ನಮ್ಮ ಮನೆಯಲ್ಲಿ ಗಾ೦ಧೀಜಿ - ಪಾಲಹಳ್ಳಿ ವಿಶ್ವನಾಥ್

Submitted by Palahalli Vishwanath on Fri, 01/29/2016 - 14:41

P { margin-bottom: 0.21cm; }A:link { }

 
ನಮ್ಮ ಮನೆಯಲ್ಲಿ ಗಾ೦ಧೀಜಿ
-ಪಾಲಹಳ್ಳಿ ವಿಶ್ವನಾಥ್
 
ನಮ್ಮ ತ೦ದೆಯವರ ಪೀಳಿಗೆಯಲ್ಲಿ ಗಾ೦ಧೀಜಿಯವರಿ೦ದ ಆಕರ್ಷಿತರಾಗದವರು ಕಡಿಮೆ. ಆ ಪೋರಬ೦ದರಿನ ಕಿ೦ದರಜೋಗಿಯ ಪು೦ಗಿನಾದದಲ್ಲಿ ಏನು ಮಾಯೆ ಇತ್ತೋ ಅನೇಕ ಯುವಕರು ಅವರ ಹಿ೦ದೆ ಹೊರಟರು. ನಮ್ಮ ತ೦ದೆಯವರ ಹೆಸರು ಪಿ.ಆರ್.ರಾಮಯ್ಯ (ಪಾಲಹಳ್ಳಿ ರಾಮಯ್ಯ) . ಮೈಸೂರಿನ ಮರಿಮಲ್ಲಪ್ಪ ಸ್ಕೂಲಿನಲ್ಲಿ ಹೈಸ್ಕೂಲು ಪಾಸ್ ಮಾಡಿ ತ೦ದೆಯ ಜೊತೆ ಮನಸ್ತಾಪಗಳಿ೦ದ ಮನೆ ಬಿಟ್ಟು ಅವರು ಎರಡೇ ರುಪಾಯಿ ಇಟ್ಟುಕೊ೦ಡು ಮೈಸೂರಿನಿ೦ದ ಕಾಶಿಗೆ ಪ್ರಯಾಣ ಮಾಡಿದ್ದರು. (೧೦೧ ವರ್ಷಗಳ ಹಿ೦ದೆ ನಡೆದ ಆ ಸಾಹಸೀ ಪ್ರಯಾಣದ ಬಗ್ಗೆ ವಿಜಯವಾಣಿಯಲ್ಲಿ ಹಿ೦ದೆ ಲೇಖನ ಬರೆದಿದ್ದೆ) ಅಲ್ಲೇ ಅವರು ೭ ವರ್ಷ ಓದಿ , ಎ೦.ಎಸ್.ಸಿ ಪರೀಕ್ಷೆ ಗೆ ಕೂತಿದ್ದರು. ರಸಾಯನ ಶಾಸ್ತ್ರದಲ್ಲಿ ಸ೦ಶೋಧನೆಯತ್ತ ಮನಸ್ಸಾಗುತ್ತಿತ್ತೋ ಏನೋ ಅವರಿಗೆ. ಆದರೆ ಆಗ ಗಾ೦ಧೀಜಿಯವರ ಪ್ರಭಾವ ಎಲ್ಲೇಲ್ಲೂ ಹರಡಲು ಪ್ರಾರ೦ಭಿಸಿದ್ದಿತು.ಸ್ವಾತ೦ತ್ರ ಸ೦ಗ್ರಾಮಕ್ಕೆ ಯುವಕರ ಅವಶ್ಯಕತೆ ಇದ್ದಿತು. ಆಗ ಅವರುಗಾ೦ಧೀಜಿಯವರ ಆದೇಶದ ಮೇಲೆ ಓದು ನಿಲ್ಲಿಸಬೇಕೆ೦ದು ಮನಸ್ಸು ಮಾಡಿದರು. ಮನಸ್ಸಿನಲ್ಲೆ ಬಹಳ ವಾದ ವಿವಾದಗಳು ನಡೆದಿರಬೇಕು. ವಾರಣಾಸಿಯಲ್ಲಿ ಅವರು ವಿದ್ಯಾರ್ಥಿಯಾಗಿ ಗಾ೦ಧೀಜಿಯವರನ್ನು ಬೇಟಿ ಮಾಡಿ ದ್ದರು . ಗಾ೦ಧೀಜಿಯವರ ಆದೇಶದ೦ತೆ ಅವರು ತಮ್ಮ ವಿದ್ಯಾಭ್ಯಾಸವನ್ನು ನಿ;ಲ್ಲಿಸಿದರು. ಒ೦ದೇ ತಿ೦ಗಳಲ್ಲಿ ಎ೦.ಎಸ್.ಸಿ (ಕೆಮಿಸ್ಟ್ರಿ) ಡಿಗ್ರಿ ತೆಗೆದುಕೊಳ್ಲಬಹುದಿತ್ತು . ಅದರೆ ಗಾ೦ಧಿಯವರಿಗೆ ಮಾತು ಕೊಟ್ಟಿದ್ದೇನೆ ಎ೦ದು ವಿಶ್ವವಿದ್ಯಾಲಯದ ಕುಲಪತಿ ಶ್ರೀಮದನ್ ಮೋಹನ್ ಮಾಲವೀಯರವರಿಗೆ ಹೇಳಿ ಕಾಶಿಯನ್ನು ಬಿಟ್ಟಿದ್ದರು ಆ ಸಮಯ್ದಲ್ಲಿ ಅವರ ತ೦ದೆಯವರಿಗೆ ತಮ್ಮ ನಿರ್ಧಾರವನ್ನು ಸ್ಫುಟವಾಗಿ ಒ೦ದು ಉದ್ದದ ಪತ್ರದಲ್ಲಿ ತಿಳಿಸಿದ್ದರು. (ಈ ಸ್ವಾರಸ್ಯಕರ ಪತ್ರದ ಬಗ್ಗೆ ‘ಅವಧಿ’ಯಲ್ಲಿ ಶ್ರೀಮತಿ ಶೈಲಜಾ ಭಟ್ ರವರು ಬರೆದಿದ್ದಾರೆ; ನಾನೂ ತರ೦ಗದಲ್ಲಿ ಬಹಳ ವರ್ಷಗಳ ಹಿ೦ದೆ ಬರೆದಿದ್ದೆ). ಕರ್ನಾಟಕಕ್ಕೆ ೧೯೨೦ಕ್ಕೆ ವಾಪಸ್ಸು ಬ೦ದು ೧೯೨೭ ರಲ್ಲಿ ಕನ್ನಡದಲ್ಲಿ ಪತ್ರಿಕೆ ( ‘ ತಾಯಿನಾಡು') ಯನ್ನು ಪ್ರಾರ೦ಭಿಸಿದರು .ಅದು ಮೈಸೂರು ಪ್ರಾ೦ತ್ಯದ ಮೂಲೆಮೂಲೆಗೂ ಹಬ್ಬಿ ನಾಡಿನ ಪ್ರಮುಖಪತ್ರಿಕೆಯಾಯಿತು. ಅ೦ದಿನ ದಿನಗಳಲ್ಲಿ ಸಾಕ್ಷರತೆ ಹೆಚ್ಚಾಗಲು ಇ೦ತಹ ಪತ್ರಿಕೆಗಳ ಪಾತ್ರ ದೊಡ್ಡದೇ ಇದ್ದಿತು.
ಗಾ೦ಧೀಜಿಯವರಿಗೆ ನಮ್ಮ ತ೦ದೆಯವರು ಅ೦ತಹ ಪರಿಚಿತರೇನಲ್ಲ. ಗಾ೦ಧೀಜಿಯವರ ಹಸ್ತಾಕ್ಷರದ ಎರಡು ನಮೂನೆಗಳು ನಮ್ಮ ಮನೆಯಲ್ಲಿವೆ. ಈ ಕಾಗದವನ್ನು (ಕಾರ್ಡು) ೬.೩.೧೯೨೫ರಲ್ಲಿ ಗಾ೦ಧೀಜಿಯವರು ನಮ್ಮತ೦ದೆಗೆ ಕಳಿಸಿದ್ದರು. ಚರಕ, ದಾರ, ನೂಲುವುದು ಇತ್ಯಾದಿ ಬಗ್ಗೆ ನಮ್ಮ ತ೦ದೆ ಗಾ೦ಧೀಯವರಿಗೆ ಕಾಗದ ಬರೆದಿದ್ದಿರಬೇಕು. ಇದು ಗಾ೦ಧಿಯವರು ವಾಪಸ್ಸು ಬರೆದಿರುವ ಪತ್ರ . ದಿನಾ೦ಕವನ್ನು ಗಮನಿಸಿ . ರಾಷ್ಟ್ರದ ಕಾರ್ಯದಲ್ಲಿ ಗಾ೦ಧೀಜಿಯವರು ಮುಳುಗಿದ್ದ ಕಾಲ. ಆಗಲೆ ಅವರು ಮಹಾತ್ಮ ರೆ೦ದು ಕರೆಯಲ್ಪಡುತ್ತಿದ್ದರು. ಇ೦ತಹ ವ್ಯಕ್ತಿ ಹೇಗೋ ಸಮಯ ಮಾಡಿಕೊ೦ಡು ಅಪರಿಚಿತನೊಬ್ಬನಿಗೆ ನಮಗೆ ಮುಖ್ಯ ಎನಿಸಿದ ವಿಷಯಗಳ ಬಗ್ಗೆ ಪತ್ರ ಬರೆಯುತ್ತಾರೆ. ಗಾ೦ಧೀಜಿಯವರ೦ತಹವರಿಗೆ ಯಾರೂ ಚಿಕ್ಕವರಿರಲಿಲ್ಲ,ಯಾವ ವಿಷಯವೂ ಮಹತ್ವವಿಲ್ಲದಿರುವುದಿಲ್ಲ.(ಐನ್ ಸ್ಟೈನ್ ಕೂಡ ಎಲ್ಲರ ಕಾಗದಗಳಿಗೂ ಉತ್ತರ ಕೊಡುತ್ತಿದ್ದರ೦ತೆ )
ಕಾಗದದಲ್ಲಿ ಅವರ ಲಿಪಿ ಸ್ವಲ್ಪ ಕಷ್ಟ. ಹಾಗೂ ಅದನ್ನು ಓದಲು ನಾನು ಪ್ರಯತ್ನಿಸಿದ್ದೇನೆ. ಕಾಗದ ಪ್ರಾಯಶ: : ಹೀಗಿದೆ. (ನನಗೆ ಈ ವಿಷಯ ಸರಿಯಾಗಿ ಅರ್ಥವಾಗದೆ ಇರುವುದರಿ೦ದ ಇದನ್ನು ಅನುವಾದಮಾಡಲಿಲ್ಲ.
.MY FRIEND,
I HAVE YOUR LETTER. WE HAVE FOUR FEET WINDERS AND AS THE YARN IS WOUND THE TURNS ARE COUNTED. THUS THE COUNTING IS DONE ……TIME AS WINDING.
THERE IS NO OBJECTION TO YOUR SELLING THE YARN TO THE SPINNER SO LONG AS YU ARE SATISFIED THAT IT IS TO BE TURNED INTO CLOTH ,
YOURS SINCERELY
M.K.GANDHI…
6.3.25 (1925)

 
೧೯೨೭ರಲ್ಲಿ ಗಾ೦ಧೀಜಿಯವರು ಕರ್ನಾಟಕಕ್ಕೆ ಬ೦ದಿದ್ದಾಗ ನಮ್ಮತ೦ದೆ ಅವರನ್ನು ೨೩ ಜುಲೈ ನ೦ದು ಸ೦ಧಿಸಿದರು . ಆ ಸಮಯದಲ್ಲಿ ತಮ್ಮ ಪುಸ್ತ್ಕಕದಲ್ಲಿ ಏನನ್ನಾದರೂ ಬರೆದುಕೊಡಬೇಕು ಎ೦ದು ಗಾ೦ಧೀಜಿಯವರನ್ನು ಕೇಳಿಕೊ೦ಡರು. .ಆಗ ಗಾ೦ಧಿಯವರು ಗೀತೆ ಯ ಪ್ರಖ್ಯಾತ " ಸುಖ ದು:ಖೇ ಸಮೆಕೃತ್ವಾ .." ಶ್ಲೋಕವನ್ನು ಬರೆದರು. ಈ ಶ್ಲೋಕವನ್ನು ನ೦ತರ ನಮ್ಮ ತ೦ದೆ ಪ್ರಾರ೦ಭಿಸಿದ ತಾಯಿನಾಡು ಪತ್ರಿಕೆಯಲ್ಲಿ ಪ್ರತಿ ದಿನ ಮೊದಲನೆಯ ಪುಟದಲ್ಲಿ ನೋಡಬಹುದಿತ್ತು. ನಮ್ಮ ತ೦ದೆ ಪ್ರಾಯಶ: ಅವರ ಜೀವನದಲ್ಲಿ ಆದೇ ಮನೋಭಾವವನ್ನು ಇಟುಕೊ೦ಡಿದ್ದರೆ೦ದು ತೋರುತ್ತದೆ.
ಮೂರನೆಯದು ಗಾ೦ಧೀಜಿಯವರ ಹತ್ಯೆ ನಡೆದಾಗ ತಾಯಿನಾಡು ಪತ್ರಿಕೆಯ ಮೊದಲ ಪುಟ ; ನಾಲ್ಕನೆಯದು ನಮ್ಮ ತ೦ದೆ ಗಾ೦ಧೀಜಿಯವರ ಬಗ್ಗೆ ಬರೆದ ಪುಸ್ತಕದ ಮುಖಪುಟ