ವಿದಾಯ‌ (ನೀಳ್ಗತೆ) 2

ವಿದಾಯ‌ (ನೀಳ್ಗತೆ) 2

  ಕುಂದೂರಯ್ಯನವರು ಹುಡುಗ ಮತ್ತು ಅವನ ತಂದೆ-ತಾಯಿ ಸಂಬಂಧ ಬೆಳೆಸಲು ಒಪ್ಪಿದ್ದಾರೆ ಎಂದು ಪೋನು ಮೂಲಕ ತಿಳಿಸಿದ ಶುಭ ಸಮಾಚಾರದಿಂದ ರಂಗಪ್ಪಗೌಡರು ಮತ್ತು ಮಹಾಲಕ್ಷ್ಮಮ್ಮನವರಿಗೆ ಹಾಲು ಕುಡಿದಷ್ಟು ಸಂತೋಷವಾಯಿತು. ತಕ್ಷಣವೇ ನನ್ನ ಮಗಳೂ ಒಪ್ಪಿದ್ದಾಳೆ ಮತ್ತು ನಾವೂ ಕೂಡ ಈ ಸಂಬಂಧ ಬೆಳೆಸಲು ಮನಸ್ಪೂರ್ವಕವಾಗಿ ಒಪ್ಪಿದ್ದೇವೆ ಎಂದು ಪ್ರತಿಕ್ರಿಯಿಸಿ ಕಂದೂರಯ್ಯನವರ ಸಹಾಯಕ್ಕಾಗಿ ಅವರಿಗೆ ತುಂಬುಹೃದಯದ ಕೃತಜÐತೆ ತಿಳಿಸಿದರು. ರಂಗಪ್ಪಗೌಡರು ತಡಮಾಡದೇ ತಮ್ಮ ಹೆಣ್ಣಮಕ್ಕಳು ಮತ್ತು ಅಳಿಯಂದಿರಿಗೆಲ್ಲಾ ವಿಷಯ ತಿಳಿಸಿ ತಮ್ಮ ಸಂತೋಷವನ್ನು ಹಂಚಿಕೊಂಡರು. ತಮ್ಮ ಪರಿಚಯದ ಪುರೋಹಿತರೊಬ್ಬರನ್ನು ಭೇಟಿ ಮಾಡಿ ಹುಡುಗ ಮತ್ತು ಹುಡುಗಿಯ ಹುಟ್ಟಿದ ದಿನಾಂಕವನ್ನು ತಿಳಿಸಿ ಸಲಹೆ ಪಡೆದರು. ಪುರೋಹಿತರು ಹುಡುಗ ಮತ್ತು ಹುಡುಗಿಯರಿಗೆ ವೈವಾಹಿಕ ಬಂಧ ಉತ್ತಮವಾಗಿ ಕೂಡಿ ಬರುತ್ತದೆಂದು ತಿಳಿಸಿದ ಮೇಲೆ ಒಂದು ಒಳ್ಳೆಯ ದಿನ ನೋಡಿ ತಮ್ಮ ಹೆಣ್ಣುಮಕ್ಕಳು ಮತ್ತು ಅಳಿಯಂದಿರೊಂದಿಗೆ ಹುಡುಗನ ಗ್ರಾಮಕ್ಕೆ ತೆರಳಿದರು. ಹಳ್ಳಿಗಳಿದ್ದ ಎಲ್ಲಾ ಬಡಕುಟುಂಬದ ಮನೆಗಳಂತೆ ಅವರದೂ ಒಂದು ಸಣ್ಣ ಹಂಚಿನ ಮನೆಯಾಗಿತ್ತು. ಹುಡುಗನ ಮನೆಗೆ ಭೇಟಿ ನೀಡುವ ಶಾಸ್ತ್ರ ಮುಗಿಸಿ  ಅವರ ಮನೆತನದ ಬಗ್ಗೆ ವಿಚಾರಿಸಿಕೊಂಡು ಅವರೊಂದಿಗೆ ಒಂದಷ್ಟು ಒಳ್ಳೆಯ ಮಾತುಗಳಾಡಿ ವಾಪಾಸಾದರು.
   ಮತ್ತೆ ಒಂದು ವಾರದ ಬಳಿಕ ಕುಂದೂರಯ್ಯನವರು ಹುಡುಗನ ತಂದೆ-ತಾಯಿಯರೊಂದಿಗೆ ರಂಗಪ್ಪಗೌಡರ ಮನೆಗೆ ವಿವಾಹ ನಿಶ್ಚಯದ ಮಾತುಕತೆಗೆ ಆಗಮಿಸಿದರು. ತಮ್ಮ ಶಿಷ್ಯನಿಗೆ ವರದಕ್ಷಿಣೆ, ವರೋಪಚಾರ, ದುಂದುವೆಚ್ಚದ ಮದುವೆಯ ಬಗ್ಗೆ ಆಸಕ್ತಿಯಿಲ್ಲ ಎಂಬುದನ್ನು ಅವರು ನೇರವಾಗಿಯೇ ತಿಳಿಸಿದರು. ಆದರೂ ರಂಗಪ್ಪಗೌಡರು ತಮ್ಮ ಎಲ್ಲಾ ಹೆಣ್ನುಮಕ್ಕಳಂತೆ ಕೊನೆಯ ಮಗಳ ಮದುವೆಯನ್ನು ವಿಜೃಂಬಣೆಯಿಂದಲೇ ಮಾಡಿಕೊಡುತ್ತೇನೆ..ಇದು ನಮ್ಮ ಮನೆಯ ಕೊನೆಯ ಮದುವೆ.. ದಯವಿಟ್ಟು ಸಹಕರಿಸಿ ಎಂದು ವಿನಂತಿಸಿಕೊಂಡರು. ಎಲ್ಲಾ ಮಾತುಕತೆಗಳು ಸುಸೂತ್ರವಾಗಿ ಮುಗಿದವು. ಮದುವೆಯ ದಿನಾಮಕವೂ ನಿಗದಿಯಾಗಿ ಆನಂತರ ಬೆಂಗಳೂರಿನ ದೊಡ್ಡ ಕಲ್ಯಾಣಮಂಟಪವೊಂದರಲ್ಲಿ ಸುಮಿತ್ರಾ-ಹನುಮಂತಯ್ಯನ ಮದುವೆ ವಿಜೃಂಭಣೆಯಿಂದಲೇ ಸಾಂಗವಾಗಿ ನೇರವೇರಿತು.
   ಮದುವೆಯಾದ ಮೇಲೆ ‘ನೀವು ಸ್ವಲ್ಪ ದಿನ ನಮ್ಮ ಮನೆಯಲ್ಲಿಯೇ ನಮ್ಮ ಜೊತೆ ಇರಿ.. ಮನೆ ವಿಶಾಲವಾಗಿದೆ. ನಾವಿಬ್ಬರೇ ಇರುವುದು.. ದಿಢೀರೆಂದು ಮನೆ ಖಾಲಿ ಖಾಲಿಯೆನಿಸಿದರೆ ನಮಗೂ ಬೇಸರವಾಗುತ್ತದೆ..’ ಎಂಬ ಮಾವ ಮತ್ತು ಅತ್ತೆಯ ಒತ್ತಾಯದೊಂದಿಗೆ ಹನುಮಂತಯ್ಯನ ವಾಸ್ತವ್ಯ ತನ್ನ ಮಾವನ ವಿಶಾಲ ಬಂಗಲೆಯಲ್ಲಿದ್ದ ತನ್ನ ಹೆಂಡತಿಯ ಕೊಠಡಿಗೆ ಬದಲಾಯಿತು. ಸುಮಿತ್ರಾಳಿಗೂ ತನ್ನ ತಂದೆಯ ಮನೆಯಲ್ಲಿರುವದೇ ಇಷ್ಟವಾಗಿತ್ತು. ತನ್ನ ಗಂಡನಿಗೆ ಬರುವ ಸಂಬಳ ಕಡಿಮೆ.. ಬೇರೆ ಮನೆ ಮಾಡಿ ಬಾಡಿಗೆ ತೆತ್ತು ಬದುಕಬಹುದಾದ ಅನಿವಾರ್ಯತೆಯೇನೂ ಇಲ್ಲ.. ಅದೂ ಅಲ್ಲದೆ ಅಕ್ಕಂದಿರಿಗೆಲ್ಲಾ ಏನೂ ಕಡಿಮೆಯಿಲ್ಲಾ.. ಬಾವಂದಿರೆಲ್ಲರೂ ಒಳ್ಳೆಯ ಕೆಲಸದಲ್ಲಿದ್ದಾರೆ.. ಅಪ್ಪ-ಅಮ್ಮನ ಬಳಿಕ ಈ ಮನೆ ನಮ್ಮದೇ ಆಗುತ್ತದೆ ಎಂಬ ದೂರದೃಷ್ಟಿಯೂ ಅವಳದಾಗಿತ್ತು. ರಂಗಪ್ಪಗೌಡರು. ಮತ್ತು ಮಹಾಲಕ್ಷ್ಮಮ್ಮನವರ ಮನಸ್ಸಿನಲ್ಲಿಯೂ ಅದೇ ನಿರ್ಧಾರವಿದ್ದರೂ ಎಂದೂ ಅವರು ಯಾರ ಮುಂದೆಯೂ ಅದನ್ನು ವ್ಯಕ್ತಪಡಿಸಿರಲಿಲ್ಲ. ಅವರು ಹೀಗಾಗಲೇ ತಮ್ಮ ಎಲ್ಲಾ ಹೆಣ್ಣುಮಕ್ಕಳಿಗೆ ಕೊಟ್ಟಂತೆ ಒಂದು ನಿವೇಶನವನ್ನು ಸುಮಿತ್ರಾಳ ಹೆಸರಿಗೆ ಮದುವೆಗಿಂತ ಮುಂಚೆಯೇ ನೋಂದಣಿ ಮಾಡಿಸಿದ್ದರು.
   ಮದುವೆಯಾದ ಹೊಸತರಲ್ಲಿ ಯಥೇಚ್ಛವಾಗಿ ದೈಹಿಕ ಸುಖವನ್ನು ಅನುಭವಿಸಿದ ಸುಮಿತ್ರಾಳಿಗೆ ಮದುವೆಯೆಂದರೆ ಸುಖದ ಕಡಲು ಎಂದು ರೋಮಾಂಚನವಾಗುತಿತ್ತು. ಹನುಮಂತಯ್ಯ ಬೆಳಿಗ್ಗೆಯೇ ಎದ್ದು ತಿಂಡಿ ತಿಂದು ಸಿಟಿ ಬಸ್ಸು ಹಿಡಿದು ಕೆಲಸಕ್ಕೆ ಹೊರಟರೆ ಮನೆಗೆ ಬರುತಿದ್ದುದು ರಾತ್ರಿಯಾದ ನಂತರವೇ. ಅಲ್ಲಿಯವರೆಗೂ ಜಾತಕಪಕ್ಷಿಯಂತೆ ಅವನ ದಾರಿಯನ್ನೇ ಕಾಯುತಿದ್ದ ಸುಮಿತ್ರಾ ಅವನು ಬಂದ ಒಡನೆಯೇ ರೂಮಿನ ಬಾಗಿಲು ಮುಚ್ಚಿ ಅವನನ್ನು ಎದೆಗಾನಿಸಿಕೊಳ್ಳುತಿದ್ದಳು. ಹಳ್ಳಿಯ ಕಟ್ಟುಮಸ್ತಾದ ಯುವಕ ಹನುಮಂತಯ್ಯ ಅವಳ ಕಾಮನೆಯನ್ನು ಇನ್ನಿಲ್ಲದಂತೆ ಪೂರೈಸಿ ಅವಳ ದೇಹವನ್ನು ಬಿಡಿಸಲಾಗದಂತೆ ಅಪ್ಪಿ ಆಕ್ರಮಿಸಿಕೊಳ್ಳುತಿದ್ದ. ಸುಮಿತ್ರಾ ಆ ಬಿಗಿಯಾದ ಅಪ್ಪುಗೆಯಲ್ಲಿ ತಾನೂ ಭಾಗಿಯಾಗಿ ಸ್ವರ್ಗಸುಖವನ್ನು ಅನುಭವಿಸುತಿದ್ದಳು. ಈ ಪ್ರಕ್ರಿಯೆ ಅವರಿಬ್ಬರ ನಡುವೆ ಮತ್ತೆ ಮತ್ತೆ ಘಟಿಸಿ ನೀರವ ರಾತ್ರಿಗಳಲ್ಲಿ ಆಗಾಗ್ಗೆ ನಿದ್ರಾಭಂಗವಾಗಿ ಬೆಳಕಾದುದು ಅವರ ಅರಿವಿಗೆ ಬರುತ್ತಿರಲಿಲ್ಲ. ಆದರೆ ಹನುಮಂತಯ್ಯನ ಸುಪ್ತ ಮನಸ್ಸಿನಲ್ಲಿ ಕೆಲಸಕ್ಕೆ ತಡವಾದರೆ ಮುಂದೇನೋ ಎಂಬ ಭೀತಿ ಹರಡಿ ಮಲಗಿದ ಕೋಣೆಯ ಕಿಟಕಿಯ ಪರದೆಯ ಮೇಲೆ ಸೂರ್ಯನ ಬೆಳಕು ಬಿದ್ದ ಒಡನೆಯೇ ಎದ್ದು ಅವಸರವಸರವಾಗಿ ಸಿದ್ಧನಾಗಿ ಕೆಲಸಕ್ಕೆ ಹೊರಡುತಿದ್ದ.
   ಸುಮಿತ್ರಾಳಿಗೆ ತಾನು ಬೆಳೆದ ಮನೆಯ ನಾಲ್ಕು ಗೋಡೆಗಳ ಮಧ್ಯೆ ತನ್ನ ಗಂಡನೊಡನೆ ಅನುಭವಿಸುತಿದ್ದ ಸುಖವನ್ನು ಅವನೊಂದಿಗೆ ಹೊರಗೆಲ್ಲಿಯಾದರೂ ಹೋಗಿ ಅನುಭವಿಸಬೇಕು ಎಂಬ ತುಡಿತ ಪ್ರಾರಂಭವಾಯಿತು. ತನ್ನ ಅಕ್ಕಂದಿರೆಲ್ಲಾ ಮದುವೆಯಾದ ಹೊಸತರಲ್ಲಿ ಹನಿಮೂನಿಗೆಂದು ಎಲ್ಲೆಲ್ಲಿಯೋ ಹೋಗಿ ತಿಂಗಳುಗಟ್ಟಲೆ ತಿರುಗಾಡಿ ಬಂದಿದ್ದು ನೆನಪಾಯಿತು. ಹನುಮಂತಯ್ಯನೊಂದಿಗೆ ಏಕಾಂತದಲ್ಲಿದ್ದಾಗ ಈ ವಿಷಯವನ್ನು ಅರುಹಿಕೊಂಡಳು. ಅವನಿಗೆ ರಜೆ ಸಿಕ್ಕುತ್ತಿರಲಿಲ್ಲ. ಅವನ ಕಂಪೆನಿಯಲ್ಲಿ ಮದುವೆಗೆಂದು ಆಗಲೇ ಒಂದು ವಾರ ವೇತನಸಹಿತರಜೆ ಪಡೆದಿದ್ದುದೇ ಒಂದು ಪವಾಡವಾಗಿತ್ತು. ಪೂರ್ವಾನುಮತಿಯಿಲ್ಲದೆ ರಜೆ ಹಾಕಿದ ನೌಕರರ ಸಂಬಳ ಕಡಿತವಾಗುವುದಲ್ಲದೆ ಎಚ್ಚರಿಕೆಯ ಪತ್ರವೂ ಅವರ ಕೈಸೇರುತಿತ್ತು.  ಅವನ ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿರಲಿಲ್ಲ. ಅವನು ಇದುವರೆಗೆ ಸಂಬಳದಲ್ಲಿ ಕಷ್ಟಪಟ್ಟು ಉಳಿಸಿದ ಹಣವೆಲ್ಲವೂ ಮದುವೆಯ ಖರ್ಚಿಗಾಗಿ ವಿನಿಯೋಗವಾಗಿತ್ತು. ತಿಂಗಳು ಕೊನೆಯಾಗುವುದನ್ನೇ ಅವನು ಕಾಯುತಿದ್ದ. ಇದೆಲ್ಲವನ್ನೂ ತನ್ನ ಪತ್ನಿಯ ಬಳಿ ಇಷ್ಟು ಬೇಗ ಹೇಳಿಕೊಳ್ಳಲು ಅವನಿಗೆ ಸಂಕೋಚವಾಯಿತು. ಕಂಪೆನಿಯಲ್ಲಿ ರಜೆ ಕೇಳಿ ಪಡೆಯುತ್ತೇನೆ ಆನಂತರ ಒಂದೆರಡು ದಿನ ಎಲ್ಲಿಗಾದರೂ ಹೋಗೋಣ ಎಂದು ಸುಮಿತ್ರಾಳನ್ನು ಸಮಾಧಾನಪಡಿಸಿದ.
   ಅಂತೂ ತಿಂಗಳು ಕಳೆದ ಮೊದಲ ವಾರದಲ್ಲಿ ಸಂಬಳ ಬಂದ ಮೇಲೆ ಶನಿವಾರ ಅವನು ಒಂದು ದಿನ ರಜೆ ಪಡೆದುಕೊಂಡ. ಭಾನುವಾರವೂ ಸೇರಿದಂತೆ ಎರಡು ದಿನಗಳು ಅವರು ಹತ್ತಿರವಿದ್ದ ಮೈಸೂರಿಗೆ ಹನಿಮೂನಿಗೆಂದು ಹೊರಟರು. ಮಹಾಲಕ್ಷಮ್ಮನವರು ಅಳಿಯನ ಬಳಿಯಲ್ಲಿ ಸಾಕಷ್ಟು ಹಣವಿದೆಯೋ ಇಲ್ಲವೋ ಎಂಬ ಮುಂದಾಲೋಚನೆಯಿಂದ ಸುಮಿತ್ರಾಳ ಕೈಯ್ಯಲ್ಲಿ ಐದು ಸಾವಿರ  ರೂಪಾಯಿ ಹಣವನ್ನು ಖರ್ಚಿಗಾಗಿ ನೀಡಿದರು. ಅಲ್ಲಿಯವರೆಗೂ ಯೌವ್ವನದಿಂದ ಕಾಯ್ದಿದ್ದ ದೇಹವನ್ನು ತಣಿಸಿಕೊಳ್ಳುವುದರಲ್ಲಿ ನಿರತಳಾಗಿದ್ದ ಸುಮಿತ್ರಾಳಿಗೆ ತನ್ನ ಮತ್ತು ತನ್ನ ಗಂಡನ ನಡುವೆ ಇರಬಹುದಾದ ಮನೋಭಾವಗಳ ವ್ಯತ್ಯಾಸ ಅರಿವಾಗಿರಲಿಲ್ಲ. ಆ ಒಂದು ಹನಿಮೂನಿನ ಎರಡು ದಿನಗಳಲ್ಲಿ ವಿರುದ್ಧ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ, ವಿಭಿನ್ನ ಪರಿಸರಗಳಲ್ಲಿ ಬೆಳೆದು ಮದುವೆಯೆಂಬ ಸಾಮಾಜಿಕ ಚೌಕಟ್ಟಿನಲ್ಲಿ ಒಂದುಗೂಡಿದ ಒಂದು ಗಂಡು-ಹೆಣ್ಣಿನ ನಡುವೆ ಇರಬಹುದಾದ ಜೀವನದೃಷ್ಟಿಯ ವ್ಯತ್ಯಾಸಗಳು ಅನಾವರಣಗೊಂಡವು.
   ಮೈಸೂರಿಗೆ ಸಂತೋಷದಿಂದಲೇ ತೆರಳಿದ ಅವರಿಬ್ಬರೂ ಕೈಕೈ ಹಿಡಿದುಕೊಂಡು ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಆನಂದದಿಂದಲೇ ಸಂಜೆಯವರೆಗೂ ಸಮಯ ಕಳೆದರು. ತುಸುದೂರಕ್ಕೂ ಆಟೋದಲ್ಲಿಯೇ ಹೋಗಬೇಕೆನ್ನುತಿದ್ದ ಸುಮಿತ್ರಾಳ ಮನಸ್ಥಿತಿಗೆ ವಿರುದ್ಧವಾಗಿ ಹನುಮಂತಯ್ಯ ‘ನಡೆದೇ ಹೋಗೋಣ.. ಇನ್ನೆಷ್ಟು ದೂರವಿದೆ.. ಇರುವುದು ಒಂದೇ ಒಂದು ಬ್ಯಾಗು.. ನಾನೇ ಹಿಡಿದುಕೊಂಡಿದ್ದೇನಲ್ಲಾ....’ ಎಂದು ಮುಗುಳ್ನಗುತ್ತಾ ಪುಸುಲಾಯಿಸುತಿದ್ದ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಸುಮಿತ್ರಾ ತನ್ನ ಗಂಡ ಜಿಪುಣಾಗ್ರೇಸರ ಎಂಬ ನಿರ್ಧಾರಕ್ಕೆ ಬಂದುಬಿಟ್ಟಿದ್ದಳು. ಆದರೆ ಹನುಮಂತಯ್ಯನಿಗೆ ನಡೆದೇ ಹೋಗಬಹುದಾದ ಸ್ವಲ್ಪ ದೂರಕ್ಕೂ ಆಟೋ ಹತ್ತಿ ಅನಾವಶ್ಯಕವಾಗಿ ಹಣ ಪೋಲು ಮಾಡಲು ಮನಸ್ಸು ಬರುತ್ತಿರಲಿಲ್ಲ. ತಾವು ಖರ್ಚು ಮಾಡುವ ಪ್ರತಿಯೊಂದು ರೂಪಾಯಿಗೂ ಬೆಲೆ ಇರುತ್ತದೆ ಎಂಬುದು ಅವನ ಮನೋಭಾವವಾಗಿತ್ತು. ಅಂದಿನ ರಾತ್ರಿಯನ್ನು ತಂಗಲು ಅವನು ಮಧ್ಯಮ ದರ್ಜೆಯ ವಸತಿಗೃಹಗಳನ್ನು ಹುಡುಕುತಿದ್ದುದು ಸುಮಿತ್ರಾಳನ್ನು ಕೆರಳಿಸಿಬಿಟ್ಟಿತು. ‘ಅಮ್ಮ ದುಡ್ಡು ಕೊಟ್ಟಿದಾರೆ.. ಲಕ್ಷುರಿ ಹೋಟೇಲಿನಲ್ಲಿಯೇ ಉಳಿದುಕೊಳ್ಳೋಣ..’ ಎಂಬ ಅವಳ ಮಾತಿಗೆ ‘ನಿಮ್ಮ ತಂದೆ-ತಾಯಿಯವರ ಹಣ ಎಂದೂ ನಮ್ಮದಾಗಲಾರದು. ಅಂತಹ ಹಣವನ್ನು ಬಳಸಿಕೊಳ್ಳಲು ಬಲವಾದ ಕಾರಣವಿರಬೇಕು.. ಇಂತಹ ಸಣ್ಣ ವಿಷಯಗಳಿಗೆ ಅದರ ಬಳಕೆಯಾಗಬಾರದು..’ ಎಂದು ಹನುಮಂತಯ್ಯ ತನ್ನ ಸ್ವಾಭಾವಿಕ ಮೆಲುದನಿಯಲ್ಲಿಯೇ ನುಡಿದು ಒಂದು ಮಧ್ಯಮ ದರ್ಜೆಯ ಹೋಟೇಲಿನಲ್ಲಿ ರೂಮು ಮಾಡಿದ. ಅವರಿಬ್ಬರೂ ಅಲ್ಲಿಯೇ ರಾತ್ರಿಯ ಊಟವನ್ನು ಮುಗಿಸಿದರು. ಸುಮಿತ್ರಾ ತುಸು ಅಸಹನೆಗೊಂಡರೂ ಆ ರಾತ್ರಿ ಅವನೊಂದಿಗೆ ಅನುಭವಿಸಿದ ವಿಭಿನ್ನವಾದ ದೈಹಿಕ ಸುಖದಿಂದಾಗಿ ಅದನ್ನೆಲ್ಲಾ ಮರೆತುಹೋದಳು. ಮರುದಿನ ಭಾನುವಾರ ಸಂಜೆಯವರೆಗೂ ಅವರಿಬ್ಬರೂ ಹೋಟೇಲಿನ ರೂಮು ಬಿಟ್ಟು ಕದಲಿಲ್ಲ. ಸಂಜೆಯ ನಂತರ ರೂಮು ಖಾಲಿ ಮಾಡಿ ಬೆಂಗಳೂರಿನ ಬಸ್ಸು ಹತ್ತಿದರು.
   ಮುಂದಿನ ದಿನಗಳಲ್ಲಿ ಸುಮಿತ್ರಾಳಿಗೆ ಹನುಮಂತಯ್ಯನ ವಿಚಿತ್ರ ಸ್ವಭಾವಗಳು ಒಂದೊಂದೇ ಗಮನಕ್ಕೆ ಬರತೊಡಗಿದವು. ಅವನ ಬಟ್ಟೆಗಳನ್ನು ಇಸ್ತ್ರಿ ಮಾಡಲು ಕೊಡುವುದು ಬೇಡವೆಂದು ಖಡಾಖಂಡಿತವಾಗಿ ತಿಳಿಸಿ ಭಾನುವಾರಗಳಂದು ಅವನು ಮನೆಯಲ್ಲಿದ್ದ ದಿನ ಒಗೆದಿರಿಸಿದ ಅವನ ಬಟ್ಟೆಗಳನ್ನು ಅವನೇ ಇಸ್ತ್ರಿ ಮಾಡಿ ಇಟ್ಟುಕೊಳ್ಳುವುದು, ತಿಂಡಿ ತಿನ್ನುವ ತಟ್ಟೆಯಲ್ಲಿ ಚಮಚವನ್ನು ಇಟ್ಟರೆ ಅದನ್ನು ಪಕ್ಕಕ್ಕೆ ಎತ್ತಿಟ್ಟು ಕೈಯ್ಯಲ್ಲಿಯೇ ತಿಂಡಿ ತಿನ್ನವುದು.. ಕೇಳಿದರೆ ಕೈಗಳು ಶುದ್ಧವಾಗಿದ್ದರೆ ಚಮಚದಲ್ಲಿ ತಿನ್ನುವ ಅವಶ್ಯಕತೆ ಬಾರದು ಎಂದು ಮುಗುಳ್ನಗುತ್ತಾ ಉತ್ತರಿಸುವುದು.. ತಾನು ಕಾಫಿ ಕುಡಿದ ಲೋಟ, ತಿಂಡಿ ತಿಂದ, ಊಟ ಮಾಡಿದ ತಟ್ಟೆಗಳನ್ನು ಎತ್ತಿಕೊಂಡು ಹೋಗಿ ಅಡುಗೆ ಮನೆಯ ಸಿಂಕಿನಲ್ಲಿಡುವುದು.. ಕೆಲಸದ ಮುನಿಯಮ್ಮನನ್ನು ತಿಂಡಿ ತಿಂದಿರಾ ಅಕ್ಕಾ.. ಊಟ ಮಾಡಿದಿರಾ ಅಕ್ಕಾ ಎಂದು ವಿಚಾರಿಸಿಕೊಳ್ಳುವುದು.. ಅಪ್ಪನ ಸ್ನೇಹಿತರೋ, ತಮ್ಮ ನೆಂಟರೋ, ಬಾವಂದಿರೋ, ಅಕ್ಕಂದಿರೋ, ಇನ್ನಾರಾದರೂ ದೊಡ್ಡವರು ಮನೆಗೆ ಬಂದರೆ ತಕ್ಷಣವೇ ಕುಳಿತಲ್ಲಿಂದ ಎದ್ದು ನಿಂತುಕೊಳ್ಳುವುದು.. ಮದುವೆಯಲ್ಲಿ ಹೊಲಿಸಿಕೊಂಡಿದ್ದ ಹೊಸ ಬಟ್ಟೆಗಳಿದ್ದರೂ ಅವುಗಳನ್ನು ಜೊಪಾನವಾಗಿ ಮಡಿಚಿಟ್ಟುಕೊಂಡು ಇನ್ನೂ ಹರಿದುಹೋಗದ ತನ್ನ ಹಳೆಯ ಪ್ಯಾಂಟು ಶರಟುಗಳನ್ನೇ ಇಸ್ತ್ರಿ ಮಾಡಿಕೊಂಡು ತೊಟ್ಟು ಕೆಲಸಕ್ಕೆ ಹೋಗುವುದು.. ರಸ್ತೆಯಲ್ಲಿ ಯಾರಾದರೂ ಕುತ್ತಿಗೆಗೆಗೆ ಬೆಲ್ಟು ಹಾಕಿ ಚೈನಿನಿಂದ ಬಂಧಿಸಿದ ತಮ್ಮ ಸಾಕುನಾಯಿಯನ್ನು ಹಿಡಿದುಕೊಂಡುಹೋಗುತಿದ್ದರೆ ಪಾಪ! ನೋಡು.. ಆ ನಾಯಿ ಅವರ ಮನೆ ಅನ್ನ ತಿಂದಿದ್ದಕ್ಕೆ ಹೇಗೆ ಬಂಧಿಯಾಗಿದೆ.. ಎಂದು ಹಲುಬುವುದು.. ಹೀಗೆ ಅವನ ನಡುವಳಿಕೆಗಳಿಂದ ಸುಮಿತ್ರಾಳಿಗೆ ಇವನೊಬ್ಬ ನಾಗರೀಕ ಸಮಾಜದ ಶಿಷ್ಟಾಚಾರಗಳನ್ನು ಅರಿಯದ ಹಳ್ಳಿಯ ಗಮಾರ ಎಂದೆನಿಸುತಿತ್ತು.
   ಮಹಾಲಕ್ಷ್ಮಮ್ಮನವರು ತಮ್ಮ ಅಳಿಯ ಮದುವೆಯ ಸಮಯದಲ್ಲೂ ಏನನ್ನೂ ಕೇಳಲಿಲ್ಲ.. ಈಗ ಬೆಳಗ್ಗೆ ಕೆಲಸಕ್ಕೆ ಹೋದರೆ ಅವನು ರಾತ್ರಿಯೇ ಮನೆಗೆ ಬರುವುದು, ಸಿಟಿಬಸ್ಸಿನಲ್ಲಿ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ, ಒಂದು ಮೋಟಾರುಬೈಕ್ ತೆಗೆದುಕೊಡೋಣ ಎಂದು ತಮ್ಮ ಪತಿಯ ಬಳಿ ಕೇಳಿಕೊಂಡರು. ರಂಗಪ್ಪಗೌಡರಿಗೂ ಅದು ಸಮಂಜಸವಾದ ಸಲಹೆ ಎನಿಸಿತು. ಮೊದಲ ದೀಪಾವಳಿ ಹಬ್ಬಕ್ಕೆ ಒಂದು ಹೊಸ ಮೋಟಾರುಬೈಕು ಹನುಮಂತಯ್ಯನಿಗೆ ಕೊಡುಗೆಯಾಗಿ ಸಿಕ್ಕಿತು.  ಆದರೆ ಅವನು ಅದನ್ನು ತನ್ನ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ಬರಲು ಉಪಯೋಗಿಸಲೇ ಇಲ್ಲ. ಭಾನುವಾರದಂದು ಸುಮಿತ್ರಾಳೊಂದಿಗೆ ಎಲ್ಲಿಯಾದರೂ ಹೊರಗೆ ಹೋದಾಗ ಮಾತ್ರ ಬೈಕಿನಲ್ಲಿ ಹೋಗತೊಡಗಿದ. ಉಳಿದಂತೆ ಅದು ಮನೆಯಲ್ಲಿಯೇ ನಿಲ್ಲತೊಡಗಿತು. ಸುಮಿತ್ರಾ ‘ರೀ ನೀವು ದಿನಾ ಹೊಸ ಬೈಕಿನಲ್ಲಿಯೇ ಕೆಲಸಕ್ಕೆ ಹೋಗಬೇಕು.. ಎಂತೆಂತವರೋ  ಬೈಕಿನಲ್ಲಿ ಕೆಲಸಕ್ಕೆ ಹೋಗುತ್ತಾರೆ..’ ಎಂದು ಸಿಡಿಮಿಡಿಗೊಂಡಳು. ‘ಇಲ್ನೋಡು ಸುಮೀ.. ಹೋಗ್ತಾ ಐದು ರೂಪಾಯಿ ಬರ್ತಾ ಐದು ರೂಪಾಯಿ ಖರ್ಚು ಮಾಡಿದ್ರೆ ಆರಾಮವಾಗಿ ಸಿಟಿಬಸ್ಸಿನಲ್ಲಿ ನಮ್ಮ ಪ್ರಾಜೆಕ್ಟ್ ಹತ್ತಿರ ಹೋಗಿಬರಬಹುದು.. ಬೈಕಿನಲ್ಲಿ ಹೋಗೋದರಿಂದ ಸ್ವಲ್ಪ ಟೈಮು ಉಳಿತಾಯ ಆಗಬಹುದು ಅಷ್ಟೇ.. ಅದರಿಂದ ಬೇರೆ ಏನೂ ಪ್ರಯೋಜನ ಇಲ್ಲ.. ಇನ್ನೂ ಹೆಚ್ಚಿನ ಹಣ ವೆಚ್ಚವಾಗುತ್ತದೆ’ ಎಂದು ಹನುಮಂತಯ್ಯ ಅವಳಿಗೆ ತಿಳಿಹೇಳಿದ. ಅವಳು ಹೆಚ್ಚೇನೂ ಒತ್ತಾಯ ಮಾಡದೆ ಸುಮ್ಮನಾದಳು. ರಂಗಪ್ಪಗೌಡರು ಮತ್ತು ಮಹಾಲಕ್ಷ್ಮಮ್ಮನವರಿಗೆ ತಮ್ಮ ಅಳಿಯ ಸ್ವಾಭಿಮಾನಿ.. ದುಂದುವೆಚ್ಚದವನಲ್ಲ.. ಹಣದ ಬೆಲೆ ತಿಳಿದಿದೆ.. ಎಂದು ಹನುಮಂತಯ್ಯನ ಬಗ್ಗೆ ಅಭಿಮಾನ ಮೂಡಿತು. ಆದರೆ ಸುಮಿತ್ರಾಳಿಗೆ ಮಾತ್ರ ಪೆಟ್ರೋಲಿಗೆ ಹೆಚ್ಚು ಹಣ ಖರ್ಚು ಮಾಡಬೇಕು ಎಂದು ಬೈಕು ತೆಗೆದುಕೊಂಡು ಹೋಗುವುದಿಲ್ಲ.. ಇದು ಇವನ ಜಿಪುಣತನದ ಇನ್ನೊಂದು ಉದಾಹರಣೆ ಎನಿಸಿತು.
   ಹೀಗೊಂದು ದಿನ ರಾತ್ರಿ ಹನುಮಂತಯ್ಯ ರೂಮಿನಲ್ಲಿ ಕುಳಿತು ತನ್ನ ಸೂಟುಕೇಸು ತೆಗೆದು ತನ್ನ ಅಂಕಪಟ್ಟಿಗಳು, ಪದವಿ ಪ್ರಮಾಣಪತ್ರ ಎಲ್ಲವನ್ನೂ ಹರಡಿಕೊಂಡು ಕುಳಿತು ಏನನ್ನೋ ಹುಡುಕುತಿದ್ದ. ಸುಮಿತ್ರಾ ‘ಏನ್ರೀ ಹುಡುಕ್ತಾ ಇದೀರಾ..’ ಎಂದು ಕೇಳಿ ಅವನ ಪಕ್ಕದಲ್ಲಿ ಬಂದು ಕುಳಿತುಕೊಂಡಳು. ‘ಏನೂ ಇಲ್ಲ.. ಇಲ್ಲಿ ನಮ್ಮ ಅಪ್ಪ-ಅಮ್ಮನ ಪೋಟೋ ಇಟ್ಕೊಂಡಿದ್ದೆ.. ಕಾಣಿಸ್ತಾ ಇಲ್ಲಾ.. ಎಲ್ಲಿ ಬಿಟ್ಟೆನೋ ಜ್ಞಾಪಕಕ್ಕೆ ಬರ್ತಾ ಇಲ್ಲ..’ ಎಂದು ಹೇಳಿ ಮತ್ತೆ ಹುಡುಕುವುದರಲ್ಲಿ ತಲ್ಲೀನನಾದ. ಸುಮಿತ್ರಾ ಸುಮ್ಮನೆ ಅವನ ಅಂಕಪಟ್ಟಿಗಳತ್ತ ಕಣ್ಣುಹಾಯಿಸಿದಳು. ಎಷ್ಟೊಂದು ಅಂಕಪಟ್ಟಿಗಳು..! ಎಂಜನಿಯರಿಂಗ್ ಪದವಿಯಲ್ಲಿ ಎಂಟು ಸೆಮಿಸ್ಟರಿಗೆ ಎಂಟು ಅಂಕಪಟ್ಟಿಗಳಿರಬೇಕಿತ್ತು.. ಹನ್ನೆರಡು ಹದಿಮೂರು ಅಂಕಪಟ್ಟಿಗಳು..! ‘ಏನ್ರೀ ನಿಮ್ಮ ಎಂಜನಿಯರಿಂಗ್ ಡಿಗ್ರೀದು ಇಷ್ಟೊಂದು ಮಾಕ್ರ್ಸ ಕಾರ್ಡು..’ ವಿಸ್ಮಿತಳಾಗಿ ಪ್ರಶ್ನಿಸಿದಳು. ‘ನಾನೇನು ಸಕತ್ ಬುದ್ಧಿವಂತ ಅಂತ ಅನ್ಕಂಡಿದೀಯಾ.. ನಾನು ತುಂಬಾ ದಡ್ಡ.. ಎಸ್ಸೆಲ್ಸಿ, ಪಿಯೂಸಿ ಕಷ್ಟಪಟ್ಟು ಓದಿ ಪಾಸು ಮಾಡ್ಕಂಡೆ.. ನಮ್ಮ ಕಾಲದಲ್ಲಿ ಸಿವಿಲ್ ಎಂಜನಿಯರಿಂಗಿಗೆ ಹೆಚ್ಚು ಜನ ಸೇರ್ತಾ ಇರಲಿಲ್ಲ.. ಅದರಿಂದಾನೆ ನನಗೂ ತುಮಕೂರಲ್ಲಿ ಒಂದು ಸೀಟು ಸಿಕ್ತು.. ಆಮೇಲೆ ಎಂಜನಿಯರಿಂಗ್ ಓದೋವಾಗ ಏನು ಮಾಡಿದ್ರೂ ಕೆಲವು ಸಬ್ಜೆಕ್ಟು ಅರ್ಥಾನೇ ಆಗ್ತಾ ಇರಲಿಲ್ಲ.. ಅಂತಾ ಸಬ್ಜೆಕ್ಟನಲ್ಲಿ ಫೇಲಾಗ್ತಿದ್ದೆ.. ಮತ್ತೆ ಪರೀಕ್ಷೆ ಬರೆದು ಪಾಸಾಗಿರೋದು.. ಅದಕ್ಕೇ ಇಷ್ಟೊಂದು ಮಾಕ್ರ್ಸ ಕಾರ್ಡು..’ ಹನುಮಂತಯ್ಯ ನಸುನಗುತ್ತಲೇ ಉತ್ತರಿಸಿದ. ಮೊದಲೇ ತನ್ನ ಗಂಡ ದಡ್ಡ ಎಂದುಕೊಂಡಿದ್ದ ಸುಮಿತ್ರಾಳಿಗೆ ಅದು ಮತ್ತಷ್ಟು ದೃಢವಾಯಿತು. ಆದರೆ ಅವಳು  ತಾನು ಪಿಯೂಸಿಯಲ್ಲಿ ಗಣಿತದಲ್ಲಿ, ಬಿಎಸ್ಸಿ ಅಂತಿಮ ವರ್ಷದಲ್ಲಿ ಕೆಮೆಸ್ಟ್ರಿಯಲ್ಲಿ ಫೇಲಾಗಿದ್ದನ್ನು ತನ್ನ ಗಂಡನ ಬಳಿ ಹೇಳಲಿಲ್ಲ!
   ಹೀಗೆ ತನ್ನ ಸಾಂಸಾರಿಕ ಜೀವನದ ಆರು ತಿಂಗಳುಗಳನ್ನು ಕಳೆಯುವಷ್ಟರಲ್ಲಿ ಹನುಮಂತಯ್ಯನಿಗೆ ಕಷ್ಟಗಳ ಪರ್ವ ಪ್ರಾರಂಭವಾಯಿತು. ರಂಗಪ್ಪಗೌಡರು ತಮ್ಮ ಕೊನೆಯ ಮದುವೆಯ ಮಗಳ ಮದುವೆಗಾಗಿಯೇ ಜೀವ ಹಿಡಿದುಕೊಂಡಿದ್ದವರಂತೆ ಒಂದು ದಿನ ಬೆಳ್ಳಂಬೆಳಿಗ್ಗೆಯೇ ಹೃದಯಾಘಾತದಿಂದ ದೈವಾದೀನರಾದರು. ಮೊನ್ನೆ ಮೊನ್ನೆ ಕೊನೆಯ ಮಗಳ ಮದುವೆಯಾಯಿತು..  ಅಳಿಯ ಅವರ ಮನೆಯಲ್ಲಿಯೇ ಇದ್ದಾನೆ.. ಇದ್ದಕಿದ್ದಂತೆ ರಂಗಪ್ಪಗೌಡರು ವಿಧಿವಶರಾದರು ಎನ್ನುವ ಲೋಕಾರೂಢಿಯ ಮಾತು ಅಲ್ಲಲ್ಲಿ ಕೇಳಿಬರತೊಡಗಿತು. ಇದು ಸೂಕ್ಷ್ಮಮತಿಯಾದ ಹನುಮಂತಯ್ಯನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಈ ಮಾನಸಿಕ ಬೇಗೆಯಿಂದ  ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಆಘಾತ ಬರಸಿಡಿಲಿನಂತೆ ಬಂದು ಅವನ ಮೇಲೆ ಎರಗಿತು. ರಂಗಪ್ಪಗೌಡರು ತೀರಿಹೋದ ಒಂದು ತಿಂಗಳಿನ ನಂತರ ಅವನು ತನ್ನ ಕೆಲಸ ಕಳೆದುಕೊಳ್ಳಬೇಕಾಯಿತು! 
   ಹನುಮಂತಯ್ಯ ಕೆಲಸ ಮಾಡುತಿದ್ದ ಕಂಪೆನಿಯು ಹೊಸದಾಗಿ ಹಿಡಿದಿದ್ದ ವಾಣಿಜ್ಯ ಕಟ್ಟಡವೊಂದರ ನಿರ್ಮಾಣ ಕಾಮಗಾರಿಯ ಸೈಟ್ ಎಂಜಿನಿಯರನನ್ನಾಗಿ ಅವನನ್ನು ನೇಮಿಸಿತ್ತು. ಹನುಮಂತಯ್ಯನೂ ಆ ಪ್ರಾಜೆಕ್ಟಿಗಾಗಿ ತುಂಬು ಶ್ರದ್ಧೆ ವಹಿಸಿ ಅತೀವ ಎಚ್ಚರಿಕೆಯಿಂದ ಕೆಲಸಮಾಡುತಿದ್ದ. ಕಟ್ಟಡದ ನಿರ್ಮಾಣವೂ ಯಾವ ತೊಡಕುಗಳಿಲ್ಲದೇ ಸಾಗತೊಡಗಿತು. ಅದೊಂದು ದಿನ ಮೊದಲ ಮಹಡಿಗೆ ಕಾಂಕ್ರೀಟು ಮೇಲ್ಛಾವಣಿ ಹಾಕಲು ಸಿದ್ಧತೆ ನಡೆಯುತಿದ್ದಾಗ ಒಂದು ಮೂಲೆಯಲ್ಲಿ ಸಾಕಷ್ಟು ಆಧಾರ ಸ್ಥಂಬಗಳನ್ನು ನಿಲ್ಲಿಸದೇ ಇರುವುದು ಅವನ ಗಮನಕ್ಕೆ ಬಂದು ಹನುಮಂತಯ್ಯನಿಗೆ ತೀವ್ರ ಆತಂಕವಾಯಿತು. ತಕ್ಷಣವೇ ಕಟ್ಟಡ ಕಾಮಗಾರಿಯ ಗುತ್ತಿಗೆದಾರನಾದ ಮೇಸ್ತ್ರಿ ಕುಪ್ಪುಸ್ವಾಮಿಯ ಬಳಿ ತೆರಳಿ ‘ಮೇಸ್ತ್ರಿಯವರೇ.. ನೋಡಿ ಅಲ್ಲಿ ಒಂದು ಕಡೆ ಸೆಂಟ್ರಿಂಗ್ ಕೊರತೆಯಿದೆ. ತೂಕವನ್ನು ತಡೆದುಕೊಳ್ಳಲು ಸಾಕಷ್ಟು ಪೋಲುಗಳನ್ನು ನಿಲ್ಲಿಸಿಲ್ಲ.. ಛಾವಣಿ ಕುಸಿಯಬಹುದು..’ ಎಂದು ತನ್ನ ಆತಂಕವನ್ನು ವ್ಯಕ್ತಪಡಿಸಿದ. ‘ರೀ ಎಂಜಿನಿಯರ್ ಸಾಹೇಬ್ರೇ.. ನಿಮ್ಮ ವಯಸ್ಸಿನಷ್ಟು ನನಗೆ ಅನುಭವವಾಗಿದೆ.. ಇಂತಹ ನೂರು ಕಟ್ಟಡಗಳನ್ನು ಕಟ್ಟಿದ್ದೇನೆ.. ಸುಮ್ಮನೆ ಹೋಗಿ ಮನೆಯಲ್ಲಿ ಏನೂ ಚಿಂತೆ ಮಾಡದೆ ಮಲಗಿಕೊಳ್ಳಿ..’ ಎಂದು ಹೇಳಿ ಕುಪ್ಪುಸ್ವಾಮಿ ದೊಡ್ಡದಾಗಿ ನಕ್ಕುಬಿಟ್ಟ. ಆದರೂ ಹನುಮಂತಯ್ಯನ ಒಳಮನಸ್ಸು ಎಲ್ಲೋ ಏನೋ ತಪ್ಪಾಗಿದೆ ಎಂದು ಸಾರಿ ಸಾರಿ ಹೇಳುತಿತ್ತು. ಆದರೆ  ಈ ಕಟ್ಟಡದ ಕಾಮಗಾರಿ ಸುಸೂತ್ರವಾಗಿ ಮುಗಿಯಲು ಮೇಸ್ತ್ರಿಯ ಸಹಕಾರ ಅನಿವಾರ್ಯ ಎಂಬುದನ್ನು ಮನಗಂಡು ಅವನಿಂದ ಕುಪ್ಪುಸ್ವಾಮಿಯನ್ನು ಎದುರುಹಾಕಿಕೊಳ್ಳಲು ಧೈರ್ಯ ಬರಲಿಲ್ಲ. ಒಂದು ತರಹದ ಆತಂಕದಿಂದಲೇ ಅಂದು ರಾತ್ರಿ ಅವನು ಮನೆಗೆ ಹೋದ. ಮರುದಿನ ಮೇಲ್ಛಾವಣಿಗೆ ಕಾಂಕ್ರೀಟು ಸ್ಲ್ಯಾಬು ಹಾಕುವ ಕಾರ್ಯವೂ ಸಾಂಗವಾಗಿ ನೇರವೇರಿತು. ಆದಾದ ಮೂರ್ನಾಲ್ಕು ದಿನಗಳಲ್ಲಿ ಮೇಲ್ಛಾವಣಿಯ ಒಂದು ಭಾಗ ಬಿರುಕುಗೊಂಡು ಕುಸಿದುಹೋಯಿತು!
   ಕಂಪೆನಿಯ ಅಧಿಕಾರಿಗಳು ಈ ವೈಫಲ್ಯತೆಯನ್ನು ಗಂಭೀರವಾಗಿ ಪರಿಗಣಿಸಿದರು. ಹನುಮಂತಯ್ಯನಿಗೆ ನೋಟೀಸು ನೀಡಿ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಲಾಯಿತು. ಆದರೆ ಹನುಮಂತಯ್ಯನೇನು ಧೃತಿಗೆಡಲಿಲ್ಲ. ಧೈರ್ಯದಿಂದಲೇ ವಿಚಾರಣೆ ಎದುರಿಸಿ ಇದರಲ್ಲಿ ತನ್ನದೇನೂ ತಪ್ಪಿಲ್ಲವೆಂದು ಅಲವತ್ತುಕೊಂಡ. ಆದರೆ ಕಂಪೆನಿಯ ಹಿರಿಯ ಅಧಿಕಾರಿಗಳು ಕುಪ್ಪುಸ್ವಾಮಿಗೆ ನೀಡಿರುವ ಗುತ್ತಿಗೆಯನ್ನು ರದ್ದುಪಡಿಸಿದರೆ ಈ ಪ್ರಾಜೆಕ್ಟಿನ ಮೇಲಾಗುವ ದುಷ್ಪರಿಣಾಮಗಳನ್ನು ಅವಲೋಕಿಸಿ ಅವನ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂಜರಿದರು ಮತ್ತು ಕಂಪೆನಿಯ ಮಾಲೀಕರನ್ನು ಮೆಚ್ಚಿಸಲು ಅವರು ಶಿಸ್ತುಕ್ರಮ ತೆಗೆದುಕೊಂಡು ಯಾರನ್ನಾದರೂ ಬಲಿಪಶುವನ್ನಾಗಿಸಬೇಕಿತ್ತು. ಮೊದಲು ಒಂದು ವಾರದ ಒಳಗಾಗಿ ಕಂಪೆನಿಗೆ ಆಗಿರುವ ಲಕ್ಷಾಂತರ ರೂಪಾಯಿ ನಷ್ಟವನ್ನು ತುಂಬಿಕೊಡುವಂತೆ ಹನುಮಂತಯ್ಯನಿಗೆ ನೋಟೀಸು ನೀಡಲಾಯಿತು. ಇದರಿಂದ ಕಂಗಾಲಾದ ಹನುಮಂತಯ್ಯ ಹಿರಿಯ ಅಧಿಕಾರಿಗಳ ಕೈಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡ. ಕೊನೆಗೆ ಸಂಭವಿಸಿರುವ ವೈಫಲ್ಯತೆಗೆ ಒಂದೂವರೆ ವರ್ಷಗಳ ಕಾಲ ತನ್ನ ಕಂಪೆನಿಗಾಗಿ ಹಗಲಿರುಳು ದುಡಿದ ಸೈಟ್ ಎಂಜಿನಿಯರ್ ಹನುಮಂತಯ್ಯನನ್ನು ಹೊಣೆಗಾರನನ್ನಾಗಿಸಿ ಯಾವುದೇ ಮುಲಾಜಿಲ್ಲದೆ ಅವನನ್ನು ಕೆಲಸದಿಂದ ತೆಗೆದುಹಾಕಲಾಯಿತು.
   ಆಕಾಶವೇ ತಲೆಯ ಮೇಲೆ ಕಳಚಿಬಿದ್ದಂತೆ ಸಪ್ಪೆಮೋರೆ ಮಾಡಿಕೊಂಡು ಮನೆಗೆ ಬಂದ ತನ್ನ ಗಂಡನನ್ನು ಕಂಡು ಸುಮಿತ್ರಾಳಿಗೆ ಅತೀವ ಗಾಬರಿಯಾಯಿತು. ರೂಮಿನ ಒಳಗೆ ಹೋದ ಮೇಲೆ ಏನಾಯಿತೆಂದು ಆತಂಕದಿಂದ ಕೇಳಿದಳು. ಹನುಮಂತಯ್ಯ ತನ್ನ ಕೆಲಸ ಹೋಯಿತೆಂದು ತಿಳಿಸಿ ನಡೆದ ಘಟನೆಯನ್ನು ಸಮಾಧಾನದಿಂದಲೇ ವಿವರಿಸಿ ನಿಟ್ಟುಸಿರುಬಿಟ್ಟನು. ಸುಮಿತ್ರಾಳಿಗೆ ತನ್ನ ಗಂಡನ ಮಾತಿನ ಮೇಲೆ ನಂಬಿಕೆ ಬರಲಿಲ್ಲ. ಮೊದಲೇ ದಡ್ಡ.. ಕಟ್ಟಡ ಕಟ್ಟುವ ಸಂಕೀರ್ಣ ವಿಷಯಗಳು ಇವನಿಗೆ ಅರ್ಥವಾಗಿರುವುದಿಲ್ಲ.. ಎಲ್ಲೋ ಏನೋ ತಪ್ಪು ಮಾಡಿದ್ದಾನೆ.. ಅದರಿಂದಾಗಿಯೇ ಕೆಲಸದಿಂದ ತೆಗೆದು ಹಾಕಿದ್ದಾರೆ.. ಎಂದು ಆಲೋಚಿಸಿದಳು. ಆದರೆ ಅದನ್ನು ತನ್ನ ಗಂಡನ ಎದಿರು ಹೇಳು ಧೈರ್ಯ ಮಾಡದೆ ಮುಂದೇನು ಮಾಡುತ್ತೀರಿ.. ಎಂದು ತುಸು ಅಸಮಾಧಾನದಿಂದ ಪ್ರಶ್ನಿಸಿದಳು. ಬೇರೆ ಕಡೆ ಕೆಲಸ ಹುಡುಕುತ್ತೀನಿ ಎಂದ ಹನುಮಂತಯ್ಯನ ಉತ್ತರಕ್ಕೆ ಅವಳು ಏನೂ ಪ್ರತಿಕ್ರಿಯೆ ನೀಡಲಿಲ್ಲ.  ತನ್ನ ಅಮ್ಮನ ಬಳಿಗೆ ಹೋಗಿ ನಿನ್ನ ಅಳಿಯ ಕೆಲಸ ಕಳೆದುಕೊಂಡಿದ್ದಾರೆ ಎಂದು ತುಸು ಮುನಿಸಿನಿಂದಲೇ ತಿಳಿಸಿದಳು. ತನ್ನ ಗಂಡನ ಹಠಾತ್ ನಿಧನದಿಂದ ಅತೀವ ಖಿನ್ನರಾಗಿದ್ದ ಮಹಾಲಕ್ಷ್ಮಮ್ಮನವರಿಗೆ ಮತ್ತೊಂದು ವ್ಯಥೆ ಶುರುವಾಯಿತು ಎನ್ನಿಸಿತು. ಆದರೂ ಧೈರ್ಯ ಕಳೆದುಕೊಳ್ಳದೆ ತನ್ನ ಅಳಿಯನನ್ನು ಕರೆದು ‘ಏನೂ ಬೇಸರ ಮಾಡಿಕೊಳ್ಳಬೇಡಿ.. ಬೇರೆ ಕೆಲಸ ಹುಡುಕಿದರಾಯಿತು.. ಸ್ವಲ್ಪ ದಿನ ಆರಾಮವಾಗಿರಿ..’ ಎಂದು ಮನಸ್ಥೈರ್ಯ ತುಂಬಿದರು.
                                                        (ಮುಂದುವರಿಯುವುದು...)