ಮನಸಲೆ ಮನಸಾಗುವೆ ನಾನು...(ಹೀಗೊಂದು ವಿರಹ ಪ್ರೇಮ ಗೀತೆ)

ಮನಸಲೆ ಮನಸಾಗುವೆ ನಾನು...(ಹೀಗೊಂದು ವಿರಹ ಪ್ರೇಮ ಗೀತೆ)

(ಯಾರಾದರು ಸಿನಿಮಾದವರು ಓದಿ ಚಲನ ಚಿತ್ರ ಗೀತೆಯಾಗಲು ಚೆನ್ನಾಗಿದೆಯೆಂದು ಆರಿಸಿಕೊಳ್ಳಲೆಂಬ 'ದುರಾಸೆಯೊಡನೆ) :-)
 
(Picture: a still from movie shiva manasulo shruti , picked from http://www.thehindu.com/multimedia/dynamic/00921/hycp12SMS-Review_AR_921...)
 
 
ಮನಸಲೆ ಮನಸಾಗುವೆ ನಾನು, ಹೇಳು ನೀ ಹೇಗಳಿಸುವೆ ನೀನು ?
ಕನಸಲಿ ಕನಸ ಕದಿವೆನಿನ್ನು, ಕಾಣದೆ ಹೇಗಿರುವೆ ನೀನು ?
ಹೃದಯದ ಬಡಿತಕು ತಪ್ಪಿಸುವೆ, ಲಯಬದ್ದ ನಿಯಮ
ಕಾಡುವೆ ಪ್ರೀತಿಯ ಸೂರಗಲ, ಮೀರಿದರು ಸಂಯಮ || ಮನಸಲೆ ||
 
ತಪ್ಪೇನು ನನ್ನದೀ ಎದೆಯ, ಗಡಿಯಾರ ಸರಕು
ಅಡವಿಟ್ಟು ಕೂತಿದೆ ಕೀಲಿಯನು, ನಿನ್ನಲಿ ಹುಡುಕು
ಅರಿವಿದ್ದೊ ಇರದೆಯೊ ನೀನದರ, ಕೀ ಕೊಡುವ ಒಡತಿ
ಕಳುವಾಗಿ ಹೋಗಿದೆ ನಿನ್ನೊಳಗೆ, ಮತ್ತೆ ಸಿಗದ ರೀತಿ || ಮನಸಲೆ ||
 
ಕಳುವಲ್ಲ ಕಾಡಲು ನಿನ್ನನ್ನು, ತೊಡೆಯಲು ಬೇಡದ ನೋವನ್ನು
ಅರಿತರು ಅರಿಯದ ಹಾಗೇನು, ನಿನ್ನ ನಡೆಯ ಕಾನೂನು?
ಅವರಿಸಿಕೊಂಡುಬಿಡುವೆ ನಿನ್ನ, ಸಂಚು ಮಾಡೊ ಕೋಟಲೆಗೆ
ದಾರಿ ತಪ್ಪಿಸಿ ಕಂಗಾಲಾಗಿಸುತ, ನಿಲುವೆ ಸತತ ನಿನ್ನಾ ಕಾವಲಿಗೆ || ಮನಸಲೆ ||
 
ನೀ ಹಾಕಿ ಕುಳಿತೆ ಮನಕೆ ಬೀಗ, ನಿಂತಿದೆ ನನ್ನೆದೆ ಗಡಿಯಾರ
ನೀ ಕದವ ತೆರೆಯದೆ ಸರಾಗ, ನಡೆಯಲೆಂತು ಜೀವದ ವ್ಯಾಪಾರ
ನಾನಾಗುವೆ ಅದರ ಮುಳ್ಳ ಚಲನೆ, ನೀ ಮೌಲ್ಯದ ಅಂಕಿ ಕಣೆ
ಅಪಮೌಲ್ಯವಾಗದಂತೆ ಪರಿಗಣನೆ, ಕಾಯುವೆನೆ ನಿನ್ನಾ ನನ್ನಾಣೆ || ಮನಸಲೆ ||
 
ಹೇಳಲಿದೆ ಕೋಟಿ ಕೋಟಿ ಮಾತು, ಆಡದಿರುವುದೆ ಉಚಿತ
ಹೇಳದೆಲೆ ಮಾಡುವುದೆ ಒಳಿತು, ಒಳಿತಾಗುವುದು ಖಚಿತ
ಬಿಟ್ಟುಬಿಡೆ ಶಂಕೆ ಅನುಮಾನ, ಕೊಟ್ಟಷ್ಟು ಕೊಡಲಿ ವಿಧಿ
ಸಿಕ್ಕಷ್ಟು ಸಿಗಲಿ ಹಿಡಿವೆ ಬೊಗಸೆ, ಇರುವಷ್ಟು ದಿನ ಸನ್ನಿಧಿ || ಮನಸಲೆ ||
 
 

- ನಾಗೇಶ ಮೈಸೂರು
 

Comments

Submitted by ravindra n angadi Sat, 02/27/2016 - 11:45

ನಮಸ್ಕಾರಗಳು ಸರ್,

ಗಡಿಯಾರದ ಚಲನೆ ಬೇಗ ಸಾಗಲಿ, ಅಪಮೌಲ್ಯವಾಗದೆ ನಿಮ್ಮ ಮನದ ಗಡಿಯಾರಕ್ಕೆ ಕೀಲಿ ಕೊಟ್ಟು ನಿಮ್ಮ ಸಂಯಮಕ್ಕೆ ಫಲ ನೀಡಲಿ ಎಂದು ಆಶಿಸುತ್ತೇನೆ ಸರ್.

ಧನ್ಯವಾದಗಳು.

Submitted by nageshamysore Sat, 02/27/2016 - 11:54

In reply to by ravindra n angadi

ರವೀಂದ್ರರೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.. ತಮ್ಮ ಆಶಯವನ್ನು ಈ ಮೂಲಕವೆ ತಲುಪಬೇಕಾದವರಿಗೆ ರವಾನಿಸಿಬಿಡುತ್ತೇನೆ ಬಿಡಿ !

(ಅಂದ ಹಾಗೆ ಇದೆಲ್ಲೋ ಹಳೆ ಕಾಲದ ಗಡಿಯಾರ ಬಿಡಿ . ಈಗೆಲ್ಲ ಗಡಿಯಾರ ಕೀಲಿ ಕೊಡುವ ಹಾಗೆ ಇಲ್ಲ - ಎಲ್ಲಾ ಕ್ವಾರ್ಟ್ಜ್ - ಬ್ಯಾಟರಿಯಿಂದ ಮಾತ್ರವೇ ಓಡುವುದು. :-) )

Submitted by nageshamysore Sat, 02/27/2016 - 12:41

In reply to by ravindra n angadi

ಅದೂ ನಿಜವೇ - ಆದರೆ ಕೆಲವು ವಿಷಯಗಳಲ್ಲಿ ಮಾತ್ರ ! ಬೆಲೆ ಬಾಳುವ ಅಥವಾ ಪ್ರಯೋಜನಕ್ಕೆ ಬರುವ ಓಲ್ಡುಗಳು ಮಾತ್ರ ಗೋಲ್ಡ್... ಮಿಕ್ಕಿದ್ದೆಲ್ಲ ಬರೀ 'ಬರ್ಡನ್' ಅನ್ನೋರೆ ಜಾಸ್ತಿ :-)

Submitted by kavinagaraj Sun, 02/28/2016 - 08:10

ಶುಭವಾಗಲಿ. ವಿರಹದ ಬೇಗೆ ಹೊರಸೂಸಿದೆ!!
ನಿಮ್ಮ ನಿರೀಕ್ಷೆ ಕುರಿತು ನನ್ನ ಅನಿಸಿಕೆ ನೇರವಾಗಿ ಹೇಳಬೇಕೆಂದರೆ ಇಂದಿನ ಸಿನೆಮಾಗಳಲ್ಲಿ ವಿರಹಪಡುವಷ್ಟೂ ವ್ಯವಧಾನವಿರುವುದಿಲ್ಲ.

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ನಿಮ್ಮ ಮಾತು ನಿಜ - ಅದಕ್ಕೆ 'ದುರಾಸೆ' ಅನ್ನೋ ಪದ ಬಳಸಿದೆ..:-)

ನೀವು ಹೇಳಿದ್ದು ಒಂದು ಕಾರಣವಾದರೆ, ಇಂಥಹದ್ದನ್ನ ಬರೆಯೋ ಸಾವಿರಾರು ಜನರಿದ್ದಾರೆ ಆ ರಂಗದಲ್ಲಿ. ಅಲ್ಲಿ ಬೇಕಾದ್ದೆಲ್ಲ 'ಸೇಲಬಲ್' ಸರಕು ವಾಣಿಜ್ಯಿಕ ಯಶಸ್ಸಿನ ಸಾಧ್ಯತೆಯಷ್ಟೇ ಅದರ ಮಾನದಂಡ... :-)