ದೇವರೊಡನೆ ಸಂದರ್ಶನ - 12

ದೇವರೊಡನೆ ಸಂದರ್ಶನ - 12

ದೇವರು: ಗಣೇಶಾ, ನಿನ್ನೆ ಸಿಟ್ಟು ಮಾಡಿಕೊಂಡು ಹೋಗಿದ್ದೆ, ಈಗ ಸಮಾಧಾನವಾಗಿದ್ದೀಯಾ?

ಗಣೇಶ: ಸಿಟ್ಟು ಬರದೇ ಇರುತ್ತಾ? ಸಂಕಟ ಬಂದಾಗ ವೆಂಕಟರಮಣ ಅಂತ ಗಾದೇನೇ ಇದೆ. ನಮಗೆ ಏನಾದರೂ ಸಮಸ್ಯೆ ಬಂದರೆ ಪರಿಹಾರ ಕೊಡು ಅಂದರೆ ನೀವೇ ಸರಿಮಾಡಿಕೊಳ್ಳಿ ಅನ್ನೋದಾದರೆ ನೀನೆಂಥಾ ದೇವರು? ನಾವೇ ಎಲ್ಲಾ ಸರಿ ಮಾಡಿಕೊಳ್ಳೋದಾದರೆ ನೀನಾದರೂ ಏಕೆ ಬೇಕು?
ದೇವರು: ಈ ವಿಷಯ ಬರಬರುತ್ತಾ ನಿನಗೇ ತಿಳಿಯುತ್ತೆ. ಜ್ಞಾನ ಮತ್ತು ಅನುಭವ ಎಲ್ಲವನ್ನೂ ನಿಮಗೆ ಅರ್ಥ ಮಾಡಿಸುತ್ತೆ. ಇರಲಿ ಬಿಡು. ಮುಂದೊಂದು ದಿನ ನಿನಗೇ ಉತ್ತರ ಹೊಳೆಯುತ್ತದೆ. ಆಗ ಇಂತಹ ಪ್ರಶ್ನೆ ಉದ್ಭವವಾಗುವುದೇ ಇಲ್ಲ. ಈಗ ಮುಂದಕ್ಕೆ ಹೋಗೋಣ. ವಾಯುವಿಗಿಂತ ದೊಡ್ಡದು ಯಾವುದು ಅನ್ನೋದರ ಬಗ್ಗೆ ತಿಳಿಯಲು ನಿನಗೆ ಆಸಕ್ತಿ ಇದ್ದರೆ ಹೇಳುವೆ. ಇಲ್ಲದಿದ್ದರೆ ಇಲ್ಲ.
ಗಣೇಶ: ಆಸಕ್ತಿ ಇಲ್ಲದಿದ್ದರೆ ಇಲ್ಲಿಗೆ ಏಕೆ ಬರುತ್ತಿದ್ದೆ? ದೇವರಾಗಿ ನಿನಗೆ ಅಷ್ಟೂ ತಿಳಿಯದೆ ಇದ್ದೀತೆ? ಗೊತ್ತಿದ್ದೂ ತಮಾಷೆ ಮಾಡುತ್ತಿದ್ದೀಯಾ ಅಂತ ನನಗೆ ಗೊತ್ತು. ಜೀವ ಉಳಿಸೋ ಗಾಳಿಗಿಂತ ದೊಡ್ಡದು ಯಾವುದಿರಬಹುದು?
ದೇವರು: ಆಕಾಶ! 
ಗಣೇಶ: ಆಕಾಶ????
ದೇವರು: ಹೌದು, ಆಕಾಶಾನೇ! ನೀನು ಆಕಾಶವನ್ನು ಅರ್ಥ ಮಾಡಿಕೊಂಡೆಯಾದರೆ ನನ್ನನ್ನೇ ಅರ್ಥ ಮಾಡಿಕೊಂಡಂತೆ! ಕಲ್ಪನೆ ಮಾಡಿಕೋ, ಭೂಮಿ ನೀರಿನಲ್ಲಿ ಮುಳುಗಿ ಕರಗಿಹೋದರೆ? ನೀರು ಬೆಂಕಿಯಿಂದ ಒಣಗಿ ಆವಿಯಾದರೆ? ಬೆಂಕಿಯನ್ನು ಗಾಳಿ ನಂದಿಸಿದರೆ? ಗಾಳಿ ಆಕಾಶದಲ್ಲಿ ಐಕ್ಯವಾದರೆ? ಕೊನೆಯಲ್ಲಿ ಉಳಿಯುವುದು ಆಕಾಶ ಮಾತ್ರ, ಆಕಾಶ, ಆಕಾಶ, ಎಲ್ಲೆಲ್ಲೂ ಆಕಾಶ, ಅಷ್ಟೆ!
ಗಣೇಶ: ಅಷ್ಟಕ್ಕೂ ಈ ಆಕಾಶ ಅಂದರೆ ಏನು? ಮೇಲಿದೆ ಅಂದುಕೊಂಡರೆ ಎಷ್ಟು ಮೇಲೆ ಹೋದರೂ ಅದೂ ಮೇಲಕ್ಕೆ ಹೋಗುತ್ತಿರುತ್ತೆ? ಹಾಗಾದರೆ ಅದು ಖಾಲಿಜಾಗವಾ? ಅದು ಎಲ್ಲಿದೆ? ಹೇಗಿದೆ?
ದೇವರು: ಆಕಾಶ ಅಂದರೆ ಮೇಲಿದೆ ಅಂದುಕೊಂಡಿದ್ದೀಯಾ? ನೀನು ಹೇಳಿದೆಯಲ್ಲಾ, ಖಾಲಿ ಜಾಗ ಅಂತ, ಒಂದು ರೀತಿಯಲ್ಲಿ ಅದು ಖಾಲಿ ಜಾಗವೇ! ಆದರೆ ಈ ಖಾಲಿ ಜಾಗದ ವಿಶೇಷ ಅಂದರೆ ಈ ಖಾಲಿ ಜಾಗವೇ ಇಡೀ ಬ್ರಹ್ಮಾಂಡಕ್ಕೆ, ಜೀವ ಸಂಕುಲಕ್ಕೆ ಆಶ್ರಯದಾತವಾಗಿದೆ. ಆಕಾಶ ಇಲ್ಲದ ಸ್ಥಳವಿಲ್ಲ. ಇಡೀ ಜಗತ್ತು ಎಷ್ಟು ದೊಡ್ಡದಾಗಿದೆಯೋ ಅದಕ್ಕಿಂತಲೂ ದೊಡ್ಡದು ಈ ಆಕಾಶ! ಜಗತ್ತು ಇರುವುದೇ, ನಿಂತಿರುವುದೇ ಆಕಾಶದಲ್ಲಿ.
ಗಣೇಶ: ಅದು ಹೇಗೆ ಆಕಾಶ ಎಲ್ಲದಕ್ಕೂ ಆಶ್ರಯ ಕೊಟ್ಟಿದೆ?
ದೇವರು: ಜಾಗ ಇದ್ದರೆ ತಾನೇ ಏನಾದರೂ ಇರಲು, ಬರಲು ಸಾಧ್ಯ? ಇದು ಮೊದಲ ಸರಳ ಸಂಗತಿ. ನೀನು ಎಲ್ಲಿ ನಿಂತಿದ್ದೀಯಾ? ಭೂಮಿಯ ಮೇಲೆ! ಭೂಮಿ ಎಲ್ಲಿದೆ? ಆಕಾಶದಲ್ಲಿದೆ? ಅದು ಖಾಲಿ ಜಾಗದಲ್ಲಿ ಆಧಾರವಿಲ್ಲದೆ ಹೇಗೆ ನಿಂತಿದೆ? ಯಾವುದೋ ಗುರುತ್ವಾಕರ್ಷಣ ಶಕ್ತಿಯೋ, ಮತ್ತೆಂತಹುದೋ ಶಕ್ತಿ ಅದನ್ನು ಆ ಜಾಗದಲ್ಲಿರಿಸಿದೆ ಅಂತಿಟ್ಟುಕೋ. ಇಡೀ ಸೂರ್ಯಮಂಡಲ, ನೀನು ಇರುವಂತಹುದೇ ಲೆಕ್ಕವಿಲ್ಲದಷ್ಟು ಸೂರ್ಯಮಂಡಲಗಳಿವೆ, ಆಕಾಶದ ಖಾಲಿ ಜಾಗದಲ್ಲಿದೆ. ಇವೆಲ್ಲವನ್ನೂ ಅಲ್ಲಲ್ಲಿ ಹಿಡಿದಿಟ್ಟಿರುವ ಯಾವುದೋ ಒಂದು ಶಕ್ತಿ ಇರಬಹುದಲ್ಲವಾ? ಆ ಶಕ್ತಿಗೂ ಜಾಗ ಕೊಟ್ಟಿರುವುದು ಈ ಆಕಾಶಾನೇ! ಆದ್ದರಿಂದ ಈ ಆಕಾಶ ಸರ್ವಶಕ್ತ, ಸರ್ವವ್ಯಾಪಿ. ಇಷ್ಟೆಲ್ಲಾ ಶಕ್ತಿ ಇದ್ದರೂ ಅದು ನಿರಾಕಾರಿ!
ಗಣೇಶ: ಆಕಾಶ ಸರ್ವಶಕ್ತ, ಸರ್ವವ್ಯಾಪಿ, ನಿರಾಕಾರಿ ಅಂತ ಒಪ್ಪಿಕೊಳ್ಳೋಣ. ಅದರ ಗುಣ ಏನು? 
ದೇವರು: ನಿಮ್ಮ ಭಾಷೆಯಲ್ಲೇ ಹೇಳಬೇಕೆಂದರೆ ನಿರ್ಗುಣ, ನಿರ್ಮಮ, ನಿರಹಂಕಾರಿ ಅನ್ನಬಹುದು. ಅದು ನೀವು ಏನು ಮಾಡಿದರೂ ಸುಮ್ಮನಿರುತ್ತೆ, ನಿರ್ಲಿಪ್ತ ಅನ್ನಬಹುದು. ಆಕಾಶವನ್ನು ತುಂಡರಿಸಲು ಸಾಧ್ಯವಿಲ್ಲ, ನೀರಿನಲ್ಲಿ ತೋಯಿಸಲು, ಬೆಂಕಿಯಲ್ಲಿ ಸುಡಲು ಆಗುವುದಿಲ್ಲ. ಒಂದು ಮಾತ್ರ ಸತ್ಯ, ಆಕಾಶದ ಅರಿವಿಗೆ ಬರದಂತೆ ಯಾರೇ ಆಗಲಿ, ಏನೇ ಆಗಲಿ ಮಾಡಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಜರುಗುವ ಪ್ರತಿಯೊಂದು ಸಂಗತಿಗೂ ಅದು ಸಾಕ್ಷಿಯಾಗಿರುತ್ತದೆ. ಯಾರಿಗೂ, ಯಾವುದಕ್ಕೂ ಅಡ್ಡಿ ಮಾಡುವುದಿಲ್ಲ. ಯಾರನ್ನೂ ದ್ವೇಷಿಸುವುದಿಲ್ಲ, ಯಾರನ್ನೂ ಪ್ರೀತಿಸುವುದೂ ಇಲ್ಲ.  ಅದಕ್ಕಿಂತ ಪ್ರೇಮಮಯಿ, ಸಮದರ್ಶಿ ಯಾವುದಿದ್ದೀತು? ಇನ್ನೊಂದು ವಿಷಯ ಕೇಳು, ಆಕಾಶಕ್ಕೆ ಪ್ರಾರಂಭವೂ ಇಲ್ಲ, ಕೊನೆಯೂ ಇಲ್ಲ. ಅದು ನಿಮ್ಮೆಲ್ಲರ ಒಳಗೂ ಇದೆ, ಹೊರಗೂ ಇದೆ. ಉರಿಯುವ ಬೆಂಕಿಯ ಜೊತೆಗೆ, ಭೋರ್ಗರೆಯುವ ಸಮುದ್ರದಲ್ಲಿ, ಯಾರೂ ಹೋಗಲಾಗದ ನೋಡಲಾಗದ ಸ್ಥಳಗಳಲ್ಲೂ ಅದು ಇದೆ.
ಗಣೇಶ: ಇದನ್ನೆಲ್ಲಾ ಕೇಳುತ್ತಿದ್ದರೆ ದೇವರಿಗೆ ಯಾವ ಗುಣ ಇದೆ ಅಂತಾ ಹೇಳುತ್ತಾರೋ ಅವೆಲ್ಲವೂ ಆಕಾಶಕ್ಕೆ ಇದೆ ಅಂತಾಯಿತು. ಹಾಗಾದರೆ ನಿನ್ನ ಬದಲಿಗೆ ಆಕಾಶವನ್ನೇ ಏಕೆ ಪೂಜೆ ಮಾಡಬಾರದು? ಇಲ್ಲೂ ಗೊಂದಲ, ಒಳ್ಳೆಯದೂ ಮಾಡಲ್ಲ, ಕೆಟ್ಟದೂ ಮಾಡಲ್ಲ ಅಂತಾದಮೇಲೆ ಪೂಜೆಯನ್ನಾದರೂ ಏಕೆ ಮಾಡಬೇಕು?
ದೇವರು: ಇದು ನೀನು ನಾನು ಹೇಳಿದ್ದನ್ನು ಅರ್ಥ ಮಾಡಿಕೊಂಡಿರುವುದನ್ನು ತೋರಿಸುತ್ತಿದೆ. ಇನ್ನು ಪೂಜೆ ಅಂದರೆ ಅದಕ್ಕೂ ಇರುವ ನಿಜಾರ್ಥವೇ ಬೇರೆ. ಮುಂದೊಮ್ಮೆ ನಿನಗೆ ಗೊತ್ತಾಗುತ್ತೆ. 
ಗಣೇಶ: ಯಾವುದನ್ನೂ ಪರೀಕ್ಷೆ ಮಾಡದೆ ನಂಬಬಾರದು ಅಂತ ಹೇಳ್ತಾರೆ. ಈ ಆಕಾಶ ಕಣ್ಣಿಗೆ ಕಾಣಲ್ಲ, ಮುಟ್ಟಕ್ಕೆ ಸಿಕ್ಕಲ್ಲ. ಹೇಗೆ ಪರೀಕ್ಷೆ ಮಾಡೋದು?
ದೇವರು: ಕಣ್ಣಿಗೆ ಕಾಣಲ್ಲ ಅಂದಾಕ್ಷಣ ಆಕಾಶ ಇಲ್ಲವಾಗುತ್ತಾ? ನಂಬಲ್ಲ ಅಂದಾಕ್ಷಣ ಅದು ಸುಳ್ಳಾಗುತ್ತಾ? ಆಕಾಶವನ್ನು ಪರೀಕ್ಷೆ ಮಾಡಿ ತಿಳಿಯುವ ಶಕ್ತಿ, ಸಾಮರ್ಥ್ಯ ಬೆಳೆಸಿಕೊಂಡರೆ ಪರೀಕ್ಷೆ ಮಾಡಬಹುದು. 
ಗಣೇಶ: ಈ ವಿಷಯ ಹತ್ತಲ್ಲ, ಹರಿಯಲ್ಲ. ಹೋಗಲಿ ಬಿಡು. ಆಕಾಶ ಅನ್ನೋದು ದೊಡ್ಡದು ಅಂತ ಒಪ್ಪಿಕೊಳ್ಳಲೇಬೇಕು. ಬರ್ತೀನಿ, ನಮಸ್ಕಾರ, ನಿನಗೂ, ನಿನ್ನ ಆಕಾಶಕ್ಕೂ!
     ಮನೆಗೆ ಹೋಗಲು ಹೊರಟ ಸ್ವಲ್ಪ ದೂರದಲ್ಲೇ ಶ್ರೀಧರ್ ಕಣ್ಣಿಗೆ ಕಾಣಿಸಿಕೊಳ್ಳಬೇಕೇ? ಅವರ ತಂಗಿಯ ಮನೆಗೆ ಬಂದಿದ್ದರಂತೆ. ಅವರೂ ಬೆಳಗಿನ ವಾಕಿಂಗ್ ಮುಗಿಸಿ ಹಿಂತಿರುಗುತ್ತಿದ್ದರಂತೆ. ದೇವರ ಜೊತೆ ಮಾತನಾಡಿದ ವಿಷಯ ಗಣೇಶರು ಬಾಯಿ ಬಿಡದೆ, ಈ ಆಕಾಶದ ಮಹಿಮೆ ಎಷ್ಟು ದೊಡ್ಡದು ಅಂತ ಯೋಚಿಸುತ್ತಿದ್ದೆ ಅಂದರು. ಶ್ರೀಧರರಿಗೂ ವಿಷಯ ಸಿಕ್ಕಿತು. 
ಶ್ರೀಧರ್: ನಮ್ಮ ವೇದದಲ್ಲಿ ಇಡೀ ಬ್ರಹ್ಮಾಂಡವನ್ನೇ ನಿಯಂತ್ರಿಸುವ ವಿರಾಟ್ ಶಕ್ತಿ ಬಗ್ಗೆ ಹೀಗೆ ಹೇಳಿದೆ: ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ | ತದಂತರಸ್ಯ ಸರ್ವಸ್ಯ ಅದು ಸರ್ವಸ್ಯಾಸ್ಯ ಬಾಹುತಃ|| ಹೀಗಂದರೆ, ಅದು ವಿಶ್ವಕ್ಕೇ ಗತಿ ನೀಡುತ್ತದೆ, ಸ್ವತಃ ಚಲಿಸುವುದಿಲ್ಲ, ಅದು ದೂರದಲ್ಲಿದೆ, ಅದೇ ಹತ್ತಿರದಲ್ಲಿಯೂ ಇದೆ. ಅದು ಇದೆಲ್ಲದರ ಒಳಗೂ ಇದೆ, ಹೊರಗೂ ಇದೆ ಅಂತ ಅರ್ಥ. ಈ ಗುಣ ಎಲ್ಲಾ ಆಕಾಶಕ್ಕೆ ಇರೋದರಿಂದ ಆಕಾಶವನ್ನು ಕಣ್ಣಿಲ್ಲದೇ ಕಾಣಬಲ್ಲ ದೇವರ ಕಣ್ಣು ಅಂತ ಅನ್ನಬಹುದು.
ಗಣೇಶ: ಬಿಡಿ ಶ್ರೀಧರ್. ಬೇರೆ ವಿಷಯ ಮಾತನಾಡೋಣ. ನೀವೂ ಹಾಸನಕ್ಕೆ ಬನ್ನಿ ಅಂತ ಕರೆಯತ್ತಿದ್ದಿರಿ. ನನಗೂ ಬರಲಾಗಿರಲಿಲ್ಲ. ಹೀಗಾದರೂ ಭೇಟಿಯಾಯಿತಲ್ಲಾ! ಬನ್ನಿ ನಮ್ಮ ಮನೆಗೆ, ಕಾಫಿ ಕುಡಿದು ಹೋಗುವಿರಂತೆ.
     ಗಣೇಶರು ಶ್ರೀಧರರೊಂದಿಗೆ ಕುಳಿತು ಮಾತನಾಡುತ್ತಾ ಕಾಫಿ ಬರುವುದನ್ನು ಎದುರು ನೋಡುತ್ತಿದ್ದರು. ಇದ್ದಕ್ಕಿದ್ದಂತೆ ಲಹರಿ ಬಂದು, "ಬಂದೆ ಆಕಾಶದಲ್ಲಿ, ಇರುವೆ ಆಕಾಶದಲ್ಲಿ, ಹೋಗುವೆನಾಕಾಶದಲ್ಲಿ! ಆಹಾ! ಆಕಾಶ ಆಕಾಶ ಎಂಥಾ ಅವಕಾಶ!" ಎಂದು ಗುಣುಗುಣಿಸುತ್ತಾ, 'ಹೇಗಿದೆ' ಎಂಬಂತೆ ನೋಟವನ್ನು ಕಾಫಿ ತರುತ್ತಿದ್ದ ಮಡದಿಯೆಡೆಗೆ ಬೀರಿದರು. 'ನಿಮ್ಮ ಹಾಗೆಯೇ ಇದೆ' ಎಂಬರ್ಥದ ತಿರುನೋಟ ಬಂದಾಗ ಎಚ್ಚೆತ್ತುಕೊಂಡು  ಸುಮ್ಮನಾಗಿ ಶ್ರೀಧರರೊಂದಿಗೆ ಮಾತು ಮುಂದುವರೆಸಿದರು. 
-ಕ.ವೆಂ.ನಾಗರಾಜ್.

Comments

Submitted by nageshamysore Mon, 02/15/2016 - 22:32

ಕವಿಗಳೆ ನಮಸ್ಕಾರ.. ಆಕಾಶದ ಜತೆ ಶ್ರೀಧರರಿಗು ಗಾಳ ಹಾಕಿದ್ದೀರಾ.. ಅವರೂ ಆಕಾಶದ ಅವಕಾಶದಿಂದ ಇಣುಕುತ್ತಾರ ನೋಡೋಣ...!