ಯೋಗಶಾಸ್ತ್ರ

ಯೋಗಶಾಸ್ತ್ರ

 
ಯೋಗಶಾಸ್ತ್ರ  ಎನ್ನುವುದು ಒಂದು ಪರಿಪೂಣ೯ ವಿಜ್ಞಾನ. ಯೋಗಶಾಸ್ತ್ರ  ಎಂಬ ಈ ಶಬ್ದ ಬಂದ  ಕೂಡ್ಲೆ ನಮಗೆ  ಜ್ಞಾಪಕಕ್ಕೆ  ಬರುವವರು ಪತಂಜಲಿಗಳು ಮಹಷಿ೯ಗಳೇ. ಇವರು ಬರೆದಿರುವ ಯೋಗಶಾಸ್ತ್ರದ   ಯೋಗಸೂತ್ರ ಗಳೇ ಇಲ್ಲಿ  ಪ್ರಮಾಣ.  ಯೋಗಶಾಸ್ತ್ರವೆನ್ನುವ   ವಿಜ್ನಾನವನ್ನು ನಂಬಲು ಯಾವುದೇ ಆಧಾರದ ಅಗತ್ಯವೇ ಇಲ್ಲ,  ಏಕೆಂದರೆ ಯೋಗವಿಜ್ಞಾನವು  ಎಂದಿಗೂ ನಂಬಿಕೆಯನ್ನು ಪ್ರತಿಪಾದಿಸುವುದೇ ಇಲ್ಲ.  ಯೋಗವಿಜ್ಞಾನವು ತನ್ನ ಅನುಭವವೇದ್ಯವಾದ ಸೂತ್ರಗಳನ್ನು ಸರಳವಾಗಿ ಹಂತ ಹಂತವಾಗಿ ವಿವರಿಸಲ್ಪಟ್ಟಿದೆ.   ಯೋಗವಿಜ್ಞಾನ ಹೇಳುವುದಿಷ್ಟು ಯೋಗಸೂತ್ರಗಳಲ್ಲಿ ಏನೇನು ಹೇಳಲ್ಪಟ್ಟಿದೆಯೋ ಅದನ್ನು  "ಸ್ವಯಂ ನೀನೆ ಅನುಭವಿಸು".  ವಿಜ್ಞಾನದಲ್ಲಿ ನಾವು ಹೇಗೆ ಪ್ರಯೋಗವನ್ನು ಮಾಡುತ್ತಾ, ನೋಡುತ್ತಾ ಅದರ ಮಹತ್ವವನ್ನು ಅರಿತು ಅನುಭವಿಸುತ್ತೇವೋ,  ಹಾಗೆ ಯೋಗವನ್ನು ಅರಿತು, ಅಭ್ಯಾಸ  ಮಾಡಿ ಅನುಭವಿಸಬೇಕು. ಆಗಲೇ ಯೋಗವಿಜ್ಞಾನದ ನಿಜವಾದ ಮಹತ್ವ ತಿಳಿಯಲು  ಸಾಧ್ಯ. 
ಪ್ರಯೋಗ ಮತ್ತು ಅನುಭವ ಇವೆರಡರ ಗುರಿ ಒಂದೆ ಆಗಿದ್ದರೂ,  ಇವೆರಡರ ದಿಕ್ಕುಗಳು ಮಾತ್ರ ಬೇರೆ ಬೇರೆಯೇ!  ಪ್ರಯೋಗವೆನ್ನುವುದು ಎಲ್ಲರ ಕಣ್ಣಿಗೂ ಗೋಚರವಾಗುವಂತಹುದು. ಏಕೆಂದರೆ ಅಲ್ಲಿ ನಡೆಯುವ ಪ್ರತಿಯೊ೦ದು ಪ್ರಯೋಗದ ಕ್ರಿಯೆಯನ್ನು ನಾವು ನೋಡುತ್ತೇವೆ,    ಆದರೆ, ಅನುಭವ ಎನ್ನುವುದು ಸ್ವಯಂ ಜನ್ಯವಾದದ್ದು, ಸ್ವಯಂ ವೇದ್ಯವಾದದ್ದು. ನಮ್ಮ  ಅಂತರಂಗದೊಳಗೆ ನಡೆಯುವ ಪ್ರಯೋಗದ ಪ್ರಕ್ರಿಯೆಯನ್ನು   ಅನುಭವಿಸಬೇಕೇ ಹೊರತು ಪ್ರಯೋಗಶಾಲೆಯಲ್ಲಿ ನೋಡಿದಂತೆ ನೋಡಲಾಗುವುದಿಲ್ಲ. ವಿಜ್ಞಾನ ಹೇಳುತ್ತದೆ, "ಪ್ರತ್ಯಕ್ಷವಾಗಿ ಕಂಡರೂ, ಪ್ರಮಾಣಿಸಿ ನೋಡು", ಯಾವುದೇ ವಿಷಯವನ್ನು ನೇರವಾಗಿ ಒಪ್ಪಿಕೊಳ್ಳಬೇಡ; ಎಷ್ಟು ಸಾಧ್ಯವೋ ಅಷ್ಟು ಸಂದೇಹದಿಂದ ನೋಡಿ  ಪರಾಮರ್ಶಿಸು ಎನ್ನುತ್ತದೆ. ಹಾಗೆಂದ ಮಾತ್ರಕ್ಕೆ ಇವೆಲ್ಲವೂ  ನಂಬಲಹ೯ವಲ್ಲದ್ದು ಎನ್ನುವ ಅಪನಂಬಿಕೆ ಖಂಡಿತಾ ಬೇಡ. ಏಕೆಂದರೆ , ಅಪನಂಬಿಕೆಯೂ ಕೂಡಾ ಒಂದು ಬಗೆಯ ನಂಬೇಕೆಯೇ ಅಲ್ಲವೇ? 
ಯೋಗಶಾಸ್ತ್ರ  ಅನುಭವ ವೇದ್ಯವಾದದ್ದು ಮತ್ತು ಪ್ರಾಯೋಗಿಕವಾದದ್ದು. ಯೋಗಶಾಸ್ತ್ರ  ಎಲ್ಲರ  ನಂಬಿಕೆಗೂ ಮೀರಿದ ಅನುಭವವಾಗಿದೆ. ಯೋಗದ  ಸತ್ಯದಶ೯ನವನ್ನು ಅಥ೯ಮಾಡಿಕೊಳ್ಳಬಹುದೇ
ಹೊರತು, ಕೇವಲ  ನಂಬಿಕೆಯಿಂದಲೇ  ಯೋಗಾನುಭವವನ್ನು ಪಡೆಯಲು ಸಾಧ್ಯವಿಲ್ಲ, ನಮ್ಮಲ್ಲಿರುವ  ಮನಸ್ಥಿತಿ, ನಮ್ಮೊಳಗಿನ ಮನಸ್ಸು ಸಂಪೂಣ೯ವಾಗಿ ಯೋಗಶಾಸ್ತ್ರವನ್ನು ಅರಿಯಬೇಕಾದರೆ, ಯೋಗಶಾಸ್ತ್ರ  ಮತ್ತು ಯೋಗವಿಜ್ಞಾನದ ದೃಷ್ಟಿಕೋನದ ಜೊತೆಗೆ ನಿರಂತರ ಸಾಧನೆ ಮಾಡಬೇಕಾಗುತ್ತದೆ.  ಆಗ ಯೋಗವು ಪರಿಪೂಣ೯ವೆನಿಸುತ್ತದೆ.

Comments