ದೇವರೊಡನೆ ಸಂದರ್ಶನ - 11

ದೇವರೊಡನೆ ಸಂದರ್ಶನ - 11

     "ರೀ, ಇವತ್ತು ವಾಕಿಂಗಿಗೆ ಹೋಗಬೇಡಿ. ಹೋದರೂ ರತ್ನಗಿರಿಬೋರೆ ಕಡೆಗೆ ಹೋಗಬೇಡಿ. ರಾತ್ರಿಯೆಲ್ಲಾ ಅದೇನೋ ಬೆಂಕಿ, ನೀರು ಅಂತೆಲ್ಲಾ ಕನವರಿಸುತ್ತಾ ಇದ್ದಿರಿ. ನನಗೇನೋ ಅನುಮಾನ, ನಿಮಗೇನೋ ಗಾಳಿ-ಗೀಳಿ ಮೆಟ್ಕೊಂಡಿರಬೇಕು. ಸ್ಟೇಡಿಯಮ್ ಕಡೆಗೆ ಹೋಗಿ" - ಗಣೇಶರಿಗೆ ಟೀ ಕೊಡುತ್ತಾ ಅವರ ಪತ್ನ್ತಿ ಹೇಳಿದ ಮಾತಿದು. ಗಣೇಶರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವವರಲ್ಲ. ನಗುತ್ತಾ ಉತ್ತರಿಸಿದ್ದರು: "ಏನೆಂದೆ? ಗಾಳಿ ಮೆಟ್ಕೊಂಡಿದೆ ಅಂತಲಾ? ಕರೆಕ್ಟ್! ನಾನೂ ಗೆಸ್ ಮಾಡಿದ್ದೆ. ಇವತ್ತು ಗಾಳೀನೇ ಮೆಟ್ಕೊಳ್ಳಬಹುದು ಅಂತಾ| ನೀನೇನೂ ಯೋಚನೆ ಮಾಡಬೇಡ. ನಿನ್ನ ಮುಂದೆ ನಿಂತರೆ ಎಂತಹ ಗಾಳೀನೂ ಹಿಂದೆ ಹೋಗಿಬಿಡುತ್ತೆ." ಟೀ ಕುಡಿದ ಗಣೇಶರು ಯಥಾಪ್ರಕಾರ ತಲೆಗೆ ಕ್ಯಾಪ್ ಧರಿಸಿ ರತ್ನಗಿರಿಬೋರೆ ಕಡೆಗೆ ದಾಪುಗಾಲು ಹಾಕಿಯೇಬಿಟ್ಟರು. ಮಂಟಪದ ಕಲ್ಲುಬೆಂಚಿನ ಮೇಲೆ ಕೂರುತ್ತಿದ್ದಂತೆ ಧ್ವನಿ ಕೇಳಿಸಿತು:

ದೇವರು: ಗಣೇಶಾ, ನೀನು ಸರಿಯಾಗಿಯೇ ಊಹಿಸಿರುವೆ.
ಗಣೇಶ: ಅಲ್ಲವೇ ಮತ್ತೆ? ಭೂಮಿ ಆಯಿತು, ನೀರು ಆಯಿತು, ಬೆಂಕಿ ಆಯಿತು. ಇವತ್ತು ಗಾಳಿಯ ಬಗ್ಗೆಯೇ ಹೇಳುವೆ ಎಂದು ಊಹಿಸಿದ್ದು ಸರಿ ಅಂದಾಗ ಖುಷಿ ಆಗದೇ ಇರುತ್ತದೆಯೇ? ಆದರೆ ಭೂಮಿ, ನೀರು, ಬೆಂಕಿಗಿಂತ ಗಾಳಿ ಹೇಗೆ ದೊಡ್ಡದು ಅಂತಾ ಹೇಳೋ ಕೆಲಸ ಮಾತ್ರ ನಿನ್ನದು!
ದೇವರು: ಇದಕ್ಕೇನು ದೊಡ್ಡ ತರ್ಕದ ಅಗತ್ಯವೇ ಇಲ್ಲ. ಜೀವಿಗಳು ಜೀವಿಸಿರುವುದು ವಾಯುವಿನಿಂದಾಗಿಯೇ ಅಲ್ಲವೇ? ಅದಕ್ಕಾಗಿಯೇ ವಾಯು ನೀನು ಹೇಳಿದ ಮೂರು ಸಂಗತಿಗಳಿಗಿಂತಲೂ ದೊಡ್ಡದಾಗಿದೆ. ಜೀವಿಯ ಹುಟ್ಟು ಮತ್ತು ಸಾವು ಎರಡೂ ಉಸಿರಿನ ಮೇಲೆ ನಿಂತಿದೆ. ಹುಟ್ಟುವ ಕ್ಷಣದಿಂದಲೇ ಆರಂಭವಾಗುವ ಉಸಿರಾಟ ಸಾವಿನವರೆಗೂ ನಿರಂತರವಾಗಿ ಮುಂದುವರೆಯುತ್ತದೆ. ಉಸಿರು ನಿಂತಾಗ ಜೀವವೂ ನಿಲ್ಲುತ್ತದೆ.
ಗಣೇಶ: ನಿನ್ನ ಮಾತು ಉಸಿರುಗಟ್ಟಿಸುವಂತಿದೆ. ಈ ಉಸಿರು ಯಾವಾಗ ಪ್ರಾರಂಭವಾಗುತ್ತೋ, ಯಾವಾಗ ನಿಲ್ಲುತ್ತೋ ಯಾರಿಗೆ ಗೊತ್ತು? ಇದನ್ನು ನಮಗೆ ಗೊತ್ತಾಗದಿರುವಂತೆ ಮಾಡಿ ನೀನು ದೊಡ್ಡ ಅನ್ಯಾಯ ಮಾಡಿರುವೆ.
ದೇವರು: ಅದು ಗೊತ್ತಾಗಿದ್ದಿದ್ದರೆ ಜಗತ್ತು ನಡೆಯೋದಾದರೂ ಹೇಗೆ? ಈ ತಿಳುವಳಿಕೆ ಇರೋರಿಗೆ ಪ್ರಾಪಂಚಿಕ ವ್ಯಾಮೋಹಗಳಿರುವುದಿಲ್ಲ. ನಿಮಗೆ ಎಚ್ಚರವಿಲ್ಲದಿದ್ದಾಗಲೂ, ನಿದ್ರೆ ಮಾಡುತ್ತಿರುವಾಗಲೂ ಉಸಿರಾಡುತ್ತಲೇ ಇರುತ್ತೀರಿ. ಆದ್ದರಿಂದ ಉಸಿರಾಟದ ಮೇಲೆ ನಿಮ್ಮ ನಿಯಂತ್ರಣ ಸೀಮಿತವಾಗಿದೆ. ನಿಮ್ಮ ಪೂರ್ಣ ನಿಯಂತ್ರಣವಿದ್ದಿದ್ದರೆ ನೀವುಗಳು ಉಸಿರಾಡುವುದನ್ನು ನಿಲ್ಲಿಸುತ್ತಲೇ ಇರಲಿಲ್ಲ. ಏಕೆಂದರೆ ಸಾಯಲು ಯಾರು ಇಷ್ಟಪಡುತ್ತಾರೆ?
ಗಣೇಶ: ನಾವು ಸಾಯಬೇಕೆಂದು ಬಯಸುವ ನೀನೊಬ್ಬ ಪಾಪಿ. ಅಷ್ಟಕ್ಕೂ ನಾವು ಏಕೆ ಸಾಯಬೇಕು? ಎಲ್ಲರನ್ನೂ ಅವರುಗಳು ಇಷ್ಟಪಡುವವರೆಗೆ ಬದುಕಲು ಬಿಟ್ಟಿದ್ದರೆ ನಿನ್ನ ಗಂಟೇನು ಹೋಗುತ್ತಿತ್ತು?
ದೇವರು: (ನಗುತ್ತಾ) ಈ ಚಕ್ರ ತಿರುಗುತ್ತಲೇ ಇರಬೇಕು. ಜೀವಿ ಪೂರ್ಣ ವಿಕಾಸದ ಸ್ಥಿತಿ ತಲುಪುವವರೆಗೆ, ನೀವು ಹೇಳುವ ಮೋಕ್ಷ ಸಿಗುವವರೆಗೆ ಅಂತಿಟ್ಟುಕೋ, ಈ ಹುಟ್ಟು ಮತ್ತು ಸಾವು ನಡೆಯುತ್ತಲೇ ಇರುತ್ತದೆ. ಜೀವಿಯ ಅಂತರ್ಗತ ಆಸೆಯೆಂದರೆ ಇರುವ ಸ್ಥಿತಿಗಿಂತ ಮೇಲೇರಬೇಕು ಅನ್ನುವುದೇ ಆಗಿರುತ್ತದೆ. ಪ್ರತಿ ಸಲ ಮೇಲೇರುವುದೋ, ಕೆಳಗೆ ಜಾರುವುದೋ. ಇದ್ದಲ್ಲೇ ಇರುವುದೋ ಒಟ್ಟಿನಲ್ಲಿ ಜೀವಿಯ ನಡೆ ಅನುಸರಿಸಿ ಆಗುತ್ತಿರುತ್ತದೆ. ವಿಷಯಾಂತರವಾಗುವುದರಿಂದ ಈ ಬಗ್ಗೆ ಇನ್ನೊಂದು ದಿವಸ ಮಾತನಾಡೋಣ.
ಗಣೇಶ: ಸಾಯೋದು ಗ್ಯಾರೆಂಟಿ ಅಂತ ಗೊತ್ತಿದ್ದರೂ ನಾವು ಸಾಯುವುದೇ ಇಲ್ಲ ಅನ್ನುವ ರೀತಿಯಲ್ಲಿ ನಾವು ನಡೆದುಕೊಳ್ಳುವಂತೆ ಮಾಡಿರುವ ನಿನಗೆ ಇದರಿಂದ ಅದೇನು ಸಂತೋಷ ಸಿಗುತ್ತೆ? ನಿನ್ನ ರೀತಿ-ನೀತಿ ಸರಿಯಿಲ್ಲ. ನೀನು ಕೊಡೋ ಸಮರ್ಥನೇನೂ ಸರಿಯಿಲ್ಲ. ನೀನೂ ಸರಿಯಿಲ್ಲ.
ದೇವರು: (ನಗುತ್ತಾ) ಮತ್ತೆ ವಿಷಯಾಂತರವಾಗುತ್ತಿದೆ. ಇರಲಿ, ಅದನ್ನು ಮತ್ತೆ ದಾರಿಗೆ ತರೋಣ. ನನ್ನ ಮೇಲೆ ಸಿಟ್ಟು ಮಾಡಿಕೊಂಡು ಉದ್ವೇಗದಿಂದ ಮಾತನಾಡುತ್ತಿದ್ದೀಯಲ್ಲಾ? ನಿನ್ನ ಉಸಿರಾಟ ಹೇಗಿದೆ ಗಮನಿಸಿಕೋ. ಬುಸುಗುಡುವಂತೆ ವೇಗವಾಗಿ ಉಸಿರಾಡುತ್ತಿರುವೆ. ಅದೇ ನೀನು ಶಾಂತವಾಗಿರುವಾಗ ನಿಧಾನವಾಗಿ ಉಸಿರಾಡುವೆ. ಆನಂದವಾದಾಗ ಉಸಿರು ನಿಂತೇ ಹೋಯಿತೇನೋ ಅನ್ನುವಷ್ಟು ನಿಧಾನಗತಿಯಲ್ಲಿ ಉಸಿರಾಡುವೆ. ಧ್ಯಾನ ಮಾಡುವಾಗ ಆನಂದದ ಸಾಕ್ಷಾತ್ಕಾರವಾಯಿತು ಎನ್ನುವ, ಸಮಾಧಿ ಸ್ಥಿತಿ ತಲುಪುವ ಸಾಧಕರ ಉಸಿರಾಟ ಅತ್ಯಂತ ನಿಧಾನಗತಿಯದ್ದಾಗಿರುತ್ತದೆ. ಕೋಪ ಬಂದಾಗ, ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ಸ್ವಲ್ಪ ಹೊತ್ತು ನಿಧಾನವಾಗಿ ಮತ್ತು ದೀರ್ಘವಾಗಿ ಉಸಿರಾಟ ಮಾಡಿದರೆ ಮನಸ್ಸು ತಹಬಂದಿಗೆ ಬರುತ್ತದೆ. ಉತ್ತಮ ನಿರ್ಧಾರ ಸಾಧ್ಯವಾಗುತ್ತದೆ. ಒಂದೇ ವಿಷಯದ ಬಗ್ಗೆ ಕೋಪದಲ್ಲಿ ಆಡುವ ಮಾತಿಗೂ, ಶಾಂತನಾಗಿರುವಾಗ ಆಡುವ ಮಾತಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಧ್ಯಾನ ಮತ್ತು ಪ್ರಾಣಾಯಾಮದ ಮಹತ್ವ ಇರುವುದು ಇಲ್ಲಿಯೇ! ಉಸಿರಾಟದ ಸುಯೋಗ್ಯ ನಿಯಂತ್ರಣ ನಿಮ್ಮನ್ನು ಉತ್ತಮ ಸ್ಥಿತಿಗೆ ಕರೆದೊಯ್ಯುತ್ತದೆ.
ಗಣೇಶ: ನೀನು ದೇವರಾಗಿಬಿಟ್ಟು ಆ ದೇವಸ್ಥಾನಕ್ಕೆ ಹೋಗು, ಈ ದೇವಸ್ಥಾನಕ್ಕೆ ಹೋಗು, ಚರ್ಚಿಗೆ ಹೋಗು, ಮಸೀದಿಗೆ ಹೋಗು, ನಿನಗೆ ಒಳ್ಳೆಯದಾಗುತ್ತೆ ಅಂತ ಹೇಳೋದು ಬಿಟ್ಟು ಗಾಳಿ, ನೀರು, ಬೆಂಕಿ ಅಂತೆಲ್ಲಾ ಹೇಳ್ತೀಯಲ್ಲಾ! ನೀನೆಂಥಾ ದೇವರು?
ದೇವರು: ನಿನ್ನ ಪ್ರಶ್ನೆ ನನಗೆ ಇಷ್ಟವಾಯಿತು. ವಿವೇಚನೆ ಶಕ್ತಿ ಇರುವ ಮಾನವ ಮೂರು ರೀತಿಯ ಸಾಲ ತೀರಿಸಬೇಕಿದೆ. ದೇವಋಣ, ಪಿತೃ ಋಣ ಮತ್ತು ಆಚಾರ್ಯ ಋಣ. ಪಿತೃ ಋಣ ಮತ್ತು ಆಚಾರ್ಯಋಣದ ಬಗ್ಗೆ ಇನ್ನೊಂದು ದಿನ ಹೇಳ್ತೀನಿ. ನನ್ನ ಸಾಲವನ್ನೂ ನೀವುಗಳು ತೀರಿಸಬೇಕಿದೆ. ಅದೆಂತಹ ಸಾಲ ಅಂತ ಕೇಳ್ತೀಯಾ? ಹೇಳ್ತೀನಿ ಕೇಳು. ನನ್ನ ಸಾಲ ತೀರಿಸುವುದಕ್ಕೆ ನೀವುಗಳು ದೇವಸ್ಥಾನಕ್ಕೆ, ಮಸೀದಿಗೆ, ಚರ್ಚಿಗೆ ಹೋಗಬೇಕಿಲ್ಲ. ನಿಮ್ಮ ಶರೀರ ಪಂಚಭೂತಗಳೆಂದು ನೀವು ಕರೆಯುವ ಐದು ಸಂಗತಿಗಳಿಂದ ಕೂಡಿದ್ದು, ಕೊನೆಯಲ್ಲಿ ಸೇರುವದೂ ಪಂಚಭೂತಗಳಲ್ಲಿಯೇ! ಆದ್ದರಿಂದ ಈ ಐದು ಅಂಶಗಳಾದ ನೆಲ, ಜಲ, ವಾಯು, ಅಗ್ನಿ ಮತ್ತು ಆಕಾಶಗಳ ಬಗ್ಗೆ ನಿಮಗೆ ಜವಾಬ್ದಾರಿ ಇರಬೇಕು. ನೀವು ಜೀವಿಸಿರಲು ಉಪಯೋಗಿಸುವ ಈ ಸಂಗತಿಗಳನ್ನು ಸಂರಕ್ಷಿಸಿ ನಿಮ್ಮ ಮುಂದಿನವರಿಗೂ ಜೀವಿಸಲು ಅನುಕೂಲ ಮಾಡಿಕೊಡುವ ಕೆಲಸ ಮಾಡಬೇಕಾದುದೇ ನೀವು ನನಗೆ ತೀರಿಸಬೇಕಾದ ಸಾಲ ಆಗಿದೆ. ಈ ಕೆಲಸ ನೀವು ಸರಿಯಾಗಿ ಮಾಡಿದ್ದೇ ಆದರೆ ಅದೇ ನೀವು ನನಗೆ ಸಲ್ಲಿಸುವ ದೊಡ್ಡ ಪೂಜೆಯಾಗುತ್ತದೆ.
ಗಣೇಶ: ಇದು ನಿಜಕ್ಕೂ ಯೋಚನೆ ಮಾಡುವ ವಿಷಯಾನೇ! ನಾವು ಉಸಿರಾಡೋ ಗಾಳಿ ಎಷ್ಟೊಂದು ಕಲುಷಿತವಾಗಿದೆಯೆಂದರೆ ಗಾಬರಿ ಆಗುತ್ತೆ. ನೀನು ಹೇಳಿದ ಹಾಗೆ ಅದನ್ನು ಹಾಳು ಮಾಡುತ್ತಿರೋದು ನಾವುಗಳೇ. ಭೋಪಾಲಿನಲ್ಲಿ ಹಿಂದೆ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯಿಂದ ಹೊರಬಿದ್ದ ವಿಷಾನಿಲದಿಂದ ಸಾವಿರಾರು ಜನ ಸತ್ತರು. ಇಂದಿಗೂ ಅದರ ಪ್ರಭಾವದಿಂದ ನರಳುತ್ತಿರುವವರ ಬಗ್ಗೆ ಕೇಳಿದರೆ ಸಂಕಟ ಆಗುತ್ತೆ. ವಾಹನಗಳ ಹೊಗೆ, ಅಣುವಿಕಿರಣ ಹೊಮ್ಮಿಸುವ ಮಿಲಿಟರಿ ಉಪಕರಣಗಳು, ಅಸಮರ್ಪಕ ತ್ಯಾಜ್ಯ ವಿಲೇವಾರಿ, ರಾಸಾಯನಿಕ ಅಸ್ತ್ರ-ಶಸ್ತ್ರಗಳು ಇತ್ಯಾದಿಗಳು ಇವೆಲ್ಲಾ ನಮ್ಮದೇ ಸ್ವಯಂಕೃತ ಅಪರಾಧಗಳು. ಈ ಮಾಲಿನ್ಯದಿಂದ ಹೃದಯರೋಗ, ಅಸ್ತಮಾ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬಂದು ಜನರ ಜೀವನ ನರಕ ಮಾಡುತ್ತಿವೆ. ಇದಕ್ಕೆ ಪರಿಹಾರ ಇಲ್ಲವೇ? ನಮಗೆಲ್ಲಾ ಸರಿಯಾದ ಬುದ್ಧಿ ಕೊಡದಿದ್ದ ಮೇಲೆ ನೀನೂ ಒಬ್ಬ ದೇವರಾ?
ದೇವರು: ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಗಾದೆ ಹುಟ್ಟಿಕೊಂಡಿರೋದು ನಿಮ್ಮ ಇಂತಹ ನಡವಳಿಕೆಯಿಂದಲೇ! ಮಾಲಿನ್ಯ ಮಾಡೋರು ನೀವು, ಅದರ ಫಲ ಅನುಭವಿಸೋರೂ ನೀವೇನೇ! ತಡೆಗಟ್ಟೋಕೆ ಏನಾದರೂ ಮಾಡಿದರೆ ಅದರ ಉಪಯೋಗ ಆಗೋದೂ ನಿಮಗೇನೇ! ಹೇಗೆ ಮಾಡಬೇಕು, ಏನು ಮಾಡಬೇಕು, ಏಕೆ ಮಾಡಬೇಕು ಅನ್ನೋದೆಲ್ಲಾ ನಿಮಗೇ ಬಿಟ್ಟಿದ್ದು. ನಿಮಗೆ ಬದುಕಬೇಕಾ? ಸರಿಯಾಗಿ ಬದುಕಿ. ಹಾಳಾಗಬೇಕಾ, ಹಾಳಾಗಿ. ನಿಮಗೆ ಪೂರ್ಣ ಸ್ವಾತಂತ್ರ್ಯ ಇದೆಯಲ್ಲಾ! ನಾನು ಹಿಂದೇನೇ ಹೇಳಿದ್ದೇನೆ ಅಲ್ಲವಾ? ಮಾಡಿದ್ದುಣ್ಣೋ ಮಹರಾಯ!
     'ನನ್ನ ಹೆಂಡತಿ ಮೊದಲೇ ಹೇಳಿದ್ದಳು, ರತ್ನಗಿರಿಬೋರೆ ಕಡೆಗೆ ಹೋಗಬೇಡಿ, ಗಾಳಿ ಮೆಟ್ಟಿಕೊಳ್ಳುತ್ತೆ ಅಂತಾ. ಅದು ನಿಜವಾಯಿತು' ಎಂದು ಗೊಣಗಿಕೊಳ್ಳುತ್ತಾ ಗಣೇಶರು ಮರಳಿ ಮನೆಯ ಕಡೆಗೆ ಹೆಜ್ಜೆ ಹಾಕಿದರು.
-ಕ.ವೆಂ.ನಾಗರಾಜ್.

Comments

Submitted by nageshamysore Fri, 02/12/2016 - 01:09

ಕವಿಗಳೆ ನಮಸ್ಕಾರ.. ಇವತ್ನಿಂದನೆ ರಿಸರ್ಚ್ ಶುರು ಮಾಡ್ಕೊಳೋಣ ಉಸಿರಾಟನ ಹೇಗೆ ನಿಯಂತ್ರಣದಲ್ಲಿಟ್ಟುಕೊಂಡು ಚಿರಾಯು ಆಗ್ಬೇಕು ಅಂತ..ಈ ಬಾರಿ ಗಣೇಶರಿಗೆ ಹಿಡಿದಿದ್ದ ಗಾಳಿನೂ ಜಾಡಿಸಿಬಿಟ್ಟ ದೇವರು :-)

Submitted by kavinagaraj Fri, 02/12/2016 - 12:19

In reply to by nageshamysore

ನಮಸ್ತೆ, ನಾಗೇಶರೇ. ದೇವರನ್ನು ಜಾಡಿಸಿರುವುದು ಗಣೇಶರು! ಪ್ರತಿಯಾಗಿ ದೇವರು ಜಾಡಿಸಿರುವುದು ಗಣೇಶರನ್ನಲ್ಲ, ನಾಗರಾಜ, ನಾಗೇಶರು ಸೇರಿದಂತೆ ನಮ್ಮ-ನಿಮ್ಮೆಲ್ಲರನ್ನೂ!! :(

Submitted by H A Patil Sat, 02/13/2016 - 19:24

ಕವಿ ನಾಗರಾಜ ರವರಿಗೆ ವಂದನೆಗಳು
ದೇವರೊಡನೆ ಸಂದರ್ಶನ ಚೆನ್ನಾಗಿದೆ ಖುಷಿ ನೀಡಿತು ಧನ್ಯವಾದಗಳು.