ವಿದಾಯ‌(ನೀಳ್ಗತೆ)‍ 4

ವಿದಾಯ‌(ನೀಳ್ಗತೆ)‍ 4

       ಅದೊಂದು ದಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಕುಳಿತು ಅಂದಿನ ದಿನಪತ್ರಿಕೆಯ ಜಾಹಿರಾತು ವಿಭಾಗದಲ್ಲಿ ಕಣ್ಣಾಡಿಸುತಿದ್ದ ಹನುಮಂತಯ್ಯನಿಗೆ ಒಂದು ಉದ್ಯೋಗ ಜಾಹೀರಾತು ಕಣ್ಣಿಗೆ ಬಿದ್ದಿತು.  ಸಣ್ಣ ಗಾತ್ರದ ರಸ್ತೆ ನಿರ್ಮಾಣ ಕಂಪೆನಿಗೆ ಸೈಟ್ ಎಂಜನಿಯರಾಗಿ ಕೆಲಸ ಮಾಡಲು ಸಿವಿಲ್ ಎಂಜನಿಯರ್ ಒಬ್ಬರು ಬೇಕಾಗಿದ್ದಾರೆ. ಅಭ್ಯರ್ಥಿಗಳು ಕಂಪೆನಿಯು ರಸ್ತೆ ನಿರ್ಮಿಸುತ್ತಿರುವ ಬೇರೆ ಬೇರೆಯ ಸ್ಥಳಗಳಲ್ಲಿ ಕೆಲಸ ಮಾಡಬೇಕಾಗುತ್ತದೆ.  ರಸ್ತೆ ನಿರ್ಮಾಣ ಕ್ಷೇತ್ರದಲ್ಲಿ ಒಂದು ಅಥವಾ ಎರಡು ವರ್ಷಗಳ ಅನುಭವ ಆಪೇಕ್ಷಣೀಯ. ಕಠಿಣ ಪರಿಶ್ರಮದಿಂದ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಮತ್ತು ಉತ್ತಮ ಸಂಬಳ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಕಂಪೆನಿಯಲ್ಲಿ ಕನಿಷ್ಠ ಐದು ವರ್ಷಗಳ ಸೇವೆ ಸಲ್ಲಿಸುವ ಬಾಂಡ್ ಜೊತೆಗೆ ಎಲ್ಲಾ ಮೂಲದಾಖಲೆಗಳನ್ನು ನೀಡಬೇಕು. ಆಸಕ್ತ ಅಭ್ಯರ್ಥಿಗಳು ನೇರವಾಗಿ ಕೆಳಗಿನ ವಿಳಾಸದಲ್ಲಿರುವ ಕಂಪೆನಿಯ ಮುಖ್ಯ ಕಛೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು.
   ಜಾಹೀರಾತನ್ನು ಪದೇ ಪದೇ ಓದಿದ ಹನುಂತಯ್ಯನ ಮನಸ್ಸಿನಲ್ಲಿ ಯಾವುದೋ ಆತ್ಮವಿಶ್ವಾಸ ಮೂಡತೊಡಗಿತು. ಆದರೂ ರಸ್ತೆ ನಿರ್ಮಾಣ ಕ್ಷೇತ್ರದಲ್ಲಿ ನನಗೆ ಯಾವುದೇ ಅನುಭವವಿಲ್ಲವೆಂಬುದನ್ನು ನೆನೆದು ಕೊಂಚ ನಿರಾಸೆಯಾದರೂ ಕಟ್ಟಡ ನಿರ್ಮಾಣ ಕಂಪೆನಿಯಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದ್ದೇನಲ್ಲ.. ಅದೂ ಅಲ್ಲದೆ ಅನುಭವ ಆಪೇಕ್ಷಣೀಯ ಮಾತ್ರ ಎನಿಸಿ ತುಸು ನಿರಾಳವಾಯಿತು. ಕಷ್ಟಪಟ್ಟು ಕೆಲಸ ಮಾಡುತ್ತೇನೆ ಎಂದು ಬೇಡಿಕೊಂಡು ಈ ಕೆಲಸ ಪಡೆದುಕೊಳ್ಳಬೇಕು ಎಂದು ನಿರ್ಧರಿಸಿದವನು ತಡಮಾಡಲಿಲ್ಲ. ಮರುದಿನ ಬೆಳಿಗ್ಗೆ ಉತ್ತಮ ಉಡುಪು ಧರಿಸಿ, ಹೆಂಡತಿಗೆ ತಿಳಿಯದಂತೆ ತನ್ನ ದಾಖಲೆಗಳನ್ನು ಬೆನ್ನಿಗೆ ತಗಲು ಹಾಕಿಕೊಳ್ಳುವ ಬ್ಯಾಗಿನಲ್ಲಿ ಇಟ್ಟುಕೊಂಡು ಜಾಹೀರಾತಿನಲ್ಲಿದ್ದ ವಿಳಾಸವನ್ನು ಹುಡುಕಿಕೊಂಡು ಹೊರಟ.
   ಅದೊಂದು ದೊಡ್ಡ ದೊಡ್ಡ ಬಹುದೇಶಿ ರಸ್ತೆ ನಿರ್ಮಾಣ ಕಂಪೆನಿಗಳಿಂದ ಉಪಗುತ್ತಿಗೆ ಪಡೆದು ರಸ್ತೆಗಳನ್ನು ನಿರ್ಮಿಸುವ ಸಣ್ಣ ಗಾತ್ರದ ಕಂಪನಿಯಾಗಿತ್ತು. ಅದರ ಎಲ್ಲಾ ವ್ಯವಹಾರ ವಹಿವಾಟುಗಳನ್ನು ಅದರ ಮಾಲೀಕರೇ ನೋಡಿಕೊಳ್ಳುತಿದ್ದರು. ಹೆಚ್ಚಿನ ಸಿಬ್ಬಂದಿಗಳಿರದೆ ಬಹುತೇಕ ನಿರ್ಮಾಣ ಕೆಲಸಗಳನ್ನು ಯಂತ್ರಗಳ ಮೂಲಕವೇ ನಡೆಸಲಾಗುತಿತ್ತು. ಆ ಕಂಪೆನಿಯಲ್ಲಿ ಪ್ಲಾನಿಂಗ್ ಮತ್ತು ಡಿಸೈನ್ ವಿಭಾಗದಲ್ಲಿ ನುರಿತ ಎಂಜನಿಯರುಗಳಿದ್ದರು. ಆದರೆ ರಸ್ತೆ ನಿರ್ಮಾಣದ ಸ್ಥಳದಲ್ಲಿ ಸೈಟ್ ಎಂಜನಿಯರುಗಳಾಗಿ ನೇಮಕಗೊಂಡವರು ಏನೊಂದೂ ಕಾರಣ ನೀಡದೆ ಕೆಲವೇ ತಿಂಗಳುಗಳಲ್ಲಿ ಕೆಲಸವನ್ನು ಬಿಟ್ಟು ಹೋಗುತಿದ್ದರು. ಇದು ಕಂಪೆನಿಯ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಆದುದರಿಂದ ಈ ಬಾರಿ ಉತ್ತಮ ಅಂಕ ಗಳಿಸಿದ ಮೇಧಾವಿ ಅಭ್ಯರ್ಥಿಗಳಿಗೆ ಕೆಲಸ ನೀಡಬಾರದು, ಒಬ್ಬ ಸಾಮಾನ್ಯ ಅಭ್ಯರ್ಥಿಯನ್ನು ನೇಮಕ ಮಾಡಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದು ನೇಮಕಾತಿ ನಿಯಮಗಳನ್ನು ಬಿಗಿಗೊಳಿಸಿದ್ದರು. 
   ಹನುಮಂತಯ್ಯ ಸಂದರ್ಶನಕ್ಕಾಗಿ ಕಂಪೆನಿಯ ಮಾಲೀಕರ ಎದಿರು ಕುಳಿತಾಗ ಅವನ ದೇಹವೆಲ್ಲಾ ಸಣ್ಣದಾಗಿ ಕಂಪಿಸುತಿತ್ತು. ಧ್ವನಿ ಕ್ಷೀಣವಾಗಿತ್ತು. ಮಾಲೀಕರೇ ಅವನಿಗೆ ಧೈರ್ಯ ತುಂಬಿ ಅವನ ದಾಖಲೆಗಳೆಲ್ಲವನ್ನೂ ಪರಿಶೀಲಿಸಿದರು. ಅವನ ಹಿನ್ನೆಲೆಯ ಬಗ್ಗೆ, ಅವನು ಈ ಹಿಂದೆ ಕೆಲಸ ಮಾಡಿದ ಅನುಭವದ ಬಗ್ಗೆ ವಿಚಾರಿಸಿಕೊಂಡರು. ಹನುಮಂತಯ್ಯ ಪ್ರಾಮಾಣಿಕವಾಗಿ ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ತಿಳಿಸಿದ. ಮುಂದೆ ಕುಳಿತಿರುವ ಯುವಕ ಮದುವೆಯಾಗಿದ್ದಾನೆ.. ಕೆಲಸದ ಅನಿವಾರ್ಯತೆಯಿದೆ.. ಕಷ್ಟಪಟ್ಟು ಕೆಲಸ ಮಾಡುವ ಗುಣಗಳು ಅವನಲ್ಲಿ ಕಾಣಿಸುತ್ತಿವೆ.. ದಾಖಲೆಗಳನ್ನು ನೋಡಿದರೆ ಮತ್ತೆಲ್ಲೂ ಉತ್ತಮ ಕೆಲಸಗಳು ಸಿಗಲಾರವು.. ಎಂಬುದು ಮಾಲೀಕರಿಗೆ ದೃಢವಾಯಿತು. ಹನುಮಂತಯ್ಯನನ್ನು ಅವರು ಆಯ್ಕೆ ಮಾಡಲು ಸಿದ್ಧರಾಗಿ ‘ಸಂಬಳ ಎಷ್ಟು ನಿರೀಕ್ಷಿಸುವಿರಿ..’ ಎಂದು ಸೂಕ್ಷ್ಮವಾಗಿ ಕೇಳಿದರು. ಹನುಮಂತಯ್ಯನಿಗೆ ಸಂದರ್ಶನ ನಡೆದ ಪರಿಯನ್ನು ಗಮನಿಸಿ ಕೆಲಸ ಸಿಗುವುದು ಖಾತ್ರಿಯಾಗಿತ್ತು. ಹೆಚ್ಚು ಸಂಬಳ ಕೇಳಿದರೆ ಕೆಲಸ ನೀಡದೇ ಹೋಗಬಹುದು ಎಂಬ ಭೀತಿಯಿಂದ ‘ನಾನು ಈ ಹಿಂದೆ ಕೆಲಸ ಮಾಡುತಿದ್ದ ಕಛೇರಿಯಲ್ಲಿ ಐದು ಸಾವಿರ ಸಂಬಳ ಸಿಗುತಿತ್ತು.. ಅಷ್ಟು ಕೊಟ್ಟರೆ ಸಾಕು..’ ಎಂದು ಕ್ಷೀಣದನಿಯಲ್ಲಿ ಉತ್ತರಿಸಿದ. ಮಾಲೀಕರು ಮುಗುಳ್ನಗುತ್ತಾ ‘ಕಂಪೆನಿಯು ಹತ್ತು ಸಾವಿರ ಸಂಬಳ ನೀಡುತ್ತದೆ. ಕಷ್ಟಪಟ್ಟು ಕೆಲಸ ಮಾಡಬೇಕು.. ಕೆಲಸ ಬಿಟ್ಟರೆ ನೀವು ಕೊಡುವ ಬಾಂಡಿನಲ್ಲಿರುವ ಮೊತ್ತವನ್ನು ಕಂಪೆನಿಗೆ ಕಟ್ಟಿಕೊಡಬೇಕು..’ ಎಂದು ಎಚ್ಚರಿಸಿದರು. ಹನುಮಂತಯ್ಯನಿಗೆ ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. ಹತ್ತು ಸಾವಿರ ಅಂದು ಸರ್ಕಾರಿ ಅಥವಾ ಖಾಸಗಿ ಕಂಪೆನಿಯಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ್ದ ಎಲ್ಲಾ ಪ್ರತಿಭಾವಂತ ಸಿವಿಲ್ ಎಂಜನಿಯರರು ಗಳಿಸುತಿದ್ದ ಸಂಬಳವಾಗಿತ್ತು!
   ಕೆಲಸಕ್ಕೆ ವರದಿ ಮಾಡಿಕೊಂಡ ಹನುಮಂತಯ್ಯನನ್ನು ಬೆಂಗಳೂರಿನಲ್ಲಿಯೇ ಪುನರ್ ನಿರ್ಮಾಣವಾಗುತಿದ್ದ ರಸ್ತೆಯ ಕಾಮಗಾರಿಯನ್ನು ನೋಡಿಕೊಳ್ಳಲು ನೇಮಿಸಲಾಯಿತು. ಹೊಸ ಕೆಲಸ, ಕೈತುಂಬಾ ಸಂಬಳದ ನಿರೀಕ್ಷೆಯಲ್ಲಿ ಅವನು ಭವಿಷ್ಯದ ಬಗೆಗೆ ಏನೇನೋ ಕನಸುಗಳನ್ನು ಹೆಣೆದುಕೊಂಡು ತನ್ನ ಜವಾಬ್ದಾರಿಯನ್ನು ಕಿಂಚಿತ್ತೂ ಲೋಪದೋಷಗಳಿಲ್ಲದಂತೆ ನಿರ್ವಹಿಸಬೇಕೆನ್ನುವ ಹಂಬಲದಿಂದ ಪ್ರತಿದಿನವೂ ಹೆಚ್ಚಿನ ಶ್ರದ್ಧೆಯಿಂದ ಕೆಲಸದ ಮೇಲೆ ನಿಗಾವಹಿಸಿ ಕೆಲವೇ ದಿನಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯ ತಾಂತ್ರಿಕ ಅಂಶಗಳನ್ನು ಮನದಟ್ಟು ಮಾಡಿಕೊಂಡ.
   ಕೈತುಂಬಾ ಸಂಬಳ ತರುವ ಹೊಸ ಕೆಲಸದಿಂದಾಗಿ ಅವನಿಗೆ ಮನೆಯಲ್ಲಿಯೂ ಹೆಚ್ಚಿನ ಮನ್ನಣೆ ದೊರೆಯತೊಡಗಿತು. ಹತ್ತು ಸಾವಿರ ಸಂಬಳದ ಕೆಲಸ ಸಿಕ್ಕದೆ.. ನನ್ನ ಹಳೆಯ ಕೆಲಸವನ್ನು ಬಿಟ್ಟುಬಿಟ್ಟೆ ಎಂದು ತನ್ನ ಸಂತಸವನ್ನು ಹೆಂಡತಿಯೊಂದಿಗೆ ಹಂಚಿಕೊಂಡ ಹನುಮಂತಯ್ಯನ ಮಾತಿಗೆ ಅಷ್ಟು ಸಂಬಳದ ಮೊತ್ತವನ್ನು ನಿರೀಕ್ಷಿಸಿರದ ಸುಮಿತ್ರಾಳಿಗೆ ತನ್ನ ಗಂಡನ ಮಾತಿನ ಮೇಲೆ ಮೊದಮೊದಲು ನಂಬಿಕೆಯುಂಟಾಗಲಿಲ್ಲ. ‘ಅಷ್ಟೊಂದು ಸಂಬಳ ನಿಮಗೆ ಯಾರ್ರೀ ಕೊಡುತ್ತಾರೆ..’ ಎಂದು ನಗುತ್ತಲೇ ಕೇಳಿದ್ದಳು. ಹನುಮಂತಯ್ಯ ಮೊದಲ ಸಂಬಳ ಬಂದ ನಂತರ ಅದರ ವಿವರವಿದ್ದ ಟೈಪಿಸಿದ ಪಟ್ಟಿಯನ್ನು ತಂದು ತನ್ನ ಹೆಂಡತಿಗೆ ತೋರಿಸಿದಾಗ ಸುಮಿತ್ರಾಳಿಗೆ ಆಕಾಶವೇ ಕೈಗೆಟುಕಿದಂತಾಯಿತು. ಮಹಾಲಕ್ಷ್ಮಮ್ಮನವರಿಗೂ ತನ್ನ ಅಳಿಯ ಎಲ್ಲರಂತೆ ಒಳ್ಳೆಯ ಕೆಲಸದಲ್ಲಿ ಸೆಟಲ್ ಆದ ಎಂದು ಸಂತೋಷವಾಯಿತು. ಸುಮಿತ್ರಾಳಿಗೆ ಆಗುತಿದ್ದ ಅಪರಿಮಿತ ಆನಂದಕ್ಕೆ ಜೊತೆಯಾಗಿ ಅಂದು ರಾತ್ರಿ ಅವಳಿಗೆ ಹೆರಿಗೆಯ ನೋವೂ ಕಾಣಿಸಿಕೊಂಡಿತು. ಮರುದಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅವಳು ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿದಳು. ಮಗುವನ್ನು ನೋಡಿದ ಹನುಮಂತಯ್ಯನಿಗೆ ಇನ್ನಿಲ್ಲದ ಹರ್ಷವಾಯಿತು. ನಾನು ತಂದೆಯಾಗುವುದರ ಒಳಗಾಗಿ ದೇವರು ನನಗೆ ಒಂದು ಒಳ್ಳೆಯ ಉದ್ಯೋಗವನ್ನು ಕರುಣಿಸಿದ ಎಂದು ಕಾಣದ ದೇವರಿಗೆ  ಮನದಲ್ಲಿಯೇ ಕೃತಜ್ಞತೆ ಸಲ್ಲಿಸಿದ.
   ಮಗುವಿಗೆ ಆರು ತಿಂಗಳು ತುಂಬಿದ ನಂತರ ಹನುಮಂತಯ್ಯನಿಗೆ ಬೇರೆ ಮನೆ ಮಾಡಿ ತನ್ನ ಸಂಸಾರ ಪ್ರಾರಂಭಿಸಲು ಸಕಾಲವೆಂದು ಅನಿಸತೊಡಗಿತು. ಬಾಡಿಗೆ ಮನೆಯ ಮುಂಗಡ ಹಣ, ಹೊಸದಾಗಿ ಸಂಸಾರ ಹೂಡಲು ಬೇಕಾದ ಸಾಮಾನು ಸರಂಜಾಮುಗಳಿಗೆ ಸಾಕಾಗುವಷ್ಟು ಹಣ ಕೈಯ್ಯಲ್ಲಿತ್ತು. ರಾಜೇಶನ ವ್ಯಂಗ್ಯ ಮಾತುಗಳು ಪದೇ ಪದೇ ಅವನ ಮನಸ್ಸಿನಲ್ಲಿ ಕೊರೆಯುತಿದ್ದವು. ಅದೂ ಅಲ್ಲದೆ ತನ್ನ ನಾದಿನಿಯರು, ಷಡ್ಡುಕಂದಿರು ಯಾವಾಗಲಾದರೂ ಮನೆಗೆ ಬಂದಾಗ, ಹಬ್ಬಹರಿದಿನಗಳಲ್ಲಿ ಒಟ್ಟಿಗೆ ಸೇರಿದಾಗ ಅವನನ್ನು ಮನೆಯ ಅಳಿಯ, ಪರಾವಲಂಬಿ ಎಂಬಂತೆಯೇ ಉದಾಸೀನದಿಂದ ನೋಡುತಿದ್ದರಲ್ಲದೆ ಇತರರೊಂದಿಗೆ ಮಾತನಾಡುವಾಗ ಅವರು ತೋರುತಿದ್ದ ಗೌರವಾದರಗಳನ್ನು ಅವನೆಡೆಗೆ ತೋರದೆ ಕಡೆಗಣಿಸುತಿದ್ದರು. ಆಗೆಲ್ಲಾ ಅವನಿಗೆ ತೀವ್ರ ಬೇಸರವಾಗುತಿದ್ದರೂ ಅದನ್ನು ತೋರ್ಪಡಿಸಿಕೊಳ್ಳದೆ ಅವರೆಲ್ಲರೊಂದಿಗೆ ವಿನಯದಿಂದಲೇ ನಡೆದುಕೊಳ್ಳುತಿದ್ದ. ಇದರಿಂದಾಗಿ ಎಂದಾದರೊಂದು ದಿನ ಸ್ವಂತ ಕೌಟುಂಬಿಕ ನೆಲೆಯನ್ನು ಸ್ಥಾಪಿಸಿಕೊಂಡು ತನ್ನತನವನ್ನು ಉಳಿಸಿಕೊಳ್ಳಬೇಕು ಎಂದು ಸೂಕ್ತ ಸಮಯಕ್ಕಾಗಿ ಅವನು ಕಾಯತೊಡಗಿದ್ದ. ನಾವು ಬೇರೆ ಮನೆ ಮಾಡಿದರೆ ನಮ್ಮ ಅತ್ತೆ ಒಂಟಿಯಾಗುತ್ತಾರೆ ಎಂಬ ಚಿಂತೆಯೂ ಅವನನ್ನು ಕಾಡುತಿತ್ತು.
   ಆದರೂ ಒಂದು ದಿನ ರಾತ್ರಿ ಧೈರ್ಯ ಮಾಡಿ ತನ್ನ ಹೆಂಡತಿಯೊಂದಿಗೆ ಏಕಾಂತದಲ್ಲಿದ್ದಾಗ, ಅವಳೊಂದಿಗೆ ಬೇರೆ ಮನೆ ಮಾಡುವ ವಿಷಯವನ್ನು ಪ್ರಸ್ತಾಪಿಸಿದ. ಸುಮಿತ್ರಾಳಿಗೆ ತಟ್ಟನೆ ಉತ್ತರಿಸಲು ಸಾಧ್ಯವಾಗದೇ ತುಸುಹೊತ್ತು ಆಲೋಚನಾಮಗ್ನಳಾದಳು.
   ಬೆಂಗಳೂರಿನಲ್ಲಿಯೇ ಇದ್ದ ಅವಳ ಮೂರನೆಯ ಅಕ್ಕ ಪರಿಮಳ ತಾಯಿಯನ್ನು ನೋಡಲೆಂದು ಆಗಾಗ ಬರುತಿದ್ದಳು. ಹಾಗೆ ಬಂದಾಗ ಒಮ್ಮೊಮ್ಮೆ ಸುಮಿತ್ರಾಳನ್ನು ಕಂಡು ‘ನೀನೇ ಲಕ್ಕೀ ಕಣೇ ಸುಮೀ.. ಅಮ್ಮ ಅಡುಗೆ ಮಾಡುತ್ತಾರೆ.. ಮುನಿಯಮ್ಮ ಮನೆ ಕೆಲಸ ಮಾಡುತ್ತಾಳೆ.. ಅತ್ತೆ ಮಾವನ ಕಾಟವೂ ಇಲ್ಲ.. ಮಗು ಸಾಕಿಕೊಂಡು ರಾಣಿಯಂತಿರಬಹುದು.. ನನ್ನನ್ನ ನೋಡು ಬೆಳಿಗ್ಗೆ ಎದ್ದರೆ ಅಡುಗೆ ಮಾಡಿ ಗಂಡನಿಗೆ ಅತ್ತೆ ಮಾವಂದಿರಿಗೆ ಬಡಿಸಬೇಕು.. ಮಕ್ಕಳನ್ನೂ ನೋಡಿಕೊಳ್ಳಬೇಕು.. ಒಂದು ನಿಮಿಷ ಪುರುಸೊತ್ತು ಇರುವುದಿಲ್ಲ.. ನನ್ನ ಕರ್ಮ’ ಎಂದು ಹೊಟ್ಟೆಕಿಚ್ಚಿನಿಂದ ಹಲುಬುತಿದ್ದಳು. ಕೆಲವೊಮ್ಮೆ ‘ನಿಮ್ಮ ಯಜಮಾನರಿಗೆ ಈಗ ಒಳ್ಳೆಯ ಸಂಬಳವಂತೆ.. ಇಲ್ಲಿ ಖರ್ಚೂ ಕಡಿಮೆ.. ಅಮ್ಮನೇ ಎಲ್ಲಾ ನಿಭಾಯಿಸುತ್ತಾರೆ.. ಚೆನ್ನಾಗಿ ಉಳಿತಾಯ ಮಾಡಬಹುದು ಬಿಡು..’ ಎಂದು ಹಂಗಿಸುತಿದ್ದಳು. ಸುಮಿತ್ರಾಳಿಗೆ ಅಗಾಧವಾದ ಸಿಟ್ಟು ಬಂದರೂ ಅದನ್ನು ಹೊರಹಾಕದೆ ಹುಸಿಮುಗುಳ್ನಗು ನಕ್ಕು ಸುಮ್ಮನಾಗುತಿದ್ದಳು. ಇದನ್ನೆಲ್ಲಾ ಆಲೋಚಿಸಿದ ಸುಮಿತ್ರಾಳಿಗೂ ತನ್ನ ಗಂಡನ ನಿರ್ಧಾರ ಸರಿಯೆನ್ನಿಸಿತು. ಬೆಳಿಗ್ಗೆಯೇ ಎದ್ದು ತನ್ನ ತಾಯಿಗೆ ವಿಷಯ ತಿಳಿಸಿದಳು.
   ಮಗಳು ತಿಳಿಸಿದ ವಿಷಯದಿಂದ ಮಹಾಲಕ್ಷ್ಮಮ್ಮನವರಿಗೆ ಅತೀವ ಬೇಸರವಾಯಿತು. ಅಳಿಯ ಮತ್ತು ಮಗಳನ್ನು ಎದುರಿಗೆ ಕೂರಿಸಿಕೊಂಡು ‘ಈ ಮನೆಯಲ್ಲಿ ನನ್ನನ್ನು ಬಿಟ್ಟು ಬೇರೆ ಯಾರಿದ್ದಾರೆ.. ಇದು ನಿಮ್ಮದೇ ಮನೆಯಲ್ಲವೇ.. ಅವರು ಇದ್ದಾಗಲೇ ಈ ಮನೆಯನ್ನು ನಿಮಗೆ ಕೊಡಬೇಕೆಂದು ನಿರ್ಧರಿಸಿಕೊಂಡಿದ್ದೇವೆ.. ನಾನು ಇರುವವರೆಗೆ ನನ್ನ ಜೊತೆಯೇ ಇರಿ.. ನನಗೂ ಒಂದು ಆಸರೆಯಾಗುತ್ತದೆ..’ ಎಂದು ಅಲವತ್ತುಕೊಂಡರು. ಹನುಮಂತಯ್ಯನಿಗೆ ಏನು ಹೇಳಬೇಕೆಂದು ತಿಳಿಯದೇ ಮನಸ್ಸಿನಲ್ಲಿ ಗೊಂದಲ ಶುರುವಾಯಿತು. ಆದರೂ ಸ್ವಲ್ಪ ಹೊತ್ತು ಸುಮ್ಮನಿದ್ದು ‘ಅತ್ತೆಯವರೇ ನಿಮ್ಮ ಮಾತಿಗೆ ಎದುರಾಡುವಷ್ಟು ನಾನು ದೊಡ್ಡವನಲ್ಲ. ಈ ಮನೆಯ ಬಗ್ಗೆ ನಾನು ಎಂದೂ ಯೋಚಿಸಿದವನಲ್ಲ.. ನನ್ನ ಹೆಂಡತಿ ಮತ್ತು ಮಗುವನ್ನು ಸಾಕಬೇಕು, ನಮ್ಮದೇ ಸಂಸಾರವಾಗಬೇಕು ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಉದ್ದೇಶವೂ ನನಗಿಲ್ಲ. ನೀವು ಒಂಟಿಯಾಗುತ್ತೀರಿ ಎಂಬುದನ್ನು ಯೋಚಿಸಿಯೇ ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ನಾವು ನಿಮ್ಮನ್ನು ಬಿಟ್ಟು ಎಲ್ಲೂ ದೂರ ಹೋಗುವುದಿಲ್ಲ. ಇಲ್ಲೇ ಹತ್ತಿರದಲ್ಲಿ ಒಂದು ಬಾಡಿಗೆ ಮನೆ ಮಾಡಿಕೊಳ್ಳುತ್ತೇವೆ. ಕಷ್ಟಸುಖಗಳಿಗೆ ನೀವು ನಮಗೆ ನಾವು ನಿಮಗೆ ಆಸರೆಯಾಗಬಹುದು..’ ಎಂದು ತನ್ನ ಮನಸ್ಸಿನಲ್ಲಿದ್ದುದನ್ನು ಮುಚ್ಚುಮರೆಯಿಲ್ಲದಂತೆ ತೆರೆದುಕೊಂಡ. ಮಹಾಲಕ್ಷ್ಮಮ್ಮನವರಿಗೆ ಬೇರೆ ಮನೆ ಎಂದರೆ ಬಾಡಿಗೆ, ವಿನಾಕಾರಣ ಖರ್ಚುಗಳು ಹೆಚ್ಚಾಗಬಹುದು ಎನಿಸಿದರೂ ಇಲ್ಲೇ ಪಕ್ಕದಲ್ಲಿಯೇ ಇರುತ್ತಾರಲ್ಲ.. ನೋಡಿಕೊಂಡರಾಯಿತು.. ಸ್ವತಂತ್ರವಾಗಿ ಇರಲಿ.. ಅವರ ಆಸೆಗೆ ತಣ್ಣೀರು ಎರಚುವುದು ಬೇಡ ಎನಿಸಿ ‘ಸರಿ ನೀವು ಹೇಳಿದಂತೆ ಆಗಲಿ.. ಇಲ್ಲೇ ಹತ್ತಿರದಲ್ಲಿ ಮನೆ ಮಾಡಿಕೊಳ್ಳಿ..’ ಎಂದು ಒಪ್ಪಿಗೆ ನೀಡಿದರು. ಸುಮಿತ್ರಾಳಿಗೂ ತನ್ನ ಗಂಡನ ಸಲಹೆ ಸೂಕ್ತವಾದುದು ಎನಿಸಿತಲ್ಲದೆ ಅಮ್ಮ ಇಲ್ಲೇ ಇರುತ್ತಾರೆ.. ಅವರನ್ನು ನೋಡಿಕೊಂಡಂತೆಯೂ ಆಗುತ್ತದೆ.. ನಮ್ಮದೇ ಸಂಸಾರವೂ ಆದರೆ ಅಕ್ಕಂದಿರ ಬಾಯಿಗೆ ಬೀಗವೂ ಬಿದ್ದಂತಾಗುತ್ತದೆ ಎಂದು ಯೋಚಿಸಿ ಬೇರೆ ಮನೆ ಮಾಡಿ ಸಂಸಾರ ಹೂಡಲು ಮಾನಸಿಕವಾಗಿ ಸಿದ್ಧಳಾದಳು.
   ನಮ್ಮ ಸಣ್ಣ ಸಂಸಾರಕ್ಕೆ ಒಂದು ಕೊಠಡಿಯ ಮನೆ ಸಾಕು ಎಂದು ಅದಕ್ಕಾಗಿ ಹನುಮಂತಯ್ಯ ಎಷ್ಟೇ ಹುಡುಕಾಡಿದರೂ ಹತ್ತಿರದಲ್ಲಿ ಒಂದು ಕೊಠಡಿಯ ಮನೆ ಸಿಕ್ಕಲಿಲ್ಲ. ಮಾವ£ವರÀ ಮನೆಯಿಂದ ಎರಡು ರಸ್ತೆಗಳ ಹಿಂದಿದ್ದ ಎರಡು ಕೊಠಡಿಯ ಮನೆಯನ್ನು ಮೂರು ಸಾವಿರ ರೂಪಾಯಿ ಬಾಡಿಗೆ ಮಾತನಾಡಿ ಮೂವತ್ತು ಸಾವಿರ ರೂಪಾಯಿಗಳು ಮುಂಗಡಹಣ ನೀಡಿ ಬಾಡಿಗೆಗೆ ತೆಗದುಕೊಂಡ ಒಂದು ವಾರದಲ್ಲಿ ಸುಮಿತ್ರಾ-ಹನುಮಂತಯ್ಯ  ತಮ್ಮ ವಾಸ್ತವ್ಯವನ್ನು ಆ ಮನೆಗೆ ಬದಲಾಯಿಸಿದರು. ಸಂಸಾರಕ್ಕೆ ಬೇಕಾದ ಸಾಮಾನು ಸರಂಜಾಮುಗಳನ್ನು ಕೊಂಡುಕೊಂಡರು. ಇಬ್ಬರೂ ಸೇರಿ ಮನೆಯನ್ನು ತಮ್ಮ ಮುಂದಿನ ಜೀವನಕ್ಕಾಗಿ ಅಣಿಗೊಳಿಸಿದರು. ಮಹಾಲಕ್ಷ್ಮಮ್ಮನವರೂ ಮಗಳ ಮನೆಗೆ ಬಂದು ಮುಂದೆ ನಿಂತು ಈ ಎಲ್ಲಾ ಕೆಲಸಗಳಲ್ಲಿ ಸಹಕಾರ, ಮಾರ್ಗದರ್ಶನ ನೀಡಿದರು.    
   ಅಲ್ಲಿಯವರಗೆ ಹುಟ್ಟಿದ ಮನೆಯಲ್ಲಿಯೇ ತನ್ನ ತಾಯಿಯ ಆಸರೆಯಲ್ಲಿ ಬೆಳೆದ ಸುಮಿತ್ರಾಳಿಗೆ ಸ್ವಂತ ಸಂಸಾರದ ಸಂಕೀರ್ಣತೆಗಳು ಕೆಲವೇ ದಿನಗಳಲ್ಲಿ ಒಂದೊಂದಾಗಿ ಅರಿವಾಗತೊಡಗಿದವು. ದಿನನಿತ್ಯ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು, ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಮಗುವನ್ನು ನೋಡಿಕೊಳ್ಳುವ  ಕೆಲಸಗಳಲ್ಲಿ ಸ್ವಂತ ತೀರ್ಮಾನ ತೆಗದುಕೊಳ್ಳಬೇಕಾದ ಅನಿವಾರ್ಯತೆಯುಂಟಾಯಿತು. ಹನುಮಂತಯ್ಯನೂ ಬಿಡುವು ಸಿಕ್ಕಾಗ ಮನೆಗೆಲಸಗಳಲ್ಲಿ ಅವಳೊಂದಿಗೆ ಕೈಜೋಡಿಸುತ್ತಿದರೂ ಭಾನುವಾರ ಮತ್ತು ಇತರ ರಜಾದಿನಗಳನ್ನು ಹೊರತುಪಡಿಸಿ  ಅವನಿಗೆ ಬಿಡುವು ಸಿಕ್ಕುವುದೇ ವಿರಳವಾಗಿತ್ತು. ಅವನು ಬೆಳಿಗ್ಗೆ ಮನೆಯಿಂದ ಹೋದರೆ ಬರುತಿದ್ದುದೇ ರಾತ್ರಿಯಾದ ನಂತರ. ಹೀಗಾಗಿ ಮನೆಯನ್ನು ನಿಭಾಯಿಸುವ ಸಂಪೂರ್ಣ ಹೊಣೆಗಾರಿಕೆ ಸುಮಿತ್ರಾಳದಾಯಿತು. ಅವಳು ರುಚಿಕರವಾಗಿ ಅಡುಗೆ ಮಾಡುವುದನ್ನು ಕಲತುಕೊಳ್ಳಲು ಸಾಕಷ್ಟು ದಿನಗಳು ಬೇಕಾದವು. ಹನುಮಂತಯ್ಯನೇನೋ ಅವಳು ಮಾಡಿದ ಅಡುಗೆಯಲ್ಲಿ ಉಪ್ಪು ಜಾಸ್ತಿ ಇರಲಿ, ಕಡಿಮೆಯಿರಲಿ, ರುಚಿಯಿರಲಿ, ಇಲ್ಲದಿರಲಿ ತುಟಿಕ್ ಪಿಟಿಕ್ ಎನ್ನದೆ ತಿಂದುಬಿಡುತಿದ್ದ. ಆದರೆ ಅವಳೇ ತಿನ್ನುವಾಗ ತಾನು ಮಾಡಿದ ಅಡುಗೆ ರುಚಿಸುತ್ತಿರಲಿಲ್ಲವಾಗಿ ಹಲವಾರು ಪ್ರಯತ್ನಗಳ ನಂತರ ಚೆನ್ನಾಗಿ ಅಡುಗೆ ಮಾಡುವುದನ್ನು ಕಲಿತುಕೊಂಡಳು. ಹೊಸ ಸಂಸಾರ ಹೂಡಿದ ಮೊದಲ ದಿನಗಳಲ್ಲಿ ಸಿಕ್ಕಿದ ಖಾಸಗಿತನದಿಂದ ಅವಳು ತನ್ನ ಗಂಡನೊಂದಿಗೆ ದೈಹಿಕವಾಗಿ ಎಂದೂ ಕಾಣದ ಸುಖವನ್ನು ಅನುಭವಿಸುತಿದ್ದಳು. ಅದರ ಅಲೆಯಲ್ಲಿಯೇ ಒಮ್ಮೊಮ್ಮೆ ತೇಲಿಹೋಗುತಿದ್ದಳು. ತನ್ನ ಗಂಡನ ಬಲಿಷ್ಠ ಬಾಹುಗಳಲ್ಲಿ ಬಂಧಿಯಾಗಿ ಅವನ ವಿಶಾಲ ಎದೆಯ ಮೇಲೆ ತಲೆಯಿಟ್ಟು ನಿದ್ರಿಸುತಿದ್ದಳು. ಇದರಿಂದಾಗಿ ಪ್ರತಿದಿನ ಬೆಳಿಗ್ಗೆ ಯಾವುದೋ ಉತ್ಸಾಹ, ಹುಮ್ಮಸ್ಸುಗಳಿಂದ ಹಾಸಿಗೆಯಿಂದ ಎದ್ದೇಳುತಿದ್ದಳು. ಆದರೆ ದಿ£ಗಳು ಕಳೆದಂತೆಲ್ಲಾ ತನ್ನ ತಂದೆಯ ಮನೆಯಲ್ಲಿ ಸುಖವಾಗಿ ಬೆಳೆದಿದ್ದವಳಿಗೆ ಬೆಳಗಿನಿಂದ ಸಂಜೆಯವರೆಗೂ ತನ್ನ ಕುಟುಂಬವನ್ನು ನಿಭಾಯಿಸಿ ದೈಹಿಕ ಆಯಾಸದ ಜೊತೆಗೆ ಮಾನಸಿಕ ಆತಂಕವೂ ಉಂಟಾಗತೊಡಗಿತು.
   ಮಗ ಅಮರನಿಗೆ ಎರಡು ವರ್ಷ ತುಂಬುವುದರೊಳಗಾಗಿ ಸುಮಿತ್ರಾ ಮತ್ತೆ ಗರ್ಭಿಣಿಯಾದಳು. ಮಗಳು ಅನನ್ಯ ಹುಟ್ಟಿದ ನಂತರ ಕುಟುಂಬ ಯೋಜನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಳು. ಮಗಳಿಗೆ ಆರು ತಿಂಗಳು ತುಂಬಿದ ನಂತರ ತಾಯಿಯ ಮನೆಯಲ್ಲಿ ಬಾಣಂತನ ಪೂರೈಸಿಕೊಂಡು ತನ್ನ ಮನೆಗೆ ಬಂದಳು. ಆನಂತರ ದೈನಂದಿನ ಕೆಲಸಗಳ ಜೊತೆಗೆ ಎರಡು ಮಕ್ಕಳನ್ನು ಸಲಹುವುದು ಅವಳಿಗೆ ಕ್ಲಿಷ್ಟಕರವಾಗಿ ಕಾಣಿಸತೊಡಗಿತು. ಕೆಲವೊಮ್ಮೆ ಅವಳು ವಿನಾಕಾರಣ ಸಹನೆ ಕಳೆದುಕೊಂಡು ಮಕ್ಕಳ ಮೇಲೆ ರೇಗಾಡುತಿದ್ದಳು. ಬದುಕಿನ ವಾಸ್ತವ ರೂಪ ಅವಳಿಗೆ ಅರಿವಾಗತೊಡಗಿತು. ‘ಅಮ್ಮಾ.. ನೀನು ನಮ್ಮನ್ನೆಲ್ಲಾ ಹೇಗೆ ಸಾಕಿದೆಯಮ್ಮಾ.. ನನಗೆ ಈ ಎರಡು ಮಕ್ಕಳನ್ನ ಸಾಕೋದೇ ದೊಡ್ಡ ಕಷ್ಟವಾಗಿದೆ..’ ಎಂದು ತನ್ನ ತಾಯಿಯ ಬಳಿ ಅಲವತ್ತುಕೊಳ್ಳುತಿದ್ದಳು. ‘ನಿಮ್ಮನ್ನೆಲ್ಲಾ ಹೇಗೆ ಸಾಕಿದೆ ಅಂತ ನನಗೂ ಈಗ ಗೊತ್ತಾಗ್ತಾ ಇಲ್ಲಾ ಕಣೇ ಸುಮೀ.. ನನ್ನಷ್ಟು ವಯಸ್ಸಾದ ಮೇಲೆ ನಿನಗೂ ಗೊತ್ತಾಗೋದಿಲ್ಲ..’ ಎಂದು ಮಹಾಲಕ್ಷ್ಮಮ್ಮನವರು ನಕ್ಕು ನುಡಿಯುತಿದ್ದರು. ‘ಮಕ್ಕಳು ಸಾಕೋದು.. ಅವರಿಗೆ ವಿದ್ಯಾಬುದ್ಧಿ ಕಲಿಸಿ ಅವರ ಕಾಲ ಮೇಲೆ ಅವರು ನಿಲ್ಲೋ ತರಾ ಮಾಡೋದು ತಂದೆತಾಯಿಗಳಾದವರ ಮೊದಲ ಕರ್ತವ್ಯ ಕಣೇ.. ಅದರಲ್ಲಿಯೇ ತೃಪ್ತಿ ಸಿಗೋದು.. ಜೀವನ ಅಂದ್ರೆ ಅದೇನೇ.. ಇನ್ನು ನಮ್ಮ ಸ್ವಂತ ಸುಖ, ಸಂತೋಷ ಎಲ್ಲಾ ಎರಡನೆಯದು..’ ಮಹಾಲಕ್ಷ್ಮಮ್ಮನವರು ತಮ್ಮ ಜೀವನದ ಅನುಭವವನ್ನು ಮಾತುಗಳ ಮೂಲಕ ಮಗಳಲ್ಲಿ ಹಂಚಿಕೊಳ್ಳುತಿದ್ದರು.
   ಹನುಮಂತಯ್ಯನಿಗೆ ಹಿಂದೆ ಎರಡು ಕೆಲಸಗಳನ್ನು ಕಳೆದುಕೊಂಡ ಕಹಿ ಅನುಭವದಿಂದಾಗಿ ಮನದಲ್ಲಿ ಯಾವುದೋ ಅವ್ಯಕ್ತ ಭೀತಿ ಸ್ಥಿರವಾಗಿ ನಿಂತುಬಿಟ್ಟಿತ್ತು. ಬೆಳೆಯುತ್ತಿರುವ ಸಂಸಾರದ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುವುದು ಸುಲಭವಾದ ಕೆಲಸವಲ್ಲವೆಂಬುದು ಕೆಲವೇ ದಿನಗಳಲ್ಲಿ ಅರಿವಾಯಿತು. ಸಂಬಳ ಹತ್ತುಸಾವಿರವಾದರೂ ಪಿ.ಎಫ್ ಮತ್ತು ಇತರ ಕಡ್ಡಾಯ ಕಡಿತಗಳನ್ನು ಕಳೆದು ಕೈಗೆ ಸಿಗುತ್ತಿದ್ದುದು ಒಂಬತ್ತು ಸಾವಿರ ಮಾತ್ರ. ಮನೆಬಾಡಿಗೆ, ಕರೆಂಟುಬಿಲ್ಲು, ಗ್ಯಾಸು, ದಿನಸಿಪದಾರ್ಥಗಳ ಖರ್ಚು, ಮಕ್ಕಳ ಉಡುಗೆತೊಡುಗೆ, ಅವನ ಓಡಾಟದ ಖರ್ಚುಗಳಿಂದ ಸಂಬಳದ ಹಣವೆಲ್ಲಾ ನೀರಿನಂತೆ ಕರಗಿಹೋಗಿ ತಿಂಗಳ ಕೊನೆಗೆ ಕೈಯ್ಯಲ್ಲಿ ಬಿಡಿಗಾಸೂ ಇರುತ್ತಿರಲಿಲ್ಲ. ಈ ಬಾರಿ ಕೆಲಸ ಕಳೆದುಕೊಂಡರೆ ನನ್ನ ಬದುಕೇ ಸರ್ವನಾಶವಾದೀತು ಎಂಬ ಭಯದಿಂದ ಇನ್ನಿಲ್ಲದ ನಿಷ್ಠೆ, ಶ್ರಧ್ಧೆಗಳಿಂದ ಅವನು ಕೆಲಸ ಮಾಡತೊಡಗಿದ. ತಾನು ಮೇಲ್ವಿಚಾರಣೆ ನಡೆಸುತಿದ್ದ ರಸ್ತೆಯ ಒಂದೊಂದು ಅಡಿ ನಿರ್ಮಾಣವಾಗುವುದನ್ನು ಎದುರಿಗೆ ನಿಂತು ಗಮನಿಸುತಿದ್ದ. ಯಾವುದೇ ಲೋಪವಾದರೂ ತಕ್ಷಣವೇ ಸೂಕ್ತ ಕ್ರಮ ತೆಗೆದುಕೊಂಡು ಸರಿಪಡಿಸುತಿದ್ದ. ಎರಡು ವರ್ಷಗಳಾದ ಮೇಲೆ ಬೆಂಗಳೂರಿನ ಹೊರವಲಯದ ರಸ್ತೆಗಳ ನಿರ್ಮಾಣ ಕಾರ್ಯ ಮುಗಿದುಹೋಗಿ ಅವನ ಕೆಲಸದ ಸ್ಥಳ ಕಂಪೆನಿಯ ಪ್ರಾಜೆಕ್ಟುಗಳಿದ್ದ ರಾಮನಗರ, ತುಮಕೂರು, ಹೊಸಕೋಟೆ, ಕೋಲಾರಗಳಿಗೆ ಆಗಾಗ್ಗೆ ಬದಲಾಗತೊಡಗಿತು. ಬೆಳಿಗ್ಗೆಯೇ ಎದ್ದು ಬಸ್ಸಿನಲ್ಲಿ ಕುಳಿತು ತನ್ನ ಕೆಲಸದ ಸ್ಥಳಗಳನ್ನು ತಲುಪಿ ಅಂದಿನ ಕೆಲಸ ಮುಗಿಸಿಕೊಂಡು ಮತ್ತೆ ರಾತ್ರಿ ಮನೆಗೆ ವಾಪಸಾಗುವುದು ಅವನ ದೈನಂದಿನ ದಿನಚರಿಯಾಯಿತು. ಮಲಗಿರುತಿದ್ದ ಮಕ್ಕಳ ಮುಖ ನೋಡಿಕೊಂಡೇ ದಿನ ಕಳೆಯುತಿದ್ದ. ಅವರೊಂದಿಗೆ ಅವನು ಕಾಲ ಕಳೆಯಲು  ರಜಾದಿನಗಳನ್ನು ಕಾಯಬೇಕಾಗುತಿತ್ತು. ಮೊದಲ ನಾಲ್ಕೈದು ವರ್ಷಗಳಲ್ಲಿ ಅವನಿಗೆ ಅವನ ವೃತ್ತಿಯ ಋಣಾತ್ಮಕ ಅಂಶಗಳು ಗಮನಕ್ಕೆ ಬರಲೇ ಇಲ್ಲ. ಕಲುಷಿತ ವಾತಾವರಣ, ಮರಳು-ಸಿಮೆಂಟಿನ ಧೂಳು. ನಿರ್ಮಾಣ ಕಾರ್ಯದಲ್ಲಿ ತೊಡಗಿದ ಭಾರೀ ವಾಹನಳಿಂದ ಸತತವಾಗಿ ಹೊರಹೊಮ್ಮುತಿದ್ದ ಡೀಸೆಲಿನ ಹೊಗೆ, ಬಿಸಿ ಆಸ್ಫಾಲ್ಟನ್ನು ಸುರಿದ ಕ್ಷಣವೇ ಮೇಲೆರುತಿದ್ದ ವಿಷಯುಕ್ತ ಅನಿಲ ಇವೆಲ್ಲವುಗಳಿಂದ ಅವನಿಗೆ ಸಂಜೆಯಾದೊಡನೆ ಒಮ್ಮೊಮ್ಮೆ ತಲೆನೋವು ಬರತೊಡಗಿತು. ಕಂಪೆನಿಯು ಅವನಿಗೆ  ಶಿರಸ್ತ್ರಾಣವಾಗಲೀ, ಉಸಿರಾಟದ ಸಾಧನವಾಗಲೀ, ಕೈಗಾರಿಕಾ ಬೂಟುಗಳನ್ನಾಗಲೀ ಇತರ ದೈಹಿಕ ರಕ್ಷಣಾ ಸಲಕರಣೆಗಳನ್ನಾಗಲೀ ಒದಗಿಸಿರಲಿಲ್ಲ. ಆದರೆ ಪ್ರತಿ ವರ್ಷವೂ ಸಂಬಳವನ್ನು ಹೆಚ್ಚು ಮಾಡಲಾಗುತಿತ್ತು. ಐದು ವರ್ಷಗಳ ಕಡ್ಡಾಯ ಸೇವೆ ಮುಗಿಯುವುದರೊಳಗೆ ಅವನ ಸಂಬಳ ಹದಿನೈದು ಸಾವಿರ ರೂಪಾಯಿಗಳಿಗೆ ಏರಿಕೆಯಾಗಿತ್ತು. ಇದರಿಂದ ತೃಪ್ತನಾಗಿದ್ದ ಹನುಮಂತಯ್ಯ ತನ್ನ ವೃತ್ತಿಯ ಋಣಾತ್ಮಕ ಅಂಶಗಳನ್ನೆಲ್ಲಾ ನಿರ್ಲಕ್ಷಿಸಿ ಇನ್ನಷ್ಟು ಹೆಚ್ಚಿನ ನಿಷ್ಠೆಯಿಂದ ಕೆಲಸ ಮಾಡತೊಡಗಿದ.
   ಸುಮಿತ್ರಾಳಿಗೆ ತನ್ನ ಗಂಡನ ವೇಳಾಪಟ್ಟಿಯಿಲ್ಲದ ಮತ್ತು ಅವಿರತ ದುಡಿಮೆಯನ್ನು ಕಂಡು ಬರುಬರುತ್ತಾ ಬದುಕು ನೀರಸವೆನಿಸಿತೊಡಗಿತು. ಬೆಳಗಿನಿಂದ ಮನೆಗೆಲಸಗಳು ಮಕ್ಕಳ ಲಾಲನೆಪಾಲನೆಗಳನ್ನು ಹೊರತುಪಡಿಸಿ ಬೇರೆಯ ಸುಖ-ಸಂತೋಷಗಳೇ ನನ್ನ ಬದುಕಿನಲ್ಲಿ ಇಲ್ಲ ಎನಿಸತೊಡಗಿತು. ಮನೆಯಲ್ಲಿ ಗಂಡ ಇರುತಿದ್ದುದೇ ಭಾನುವಾರ ಮತ್ತು ರಜಾ ದಿನಗಳಂದು. ಕೆಲವು ರಜಾದಿನಗಳಲ್ಲೂ  ಅವನಿಗೆ ಕೆಲಸ. ಕೆಲವು ಭಾನುವಾರಗಳಂದು ತನ್ನ ತಂದೆ-ತಾಯಿಯರನ್ನು ನೋಡಲೆಂದು ಅವನು ತನ್ನ ಹಳ್ಳಿಗೆ ಹೊರಟುಬಿಡುತಿದ್ದ. ದಿನವಿಡೀ ಅವಳು ತನ್ನ ಮಕ್ಕಳೊಂದಿಗೆ ಇರಬೇಕು.. ಇಲ್ಲಾ ಅಮ್ಮನ ಮನೆಗೆ ಹೋಗಬೇಕು.. ಅದೂ ಇತ್ತೀಚೆಗೆ ಬೇಸರವಾಗಿಬಿಟ್ಟಿದೆ.. ಇದೆಂತಹ ಏಕತಾನತೆಯ ಜೀವನ ಎಂದು ಯೋಚಿಸಿ ಯೋಚಿಸಿ ಅವಳಿಗೂ ಸಾಕಾಗಿ ಹೋಗಿತ್ತು. ಸಂಜೆಯಾದರೆ ಎಲ್ಲಾ ಕೆಲಸಗಳನ್ನು ಮುಗಿಸಿ ಮಕ್ಕಳನ್ನು ಹಾಸಿಗೆಯಲ್ಲಿ ಮಲಗಿಸುವಾಗ ಅವಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಹೈರಾಣವಾಗಿಬಿಡುತಿದ್ದಳು. ಹನುಮಂತಯ್ಯನೂ ರಾತ್ರಿ ಮನೆಗೆ ಬರುವಷ್ಟರಲ್ಲಿ ಕೆಲಸದ ಶ್ರಮ ಮತ್ತು ಬಸ್ಸಿನ ಪ್ರಯಾಣದ ಆಲಸ್ಯದಿಂದಾಗಿ ಬಸವಳಿದುಹೋಗುತಿದ್ದ. ಅವರ ನಡುವೆ ದೈಹಿಕ ಮಿಲನವೆಂಬುದು ಎಂದೋ ಬರುವ ಹಬ್ಬದಂತಾಗಿತ್ತು. ಭಾನುವಾರ ಮನೆಯಲ್ಲಿದ್ದಾಗ ಆಗ ತಾನೇ ಸ್ನಾನ ಮುಗಿಸಿ ಬಂದ ಹೆಂಡತಿಯ ಮಾಗುತಿದ್ದ ದೇಹವನ್ನು ಕಂಡೋ, ಅಥವಾ ಅವಳು ಹೊರಗೆ ಹೋಗುವ ಸಲುವಾಗಿ ಬೇರೆ ಬಟ್ಟೆ ಧರಿಸಲೆಂದು ಬತ್ತಲಾದಾಗ ಅವನಲ್ಲಿನ ಕಾಮ ಪುಟಿದೇಳುತಿತ್ತು. ಮನದಲ್ಲಿ ಹೇಳಿಕೊಳ್ಳಲಾಗದ ಅಸಮಾಧಾನಗಳಿದ್ದರೂ ಸುಮಿತ್ರಾ ಅವನೊಂದಿಗೆ ಸ್ಪಂದಿಸುತಿದ್ದಳು.                  (ಮುಂದುವರಿಯುವುದು...)
 

Comments

Submitted by H A Patil Sat, 02/13/2016 - 19:29

ತಿಮ್ಮಪ್ಪ ರವರಿಗೆ ವಂದನೆಗಳು
ಬಹಳ ದಿನಗಳ ನಂತರ ಸಂಪದಕ್ಕೆ ಮರಳಿದ್ದೀರಿ ಅದೂ ಕುತೂಹಲ ಭರಿತ ಕಥೆಯ ಮೂಲಕ. ವಿದಾಯ ಕಥೆ ಸೊಗಸಾಗಿ ಮೂಡಿ ಬರುತ್ತಿದೆ ಕಥೆಯ ಮುಂದೆ ಯಾವ ಘಟ್ಟ ತಲುಪಬಹುದು ಎಂಬ ಕುತೂಹಲವಿದೆ ಧನ್ಯವಾದಗಳು.

Submitted by tthimmappa Sun, 02/14/2016 - 23:32

In reply to by H A Patil

ಕಥೆಯನ್ನು ಮೆಚ್ಚಿರುವುದಕ್ಕೆ ಧನ್ಯವಾದಗಳು ಸಾರ್...ನನಗೆ ತಿಳಿದ‌ ಸಿವಿಲ್ ಎಂಜಿನಿಯರೊಬ್ಬರ‌ ಜೀವನದ‌ ನಿಜ‌ ಘಟನೆಗೆ ಕಥಾರೂಪ‌ ನೀಡಿದ್ದೇನೆ...ಇನ್ನು ಎರಡು ಕಂತುಗಳು ಬಾಕಿ ಇವೆ.. ಓದಿ ತಮ್ಮ‌ ಪ್ರತಿಕ್ರಿಯೆಯನ್ನು ನೀಡಬೇಕಾಗಿ ಕೋರುತ್ತೆನೆ...ಮತ್ತೊಮ್ಮೆ ಧನ್ಯವಾದಗಳು ಸಾರ್...