ಸಣ್ಣಕಥೆ: ಕ್ಯಾಂಪಸ್ ಇಂಟರ್ವ್ಯೂವ್...

ಸಣ್ಣಕಥೆ: ಕ್ಯಾಂಪಸ್ ಇಂಟರ್ವ್ಯೂವ್...

 
(picture source : http://www.thinkstockphotos.com/image/stock-illustration-job-interview-c...)

ಕಾರನ್ನು ಟ್ರಾಫಿಕ್ಕಿನ ಚಕ್ರವ್ಯೂಹದ ನಡುವೆಯೆ ಹೇಗೇಗೊ ತೂರಿಸಿಕೊಂಡು, ಹೆಚ್ಚು ಕಡಿಮೆ ಕಾಲ್ನಡಿಗೆಯಷ್ಟೆ ವೇಗದಲ್ಲಿ ತೆವಳುತ್ತ, ಕೊನೆಗು ಟ್ರಾಫಿಕ್ಕಿಲ್ಲದ ದೊಡ್ಡ ಮುಖ್ಯ ರಸ್ತೆಗೆ ತಂದಾಗ ನಿರಾಳತೆಯ ನಿಟ್ಟುಸಿರು ಬಿಟ್ಟೆ. ಇದು ಇನ್ನೂ ಪಯಣದ ಆರಂಭ; ಹೊರಟಿರುವ ಗಮ್ಯದ ಕಡೆಗೆ ಇನ್ನು ಎಂಟು ಗಂಟೆಗಳ ದೂರವಿದೆ. ಕೇರಳದ ಇಂಜಿನಿಯರಿಂಗ್ ಕಾಲೋಜೊಂದರಲ್ಲಿ ನಮ್ಮ ಕಂಪನಿಗೆ ಕಾಲೇಜಿನಿಂದ ನೇರ ಅಭ್ಯರ್ಥಿಗಳನ್ನು ಆಯ್ದುಕೊಳ್ಳಲು ಕ್ಯಾಂಪಸ್ ಇಂಟರ್ವ್ಯೂ ಸಲುವಾಗಿ ಹೊರಟಿದ್ದು... ಜತೆಯಲ್ಲಿರುವ ಕೇಶವ ನಾಯರ್ ಎಂಬೆಡೆಡ್ ಸಾಫ್ಟ್ ವೇರ್ ವಿಭಾಗದಲ್ಲಿರುವ ಮ್ಯಾನೇಜರನಾದರು, ಅವನ ಪರಿಚಯ ಅಷ್ಟಾಗಿಲ್ಲ.. ಬಹುಶಃ ಈ ಟ್ರಿಪ್ಪಿನ ನಂತರ ಸ್ವಲ್ಪ ಹೆಚ್ಚಿನ ಪರಿಚಯವಾಗಬಹುದು... ಜತೆಗೆ ಮಾನವ ಸಂಪನ್ಮೂಲ ವಿಭಾಗದಿಂದ ಬಂದಿರುವ ಜಾನಕಿ ದೇವಿ.

ಮಧ್ಯೆ ಊಟ ತಿಂಡಿ ಕಾಫಿ ಎಂದು ಬ್ರೇಕ್ ಕೊಟ್ಟು, ಮತ್ತೆ ಹಾಗೂ ಹೀಗು ತಾಕಲಾಡುತ್ತ ಗಮ್ಯ ತಲುಪುವ ಹೊತ್ತಿಗೆ ಕತ್ತಲಾಗಿ ಹೋಗಿತ್ತು. ಇಂಟರ್ವ್ಯೂವ್ ಇದ್ದದ್ದು ಮರುದಿನವಾದ ಕಾರಣ ಅಲ್ಲೆ ಕಾಲೇಜು ಹಾಸ್ಟೆಲಿನ ಗೆಸ್ಟ್ ರೂಮಿನಲ್ಲಿ ರಾತ್ರಿ ಬಿಡಾರಕ್ಕೆ ವ್ಯವಸ್ಥೆಯಾಗಿತ್ತು. ಜಾನಕಿ ಇದರಲ್ಲೆಲ್ಲಾ ಕಿಲಾಡಿ. ಕಂಪನಿಯ ಕೆಲಸವೆ ಆದರು ಸುಮ್ಮನೆ ಹೋಟೆಲ್ಲು ವೆಚ್ಚವೇಕೆ ವ್ಯರ್ಥ ಮಾಡಬೇಕು ಎಂದು ಕಾಲೇಜಿನ ಗೆಸ್ಟ್ ರೂಮಲ್ಲಿ ಇರುವ ವ್ಯವಸ್ಥೆ ಮಾಡಿಬಿಟ್ಟಿದ್ದಾಳೆ.. ಹೇಗೂ ಅವರೂ ಇಲ್ಲವೆನ್ನುವಂತಿಲ್ಲ.. ಅಲ್ಲಿ ಸೊಳ್ಳೆ ಕಾಟ ಹೆಚ್ಚಾದ ಕಾರಣ , ರಾತ್ರಿ ಸೊಳ್ಳೆ ಬತ್ತಿ ಹಚ್ಚಿ ಮಲಗಿದರೆ ಸಾಕು, ಮನೆಯಲ್ಲಿದ್ದ ಹಾಗೆ ಅನಿಸಿ ಒಳ್ಳೆ ನಿದ್ದೆ ಬರುತ್ತೆ.. ಹೋಟೆಲ್ ರೂಮಿನದೇನು ಮಹಾ..? ಆ ಕಿಷ್ಕಿಂದದಲ್ಲಿ ಇರುವುದಕ್ಕಿಂತ ಇದೆ ವಾಸಿ ಎಂದು ದಾರಿಯಲ್ಲಿ ಸುಮಾರು ಆರೇಳು ಸಲ ಹೇಳಿದ್ದಾಳೆ - ಬಹುಶಃ ನಾವು ಮಾನಸಿಕವಾಗಿ ಅಲ್ಲಿರಲು ಸಿದ್ದರಾಗಿರಲಿ ಅಂತಿರಬೇಕು..

ಆದರೆ ಅದರಲ್ಲಿ ಸ್ವಲ್ಪ ಅತಿ ಎನಿಸಿದ್ದು ಮಾತ್ರ ರಾತ್ರಿಯೂಟದ ವ್ಯವಸ್ಥೆ.. ಹೇಗು ಕಾರಿತ್ತಾಗಿ ಸಿಟಿಯ ಯಾವುದಾದರು ಊಟದ ಹೋಟೆಲ್ಲಿಗೆ ಹೋಗಿ ಬರಬಹುದಿತ್ತು... ಅದು ಸಿಟಿಯಿಂದ ದೂರ ಎಂದು ಹೇಳಿ ಅಲ್ಲೆ ಹಾಸ್ಟೆಲಿನ ವೆಜಿಟೇರಿಯನ್ ಊಟವೆ ಓಕೆ ಎಂದು ಅಲ್ಲೆ ತಿನ್ನುವ ಹಾಗೆ ಮಾಡಿಬಿಟ್ಟಿದ್ದಳು..! ಅದೇ ಮೊದಲ ಬಾರಿಗೆ ನನಗೆ ಅಭ್ಯಾಸವಿಲ್ಲದ ಆ ಅನ್ನ ತಿಂದು, ನೀರಿನ ಬದಲಿಗೆ ನೀಡಿದ ವಿಶೇಷ ಬಣ್ಣದ ಕೇರಳದ ಟ್ರೇಡ್ ಮಾರ್ಕ್ ದ್ರವ ಪಾನೀಯ ಕುಡಿಯುವಂತಾಗಿತ್ತು.. ಆದರೂ ಆ ನೀರಿನ ಪಾನೀಯ ಮಾತ್ರ ಏನೊ ಚೇತೋಹಾರಿಯಾಗಿದೆ ಅನಿಸಿ ಎರಡೆರಡು ಬಾರಿ ಹಾಕಿಸಿಕೊಂಡು ಕುಡಿದಿದ್ದೆ.. ಪ್ರಯಾಣದ ಆಯಾಸಕ್ಕೊ, ಏನೊ ಸೊಳ್ಳೆ ಬತ್ತಿ ಹಚ್ಚಿ ಮಲಗುತ್ತಿದ್ದ ಹಾಗೆ ಮಂಪರು ಕವಿದಂತಾಗಿ ಗಾಢವಾದ ನಿದ್ದೆ ಬಂದುಬಿಟ್ಟಿತ್ತು , ಹೊಸ ಜಾಗವೆನ್ನುವ ಪರಿವೆಯಿಲ್ಲದೆ..

ಎಂಟೂವರೆಗೆ ಮೊದಲೆ ಒಂಭತ್ತಕ್ಕೆ ಆರಂಭವಾಗುವ ಪ್ರೋಗ್ರಾಮ್ ಹಾಲಿನತ್ತ ಬಂದು ತಲುಪಿದಾಗ ನಾನು ಮೊದಲ ಬಾರಿ ಆ ರೀತಿಯ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಪಾಲ್ಗೊಳ್ಳುತ್ತಿರುವುದು ನೆನಪಾಗಿಯೊ ಏನೊ, ಜಾನಕಿ ಅಲ್ಲಿನ ಕಾರ್ಯಸೂಚಿಯ ವಿವರಣೆ ಕೊಡುತ್ತ ಜತೆಗೆ ಅಲ್ಲಿ ನಡೆಯುವುದನ್ನೆಲ್ಲ ವಿವರಿಸತೊಡಗಿದಳು.. ಕೇಶವನಾಯರ್ ಈಗಾಗಲೆ ಪಳಗಿದ ಆಸಾಮಿಯಾದ ಕಾರಣ ಅವನಿಗದರ ಅಗತ್ಯವಿರಲಿಲ್ಲ.. ನಾನು ಮಾತ್ರ ಮೈಯೆಲ್ಲಾ ಕಿವಿಯಾಗಿ ಅವಳು ಹೇಳಿದ್ದನ್ನೆಲ್ಲ ಆಲಿಸತೊಡಗಿದೆ..

'ಎಲ್ಲಕ್ಕಿಂತ ಮೊದಲು ಆರಂಭವಾಗುವುದು ನಮ್ಮ ಪ್ರೆಸೆಂಟೇಶನ್... ನಮ್ಮ ಕಂಪನಿ, ಅದರ ಹಿನ್ನಲೆ, ಯಾಕೆ ನಮ್ಮ ಕಂಪನಿ ಸೇರಬೇಕು, ನಮ್ಮ ಪಾಸಿಟೀವ್ ಅಂಶಗಳೇನು? ಇದನ್ನೆಲ್ಲ ಎಲ್ಲಾ ಸ್ಟೂಡೆಂಟುಗಳಿಗೆ ಮನ ಮುಟ್ಟುವಂತೆ ಹೇಳಬೇಕಾದು ಮೊದಲ ಕೆಲಸ..'

'ಓಹ್.. ಇದಕ್ಕೆಲ್ಲ ಈಗಾಗಲೆ ರೆಡಿಮೇಡ್ ಸ್ಲೈಡ್ಸ್ ಇರಬೇಕಲ್ಲಾ? ಇದನ್ನು ಯಾರು ಪ್ರೆಸೆಂಟ್ ಮಾಡುತ್ತಾರೆ ? ನೀವೇನಾ? ' ಎಂದೆ - ಎಚ್.ಆರ್. ತಾನೆ ಈ ಕೆಲಸದ ಮುಂಚೂಣಿಯಲ್ಲಿರಬೇಕು ಎನ್ನುವ ಭಾವದಲ್ಲಿ..

' ಊಹೂಂ... ನೀನು ಮತ್ತು ನಾಯರ್ ಮಾಡಬೇಕು.. ನಾನು ಕಂಪನಿಯ ಜನರಲ್ ಸೆಟ್ ಅಫ್ ಬಗ್ಗೆ ಒಂದೆರಡು ಸ್ಲೈಡ್ ತೋರಿಸುತ್ತೇನೆ.. ನಂತರ ನೀನು ಮತ್ತು ನಾಯರ್ ಸರದಿ' ಎಂದಾಗ ನಾನು ಬಹುತೇಕ ಬೆಚ್ಚಿ ಎಗರಿಬಿದ್ದಿದ್ದೆ..

'ಓಹ್ ಜಾನಕಿ ಇದ್ಯಾಕೆ ಈಗ ಹೇಳ್ತಾ ಇದೀರಾ? ನಾನು ಆ ಸ್ಲೈಡುಗಳನ್ನು ನೋಡೂ ಇಲ್ಲ ಇವತ್ತಿನವರೆಗೆ.. ಇನ್ನು ಸಿದ್ದವಾಗಿ ಪ್ರೆಸೆಂಟಷನ್ ಕೊಡುವುದಾದರು ಹೇಗೆ.. ' ಎಂದೆ ಗಾಬರಿಯ ದನಿಯಲ್ಲಿ..

ನನ್ನ ಮಾತಿಗೆ ಒಂದಿನಿತು ಅಚ್ಚರಿಗೊಳ್ಳದೆ, ' ಅಲ್ಲೇನಿದೆ ? ಒಂದಷ್ಟು ಮಾಮೂಲಿ ಮಾಹಿತಿಗಳಷ್ಟೆ - ಅದೂ ನಿಮ್ಮ ಡಿಪಾರ್ಟ್ಮೆಂಟಿಗೆ ಸಂಬಂಧಿಸಿದ್ದಷ್ಟೆ.. ಐದು ನಿಮಿಷದಲ್ಲಿ ಪ್ರಿಪೇರ ಆಗಬಹುದು.. ನೋಡು ಇಲ್ಲೆ ಇದೆ ಅದರ ಪ್ರಿಂಟ್ ಔಟ್..' ಎನ್ನುತ್ತ ಕಾಗದದ ಕಟ್ಟೊಂದನ್ನು ನನ್ನತ್ತ ನೀಡಿದಳು..

ನಾನೂ ಅವಸರದಲ್ಲೆ ಅದನ್ನು ತಿರುವಿ ನೋಡಿದೆ - ನಿಜಕ್ಕು ಯಾವುದೆ ಸಿದ್ದತೆಯ ಅಗತ್ಯವಿರದ ರೀತಿಯ ಪುಟಗಳೆ.. ಆದರೆ ನನಗೇಕೊ ಆ ಮಾಹಿತಿಯೆ ಪೇಲವ ಅನಿಸಿತು.. ಇದರಿಂದ ಆ ಹುಡುಗರಲ್ಲಿ ನಮ್ಮ ಕಂಪನಿಯ ಬಗ್ಗೆ ಆಸಕ್ತಿ ಹುಟ್ಟುವುದಕ್ಕಿಂತ, ಅನುಮಾನ, ನಿರಾಸಕ್ತಿಗಳುಂಟಾಗುವುದೆ ಹೆಚ್ಚೇನೊ ? ಆ ಚಿಂತನೆಯಲ್ಲೆ ಜಾನಕಿಯತ್ತ ತಿರುಗಿ, ' ಹೌ ವಾಸ್ ದ ರಿಯಾಕ್ಷನ್ ಫಾರ್ ದೀಸ್ ಸ್ಲೈಡ್ಸ್ ಇನ್ ದಿ ಪಾಸ್ಟ್ ? ಪ್ರೆಸೆಂಟ್ ಮಾಡಲೇನೊ ಕಷ್ಟವಿಲ್ಲ ನಿಜ.. ಆದರೆ ಇದು ನನಗೆ ಬೋರಿಂಗ್ ಅನಿಸುವಷ್ಟು ಕೆಟ್ಟದಾಗಿದೆ - ಆನ್ಯೂಯಲ್ ಬ್ಯಾಲನ್ಸ್ ಶೀಟ್ ರಿಪೋರ್ಟ್ ತರ... ಆ ಹುಡುಗರಿಗೇನು ಆಸಕ್ತಿ ಇರುತ್ತೆ ಇದರಲ್ಲಿ..? ನನಗೇನೊ ಇದರಿಂದ ಮಾರ್ಕೆಟಿಂಗ್ ಆಗುತ್ತೆ ಅನ್ನೊ ನಂಬಿಕೆಯಂತು ಇಲ್ಲಾ...' ಎಂದೆ..

ಜಾನಕಿಯು ಹೌದೆನ್ನುವಂತೆ ತಲೆಯಾಡಿಸುತ್ತ, ' ಇದೊಂದು ರೀತಿಯ ಫಾರ್ಮಾಲಿಟಿ ನಮಗೆ - ನಮ್ಮ ಕಂಪನಿ ಬಗ್ಗೆ ತಿಳಿಯದವರಿಗೆ ಮಾಹಿತಿ ಕೊಡಬೇಕಲ್ಲ ? ಅದಕ್ಕೆ.. ಇದು ನೋಡಿ ಯಾರೂ ಎಗ್ಸೈಟ್ ಆಗಿದ್ದನ್ನ ನಾನೂ ನೋಡಿಲ್ಲ, ನಿಜ... ಆದರೆ ಇದನ್ನ ವರ್ಷಗಳ ಹಿಂದೆ ರೆಡಿ ಮಾಡಿದ್ದೆ ನಿಮ್ಮ ಬಿಗ್ ಬಿಗ್ ಬಾಸ್.. ಹಾಗೆ ಬಳಸ್ತಾ ಇದೀವಿ ಅಷ್ಟೆ..'

' ಹಾಗಾದ್ರೆ ಮೊದಲ ಎರಡು ಸ್ಲೈಡ್ ಮಾತ್ರ ಬಳಸಿ ಮಿಕ್ಕಿದ್ದಕ್ಕೆ ನಾ ಬೇರೆ ಸ್ಲೈಡ್ಸ್ ಯೂಸ್ ಮಾಡಲಾ? ನನ್ನ ಹತ್ತಿರ ಇಂಡಕ್ಷನ್ ಪ್ರೊಗ್ರಾಮಿಗೆಂದು ಮಾಡಿದ್ದ ಕೆಲವು ಸ್ಲೈಡ್ಸ್ ಇವೆ.. ಅದು ಈ ಕ್ಯಾಂಡಿಡೇಟುಗಳಿಗು ಇಂಟರೆಸ್ಟಿಂಗ್ ಆಗಿರುತ್ತೆ ಅನ್ಸುತ್ತೆ..'

' ಇಟ್ ಇಸ್ ಅಪ್ ಟು ಯು.. ಏನಿರುತ್ತೆ ಡಿಪಾರ್ಟ್ಮೆಂಟ್ ಮತ್ತೆ ಕಂಪನಿ ವಿಷಯ ಅದರಲ್ಲಿ ?' ಅವಳಿಗೇನು ಇಂತದ್ದೆ ಸ್ಲೈಡ್ಸ್ ಬಳಸಬೇಕೆನ್ನುವ ನಿರ್ಬಂಧವಿದ್ದಂತೆ ಕಾಣಲಿಲ್ಲ.. ಬಹುಶಃ ನಿಜಕ್ಕು ಇದು ಬರಿಯ ಫಾರ್ಮಾಲಿಟಿ ಮಾತ್ರವಾ?

' ಏನಿಲ್ಲ... ಹೇಗೆ ಈ ಆಧುನಿಕ ಪ್ರಪಂಚದಲ್ಲಿ ಐಟಿ ತನ್ನ ಅಧಿಪತ್ಯ ಸಾಧಿಸಿಕೊಳ್ಳುತ್ತಿದೆ, ಹೇಗೆ ಅದು ವ್ಯವಹಾರದ ಪ್ರತಿ ಹೆಜ್ಜೆಯಲ್ಲು ತನ್ನ ಛಾಪು ಮೂಡಿಸುತ್ತಿದೆ, ಅಲ್ಲಿ ಕೆಲಸ ಮಾಡುವ ಯುವ ಪೀಳಿಗೆ ನೀಡಬಹುದಾದ ಕಾಣಿಕೆ ಏನು, ಅವಕಾಶಗಳೇನು, ಭವಿಷ್ಯವೇನು - ಇತ್ಯಾದಿಗಳ ಮಾಹಿತಿ ಅಷ್ಟೆ.. ಅದರ ಜೊತೆ ಡಿಪಾರ್ಟ್ಮೆಂಟಿನ ವಿಷಯ ಇರೊ ನಿಮ್ಮ ಮೊದಲಿನೆರಡು ಸ್ಲೈಡ್ಸ್ ಸೇರಿಸಿಬಿಟ್ಟರೆ ಪರ್ಫೆಕ್ಟ್ ಸ್ಟೋರಿ ಆಗುತ್ತೆ..' ಹಳೆಯ ಸ್ಲೈಡುಗಳನ್ನು ನೆನೆಯುತ್ತ ನಾನೊಂದು ಚಿತ್ರ ಕಟ್ಟಿಕೊಡಲೆತ್ನಿಸಿದೆ ತುಸು ಮಾರ್ಕೆಟಿಂಗಿನ ಆಯಾಮ ನೀಡಲೆತ್ನಿಸುತ್ತ.. ನಾನೇನು ಮಾರ್ಕೆಟಿಂಗ್ ಎಕ್ಸ್ ಪರ್ಟ್ ಅಲ್ಲವಾದರು ಈ ತರದ ಮಾಹಿತಿ ಅವರಿಗೆ ಬೋರಿಂಗ್ ಅಂತೂ ಆಗಿರುವುದಿಲ್ಲ..

' ಸರಿ..ನನ್ನದೇನು ಅಭ್ಯಂತರ ಇಲ್ಲ.. ಜಸ್ಟ್ ಡೂ ದ ವೇ ಯೂ ವಾಂಟ್.. ಡೋಂಟ್ ಮೇಕ್ ಅ ಡಿಸಾಸ್ಟರ್ ಅಷ್ಟೆ..ಇನ್ನು ಇದು ಮುಗಿಯುತ್ತಿದ್ದಂತೆ ರಿಟನ್ ಟೆಸ್ಟ್ ಮಾಡುತ್ತೇವೆ.. ಆ ಹೊತ್ತಲ್ಲಿ ನೀವಿಬ್ಬರು ಟೆಸ್ಟ್ ಪೇಪರ್ ಡಿಸ್ಟ್ರಿಬ್ಯೂಟ್ ಮಾಡಿ ಮತ್ತೆ ಕಲ್ಲೆಕ್ಟ್ ಮಾಡಲು ಸಹಕರಿಸಿದರೆ ಸಾಕು... ಆದರೆ ನಂತರ ಅದರ ಮೌಲ್ಯ ಮಾಪನಕ್ಕೆ ಸಹಕರಿಸಬೇಕು...'

' ಅಂದರೆ...?'

ಅದುವರೆಗು ಸುಮ್ಮನಿದ್ದ ನಾಯರ್ ಬಾಯಿ ಹಾಕಿ, ' ಇದು ಮಲ್ಟಿಪಲ್ ಚಾಯ್ಸ್ ಕ್ವೆಶ್ಚನ್ಸ್... ಟೆಸ್ಟ್ ಮುಗಿದ ಮೇಲೆ ಅವರ ಆನ್ಸರ್ ಶೀಟ್ ಕಲೆಕ್ಟ್ ಮಾಡಿಕೊಂಡು ಜಾನಕಿ ಮೇಡಂ ಕೊಡೊ ಆನ್ಸರ ಸ್ಟೆನ್ಸಿಲ್ಸ್ ಕೆಳಗೆ ಹಿಡಿದರೆ ಎಷ್ಟು ಆನ್ಸರ ಮ್ಯಾಚಿಂಗ್, ಎಷ್ಟು ಇಲ್ಲಾ ಅನ್ನೋದು ಗೊತ್ತಾಗುತ್ತೆ.. ಮ್ಯಾಚಿಂಗ್ ಇರೋದು ಎಣಿಸುತ್ತಾ ಹೋದರೆ ಎಷ್ಟು ಮಾರ್ಕ್ಸ್ ಬಂತು ಅಂತ ಗೊತ್ತಾಗುತ್ತೆ ಪ್ರತಿಯೊಬ್ಬರಿಗು.. ನಾವು ಮೂರು ಜನ ಇರೊದ್ರಿಂದ ಅರ್ಧ ಗಂಟೆಲಿ ಮುಗಿಸಿಬಿಡಬಹುದು - ಪ್ರತಿಯೊಬ್ಬರು ಮೂವತ್ತು, ಮುವ್ವತ್ತು ಪೇಪರು..' ಎಂದ, ಒಟ್ಟು ಸುಮಾರು ತೊಂಭತ್ತು ಮಂದಿ ಇರುವರೆನ್ನುವ ಇಂಗಿತ ನೀಡುತ್ತ.. ಆ ತೊಂಭತ್ತು ಕೂಡಾ ಎಲ್ಲಾ ಸೆಮೆಸ್ಟರಿನ ಅಗ್ರಿಗೇಟ್ ಸ್ಕೋರು ಅರವತ್ತಕ್ಕಿಂತ ಹೆಚ್ಚು ಬಂದವರನ್ನು ಮಾತ್ರ ಪರಿಗಣಿಸಿ ಫಿಲ್ಟರ್ ಮಾಡಿದ್ದು.. ಇಲ್ಲವಾದರೆ ಒಟ್ಟು ಸಂಖ್ಯೆಯೆ ಇನ್ನೂರು, ಮುನ್ನೂರು ದಾಟಿ ಅನ್ ಮ್ಯಾನೇಜಬಲ್ ಆಗಿಬಿಡುವ ಸಾಧ್ಯತೆ ಇರುವುದರಿಂದ..

ಜಾನಕಿ ನಾಯರ್ ಹೇಳಿದ್ದನ್ನೆ ಮತ್ತಷ್ಟು ವಿಸ್ತರಿಸುತ್ತ, 'ನಮ್ಮ ವ್ಯಾಲ್ಯುಯೇಷನ್ ನಂತರ ಫಿಲ್ಟರ್ ಆಗಿ ಉಳಿದುಕೊಂಡವರ ಲೆಕ್ಕ ಸುಮಾರು ಅರ್ಧಕರ್ಧ ಆಗುತ್ತೆ.. ನಮ್ಮ ಕಟಾಫ್ ಸ್ಕೋರ ಸಿಕ್ಸ್ಟೀ ಪರ್ಸೆಂಟ್.. ಅಂದರೆ ಯಾರೆಲ್ಲಾ ಶೇಕಡಾ ಅರವತ್ತಕ್ಕಿಂತ ಮೇಲಿದ್ದಾರೊ ಅವರು ಮಾತ್ರ ಮುಂದಿನ 'ಗ್ರೂಪ್ ಡಿಸ್ಕಷನ್' ರೌಂಡಿಗೆ ಅರ್ಹರಾಗ್ತಾರೆ. ಉಳಿದವರು ಫಿಲ್ಟರ್ ಆಗಿ ಔಟ್ ಆಗಿ ಬಿಡ್ತಾರೆ.. ಈ ಕಾಲೇಜು ಕೇಸಲ್ಲಿ ಲೆಟ್ ಅಸ್ ಸೇ ಫಾರ್ಟೀಫೈವ್, ನಲವತ್ತೈದು. ಆ ನಲವತ್ತೈದನ್ನ ಐದೈದರ ಒಂಭತ್ತು ಗುಂಪು ಮಾಡಿದರೆ ಒಂಭತ್ತು ರೌಂಡ್ ಗ್ರೂಪ್ ಡಿಸ್ಕಷನ್ ಆಗುತ್ತೆ.. ಆ ಪ್ರತಿ ಐದರ ಗುಂಪಲ್ಲಿ ಇಬ್ಬಿಬ್ಬರನ್ನ ಸೆಲೆಕ್ಟ್ ಮಾಡಿಕೊಂಡರು ಹದಿನೆಂಟು ಜನ , ಹೆಚ್ಚು ಅಂದರು ಇಪ್ಪತ್ತು ಜನ ಮುಂದಿನ ಫೈನಲ್ ಇಂಟರ್ವ್ಯೂ ರೌಂಡಿಗೆ ಬರುತ್ತಾರೆ... ಅವರಲ್ಲಿ ಬೆಸ್ಟ್ ಟು, ಅಂದರೆ ಹತ್ತಕ್ಕೆ ಒಬ್ಬರಂತೆ ಸೆಲೆಕ್ಟ್ ಮಾಡಿದರೆ ನಮಗೆ ಇಬ್ಬರು ಕ್ಯಾಂಡಿಡೇಟ್ಸ್ ಸಿಗುತ್ತಾರೆ.. ಈ ಕಾಲೇಜಿನ ಕೋಟಾ ಅಲ್ಲಿಗೆ ಮ್ಯಾಚ್ ಆಗುತ್ತೆ..'

ನನಗ್ಯಾಕೊ ಈ ಕೋಟಾ ಲೆಕ್ಕಾಚಾರ ಅರ್ಥವಾಗಲಿಲ್ಲ - ಆದರೆ ಸುಮಾರು ಕಾಲೇಜುಗಳಿಗೆ ಹೋಗುವ ಕಾರಣ ಎಲ್ಲಾ ಕಡೆಯು ಇಷ್ಟಿಷ್ಟು ಅಂತ ಕೋಟಾ ಮಾಡಿದ್ದಾರೆನಿಸಿತು.. ಒಳ್ಳೆಯ ಕ್ಯಾಂಡಿಡೇಟುಗಳೆ ಜಾಸ್ತಿ ಇದ್ದರೆ ಯಾಕೆ ಸೆಲೆಕ್ಟ್ ಮಾಡಬಾರದು ಅನಿಸಿದರು, ಎಲ್ಲಾ ಕಾಲೇಜುಗಳವರನ್ನು ಒಂದೆ ಗುಂಪಿನಡಿ ಸೇರಿಸಿ ಈ ಮೇಳ ನಡೆಸಿದರಷ್ಟೆ ಅದು ಸಾಧ್ಯ ಎನಿಸಿತು... ಆದರು ಇನ್ನೂರು, ಮುನ್ನೂರರಿಂದ ಕೊನೆಗೆ ಎರಡಕ್ಕೆ ಬಂದು ನಿಲ್ಲುವ ಈ ಸೆಲೆಕ್ಷನ್ ವ್ಯವಸ್ಥೆ ಯಾಕೊ ತುಂಬಾ ಕ್ರೂರ ಅನಿಸಿತು.. ಆದರೆ ಜಾನಕಿ, ನಾಯರ್ ಕೂಲಾಗಿ ಹೇಳುತ್ತಿರುವ ರೀತಿ ನೋಡಿದರೆ ಇದೆಲ್ಲಾ ಮಾಮೂಲೆ ಇರಬೇಕು ಅನಿಸಿತ್ತು. ಬಹುಶಃ ನನಗೆ ಫರ್ಸ್ಟ್ ಟೈಮ್ ಆದ ಕಾರಣ ಸ್ವಲ್ಪ ಇರಿಸುಮುರಿಸಿರಬೇಕಷ್ಟೆ..

' ಎಲ್ಲಾ ಅರ್ಥಾ ಆಯ್ತಾ ? ಇದೆಲ್ಲಾ ಮುಗಿಯೋಕೆ ರಾತ್ರಿ ಎಂಟೊಂಭತ್ತಾದರು ಆಗುತ್ತೆ... ನೈಟ್ ಜರ್ನಿ ಬೇಡ ಅಂತ ಬೆಳಿಗ್ಗೆ ಹೊರಡೊ ಪ್ಲಾನ್ ಮಾಡಿದೀನಿ.. ಬೈ ಛಾನ್ಸ್ ಏನಾದ್ರು ಮಿಕ್ಕಿದ್ರು ಬೆಳಿಗ್ಗೆ ಬೇಗ ಮುಗಿಸಿ ಹೊರಟುಬಿಡೋಣ' ಎನ್ನುತ್ತ ಪ್ರೋಗ್ರಾಮಿನ ಸಮಗ್ರ ಚಿತ್ರಣಕ್ಕೊಂದು ಅಂತಿಮ ರೂಪು ಕೊಟ್ಟವಳತ್ತ ಮೆಚ್ಚಿಗೆಯಿಂದ ನೋಡುತ್ತ 'ಅರ್ಥ ಆಯ್ತು' ಅನ್ನುವಂತೆ ತಲೆಯಾಡಿಸಿದೆ..ಏನಿವೇ ಇಟ್ ಈಸ್ ಗೊಯಿಂಗ್ ಟು ಬೀ ಎ ಟಯರಿಂಗ್ ಡೇ..

ಆ ನಂತರದ್ದೆಲ್ಲ ಅವಳ ಯೋಜನೆಯನುಸಾರವೆ ಚಕಚಕನೆ ನಡೆದು ಹೋಗಿತ್ತು.. ನಿಜಕ್ಕು ಅಚ್ಚರಿಯಿದ್ದದ್ದು ಪ್ರೆಸೆಂಟೇಷನ್ನಿನಲ್ಲಿ ಮಾತ್ರ.. ನಾನು ತೋರಿಸಿ ವಿವರಿಸಿದ ಸ್ಲೈಡುಗಳ ಮೇಲೆ ಅನೇಕ ಪ್ರಶ್ನೆಗಳು ಬಂದದ್ದು ಮಾತ್ರವಲ್ಲದೆ ಹುಡುಗರಲ್ಲಿ ಆಸಕ್ತಿ, ಕುತೂಹಲ ಕೆರಳಿಸಿದ್ದು ಕಂಡು ಬಂತು. ನಿಗದಿಗಿಂತ ಐದತ್ತು ನಿಮಿಷ ಹೆಚ್ಚೇ ಹಿಡಿದರು ಕಂಪನಿಯ ಬಗ್ಗೆ ಅವರೆಲ್ಲರಲ್ಲು ಹೆಚ್ಚಿನ ಆಸಕ್ತಿ ಮೂಡಿಸುವಲ್ಲಿ ಸಫಲವಾಗಿತ್ತು.. ಆ ನಂತರದ ರಿಟನ್ ಟೆಸ್ಟ್ ಕೂಡ ಸಾಂಗವಾಗಿ ನೆರವೇರಿದ ಮೇಲೆ ಗ್ರೂಪ್ ಡಿಸ್ಕಶನ್ನಿನಲ್ಲಿ ಆಯ್ಕೆ ಮಾಡಿಕೊಳ್ಳಲು ಬೇಕಾದ ಮಾನದಂಡವನ್ನು ಅರ್ಥ ಮಾಡಿಕೊಳ್ಳಲು ಮೊದಲೆರಡು ಮೂರು ರೌಂಡಿನಲ್ಲಿ ಅವರಿಬ್ಬರು ಏನು ಮಾಡುವರೆಂದು ಗಮನಿಸಿ ನೋಡಿ, ಮುಂದಿನ ಸುತ್ತಿನಲ್ಲಿ ಅದನ್ನೆ ಬಳಸಿಕೊಳ್ಳುತ್ತ ಭಾಗವಹಿಸಿದೆ. ಕೊನೆಯ ಇಂಟರವ್ಯೂ ಸುತ್ತಿನಲ್ಲು ಅದೇ ಮಾದರಿ ಅನುಕರಿಸುತ್ತ ಎಲ್ಲಾ ಅಭ್ಯರ್ಥಿಗಳ ಸರದಿ ಮುಗಿಸಿದಾಗ ನಿಜಕ್ಕು ವಿಪರೀತ ಆಯಾಸವಾದ ಭಾವ.. ಕೊನೆಯ ಐದು ಸೂಕ್ತ ಅಭ್ಯರ್ಥಿಗಳಲ್ಲಿ ಮೊದಲಿನಿಬ್ಬರನ್ನು ಆರಿಸಿ ಆ ಮಾಹಿತಿಯನ್ನು ಕಾಲೇಜು ಕೋಆರ್ಡಿನೇಟರಿಗೆ ತಲುಪಿಸಿ ಏನೊ ಅವಸರದಲ್ಲಿ ಅಷ್ಟಿಷ್ಟು ತಿಂದು ಮಲಗಿದ ತಕ್ಷಣವೆ ಗಾಢ ನಿದ್ದೆ ಆವರಿಸಿಕೊಂಡುಬಿಟ್ಟಿತ್ತು.. ಬೆಳಿಗ್ಗೆ ಏಳು ಗಂಟೆಯವರೆಗೆ ಎಚ್ಚರವೆ ಇಲ್ಲದ ಹಾಗೆ..!

*************

ಮತ್ತೆ ತುಂತುರು ಮಳೆಯ ನಡುವಲ್ಲೆ ಹೊರಟ ಕಾರಿನ ಪಯಣದ ನಡುವೆ ಒಂದು ಸೊಗಸಾದ ಜಾಗದಲ್ಲಿ ಊಟಕ್ಕೆ ನಿಲ್ಲಿಸಿದ ಡ್ರೈವರ - ಅಲ್ಲಿ ಕರ್ನಾಟಕದ ಊಟ ಸಿಗುತ್ತದೆಂದು .. ಅರ್ಧ ದಾರಿ ಕ್ರಮಿಸಿ ಬಂದಿದ್ದರು ಯಾಕೊ ಉದ್ದಕ್ಕು ಸುರಿಯುತ್ತಿದ್ದ ಮಳೆಗೆ ಮುದುರಿ ಕೂಡುವಂತಾಗಿ ತೂಕಡಿಸಿಕೊಂಡೆ ಬರುವಂತಾಗಿತ್ತು, ರಾತ್ರಿಯ ಗಡದ್ದು ನಿದ್ದೆಯಾಗಿದ್ದರು... ಆ ಜಾಗದಲ್ಲಿ ಮಾತ್ರ ಮಳೆ ನಿಂತುಹೋಗಿತ್ತೊ ಏನೊ, ಬರಿ ಮೋಡದ ವಾತಾವರಣ ಮಾತ್ರ ಮುಸುಕು ಹಾಕಿಕೊಂಡಿತ್ತು. ಬರಿಯ ಗಾಳಿಯ ಅರ್ಭಟ ಮಾತ್ರವಿದ್ದ ಆ ರಸ್ತೆ ಬದಿಯ ತಂಗುದಾಣದಲ್ಲಿ ಊಟಕ್ಕೆ ಆರ್ಡರ ಮಾಡಿ ಕುಳಿತಾಗ ಮುವ್ವರಲ್ಲು ಆಲಸಿಕೆಯ ಭಾವವಿದ್ದರು ಏನೊ ನಿರಾಳವಾದ ಭಾವ.. ಇನ್ನೇನು ಸಂಜೆಯ ಹೊತ್ತಿಗೆ ಊರು ಸೇರಿಬಿಟ್ಟರೆ ಮರುದಿನ ಹೇಗು ಶನಿವಾರ, ಆಫೀಸಿನ ಗೋಜು ಇರುವುದಿಲ್ಲ.. ಆರ್ಡರು ಮಾಡಿದ ಊಟ ಬರುವತನಕ ಇದ್ದ ಬಿಡುವಲ್ಲಿ ಮಾತಿಗೆ ಮೊದಲಾದವಳು ಜಾನಕಿಯೆ..

' ಐ ಲೈಕ್ಡ್ ಯುವರ್ ಪ್ರೆಸೆಂಟೇಷನ್.. ತುಂಬಾ ಚೆನ್ನಾಗಿತ್ತು' ಎಂದಳು.. ಹಾಗೆ ಅವಳು ಅಷ್ಟು ಮುಕ್ತವಾಗಿ ಹೊಗಳಿದ್ದಕ್ಕೆ ಅಚ್ಚರಿಯ ಜತೆ ಖುಷಿಯೂ ಆಯ್ತು..

'ಥ್ಯಾಂಕ್ಸ್.. ಆ ಸಂಧರ್ಭಕ್ಕೆ ಸೂಕ್ತವಾಗಿತ್ತು ಅನ್ಕೋತೀನಿ..' ಎಂದೆ ಅವಳ ನಗೆಯನ್ನೆ ಹಿಂದಿರುಗಿಸುತ್ತ..

'ನನ್ನ ಇದುವರೆಗಿನ ಕ್ಯಾಂಪಸ್ ಇಂಟರವ್ಯೂನಲ್ಲಿ ಇದೇ ಮೊದಲ ಸಾರಿ ನೋಡಿದ್ದು - ಕ್ಯಾಂಡಿಡೇಟುಗಳು ಆಸಕ್ತಿಯಿಂದ ಆಲಿಸಿದ್ದು ಮಾತ್ರವಲ್ಲದೆ ಅಷ್ಟೊಂದು ಪ್ರಶ್ನೆಗಳನ್ನು ಕೇಳಿದ್ದು.. ಐ ಯಾಮ್ ಶೂರ್ ದೇ ವರ್ ಇಂಪ್ರೆಸ್ಡ್ ಅಂಡ್ ಹ್ಯಾಡ್ ಎ ಗುಡ್ ಒಪಿನಿಯನ್ ಎಬೌಟ್ ದ ಕಂಪನಿ.. ನನಗೆ ಆ ಸ್ಲೈಡುಗಳನ್ನ ಕಳಿಸಿ ಕೊಡ್ತೀಯಾ.. ಮುಂದಿನ ಸಾರಿಯಿಂದ ಅವನ್ನೆ ಬಳಸ್ಕೊಬೋದು ಬೇರೆ ಕಾಲೇಜುಗಳಲ್ಲು..?' ಎಂದ ಅವಳ ದನಿ ಮೊದಲ ಬಾರಿಗೆ ಅಣತಿಯಂತಿರದೆ, ಬೇಡಿಕೆಯ ರೂಪದಲ್ಲಿರುವುದನ್ನು ನಾನು ಗಮನಿಸದಿರಲಾಗಲಿಲ್ಲ.. ಹಿಂದೆಮುಂದೆ ಯೋಚಿಸದೆ ಒಂದೆ ಬಾರಿಗೆ, 'ಬೈ ಆಲ್ ಮೀನ್ಸ್.. ಮೈಲ್ ಕಳಿಸ್ತೀನಿ' ಎಂದುತ್ತರಿಸಿದ್ದೆ.

ಅಷ್ಟೊತ್ತಿಗೆ ಊಟದ ತಟ್ಟೆ ಬಂದುಬಿಟ್ಟ ಕಾರಣ ನಮ್ಮ ಗಮನ ಮತ್ತೆ ಊಟದತ್ತ ತಿರುಗಿತು.. ಊಟದ ನಡುವೆ ಅಂತಿಮ ಸುತ್ತಿಗೆ ಬಂದು ಶಾರ್ಟ್ ಲಿಸ್ಟ್ ಆದ ಐವರು ಕ್ಯಾಂಡಿಡೇಟುಗಳತ್ತ ಮಾತು ಹೊರಳಿತು.. ಅಷ್ಟೊತ್ತಿಗೆ ಅಗತ್ಯಕ್ಕಿಂತ ಹೆಚ್ಚು ಮಾತಾಡದ ನಾಯರ್ ನನ್ನ ಮನದ ಅನಿಸಿಕೆಯನ್ನೆ ಮಾತಾಗಿಸಿ ನುಡಿದ.. 'ನನಗೇನೊ ಆ ಕೊನೆಯ ಐವರಲ್ಲಿ ನಾಲ್ಕು ಜನರಾದರು ಆಯ್ಕೆಯ ಅರ್ಹತೆ ಇದ್ದವರು ಎನಿಸಿತು.. ಅವರವರ ನಡುವೆ ತೀರಾ ವ್ಯತ್ಯಾಸವೇನೂ ಇರಲಿಲ್ಲ... ಐದನೆಯವನು ಮಾತ್ರ ಮಿಕ್ಕ ನಾಲ್ವರಿಗಿಂತ ತೀರಾ ಕೆಳಗಿದ್ದ'

' ಹೌದು ನನಗು ಹಾಗೆ ಅನಿಸಿತು.. ಆ ನಾಲ್ಕರಲ್ಲಿ ಇಬ್ಬರನ್ನು ಮಾತ್ರ ಆರಿಸಬೇಕಾಗಿ ಬಂದದ್ದು ನಿಜಕ್ಕು ಒಂದು ರೀತಿ ಮಿಕ್ಕವರಿಬ್ಬರಿಗೆ ಅನ್ಯಾಯ ಮಾಡಿದಂತೇನೊ ಅನಿಸಿಬಿಟ್ಟಿತು' ಎಂದೆ. ಸಮಾನ ಸ್ತರದಲಿದ್ದ ನಾಲ್ವರಲ್ಲಿ ಯಾರಿಬ್ಬರನ್ನು ಆರಿಸುವುದು ಅನ್ನುವ ಪ್ರಶ್ನೆ ಬಂದಾಗ ಇಂಟರ್ವ್ಯೂವಿಗೆ ಬದಲು ಗ್ರೂಪ್ ಡಿಸ್ಕಷನ್ನಿನ ಪರ್ಫಾರ್ಮೆನ್ಸ್ ಅನ್ನು ಟೈ ಬ್ರೇಕರ್ ತರ ಬಳಸಿ, ಇಬ್ಬರನ್ನು ಆರಿಸಿದ್ದೆವು.. ಕಾಲೇಜು ಕೋಟಾ ಅಂತ ಇರದಿದ್ರೆ ಖಂಡಿತ ನಾಲ್ವರು ಸಮಾನ ಅರ್ಹತೆ ಇದ್ದವರೇನೆ..

ತಿನ್ನುವ ಪ್ಲೇಟಿನತ್ತ ಗಮನ ಹರಿಸಿದ್ದ ಜಾನಕಿ ನಮ್ಮಿಬ್ಬರ ಮಾತಿಗೆ ಏಕಾಏಕಿ ಉತ್ತರಿಸದೆ ತುಸು ಆಲೋಚಿಸುವವಳಂತೆ ಸುಮ್ಮನಿದ್ದು, ನಂತರ ಮರುಪ್ರಶ್ನೆ ಹಾಕಿದಳು..

' ನಮಗೆ ಬೇಕಾಗಿರೋದು ಸುಮಾರು ಐವತ್ತು ಕ್ಯಾಂಡಿಡೇಟುಗಳು... ನಾವು ಪ್ರತಿ ವರ್ಷ ಹೋಗೋದು ಸುಮಾರು ಇಪ್ಪತ್ತು ಕಾಲೇಜುಗಳು.. ನಾವು ಎಲ್ಲಾ ಕಾಲೇಜಿನಲ್ಲು ಒಳ್ಳೆ ಎಂಪ್ಲಾಯರ್ ಅನ್ನೊ ರೆಪ್ಯುಟೇಷನ್ ಉಳಿಸಿಕೊಬೇಕಾದ್ರೆ ಪ್ರತಿ ಸಾರಿಯೂ ಆಯಾ ಕಾಲೇಜಿನಿಂದ ಒಬ್ಬಿಬ್ಬರನ್ನಾದರು ಆರಿಸಿಕೊಬೇಕು.. ಇಲ್ಲದಿದ್ರೆ ಮುಂದಿನ ಸಾರಿ ಸರಿಯಾದ ರೆಸ್ಪಾನ್ಸ್ ಸಿಗೋದಿಲ್ಲ.. ಹಾಗೆಯೆ ಒಂದೆ ಕಡೆ ಜಾಸ್ತಿ ಜನರನ್ನ ಆರಿಸಿಬಿಟ್ರೆ ಬೇರೆ ಕಾಲೇಜುಗಳಲ್ಲಿ ಕಡಿಮೆ ಮಾಡಬೇಕಾಗುತ್ತೆ.. ಅದೂ ಅಲ್ಲದೆ ಈ ಕಾಲೇಜು ನಮ್ಮ ಬೆಸ್ಟ್ ಕಾಲೇಜುಗಳ ಲಿಸ್ಟಿನಲ್ಲಿ ಒಂದೇನೂ ಅಲ್ಲಾ.. ಈ ಪರಿಸ್ಥಿತಿಲಿ ನಾವು ನಾಲ್ಕು ಜನರನ್ನ ತೆಗೆದುಕೊಳ್ಳೋಕೆ ಆಗುತ್ತಾ? '

ಅವಳ ಮಾತು ನಿಜವೆ.. ಅಲ್ಲದೆ ಇವರು ನಾಲ್ವರು ಈ ಕಾಲೇಜಿನ ಮಾನದಂಡದಲಷ್ಟೆ ಬೆಸ್ಟು... ಕಾಲೇಜುಗಳ ಸಮಗ್ರ ಹೋಲಿಕೆಗಿಳಿದರೆ ಇವರು ಮೊದಲ ನಾಲ್ಕರಲ್ಲಿರುತ್ತಾರಾ ಎಂದು ಹೇಳಲಾಗದು..

ನಾವಿಬ್ಬರು ಮಾತಾಡದೆ ಇದ್ದಾಗ ಜಾನಕಿ ತಾನೆ ಮುಂದುವರೆಸಿದಳು..'ಅಲ್ಲದೆ ನಮಗೆ ಬೆಸ್ಟ್ ಅನಿಸಿದ ಟಾಪ್ ಕಾಲೇಜುಗಳಲ್ಲಿ ನಮಗೆ ಹೆಚ್ಚು ಕ್ವಾಲಿಟಿ ಕ್ಯಾಂಡಿಡೇಟ್ಸ್ ಸಿಗೋದ್ರಿಂದ ನಾವು ಅಲ್ಲಿ ಹೆಚ್ಚು ಜನರನ್ನ ಆಯ್ಕೆ ಮಾಡೊ ಸಾಧ್ಯತೆ ಮತ್ತು ನೈತಿಕ ಒತ್ತಡ ಎರಡೂ ಇರುತ್ತೆ.. ಅದಕ್ಕೆ ನಾನು ಎರಡಕ್ಕಿಂತ ಜಾಸ್ತಿ ಆಯ್ಕೆ ಮಾಡಲು ಬಿಡಲಿಲ್ಲ.. ಸಾಧ್ಯವಿದ್ದರೆ ಒಂದಕ್ಕೆ ಲಿಮಿಟ್ ಮಾಡುವ ಇರಾದೆಯೂ ಇತ್ತು.. ಆದರೆ ನಾಲ್ಕು ಜನ ಟಾಪರ್ಸಿನಲ್ಲಿ ಎರಡಾದರು ಕ್ಲಿಯರ್ ಮಾಡಿದರೆ ಫಿಫ್ಟಿ ಪರ್ಸೆಂಟಾದರು ಅಕಾಮಡೇಟ್ ಮಾಡಿದಂತೆ ಆಗುವುದಲ್ಲ ಅನಿಸಿ ಎರಡಕ್ಕೆ ಓಕೆ ಅಂದೆ..'

' ಅದೂ ನಿಜವೆ.. ಈ ಸಾರಿ ರಿಸೆಶನ್ ಹೆಸರಲ್ಲಿ ಎಲ್ಲಾ ಕಡೆ ಕಡಿಮೆ ರಿಕ್ರೂಟ್ಮೆಂಟು ಇರುವ ಕಾರಣ ಸಿಗುವ ಕ್ಯಾಂಡಿಡೇಟುಗಳು ಜಾಸ್ತಿ ಇರುತ್ತಾರೆ...' ಎಂದ ಕೇಶವ ನಾಯರ್ ತಲೆಯಾಡಿಸುತ್ತ.

ಮತ್ತೆ ಕಾರಿನತ್ತ ನಡೆಯುವ ಹೊತ್ತಿಗೆ ಜಾನಕಿ ತಟ್ಟನೆ ಕೇಳಿದಳು 'ಮುಂದಿನ ಶುಕ್ರವಾರ ನಿಮಗಿಬ್ಬರಿಗು ಸಮಯವಿರುತ್ತಾ? ಬೆಂಗಳೂರಲ್ಲೆ ಒಂದು ಟಾಪ್ ಟಾರ್ಗೆಟ್ ಕಾಲೇಜಿನಲ್ಲಿ ಕ್ಯಾಂಪಸ್ ಇಂಟರ್ವ್ಯೂವ್ ಇದೆ..' ಅಂದಳು

ನಾಯರ್ ತಾನು ವಿದೇಶಿ ಪ್ರಯಾಣದಲ್ಲಿರುವ ಕಾರಣ ಮುಂದಿನ ವಾರ ಸಾಧ್ಯವಿಲ್ಲವೆಂದು ಹೇಳಿದ.. ನಾನು ಸ್ವಲ್ಪ ಅನುಮಾನದಿಂದ, ' ಒಂದೇ ದಿನ ಸಾಕಾ..? ಇಲ್ಲಿ ಮೂರು ದಿನ ಹಿಡಿಯಿತಲ್ಲಾ? ' ಎಂದೆ

' ಬೆಂಗಳೂರಿನ ಕಾಲೇಜಾದ ಕಾರಣ ಅಲ್ಲೆ ಇಂಟರ್ವ್ಯೂವ್ ಮಾಡುವ ಅಗತ್ಯವಿಲ್ಲ.. ಈ ಕಾಲೇಜಿಗೆ ಇದೇ ಮೊದಲ ಸಾರಿ ಹೋಗುತ್ತಿರುವುದು ಅದರೆ ತುಂಬಾ ಬೆಸ್ಟ್ ಪರ್ಫಾರ್ಮಿಂಗ್ ಕಾಲೇಜು ಅಂತ ಕೇಳಿದೆ..ನಂಬರ್ ಒನ್ ಇನ್ ಬೆಂಗಳೂರ್ ಅಂಡ್ ದಿ ಸ್ಟೇಟ್ ಅನ್ನುತ್ತಿದ್ದಾರೆ.. ರಿಟನ್ ಟೆಸ್ಟ್, ಗ್ರೂಪ್ ಡಿಸ್ಕಷನ್ ಆದರೆ ಸಾಕು.. ಇಂಟರ್ವ್ಯೂವಿಗೆ ನಮ್ಮ ಕಂಪನಿಗೆ ಇನ್ನೊಂದು ದಿನ ಬರಲು ಹೇಳಬಹುದು... ನಾನು ಶನಿವಾರ ಅಥವಾ ಸೋಮವಾರ ಮಾಡೋಣ ಅಂದುಕೊಂಡಿದ್ದೇನೆ.. ಹೀಗಾಗಿ ಕಾಲೇಜಿಗೆ ಒಂದು ದಿನದ ಭೇಟಿ ಸಾಕು' ಎಂದಳು..

ನನಗು ಅದು ಹೇಗಿರುವುದೊ ಕುತೂಹಲವೆನಿಸಿತು..ಜತೆಗೆ ಮುಂದಿನ ಶುಕ್ರವಾರ ಮತ್ತಾವ ಅವಸರದ ಒತ್ತಡವೂ ಇರಲಿಲ್ಲ.. ' ಸರಿ ನಾನು ಬರುತ್ತೇನೆ.. ಲೆಟ್ ಮಿ ಗೈನ್ ಸಮ್ ಎಕ್ಸ್ ಪೀರೀಯೆನ್ಸ್ ಇನ್ ಹೋಮ್ ಟರ್ಫ್ ' ಎಂದೆ.. 

ಬೇಗನೆ ತಲುಪಲೆಂದು ಹೊರಟರು ಬೆಂಗಳೂರಿಗೆ ಬಂದು ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡು ಕೊನೆಗೆ ಮನೆಗೆ ತಲುಪಿದಾಗ ರಾತ್ರಿ ಒಂಭತ್ತನ್ನು ದಾಟಿಯಾಗಿತ್ತು.. 

*************

ಶುಕ್ರವಾರ ಹೊಸ ಕಾಲೇಜಿನತ್ತ ನಡೆದದ್ದು ನಾನು ಜಾನಕಿ ನಾವಿಬ್ಬರು ಮಾತ್ರವೆ.. ಮತ್ತಾರು ಫ್ರೀಯಿಲ್ಲವೆನ್ನುವುದು ಒಂದು ಕಾರಣವಾದರೆ ಇಂಟರ್ವ್ಯೂವ್ ಸೆಪರೇಟಾಗಿ ಮಾಡುವುದರಿಂದ ಇಬ್ಬರೆ ಸಾಕು ಅನ್ನುವುದು ಮತ್ತೊಂದು ಕಾರಣ..

ಯಥಾರೀತಿ ಕಂಪನಿಯ ಕುರಿತಾದ ಪ್ರೆಸೆಂಟೇಷನ್ನಿನಿಂದ ಆರಂಭ.. ಇಲ್ಲಿಯೂ ಹಿಂದಿನ ಕಾಲೇಜಿನಂತೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು.. ಅದನ್ನು ನಿಭಾಯಿಸುವ ಹೊತ್ತಲ್ಲೆ ಒಮ್ಮೆ ಸುತ್ತ ಕಣ್ಣು ಹಾಯಿಸಿದ ನನಗೆ ಏನೊ ವಿಶೇಷವಿರುವುದು ಅನುಭವಕ್ಕೆ ಬಂದಂತಾದರು ಏನೆಂದು ತಟ್ಟನೆ ಗೊತ್ತಾಗಲಿಲ್ಲ.. ಪ್ರಶ್ನೋತ್ತರದ ನಡುವಲ್ಲೆ ಅದೇನೆಂದು ಸಡನ್ನಾಗಿ ಹೊಳೆಯಿತು.. ಆ ಸಭಾಂಗಣದಲ್ಲಿ ಸುಮಾರು ನಾನೂರು ಜನರಿರುವಂತೆ ಕಾಣಿಸಿತು.. ದೊಡ್ಡ ಟಾಪರ್ ಕಾಲೇಜಾದ್ದರಿಂದ ಕ್ಯಾಂಡಿಡೇಟುಗಳು ಜಾಸ್ತಿಯಿರಬೇಕು ಎನಿಸಿತು. ಅದು ಮುಗಿದ ಕೂಡಲೆ ರಿಟನ್ ಟೆಸ್ಟಿಗೆ ಅಪ್ಲಿಕೇಶನ್ ಫಾರಂ ಪಡೆಯಲು ಆರಂಭಿಸುವ ಹೊತ್ತಿಗೆ ಪ್ರಿನ್ಸಿಪಾಲರ ಜೊತೆ ಪುಟ್ಟ ಭೇಟಿಯನ್ನು ಮಾಡಬೇಕೆಂಬ ಸೂಚನೆಯೂ ಬಂತು ಅಲ್ಲಿನ ಕೋಆರ್ಡಿನೇಟರರ ಮೂಲಕ.. ಇಂಜಿನಿಯರಿಂಗಿನ ಎಲ್ಲಾ ವರ್ಷಗಳ ಅಗ್ರಿಗೇಟ್ ಶೇಕಡ ಅರವತ್ತು ಮತ್ತು ಮೇಲ್ಪಟ್ಟವರು ಮಾತ್ರ ಅರ್ಹರು ಎಂದು ಹೇಳಿದ್ದರಿಂದ ಎಲ್ಲಾ ನಾನೂರು ಅಪ್ಲಿಕೇಶನ್ನುಗಳು ರಿಟನ್ ಟೆಸ್ಟಿಗೆ ಕೂರಲು ಸಾಧ್ಯವಿರಲಿಲ್ಲ.. ಜಾನಕಿಯ ಲೆಕ್ಕಾಚಾರದಂತೆ ಈ ಲೆವಲ್ ಫಿಲ್ಟರಿನಿಂದಾಗಿ ಹಿಂದಿನ ಕಾಲೇಜಿನಂತೆ ಸುಮಾರು ನೂರು ಜನ ಉಳಿದುಕೊಳ್ಳಬಹುದು, ಅಲ್ಲಿಂದಾಚೆಗೆ ಮಾಮೂಲಿ ಪ್ರಕ್ರಿಯೆ ಎಂಬ ಅನಿಸಿಕೆ. ಕೋ- ಆರ್ಡಿನೇಟರಿಗೆ ಫಿಲ್ಟರು ಮಾಡಿದ ಅಪ್ಲಿಕೇಶನ್ನುಗಳನ್ನು ಮಾತ್ರ ಸಂಗ್ರಹಿಸಲು ಹೇಳಿ ನಾವಿಬ್ಬರು ಪ್ರಿನ್ಸಿಪಾಲ್ ರೂಮಿನತ್ತ ನಡೆದೆವು...

ಭವ್ಯವಾದ ಅದುನಿಕ ಕೋಣೆಯಲಿದ್ದ ಪ್ರಿನ್ಸಿಪಾಲ್ ವಿದೇಶದಿಂದ ಭಾರತಕ್ಕೆ ಬಂದು ಈ ಕಾಲೇಜು ಆರಂಭಿಸಿದ್ದ ವ್ಯಕ್ತಿ.. ವಿದೇಶಿ ಮಟ್ಟದ ವಿದ್ಯಾಭ್ಯಾಸವನ್ನೆ ಭಾರತದಲ್ಲು ನೀಡುವಂತಾಗಿಸಲು ತಾನು ಕೈಗೊಂಡ ಈ ಯೋಜನೆ, ಅದರ ಹಿನ್ನಲೆ, ಧ್ಯೇಯೋದ್ದೇಶಗಳನ್ನರುಹುತ್ತ ಜೊತೆಜೊತೆಗೆ ಬೇರೆ ಕಂಪನಿಗಳಿಂದ ಬಂದವರು ಒಂದೆ ಏಟಿಗೆ ನಲವತ್ತು ಐವತ್ತು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಉದಾಹರಣೆ ನೀಡುತ್ತ, ನಮ್ಮ ಕಂಪನಿ ಬೆರಳೆಣಿಕೆಯಷ್ಟಕ್ಕೆ ಮಾತ್ರ ಸೀಮಿತಗೊಳಿಸುವ ಕುರಿತು ಸೂಚ್ಯವಾಗಿ ಅಸಮಾಧಾನ ವ್ಯಕ್ತಪಡಿಸಿದರು.. ಬಹುಶಃ ನಮ್ಮ ಕೋಟಾ ವಿಧಾನ ಕುರಿತು ಅವರಿಗೆ ಮಾಹಿತಿ ಇತ್ತೇನೊ.. ಪ್ರತಿಭಾವಂತರ ಆಯ್ಕೆಗೆ ಸಾಧನೆ ಮಾನದಂಡವಾಗಬೇಕೆ ಹೊರತು ಕಾಲೇಜುಗಳ ಕೋಟಾ ಅಲ್ಲ ಎಂದು ಹೇಳುತ್ತ ತಮ್ಮ ಕಾಲೇಜಿನಿಂದ ಹೆಚ್ಚು ಸರಿಸೂಕ್ತ ಅಭ್ಯರ್ಥಿಗಳನ್ನು ಆಯ್ದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು... ಕೊನೆಯ ಸುತ್ತು ತಲುಪುವ ತಮ್ಮ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯನ್ನು ಪರಿಗಣಿಸಿದರೆ ಅದು ಅನಿವಾರ್ಯವೂ ಆಗುತ್ತದೆಂಬ ಇಂಗಿತವೂ ಅವರ ಮಾತಿನಲ್ಲಿತ್ತು. ಅವರ ಮಾತಿಂದ ನಾನೆಷ್ಟು ಪ್ರಭಾವಿತನಾಗಿಬಿಟ್ಟೆನೆಂದರೆ ಈ ಕಾಲೇಜಿನಿಂದ ಎಷ್ಟು ಹೆಚ್ಚು ಸಾಧ್ಯವೊ ಅಷ್ಟು ಆಯ್ಕೆ ಮಾಡುವುದೆ ಸರಿ ಎಂಬ ತಕ್ಷಣದ ನಿರ್ಧಾರಕ್ಕೆ ಬಂದುಬಿಟ್ಟಿದ್ದೆ..! ಆದರೆ ಅನುಭವಿಯಾದ ಜಾನಕಿ ಮಾತ್ರ ತನ್ನ ಎಂದಿನ ಸೀರಿಯಸ್ ಮುಖಚಹರೆಯನ್ನು ಬದಲಿಸದೆ, ಫಲಿತಾಂಶ ಹೇಗೆ ಬರುವುದೊ ನೋಡಿ ನಿರ್ಧರಿಸುವ ಭರವಸೆ ನೀಡಿ ಹೊರಬಂದಿದ್ದಳು..

ರಿಟನ್ ಟೆಸ್ಟ್ ಹಾಲಿನತ್ತ ಬರುತ್ತಿದ್ದಂತೆ ನಮಗೊಂದು ಶಾಕ್ ಕಾದಿತ್ತು.. ಜತೆಗೆ ಆ ಪ್ರಿನ್ಸಿಪಾಲ್ ಅದೇಕೆ ಅಷ್ಟು ಕಾನ್ಫಿಡೆಂಟ್ ಆಗಿದ್ದರೆಂಬ ಮೊದಲ ಕುರುಹೂ ಸಿಕ್ಕಿತ್ತು. ನಾವು ಊಹಿಸಿದ ನೂರಕ್ಕೆ ಬದಲಾಗಿ ಅರ್ಹ ಅಪ್ಲಿಕೇಷನ್ನುಗಳ ಸಂಖ್ಯೆ ಮುನ್ನೂರರ ಸಂಖ್ಯೆಯನ್ನು ದಾಟಿತ್ತು..! ನಾನು ಜಾನಕಿಯ ಮುಖ ನೋಡಿದ್ದೆ, ಈಗೇನು ಮಾಡುವುದು ಎನ್ನುತ್ತ.. ಜಾನಕಿಯ ಚಿಂತನೆಯಲ್ಲಿ ಮಾತ್ರ ಯಾವ ಬದಲಾವಣೆಯು ಇದ್ದಂತೆ ಕಾಣಲಿಲ್ಲ.. ಮುನ್ನುರಕ್ಕು ಅನುಮತಿಸುವುದು ಔಟ್ ಅಫ್ ಕ್ವೆಶ್ಚನ್ ಎನ್ನುವ ಹಾಗೆ, ಒಂದರೆಗಳಿಗೆ ಯೋಚಿಸಿ 'ಲೆಟ್ ಅಸ್ ರೈಸ್ ದ ಕಟಾಫ್ ಹಿಯರ್ ಟು ಸೆವೆಂಟಿ ಪರ್ಸೆಂಟ್ ಅಂಡ್ ಸೀ' ಅಂದಳು..!

ಸರಿ ಇಬ್ಬರು ಸೇರಿ ಆ ಮುನ್ನೂರು ಅಪ್ಲಿಕೇಶನ್ನುಗಳನ್ನು ಜಾಲಾಡತೊಡಗಿದೆವು, ಎಪ್ಪತ್ತರ ಕಟಾಫ್ ಮಾರ್ಕಿನವನ್ನು ಮಾತ್ರ ತೆಗೆದಿರಿಸುತ್ತ.. ಆದರೆ ಈ ಸುತ್ತಿನ ನಂತರವು ಸುಮಾರು ಇನ್ನೂರು ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದರು. ನಾನು ಮತ್ತೆ ಏನು ಎನ್ನುವಂತೆ ಜಾನಕಿಯ ಮುಖ ದಿಟ್ಟಿಸಿದೆ, ಇನ್ನೂರಕ್ಕೆ ಓಕೆ ಎನ್ನಬಹುದು ಎನ್ನುವ ಎಣಿಕೆಯಲ್ಲಿ..

' ಲೆಟ್ ಅಸ್ ರೈಸ್ ದ ಬಾರ್.. ವೀ ವಿಲ್ ಮೇಕಿಟ್ ಸೆವೆಂಟಿಫೈವ್..' ಎಂದವಳೆ ಅರ್ಧದಷ್ಟನ್ನು ಎತ್ತಿಕೊಂಡು ಮತ್ತೆ ಫಿಲ್ಟರ್ ಮಾಡತೊಡಗಿದಳು.. ನಾನು ಮಿಕ್ಕ ಪೇಪರುಗಳತ್ತ ಗಮನ ಹರಿಸಿದೆ.. ಕೊನೆಗೆ ಈ ಸುತ್ತು ಮುಗಿದ ಮೇಲೂ ನೂರ ಮೂವ್ವತ್ತು ಅಪ್ಲಿಕೇಶನ್ನುಗಳು ಉಳಿದುಕೊಂಡವು ಕಣದಲ್ಲಿ.. ಇನ್ನೇನು ಎಂಭತ್ತಕ್ಕೆ ಏರಿಸುವಳೇನೊ ಎಂದುಕೊಳ್ಳುವಾಗಲೆ, ' ಲೆಟ್ ಅಸ್ ಕೀಪ್ ಅಟ್ ದಿಸ್ .. ರಿಟನ್ ಟೆಸ್ಟಿಗೆ ಬಿಡೋಣ..' ಎಂದಳು.

ನನಗೆ ನಾವಿಬ್ಬರೆ ಇರುವ ಕಾರಣ ನಿಭಾಯಿಸುವುದು ಹೇಗೆ ಎನ್ನುವ ಅನುಮಾನವೂ ಇತ್ತು.. ನಾನದನ್ನು ಕೇಳುವ ಮೊದಲೆ ಫಟ್ಟನೆ ಉತ್ತರ ಬಂತು..'ಇಲ್ಲಿನ ಟ್ರೆಂಡ್ ನೋಡಿದರೆ ರಿಟನ್ ಟೆಸ್ಟ್ ಪಾಸ್ ಆಗೋರು ಜಾಸ್ತಿ ಅಂತ ಕಾಣುತ್ತೆ.. ನಾವು ಗ್ರೂಪ್ ಡಿಸ್ಕಷನ್ನಿನಲ್ಲಿ ಐದರ ಬದಲು ಎಂಟು ಮಂದಿಗೆ ಏರಿಸೋಣ.. ಆಗ ಕನಿಷ್ಠ ಎಂಟು ಟೀಮ್ ಆಗುತ್ತಾರೆ.. ತೀರಾ ಟೈಮ್ ಲಿಮಿಟ್ ಆದರೆ ನಾವಿಬ್ಬರು ಬೇರೆ ಬೇರೆಯಾಗಿ ಗ್ರೂಪ್ ಡಿಸ್ಕಷನ್ ಕಂಡಕ್ಟ್ ಮಾಡೋಣ..' ಎಂದಳು.. ಎಲ್ಲ ಸನ್ನಿವೇಶಕ್ಕು ಅವಳಲ್ಲಿ ಸಿದ್ದ ಉತ್ತರವೊಂದು ತಟ್ಟನೆ ಹೊರಬರುತ್ತಿರುವುದು ಅನುಭವದ ದೆಸೆಯಿಂದಲೊ, ಅಥವಾ ಅವಳ ಚುರುಕು ಬುದ್ಧಿಯ ಚಾಣಾಕ್ಷತೆಯ ಕಾರಣದಿಂದಲೊ ಅರಿವಾಗದಿದ್ದರು ಅವಳ ಕುರಿತಾದ ಗೌರವವನ್ನು ಹೆಚ್ಚಿಸಲು ಅದು ಕಾರಣವಾಯ್ತೆಂಬುದು ಮಾತ್ರ ಮನವರಿಕೆಯಾಗಿತ್ತು.

ಸದ್ಯ ಅದು ಮುಗಿಯಿತೆಂದು ನಾನಂದುಕೊಳ್ಳುತ್ತಿದ್ದರೆ ಅದು ಮುಗಿಯದ ಕಥೆಯೆಂಬಂತೆ ಹೊಸ ರೂಪ ಪಡೆದುಕೊಂಡಿತ್ತು - ರಿಟನ್ ಟೆಸ್ಟ್ ಮುಗಿದ ನಂತರ... ನಮ್ಮೆಣಿಕೆಯಂತೆ ಅರ್ಧದಷ್ಟಾದರು ಫಿಲ್ಟರ್ ಆದರೆ ಸುಮಾರು ಅರವತ್ತೈದು ಮಂದಿ ಕಣದಲ್ಲುಳಿಯಬೇಕಿತ್ತು ಗ್ರೂಪ್ ಡಿಸ್ಕಷನ್ನಿಗೆ.. ನಮ್ಮ ಕಟಾಫ್ ಸ್ಕೋರಾದ ಎಪ್ಪತ್ತನ್ನು ಪರಿಗಣಿಸಿದರೆ ಸುಮಾರು ನೂರು ಮಂದಿ ಪಾಸಾಗಿ ಮುಂದಿನ ಹಂತಕ್ಕೆ ಬರುವ ಸೂಚನೆ ಸಿಕ್ಕಿತು.. ಆದರೆ ಈಗಾಗಲೆ ಇದನ್ನು ನಿಭಾಯಿಸುವ ಟ್ರಿಕ್ ಗೊತ್ತಿದ್ದ ಕಾರಣ ಯಥಾರೀತಿ ಕಟಾಫ್ ಸ್ಕೋರನ್ನು ಎಂಭತ್ತೆರಡರ ತನಕ ಏರಿಸಿದಾಗ ಮಿಕ್ಕುಳಿದವರ ಸಂಖ್ಯೆ ಅರವತ್ತನಾಲ್ಕಕ್ಕೆ ಬಂದಿತ್ತು.. ಇದೆಲ್ಲ ಮಾಡುವಾಗಲೆ ನನಗೆ ಈ ಕಾಲೇಜಿನ ಬಗೆ ಗೌರವಾದರಗಳು ಹೆಚ್ಚಾಗತೊಡಗಿತ್ತು.. ಇಲ್ಲೇನೊ ವಿಶೇಷವಿದೆ, ಈ ರೀತಿ ಬರಿಯ ಉತ್ಕೃಷ್ಟ ಸರಕನ್ನೆ ಉತ್ಪಾದಿಸಬೇಕೆಂದರೆ.. ಪ್ರಿನ್ಸಿಪಾಲ್ ಅಂದಂತೆ ಇದೊಂದು ಮಾಸ್ ಪ್ರೊಡಕ್ಷನ್ ಆಫ್ ಕ್ವಾಲಿಟಿ ಎಜುಕೇಷನ್ನೆ ಇರಬಹುದೆನಿಸತೊಡಗಿತು.

ಜಾನಕಿ ಮೊದಲೆ ಹೇಳಿದ್ದಂತೆ ಆ ಗುಂಪಿನಿಂದ ಮೊದಲ ಹದಿನಾರು ಮಂದಿಯನ್ನು ಎಂಟರ ಎರಡು ಗುಂಪಾಗಿಸಿದಳು..' ನಾವೀ ಎರಡು ಗುಂಪಿನಲ್ಲೆ ಇಲ್ಲಿರುವವರಲ್ಲಿ ಹೆಚ್ಚು ಬುದ್ದಿವಂತರನ್ನು ಕಾಣುವ ಸಾಧ್ಯತೆ ಇರುವುದು..ಒಂದು ರೀತಿ ಟಾಪ್ ಸಿಕ್ಸ್ ಟೀನ್ ಅನ್ನು.. ಇವೆರಡು ಗುಂಪನ್ನು ನಾವಿಬ್ಬರು ಸೇರಿ ಒಟ್ಟಾಗಿಯೆ ಗ್ರೂಪ್ ಡಿಸ್ಕಷನ್ ಮಾಡಿಸೋಣ.. ಜೊತೆಗೆ ಪ್ರತಿ ಗುಂಪಿನಿಂದ ಇಬ್ಬರ ಬದಲು ನಾಲ್ವರನ್ನ ಆರಿಸಿಕೊಳ್ಳೋಣ.. ಅಲ್ಲಿಗೆ ಇಲ್ಲೆ ಎಂಟು ಜನ ಸಿಕ್ಕಿಬಿಡುತ್ತಾರೆ'

ಹಾಗೆ ಮುಂದುವರೆದು ಮಿಕ್ಕ ಆರು ತಂಡಗಳನ್ನು ತೋರಿಸುತ್ತ, ' ಇವು ಬಾಟಮ್ ಫಾರ್ಟಿ ಎಯ್ಟ್... ಇವರನ್ನು ಒಟ್ಟಾಗಿ ಮಾಡಬೇಕೆಂದರೆ ಒಂದು ದಿನದಲ್ಲಿ ಮುಗಿಸಲು ಆಗುವುದಿಲ್ಲ.. ನಾವಿಬ್ಬರು ಒಬ್ಬೊಬ್ಬರೆ ಬೇರೆ ಬೇರೆ ರೂಮಿನಲ್ಲಿ ನಡೆಸಿದರೆ ಇಬ್ಬರು ಮೂರು ಮೂರನ್ನು ಹಂಚಿಕೊಳ್ಳಬಹುದು.. ಒಟ್ಟು ಐದು ಸೆಶನ್ ಆದಂತೆ ಆಗುತ್ತದೆ.. ಸಂಜೆ ಒಳಗೆ ಮುಗಿಸಿಬಿಡಬಹುದು..' ಎಂದಳು..

ಜಾನಕಿಯ ಯೋಜನೆಯಂತೆ ಮೊದಲೆರಡು ಗುಂಪಿನಿಂದ ನಾಲಕ್ಕು ಮಂದಿಯಂತೆ ಒಟ್ಟು ಎಂಟು ಅಭ್ಯರ್ಥಿಗಳನ್ನು ಆರಿಸಲೇಬೇಕಾಯ್ತು.. ನಿಜಕ್ಕು ಗುಂಪಿನಲ್ಲಿರುವ ಪ್ರತಿಯೊಬ್ಬರು ಅದೆಷ್ಟು ಸಮರ್ಥ ವಾಕ್ಪಟುಗಳಾಗಿದ್ದರೆಂದರೆ ಎಂಟರಲ್ಲಿ ಯಾರು ಹೆಚ್ಚು , ಯಾರು ಕಡಿಮೆ ಎಂದು ನಿರ್ಧರಿಸಲೆ ಕಷ್ಟವಾಯ್ತು. ತೀರ ಸೂಕ್ಷ್ಮ ಸ್ತರದಲ್ಲಿ ಬೇರ್ಪಡಿಸಲಷ್ಟೆ ಸಾಧ್ಯವಾಗಿ ನನಗೆ ಮತ್ತೆ ಮತ್ತೆ ಆ ಪ್ರಿನ್ಸಿಪಾಲರ ನುಡಿಗಳನ್ನು ನೆನಪಿಸತೊಡಗಿತ್ತು. ಆದರೆ ಮಿಕ್ಕ ಆರು ಗುಂಪುಗಳಲ್ಲಿ ಇಷ್ಟು ತೊಡಕಿರಲಿಲ್ಲ.. ಪ್ರತಿ ಗುಂಪಿನಿಂದ ಇಬ್ಬಿಬ್ಬರಂತೆ ಮಿಕ್ಕ ಹನ್ನೆರಡು ಆಯ್ಕೆಗಳನ್ನು ಮಾಡಿ ಮುಗಿಸಿದಾಗ ಒಟ್ಟು ಇಪ್ಪತ್ತು ಅಭ್ಯರ್ಥಿಗಳು ಕೊನೆಯ ರೌಂಡಿಗೆ ಉಳಿದುಕೊಂಡಿದ್ದವರು.. ಹಿಂದಿನ ಕಾಲೇಜಿನ ಫಲಿತಾಂಶದ ಮಟ್ಟಕ್ಕೆ ಆ ಸಂಖ್ಯೆ ಬಂದು ನಿಂತಾಗ ನಾವಿಬ್ವರು ನಿರಾಳದಿಂದ ನಿಟ್ಟುಸಿರುಬಿಟ್ಟೆವು..

' ನನಗೇನೊ ಈ ಇಪ್ಪತ್ತರಲ್ಲಿ ಇಬ್ಬರನ್ನು ಮಾತ್ರ ತೆಗೆದುಕೊಳ್ಳುವುದು ಕಷ್ಟ ಅನಿಸುತ್ತಿದೆ.. ಇದುವರೆಗಿನ ಗುಣಮಟ್ಟ ನೋಡಿದರೆ ಕನಿಷ್ಟ ಹತ್ತು ಜನರಾದರು ಇಂಟರ್ವ್ಯೂವ್ ಚೆನ್ನಾಗಿ ಮಾಡುತ್ತಾರೆ.. ಅದು ಹೋಲಿಕೆಯ ಮಟ್ಟದಲ್ಲಿ ಫಿಲ್ಟರ್ ಮಾಡುವುದರಿಂದ.. ಅವರಲ್ಲಿ ಇಬ್ಬರನ್ನು ಮಾತ್ರ ಆರಿಸುವುದೆಂದರೆ ನಿಜಕ್ಕು ಕಷ್ಟ ಮತ್ತು ನಾವು ಒಳ್ಳೆಯ ಟ್ಯಾಲೆಂಟನ್ನು ಕಳೆದುಕೊಳ್ಳುತ್ತೇವೇನೊ ಎಂದು ಕೂಡ ಅನಿಸುತ್ತಿದೆ..' ನನ್ನ ಅನುಮಾನಕ್ಕೊಂದು ರೂಪ ಕೊಡುತ್ತ ಜಾನಕಿಗೆ ಹೇಳಿದೆ, ಅವಳ ಅನಿಸಿಕೆಯೇನಿರಬಹುದೆಂದು ಅರಿಯಲು..

' ಹೌದು ನನಗೂ ಹಾಗೆ ಅನಿಸುತ್ತಿದೆ... ಆದರೆ ಹತ್ತೆಲ್ಲ ಆಗದ ಹೋಗದ ಮಾತು.. ಹೆಚ್ಚೆಂದರೆ ಐದಾರು ಮಾತ್ರ ಸಾಧ್ಯ.. ನಾವಿದುವರೆವಿಗು ಮೂರಕ್ಕಿಂತ ಹೆಚ್ಚು ಯಾವ ಕಾಲೇಜಲ್ಲು ತೆಗೆದುಕೊಂಡಿಲ್ಲ. ಐದಾರು ತೆಗೆದುಕೊಂಡೆವೆಂದರೆ ಇದೆ ಮೊದಲ ಬಾರಿಯ ದಾಖಲೆಯಾಗುತ್ತದೆ..ಏನಿವೇ ಲೆಟ್ ಅಸ್ ಟಾರ್ಗೆಟ್ ಅಟ್ ಲೀಸ್ಟ್ ಫೋರ್' ಎಂದಳು ಅವಳು ನನ್ನ ಧಾಟಿಯಲ್ಲೆ ಚಿಂತಿಸುತ್ತ..' ಸೋಮವಾರ ಬೆಳಗಿನಿಂದ ಇಂಟರ್ವ್ಯೂವ್ ಇರುತ್ತಲ್ಲ ನೋಡೋಣ.. ಸೂರ್ಯಪ್ರಕಾಶ್ ಕೂಡ ಕೂರ್ತೀನಿ ಅಂತ ಹೇಳಿದಾರೆ ನೀವಿಬ್ಬರು ಹತ್ತತ್ತು ಜನರನ್ನ ಕವರ್ ಮಾಡಿದರೆ ಅವತ್ತೆ ಎಲ್ಲಾ ಮುಗಿಸಿಬಿಡಬಹುದು' ಎಂದಳು..

'ಸರಿ ..ಮಿಕ್ಕಿದ್ದು ಸೋಮವಾರ ನೋಡೋಣ ಥ್ಯಾಂಕ್ಸ್ ..' ಎಂದವನೆ ಅವತ್ತಿನ ಮಾತಿಗೆ ಮುಕ್ತಾಯ ಹಾಡಿ ಮನೆಯತ್ತ ನಡೆದಿದ್ದೆ..

***************

ನನಗೇಕೊ ಸೋಮವಾರ ಎಂದು ಬಂದೀತೊ ಅನ್ನುವ ಕುತೂಹಲ ವಾರದ ಕೊನೆಯಲ್ಲು ಕಾಡತೊಡಗಿತ್ತು.. ಆ ಕಾಲೇಜು ಹುಟ್ಟಿಸಿದ ನಿರೀಕ್ಷೆಗಳಿಂದಾಗಿ ಇಂಟರ್ವ್ಯೂವಿನಲ್ಲಿ ಬರಿ ಪ್ರಚಂಡರೆ ಕಾಣುತ್ತಾರೆನಿಸಿ ಸ್ವಲ್ಪ ಹೆಚ್ಚಿನ ಕುತೂಹಲವೆ ಆಗಿತ್ತು.. ಇಂಟರ್ವ್ಯೂವಿಗೆ ಬಂದು ಕೂತಾಗ ಕ್ಯಾಂಡಿಡೇಟುಗಳಿಗಿಂತ ನಾನೆ ಜಾಸ್ತಿ ಎಗ್ಸೈಟ್ ಆಗಿರುವೆನೇನೊ ಎನಿಸಿ ನಗುವು ಬಂದಿತ್ತು.. ನಿಗದಿತ ಸಮಯಕ್ಕೆ ಸೂರ್ಯಪ್ರಕಾಶರ ಜತೆಗೂಡಿ ಪಕ್ಕಪಕ್ಕದ ರೂಮಿನಲ್ಲೆ ಇಂಟರ್ವ್ಯೂವ್ ಆರಂಭಿಸಿಬಿಟ್ಟೆವು. ಜಾನಕಿ ಸೆಲೆಕ್ಟ್ ಆದವರ ಜೊತೆ ಮಾತ್ರ ಕೊನೆಯ ಸುತ್ತು ಮಾಡ್ಬೇಕಾದ್ದರಿಂದ ಅವಳು ಕೂರುವ ಅಗತ್ಯ ಇರಲಿಲ್ಲ..

ಆದರೆ ಇಂಟರ್ವ್ಯೂವ್ ಆರಂಭವಾದಂತೆ ನನಗೇಕೊ ಸ್ವಲ್ಪ ಇರಿಸುಮುರಿಸೆನಿಸತೊಡಗಿತು.. ಮೊದಲು ಬಂದದ್ದು ಗುಂಪಿನಲ್ಲಿ ಮೊದಲು ಬಂದ ಹುಡುಗಿ.. ತನ್ನ ಅದ್ಭುತವೆನ್ನುವ ಕಾನ್ವೆಂಟ್ ಇಂಗ್ಲೀಷಿನಲ್ಲಿ ತನ್ನ ಪರಿಚಯ ಆರಂಭಿಸಿದ ಹುಡುಗಿ ಟೆಕ್ನಿಕಲ್ ರೌಂಡಿಗೆ ಬರುತ್ತಿದ್ದಂತೆ ಯಾಕೊ ಏಕಾಏಕಿ ಮಂಕಾಗಿಬಿಟ್ಟಳು.. ನಾನು ಕೇಳಿದ್ದ ಪ್ರಶ್ನೆಗಳೂ ಬಹಳ ಬೇಸಿಕ್ ಸ್ತರದ್ದು.. ಎಂಜಿನಿಯರಿಂಗಿನ ಮೊದಲ ವರ್ಷದಲ್ಲಿ ಕಲಿಸುವ ಸರಳ ಮೂಲಭೂತ ಸಿದ್ದಾಂತಗಳು ಮತ್ತದರ ಪ್ರಾಯೋಗಿಕ ಬಳಕೆಯ ಕುರಿತದ್ದು.. ಅದು ಗೊತ್ತಿರದೆ ಯಾವ ವಿಧ್ಯಾರ್ಥಿಯು ಮುಂದಿನ ಸೆಮಿಸ್ಟರಿನಲ್ಲಿ ಮುಂದುವರೆಯಲು ಸಾಧ್ಯವಾಗುವುದಿಲ್ಲ.. ಅಷ್ಟೊಂದು ಮೂಲಭೂತ ಮಟ್ಟದ ಸರಳ ಗ್ರಹಿಕೆಗಳು.. ಆದರೆ ಒಂದಕ್ಕು ನೆಟ್ಟಗೆ ಉತ್ತರ ಹೇಳಲು ಬಾರದೆ ತಡಬಡಾಯಿಸಿದ್ದು ಕಂಡು ನನಗೆ ಅಚ್ಚರಿಯೆ ಆಯ್ತು.. ಬಹುಶಃ ಇಂಟರ್ವ್ಯೂವ್ ಭಯದಿಂದ ಹಾಗಾಗಿರಬಹುದೇನೊ ಅನಿಸಿ ಸ್ವಲ್ಪ ಧೈರ್ಯ ತರಿಸುವ ಉತ್ತೇಜಕ ಮಾತನಾಡಿದರು ಪ್ರಯೋಜನವಾಗಲಿಲ್ಲ.. ವಾತಾವರಣ ತಿಳಿಯಾಗಲೆಂದು ಸಣ್ಣದಾಗಿ ಜೋಕ್ ಮಾಡಿದರು ಉಪಯೋಗಕ್ಕೆ ಬರಲಿಲ್ಲ.. ಸರಿ ಇನ್ನು ನಾನೇನು ಮಾಡಲು ಸಾಧ್ಯವಿಲ್ಲವೆನಿಸಿ ಅರ್ಧಗಂಟೆಗೆ ಇಂಟರ್ವ್ಯೂವ್ ಮುಗಿಸಿ ಕಳಿಸಿಕೊಟ್ಟೆ, ಇದ್ಯಾವುದೊ ಸ್ಪೆಷಲ್ ಕೇಸ್ ಇರಬಹುದೆಂದು ತೀರ್ಮಾನಿಸಿ..

ನನ್ನೆಣಿಕೆ ಸುಳ್ಳಾಗುವಂತೆ ಎರಡನೆ ಮತ್ತು ಮೂರನೆಯ ಕೇಸು ಅದೇ ರೀತಿಯ ಫಲಿತದಲ್ಲಿ ಪರ್ಯಾವಸಾನವಾಗತೊಡಗಿದಾಗ ನನಗೇಕೊ ದಿಗಿಲಾಯ್ತು, ನಾನು ಇಂಟರ್ವ್ಯೂವ್ ಮಾಡುತ್ತಿರುವ ಬಗೆಯಲ್ಲೆ ಕುಂದಿರಬಹುದೆ ಎಂದು.. ಆ ಅನುಮಾನ ಬಂದಾಗ ಯಾವುದಕ್ಕು ಪರಿಶೀಲಿಸಿ ಬಿಡುವುದು ವಾಸಿ ಎನಿಸಿ ಪಕ್ಕದ ರೂಮಿನಲ್ಲಿದ್ದ ಸೂರ್ಯಪ್ರಕಾಶರನ್ನು ಕಾಫಿಯ ನೆಪದಲ್ಲಿ ಹೊರಗೆ ಕರೆದು ನನ್ನ ದಿಗಿಲನ್ನು ಹಂಚಿಕೊಂಡೆ..

' ಅಯ್ಯೊ..ನಾನು ಇದನ್ನೆ ಹೇಳಬೇಕೆಂದುಕೊಂಡೆ.. ಇದುವರೆಗು ಮೂರು ಕ್ಯಾಂಡಿಡೇಟ್ಸನ್ನ ನೋಡಿದೆ.. ಒಬ್ಬರೂ ಸುಖವಿಲ್ಲ. ಜಾನಕಿ ಹೇಳಿದ ರೀತಿ ನೋಡಿ ಏನೊ ಘಟಾನುಘಟಿಗಳಿರಬಹುದು ಅಂದುಕೊಂಡೆ.. ಆದರೆ ಇದುವರೆವಿಗು ಐ ಯಾಮ್ ವೆರಿ ವೆರಿ ಡಿಸಪಾಯಿಂಟೆಡ್..' ಅಂದಾಗ ' ಸದ್ಯ.. ಇದು ನನ್ನೊಬ್ಬನ ಅನುಭವ ಮಾತ್ರವಲ್ಲ' ಅನಿಸಿ ಸಮಾಧಾನವಾಗಿತ್ತು.. ಆದರು ಉಳಿದೆಲ್ಲ ರೌಂಡುಗಳಲ್ಲಿ ಇದೇ ಜನರು ಅದು ಹೇಗೆ ಅಷ್ಟು ಒಳ್ಳೆಯ ಫಲಿತಾಂಶ ನೀಡಲು ಸಾಧ್ಯವಾಯಿತೆಂಬುದು ಮಾತ್ರ ಯಕ್ಷಪ್ರಶ್ನೆಯಾಗಿ ಕಾಡತೊಡಗಿತು.. ಯಾವುದಕ್ಕು ಇದರ ತುದಿಬುಡ ಸೋಸುವುದೆ ಒಳಿತೆನಿಸಿ ಸೂರ್ಯಪ್ರಕಾಶರಿಗೊಂದು ಐಡಿಯಾ ಹೇಳಿದೆ - ಮುಂದಿನ ಅಭ್ಯರ್ಥಿಯನ್ನು ಇಬ್ಬರೂ ಈ ಕುರಿತು ಉಪಾಯವಾಗಿ ಪ್ರಶ್ನಿಸುವುದು ಎಂದು..

ಮುಂದಿನ ಅಭ್ಯರ್ಥಿ ಬಂದಾಗ ಆರಂಭದಲ್ಲೆ ಅವನ ಪರಿಚಯದ ಹೊತ್ತಿನಲ್ಲೆ ಲೋಕಾಭಿರಾಮವಾಗಿ ಮಾತಿಗಿಳಿಯುವಂತೆ, ಅವನ ಕಾಲೇಜಿನ ರಿಟನ್ ಟೆಸ್ಟ್ , ಸಮೂಹ ಚರ್ಚೆಗಳಲ್ಲಿ ನೋಡಿದ ಅದ್ಭುತ ಫಲಿತಾಂಶಕ್ಕೆ ಅಚ್ಚರಿಯನ್ನು ವ್ಯಕ್ತಪಡಿಸುತ್ತ ಅದು ಹೇಗೆ ಇಡೀ ಕಾಲೇಜಿನಲ್ಲಿ ಆ ಮಟ್ಟದ ಸಾಧನೆ ಸಾಧ್ಯವಾಯಿತು? ಅದಕ್ಕೆ ಯಾವ ಬಗೆ ಸಿದ್ದತೆ ಮಾಡಿಕೊಳ್ಳುವಿರಿ ಎಂದು ಸಾಂಧರ್ಭಿಕವಾಗಿಯೆಂಬಂತೆ ಕೇಳಿದೆ.. ನನ್ನ ಮೆಚ್ಚುಗೆಯಿಂದಲೆ ಅರ್ಧ ಹೆಮ್ಮೆಯಿಂದ ಉಬ್ಬಿ ಹೋಗಿದ್ದ ಆವನು ಆ ಗತ್ತಿನಲ್ಲೆ ಹೇಗೆ ಕೊನೆಯ ವರ್ಷದ ಆರಂಭದಿಂದಲೆ ಎಲ್ಲಾ ವಿದ್ಯಾರ್ಥಿಗಳನ್ನು ರಿಟನ್ ಟೆಸ್ಟಿಗೆ , ಸಮೂಹ ಚರ್ಚೆಗೆ ತಯಾರಾಗಿಸುತ್ತಾರೆಂದು ವಿವರಿಸತೊಡಗಿದೊಡನೆ ನನಗೆಲ್ಲ ಅರ್ಥವಾಗಿ ಹೋಯ್ತು.. ಕೊನೆಯ ವರ್ಷ ಪೂರ್ತಿ ಪ್ರತಿಯೊಬ್ಬ ವಿದ್ಯಾರ್ಥಿಯೂ ವಾರದ ಕೊನೆಯ ಎರಡು ದಿನಗಳಲ್ಲಿ ದಿನಕ್ಕೊಂದೊಂದು 'ಮಾಕ್ ರಿಟನ್ ಟೆಸ್ಟ್' ಮತ್ತು 'ಮಾಕ್ ಗ್ರೂಪ್ ಡಿಸ್ಕಷನ್' ನಲ್ಲಿ ಭಾಗವಹಿಸಬೇಕು.. ಹೀಗೆ ವರ್ಷ ಪೂರ್ತಿ ರಿಟನ್ ಟೆಸ್ಟ್, ಗ್ರೂಪ್ ಡಿಸ್ಕಷನ್ನಿನಲ್ಲಿ ತೊಡಗಿಸಿಕೊಂಡು ಅಭ್ಯಾಸವಾಗಿ ಕಂಪನಿಗಳು ನಡೆಸುವ ಪರೀಕ್ಷೆಗಳು ತೀರಾ ಹೊಸದರಂತೆ ಅನಿಸುವುದೆ ಇಲ್ಲ.. 

ಆದರೂ ಅದು ಸುಲಭವಾಗಿಯಂತು ಇರುವುದಿಲ್ಲ.. ಆ ಮಟ್ಟಕ್ಕೆ ಹೇಗೆ ಸಿದ್ದತೆ ಮಾಡಿಕೊಳ್ಳುತ್ತಾರೆ ಅನ್ನುವುದು ಮಾತ್ರ ಗೊತ್ತಾಗಲಿಲ್ಲ.. ಆಗ ಸರಕ್ಕನೆ ಪ್ರಿನ್ಸಿಪಾಲರು ನುಡಿದ ಮಾತೊಂದು ನೆನಪಾದಾಗ ಆ ಪ್ರಶ್ನೆಗೆ ಉತ್ತರವೂ ಸಿಕ್ಕಿಬಿಟ್ಟಿತ್ತು - 'ವಿದ್ಯಾರ್ಥಿಗಳಿಗೆ ಸೂಕ್ತ ಸಿದ್ದತೆ ಸಿಗಲೆಂದು ದೊಡ್ಡ ದೊಡ್ಡ ಯುನಿವರ್ಸಿಟಿ, ಐಐಟಿ, ಇಂಡಸ್ಟ್ರಿ ಮತ್ತು ರಿಸರ್ಚ್ ಇನ್ಸ್ ಟಿಟ್ಯೂಟುಗಳ ಪ್ರೊಫೆಸರುಗಳ ಹತ್ತಿರವೆ ಮಾಕ್ ಪೇಪರು ಸೆಟ್ ಮಾಡಿಸಿ ಅದನ್ನೆ ಪ್ರಾಕ್ಟೀಸ್ ಮಾಡಿಸುತ್ತೇವೆ' ಎಂದಿದ್ದ ಮಾತು. ಆಗ ಅದರ ಆಳ, ಅಗಲ ಅರಿವಾಗಿರಲಿಲ್ಲ, ಈಗರಿವಾಗುತ್ತಿದೆ.. ಕಂಪನಿಗಳಿಂದ ನಾವು ಕೂಡ ಅದೆ ಮೂಲಗಳಿಂದ ಟೆಸ್ಟ್ ಪೇಪರುಗಳನ್ನು ಸಿದ್ದಪಡಿಸುವುದರಿಂದ, ಹೆಚ್ಚು ಕಡಿಮೆ ಅದೇ ಮಟ್ಟದ ಮಾಕ್ ಪೇಪರುಗಳಲ್ಲಿ ಅಭ್ಯಾಸ ಮಾಡಿ ತಯಾರಾಗಿಬಿಡುತ್ತಾರೆ.. ಒಂದು ಸಾರಿ ಪ್ಯಾಟ್ರನ್ ಗೊತ್ತಾಗಿ ಹೋದರೆ, ಅದನ್ನು ಬಿಡಿಸುವ ವಿಧಾನವನ್ನು ಕಲಿತುಬಿಡಬಹುದು.. ಹೀಗಾಗಿ ಟೆಸ್ಟುಗಳು ನೀರು ಕುಡಿದಷ್ಟು ಸುಲಭವಾಗಿಬಿಡುತ್ತವೆ, ಅದಕ್ಕೆ ಬೇಕಾದ ಸೂಕ್ತ ಮೂಲತಃ ಜ್ಞಾನ, ತಿಳುವಳಿಕೆ ಇರದಿದ್ದರು.. ಸಮೂಹ ಚರ್ಚೆಯೂ ಅಷ್ಟೆ.. ವಾರಕ್ಕೆರಡರಲ್ಲಿ ಭಾಗವಹಿಸುತ್ತಿದ್ದರೆ ಎಂತಹ ಪೆದ್ದನು ತುಸುವಾದರು ಮಾತಾಡಲು ಕಲಿತುಬಿಡುತ್ತಾನೆ ಗುಂಪಿನ ಚರ್ಚೆಯಲ್ಲಿ.. ಅದೆಲ್ಲಾ ಒಳ್ಳೆಯದೇನೊ ಸರೀ.. ಆದರೆ ಅದೆಲ್ಲದರ ತಳಹದಿಯಾಗಿರಬೇಕಾದ ಕಲಿಕೆಯ ಅಡಿಪಾಯವೆ ಸರಿಯಾಗಿರದಿದ್ದರೆ ಈ ತರಬೇತಿಯಿಂದ ಪ್ರಯೋಜನವಾದರೂ ಏನು ? ಕಲಿಕೆಯ ಬದಲು ಕೆಲಸ ಗಿಟ್ಟಿಸುವ ಸುಲಭ ಗಿಮಿಕ್ ಆಗಿಬಿಡುವುದಿಲ್ಲವೆ ? ಹೇಗೊ ಈ ಗಿಮಿಕ್ಕಿನಿಂದ ಕಂಪನಿಯಲ್ಲಿ ಕೆಲಸ ಸಿಕ್ಕಿಬಿಟ್ಟರು, ಈ ಸತ್ವದ ವ್ಯಕ್ತಿಗಳು ಕೆಲಸದ ನಿಭಾವಣೆಯಲ್ಲು ಅದೇ ಮನಸತ್ತ್ವವನ್ನು ಪ್ರದರ್ಶಿಸಿ ಕಂಪನಿಯ ಹಿನ್ನಡೆಗೆ ಕಾರಣೀಭೂತರಾಗುವುದಿಲ್ಲವೆ ?

ಅದೆಂತೊ ಆ ಫಲಿತಾಂಶದ ಬ್ರಹ್ಮ ರಹಸ್ಯದ ಅರಿವಾದ ಮೇಲೆ ಎಲ್ಲಾ ನಿರಾಳವಾಯ್ತು.. ನಂತರದ ಮಾತಲ್ಲಿ ಸೂರ್ಯಪ್ರಕಾಶರು ಇದೆ ಮಾಹಿತಿಯನ್ನು ಹಂಚಿಕೊಂಡಾಗ ಪರಿಸ್ಥಿತಿಯ ಪೂರ್ಣ ಚಿತ್ರವೆ ಖಚಿತವಾಗಿ ಸಿಕ್ಕಂತಾಗಿ ಪೂರ್ತಿ ನಿರಾಳವಾಯ್ತು.. ಇಂಟರ್ವ್ಯೂವುಗಳೆಲ್ಲ ಮುಗಿದರು ಒಬ್ಬರು ಸೂಕ್ತರಾದವರು ದೊರೆಯಲಿಲ್ಲವಾದಾಗ ಅಚ್ಚರಿಯೇನೂ ಆಗಲಿಲ್ಲ.. ಇದ್ದುದರಲ್ಲಿ ಕೊನೆಯ ಸ್ಥಾನದಲ್ಲಿದ್ದ ಒಂದಿಬ್ಬರು ಮೊದಲ ಸ್ಥಾನಗಳಲ್ಲಿದ್ದ ಮಿಕ್ಕವರಿಗಿಂತ ಸ್ವಲ್ಪ ಚೆನ್ನಾಗಿ ಉತ್ತರಿಸಿದ್ದರಷ್ಟೆ. ಆದರೆ ಹಿಂದಿನ ಕೇರಳ ಕಾಲೇಜಿಗೆ ಹೋಲಿಸಿದರೆ ಅವರ ಅರ್ಧದಷ್ಟು ಹತ್ತಿರವೂ ಇರಲಿಲ್ಲ..ತಮ್ಮ ಪಾಲು ಮುಗಿಸಿ ಬಂದ ಸೂರ್ಯಪ್ರಕಾಶರದು ಇದೆ ತರದ ವರದಿ.. ತೀರಾ ಬೇಕೆ ಬೇಕೆಂದರೆ ಕೊನೆಯ ಕ್ಯಾಂಡಿಡೇಟ್ ಒಬ್ಬನನ್ನು ಆರಿಸಬಹುದಷ್ಟೆ, ಅದೂ ವಿತ್ ಕಾಂಪ್ರಮೈಸ್ ಅಂದಾಗ ಎಲ್ಲಾ ಒಂದೆ ಮೂಸೆಯ ಸರಕುಗಳು ಎಂದು ಮತ್ತಷ್ಟು ಸ್ಪಷ್ಟವಾಗಿತ್ತು..

ಬೆಳಗಿನಿಂದ ಬಿಜಿಯಾಗಿದ್ದ ಜಾನಕಿಗೆ ಸಂಜೆಯಾಗುತ್ತಿದ್ದಂತೆ ಒಬ್ಬರನ್ನು ಕೂಡ ನಾವು ಅವಳ ಹತ್ತಿರ ಕಳಿಸಲಿಲ್ಲವೆಂದು ಸಂಜೆ ತಟ್ಟನೆ ಜ್ಞಾನೋದಯವಾಗಿ ನಮ್ಮ ರೂಮುಗಳತ್ತ ಓಡಿಬಂದಳು.. ಕಾಫಿಯ ಕಪ್ಪೊಂದನ್ನು ಹಿಡಿದು ಕೂತಿದ್ದ ನಮ್ಮಿಬ್ಬರನ್ನು ಒಂದೆ ಬಾರಿಗೆ ದಿಟ್ಟಿಸುತ್ತಾ, 'ಹೌ ಮೆನಿ ?' ಎಂದಳು, ನಾವು ಆರೆನ್ನುತ್ತೇವೊ, ಹತ್ತೆನ್ನುತ್ತೇವೊ ಎನ್ನುವ ಜಿಜ್ಞಾಸೆಯಲ್ಲಿ..

ನಾನು ಸೂರ್ಯಪ್ರಕಾಶರತ್ತ ಒಮ್ಮೆ ನೋಡಿ, ' ನನ್ ...ಜಸ್ಟ್ ಜೀರೋ'ಎಂದೆ.. ಅವಳು ಅದನ್ನು ಹಾಸ್ಯವಲ್ಲ ನಿಜವೆಂದು ಅರಿಯಲೆ ಕೆಲವು ಹೊತ್ತು ಹಿಡಿಯಿತು.. ಒಂದಷ್ಟು ಗಳಿಗೆಯ ಪ್ರಶ್ನೋತ್ತರದ ನಂತರ ನಾನು ಕಂಡುಕೊಂಡ ಇಡೀ ಮಾಹಿತಿಯನ್ನು ಅವಳೊಡನೆ ಹಂಚಿಕೊಂಡೆ.. ಸೂರ್ಯಪ್ರಕಾಶರ ವರದಿಯನ್ನು ಜತೆ ಸೇರಿಸಿ ನೋಡಿದವಳಿಗೆ ನಾವು ಹೇಳುತ್ತಿದ್ದುದನ್ನು ನಂಬಲೆ ಕಷ್ಟವಾಗಿತ್ತು.. ಐದಾರು ಬೇಡ , ಒಂದೆರಡಾದರೂ ಬೇಡವೆ ? ಎಂದವಳ ತರ್ಕ..

' ನೋ.. ನಾವು ಒಂದೆರಡನ್ನಾದರು ಆರಿಸದೆ ಇರುವಂತಿಲ್ಲ.. ವೀ ವಿಲ್ ಲೂಸ್ ಟ್ರಸ್ಟ್ ಇನ್ ದಟ್ ಕಾಲೇಜ್ ಅಂಡ್ ಸ್ಟುಡೆಂಟ್ಸ್.. ಒಂದಿಬ್ಬರನ್ನಾದರು ಆರಿಸುವ ಸಾಧ್ಯತೆಯಿಲ್ಲವೆ , ನೋಡಿ..' ಎಂದಳು

'ನಮ್ಮ ಮಿಕ್ಕ ಅಭ್ಯರ್ಥಿಗಳ ಮಟ್ಟಕ್ಕೆ ಹೋಲಿಸಿದರೆ ಇವರು ಅರ್ಧಕ್ಕು ಬರುವುದಿಲ್ಲ ಜಾನಕಿ.. ಇಟ್ ವಿಲ್ ಬೀ ಯೆ ಬಿಗ್ ಕಾಂಪ್ರೊಮೈಸ್.. ಆಲ್ಸೊ ಇಂಜಸ್ಟೀಸ್ ಟು ದ ಕ್ಯಾಂಡಿಡೇಟ್ಸ್ ವೀ ಡ್ರಾಪ್ಡ್ ಬಿಫೋರ್ ' ಎಂದೆ ನಾನು ಕೇರಳ ಕಾಲೇಜಿನಲ್ಲಿ ಪರಿಗಣಿಸದೆ ಬಿಟ್ಟುಬಿಟ್ಟವರ ಕೇಸನ್ನು ನೆನೆಯುತ್ತ... ಈಗಲೂ ಏನಿಲ್ಲ ಅವರನ್ನೆ ಆರಿಸಿಕೊಳ್ಳಬಹುದು, ಇವರ ಬದಲಿಗೆ ಎಂದುಕೊಳ್ಳುತ್ತ..

ಸೂರ್ಯಪ್ರಕಾಶರು ಅದನ್ನೆ ಅನುಮೋದಿಸುತ್ತ, ' ಸುಮಾರಾಗಿರುವವರು ಸಹ ಬಾಟಂ ಫೈವ್.. ನನ್ನ ಕೇಳಿದರೆ.. ಈ ಕಾಲೇಜಿಂದ ಯಾರನ್ನೂ ಆರಿಸದಿರುವುದೆ ವಾಸಿ.. ವೀ ಶುಡ್ ಸೆಂಡ್ ಎ ಸ್ಟ್ರಾಂಗ್ ಮೆಸೇಜ್... ಇಲ್ಲದಿದ್ದರೆ ಅವರು ಹಿಡಿದ ಹಾದಿಯಲ್ಲಿರುವ ತಪ್ಪು ಅವರಿಗೆ ಗೊತ್ತಾಗುವುದಿಲ್ಲ... ನಾನಂತು ಯಾರನ್ನು ರೆಕಮಂಡ್ ಮಾಡುವುದಿಲ್ಲ ನನ್ನ ಗುಂಪಿನಿಂದ' ಎಂದವರೆ ಮಾತು ಮುಗಿಸಿ ಹೊರಟೆಬಿಟ್ಟರು ಹೊರಡಲವಸರವಿದೆಯೆಂದು 'ಸಾರಿ' ಹೇಳಿ.

ಅವರು ಹೋದ ಮೇಲೆ ಅಲ್ಲಿ ಮಿಕ್ಕುಳಿದಿದ್ದು ನಾನು ಮತ್ತು ಜಾನಕಿ ಮಾತ್ರ..

' ಐ ಡೋಂಟ್ ವಾಂಟು ಆರ್ಗ್ಯೂ ಏನಿಮೋರ್... ಈ ಕಾಲೇಜಿಗೆ ಒಳ್ಳೆ ಹೆಸರಿದೆ..ನಾವಲ್ಲಿ ಕಾಲಿಟ್ಟಿರುವುದೆ ಇದೆ ಮೊದಲ ಸಾರಿ.. ಏನಾದರೂ ಮಾಡಿ ಯಾರದರು ಇಬ್ಬರನ್ನ ಶಾರ್ಟ್ ಲಿಸ್ಟ್ ಮಾಡಿಕೊಡು ನಿನ್ನ ಗುಂಪಿನಿಂದ.. ಸೂರ್ಯಪ್ರಕಾಶರನ್ನು ನಾನು ಕೇಳಲು ಆಗುವುದಿಲ್ಲ.. ಅವರೊಂದು ಸಾರಿ ಡಿಸಿಶನ್ ತೆಗೆದುಕೊಂಡ ಮೇಲೆ ಮುಗಿಯಿತು ಮತ್ತೆ ಬದಲಿಸುವುದು ಕಷ್ಟ..' ಎಂದವಳೆ ಸರಕ್ಕನೆ ಎದ್ದು ಹೊರಟು ಹೋದಳು..

ನನ್ನ ಮುಂದಿದ್ದ ಆ ಹತ್ತು ಜನರ ಲಿಸ್ಟನ್ನೆ ನೋಡುತ್ತ ದಿಗ್ಮೂಢನಂತೆ ಕುಳಿತುಬಿಟ್ಟೆ, ಮುಂದೇನು ಮಾಡಬೇಕೆಂದು ಗೊತ್ತಾಗದೆ...!

(ಮುಕ್ತಾಯ)

(PS:Upon searching, found this site giving hints and help to candidates including question papers :-) http://www.freshersworld.com/interview/campus-interview)

Comments

Submitted by nageshamysore Tue, 02/23/2016 - 19:41

In reply to by smurthygr

ಮೂರ್ತಿಗಳೆ ನಮಸ್ಕಾರ.. ಇದು ಕೆಲವು ದಿನದ ಹಿಂದೆ ಬರೆದಿದ್ದ ಕಥೆ - ನಿಲುಮೆಯಲ್ಲಿ ಪ್ರಕಟವಾಗಿತ್ತು. ಐಟಿ ಜಗದ ಕಂಪನಿಗಳಲ್ಲಿ ನಡೆಯುವ 'ಮಾಸ್ ರಿಕ್ರೂಟ್ಮೆಂಟು'ಗಳ ಕೆಲವು ನಮೂನೆಗಳನ್ನು ಕುರಿತು ಕೇಳಿದ್ದೆ. ಅದಕ್ಕೆ ಸ್ವಲ್ಪ ಮಸಾಲೆ ಹಚ್ಚಿದ ಪರಿಣಾಮ ಈ ಕಥೆ.. ಕಥೆಯ ಎಳೆ ಸಿಕ್ಕಿದಾಗೆಲ್ಲ ಯತ್ನಿಸುತ್ತೇನೆ :-)

Submitted by nageshamysore Fri, 02/26/2016 - 19:47

In reply to by kavinagaraj

ಕವಿಗಳೆ ಇದೊಂದು ತರ ಎಲ್ಲಾ ಪ್ರಪಂಚದ ಕಥೆಯೇ - ಐಟಿಯಲ್ಲಿ ಸ್ವಲ್ಪ ಜಾಸ್ತಿ , ಯಾಕೆಂದರೆ ಅಲ್ಲಿರುವ ಸಂಖ್ಯೆಯೂ ಜಾಸ್ತಿಯಾದ ಕಾರಣ. ಪ್ರತಿಕ್ರಿಯೆಗೆ ಧನ್ಯವಾದಗಳು :-)

Submitted by keshavmysore Fri, 02/26/2016 - 15:51

ನಾಗೇಶರೆ,
ಇದು ಕಥೆಯಾದರೂ, ವಾಸ್ತವದ ಚಿತ್ರಣದಂತಿದೆ. ಹೆಚ್.ಆರ್. ವಿಭಾಗದ ಬಗ್ಗೆ ನನಗೆ ಮೊದಲಿಂದಲೂ ಇದ್ದ ಪೂರ್ವಾಗ್ರಹವೆನ್ನಬಹುದಾದ ನಿಲುವು ಇದನ್ನು ಓದಿದ ಮೇಲೆ ಮತ್ತಷ್ಟು ಬಲವಾಯಿತು. ಸ್ಟಾಟಿಸ್ಟಿಕ್ಸ್ ಅಂದರೆ ಬರೇ ಅಂಕಿಅಂಶಗಳ ಮತ್ತು ಸಾಧ್ಯಾಸಾಧ್ಯತೆಗಳ ಅರ್ಥೈಸುವಿಕೆ ಹಾಗೂ ಅವು ಬೀರಬಹುದಾದ ಪರಿಣಾಮಗಳ ಬಗೆಗಿನ ಮುನ್ನೋಟಕ್ಕೆ ಒಂದು ಪ್ರಯತ್ನ. ಇಲ್ಲಿ ಅರ್ಹತೆ ಮತ್ತು ಎಬಿಲಿಟಿ ಎನ್ನುವ ಗುಣಗಳು ಅಂಕಗಳಲ್ಲಿ ಅಳೆಯಲು ಆಗದಿರುವುದರಿಂದ ಅಥವಾ ಹಾಗೆ ಮಾಡಲು ಅಂತಹ ಗುಣಗಳು ಆಯ್ಕೆ ಮಾಡುವವರಲ್ಲೇ ಸಾಮಾನ್ಯವಾಗಿ ಇಲ್ಲದಿರುವುದರಿಂದ ಇಂತಹ ಮಾನವ ಸಂಪನ್ಮೂಲ ವಿಭಾಗಗಳೆಂಬ ಅಣಬೆಗಳು ಹುಟ್ಟಿಕೊಳ್ಳುತ್ತವೆ ಅಲ್ಲವೇ?

ಉದಾಹರಣೆಗೆ, ನಿಮ್ಮ ಕಥೆಯಲ್ಲಿ ಒಂದುವೇಳೆ ಜಾನಕಿ ದೇವಿ ಇಲ್ಲದೆ, ಬರೇ ನೀವು ಮತ್ತು ಕೇಶವನಾಯರ್ ಮಾತ್ರವೇ ಇದ್ದರೆ ಬಹುಷಃ ನೀವು ನೋಡಿದ ಮೊದಲ ಕಾಲೇಜಿನಲ್ಲೇ ನಿಮಗೆ ಸೂಕ್ತವೆನಿಸುವ ಅಭ್ಯರ್ಥಿಗಳನ್ನು ಆರಿಸಿಬಿಡುತ್ತಿದ್ದಿರೇನೋ! ಅದರಿಂದ ನಿಮ್ಮ ಕಂಪನಿಗೆ ನಷ್ಟವೇನೂ ಆಗುತ್ತಿರಲಿಲ್ಲ. ಕಾಲೇಜುಗಳ ದೃಷ್ಟಿಯಲ್ಲಿ ನಿಮ್ಮ ಕಂಪನಿ ಒಳ್ಳೆಯ ಎಂಪ್ಲಾಯರ್ ಎನಿಸಿಕೊಳ್ಳುವ ಅಗತ್ಯವೇನಿತ್ತು? ಈ ರೀತಿಯ ಅಗತ್ಯವೂ ಸಹ - ಯಾವುದೇ ಲೇಬರ್ ಕಂಟ್ರಾಕ್ಟರ್+ ಗುಮಾಸ್ತರುಗಳು ಸೇರಿ ಮಾಡಬಹುದಾದ ಕೆಲಸಕ್ಕೆ ಮಾನವ ಸಂಪನ್ಮೂಲ ಎಂದು ತಂತಾವೇ ಹೆಸರಿಸಿಕೊಂಡ ಘನಮಧ್ಯವರ್ತಿಗಳ ಗುಂಪು - ಮಾಡಿದ ಸೃಷ್ಟಿ - ಹೌದೆ?
- ಕೇಶವ ಮೈಸೂರು

Submitted by nageshamysore Fri, 02/26/2016 - 19:59

In reply to by keshavmysore

ಕೇಶವರೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ನೀವು ಹೇಳಿದ ಮಾತಿನ ಸತ್ಯಾಸತ್ಯತೆಯನ್ನೆಲ್ಲವನ್ನು ಮೀರಿ ಈ ವಿಷಯದ ಮೇಲೆ ಪ್ರಭಾವ ಬೀರುವ ಮತ್ತೊಂದು ಮುಖ್ಯ ವಿಷಯವಿದೆ. ಅದೆಂದರೆ ಕಂಪನಿಯ ನೀತಿ, ನಿಯಮಾವಳಿ , ಪಾಲಿಸಿಗಳು. ಸಂಸ್ಥೆಯ ಯಾರೇ ಆಗಲಿ ಪ್ರತಿಯೊಬ್ಬರೂ ಅಲ್ಲಿನ ನೀತಿ, ನಿಯಮಾವಳಿ, ಸಂಹಿತೆಗಳನ್ನು ಅನುಕರಿಸಬೇಕಾಗುತ್ತದೆ.. ಹೆಚ್ ಆರ್ ಸೇರಿದಂತೆ ಎಲ್ಲರೂ ಇದರ ವ್ಯಾಪ್ತಿಗೆ ಸೇರುತ್ತಾರೆ. ಹೀಗಾಗಿ ಇಲ್ಲಿ ನಿಜವಾದ ವಿಲನ್ ಅಂದರೆ ಕಂಪನಿಯ ಸಿದ್ದಾಂತ, ತತ್ವ ಮತ್ತು ನೀತಿ ಸಂಹಿತೆಯಿಂದ ವಿಸ್ತರಿಸಲ್ಪಟ್ಟ ನಿಯಮಾವಳಿಗಳು. ನಿಯಮ ಪಾಲಿಸದಿದ್ದರೆ ಆಡಿಟ್ಟಿನಲ್ಲಿ ಹಿಡಿಯುತ್ತಾರೆಂಬ ಕಾರಣಕ್ಕೆ ಎಲ್ಲರೂ ನಿಯಮ ಪರಿಪಾಲಿಸುವ ಕಾಳಜಿ ತೋರುತ್ತಾರೆ. ಹೀಗಾಗಿ ಇಲ್ಲಿ ಒಬ್ಬರನ್ನೇ ವಿಲನ್ ಅನ್ನುವುದಕ್ಕಿಂತ, ಅಂತಹ ಜನಗಳಿಂದಲೆ ಮಾಡಲ್ಪಟ್ಟ ಪ್ರಾಸೆಸ್ಸುಗಳು, ಪಾಲಿಸಿ, ಸಿದ್ದಾಂತ ತತ್ವಗಳು ಇಂತಹ ಅಚಾತುರ್ಯಕ್ಜೆ ಮೂಲ ಕಾರಣವೆನ್ನಬಹುದೇನೊ..?

Submitted by keshavmysore Fri, 02/26/2016 - 15:57

ಅಂದಹಾಗೆ, ಇಲ್ಲಿ ಲೇಬರ್ ಕಂಟ್ರಾಕ್ಟರ್+ ಗುಮಾಸ್ತರುಗಳು ಎಂದಾಗ ಅವರುಗಳು ಮಾಡುವ ಕೆಲಸ ಕಡಿಮೆ ಎಂಬ ಅರ್ಥವಲ್ಲ. ಆದರೆ ಆ ಕೆಲಸ ಎಲ್ಲಕ್ಕಿಂತ ಹೆಚ್ಚಿನದು, ಆ ಕಾರಣದಿಂದಲೇ ಹೆಚ್.ಆರ್ ವಿಭಾಗಗಳು ಉತ್ಪಾದನೆ / ವಿಜ್ಞಾನ ವಿಭಾಗಳಿಗಿಂತ ತಾವು ಮುಖ್ಯವೆಂಬ ಧೋರಣೆಯ ಬಗ್ಗೆ ನನಗಿರುವ ತಾತ್ಸಾರ ಅಷ್ಟೆ.