ಗಣರಾಜ್ಯೋತ್ಸವ ಮತ್ತು ಹೊಲಾಂಡೆ ಭಾರತ ಭೇಟಿ
ಭಾರತದ ವಿದೇಶಾಂಗ ನೀತಿಯ ಈವರೆಗಿನ ವರಸೆಗಳನ್ನು ಗಮನಿಸಿದರೆ ದೇಶವು ಐರೋಪ್ಯ ರಾಷ್ಟ್ರಗಳೊಂದಿಗಿನ ಸಂಬಂಧಗಳನ್ನು ಆರ್ಥಿಕ ವಲಯಗಳಿಗಷ್ಟೇ ಸೀಮಿತಗೊಳಿಸಿತ್ತು. ಮಾತ್ರವಲ್ಲದೆ ಐರೋಪ್ಯ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಸಂಬಂಧಗಳ ಬಗೆಗೂ ಗಂಭೀರ ಪ್ರಯತ್ನಗಳ ಕೊರತೆ ಸ್ಪಷ್ಟವಾಗಿ ಕಾಣಸಿಗುತ್ತದೆ. ಶೀತಲ ಸಮರದ ಸೋವಿಯೆತ್- ಅಮೆರಿಕಗಳ ಗೊಂದಲದ ಮಧ್ಯೆ ಯುರೋಪ್ನ ರಾಜಕೀಯ ಪ್ರಾಮುಖ್ಯತೆಗೆ ಸ್ವಲ್ಪ ಮಟ್ಟಿನ ಹಾನಿಯಾಗಿದ್ದು ಸಹಜವೇ. ಆದರೆ ಈ ಬಾರಿ ನರೇಂದ್ರ ಮೋದಿ ಯವರು ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯ್ಸ್ ಹೊಲಾಂಡೆಯವರನ್ನು ಆಹ್ವಾನಿಸಿ ಫ್ರಾನ್ಸ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಹೊಸ ಭಾಷ್ಯ ಬರೆಯುವ ಪ್ರಯತ್ನ ಮಾಡಿದ್ದಾರೆ.
ಭಾರತ ಯುರೋಪಿನ ಫ್ರಾನ್ಸ್ ಅಧ್ಯಕ್ಷರನ್ನೇ ಆಹ್ವಾನಿಸಲು ಕಾರಣಗಳೂ ಇಲ್ಲದಿಲ್ಲ. ಐತಿಹಾಸಿಕ ದೃಷ್ಟಿಯಿಂದಲೂ ಫ್ರಾನ್ಸ್ ಭಾರತದ ಪಾಲಿಗೆ ಮಿಕ್ಕ ಐರೋಪ್ಯ ಭಾಗಗಳಿಗಿಂತ ಹೆಚ್ಚು ಆಪ್ತ ಎಂದೆನಿಸುತ್ತದೆ. ಶೀತಲ ಸಮರದ ಉತ್ತುಂಗದಲ್ಲಿ ನ್ಯಾಟೋ ಜೊತೆಗಿನ ಭಾರತದ ಸಂಬಂಧ ಕದಡಿದ್ದರೂ ಫ್ರಾನ್ಸ್ ಜೊತೆಗಿನ ಬಾಂಧವ್ಯ ಉತ್ತಮವಾಗಿ ಮುಂದುವರೆದಿತ್ತು. 1965ರ ಭಾರತ-ಪಾಕ್ ಯುದ್ಧದ ನಂತರ ವಿಸಲಾಗಿದ್ದ ಶಸ್ತ್ರಾಸ್ತ್ರಗಳ ಮಾರಾಟದ ಮೇಲಿನ ನಿಷೇಧವನ್ನು ರದ್ದುಗೊಳಿಸುವ ಬಗೆಗೆ ಮೊದಲ ಬಾರಿ ಯೋಚಿಸಿದ್ದು ಇದೇ ಫ್ರಾನ್ಸ್. 1971ರ ಯುದ್ಧದಲ್ಲೂ ಭಾರತದ ನಿರ್ಧಾರಗಳನ್ನು ನ್ಯಾಯ ಸಮ್ಮತ ಎಂದು ಒಪ್ಪಿಕೊಂಡ ಏಕೈಕ ಯುರೋಪಿಯನ್ ರಾಷ್ಟ್ರ ಫ್ರಾನ್ಸ್. ಇವೆಲ್ಲವುಗಳಿಗಿಂತ ಮುಖ್ಯವಾಗಿ ಅಟಲ್ ಬಿಹಾರಿ ವಾಜಪೇಯಿಯವರ ಅಕಾರ ಸಮಯದಲ್ಲಿ ಭಾರತ ಅಕತವಾಗಿ ತನ್ನನ್ನು ತಾನು ಪರಮಾಣು ಶಕ್ತಿಯೆಂದು ವಿಶ್ವಕ್ಕೆ ಸಾರಿದಾಗ, ಅಮೆರಿಕಾ ನೇತೃತ್ವದಲ್ಲಿ ಬಹುತೇಕ ರಾಷ್ಟ್ರಗಳು ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಿದ್ದವು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಪಾಲಿಗೆ ಆಪ್ತ ಮಿತ್ರನಾಗಿ, ವಿಶ್ವದ ದೊಡ್ಡಣ್ಣ ಅಮೆರಿಕದ ನಿರ್ಧಾರವನ್ನೇ ಪ್ರಶ್ನಿಸುವ ದಿಟ್ಟತನ ತೋರಿದ್ದು ಫ್ರೆಂಚರು ಮಾತ್ರ! ಹೀಗೆ ಹತ್ತು ಹಲವು ವಿಧಗಳಲ್ಲಿ ಭಾರತದ ದೃಷ್ಟಿಯಲ್ಲಿ ಫ್ರಾನ್ಸ್ ಯುರೋಪಿನ ಇತರ ರಾಷ್ಟಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತದೆ.
1998ರ ನಂತರ ಭಾರತ- ಫ್ರಾನ್ಸ್ ಸಂಬಂಧಗಳು ಜಂಟಿ ಸೇನಾ ಸಮರಾಭ್ಯಾಸಗಳ ಮೂಲಕ ಇನ್ನಷ್ಟು ದೃಢೀಕರೀಸಲ್ಪಟ್ಟವು. ನೈರುತ್ಯ ಹಿಂದೂ ಮಹಾಸಾಗರದಲ್ಲಿ ಸಾಕಷ್ಟು ಆರ್ಥಿಕ ಮತ್ತು ಸಾಮರಿಕ ಆಸಕ್ತಿಗಳಲ್ಲಿ ಭಾರತ ಮತ್ತು ಫ್ರಾನ್ಸ್ ಪಾಲುದಾರರು. ಹಿಂದೂ ಮಹಾಸಾಗರದಲ್ಲಿ ಭಾರತ ಮತ್ತು ಫ್ರೆಂಚ್ ನೌಕಾದಳಗಳು ನಡೆಸುವ ಜಂಟಿ ಸಮರಾಭ್ಯಾಸ, ಮಾನವೀಯ ನೆಲೆಯಲ್ಲಿ ಪ್ರಾದೇಶಿಕ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿಯೂ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲ್ಪಡುತ್ತದೆ. ಭಾರತ ಪ್ರಶ್ನಾತೀತ ಪ್ರಬಲ ನೌಕಾಶಕ್ತಿಯಾಗಿ ಮೂಡಿಬಂದಾಗ ಹಿಂದೂ ಮಹಾಸಾಗರದ ಸ್ಥಿರತೆ ಸಾಧ್ಯ ಎಂಬ ಫ್ರಾನ್ಸ್‌ನ ಹೇಳಿಕೆಯಲ್ಲಿ ನಂಬಲರ್ಹ ಪ್ರಾಮಾಣಿಕತೆಯಿದೆ.
ಈ ಬಾರಿಯ ಹೊಲಾಂಡೆ ಭಾರತ ಭೇಟಿ ಫ್ರಾನ್ಸ್ ಜೊತೆಗಿನ ಸಂಬಂಧಗಳಲ್ಲಿ ಇನ್ನಷ್ಟು ಹೊಸ ಆಯಾಮಗಳನ್ನು ತೆರೆಯಲಿದೆ. ಭಯೋತ್ಪಾದನೆಯ ನಿಗ್ರಹದಲ್ಲೂ ಭಾರತ ಹಾಗೂ ಫ್ರಾನ್ಸ್ ಒಂದುಗೂಡಬೇಕಾದ ಅನಿವಾರ್ಯತೆ ಯಿದೆ. ಇತ್ತೀಚೆಗೆ ನಡೆದ ಪ್ಯಾರಿಸ್ ಮೇಲಿನ ಇಸ್ಲಾಮಿಕ್ ಸ್ಟೇಟ್ ಉಗ್ರರ ದಾಳಿ ಇದಕ್ಕೆ ಸ್ಪಷ್ಟ ನಿದರ್ಶನ. ಭಯೋತ್ಪಾದನೆ ವಿರುದ್ಧದ ಈ ಎರಡು ಶಕ್ತಿಗಳ ಒಗ್ಗೂಡುವಿಕೆ ಭಯೋತ್ಪಾದಕರ ಎದೆಯಲ್ಲಿ ಭೀತಿ ಹುಟ್ಟಿಸಿದೆ. ಇತ್ತೀಚೆಗೆ ಹೊಲಾಂಡೆ ಭಾರತ ಭೇಟಿ ತಪ್ಪಿಸಲು ಇಸ್ಲಾಮಿಕ್ ಸ್ಟೇಟ್ ಬೆದರಿಕೆ ಪತ್ರ ಸಹಿತ ಹಲವಾರು ಕಸರತ್ತುಗಳನ್ನು ಮಾಡಿರುವುದನ್ನು ನೋಡಿದರೆ ಭಯೋತ್ಪಾದನಾ ನಿಗ್ರಹ ದೃಷ್ಟಿಯಿಂದ ಈ ಭೇಟಿ ಅದೆಷ್ಟು ಪ್ರಮುಖ ಎಂದು ತಿಳಿಯುತ್ತದೆ.
2016ರ ಗಣರಾಜ್ಯೋತ್ಸವ ಮತ್ತು ರಾಜ್‌ಪಥ್‌ನಲ್ಲಿ ನಡೆಯಲಿರುವ ಪಥ ಸಂಚಲನ ಭಾರತದ ವಿದೇಶಾಂಗ ನೀತಿಯಲ್ಲಿನ ಸಂಚಲನಕ್ಕೆ ಸಾಕ್ಷಿಯಾಗುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಫ್ರಾನ್ಸ್ ಸೈನ್ಯದ ತುಕಡಿಯೊಂದು ರಾಜ್‌ಪಥ್‌ನಲ್ಲಿ ಪಥಸಂಚಲನ ನಡೆಸಲಿದೆ. ಇದು ಭಾರತ ಫ್ರಾನ್ಸ್ ಹಾಗೂ ಫ್ರೆಂಚ್ ಸೈನ್ಯಕ್ಕೆ ನೀಡಿದ ಅತ್ಯುನ್ನತ ಗೌರವವೇ ಸರಿ. 2009 ಜುಲೈ 14ರಂದು ಫ್ರಾನ್ಸ್ ಕೂಡ ಭಾರತೀಯ ಸೈನ್ಯಕ್ಕೆ ಇಂಥದ್ದೇ ಒಂದು ಅವಕಾಶವನ್ನು ಕೊಟ್ಟಿತ್ತು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಲೇಬೇಕು. ಫ್ರೆಂಚ್ ಸರಕಾರ ನಮ್ಮ ಸೈನ್ಯಕ್ಕೆ ನೀಡಿದ ಆ ಗೌರವಕ್ಕೆ ಪ್ರತಿಯಾಗಿ, ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪ್ರಧಾನಿ ಮೋದಿಯವರು ಫ್ರಾನ್ಸ್ ಜೊತೆಗಿನ ಸ್ನೇಹ-ಸಂಬಂಧಗಳನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಭಾರತದ ಈ ನಡೆ ಹಾಗೂ ಫ್ರಾನ್ಸ್‌ಗೆ ನೀಡಿದ ಇಂಥ ವಿಶೇಷ ಆತಿಥ್ಯ ಇತರ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧಗಳಿಗೆ ಹಾನಿಯುಂಟು ಮಾಡಬಹುದು ಎಂಬ ಸಣ್ಣ ಪುಟ್ಟ ಟೀಕೆಗಳಿಗೂ ದಾರಿ ಮಾಡಿಕೊಟ್ಟಿದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅಜ್ಜ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪ್ರಯತ್ನ ಕೈಬಿಟ್ಟು, ನೆಹರೂ ಕಾಲದ ಆಲಿಪ್ತ ನೀತಿಯಿಂದ ಭಾರತ ಸ್ಪಷ್ಟವಾಗಿ ಹೊರಬಂದು ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ವಿನೂತನ ಅವಕಾಶಗಳಿಗೆ ಮತ್ತು ವಿಶ್ವ ರಾಜಕಾರಣದ ಹೊಸ ಬದಲಾವಣೆಗಳಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಫ್ರಾನ್ಸ್ ನಿರ್ಮಿತ 36 ರಾಫೆಲ್ ಯುದ್ಧ ವಿಮಾನಗಳನ್ನು ಖರೀದಿಸುವ ಬಗೆಗೂ ಮಹತ್ವದ ನಿರ್ಧಾರಗಳಿಗೆ ಈ ಬಾರಿಯ ಗಣರಾಜ್ಯೋತ್ಸವ ಸಾಕ್ಷಿಯಾಗಲಿದೆ. ‘ಮೇಕ್ ಇನ್ ಇಂಡಿಯಾ’ ಹಾದಿಯಲ್ಲಿರುವ ಭಾರತ ರಕ್ಷಣಾ ವಲಯದ ಆಮದುಗಳನ್ನು ಯಾವ ರೀತಿ ನಿಭಾಯಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ರಾಫೆಲ್ ಯುದ್ಧ ವಿಮಾನಗಳ ಖರೀದಿ ಒಂದು ಮೈಲಿಗಲ್ಲಾಗಲಿದೆ.
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಗಳಂಥ ಸಂದರ್ಭಗಳನ್ನು ರಾಷ್ಟ್ರೀಯ ಆಚರಣೆ ಗಳಾಗಿ ಮಾತ್ರ ಸೀಮಿತಗೊಳಿಸದೆ, ಅವುಗಳನ್ನು ವಿದೇಶಾಂಗ ನೀತಿಯ ದಾಳಗಳಾಗಿ ಬಳಸಿಕೊಂಡು ರಾಷ್ಟ್ರದ ಹಿತಾಸಕ್ತಿ ಕಾಪಾಡಿಕೊಳ್ಳುವಂಥ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಬಾರಿಯ ಭಾರತದ ಗಣರಾಜ್ಯೋತ್ಸವ ಮತ್ತು ಹೊಲಾಂಡೆ ಭಾರತ ಭೇಟಿ ವಿಶ್ವದ ಎರಡು ಪ್ರಮುಖ ಗಣರಾಜ್ಯಗಳಾದ ಫ್ರಾನ್ಸ್ ಮತ್ತು ಭಾರತ ಸಂಬಂಧಗಳನ್ನು ಇನ್ನಷ್ಟು ಗಟ್ಟಿಯಾಗಿಸಿ, ಭಯೋತ್ಪಾದನಾ ನಿಗ್ರಹಕ್ಕೆ ಹಾಗೂ ವಿಶ್ವ ಸೋದರತ್ವಕ್ಕೆ ಇನ್ನಷ್ಟು ಕೊಡುಗೆ ಸಲ್ಲಿಸಲಿ.