ಶಿಕ್ಷೆಯೇ ಶಿಕ್ಷಣ

ಶಿಕ್ಷೆಯೇ ಶಿಕ್ಷಣ

 
                     ಬಾಲ್ಯದಲ್ಲಿ ಮಕ್ಕಳು  ತಪ್ಪು ಮಾಡಿದಾಗ ನಮ್ಮ ಹಿರಿಯರು, ತಂದೆ-ತಾಯಂದಿರು, ಗುರುಗಳು ಪುನಃ ತಪ್ಪು ಮಾಡದಿರಲೆ೦ದು ಸೂಕ್ತ ಮಾಗ೯ದಶ೯ನ ನೀಡುತ್ತಿದ್ದರು.  ಸುಧಾರಿಸದೇ ಇದ್ದಾಗ   ತಪ್ಪನ್ನು ತಿದ್ದಿಕೊಳ್ಳಲೆ೦ದು ಶಿಕ್ಷೆ ನಿಡುತ್ತಿದ್ದರು.    ನಾವೆಲ್ಲರೂ ಬದುಕಿನಲ್ಲಿ ಕೆಲವೊಮ್ಮೆ  ತಿಳಿದೋ ತಿಳಿಯದೆಯೋ ತಪ್ಪುಗಳನ್ನು  ಮಾಡುವುದುಂಟು .  ಭಗವಂತ ಕೂಡಾ ನಮ್ಮ ತಪ್ಪುಗಳಿಗೆ  ಕೊಡುವ ಕಷ್ಟ, ದುಃಖ , ನೋವು ಇತ್ಯಾದಿಗಳೆಲ್ಲಾ ಮೇಲುನೋಟಕ್ಕೆ ಶಿಕ್ಷೆಯೇ  ಆಗಿ ಕಂಡರೂ, ಅದು ನಮಗೆ ಒಂದು ಉತ್ತಮ  ಶಿಕ್ಷಣವನ್ನು   ನೀಡುತ್ತದೆ. ಶಿಕ್ಷೆಯೆ೦ದರೆ  ಅದೊಂದು ರೀತಿಯ ಶಿಕ್ಷಣವೇ ಹೊರತು ಇನ್ನೇನೂ ಅಲ್ಲ.   ಭಗವಂತ ದಯಾಮಯ, ಕರುಣಾಳು, ಆಪತ್ಭಾಂಧವನೇ ಹೊರತು  ಕಾಠಿಣ್ಯನಲ್ಲ. ನಾವು ಮಾಡುವ ಅದೆಷ್ಟೋ ತಪ್ಪುಗಳನ್ನು ಕ್ಷಮಿಸಿ  ಸಲಹುತ್ತಾ ಬಂದಿದ್ದಾನೆ. ತನ್ನ ತಪ್ಪನ್ನು ತಾನು ಅರಿತುಕೊಂಡು ಪಶ್ಚಾತ್ತಾಪದಿಂದ ಬೆಂದು, ಪುನಃ ತಪ್ಪಾಗದಂತೆ ತನ್ನನ್ನು ತಾನು ಸುಧಾರಿಸಿಕೊಳ್ಳಲು  ಮನಸ್ಸು ಮಾಡಿದಾಗ  ಭಗವಂತ ಎಲ್ಲಾ ತಪ್ಪುಗಳನ್ನು ಕ್ಷಮಿಸಿಬಿಡುತ್ತಾನೆ.  
 
                      ನ್ಯಾಯಾಲಯಗಳಲ್ಲಿ ಕೂಡಾ ಅಪರಾಧಿಗಳಿಗೆ ನೀಡುವ ಶಿಕ್ಷೆಯನ್ನೂ  ಸಹಾನುಭೂತಿಯಿ೦ದ ಈ ದೃಷ್ಟಿಯಲ್ಲಿ   ವಿಶ್ಲೇಷಿಸಿ ಶಿಕ್ಷೆಯನ್ನು ಕಡಿಮೆ ಮಾಡುವುದು, ಮನ್ನಾ ಮಾಡುವುದೂ ಇದೆ. ಅಮೇರಿಕ ದೇಶದ ಪ್ರಸಿದ್ದ ಅಧ್ಯಕ್ಷರಾಗಿದ್ದ ಅಬ್ರಹಾ೦ ಲಿಂಕನ್ನರ  ಉನ್ನತಾದಶ೯ವು ಗಮನಾಹ೯ವಾಗಿದೆ.   ಜೀವಾವಧಿ  ಜೈಲುವಾಸದ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬನು, ತನ್ನ ಹತ್ತು ವಷ೯ಗಳ ಅವಧಿಯಲ್ಲಿ ಶಾಂತಿ, ಪ್ರೀತಿ, ಸಭ್ಯತೆಯಲ್ಲಿ  ಜೈಲುವಾಸ ಅನುಭವಿಸಿರುತ್ತೇನೆ,  ನನ್ನ ಉಳಿದ ಶಿಕ್ಷೆಯನ್ನು ಮಾಫಿ ಮಾಡುವಂತೆ ಅಜಿ೯ ಕಳುಹಿಸಿದ. ನಿಯಮದಂತೆ  ಅಜಿ೯ ಅಧ್ಯಕ್ಷ  ಲಿ೦ಕನ್ನರ ಬಳಿ ಬಂತು, ನಿಯಮಾನುಸಾರವಾಗಿ ನಾಡಿನ ಗಣ್ಯ  ವ್ಯಕ್ತಿಯೊಬ್ಬರ ಶಿಫಾರಸು ಪತ್ರವನ್ನು ಲಗತ್ತಿಸಬೇಕಾಗಿತ್ತು. ಅದಿಲ್ಲದಿದ್ದರೆ ಇಂತಹ ಅಜಿ೯ಗಳನ್ನು ಪರಿಗಣಿಸಲಾಗುತ್ತಿರಲಿಲ್ಲ.
 
                       ಕೈದಿಯು ತನ್ನ ಅಜಿ೯ಯಲ್ಲಿ ತನ್ನ ಅಹ೯ತೆ, ಕಾಯ೯ಪಟುತ್ವ, ಸೇವಾದೃಷ್ಟಿ ಇತ್ಯಾದಿಗಳ ಬಗ್ಗೆ ಬರೆದಿದ್ದನಾದರೂ, ಶಿಫಾರಸು ಪತ್ರ ಲಗತ್ತಿಸಿರಲಿಲ್ಲ. ಲಿ೦ಕನ್ನರು ಕೈದಿಯ ಅರ್ಜಿಯನ್ನು ಓದಿ ಅತ್ಯಂತ ಪ್ರಭಾವಿತರಾದರು,  ಹಾಗೂ ಕೈದಿಗೆ ಶಿಕ್ಷೆಯನ್ನು ಮಾಫಿ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದರು.  ಇಷ್ಟರಲ್ಲಿ ಅವರ ಕಾನೂನು ಸಲಹೆಗಾರರು  ಗಣ್ಯರ ಶಿಫಾರಸಿಲ್ಲದೆ ಅರ್ಜಿಯನ್ನು ಮಾಫಿಗೆ ಪರಿಗಣಿಸುವಂತಿಲ್ಲ ಎಂದು ಖಡಾ ಖ೦ಡಿತವಾಗಿ ನುಡಿದರು. ಇದನ್ನು ಕೇಳಿದ ಲಿ೦ಕನ್ನರು ಕೈದಿಯ ನಡತೆ,  ಸ್ವಭಾವಗಳ ಬಗ್ಗೆ ಗುಪ್ತ ವಿಚಾರಣೆ ನಡೆಸಿ ವರದಿ ನೀಡಲು ತಿಳಿಸಿದರು.  ಕೈದಿಯ  ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಬದಲಾಗಿದ್ದಾನೆ೦ದು ಗುಪ್ತಚರ ವಿಭಾಗದವರು ವರದಿ ಕೊಟ್ಟರು. ಈ ಮಾಹಿತಿಯನ್ನು ಆಧರಿಸಿ  ಲಿಂಕನ್ನರು  ಕಾನೂನು ಸಲಹೆಗಾರರನ್ನು ಕರೆದು " ಈ ಕೈದಿಗೆ ಗಣ್ಯ ವ್ಯಕ್ತಿಯ ಶಿಫಾರಸು ಪತ್ರ ಇಲ್ಲದಿದ್ದರೂ  ಈತನ ಬದುಕು ಬದಲಾಗಿದೆ. ಆದಶ೯ ನಾಗರಿಕನಾಗಿ ಬದಲಾಗಿದ್ದಾನೆ  ಆದುದರಿ೦ದ ಇವನನ್ನು ಬಿಡುಗಡೆಮಾಡಿ," ಎಂದು ತಾವೇ ಶಿಫಾರಸ್ಸು ಪತ್ರ ನೀಡಿದರು. 
                      ಆತನಿಗೆ ಹಿಂದೊಮ್ಮೆ ನೀಡಲಾದ ಆ ಶಿಕ್ಷೆಯು ಶಿಕ್ಷಣವಾಗಿ ಪರಿಣಮಿಸಿತು.   ಈ ಕೈದಿಯ ಪಾಲಿಗೆ ಭಗವಂತನು ಲಿಂಕನ್ನರನ್ನು ತೋರಿಸಿದ. 
 

Comments

Submitted by kavinagaraj Tue, 02/16/2016 - 12:12

ವಿಚಾರ ಚೆನ್ನಾಗಿದೆ. ಇಲ್ಲಿ ಮಾತ್ರ ಕೈದಿಗಳಿಗೆ ಎರಡು ಅವಕಾಶಗಳಿವೆ: 1.ತತ್ವಜ್ಞಾನಿಯಾಗುವುದು, 2. ದೊಡ್ಡ ಕ್ರಿಮಿನಲ್ ಆಗುವುದು. ಎರಡನೆಯದಕ್ಕೇ ಹೆಚ್ಚು ಅವಕಾಶಗಳಿವೆ ಎಂಬುದು ನನ್ನ ಸೇವೆ ಮತ್ತು ಅನುಭವಗಳಿಂದ ತಿಳಿದುಬಂದಿರುವ ಸಂಗತಿ!!