ವಿದಾಯ‌ (ನೀಳ್ಗತೆ) ‍‍‍‍ ‍‍‍

ವಿದಾಯ‌ (ನೀಳ್ಗತೆ) ‍‍‍‍ ‍‍‍

     
                                                                                                -1-
 
   ಬೆಂಗಳೂರಿನ ಬನಶಂಕರಿಯಲ್ಲಿದ್ದ ಆ ಒಂದಸ್ತಿನ ವಿಶಾಲ ಬಂಗಲೆಯಲ್ಲಿ ಸಂಭ್ರಮವೋ ಸಂಭ್ರಮ. ಅಂದು ಯುಗಾದಿ ಹಬ್ಬ. ಪ್ರತಿವರ್ಷದಂತೆ ಆ ಮನೆಯ ಹೆಣ್ಣುಮಕ್ಕಳು, ಅಳಿಯಂದಿರು ಮತ್ತು ಮಕ್ಕಳೆಲ್ಲಾ ಸೇರಿ ಮನೆ ಕಿಕ್ಕಿರಿದು ತುಂಬಿತ್ತು. ಆದರೆ ಮನೆಯ ಕೊನೆಯ ಅಳಿಯ ರಾತ್ರಿ ಒಂಬತ್ತು ಗಂಟೆಯಾದರೂ ಇನ್ನೂ ಬಂದಿರಲಿಲ್ಲ. ಅವನ ಹೆಂಡತಿ ಸುಮಿತ್ರಾಳಿಗೆ ಗೇಟಿನ ಬಳಿ ಬಂದು ರಸ್ತೆಯತ್ತ ಕಣ್ಣುಹಾಯಿಸಿ ಸಾಕಾಗಿಹೋಗಿತ್ತು. ಅವನ ಮೊಬೈಲ್ ಫೋನಿಗೂ ಮೂರ್ನಾಲ್ಕು ಬಾರಿ ಕರೆ ಮಾಡಿದ್ದಳು. ಆದರೆ ಬಂದ ಉತ್ತರ ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂಬುದು ಮಾತ್ರ. ಇವನನ್ನು ಕಟ್ಟಿಕೊಂಡಂದಿನಿಂದಲೂ ನನ್ನದು ಇದೇ ಪಾಡಾಯಿತು.. ಅಕ್ಕಂದಿರು, ಬಾವಂದಿರು ಸಂತಸದ ಏರುದನಿಯಲ್ಲಿ ಮಾತನಾಡಿಕೊಳ್ಳುತಿದ್ದಾರೆ.. ಅವರ ಮಕ್ಕಳುಗಳೆಲ್ಲಾ ಹೊಸ ಬಟ್ಟೆ ಧರಿಸಿ ಮುಖಗಳಲ್ಲಿ ಇನ್ನಿಲ್ಲದ ಹರ್ಷವನ್ನು ತುಂಬಿಕೊಂಡು ಮನೆಯ ತುಂಬಾ ಓಡಾಡಿ ನಲಿದಾಡುತಿದ್ದಾರೆ.. ಎಂದು ಮನದಲ್ಲಿಯೇ ಅಸಹನೆಯನ್ನು ತುಂಬಿಕೊಂಡು ಕುದಿಯುತಿದ್ದ ಸುಮಿತ್ರಾ ಗೇಟಿನ ಬಳಿ ಹೋಗಿ ರಸ್ತೆಯತ್ತ ಬಗ್ಗಿ ನೋಡಿ ಒಳಗೆ ಹಾಲಿಗೆ ಬಂದೊಡನೆಯೇ, ಅಡುಗೆ ಮನೆಯಿಂದ ಹೊರಗೆ ಬಂದ ಮೂರನೆಯ ಅಕ್ಕ ಪರಿಮಳ ‘ಇನ್ನೂ ನಿಮ್ಮ ಯಜಮಾನರು ಬರಲಿಲ್ಲವೇನೇ ಸುಮೀ..’ ಎಂದು ತುಸು ವ್ಯಂಗವಾಗಿ ಪ್ರಶ್ನಿಸಿ, ಉತ್ತರವನ್ನೂ ನಿರೀಕ್ಷಿಸದೆ ತನ್ನ ರೂಮಿನ ಒಳಗೆ ಹೋಗಿದ್ದು ಕಂಡು ಹೊಟ್ಟೆಯೊಳಗೆ ಬೆಂಕಿ ಹತ್ತಿಕೊಂಡಂತಾಗಿ ಅಲ್ಲಿಯೇ ಇದ್ದ ಸೋಫಾದ ಮೇಲೆ ದೊಪ್ಪನೆ ಕುಸಿದು ಕುಳಿತಳು. ಅಡುಗೆಯ ಮನೆಗೆ ಹೋಗಿ ಅಜ್ಜಿ ಒಬ್ಬಟ್ಟು ಮಾಡಲು ತಯಾರಿಸಿದ್ದ ಸಿಹಿಹೂರಣವನ್ನು ಬಾಯಿಯಲ್ಲಿ ಹಾಕಿಕೊಂಡು ಮೆಲ್ಲುತ್ತಾ ಮಕ್ಕಳೆಲ್ಲಾ ಹಾಲಿನಲ್ಲಿ ಕುಳಿತಿದ್ದರು. ತನ್ನ ಹಿರಿಯಕ್ಕನ ಮಗಳು ಅದಾಗ ತಾನೇ ಎಂಜನಿಯರಿಂಗ್ ಮುಗಿಸಿ ಪ್ರತಿಷ್ಠಿತ ಐ.ಟಿ ಕಂಪೆನಿಯಲ್ಲಿ ಸಾಫ್ಟವೇರ್ ಎಂಜನಿಯರಾಗಿದ್ದ ಸುಸ್ಮಿತಾ ಲ್ಯಾಪ್‍ಟಾಪಿನಲ್ಲಿ ತೋರಿಸುತಿದ್ದ ಮಕ್ಕಳ ಸಿನೆಮಾವೊಂದನ್ನು ಕುತೂಹಲದಿಂದ ವೀಕ್ಷಿಸುತಿದ್ದ ತನ್ನ ಮಕ್ಕಳಾದ ಅಮರ್ ಮತ್ತು ಅನನ್ಯಳ ಕಡೆಗೊಮ್ಮೆ ದಿಟ್ಟಿಸಿ ನೋಡಿದಳು. ಅವರಿಗಿಂತ ದೊಡ್ಡವರಾದ ಇತರ ಅಕ್ಕಂದಿರ ಮಕ್ಕಳು ಅಲ್ಲಿಯೇ ಕುಳಿತು ತಮ್ಮ ಮೊಬೈಲ್ ಪೋನಿನಲ್ಲಿ ಆಟವಾಡುತಿದ್ದರು. ತನ್ನ ಮಕ್ಕಳನ್ನು ಕಂಡು ಯಾಕೋ ಏನೋ ಅವರಿಬ್ಬರೂ ತನ್ನ ಅಕ್ಕಂದಿರ ಮಕ್ಕಳಿಗೆ ಹೋಲಿಸಿದರೆ ದುರದೃಷ್ಟವಂತರು ಎನಿಸಿ ಸುಮಿತ್ರಾಳ ಮನದಲ್ಲಿ ಒಂದು ತರಹದ ಸಂಕಟವಾಯಿತು.
   ಬಾವಂದಿರೆಲ್ಲಾ ಮಹಡಿಯ ಮೇಲಿದ್ದ ಹಾಲಿನಲ್ಲಿ ಕುಳಿತು ಮದ್ಯಪಾನ ಮಾಡುತ್ತಾ ಇಸ್ಪೀಟಿನ ರಮ್ಮಿ ಆಟದಲ್ಲಿ ತೊಡಗಿದ್ದರು. ಕಾರು ಓಡಿಸುವುದನ್ನು ಕಲಿತಿದ್ದ ನಾಲ್ಕನೆಯ ಅಕ್ಕನ ಜೊತೆ  ಎರಡನೆಯ ಅಕ್ಕ ಸಂಜೆಯೇ ಶಾಪಿಂಗಿಗೆಂದು ಕಾರಿನಲ್ಲಿ ಹೋಗಿದ್ದಳು. ಅದಾಗ ತಾನೇ ಅವರಿಬ್ಬರೂ ವಾಪಾಸು ಬಂದು ರೂಮಿನಲ್ಲಿದ್ದ ಮೂರನೆಯ ಅಕ್ಕನ ಜೊತೆ ಸೇರಿ ಹರುಷದಿಂದ ದೊಡ್ಡ ದನಿಯಲ್ಲಿ ಮಾತಿಗೆ ಇಳಿದಿದ್ದರು. ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ  ಅಳಿಯಂದಿರೆಲ್ಲಾ ಸೇರಿದಾಗ ಮದ್ಯಪಾನ ಮಾಡುವುದು, ಒಟ್ಟಿಗೆ ಕುಳಿತು ಇಸ್ಪೀಟು ಆಡುವುದು ಸುಮಿತ್ರಾಳ ತಂದೆ ರಂಗಪ್ಪಗೌಡರು ಬದುಕಿದ್ದಾಗಲಿಂದಲೇ ನಡೆದುಬಂದ ಪರಿಪಾಠವಾಗಿತ್ತು. ರಂಗಪ್ಪಗೌಡರೂ ಮದ್ಯಪಾನಪ್ರಿಯಯರಾಗಿದ್ದರು. ಇದರಿಂದಾಗಿ ಈ ಪರಿಪಾಠಕ್ಕೆ ಸುಮಿತ್ರಾಳ ತಾಯಿ ಮಹಾಲಕ್ಷ್ಮಮ್ಮನವರಿಂದಾಗಲೀ ಅಥವಾ ಅವರ ಹೆಣ್ಣುಮಕ್ಕಳಿಂದಾಗಲೀ ಯಾವುದೇ ಆಕ್ಷೇಪವಿರದೆ ರಂಗಪ್ಪಗೌಡರ ನಿಧನದ ನಂತರವೂ ಇದು ಮುಂದುವರೆದಿತ್ತು. ಅವರೆಲ್ಲಾ ಅದೊಂದು ಮೇಲ್ವರ್ಗದ ಕುಟುಂಬಗಳ ಪ್ರತಿಷ್ಟೆಯ ಹವ್ಯಾಸವೆಂದೇ ತಿಳಿದಿದ್ದರು. ಸಿವಿಲ್ ಎಂಜಿನಿಯರಾಗಿ ಖಾಸಗಿ ರಸ್ತೆ ನಿರ್ಮಾಣ ಕಂಪೆನಿಯಲ್ಲಿ ಸೈಟ್ ಎಂಜಿನಿಯರಾಗಿ ಕೆಲಸ ಮಾಡುತಿದ್ದ ಸುಮಿತ್ರಾಳ ಗಂಡ ಹನುಮಂತಯ್ಯನಿಗೆ ಮದ್ಯಪಾನ ಮಾಡುವ ಅಥವಾ ಇಸ್ಪೀಟು ಆಡುವ ಅಭ್ಯಾಸವಿರಲಿಲ್ಲ. ಆ ಮನೆಯ ಕೊನೆಯ ಮಗಳಾಗಿದ್ದ  ಸುಮಿತ್ರಾ ಮದುವೆಯಾಗುವುದಕ್ಕಿಂತ ಮುಂಚಿನಿಂದಲೂ ತನ್ನ ಬಾವಂದಿರೊಂದಿಗೆ ಪ್ರತಿ ಹಬ್ಬಗಳಲ್ಲಿ ರಮ್ಮಿ ಆಡಿ ಹೇಗಾದರೂ ಮಾಡಿ ಒಂದಿಷ್ಟು ದುಡ್ಡು ಗೆದ್ದುಕೊಂಡು ಸಂಭ್ರಮಿಸುತ್ತಾ ಬೆಳೆದವಳು. ಈ ಕಾರಣದಿಂದಾಗಿ ಅವಳಿಗೆ ಹನುಮಂತಯ್ಯನನ್ನು ಮದುವೆಯಾದ ನಂತರ ತನ್ನ ಗಂಡ ಸಾಮಾಜಿಕ ನಡುವಳಿಕೆಗಳನ್ನು ತಿಳಿಯದ ಒಬ್ಬ ಬುದ್ದು ಎಂಬ ಅಸಹನೆ ಹುಟ್ಟಿಕೊಂಡಿತ್ತು. ತನ್ನ ಗಂಡನಿಗೆ ವರ್ಷದ ಮುನ್ನೂರ ಅರವತ್ತೈದು  ದಿನಗಳು ಕೆಲಸ ಮಾಡುವುದನ್ನು ಬಿಟ್ಟು ಬೇರೆ ಏನೂ ತಿಳಿದಿಲ್ಲ.. ವರ್ಷಕ್ಕೊಂದು ಹಬ್ಬದ ದಿನವಾದರೂ ಒಂದು ದಿನ ತನ್ನ ಬಾವಂದಿರಂತೆ ಹೆಂಡತಿ ಮಕ್ಕಳೊಂದಿಗೆ ನಿರುಮ್ಮಳವಾಗಿ ಕಾಲ ಕಳೆಯುವುದು ಬೇಕಾಗಿಲ್ಲ.. ಯಾವಾಗಲೂ ಬರೀ ಕೆಲಸ, ಕೆಲಸ, ಕೆಲಸ.. ಸಂಪಾದಿಸಿರುವುದು ಅಷ್ಟರಲ್ಲಿಯೇ ಇದೆ ಎಂದು ಮನಸ್ಸಿನಲ್ಲಿಯೇ ತನ್ನ ಗಂಡನನ್ನು ಮೂದಲಿಸಿ ಹಳಿದುಕೊಂಡಳು.
   ಮಹಾಲಕ್ಷಮ್ಮನವರು ಅಡುಗೆ ಮನೆಯಲ್ಲಿ ತಮ್ಮ ಹಿರಿಯ ಮಗಳು ಪ್ರಭಾ ಮತ್ತು ಕೆಲಸದ ಮುನಿಯಮ್ಮನೊಂದಿಗೆ ಸೇರಿ ಒಬ್ಬಟ್ಟು ಬೇಯಿಸುತಿದ್ದರು. ಪ್ರತಿದಿನ ಬೆಳಿಗ್ಗೆ ಬಂದು ಮನೆಗೆಲಸಗಳನ್ನೆಲ್ಲಾ ಮುಗಿಸಿಕೊಂಡು ರಾತ್ರಿ ತನ್ನ ಗುಡಿಸಿಲಿಗೆ ವಾಪಾಸಾಗುತಿದ್ದ ಕೆಲಸದ ಮುನಿಯಮ್ಮನೂ ದಿಕ್ಕಿಲ್ಲದ ಒಬ್ಬಂಟಿ ಹೆಂಗಸಾಗಿದ್ದಳು. ತಮ್ಮ ಹೆಣ್ಣಮಕ್ಕಳೆಲ್ಲಾ ಮದುವೆಯಾಗಿ ಅವರವರ ಗಂಡಂದಿರ ಜೊತೆ ತೆರಳಿದ ಮೇಲೆ ಆ ವಿಶಾಲವಾದ ಬಂಗಲೆ ಬಿಕೋ ಎನ್ನತೊಡಗಿತ್ತು. ತದನಂತರ ರಂಗಪ್ಪಗೌಡರು ದೈವಾಧಿನರಾದ ಮೇಲೆ ಆ ವಿಶಾಲವಾದ ಬಂಗಲೆಯಲ್ಲಿ ಒಬ್ಬರೇ ಇರಲು ಬೇಸರವಾಗಿ ಮಧ್ಯವಯಸ್ಸಿನ ಮುನಿಯಮ್ಮನನ್ನು ತಮ್ಮ  ಮನೆಯಲ್ಲಿಯೇ ಇರಿಸಿಕೊಂಡಿದ್ದರು.
   ಒಬ್ಬಟ್ಟು ಬೇಯಿಸುವವವುದರಲ್ಲಿ ನಿರತರಾಗಿದ್ದ ಮಹಾಲಕ್ಷ್ಮಮ್ಮನವರ ಮನದಲ್ಲಿ ಆಗುತಿದ್ದ ತಳಮಳವೇ ಬೇರೆಯದಾಗಿತ್ತು. ರಾತ್ರಿ ಒಂಬತ್ತು ಗಂಟೆಯಾದರೂ ತನ್ನ ಕಿರಿಯ ಅಳಿಯ ಇನ್ನೂ ಬರದೇ ಇರುವುದು ಅವರಿಗೆ ತುಸು ಆತಂಕವನ್ನುಂಟುಮಾಡಿತ್ತು. ಪಾಪ! ಖಾಸಗಿ ಕೆಲಸ.. ಏನು ಒತ್ತಡವೋ ಏನೋ.. ಎಂದು ಮನದಲ್ಲಿಯೇ ಚಿಂತಿಸಿಕೊಂಡು ಅವರೂ ಅಡುಗೆ ಮನೆಯಿಂದ ಮೂರ್ನಾಲ್ಕು ಬಾರಿ ಗೇಟಿನ ಬಳಿ ಬಂದು ಇಣುಕಿ ರಸ್ತೆಯನ್ನೊಮ್ಮೆ  ದೂರದವರೆಗೆ ದಿಟ್ಟಿಸಿ ಒಳಗೆ ಹೋಗಿದ್ದರು. ಗಂಡುಮಕ್ಕಳಿಲ್ಲದ ಮಹಾಲಕ್ಷಮ್ಮನವರಿಗೆ ತಮ್ಮ ಕಿರಿಯ ಅಳಿಯ ಹನುಮಂತಯ್ಯನನ್ನು ಕಂಡಾಗಲೆಲ್ಲಾ ತನ್ನ ಒಡಲಲ್ಲಿ ಹುಟ್ಟಿದ ಮಗನನ್ನೇ ನೋಡಿದಷ್ಟು ವಾತ್ಸಲ್ಯ ಉಕ್ಕಿ ಹರಿಯುತಿತ್ತು.  ಕಷ್ಟಪಟ್ಟು ಕೆಲಸ ಮಾಡಿ ತನ್ನ ಹೆಂಡತಿ ಮಕ್ಕಳಿಗಾಗಿ ಜೀವತೇಯುತಿದ್ದ ಅವನನ್ನು ನೆನೆದು ಅವರಿಗೆ ಆಗಾಗ ಕಣ್ಣುತುಂಬಿ ಬರುತಿತ್ತು. ಮಹಾಲಕ್ಷಮ್ಮನವರಿಗೆ ತಮ್ಮ ಇತರ ಅಳಿಯಂದಿರ ಉದ್ಯೋಗ, ಅಧಿಕಾರ, ಅವರ ಕಾರುಬಾರನ್ನು ಕಂಡು ಅವರೊಂದಿಗೆ ಔಪಚಾರಿಕವಾಗಿ ಒಂದೆರಡು ಮಾತುಗಳನ್ನು ಆಡುವುದನ್ನು ಹೊರತುಪಡಿಸಿ, ಮನಬಿಚ್ಚಿ ಮಾತನಾಡಲು ಹಿಂಜರಿಕೆಯಾಗುತಿತ್ತು. ಅವರೆಲ್ಲರ ಎದುರಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳಲೂ ಸಂಕೋಚವಾಗುತಿತ್ತು.  ಆದರೆ ಹನುಮಂತಯ್ಯನ ಬಳಿಯಲ್ಲಿ ಅವರು ಯಾವುದೇ ಸಂಕೋಚ, ಹಿಂಜರಿಕೆಗಳಿಲ್ಲದೆ ಎದುರಿನಲ್ಲಿಯೇ ಕುಳಿತು ಮನಬಿಚ್ಚಿ ಮಾತನಾಡುತಿದ್ದರು. ಇತರ ಅಳಿಯಂದಿರು ಆರ್ಥಿಕವಾಗಿ ಸಬಲರಾಗಿದ್ದು ತಮ್ಮ ಸಂಬಂಧಿಕರೆಲ್ಲಾ ಹೊಟ್ಟೆಕಿಚ್ಚುಪಡುವಂತೆ ಬದುಕುತಿದ್ದರು. ಆದರೆ ತನ್ನ ಕಿರಿಯ ಅಳಿಯ ಸಂಸಾರದ ನೊಗವನ್ನು ಸುಸೂತ್ರವಾಗಿ ಎಳೆಯಲು ಕಷ್ಟಪಡುತಿದ್ದುದನ್ನು ಕಂಡು ಅವರ ಮನ ಕರಗಿ ಕರುಳು ಮಿಡಿಯುತಿತ್ತು. ದೈಹಿಕವಾಗಿ ಸಾಧಾರಣ ರೂಪಿನವನಾಗಿ ಮೇಲ್ನೋಟಕ್ಕೆ ತುಸು ದಡ್ಡನಂತೆ ಕಾಣಿಸುತಿದ್ದರೂ ಅವನ ಅಂತರಂಗದಲ್ಲಿದ್ದ ಸರಳತೆ, ಕಷ್ಟಸಹಿಸ್ಣತೆ, ಹೃದಯವೈಶಾಲ್ಯತೆ, ನಿಷ್ಕಪಟ ಗುಣಗಳನ್ನು ಗಮನಿಸಿ ಬಹಳಷ್ಟು ಹೆಮ್ಮೆಯಾಗುತಿತ್ತು. ರಂಗಪ್ಪಗೌಡರು ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಸಾಕಷ್ಟು ಹಣವನ್ನು ಉಳಿಸಿಹೋಗಿದ್ದರು. ಮಹಾಲಕ್ಷಮ್ಮನವರು ತಮ್ಮ ಕಿರಿಯ ಮಗಳು ಮತ್ತು ಅಳಿಯನ ಸಂಸಾರಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಮುಂದಾದರೂ ಸ್ವಾಭಿಮಾನಿಯಾಗಿದ್ದ ಹನುಮಂತಯ್ಯ  ಎಂದೂ ಒಪ್ಪಿಕೊಳ್ಳತ್ತಿರಲಿಲ್ಲ. ಆದರೂ ಮಹಾಲಕ್ಷಮ್ಮನವರು ಕಿರಿಯ ಮಗಳು-ಅಳಿಯನ ಕುಟುಂಬಕ್ಕೆ ಅವಶ್ಯಕತೆಯಿದ್ದಾಗ,  ವಾಪಾಸು ಮಾಡುವಿರಂತೆ.. ತೆಗೆದುಕೊಳ್ಳಿ ಎಂದು ದುಂಬಾಲುಬಿದ್ದು ಹಣದ ಸಹಾಯ ಮಾಡುತಿದ್ದರು. ಹಾಗೆ ಕೊಟ್ಟ ಹಣ ವಿಳಂಬವಾದರೂ ಮತ್ತೆ ಅವರ ಕೈಸೇರುತಿತ್ತು.
  ಅಡುಗೆ ಮನೆಯಿಂದ ಮತ್ತೊಮ್ಮೆ ಹೊರಗೆ ಬಂದು ರಸ್ತೆಯನ್ನೊಮ್ಮೆ ಇಣುಕಿ ನೋಡಿ ಕಳವಳಗೊಂಡು ಹಾಲಿನಲ್ಲಿ ಮುಖ ದಪ್ಪ ಮಾಡಿಕೊಂಡು ಕುಳಿತಿದ್ದ ಸುಮಿತ್ರಾಳ ಕಡಗೊಮ್ಮೆ ನೋಡಿ ‘ಎಲ್ಲೋ ಬಸ್ಸು ಲೇಟಾಗಿರಬಹುದು.. ಹನುಮಂತಯ್ಯನೋರು ಇನ್ನೇನು ಬರಬಹುದು...’ ಎಂದು ಸಮಾಧಾನದ ನುಡಿ ನುಡಿದು ಒಳಗೆ ತೆರಳಿದರು. ಸುಮಿತ್ರಾ ಏನೊಂದೂ ಪ್ರತಿಕ್ರಿಯಿಸದೇ ಹಾಲಿನಲ್ಲಿದ್ದ ಟೀವಿಯ ಕಡೆಗೆ ನೆಟ್ಟ ನೋಟ ಬೀರಿ ಕುಳಿತಿದ್ದಳು. ಮಹಾಲಕ್ಷ್ಮಮ್ಮನವರು ಎಂದೂ ತಮ್ಮ ಕಿರಿಯ ಅಳಿಯನನ್ನು ಅವನ ಅನುಪಸ್ಥಿತಿಯಲ್ಲಯೂ ಏಕವಚನದಲ್ಲಿ ಕರೆಯುತ್ತಿರಲಿಲ್ಲ.
         * * * * * *
   ರಂಗಪ್ಪಗೌಡರು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಗ್ರಾಮವೊಂದರ ಕೃಷಿಕ ಕುಟುಂಬದ ಹಿರಿಯ ಮಗನಾಗಿದ್ದರು. ಬಿ.ಎ ಪದವಿ ಪಡೆದು ಸರ್ಕಾರದ ಸಚಿವಾಲಯದಲ್ಲಿ ಸಾಮಾನ್ಯ ಗುಮಾಸ್ತನಾಗಿ ಕೆಲಸಕ್ಕೆ ಸೇರಿ ಬೆಂಗಳೂರಿನಲ್ಲಿ ನೆಲೆಸಿದ ಮೇಲೆ ಹಿರಿಯ ಮಗನಾಗಿ ಕೌಟುಂಬಿಕ ಜವಾಬ್ದಾರಿಯನ್ನರಿತು ತಮ್ಮ ತಂಗಿಯರು ಮತ್ತು ತಮ್ಮಂದಿರನ್ನೆಲ್ಲಾ ವಿದ್ಯಾವಂತರನ್ನಾಗಿ ಮಾಡಿ ಅವರುಗಳೆಲ್ಲರ ಮದುವೆ ಮಾಡಿ ಮುಗಿಸಿದಾಗ ವಯಸ್ಸು ಮೂವತ್ತನ್ನು ದಾಟಿತ್ತು. ಆನಂತರ ಅವರು ತಮ್ಮ ನೆರೆಯ ಗ್ರಾಮದ ಮಹಾಲಕ್ಷಮ್ಮನವರನ್ನು ವಿವಾಹವಾಗಿದ್ದರು. ಅವರೂ ಕೂಡ ಏಳನೆಯ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಓದು-ಬರಹ ಬಲ್ಲವರಾಗಿದ್ದರು. ರೂಪು ಮತ್ತು ಗುಣದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯಂತಿದ್ದ ಪತ್ನಿ ಜೊತೆಗೂಡಿದ ಮೇಲೆ ರಂಗಪ್ಪಗೌಡರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮೇಲೆ ಬಂದಿದ್ದರು. ಉದ್ಯೋಗದಲ್ಲಿÀ ಸಂಬಳದ ಜೊತೆಗೆ  ಸಾಕಷ್ಟು ಗಿಂಬಳವೂ ಸಿಗುತಿತ್ತು. ಹಾಗೆಂದು ಅವರೂ ಎಂದಿಗೂ ಯಾರನ್ನೂ ಬಾಯಿಬಿಟ್ಟು ಹಣ ಕೇಳುವುದಾಗಲೀ, ಇಂತಿಷ್ಟೇ ಮೊತ್ತವನ್ನು ಕೊಡಿರೆಂದು ಪೀಡಿಸುವುದಾಗಲೀ ಮಾಡುತ್ತಿರಲಿಲ್ಲ. ಕೊಟ್ಟಷ್ಟು ಹಣ ತೆಗೆದುಕೊಂಡು ನಿಯತ್ತಿನಿಂದ ಅವರ ಕೆಲಸ ಮಾಡಿಕೊಡುತಿದ್ದರು. ಇದರಿಂದಾಗಿ ಅವರಿಗೆ ಅವರ ಸೆಕ್ಷನ್ನಿನಲ್ಲಿ ಒಳ್ಳೆಯ ಹೆಸರೂ ಇದ್ದಿತು. ಸಾಕಷ್ಟು ಪ್ರಭಾವಿ ವ್ಯಕ್ತಿಗಳ ಪರಿಚಯವೂ ಆಗಿದ್ದಿತು. ವೃತ್ತಿಯಲ್ಲಿ ಬಡ್ತಿಯ ಮೇಲೆ ಬಡ್ತಿ ದೊರೆತು ಸಚಿವಾಲಯದಲ್ಲಿ ಉಪಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. 
   ರಂಗಪ್ಪಗೌಡರು ಮತ್ತು ಮಹಾಲಕ್ಷ್ಮಮ್ಮನವರಿಗೆ ಒಂದರ ಹಿಂದೆ ಒಂದರಂತೆ ನಾಲ್ಕು ಜನ ಹೆಣ್ಣುಮಕ್ಕಳೇ ಹುಟ್ಟಿದರೂ ಒಂದು ಗಂಡುಮಗುವಾಗಲಿ ಎಂಬ ದೂರದ ಆಸೆಯಿಂದ ಕಾಯುತಿದ್ದರು. ಆದರೆ ಅದು ಈಡೇರದೆ ತಮ್ಮ ಐದನೆಯ ಮತ್ತು ಕೊನೆಯ ಮಗಳು ಸುಮಿತ್ರಾ ಹುಟ್ಟಿದಾಗ ಇನ್ನು ಮಕ್ಕಳು ಸಾಕೆಂಬ ನಿರ್ಧಾರಕ್ಕೆ ಬಂದು ಐದೂ ಜನ ಹೆಣ್ಣುಮಕ್ಕಳನ್ನು ಯಾವುದೇ ಕೊರತೆಯಿಲ್ಲದಂತೆ ಸಾಕಿ, ಎಲ್ಲರನ್ನೂ ಪದವೀಧರೆಯರನ್ನಾಗಿ ಮಾಡಿದರು. ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆ ಬನಶಂಕರಿ ಮೊದಲ ಹಂತದಲ್ಲಿ ಆರು ಕೊಠಡಿಗಳ ವಿಶಾಲ ಬಂಗಲೆಯನ್ನು ಕಟ್ಟಿಸಿದರು. ಪ್ರತಿಯೊಬ್ಬ ಮಗಳಿಗೂ ಒಂದೊಂದು ನಿವೇಶನವನ್ನು ಖರೀದಿಸಿದರು. ತಮ್ಮ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ಚಿನ್ನದ ಆಭರಣಗಳನ್ನು ಕೊಂಡಿದ್ದರು. ತಮಗಿದ್ದ ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ತಮ್ಮ ಮೊದಲ ನಾಲ್ಕು ಜನ ಹೆಣ್ಣುಮಕ್ಕಳಿಗೆ ಉತ್ತಮ ಉದ್ಯೋಗದಲ್ಲಿರುವ ವರರನ್ನು ಹುಡುಕಿ ಮದುವೆ ಮಾಡಿದರು. 
   ಮೊದಲ ಮಗಳು ಪ್ರಭಾಳ ಗಂಡ  ಎಂಜಿನಿಯರಿಂಗ್ ಪಿಹೆಚ್‍ಡಿ ಪಡೆದು ಪ್ರಸ್ತುತ ಬೆಂಗಳೂರು ನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು. ಎರಡನೆಯ ಮಗಳು ಕುಸುಮಾಳ ಗಂಡ ಅರಣ್ಯ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಚಿಕ್ಕಮಗಳೂರಿನಲ್ಲಿದ್ದರು. ಬೆಂಗಳೂರಿನಲ್ಲಿಯೇ ಇದ್ದ ಮೂರನೆಯ ಮಗಳು ಪರಿಮಳಾಳ ಗಂಡ ಅಬಕಾರಿ ಇಲಾಖೆಯಲ್ಲಿ ಉಪ ಅಧೀಕ್ಷಕರಾಗಿದ್ದರು. ನಾಲ್ಕನೆಯ ಮಗಳು ಶುಭಾಳ ಗಂಡ  ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ದಾವಣಗೆರೆಯಲ್ಲಿ ವಾಸವಾಗಿದ್ದರು.
   ರಂಗಪ್ಪಗೌಡರಿಗೆ ತಮ್ಮ ಮೊದಲ ನಾಲ್ಕು ಜನ ಹೆಣ್ಣುಮಕ್ಕಳ ಮದುವೆ ಮಾಡುವುದು ತ್ರಾಸದಾಯಕವಾಗಲಿಲ್ಲ. ಅವರೆಲ್ಲರೂ ಮಹಾಲಕ್ಷ್ಮಮ್ಮನವರ ರೂಪವನ್ನೇ ಹೊತ್ತು ಅವರಂತೆಯೇ ಎತ್ತರವಾಗಿ ಬೆಳೆದು ದಂತದ ಗೊಂಬೆಗಳಂತಿದ್ದರು. ಅದೂ ಅಲ್ಲದೆ ಅವರೆಲ್ಲರ ಮದುವೆಯ ಸಮಯದಲ್ಲಿ ರಂಗಪ್ಪಗೌಡರು ಸರ್ಕಾರದ ಅಧಿಕಾರಯುತ ಹುದ್ದೆಯಲ್ಲಿದ್ದರು. ಸಾಕಷ್ಟು ವರದಕ್ಷಿಣೆ, ವರೋಪಚಾರ ತೆತ್ತು ನಾಲ್ಕು ಜನ ಹೆಣ್ಣುಮಕ್ಕಳ ಮದುವೆಗಳನ್ನು ಪ್ರತಿಷ್ಟಿತ ಕಲ್ಯಾಣಮಂಟಪಗಳಲ್ಲಿ ವಿಜೃಂಭಣೆಯಿಂದಲೇ ಮಾಡಿ ಮುಗಿಸಿದ್ದರು. ತಮ್ಮ ಐದನೆಯ ಮಗಳು ಸುಮಿತ್ರಾಳಿಗೆ ಮದುವೆಯ ವಯಸ್ಸು ಸಮೀಪಿಸುವ ಹೊತ್ತಿಗೆ ರಂಗಪ್ಪಗೌಡರು ನಿವೃತ್ತರಾಗಿ ಎರಡು ವರ್ಷ ಕಳೆದುಹೋಗಿದ್ದಿತು. ಜೊತೆಗೆ ಸುಮಿತ್ರಾ ಕೂಡ ತನ್ನ ಅಕ್ಕಂದಿರಂತೆ ಸೌಂದರ್ಯವತಿಯಾಗದೆ ಅಮ್ಮನ ಬಣ್ಣ ಮತ್ತು ಅಪ್ಪನ ಮುಖಚಹರೆಯನ್ನು ಪಡೆದು ಅವರೆಲ್ಲರಿಗಿಂತ ತುಸು ಕುಳ್ಳಗಿನ, ಸಾಧಾರಣ ರೂಪಿನ ಯುವತಿಯಾಗಿದ್ದಳು. ವಯಸ್ಸು ಇಪ್ಪತ್ತಮೂರು ವರ್ಷಗಳಾದರೂ ಅವಳಿಗೆ ಕಂಕಣಬಲ ಕೂಡಿಬರದೆ ರಂಗಪ್ಪಗೌಡರು ಮತ್ತು ಮಹಾಲಕ್ಷಮ್ಮನವರಿಗೆ ಚಿಂತೆ ಶುರುವಾಯಿತು.  ಉತ್ತಮ ಉದ್ಯೋಗದಲ್ಲಿದ್ದ ಗಂಡುಗಳು ಸುಮಿತ್ರಾಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಸಣ್ಣಪುಟ್ಟ ಉದ್ಯೋಗದಲ್ಲಿದ್ದ ಗಂಡುಗಳು ರಂಗಪ್ಪಗೌಡರ ಮನೆ, ಸ್ಥಿತಿವಂತಿಕೆಯನ್ನು ನೋಡಿ ಒಪ್ಪಿಕೊಂಡರೂ ಅವರುಗಳಿಗೆ ತಮ್ಮ ಮಗಳನ್ನು ಧಾರೆ ಎರೆದು ಕೊಡಲು ರಂಗಪ್ಪಗೌಡರ ಮನಸ್ಸು ಒಪ್ಪುತ್ತಿರಲಿಲ್ಲ. ಉಳಿದ ಅಳಿಯಂದಿರೆಲ್ಲಾ ಉತ್ತಮ ವಿದ್ಯಾರ್ಹತೆಯುಳ್ಳವರು, ಲಾಭದಾಯಕ ಹುದ್ದೆಗಳಿದ್ದಾರೆ.. ಕೊನೆಯ ಮಗಳಿಗೂ ಅಂತಹ ವರನನ್ನೇ ಹುಡುಕಬೇಕೆನ್ನುವ ಮನಸ್ಥಿತಿ ಅವರದಾಗಿತ್ತು. ಹೀಗಾಗಿ ಅವರಿಗೆ ಕೊನೆಯ ಮಗಳ ಮದುವೆ ಅತ್ಯಂತ ತ್ರಾಸದಾಯಕವಾದ ಕೆಲಸವಾಯಿತು. ಇದರ ಜೊತೆಗೆ  ಅವರು ವಯೋಸಹಜವಾದ ಅಧಿಕ ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆಗಳಿಂದ ಬಳಲುತಿದ್ದರು. ಇದನ್ನೆಲ್ಲಾ ಕಂಡು ಮಹಾಲಕ್ಷ್ಮಮ್ಮನವರಿಗೆ ಇನ್ನೂ ಹೆಚ್ಚಿನ ಆತಂಕವಾಗಿ ಒಳ್ಳೆಯ ಕೆಲಸವಿಲ್ಲದಿದ್ದರೂ ಪರವಾಗಿಲ್ಲ.. ಒಳ್ಳೆಯ ವಿದ್ಯಾರ್ಹತೆಯನ್ನೊಂದಿದ ಹುಡುಗ ಸಿಕ್ಕಿದರೆ ಸಾಕು.. ಅವನು ಸೆಟಲ್ ಆಗುವವರೆಗೆ ನಮ್ಮ ಜೊತೆಯೇ ಇರಲಿ.. ಅಂತಹವರನ್ನು ನೋಡೋಣ ಎಂದು ಕೊನೆಗೊಂದು ಸಲಹೆ ನೀಡಿದರು. ತುಸು ಯೋಚಿಸಿದ ರಂಗಪ್ಪಗೌಡರಿಗೂ ಅದು ಸರಿಯೆನ್ನಿಸಿ ಅಂದಿನಿಂದ ಉತ್ತಮ ವಿದ್ಯಾರ್ಹತೆಯುಳ್ಳ ವರನಿಗಾಗಿ ಹುಡುಕಾಟ ಪ್ರಾರಂಭವಾಯಿತು. ಉತ್ತಮ ಉದ್ಯೋಗವಿಲ್ಲದಿದ್ದರೂ ಕನಿಷ್ಠ ಒಬ್ಬ ಎಂಜಿನಿಯರ್ರನಿಗಾದರೂ ಮಗಳನ್ನು ಮದುವೆ ಮಾಡಿಕೊಡಬೇಕು ಎಂಬುದು ಅವರ ಮಹದಾಸೆಯಾಗಿತ್ತು.
   ತಮ್ಮ ಕೊನೆಯ ಮಗಳ ಮದುವೆಯ ಚಿಂತೆಯನ್ನು ತಲೆಗೆ ಹಚ್ಚಿಕೊಂಡು ತಿರುಗುತಿದ್ದ ರಂಗಪ್ಪಗೌಡರು ಒಂದು ಬಾರಿ ತಮ್ಮ ಕಾರಿನಲ್ಲಿ ಸ್ವಗ್ರಾಮಕ್ಕೆ ಹೋದರು. ಊರಿನ ಪ್ರವೇಶದ್ವಾರದಲ್ಲಿದ್ದ ತಮ್ಮ ಮನೆದೇವರು ಹನುಮಂತರಾಯನ ಗುಡಿಯ ಬಳಿ ಕಾರು ನಿಲ್ಲಿಸಿ, ನನ್ನ ಮಗಳಿಗೆ ಒಬ್ಬ ಉತ್ತಮ ವರನನ್ನು ಅನುಗ್ರಹಿಸು ತಂದೆಯೇ.. ಎಂದು ಬೇಡಿಕೊಂಡು ಊರಿನೊಳಗೆ ಬಂದರು. ಪಕ್ಕದ ಊರೊಂದರಲ್ಲಿ ಪ್ರಾಥಮಿಕಶಾಲಾ ಶಿಕ್ಷಕವೃತ್ತಿಯಲ್ಲಿದ್ದು ನಿವೃತ್ತರಾಗಿ ಈಗ ತಮ್ಮ ಸ್ವಗ್ರಾಮದಲ್ಲಿ ನೆಲಸಿದ್ದ ಅವರ ಕುಲಬಾಂಧವರೂ ಬಾಲ್ಯಸ್ನೇಹಿತರೂ ಆಗಿದ್ದ ಕುಂದೂರಯ್ಯನವರು ದಾರಿಯಲ್ಲಿ ಒಬ್ಬರೇ ನಡೆದುಬರುತಿದ್ದುದನ್ನು ಕಂಡು ಕಾರು ನಿಲ್ಲಿಸಿ ಬಾಯ್ತುಂಬಾ ಮಾತನಾಡಿಸಿದರು. ಅವರ ಮತ್ತು ಅವರ ಕುಟುಂಬದ ಯೋಗಕ್ಷೇಮ ವಿಚಾರಿಸಿದ್ದುದಲ್ಲದೇ ತಮ್ಮ ಕೊನೆಯ ಮಗಳಿಗೆ ಯಾರಾದರೂ ಒಳ್ಳೆಯ ವಿದ್ಯಾವಂತ ಹುಡುಗರಿದ್ದರೆ ತಿಳಿಸುವಂತೆ ಅಲವತ್ತುಕೊಂಡರು. ತಕ್ಷಣವೇ ಏನನ್ನೋ ಯೋಚಿಸಿದ ಕುಂದೂರಯ್ಯನವರು ‘ರಂಗಣ್ಣಾ.. ಇಲ್ಲೇ ರಾಮಪುರದಲ್ಲಿ ನನ್ನ ಶಿಷ್ಯ ಒಬ್ಬ ಇದಾನೆ.. ಬಡಕುಟುಂಬದವನು.. ತಂದೆ-ತಾಯಿಗೆ ಒಬ್ಬನೇ ಮಗ.. ಸ್ವಲ್ಪ ಜಮೀನಿದೆ.. ಅವನೇನು ತುಂಬಾ ಬುದ್ದಿವಂತ ಹುಡುಗನಲ್ಲ.. ಆದರೆ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡಿದಾನೆ. ಕಷ್ಟಪಟ್ಟು ಓದಿದಾನೆ.. ಸಿವಿಲ್ ಎಂಜಿನಿಯರ್ರು.. ವಯಸ್ಸು ಒಂದು ಇಪ್ಪತ್ತಾರು-ಇಪ್ಪತ್ತೇಳು ವರ್ಷ ಆಗಿರಬಹುದು.. ಬೆಂಗಳೂರಿನಲ್ಲಿ ಯಾವುದೋ ಪ್ರೈವೇಟು ಕೆಲಸದಲ್ಲಿದಾನೆ.. ಕಡಿಮೆ ಸಂಬಳವಂತೆ.. ಅವನಿಗೂ ಅವನ ತಂದೆ-ತಾಯಿಗಳಿಗೂ ನನ್ನನ್ನು ಕಂಡರೆ ಅಪಾರ ಗೌರವವಿದೆ.. ನೀನು ಹೂಂ ಅಂದ್ರೆ ವಿಚಾರಿಸ್ತೀನಿ.. ಋಣಾನುಬಂಧವಿದ್ದರೆ ಮದುವೆ ನಡೆಯಲಿ..’ ಎಂದರು. ಹುಡುಗ ಎಂಜಿನಿಯರ್ರು ಎಂಬ ಮಾತು ಕೇಳಿ ರಂಗಪ್ಪಗೌಡರ ಕಿವಿ ನಿಮಿರಿತಲ್ಲದೆ ಒಳಗೊಳಗೆ ಖುಷಿಯಾಗತೊಡಗಿತು. ಆದರೂ ಅದನ್ನು ತೋರಿಸಿಕೊಳ್ಳದೆ ‘ಒಳ್ಳೇದು.. ನಮ್ಮ ಮನೆಗೆ ಹುಡುಗನನ್ನೂ ಅವರ ಅಪ್ಪ-ಅಮ್ಮನನ್ನೂ ಕರೆದುಕೊಂಡು ಬಾ.. ನನ್ನ ಮಗಳನ್ನೂ ನೋಡಲಿ.. ನೀನು ಹೇಳಿದಂತೆ ಋಣಾನುಬಂಧವಿದ್ದರೆ ಆಗಲಿ..’ ಎಂದು ತಿಳಿಸಿದರು. 
   ಕುಂದೂರಯ್ಯನವರು ತಡ ಮಾಡಲಿಲ್ಲ.  ರಂಗಪ್ಪಗೌಡರ ಮನೆಗೆ ಫೋನು ಮಾಡಿ ತಿಳಿಸಿ ನಾಲ್ಕು ದಿನಗಳಲ್ಲಿಯೇ ತಮ್ಮ ಶಿಷ್ಯನನ್ನೂ ಅವನ ತಂದೆ-ತಾಯಿಯರನ್ನು ಕರೆದುಕೊಂಡು ಬೆಂಗಳೂರಿನಲ್ಲಿದ್ದ ಸ್ನೇಹಿತನ ಮನೆಗೆ ಬಂದೇಬಿಟ್ಟರು. ನಸುಗಪ್ಪು ಬಣ್ಣದ, ತುಸು ಕುಳ್ಳಗಿನ, ಸಾದಾರಣ ರೂಪಿನವನಾಗಿದ್ದರೂ ಹಳ್ಳಿಯ ಯುವಕರಂತೆ ಕಟ್ಟುಮಸ್ತಾಗಿದ್ದ ಹನುಮಂತಯ್ಯನನ್ನು ನೋಡಿ ರಂಗಪ್ಪಗೌಡರು ಮತ್ತು ಮಹಾಲಕ್ಷ್ಮಮ್ಮನವರಿಗೆ ಸಂತೋಷವಾಯಿತು. ‘ನಾನು ಸಿವಿಲ್ ಎಂಜಿನಿಯರಿಂಗ್ ಮುಗಿಸಿ ನಾಲ್ಕು ವರ್ಷವಾಯಿತು. ಕೆಲಸ ಸಿಕ್ಕಿರಲಿಲ್ಲ. ಈಗ ಒಂದು ವರ್ಷದಿಂದ ಖಾಸಗಿ ಕಟ್ಟಡ ನಿರ್ಮಾಣದ ಕಂಪೆನಿಯಲ್ಲಿ ಸೈಟ್ ಎಂಜಿನಿಯರ್  ಆಗಿ ಕೆಲಸ ಮಾಡುತಿದ್ದೇನೆ.. ಸಂಬಳ ಐದು ಸಾವಿರ..’ ಎಂದು ಪ್ರಾಮಾಣಿಕವಾಗಿ ನುಡಿದ ಹುಡುಗನ ವಿದ್ಯೆ, ರೂಪು ಮತ್ತು ಕೆಲಸಗಳಿಗಿಂತ ಹೆಚ್ಚಾಗಿ ಅವನ ಮತ್ತು ಅವನ ತಂದೆತಾಯಿಯರ ನಡೆ-ನುಡಿ, ಪ್ರಾಮಾಣಿಕತೆಗಳು  ರಂಗಪ್ಪಗೌಡರು ಮತ್ತು ಮಹಾಲಕ್ಷಮ್ಮನವರಿಗೆ ತುಂಬಾ ಇಷ್ಟವಾದವು. ರಂಗಪ್ಪಗೌಡರಿಗೆ ಹುಡುಗನ ಹೆಸರನ್ನು ಕೇಳಿ ತಮ್ಮ ಮನೆದೇವರು ಹನುಮಂತರಾಯನೇ ತಮ್ಮ ಪ್ರಾರ್ಥನೆಗೆ ಕಿವಿಗೊಟ್ಟು ಈ ಹುಡುಗನನ್ನು ಕಳುಹಿಸಿದ್ದಾನೆ ಎನ್ನುವ ಭ್ರಮೆ ಮನದಲ್ಲಿ ಮೂಡಿನಿಂತಿತು. ಹುಡುಗ ತಮ್ಮ ಮಗಳನ್ನು ಒಪ್ಪಿದರೆ ಪೂರ್ಣಮನಸ್ಸಿನಿಂದ ಅವನಿಗೆ ತಮ್ಮ ಮಗಳನ್ನು ಧಾರೆ ಎರೆದು ಕೊಡಲು ಅವರು ಮಾನಸಿಕವಾಗಿ ಸಿದ್ಧರಾದರು. ಆದರೆ ತಮ್ಮ ಮಗಳ ಮನಸ್ಸಿನಲ್ಲಿ ಏನಿದೆಯೋ.. ಅವಳ ಒಪ್ಪಿಗೆಯೂ ಬೇಕಲ್ಲಾ.. ಎಂಬ ಆತಂಕ ಅವರಲ್ಲಿ ಮೂಡದೇ ಇರಲಿಲ್ಲ. ಹೆಣ್ಣು ನೋಡುವ ಶಾಸ್ತ್ರ ಮುಗಿಸಿ ಕುಂದೂರಯ್ಯನವರು ಹುಡುಗನನ್ನು ಮತ್ತು ಅವನ ತಂದೆ-ತಾಯಿಯರನ್ನು ಕರೆದುಕೊಂಡು ವಾಪಾಸು ಹೊರಟಾಗ, ‘ರಂಗಣ್ಣಾ.. ಎಲ್ಲವನ್ನೂ ಆಲೋಚಿಸಿ ನೋಡು.. ನಾನೂ ಹುಡುಗನ ಮತ್ತು ಅವರ ಅಪ್ಪ-ಅಮ್ಮನ ಅಭಿಪ್ರಾಯವನ್ನು ತಿಳಿದುಕೊಂಡು ಇನ್ನು ಮೂರು-ನಾಲ್ಕು ದಿವಸಗಳನ್ನು ಬಿಟ್ಟು ಪೋನು ಮಾಡುತ್ತೇನೆ..’ ಎಂದು ಪ್ರತ್ಯೇಕವಾಗಿ ತಿಳಿಸಿ ಹೊರಟು ಹೋದರು.
   ಅವರು ಹೋದ ಮೇಲೆ ರಂಗಪ್ಪಗೌಡರು ಮತ್ತು ಮಹಾಲಕ್ಷ್ಮಮ್ಮನವರು ತನ್ನ ರೂಮಿನ ಒಳಗೆ ಹೊಕ್ಕಿದ್ದ ಸುಮಿತ್ರಾಳನ್ನು ಕರೆದು ಸೋಫಾದ ಮೇಲೆ ತಮ್ಮ ನಡುವೆ ಕೂರಿಸಿಕೊಂಡು ಹುಡುಗನ ಮತ್ತು ಅವನ ತಂದೆ-ತಾಯಿಯರ ಸಾತ್ವಿಕ ಗುಣಗಳ ಬಗ್ಗೆ ಮಾತನಾಡಿ, ಅವಳ ಅಭಿಪ್ರಾಯವನ್ನು ಕೇಳಿ, ಅದಕ್ಕಾಗಿ ತುಸು ಆತಂಕದಿಂದಲೇ ಕಾಯ್ದರು. ಕೊನೆಯ ಮಗಳೆಂದು ತುಂಬು ಪ್ರೀತಿಯಿಂದ ಮತ್ತು  ಸಂಪೂರ್ಣ ಸಲಿಗೆ ನೀಡಿ ಅವಳನ್ನು ಅವರು ಬೆಳೆಸಿದ್ದರು. ಸುಮಿತ್ರಾ ಅದರಿಂದಾಗಿ ಯಾವುದೇ ವಿಷಯವಾಗಲೀ, ಎದುರಿಗೆ ಯಾರೇ ಇರಲಿ, ತನಗೆ ಅನಿಸಿದ್ದನ್ನು ತಪ್ಪೋ ಸರಿಯೋ ನೇರವಾಗಿ ಹೇಳುವ ದಿಟ್ಟತನವನ್ನು ಬೆಳೆಸಿಕೊಂಡಿದ್ದಳು. ಅವಳಿಗೂ ತನ್ನ ಮದುವೆಗಾಗಿ ಅಪ್ಪ-ಅಮ್ಮ ಪಡುತಿದ್ದ ಯಾತನೆಯ ಅರಿವಿದ್ದಿತು. ಹಾಗಾಗಿ ಹುಡುಗನನ್ನು ನೇರವಾಗಿ ನಿರಾಕರಿಸಲೂ ಭಯವಾಗುತಿತ್ತು. ಅವಳಿಗೆ ಅವನನ್ನು ಮತ್ತು ಅವನ ತಂದೆ-ತಾಯಿಯರನ್ನು ನೋಡಿದ ಮೊದಲ ನೋಟದಲ್ಲಿಯೇ ಅವರು ತೊಟ್ಟಿದ್ದ ಸಾಧರಣ ಉಡುಪು, ಹಾವಭಾವಗಳನ್ನು ಕಂಡು ಶುದ್ಧ ಹಳ್ಳಿಯ ಜನರೆಂಬುದು ಮನದಟ್ಟಾಗಿತ್ತು. ತನ್ನ ಬಾವಂದಿರೆಲ್ಲಾ ಎಷ್ಟು ಲಕ್ಷಣವಾಗಿದ್ದಾರೆ.. ಎಷ್ಟೊಂದು ಎತ್ತರವಾಗಿದ್ದಾರೆ.. ಎಂತಹ ಬೆಲೆ ಬಾಳುವ ಉಡುಪು ಧರಿಸುತ್ತಾರೆ.. ಅವರ ಮುಖಗಳಲ್ಲಿ ಎಂತಹುದೋ ಆತ್ಮವಿಶ್ವಾಸವಿರುತ್ತದೆ.. ಆದರೆ ಈ ಹಳ್ಳಿಹುಡುಗನ ಮುಖದಲ್ಲಿ ಅಂತಹ ಯಾವುದೂ ಕಳೆಯಿಲ್ಲಾ.. ಪ್ರೈವೇಟು ಕೆಲಸ.. ಸಂಬಳ ಬರೀ ಐದು ಸಾವಿರ.. ಹೆಸರು ಬೇರೆ ಹನುಮಂತಯ್ಯ.. ನಾನು ಕಾಲೇಜಿನಲ್ಲಿ ಓದುವಾಗ ಇದ್ದ ನನ್ನ ಕ್ಲಾಸ್‍ಮೇಟು ಹುಡುಗರಿಗೆಲ್ಲಾ ಎಂತೆಂತಹ ಒಳ್ಳೆಯ ಹೆಸರುಗಳಿದ್ದವು.. ಮದುವೆಯಾದ ಮೇಲೆ ಅವನನ್ನು ಏನೆಂದು ಕರೆಯುವುದು.. ಎಂಬೆಲ್ಲಾ ಆಲೋಚನೆಗಳು ಮನದತುಂಬಾ ಮೂಡಿಬಂದವು. ಹುಡುಗ ಒಪ್ಪಿಗೆಯಿಲ್ಲ ಎಂದು ಬಾಯಿಬಿಟ್ಟು ಹೇಳದೇ ಹೋದರೂ ತನಗೆ ಅನಿಸಿದೆಲ್ಲವನ್ನೂ ತನ್ನ ಅಪ್ಪ-ಅಮ್ಮಂದಿರ ಬಳಿಯಲ್ಲಿ ಚಾಚೂ ತಪ್ಪದೆ ಹೇಳಿಕೊಂಡಳು. ಮಹಾಲಕ್ಷ್ಮಮ್ಮನವರಿಗೆ ಅವಳ ಮಾತುಗಳನ್ನು ಕೇಳಿ ಕಿರಿಯ ಮಗಳೆಂದು ಮುದ್ದುಮಾಡಿ ತಾವು ಇವಳಿಗೆ ಸಲಿಗೆ ಕೊಟ್ಟು ರಾಣಿಯಂತೆ ಬೆಳೆಸಿದ್ದೇ ತಪ್ಪಾಯಿತೇನೋ ಎನಿಸಿ ಮೈಯ್ಯೆಲ್ಲಾ ಉರಿದುಹೋಯಿತು. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ ಸಹನೆ ತಂದುಕೊಂಡು ಅನುನಯದ ಮಾತುಗಳಲ್ಲಿಯೇ ಮಗಳಿಗೆ ತಿಳಿಹೇಳಿದರು.
   ‘ನಾನು ನಿಮ್ಮಪ್ಪ ಇಬ್ಬರೂ ಹಳ್ಳಿಯಲ್ಲಿಯೇ ಹುಟ್ಟಿಬೆಳೆದವರಲ್ಲವೇನೇ ಸುಮೀ.. ಅಷ್ಟಕ್ಕೂ ನೀನು ಹಳ್ಳಿಯಲ್ಲಿ ಹೋಗಿ ಸಂಸಾರ ಮಾಡಬೇಕಾ.. ಅವರು ಇಲ್ಲಿಯೇ ಕೆಲಸದಲ್ಲಿಲ್ಲವಾ.. ಸಣ್ಣ ಸಂಬಳವಾದರೇನು.. ನಾಳೆ ದೊಡ್ಡ ಸಂಬಳವಾಗುತ್ತದೆ.. ಹೆಸರು ಹನುಮಂತಯ್ಯನಾದರೇನು.. ಅದು ನಮ್ಮ ಮನೆದೇವರ ಹೆಸರಲ್ಲವಾ.. ನಾನೇನು ನಿಮ್ಮ ಅಪ್ಪನನ್ನು ಎಂದಾದರೂ ಹೆಸರು ಹಿಡಿದು ಕರೆಯುತ್ತೇನೆಯೇ.. ಒಳ್ಳೆಯ ಆಲೋಚನೆಗಳಿದ್ದರೆ ಎಲ್ಲಾ ಒಳ್ಳೆಯದೇ ಆಗುತ್ತದೆ.. ಯೋಚಿಸಿ ನೋಡು.. ಇದರಲ್ಲಿ ನಮ್ಮ ಬಲವಂತವೇನಿಲ್ಲ..’ ಎಂದು ಸೌಮ್ಯವಾಗಿಯೇ ಬುದ್ಧಿವಾದ ಹೇಳಿದರು. ರಂಗಪ್ಪಗೌಡರೂ ತಮ್ಮ ಪತ್ನಿಯ ಮಾತುಗಳನ್ನು ಅನುಮೋದಿಸಿದರು. ತುಸು ಹೊತ್ತು ಸುಮ್ಮನೆ ಕುಳಿತಿದ್ದ ಸುಮಿತ್ರಾ ‘ನಿಮ್ಮ ಇಷ್ಟವೇ ನನ್ನ ಇಷ್ಟ..’ ಎಂದು ಉತ್ತರಿಸಿದಾಗ ಮಹಾಲಕ್ಷ್ಮಮ್ಮನವರು ಮತ್ತೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.  ‘ಅದೆಲ್ಲಾ ಆಗದ ಮಾತು.. ಅವರೊಂದಿಗೆ ಸಂಸಾರ ಮಾಡಬೇಕಾದವಳು ನೀನು.. ನಾನು ಮತ್ತು ನಿಮ್ಮಪ್ಪ ಇನ್ನೆಷ್ಟು ದಿನ ಈ ಭೂಮಿಯ ಮೇಲೆ ಉಳಿದೇವು.. ಸರಿಯಾಗಿ ಯೋಚನೆ ಮಾಡಿ ನಿನ್ನ ನಿರ್ಧಾರ ತಿಳಿಸು..’ ಎಂದು ಖಡಾಖಂಡಿತವಾಗಿ ನುಡಿದರು. ಸುಮಿತ್ರಾಳಿಗೆ ಏನು ಹೇಳುವುದೆಂದು ತಿಳಿಯಲಿಲ್ಲ. ‘ಸರಿ ಮದುವೆಯಾಗುತ್ತೇನೆ.. ಎಲ್ಲಾ ಒಳ್ಳೆಯದಾದರೆ ಸಾಕು..’ ಎಂದು ಮಂದಹಾಸ ಬೀರಿದಳು. ರಂಗಪ್ಪಗೌಡರು ಮತ್ತು ಮಹಾಲಕ್ಷ್ಮಮ್ಮನವರ ಮುಖದಲ್ಲಿ ಪ್ರಸನ್ನತೆ ಮೂಡಿತು. ‘ಏನೂ ಯೋಚನೆ ಮಾಡಬೇಡಾ ಮಗಳೇ.. ಹುಡುಗ ಸಂಭಾವಿತ.. ಎಲ್ಲವೂ ಒಳ್ಳೆಯದೇ ಆಗುತ್ತದೆ..’ ಎಂದು ರಂಗಪ್ಪಗೌಡರು ಮಗಳ ತಲೆ ನೇವರಿಸಿದರು. ಸುಮಿತ್ರಾ ಅಪ್ಪನ ಎದೆಗೊರಗಿದಳು. ಮಗಳೇನೋ ಒಪ್ಪಿದಳು.. ಹುಡುಗನ ಕಡೆಯ ಸಮಾಚಾರವೇನೋ ಎಂಬ ಆತಂಕ ರಂಗಪ್ಪಗೌಡ-ಮಹಾಲಕ್ಷ್ಮಮ್ಮನವರ ಮನದಲ್ಲಿ ಮೂಡದೇ ಇರಲಿಲ್ಲ.
   ಇದು ಸುಮಾರು ಹದಿನಾರು-ಹದಿನೇಳು ವರ್ಷಗಳ ಹಿಂದಿನ ಕತೆ. ಆಗೆಲ್ಲಾ ದೇಶದ ಆರ್ಥಿಕತೆ ಈಗಿನಷ್ಟು ಶೀಘ್ರವಾಗಿ ಬೆಳವಣಿಗೆಯಾಗದೆ ನಿಂತ ನೀರಿನಂತಾಗಿತ್ತು. ರಿಯಲ್ ಎಸ್ಟೇಟು ಉದ್ಯಮಗಳಿಗಾಗಲೀ, ಮೂಲ ಸೌಕರ್ಯ ಉದ್ಯಮಗಳಿಗಾಗಲೀ ಹೆಚ್ಚಿನ ಮಹತ್ವವಿರಲಿಲ್ಲ. ಸಿವಿಲ್ ಎಂಜನಿಯರಿಂಗ್ ಪದವೀಧರರಿಗೆ ಈಗಿನಷ್ಟು ಬೇಡಿಕೆ ಇರಲಿಲ್ಲ. ಅವರೆಲ್ಲಾ ಅಗೊಮ್ಮೆ ಈಗೊಮ್ಮೆ ಸೃಷ್ಟಿಯಾಗುತಿದ್ದ ಸರ್ಕಾರಿ ಇಲಾಖೆಗಳ ಹುದ್ದೆಗಳ ಮೇಲೆ ಅವಲಂಬಿತರಾಗಬೇಕಿತ್ತು. ಆ ಸರ್ಕಾರಿ ಹುದ್ದೆಗಳೂ ಬಹುಪಾಲು ಉತ್ತಮ ಅಂಕ ಗಳಿಸಿದ, ಹಣ, ವಶೀಲಿ, ಪ್ರಭಾವಿ ವ್ಯಕ್ತಿಗಳ ಪರಿಚಯವಿದ್ದ ಅಭ್ಯರ್ಥಿಗಳ ಪಾಲಾಗುತಿದ್ದವು. ಇತರರು ನಿರುದ್ಯೋಗಿಗಳಾಗಿಯೋ, ಯಾವುದೋ ವ್ಯಾಪಾರ ಅಥವಾ ಇನ್ನಿತರ ತಮ್ಮ ವಿದ್ಯಾರ್ಹತೆಗೆ ಸಂಬಂಧಿಸದ ಕೆಲಸಗಳನ್ನು ಮಾಡಬೇಕಾಗಿದ್ದಿತು. ಅಂತಹುದರಲ್ಲಿ ಹನುಮಂತಯ್ಯನೆಂಬ ಹಳ್ಳಿಯ ದಡ್ಡ ಹುಡುಗನೂ ಬೆಂಗಳೂರಿಗೆ ಬಂದು ಒಂದು ಸಣ್ಣ ರೂಮು ಮಾಡಿಕೊಂಡು ದಿನವೂ ಕೆಲಸಕ್ಕಾಗಿ ಅಲೆದು ಕೊನೆಗೆ ಒಂದು ಸಣ್ಣ ಕಟ್ಟಡ ನಿರ್ಮಾಣದ ಖಾಸಗಿ ಕಂಪೆನಿಯಲ್ಲಿ ಸೈಟ್ ಎಂಜಿನಿಯರಾಗಿ ಕೆಲಸಕ್ಕೆ ಸೇರಿಕೊಂಡು, ಸಿಕ್ಕಿರುವ ಕೆಲಸ ಎಲ್ಲಿ ಕೈ ತಪ್ಪಿ ಹೋಗುವುದೋ ಎಂಬ ಅಭದ್ರತೆಯಿಂದ ನಲುಗಿಕೊಂಡು ಹಗಲಿರಳು ತನಗೆ ಅನ್ನ ನೀಡುತಿದ್ದ ಕಂಪೆನಿಯ ಒಳಿತಿಗಾಗಿ ದುಡಿಯುತಿದ್ದ. ನಿಧಾನವಾಗಿ ತನ್ನ ವೃತ್ತಿಯ ಕೌಶಲ್ಯಗಳನ್ನು ಕರಗತ ಮಾಡಿಕೊಂಡ. ಅವನು ಕನಸಿನಲ್ಲಿಯೂ ಊಹಿಸದ ಸ್ಥಿತಿವಂತರ ಮನೆಯ ಹುಡುಗಿಯೊಂದಿಗೆ ಕಂಕಣಬಲವೂ ಕೂಡಿಬಂದಿತು.          (ಮುಂದುವರಿಯುವುದು...)