ವಿದಾಯ‌(ನೀಳ್ಗತೆ)‍ 3

ವಿದಾಯ‌(ನೀಳ್ಗತೆ)‍ 3

          ಹನುಮಂತಯ್ಯನಿಗೆ ಮುಂದೆ ಏನು ಮಾಡುವುದೆಂದು ತೋಚಲಿಲ್ಲ. ಮದುವೆಯಾದಂದಿನಿಂದ ಅಲ್ಲಿಯವರೆಗಿನ ಸಂಬಳದಲ್ಲಿ ಉಳಿತಾಯ ಮಾಡಿದ ಹಣ ಬ್ಯಾಂಕಿನಲ್ಲಿದ್ದುದರಿಂದ ತಕ್ಷಣಕ್ಕೆ ಹಣಕಾಸಿನ ತೊಂದರೆ ಇರಲಿಲ್ಲವಾದರೂ ಏನೂ ಕೆಲಸವಿಲ್ಲದೆ ಬೆಳಗಿನಿಂದ ಸಂಜೆಯವರಗೆ ಸಮಯ ಕಳೆಯುವುದು ಒಂದು ತೀವ್ರತರವಾದ ಶಿಕ್ಷೆ ಎನಿಸುತಿತ್ತು. ಅವಿವಾಹಿತನಾಗಿದ್ದರೆ ರೂಮಿನಲ್ಲಿ ಸುಮ್ಮನೆ ಮಲಗಿಬಿಡಬಹುದಾಗಿತ್ತು. ಆದರೆ ಈಗ ಜೊತೆಯಲ್ಲಿ ಹೆಂಡತಿಯಿದ್ದಾಳೆ.. ಅತ್ತೆ ಇದ್ದಾರೆ.. ಇರುವುದು ಮಾವನ ಮನೆಯಲ್ಲಿ.. ಸುಮ್ಮನೆ ಕುಳಿತು ಏನು ಮಾಡುವುದು ಎಂದೆನಿಸಿ ತಲೆ ಚಿಟ್ಟೆನೆಸುತಿತ್ತು. ಆಗ ಅವನಿಗೆ ನೆನಪಾದುದು ಅವನ ಸಹಪಾಠಿ ಗೆಳೆಯ ರಾಜೇಶ.
   ಹನುಮಂತಯ್ಯ ಮೂರ್ನಾಲ್ಕು ತಿಂಗಳ ಹಿಂದೆ ಒಂದು ದಿನ ಮಧ್ಯಾಹ್ನ ಅವನು ಕೆಲಸ ಮಾಡುತಿದ್ದ ಸ್ಥಳದ ಹತ್ತಿರವಿದ್ದ ಹೋಟೇಲೊಂದರಲ್ಲಿ ಊಟಕ್ಕೆಂದು ಹೊರಟು ರಸ್ತೆ ದಾಟಲು ನಿಂತುಕೊಂಡಿದ್ದ. ಅತ್ತಲಿಂದ ಬೈಕಿನಲ್ಲಿ ಬಂದ ರಾಜೇಶ ಅವನನ್ನು ಗುರುತಿಸಿ ಬೈಕು ನಿಲ್ಲಿಸಿ ‘ಏನೋ ಹನುಮಂತು.. ಎಷ್ಟು ದಿನ ಆಯ್ತೋ ನಿನ್ನನ್ನ ನೋಡಿ.. ಏನ್ಮಾಡ್ತಾ ಇದೀಯೋ..’ ಎಂದು ಒಂದೇ ಸಮನೆ ಪ್ರಶ್ನೆಗಳ ಮಳೆಗರೆದು ಹರ್ಷ ವ್ಯಕ್ತಪಡಿಸಿದ. ಹನುಮಂತಯ್ಯನೂ ತನ್ನ ಕಾಲೇಜಿನ ಸಹಪಾಠಿಯನ್ನು ಬಹಳ ವರ್ಷಗಳ ನಂತರ ಭೇಟಿಯಾಗಿದ್ದಕ್ಕೆ ಸಂತಸಗೊಂಡು ತನ್ನ ಬಗ್ಗೆ ಎಲ್ಲಾ ವಿಚಾರಗಳನ್ನು ಹೇಳಿ ಮುಗಿಸಿ ‘ನೀನು ಏನ್ಮಾಡ್ತಾ ಇದಿಯೋ..’ ಎಂದು ಕೇಳಿದ. ‘ಕುತ್ಕೊಳೋ ಎಲ್ಲಾ ಹೇಳ್ತೀನಿ.. ನಮ್ಮ ಆಫೀಸಿಗೆ ಹೋಗಿ ಊಟ ಮಾಡೋಣ..’ ಎಂದು ಹೇಳಿದ ರಾಜೇಶ ಹನುಮಂತಯ್ಯನನ್ನು ಅಲ್ಲಿಂದ ಸ್ವಲ್ಪ ದೂರವೇ ಇದ್ದ ತನ್ನ ಕಛೇರಿಗೆ ಕರೆದುಕೊಂಡು ಹೋದ. ಅವನು ಎಂಜನಿಯರಿಂಗ್ ಡಿಗ್ರಿ ಮುಗಿಸಿದ ಬಳಿಕ ಆರ್ ಅಂಡ್ ಆರ್ ಸಿವಿಲ್ ಎಂಜಿನಿಯರ್ಸ್ ಅಂಡ್ ಕನ್ಸಲ್ಟೆಂಟ್ಸ್ ಎನ್ನುವ ಒಂದು ಉದ್ಯಮ ಪ್ರಾರಂಭಿಸಿದ್ದ. ಬಿಲ್ಡಿಂಗ್ ಪ್ಲಾನು, ಎಸ್ಟಿಮೇಟು ತಯಾರಿಸಿಕೊಡುವುದಲ್ಲದೇ ಕಟ್ಟಡ ಕಾಮಗಾರಿಯ ಮೇಲ್ವಿಚಾರಣೆಯನ್ನೂ ನೋಡಿಕೊಳ್ಳುತಿದ್ದ. ಸುತ್ತಮುತ್ತಲ ಬಡಾವಣೆಗಳಲ್ಲಿ ಒಳ್ಳೆಯ ಹೆಸರು ಗಳಿಸಿ ಜನಪ್ರಿಯನಾಗಿದ್ದ. ತಿಂಗಳ ಆದಾಯವೂ ಐವತ್ತರಿಂದ ಅರವತ್ತು ಸಾವಿರ ರೂಪಾಯಿಗಳಷ್ಟಿತ್ತು.  ಅವನಿಗೆ ಕೈತುಂಬಾ ಕೆಲಸ. ಎಲ್ಲಾ ಕೆಲಸಗಳನ್ನೂ ಅವನೇ ಮಾಡುತಿದ್ದುದರಿಂದ ಒಂದು ಕ್ಷಣವೂ ಬಿಡುವೆಂಬುದೇ ಇರಲಿಲ್ಲ. ತನ್ನ ಕಛೇರಿಯಲ್ಲಿ ಕುಳಿತು ಫೋನಿನಲ್ಲಿ ಊಟಕ್ಕೆ ಆರ್ಡರ್ ಮಾಡಿ ತನ್ನ ಕೆಲಸದ ಎಲ್ಲಾ ವಿವರಗಳನ್ನು ಹನುಮಂತಯ್ಯನೊಂದಿಗೆ ಹಂಚಿಕೊಂಡಿದ್ದೇ ಅಲ್ಲದೆ ನನಗೆ ತುರ್ತಾಗಿ ಒಬ್ಬ ಅಸಿಸ್ಟೆಂಟಿನ ಅವಶ್ಯಕತೆ ಇದೆ.. ಆದರೆ ಯಾರೂ ಸರಿಯಾದವರು ಸಿಕ್ಕುತ್ತಿಲ್ಲ.. ಎಂದು ಪೇಚಾಡಿಕೊಂಡಿದ್ದ.
   ಹನುಮಂತಯ್ಯನಿಗೆ ರಾಜೇಶನ ನೆನಪಾದೊಡನೆ ಗಾಢ ಕತ್ತಲೆಯಲ್ಲಿದ್ದವನಿಗೆ ಬೆಳಕಿನ ಕಿರಣವೊಂದು ಕಾಣಿಸಿದಂತಾಯಿತು. ತಡಮಾಡದೇ ಸಿಟಿಬಸ್ಸು ಹತ್ತಿ ರಾಜೇಶನ ಕಛೇರಿಗೆ ತೆರಳಿದ. ರಾಜೇಶ ಕಛೇರಿಯಲ್ಲಿಯೇ ಇದ್ದು ಯಾವುದೋ ಕಟ್ಟಡದ ನಕ್ಷೆ ಬಿಡಿಸುವಲ್ಲಿ ತಲ್ಲೀನನಾಗಿದ್ದ. ಹನುಮಂತಯ್ಯನನ್ನು ಆದರದಿಂದಲೇ ಬರಮಾಡಿಕೊಂಡ. ಹನುಮಂತಯ್ಯ ತುಸು ಕೀಳರಿಮೆಯಿಂದಲೇ ತನಗೊದಗಿದ ಪರಿಸ್ಥಿತಿಯನ್ನು ತನ್ನ ಗೆಳೆಯನಲ್ಲಿ ಭಿನ್ನವಿಸಿಕೊಂಡಿದ್ದಲ್ಲದೇ ಅವನ ಕಛೇರಿಯಲ್ಲಿ ಅಸಿಸ್ಟೆಂಟಾಗಿ ಕೆಲಸ ಮಾಡಲು ಸಿದ್ಧನಾಗಿರುವುದಾಗಿ ಅಲವತ್ತುಕೊಂಡ. ರಾಜೇಶನಿಗೆ ತನ್ನ ಗೆಳೆಯನ ಪರಿಸ್ಥಿತಿಯನ್ನು ಕಂಡು ಸಹಜವಾಗಿಯೇ ಮನಕರಗಿತು. ‘ಈ ದೊಡ್ಡ ದೊಡ್ಡ ಬಿಲ್ಡರ್ಸ್ ಇದಾರಲ್ಲಾ ಬಡ್ಡೀಮಕ್ಕಳು.. ಎಂಪ್ಲಾಯೀಸನ್ನ ಎಷ್ಟು ಬೇಕೋ ಅಷ್ಟು ಚೆನ್ನಾಗಿ ಉಪಯೋಗಿಸಿಕೊಂಡು ಆಮೇಲೆ ಟಿಸ್ಸ್ಯೂ ಪೇಪರ್ ತರಾ ಬಿಸಾಕಿಬಿಡ್ತಾರೆ ಕಣೋ..’ ಎಂದು ಬೈಯ್ದು ‘ಸರಿ ನೀನು ಕಾಲೇಜಿನಲ್ಲಿದ್ದಾಗ ಬಿಲ್ಡಿಂಗ್ ಡ್ರಾಯಿಂಗ್ ಚೆನ್ನಾಗಿ ಮಾಡ್ತಾ ಇದ್ದೇ ಅಲ್ವಾ.. ಇಲ್ಲೇ ನನ್ನ ಜೊತೆ ಕೆಲಸ ಮಾಡು.. ನನಗೂ ಸ್ವಲ್ಪ ಅನುಕೂಲವಾಗುತ್ತದೆ..’ ಎಂದ. ಹನುಮಂತಯ್ಯನಿಗೆ ತುಂಬಾ ಸಂತೋಷವಾಯಿತು. ‘ರಾಜೇಶಾ.. ನಿನ್ನ ಉಪಕಾರಾನ ಜೀವನಪೂರ್ತಿ ಮರೆಯೋದಿಲ್ಲಾ ಕಣೋ..’ ಎಂದವನು ಕಣ್ಣುಗಳಲ್ಲಿ ನೀರು ತುಂಬಿಕೊಂಡ. ‘ಅದಿರ್ಲೀ.. ಅಲ್ಲಿ ನಿನಗೆ ಎಷ್ಟು ಸಂಬಳ ಕೊಡ್ತಾ ಇದ್ರೋ..’ ಎಂದು ಹನುಮಂತಯ್ಯನ ಮುಖವನ್ನೇ ದಿಟ್ಟಿಸಿದ. ‘ಐದು ಸಾವಿರ ಕೊಡ್ತಾ ಇದ್ರು ಕಣೋ..’ ಎಂದು ಉತ್ತರಿಸಿದ ಗೆಳೆಯನ ಮುಖವನ್ನೇ ನೋಡುತ್ತಾ ‘ಸರಿ.. ನಾನೂ ಐದು ಸಾವಿರ ಕೊಡ್ತೀನಿ.. ಸ್ವಲ್ಪ ದಿನ ಕಳೆದ ಮೇಲೆ ಸಂಬಳ ಜಾಸ್ತಿ ಮಾಡೋಣ.. ನನ್ನ ಹತ್ತಿರ ತುಂಬಾ ಜನ ಕ್ಲೈಯಿಂಟ್ಸು ಬಿಲ್ಡಿಂಗ್ ಪ್ಲಾನು ಹಾಕಿಕೊಡಿ, ಎಸ್ಟಿಮೇಟು ಮಾಡಿಕೊಡಿ ಅಂತ ಬರ್ತಾರೆ.. ಅವರಿಗೆಲ್ಲಾ ಪ್ಲಾನಿನ ಡ್ರಾಯಿಂಗು, ಎಸ್ಟಿಮೇಟು ಪ್ರಿಪೇರು ಮಾಡಿಕೊಟ್ಟರೆ ಸಾಕು.. ಅದುಕ್ಕೆಲ್ಲಾ ನಾನು ಹೆಲ್ಪ್ ಮಾಡ್ತೀನಿ.. ನೀನು ಈ ಕೆಲಸ ನೋಡಿಕೊಂಡರೆ ನಾನು ಬಿಲ್ಡಿಂಗ್ ಸೂಪರ್‍ವಿಷನ್ ಮಾಡ್ಕೋತೀನಿ.. ನಾಳೆಯಿಂದಾನೇ ಬಾ..’ ಎಂದ ಗೆಳೆಯನ ಹೃದಯವೈಶಾಲ್ಯತೆಯನ್ನು ಕಂಡು ಹನುಮಂತಯ್ಯನ ಕಣ್ಣುಗಳು ಮತ್ತೊಮ್ಮೆ ತುಂಬಿಬಂದವು.
   ತುಂಬಾ ಸಂತಸದಿಂದ ಮನೆಗೆ ಬಂದ ಹನುಮಂತಯ್ಯ ತನ್ನ ಹೆಂಡತಿಯೊಂದಿಗೆ ತನಗೆ ಕೆಲಸ ಸಿಕ್ಕಿದ್ದನ್ನು ಪರಮಾನಂದಿಂದ ಹೇಳಿಕೊಂಡ. ಎಲ್ಲಿ ಕೆಲಸ.. ಎಷ್ಟು ಸಂಬಳ ಎಂದು ಪ್ರಶ್ನಿಸಿದ ಸುಮಿತ್ರಾಳಿಗೆ ಎಲ್ಲಾ ವಿವರಗಳನ್ನೂ ತಿಳಿಸಿದ. ಕೆಲಸ ಕಳೆದುಕೊಂಡವನಿಗೆ ಮತ್ತೆ ಕೆಲಸ ಸಿಕ್ಕಿದ ವಿಷಯ ತಿಳಿದು ಅವಳಿಗೂ ಮನಸ್ಸು ನಿರಾಳವಾಯಿತು. ವಿಷಯ ತಿಳಿದ ಮಹಾಲಕ್ಷ್ಮಮ್ಮನವರ ಮನಸ್ಸಿಗೆ ತುಸು ನೆಮ್ಮದಿ ಸಿಕ್ಕಿದಂತಾಯಿತು. ಅಳಿಯನ ಬಗ್ಗೆ ಸುಮ್ಮನೆ ಕಾಲಹರಣ ಮಾಡುವ ಮನುಷ್ಯನಲ್ಲ ಎಂದು ಹೆಮ್ಮೆಯಾಯಿತು. ‘ದೇವರು ಒಳ್ಳೆಯದು ಮಾಡಲಿ..’ ಎಂದು  ಅವರು ಅಳಿಯನನ್ನು ಹರಸಿದರು.
   ಹನುಮಂತಯ್ಯ ರಾಜೇಶನ ಕಚೇರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಮೇಲೆ ತನಗೆ ಕೆಲಸ ಕೊಟ್ಟಿರುವವನು ತನ್ನ ಸ್ನೇಹಿತ ಎಂಬ ಸಲಿಗೆ ತೆಗೆದುಕೊಳ್ಳಲಿಲ್ಲ.  ಬದಲಾಗಿ ಕಷ್ಟಕಾಲದಲ್ಲಿ  ಕೈಹಿಡಿದಿದ್ದಾನೆ ಎಂಬ ಕೃತಜ್ಞತೆಯಿಂದ ಪ್ರಾಮಾಣಿಕವಾಗಿ ಸಮಯಪಾಲನೆ, ಶಿಸ್ತು ಮತ್ತು ಶ್ರದ್ಧೆಯಿಂದ ಕೆಲಸ ಮಾಡತೊಡಗಿದ. ನೀನು ಲೇಟಾಗಿಯೇ ಬಾರೋ.. ನಾನು ಮೊದಲು ಹೋಗಿರುತ್ತೇನೆ ಎಂದು ಹೇಳಿ ಅವನಿಂದ ಕಛೇರಿಯ ಒಂದು ಬೀಗದ ಕೀ ಪಡೆದುಕೊಂಡಿದ್ದ. ಅವನು ಬರುವ ಮುನ್ನವೇ ಕಚೇರಿಯ ಕೆಲಸದ ಹುಡುಗನಿಂದ ಕಸ ಗುಡಿಸಿ, ಮೇಜು ಕುರ್ಚಿಗಳನ್ನೆಲ್ಲಾ ಸರಿಯಾಗಿ ಜೋಡಿಸಿ ಇರಿಸುತಿದ್ದ. ರಾಜೇಶನೊಬ್ಬನೇ ಇದ್ದಾಗ ಅವನ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಕಛೇರಿಯ ಕೊಠಡಿ ಅಸ್ತವ್ಯಸ್ತವಾಗಿರುತಿತ್ತು. ಹನುಮಂತಯ್ಯ ಆ ಕಛೇರಿಗೆ ಬಂದ ಮೇಲೆ ಅಲ್ಲಿನ ವಾತಾವರಣವೇ ಸಂಪೂರ್ಣವಾಗಿ ಬದಲಾಗಿ ಕಚೇರಿ ಯಾವಾಗಲೂ ಸ್ವಚ್ಛವಾಗಿ ನೀಟಾಗಿರುತಿತ್ತು. ಇದನ್ನೆಲ್ಲಾ ಗಮನಿಸಿದ ರಾಜೇಶನಿಗೆ ಹನುಮಂತಯ್ಯನ  ನಿಷ್ಠೆಯನ್ನು ಕಂಡು ಹೆಮ್ಮೆಯಾಗುತಿತ್ತು. ಅದಲ್ಲದೆ ರಾಜೇಶ ಕಚೇರಿಗೆ ಬರುತಿದ್ದಂತೆ ಕುರ್ಚಿಯಲ್ಲಿ ಕುಳಿತು ತನ್ನ ಕೆಲಸದಲ್ಲಿ ತಲ್ಲೀನನಾಗಿರುತಿದ್ದ ಹನುಮಂತಯ್ಯ ಎದ್ದು ನಿಂತು ಗೌರವ ಸೂಚಿಸುತಿದ್ದ. ಇದರಿಂದಾಗಿ ರಾಜೇಶನಿಗೆ ತುಸು ಕಸಿವಿಸಿಯಾಗಿ ‘ಹನುಮಂತೂ.. ನಾನು ನಿನ್ನ ಸ್ನೇಹಿತ ಕಣೋ.. ಹಾಗೆಲ್ಲಾ ಎದ್ದು ನಿಲ್ಲುವುದು ನನಗೆ ಸಂಕೋಚ ತರುತ್ತದೆ..’ ಎಂದು ಬುದ್ಧಿವಾದ ಹೇಳಿದ. ‘ರಾಜೇಶಾ.. ನೀನು ನನ್ನ ಸ್ನೇಹಿತ ಎಂಬುದು ನಿಜ.. ಆದರೆ ಅದು ಈ ಕಚೇರಿಯಿಂದ ಹೊರಗೆ ಮಾತ್ರ.. ಈ ಕಚೇರಿಯ ಒಳಗೆ ನೀನು ನನಗೆ ಅನ್ನ ನೀಡುತ್ತಿರುವ ಮಾಲೀಕ ಕಣೋ..’ ಎಂದು ಹನುಮಂತಯ್ಯ ಉತ್ತರಿಸಿದಾಗ ರಾಜೇಶನಿಗೆ ಏನು ಹೇಳಬೇಕೆಂದು ತಿಳಿಯದೇ ತಬ್ಬಿಬ್ಬಾಗಿದ್ದ.
   ಹನುಮಂತಯ್ಯನ ಹೊಸ ಕೆಲಸದೊಂದಿಗೆ ಮತ್ತೆ ಅವನಿಗೆ ಸಂತಸದ ದಿನಗಳು ಆರಂಭವಾದವು. ಸುಮಿತ್ರಾಳ ಒಡಲಲ್ಲಿ ಹೊಸಜೀವವೊಂದು ಚಿಗುರೊಡೆಯುತ್ತಿರುವುದು ವೈದ್ಯರ ಪರೀಕ್ಷೆಯಿಂದ ದೃಢವಾಯಿತು. ಹನುಮಂತಯ್ಯನಿಗೆ ತಂದೆಯಾಗುತ್ತಿದ್ದೇನೆ ಎಂಬ ಸಂತಸದ ಜೊತೆಗೆ ಭವಿಷ್ಯದಲ್ಲಿ ಸಾಂಸಾರಿಕ ಜವಾಬ್ದಾರಿಯ ದಿಗಿಲೂ ಹೆಚ್ಚಾಯಿತು. ಇನ್ನು ಮೇಲೆ ತನ್ನ ನೌಕರಿಯನ್ನು ಕಳೆದುಕೊಳ್ಳುವ ಯಾವ ಅಜಾಗರೂಕತೆಯೂ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವನು ದೃಢನಿರ್ಧಾರ ತೆಗೆದುಕೊಂಡ. ಸುಮಿತ್ರಾಳಿಗೆ ತಾಯ್ತನದ ನಿರೀಕ್ಷೆಯ ಸಂಭ್ರಮದ ಜೊತೆಗೆ ತನ್ನ ಗಂಡನ ಮೇಲೆ ಅತೀವ ಪ್ರೀತಿಯೂ ಶುರುವಾಯಿತು. ಹನುಮಂತಯ್ಯನ ದೈನಂದಿನ ಅವಶ್ಯಕತೆಗಳನ್ನು ಹೆಚ್ಚು ನಿಗಾವಹಿಸಿ ಪೂರೈಸುತಿದ್ದುದಲ್ಲದೆ ಹಾಸಿಗೆಯಲ್ಲಿಯೂ ಅವನೊಡನೆ ಸಂಪೂರ್ಣವಾಗಿ ಬೆರೆತು ದೈಹಿಕಸುಖವನ್ನು ನೀಡಿ ತಾನೂ ತೃಪ್ತಳಾಗುತಿದ್ದಳು. ನಾನು, ನನ್ನ ಗಂಡ, ಹೊಟ್ಟೆಯಲ್ಲಿ ಬೆಳೆಯುತ್ತಿರುವ ನಮ್ಮ ಮಗು ಎಂಬ ಸಾಂಸಾರಿಕ ಪ್ರಜ್ಞೆ ಅವಳಲ್ಲಿ ಮೂಡತೊಡಗಿತು. ತಮ್ಮ ಪ್ರೇಮದ ಪ್ರತೀಕವಾದ ಮೊದಲ ಮಗುವಿನ ನಿರೀಕ್ಷೆಯಲ್ಲಿ ಹನುಮಂತಯ್ಯ-ಸುಮಿತ್ರಾ ಇಬ್ಬರೂ ಆನಂದದಿಂದ ದಿನಗಳನ್ನು ಕಳೆಯತೊಡಗಿದರು.
   ಹನುಮಂತಯ್ಯ ರಾಜೇಶನ ಕಚೇರಿಯಲ್ಲಿ ಯಾವುದೇ ಲೋಪವೂ ಬರದಂತೆ ಅವನು ಹೇಳಿದ ಎಲ್ಲಾ ನಕ್ಷೆಗಳನ್ನು ಸಮಯಕ್ಕೆ ಸರಿಯಾಗಿ ತಯಾರಿಸುತಿದ್ದ. ಅವುಗಳ ಬ್ಲೂಪ್ರಿಂಟ್ ತೆಗೆಯುತಿದ್ದ. ಅಂದಾಜು ವೆಚ್ಚವನ್ನೂ ಲೆಕ್ಕಹಾಕಿ ಕೊಡುತಿದ್ದ. ಹೆಚ್ಚಿನ ಕೆಲಸವಿದ್ದ ದಿನಗಳಲ್ಲಿ ರಾಜೇಶ ಮನೆಗೆ ಹೋದರೂ ಒಬ್ಬನೇ ಕುಳಿತು ಅವುಗಳನ್ನೆಲ್ಲಾ ಮುಗಿಸಿಯೇ ಮನೆಗೆ ಹೋಗುತಿದ್ದ. ಒಮ್ಮೊಮ್ಮೆ ಅವನು ಮನೆ ತಲುಪವುದು ರಾತ್ರಿ ಹತ್ತುಗಂಟೆಯಾಗುತಿತ್ತು. ರಾಜೇಶ ಈಗ ತುಸು ನಿರಮ್ಮಳವಾಗಿ ತನ್ನ ಹೆಂಡತಿ ಮತ್ತು  ಎರಡು ವರ್ಷದ ಮಗಳೊಂದಿಗೆ ಕಾಲ ಕಳೆಯುತಿದ್ದ. ‘ಹನುಮಂತೂ.. ನೀನು ಬಂದ ಮೇಲೆ ನನಗೆ ನಿರಾಳವಾಯಿತು ಮಹರಾಯ..’ ಎಂದು ಕಚೇರಿಯಲ್ಲಿ ವಿರಾಮವಾಗಿ ಕುಳಿತು ಮಂದಹಾಸ ಬೀರುತಿದ್ದ. ಹೀಗಿರುವಾಗ ಹನುಮಂತಯ್ಯ ಒಂದು ದಿನ ಕೆಲಸ ಮುಗಿಸಿಕೊಂಡು ಕಚೇರಿಯಿಂದ ಹೊರಡುವಾಗ ‘ರಾಜೇಶಾ.. ಒಂದು ಸರ್ತಿ ನಿಮ್ಮ ಮಿಸೆಸ್ ಮತ್ತು  ಪಾಪು ಕರೆದುಕೊಂಡು ಮನೆಗೆ ಬಾರೋ.. ನನ್ನ ಹೆಂಡತಿಯನ್ನ ಪರಿಚಯ ಮಾಡಿಕೊಡ್ತೀನಿ..’ ಎಂದು ಲೋಕಾರೂಢಿಯಂತೆ ರಾಜೇಶನನ್ನು ಮನೆಗೆ ಆಹ್ವಾನಿಸಿ ತಮ್ಮ ಮಾವನ ಮನೆಯ ವಿಳಾಸ ತಿಳಿಸಿದ. ಮುಂದೆ ನಡೆದ ಘಟನೆಗಳಿಗೆ ಈ ಆಹ್ವಾನವೇ ಮುಳುವಾಯಿತೆಂದು ಆನಂತರ ಅವನಿಗೆ ತಿಳಿಯಿತು.
   ಒಂದು ಭಾನುವಾರ ರಾಜೇಶ ತನ್ನ ಹೆಂಡತಿ ರಾಧಾ ಮತ್ತು ಪುಟ್ಟ ಮಗಳನ್ನು ಕರೆದುಕೊಂಡು ತನ್ನ ಕಾರಿನಲ್ಲಿ ಹನುಮಂತಯ್ಯನ ಮಾವನ ಮನೆಗೆ ಬಂದ. ನಗರದ ಪ್ರತಿಷ್ಠಿತ ಬಡಾವಣೆಯಲ್ಲಿದ್ದ ಆ ವಿಶಾಲ ಬಂಗಲೆಯನ್ನು ನೋಡಿ ಅವನಿಗೆ ಮಹದಾಶ್ಚರ್ಯವಾಯಿತು. ಮಹಾಲಕ್ಷ್ಮಮ್ಮನವರು ಮತ್ತು ಸುಮಿತ್ರಾ ಇಬ್ಬರೂ ರಾಜೇಶ ಮತ್ತು ಅವನ ಹೆಂಡತಿ-ಮಗುವನ್ನು ಬಾಯ್ತುಂಬಾ ಮಾತನಾಡಿಸಿ ತಿಂಡಿ-ತೀರ್ಥ ನೀಡಿ ಚೆನ್ನಾಗಿಯೇ ಉಪಚರಿಸಿದರು. ಅವರೊಂದಿಗೆ ನಗುನಗುತ್ತಲೇ ಮಾತನಾಡಿ ಅವರ ಆತಿಥ್ಯ ಸ್ವೀಕರಿಸಿ  ತನ್ನ ಹೆಂಡತಿ-ಮಗಳೊಂದಿಗೆ ವಾಪಾಸಾದ ರಾಜೇಶನ ಮನಸ್ಸಿನ ಮೂಲೆಯಲ್ಲಿ ಈಷ್ರ್ಯೆಯ ಕಿಡಿ ಹತ್ತಿಕೊಂಡಿತು. ಬೆಳಿಗ್ಗೆ ಕಚೇರಿಗೆ ಬಂದವನು ಹನುಮಂತಯ್ಯನ ಬಳಿಯಲ್ಲಿ ಸರಿಯಾಗಿ ಮಾತನಾಡಲಿಲ್ಲ. ಹನುಮಂತಯ್ಯನಿಗೂ ಕಾರಣ ತಿಳಿಯದೇ ಗೊಂದಲವಾಯಿತು. ಸ್ವಲ್ಪ ಹೊತ್ತು ಸುಮ್ಮನಿದ್ದ ರಾಜೇಶ ‘ಹನುಮಂತೂ.. ನಿಮ್ಮ ಮಾವನೋರ ಮನೆ ಏನಯ್ಯಾ ಅರಮನೆ ಇದ್ದಂಗಿದೆ.. ಗಂಡುಮಕ್ಕಳು ಬೇರೆ ಇಲ್ಲ.. ಅವರ ಸಮಸ್ತ ಆಸ್ತಿಗೆ ನೀನೆ ವಾರಸುದಾರ.. ನೀನು ಇಲ್ಲಿ ನಾನು ಕೊಡೋ ಜುಜುಬಿ ಸಂಬಳಕ್ಕಾಗಿ ದುಡಿಯಬೇಕಿಲ್ಲ..’ ಎಂದು ತುಸು ವ್ಯಂಗವಾಗಿ ನುಡಿದ. ಹನುಮಂತಯ್ಯನಿಗೆ ಆಘಾತವಾಯಿತು. ಆದರೂ ಅದನ್ನು ತೋರ್ಪಡಿಸಿಕೊಳ್ಳದೆ ‘ಆ ದೃಷ್ಟಿಯಿಂದ ನನ್ನ ಹೆಂಡತಿಯನ್ನ ನಾನು ಮದುವೆಯಾಗಲಿಲ್ಲ ರಾಜೇಶ.. ನಮ್ಮ ಮೇಷ್ಟ್ರು ಅಲ್ಲಿಗೆ ಕರೆದುಕೊಂಡು ಹೋದ್ರು.. ಒಳ್ಳೆಯ ಮನೆತನ ಒಳ್ಳೆಯ ಜನ ಅಂತ ಹೇಳಿದ್ರು.. ಅವರೂ ನನ್ನನ್ನ ಒಪ್ಪಿಕೊಂಡ್ರು.. ನಮ್ಮ ಅಪ್ಪ-ಅಮ್ಮಾನೂ ಒಪ್ಪಿದ್ರು.. ಅದಕ್ಕೇ ಮದುವೆಯಾದೆ ಅಷ್ಟೇ.. ಬಹಳದಿನ ಅವರ ಮನೆಯಲ್ಲಿ ಇರಬೇಕೂ ಅಂತ ನನಗೆ ಇಷ್ಟ ಇಲ್ಲ.. ನಮ್ಮ ಅತ್ತೆ-ಮಾವ ಸ್ವಲ್ಪ ದಿನ ಇರಿ ಅಂದ್ರು.. ಇದೀನಿ. ಬೇರೆ ಮನೆ ಮಾಡೋವಷ್ಟು ದುಡ್ಡು ಉಳಿಸಿದ ಮೇಲೆ ನನ್ನ ಹೆಂಡತಿಯನ್ನ ಕರೆದುಕೊಂಡು ಹೋಗ್ತೀನಿ..’ ಎಂದು ಹನುಮಂತಯ್ಯ ನಿಜವನ್ನೇ ನುಡಿದರೂ ರಾಜೇಶನಿಗೆ ಅವನ ಮಾತಿನಲ್ಲಿ ನಂಬಿಕೆ ಬರಲಿಲ್ಲ. ಇವನದು ಎಲ್ಲಾ ನಾಟಕ.. ಇರಲಿ ಹೇಗೋ ಕತ್ತೆ ದುಡಿದಂತೆ ದುಡಿಯುತ್ತಾನೆ ಎಂದುಕೊಂಡು ಸದ್ಯಕ್ಕೆ ಸುಮ್ಮನಾದ.
   ರಾಜೇಶ ಕಟ್ಟಡಗಳ ಮೇಲ್ವಿಚಾರಣೆ ನೋಡಿಕೊಂಡು ಆಗಾಗ ಕಚೇರಿಗೆ ಬರುತಿದ್ದ. ಹನುಮಂತಯ್ಯ ಒಬ್ಬನೇ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತಿದ್ದ. ಇದರಿಂದಾಗಿ ರಾಜೇಶನನ್ನು ತಮ್ಮ ಬಿಲ್ಡಿಂಗ್ ಪ್ಲಾನು ಮತ್ತು ಇತರ ಕೆಲಸಗಳಿಗಾಗಿ ಹುಡುಕಿಕೊಂಡು ಬರುತಿದ್ದ ಕ್ಲೈಯಿಂಟುಗಳಿಗೆಲ್ಲಾ ಹನುಮಂತಯ್ಯ ಪರಿಚಿತನಾದ. ಅವನ ಸೌಜನ್ಯಭರಿತ ನಡುವಳಿಕೆಯಿಂದ ಅವರೆಲ್ಲಾ ಅವನೆಡಗೆ ಬೇಗ ಆಕರ್ಷಿತರಾಗುತಿದ್ದರು. ಅವನೊಂದಿಗೆ ಮುಕ್ತವಾಗಿ ಚರ್ಚಿಸುತಿದ್ದರು. ಅವನಿಂದ ಸಲಹೆ ಪಡೆಯುತಿದ್ದರು. ಸಂಶಯಗಳನ್ನು ನಿವಾರಿಸಿಕೊಳ್ಳುತಿದ್ದರು. ಹನುಮಂತಯ್ಯ ತನಗೆ ಕೆಲಸ ಕೊಟ್ಟಿರುವ ಸ್ನೇಹಿತನ ಆದಾಯ ಹೆಚ್ಚಾಗಲಿ ಎಂಬ ಸದುದ್ದೇಶದಿಂದ ಅವರೊಂದಿಗೆ ಬಹಳ ಸಹನೆಯಿಂದ ವ್ಯವಹರಿಸಿ ಕೆಲಸ ಮಾಡಿಕೊಡುತಿದ್ದ. ಮತ್ತೆ ಮತ್ತೆ ಕಟ್ಟಡಗಳ ನಕ್ಷೆಗಳನ್ನು ತಿದ್ದಿಕೊಡುತಿದ್ದ. ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ಅವರನ್ನೆಲ್ಲಾ ನಿಭಾಯಿಸುತಿದ್ದ. ಕೆಲವೊಂದು ತಿಂಗಳುಗಲ್ಲಿಯೇ ರಾಜೇಶನ ಹೆಸರು ಜನರ ಮನದಲ್ಲಿ ಮಾಯವಾಗಿ ಇಂಜಿನಿಯರ್ ಹನುಮಂತಯ್ಯ ಎಂಬುದು ಅವರಿಗೆ ಬಾಯಿಪಾಠವಾಯಿತು. ಒಮ್ಮೊಮ್ಮೆ ರಾಜೇಶ ಕಚೇರಿಯಲ್ಲಿ ಕುಳಿತಿದ್ದಾಗ ಎದುರಿಗಿದ್ದ ಫೋನು ರಿಂಗಣಿಸುತಿತ್ತು. ಅವನು ಕರೆಯನ್ನು ಸ್ವೀಕರಿಸಿದರೆ ‘ಇಂಜನಿಯರ್ ಹನುಮಂತಯ್ಯನೋರು ಬೇಕಾಗಿತ್ತು..’ ಎಂದು ಕೇಳುತಿದ್ದ ಜನರಿಗೆ ರಾಜೇಶ ‘ಏನಾಗಬೇಕಿತ್ತು ಹೇಳ್ರೀ..’ ಎಂದು ಅಸಹನೆಯಿಂದಲೇ ಉತ್ತರಿಸುತಿದ್ದ. ‘ನಾವು ಅವರ ಹತ್ರಾನೇ ಮಾತನಾಡಬೇಕಿತ್ತು.. ಅವರಿಗೆ ಫೋನು ಕೊಡಿ’ ಎಂದು ಫೊನು ಮಾಡಿದವರು ಪಟ್ಟುಹಿಡಿಯುತಿದ್ದುದನ್ನು ಕಂಡು ರಾಜೇಶನ ಮನದಲ್ಲಿ ಹತ್ತಿದ್ದ ಈಷ್ರ್ಯೆಯ ಕಿಡಿ ಬೆಂಕಿಯಾಗಿ ಉರಿಯತೊಡಗಿತು. ಹನುಮಂತಯ್ಯ ಕೆಲಸಕ್ಕೆ ಬಂದ ಮೇಲೆ ರಾಜೇಶನ ಆದಾಯ ಕೆಲವೊಂದು ತಿಂಗಳಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಮುಟ್ಟಿತ್ತು.  ಆದರೂ ಅದನ್ನು ಲೆಕ್ಕಿಸದೆ ಇವನನ್ನು ಹೀಗೆ ಬಿಟ್ಟರೆ ಒಂದಲ್ಲ ಒಂದು ದಿನ ನನಗೇ ಪ್ರತಿಸ್ಪರ್ಧಿಯಾಗಿ ಬೆಳೆದುಬಿಡುತ್ತಾನೆ ಎಂದು ಅವನು ಕೃತ್ರಿಮವಾಗಿ ಆಲೋಚಿಸತೊಡಗಿದ. ಹನುಮಂತಯ್ಯ ಅವನ ಬಳಿ ಕೆಲಸಕ್ಕೆ ಬಂದು ಎಂಟು ತಿಂಗಳಾಗಿತ್ತು. ಎಂಟನೆಯ ತಿಂಗಳಿನ ಕೊನೆಯ ದಿನ ರಾಜೇಶ ಐದು ಸಾವಿರ ರೂಪಾಯಿಗಳನ್ನು ಎಣಿಸಿ ಹನುಮಂತಯ್ಯನ ಕೈಗಿತ್ತು ‘ಹನುಮಂತೂ.. ಏನೂ ಬೇಜಾರು ಮಾಡಿಕೊಳ್ಳಬೇಡ.. ನನಗೆ ಈಗ ಬಿಲ್ಡಿಂಗ್ ಸೂಪರ್‍ವಿಷನ್ ಜಾಸ್ತಿ ಸಿಕ್ತಾ ಇಲ್ಲ.. ಇನ್ನು ಮೇಲೆ ನಾನೇ ಆಫೀಸಿನಲ್ಲಿ ಕುಳಿತು ಕೆಲಸ ಮಾಡ್ತೀನಿ.. ನಾಳೆಯಿಂದ ಕೆಲಸಕ್ಕೆ ಬರಬೇಡ.. ಆಫೀಸಿನ ಕೀ ಕೊಡು..’ ಎಂದು ಹೇಳಿ ಬೀಗದ ಕೀ ಪಡೆದು ಒಂದು ಕ್ಷಣವೂ ಅಲ್ಲಿ ನಿಲ್ಲದೆ ಹೊರಟುಹೋದವನನ್ನು ಕಂಡು ಹನುಮಂತಯ್ಯನಿಗೆ ನಾನು ಏನು ತಪ್ಪು ಮಾಡಿದೆ ಎಂದು ತಿಳಿಯದೆ ಅತೀವ ದುಃಖವಾಯಿತು. ಅವನ ಕಣ್ಣುಗಳಲ್ಲಿ ಕಣ್ಣೀರು ಬುಳಬುಳನೆ ಹರಿಯತೊಡಗಿದವು. ಅವನು ಬಿಕ್ಕಿ ಬಿಕ್ಕಿ ಅಳತೊಡಗಿದ. ಮೊದಲ ಕೆಲಸ ಹೋದಾಗಲೂ ಅವನಿಗೆ ಹೀಗೆ ದುಃಖವಾಗಿರಲಿಲ್ಲ. ಕಣ್ಣುಗಳಲ್ಲಿ ನೀರು ಇಳಿದಿರಲಿಲ್ಲ.
   ನಿಧಾನವಾಗಿ ನಡೆದುಕೊಂಡು ರಸ್ತೆಯ ಬಳಿ ಬಂದ. ಸಿಟಿಬಸ್ಸು ಹತ್ತಲೂ ಬೇಸರವಾಯಿತು. ರಸ್ತೆಯಲ್ಲಿ ನಡೆದುಕೊಂಡೇ ಮನೆಯ ಕಡೆ ಹೊರಟ. ಮನೆಯಲ್ಲಿ ಹೆಂಡತಿ ತುಂಬುಗರ್ಭಿಣಿ. ಅವಳಿಗೆ ವಿಷಯ ತಿಳಿದರೆ ಏನಾದರೂ ಆಘಾತವಾದೀತು ಎಂಬ ಭೀತಿ ಅವನನ್ನು ಕಾಡತೊಡಗಿತು. ಅವಳಿಗೆ ವಿಷಯ ತಿಳಿಸುವುದು ಬೇಡವೆಂದು ನಿರ್ಧರಿಸಿಕೊಂಡ. ಮನೆಯನ್ನು ಹೇಗೆ ತಲುಪಿದೆನೆಂದು ಅವನಿಗೆ ತಿಳಿಯಲಿಲ್ಲ. ಮನೆ ತಲುಪಿದಾಗ ರಾತ್ರಿ ಹತ್ತು ಗಂಟೆಯಾಗಿದ್ದಿತು. ಹೊರಗಿನ ದೀಪ ಹಾಕಿಕೊಂಡು ಸುಮಿತ್ರಾ ಹಾಲಿನಲ್ಲಿ ಕುಳಿತಿದ್ದಳು. ಗಂಡನ ಬಸವಳಿದ ಮುಖ ಕಂಡು ಗಾಬರಿಯಾಗಿ ಏನಾಯಿತೆಂದು ವಿಚಾರಿಸಿದಳು. ‘ಏನು ಇಲ್ಲಾ.. ಆಫೀಸಿನಲ್ಲಿ ತುಂಬಾ ಕೆಲಸ.. ಸ್ವಲ್ಪ ತಲೆನೋಯುತ್ತಿದೆ.. ಊಟ ಬೇಡ..’ ಎಂದು ಉತ್ತರಿಸಿ ರೂಮಿನ ಕಡೆ ತೆರಳಿದ. ಸುಮಿತ್ರಾ, ‘ಸ್ವಲ್ಪ ಊಟ ಮಾಡಿ.. ಹಸಿದುಕೊಂಡು ಮಲಗಬಾರದು..’ ಎಂದು ಕಾಳಜಿ ತೋರಿದಳು. ಊಟದ ಶಾಸ್ತ್ರ ಮುಗಿಸಿ ಸುಮಿತ್ರಾ ಕೊಟ್ಟ ತಲೆನೋವಿನ ಮಾತ್ರೆ ನುಂಗಿ ಹಾಸಿಗೆಯಲ್ಲಿ ಮಲಗಿದವನಿಗೆ ನಿದ್ರೆ ಹತ್ತಿರವೂ ಸುಳಿಯಲಿಲ್ಲ. ಪಕ್ಕದಲ್ಲಿ ಮಲಗಿದ್ದ ಹೆಂಡತಿಗೆ ತೊಂದರೆಯಾದೀತೆಂದು ಹಾಸಿಗೆಯಲ್ಲಿ ಮಗ್ಗಲೂ ಕೂಡ ಬದಲಾಯಿಸದೆ ನಿಶ್ಯಬ್ದವಾಗಿ ಮಲಗಿದ್ದ.
   ಮರುದಿನ ಎಂದಿನಂತೆ ಸಿದ್ಧನಾಗಿ ತಿಂಡಿ ತಿಂದು ಆಫೀಸಿಗೆ ಹೋಗಿಬರುತ್ತೇನೆ ಎಂದು ಹೇಳಿ ಹೊರಟ. ಎಲ್ಲಿಗೆ ಹೋಗುವುದೆಂದು ತಿಳಿಯಲಿಲ್ಲ. ಸುಮ್ಮನೆ ಸುತ್ತಾಡಿಕೊಂಡು ಅಲ್ಲೇ ಹತ್ತಿರವಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ ಅಂದಿನ ದಿನಪತ್ರಿಕೆಗಳನ್ನು ತಿರುವಿಹಾಕಿದ. ಉದ್ಯೋಗ ಜಾಹೀರಾತುಗಳ ಪುಟಗಳ ಮೇಲೆ ಕಣ್ಣಾಡಿಸಿದ. ಆನಂತರ ಅಲ್ಲಿಂದ ಎದ್ದು ತುಸು ದೂರದಲ್ಲಿದ್ದ ಪಾರ್ಕಿನಲ್ಲಿ ಸುಮ್ಮನೆ ಕುಳಿತುಕೊಂಡ. ಮಧ್ಯಾಹ್ನದ ಊಟವನ್ನೂ ಮಾಡಲಿಲ್ಲ. ಸಂಜೆಯಾದ ನಂತರ ಮನೆಗೆ ವಾಪಾಸಾದ. ಇದು ಮುಂದಿನ ಎರಡು ವಾರಗಳ ಕಾಲ ಅವನ ದಿನಚರಿಯಾಯಿತು. ಅವನು ಪ್ರತಿದಿನ ಮನೆಯಲ್ಲಿ ತನ್ನ ಹೆಂಡತಿ ಮತ್ತು ಅತ್ತೆಗೆ ಯಾವುದೇ ಸಂಶಯ ಬರದಂತೆ ಮುಖದಲ್ಲಿ ಹುಸಿಮಂದಹಾಸ ತುಂಬಿಕೊಂಡು ಇರುತಿದ್ದ. ಕೆಲವೊಂದು ದಿನಗಳಲ್ಲಿ ಯಾವುದೋ ಸಿಟಿಬಸ್ಸು ಹತ್ತಿ ಕೊನೆಯ ನಿಲ್ದಾಣದವರೆಗೂ ಹೋಗಿ ವಾಪಾಸು ಬಂದು ಮತ್ತೆಲ್ಲಿಯೋ ನಿಂತುಕೊಳ್ಳುತಿದ್ದ. ಕೆಲವೊಮ್ಮೆ ತನಗೆ ರಾಜೇಶನ ಆಫೀಸಿನಲ್ಲಿ ಕೆಲಸ ಮಾಡಿದ ಅನುಭವದಿಂದ ಅದೇ ವೃತ್ತಿಯನ್ನು ಪ್ರಾರಂಭಿಸೋಣ ಎನಿಸಿದರೂ, ಆಫೀಸು ರೂಮಿನ ಮುಂಗಡ ಹಣ, ಬಾಡಿಗೆ, ಇತರ ಖರ್ಚುಗಳನ್ನು ನೆನೆದು ಹೆದರಿಕೆಯಾಗುತಿತ್ತು. ಅದೂ ಅಲ್ಲದೆ ವೃತ್ತಿಯಲ್ಲಿ ನೆಲೆನಿಂತು ಹಣ ಸಂಪಾದಿಸಲು ಎಷ್ಟು ಸಮಯ ಬೇಕೋ ಅಥವಾ ಅದರಲ್ಲಿ ನಾನು ಯಶಸ್ಸು ಗಳಿಸದೇ ಹೋದರೆ ಇರುವ ಹಣವನ್ನೂ ಕಳೆದುಕೊಳ್ಳಬೇಕಾದೀತು ಎಂಬ ವೈಫಲ್ಯದ ಭಯ ಅವನನ್ನು ಕಾಡುತಿತ್ತು.
   ಅಷ್ಟು ಹೊತ್ತಿಗಾಗಲೇ ಬೆಂಗಳೂರೆಂಬ ಮಹಾನಗರವು ಸಾಫ್ಟವೇರ್ ಉದ್ಯಮಗಳಿಂದ ತುಂಬಿಕೊಂಡು ಸಿಲಿಕಾನ್ ಸಿಟಿಯಾಗಿ ಮಾರ್ಪಾಡಾಗಿತ್ತು. ವಿದೇಶಗಳಿಂದ ಹರಿದು ಬರುತಿದ್ದ ಹಣ ಬೆಂಗಳೂರು ನಗರದ ಭವಿಷ್ಯವನ್ನು ಬದಲಾಯಿಸತೊಡಗಿತು. ರಿಯಲ್ ಎಸ್ಟೇಟ್ ಮತ್ತು ಮೂಲ ಸೌಕರ್ಯ ಉದ್ಯಮಗಳಿಗೆ ಇನ್ನಿಲ್ಲದ ಪ್ರಾಮುಖ್ಯತೆ ಒದಗಿಬರತೊಡಗಿತು. ಸಿವಿಲ್ ಎಂಜನಿಯರುಗಳಿಗೆ, ಆರ್ಕಿಟೆಕ್ಟುಗಳಿಗೆ, ಸಾಧಾರಣ ಕೂಲಿ ಕಾರ್ಮಿಕರಿಗೂ ಬೇಡಿಕೆ ಹೆಚ್ಚಾಗತೊಡಗಿತು. ಇದು ಹನುಮಂತಯ್ಯನೆಂಬ ಒಬ್ಬ ದಡ್ಡ ಸಿವಿಲ್ ಎಂಜನಿಯರನ ಹಣೆಯಬರಹವನ್ನೂ ಬದಲಾಯಿಸಿತು.
                                                             (ಮುಂದುವರಿಯುವುದು...)