರೆ ಜೀವಂತಿಕೆಯ ಲಕ್ಷಣದ ಬದಲಾವಣೆ. ಆದರೆ ಈ ಬದಲಾವಣೆ ಯಾವ ದಿಕ್ಕಿನಲ್ಲಾಗುವ ಬದಲಾವಣೆ ಉಳ್ಳವರ ದಿಕ್ಕಿನಲ್ಲೋ ಇಲ್ಲ ಇರದವರ ದಿಕ್ಕಿನಲ್ಲೋ? ಶ್ರೀಮಂತರ ಪರವಾಗಿರಬಹುದಾದ ಬದಲಾವಣೆಗಳೋ ಬಡವರ ಪರವಾಗಿರಬಹುದಾದ ಬದಲಾವಣೆಯೋ? ನನ್ನದೆ ಸತ್ಯ ಎಂದು ಪ್ರತಿಪಾದಿಸುವುದು ಒಂದು ಅಪಾರ ಹಿಂಸೆಯ ದ್ಯೋತಕ. ತನ್ನ ಜೀವನ ಕ್ರಮವನ್ನು ಸಮರ್ಥಿಸಿಕೊಳ್ಳುವ ಹಡೆ ವೆಂಕಟನಿಗೆ ಒಂದು ಅನುಮಾನವಿದೆ. ಆತನ ಮಗ ಸುಬ್ಬನೆ ಆತನ ಸೋಲು. ಆಸಕ್ತಿ ಹುಟ್ಟಿಸುವ ಜೀವನದ ಮುಖಾ ಮುಖಿಯ ಕಥಾನಕವಿದು. ಒಂದನ್ನು ಎತ್ತಿ ಹಿಡಿದು ಇನ್ನ್ನೊಂದನ್ನು ಕಡೆಗಣಿಸುವ ಚರ್ಚೆಯಲ್ಲ ಕಾರಣ ಇದೊಂದು ಶೋಧವಾಗುತ್ತದೆ.
 
     ಪರಮಾತ್ಮ ಕೆಲವರಿಗೆ ಅಪ್ಪ, ಕೆಲವರಿಗೆ ಅಮ್ಮ ಬಾ ! ನಿನಗೆ ಸ್ನಾನ ಮಾಡಿಸುತ್ತೇನೆ ತಲೆ ಹಗುರವಾಗುತ್ತೆ ಎಂದು ಹಡೆ ವೆಂಕಟ ಅನಂತುವನ್ನು ಕರೆಯುತ್ತಾನೆ. ಮಗುವಿನ ಮುಗ್ಧತೆ ಮತ್ತು ವೈಚಾರಿಕತೆಯ ಶೋಧ ಭಾಷೆಯ ಮೂಲಕ ತೆರೆದುಕೊಳ್ಳುತ್ತ ವ್ಯಕ್ತವಾಗುತ್ತ ಹೋಗುತ್ತದೆ. ಆರ್ದವಾಗಿ ಸುಂದರವಾಗಿ ಜೊತೆಗೆ ಅರ್ಥಪೂರ್ಣವಾಗಿ ಕಥೆ ವಿಸ್ತಾರ ಮತ್ತು ವಿವರಗಳ ಮೂಲಕ ತೆರೆದು ಕೊಳ್ಳುತ್ತ ಸಾಗುತ್ತದೆ. ಅಭ್ಯಂಜನ ಮಾಡಿಸುವ ವೇಳೆ ಹಡೆ ವೆಂಕಟನ ಬಾಯಿಯಿಂದ ಹೊರಡುವ ಮಾತುಗಳು ಕಾವ್ಯಮಯ ಅರ್ಥಪೂರ್ಣ ರೂಪಕಗಳಾಗಿವೆ. ಈ ಕಥೆಗೆ ಒಂದು ಐತಿಹಾಸಿಕ ಮಹತ್ವವಿದೆ. ವಿಮರ್ಶೆಯ ಹಲವು ಮಜಲುಗಳಲ್ಲಿ ಇದನ್ನು ಗುರುತಿಸಿದ್ದಾರೆ. ಆಧುನಿಕತೆ ಮತ್ತು ಪರಂಪರೆಗಳ ನಡುವಿನ ವಾಗ್ವಾದ ನಂತರ ಆಧುನಿಕತೆ ಮತ್ತು ಪರಂಪರೆಯ ವಿಮರ್ಶೆಯಿಂದ ಆಧುನಿಕ ವಿಮರ್ಶೆಯ ಕಡೆಗೆ ಹೊರಳುವ ಕಾಲಘಟ್ಟ ಈ ಕಥೆಯದು. 
 
     ಅನಂತಮೂರ್ತಿಯವರು ತಮ್ಮ ಇಳಿ ವಯಸ್ಸಿನಲ್ಲಿ ಬರೆದ ಕೆಲ ಕಥೆಗಳ ಪೈಕಿ ‘ಕ್ಲಿಪ್ ಜಾಯಿಂಟ್’ ಸಹ ಒಂದು.. ಮೂರ್ತಿಯವರು ಇಲ್ಲಿ ಇನ್ನ್ನೊಂದು ಪ್ರಪಂಚವನ್ನು ಅನಾವರಣ ಗೊಳಿಸಿದ್ದಾರೆ. ಈ ಕಥೆಯ ಕಥಾನಾಯಕ ಕೇಶವ ಇಂಗ್ಲೀಷ್ ಓದಿದವನು ಇಲ್ಲಿನ ಸಾಂಪ್ರದಾಯಿಕ ರೀತಿ ನೀತಿಗಳಿಗೆ ರೋಸಿ ಹೋಗಿ ಹೊಸ ಅನುಭವಕ್ಕಾಗಿ ಇಂಗ್ಲಂಡಿಗೆ ತೆರಳುತ್ತಾನೆ. ಅಲ್ಲಿನ ಸ್ಟುವರ್ಟ್‍ನೊಡನೆ ಈತನ ಸ್ನೇಹ ಕುದುರುತ್ತದೆ. ಕೇಶವನನ್ನು ಇಂಗ್ಲಂಡ್ ಆಕರ್ಷಿಸಿದಂತೆ ಸ್ಟುವರ್ಟ್‍ನಿಗೆ ಭಾರತ ಆಕರ್ಷಕವಾಗಿ ಕಾಣುತ್ತದೆ, ಇಂಗ್ಲಂಡ್ ಆತನಿಗೆ ಸೃಜನಶೀಲತೆಯಿಲ್ಲದ ದೇಶವಾಗಿ ಕಾಣುತ್ತದೆ. ಇಂಗ್ಲಂಡಿನಲ್ಲಿ ಭೋಗ ಸಂಸ್ಕøತಿ ಒಂದು ಪರಕಾಷ್ಟತೆಗೆ ತಲುಪಿರುತ್ತದೆ. ಈ ಕಥಾನಕದಲ್ಲಿ ಅನಂತಮೂರ್ತಿ ಭಾರತದ ಅದರಲ್ಲೂ ಮಲೆನಾಡಿನ ಕೇಶವ ಮತ್ತು ಪಾಶ್ಚಾತ್ಯ ದೇಶದ ಸ್ಟುವರ್ಟ್‍ರನ್ನು ಎದುರು ಬದುರಾಗಿಸುವ ಮೂಲಕ ಭಾರತೀಯ ಮತ್ತು ಪಾಶ್ಚಾತ್ಯ ಸಂಸ್ಸøತಿಗಳ ಅವಲೋಕನ ಮಾಡಿಸುತ್ತಾರೆ. 
 
     ಇನ್ನೊಂದು ಕಥೆ ‘ಪಚ್ಚೆ ರೆಸಾರ್ಟ್’ ಬರೆದಾಗ ಅವರು ಎಂಭತ್ತು ವರ್ಷಗಳನ್ನು ದಾಟಿದ್ದರು. ನಗರಗಳಿಂದ ಮಲೆನಾಡಿಗೆ ಮರು ಪಯಣದ ಕುರಿತು ಸೂಕ್ಷ್ಮವಾಗಿ ಅವಲೋಕಿಸುತ್ತ ಮಥಿಸುತ್ತ ಸಾಗುವಂತಹುದು. ಈ ರೆಸಾರ್ಟ್ ಸಂಸ್ಕøತಿ ವಿಕೃತಿಗೆ ಹಿಡಿದ ಕನ್ನಡಿ ಎನ್ನುತ್ತಾರೆ. ನಗರವಾಸಿಗಳಿಗೆ ಮನೆ ಸಂಸ್ಕøತಿ ಒಂದು ಮಾರಾಟದ ಸರಕಾಗಿದೆ. ನಮ್ಮ ಸಾಮಾಜಿಕ ಧಾರ್ಮಿಕ ಆಚರಣೆಯ ಗ್ರಾಮೀಣ ಸಂಸ್ಕøತಿ ಇಂದು ಒಂದು ಮಾರಾಟದ ಸರಕಾಗಿದೆ. ಹೀಗಾಗಿ ಗ್ರಾಮೀಣ ಪರಿಸರ ಮಲೆನಾಡಿನ ಹಳೆಯ ಮನೆಗಳು  ರೆಸಾರ್ಟ್‍ಗಳಾಗಿ ಪರಿವರ್ತನೆ ಹೊಂದುತ್ತಿರುವುದು ಅವರನ್ನು ಬಹ:ಳಷ್ಟು ಕಾಡಿದೆ. ಈ ಆರ್ಥಿಕ ಚೈತನ್ಯ ಬಂದುದು ಗಣಿಗಾರಿಕೆ ಮತ್ತು ಶಸ್ತ್ರಾಸû್ರಗಳ ಮಾರಾಟದ ಮೂಲಕ ಬಂದುದು ಎನ್ನುತ್ತಾರೆ. ಅವರ ಮೊದಲ ಕಥೆಗಳಲ್ಲಿ ಮಲೆನಾಡಿನಿಂದ ನಗರಕ್ಕೆ ಪಯಣವಿದ್ದರೆ ಈಗ ನಗರದಿಂದ ಗ್ರಾಮೀಣ ಪರಿಸರಕ್ಕೆ ಮರು ಪಯಣವಿದೆ. ಅದೂ ಎಂತಹ ಪಯಣ ! ಬರಿ ಮನರಂಜನೆಯ ಪಯಣ ಹಣದಿಂದ ಏನನ್ನೂ ಕೊಳ್ಳಬಲ್ಲೆನೆಂಬವ ಅಹಂ ಭಾವನೆ !
 
       ಚಿತ್ರಕೃಪೆ: ವಿಕಿಪೀಡಿಯ                                                                                                                                                 ( ಮುಗಿದುದು )
                                                                                                                                                                                                                                                                                                     *
 
 

Rating
No votes yet

Comments

ಪಾಲಹಳ್ಳಿ ವಿಶ್ವನಾಥ್ ಮತ್ತು ಕಾಮತರೆ ಲೇಖನ ಮೆಚ್ಚಿ ಪ್ರತಿಕಿಯಿಸಿದ್ದಕ್ಕೆ ಧನ್ಯ ವಾದಗಳು.

swara kamath

Mon, 01/25/2016 - 11:38

ಪಾಟೀಲರೆ ನಮಸ್ಕಾರ.
ದಿ.ಸಾಹಿತಿ ಅನಂತ ಮೂರ್ತಿ ಅವರ ಯಾವ ಕೃತಿ ಗಳನ್ನು ಓದಲು ಯಾಕೋ ಅವಕಾಶವನ್ನೆ ಮಾಡಿ ಕೊಳ್ಳಲಿಲ್ಲ.ತಮ್ಮಈ ದೀ‍ರ್ಘವಾದ ಕೃತಿಗಳ ಅವಲೋಕನ ಓದಿದ ಮೇಲೆ ಕೆಲವು ಪುಸ್ತಕಗಳನ್ನ ಖರೀದಿಸಿ ಓದಬೇಕೆಂದಿದ್ದೇನೆ.
ವಂದನೆಗಳು.

kavinagaraj

Sat, 02/13/2016 - 11:08

ನಮಸ್ತೆ, ಪಾಟೀಲರೇ. ಅವರ ಕೃತಿವಿಮರ್ಶೆ ಚೆನ್ನಾಗಿ ಮಾಡಿರುವಿರಿ.
'ಎಲ್ಲಾ ಬಣ್ಣವನ್ನು ಮಸಿ ನುಂಗಿತು' ಎಂಬಂತೆ ಅವರ ವೈಯಕ್ತಿಕ ನಡವಳಿಕೆಗಳು, ಹೇಳಿಕೆಗಳು ಅವರನ್ನು ಕುಬ್ಜರನ್ನಾಗಿಸಿದವು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇದು ಈ ಸಂದರ್ಭದಲ್ಲಿ ಅಪ್ರಸ್ತುತವಾದರೂ ನನ್ನ ಅನಿಸಿಕೆ ಹೇಳಿಕೊಳ್ಳದೆ ಇರಲಾಗಲಿಲ್ಲ.

ಕವಿ ನಾಗರಾಜರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಸರಿ ಅದು ಈ ಸಂಧರ್ಭದಲ್ಲಿ ಅಪ್ರಸ್ತುತವೆಂದು ಯಾಕೆ ನಿಮಗೆ ಅನಿಸಿತು. ಯಾವುದೆ ಕೃತಿ ಮತ್ತು ಕೃತಿಕಾರನ ಕುರಿತು ನಮಗನಿಸಿದ್ದ ನ್ನು ನಿರ್ವಂಚನೆಯಿಂದ ಹೇಳಿ ಬಿಡಬೇಕು. ಧನ್ಯವಾದಗಳು.