ಅಹಲ್ಯಾ ಸಂಹಿತೆ (ಕಾದಂಬರಿ) - ಧಾರಾವಾಹಿ ೦೧

Submitted by nageshamysore on Tue, 03/01/2016 - 23:39

[ ಹಿನ್ನಲೆ: ಇದೊಂದು ಕಾದಂಬರಿ.. ಬೃಹತ್ ಗಾತ್ರವೊ, ಕಿರುಗಾತ್ರವೊ ಎನ್ನುವುದರ ಅಂದಾಜು ಯೋಜನೆ ಅಥವಾ ಸ್ಥೂಲರೂಪದ ಕಲ್ಪನೆಯೂ ಇಲ್ಲದೆ ಬರೆಯಹೊರಟಿದ್ದೇನೆ. ಇದರ ವಸ್ತು ಪೌರಾಣಿಕ ಹಿನ್ನಲೆಯ ಹೆಸರಿನ ಪಾತ್ರಗಳ ಸುತ್ತ ಗಿರಾಕಿ ಹೊಡೆಯುವುದರಿಂದ ಇದನ್ನು ಪೌರಾಣಿಕವೆಂದು ಕರೆಯಲು ಹೊರಟರೆ ಅವಸರದ ತೀರ್ಮಾನವಾದೀತು. ಯಾಕೆಂದರೆ ಇಲ್ಲಿ ಉದ್ದಕ್ಕೂ ವೈಜ್ಞಾನಿಕ ಎಳೆಯನ್ನು ಹಿಡಿದು ವಿವರಿಸುವ ಹವಣಿಕೆಯಿದೆ. ಹಾಗೆಂದು ಪೂರ್ಣ ವೈಜ್ಞಾನಿಕವೆನ್ನಲು ಬಿಡದ ಪೌರಾಣಿಕ ಪಾತ್ರಗಳ ಕಲ್ಪನಾ ಹಂದರವಿದೆ. ಹೋಗಲಿ ಆ ಪಾತ್ರಗಳ ಅನಾವರಣಕ್ಕಾದರೂ ಪೂರ್ಣ ಆಧಾರ, ಶಾಸ್ತ್ರಬದ್ಧ ಮಾಹಿತಿ ಮೂಲ, ವೇದಾಂತಿಕ ಆಧಾರವಿದೆಯೆ ಎಂದು ನೋಡಿದರೆ, ಅದೂ ಕೂಡ ಅರೆಬೆಂದ ಮುಳ್ಳಕ್ಕಿ. ರಂಜನೀಯ ಕಥಾನಕವೊ, ಪುರಾಣ ಗ್ರಂಥಗಳ ಆಧಾರವೊ ಎಂದು ನಿರ್ಧರಿಸಲೆ ಆಗದಂತೆ ಎಲ್ಲ ಕಲಸುಮೇಲೋಗರವಾದ ಕಥಾಸಂಗಮ. 

ಇದನ್ನು ಯಾವುದೆ ಸತ್ಯಾಸತ್ಯತೆಯ ಆಧಾರದ ಒರೆಗೆ ಹಚ್ಚದೆ, ಪ್ರಾಯಶಃ ಹೀಗೂ ನಡೆದಿರಬಹುದಾದ ಸಾಧ್ಯತೆಯಿದೆ ಎನ್ನುವ ತಾರ್ಕಿಕ ಸ್ಪಷ್ಟನೆಯೊಂದಿಗೆ ಆಸ್ವಾದಿಸಿದರೆ ಓದಲು ರಂಜನೀಯವಾಗಿರಬಹುದಾದ ಸಾಧ್ಯತೆ ಹೆಚ್ಚು. ಹೀಗಾಗಿ ಇದು ನಿಜವೆ ? ಸುಳ್ಳೆ ? ಎನಿದಕ್ಕೆಲ್ಲ ಆಧಾರ ? ಎಂಬಿತ್ಯಾದಿ ಪ್ರಶ್ನೆ ಕೇಳಿದರೆ ನಾನು ನಿರುತ್ತರ. ಅಲ್ಲಿ ಇಲ್ಲಿ ಓದಿದ್ದು, ಕೇಳಿದ್ದುದೆಲ್ಲವನ್ನು ಯಥೇಚ್ಛವಾದ ಕಲ್ಪನಾ ಮೂಸೆಯಲ್ಲಿ ತಿರುವಿ, ರುಬ್ಬಿ, ಜಬ್ಬಿ ನನ್ನದೇ ಆದ ಕಥಾಪಾಕವನ್ನು ತಯಾರಿಸಿದ್ದೇನೆ. ಹೀಗಾಗಿ ಇದು ಹೀಗೇ ನಡೆದಿರಬಹುದು ಎಂದುಕೊಂಡವರಿಗೆ ನಿಜದಂತೆ ಕಂಡರೆ ಮಿಕ್ಕವರಿಗೆ ಅಡುಗೋಲಜ್ಜಿ ಕಥೆಯೆನಿಸಬಹುದು, ತೇಪೆ ಹಚ್ಚಿದ ಮಿಥ್ಯೆಯ ರೂಪದಲ್ಲಿ.. ಎಲ್ಲಾ ಜಿಜ್ಞಾಸೆ ಬದಿಗಿಟ್ಟು ಯಾರಿಗೂ, ಯಾವುದಕ್ಕೂ ಸಂಬಂಧಿಸದ ಕಥೆಯೆಂದು ಓದುವವರಿಗೂ ಕಸಿವಿಸಿಗೊಳಿಸುವಂತೆ ಪುರಾಣದ ಪಾತ್ರಗಳ ನೈಜ ಹೆಸರುಗಳು ಯಥಾವತ್ತಾಗಿ ಬಳಸಲ್ಪಟ್ಟಿವೆ. ಕಥೆಯ ಮೂಲ ಹಂದರ ಪೂರ್ಣ ಕಲ್ಪನೆ ಅಥವಾ ಊಹಾಪೋಹ ಅಲ್ಲವಾದ ಕಾರಣ ಈ ನೈಜ ಹೆಸರುಗಳ ಬಳಕೆ ಅವಶ್ಯಕವೆನಿಸಿತು. ಆದರೆ ಆ ಹೆಸರುಗಳ ಮುಂದಕ್ಕೆ ಬೆಳೆಸಿದ ಪಾತ್ರ ಕಲ್ಪನೆ ಮತ್ತು ಕಥಾನಕ ಮಾತ್ರ ಬಹುತೇಕ ಲಂಗೂಲಗಾಮಿಲ್ಲದೆ ಹೊರಟ ಕಲ್ಪನಾಲಹರಿಯ ಫಲಿತ ಚಿತ್ರಣ. 

ಅಂತಿಮವಾಗಿ ಅದು ನೀಡುವ ಅನುಭವ ಅದ್ಭುತವಾದದ್ದೊ ಅಥವಾ ಸಾಧಾರಣವಾದದ್ದೊ ಎನ್ನುವ ಯಾವ ಪ್ರತೀಕ್ಷೆ ಯಾ ನಿರೀಕ್ಷೆಗೂ ಆಸ್ಪದ ಕೊಡದೆ, ಕಾಲಕ್ಷೇಪಕ್ಕೊಂದು ಸುಲಭ ಸರಕು ಎಂದಷ್ಟೆ ವಾದ ಮಂಡಿಸುತ್ತ ಈ ಕಾದಂಬರಿಯನ್ನು ಅನಾವರಣಗೊಳಿಸುತ್ತಿದ್ದೇನೆ, ವಾದ-ವಿವಾದಗಳ ಕುರುಹಿಗಾಗಿ ಹುಡುಕುವವರ ಸಲುವಾಗಿ ಮತ್ತೊಮ್ಮೆ ಸೃಷ್ಟೀಕರಣ ನೀಡುತ್ತ ; ಇದು ನೇರವಾಗಿಯಾಗಲಿ ಪರೋಕ್ಷವಾಗಿಯಾಗಲಿ ಯಾವುದರ ಪ್ರತಿಪಾದನೆಯೂ ಅಲ್ಲ, ಅವಹೇಳನವೂ ಅಲ್ಲ. ಹೀಗೂ ನಡೆದಿರಬಹುದೇನೊ ಎನ್ನುವ ಅರೆಬರೆ ತಿಳುವಳಿಕೆಗೆ ಅಪ್ಪಟ ಊಹೆಯ ನೂಲು ನೇಯ್ದು, ನೆರಿಗೆ ಕಟ್ಟಿ, ಸೆರಗು ಹೊದಿಸಿ, ಹೊಳೆಯುವ ಆಭರಣ ತೊಡಿಸಿ ಸಿಂಗರಿಸಿದ ಆಡಂಬರ. ಅದು ಸುಲಭ ಗ್ರಹಿಕೆಯಲ್ಲಿ ಗೊತ್ತಾಗದಿರಲೆಂದು, ಇಡೀ ಕಥಾನಕಕ್ಕೆ ತಾರ್ಕಿಕ ನೆಲೆಗಟ್ಟು ಬಳಸಿದಂತೆ ಭ್ರಮಿಸುತ್ತ, ಮಿಕ್ಕೆಲ್ಲ ದೌರ್ಬಲ್ಯಗಳನ್ನು ಮರೆಮಾಚುವ ಹಾಗೆ ಪ್ರದರ್ಶಿಸಲೆತ್ನಿಸುವ ಪ್ರಯಾಸದ ಚಿತ್ತಾರ. 

ಹೀಗಾಗಿ ಯಾವ ಪೂರ್ವಗ್ರಹಕ್ಕು ಓಗೊಡದೆ ಬರಿಯ ಕಥೆಯಂತೆ ಆಸ್ವಾದಿಸಲು ವಿನಮ್ರವಾಗಿ ಕೋರುತ್ತ - ನಾಗೇಶ ಮೈಸೂರು :-) ]

ಅಧ್ಯಾಯ - ೦೧:
________________

ತಣ್ಣಗೆ ಬೀಸಿದ ಗಾಳಿ ಸುತ್ತಲ ಹಸಿರು ಗಿಡಮರಗಳನೆಲ್ಲ ನೇವರಿಸಿ, ಮಾತಾಡಿಸಿಕೊಂಡು ಸಮಷ್ಟಿಯಾಗಿ ಕುಟೀರದ ಸುತ್ತ ಸುತ್ತು ಹಾಕಿ ಏನೊ ಆಲೋಚನೆಯಲ್ಲಿ ಮುಂದಿನ ಜಗುಲಿಯಲಿ ಕುಳಿತಿದ್ದ ಅಹಲ್ಯೆಯ ಮೊಗವನ್ನು ನೇವರಿಸಿದಾಗ, ಕಚಗುಳಿಯಿಟ್ಟಂತಾಗಿ ಕಣ್ಣು ತೆರೆದಳು. ಕುಳಿರ್ಗಾಳಿಯ ತಂಪು ಅವಳ ಸುಂದರ ಸುಕೋಮಲ ಕದಪುಗಳನು ಮೆಲುವಾಗಿ ಸವರಿ, ಮುಚ್ಚಿದ ಕಮಲದೆಸಳಿನಂತಿದ್ದ ಕಣ್ಣು ರೆಪ್ಪೆಗಳನ್ನು ತಣ್ಣಗಾಗಿಸಿ ಏನೊ ಆಹ್ಲಾದಕರ ಭಾವ ಒಳಗೆಲ್ಲ ತೀಡಿದಂತಾಗಿ, ಆ ಮತ್ತಿನಲೆ ಮತ್ತೆ ಕಣ್ಮುಚ್ಚುತ್ತ , ' ಇದೆಂತಾ ಸೊಗಸಾದ ಸಂಜೆಯಾಗುತ್ತಿರುವಂತಿದೆಯಲ್ಲ...! ಯಾಕೊ ಇನ್ನೂ ಗೌತಮರ ಸುಳಿವೆ ಕಾಣದೆ...?' ಎಂದು ಆಲೋಚನೆಗಿಳಿಯುವ ಹೊತ್ತಿನಲ್ಲೆ, ಜಗುಲಿಯ ನೆಲದ ಮೇಲೆ ಮಂಡಿ ಮಡಿಸಿಕೊಂಡು ಕುಳಿತಿದ್ದ ಭಂಗಿಯಲ್ಲಿ, ಪಾದದ ತುದಿಯ ಬೆರಳುಗಳಲ್ಲಿ ಏನೊ 'ಕುಳುಕುಳು'ಗುಟ್ಟುವ ಭಾವ ಉಂಟಾಗಿ, ಸಂಜೆಯ ಹೊತ್ತಿನಲಿ ಸರಿದಾಡುವ ಹುಳು ಉಪ್ಪಟೆಯಲ್ಲಾ ತಾನೆ, ಎಂದು ಬೆಚ್ಚುತ್ತ ಕಾಲೆಳೆದುಕೊಳ್ಳಹೋದವಳ ದಂತದ ಬಣ್ಣದ ಮೊಣಕಾಲಿಗೂ ಅದೆ ಸ್ಪರ್ಷದ ಅನುಭೂತಿಯಾಗಿ, ಅದು ಆಶ್ರಮದಲ್ಲಿ ಸದಾ ಕಾಲ ಸಂಗಾತಿಯಾಗಿರುವ ಪುಟ್ಟ ಜಿಂಕೆಯ ಮರಿ 'ಹರಿಣಿ'ಯ ನಾಲಿಗೆಯ ಸ್ಪರ್ಷವೆಂದರಿವಾದಾಗ ನಿರಾಳವಾಯ್ತು. ಮತ್ತೆ ಆಚೆಯ ಬದಿಗೆ ಕಾಲು ಮಡಿಸುತ್ತ ಹರಿಣಿಯನ್ನು ಸೆಳೆದು ಮಡಿಲಿಗಿಟ್ಟುಕೊಂಡವಳೆ, ಅದರ ರೇಷಿಮೆಯಂತಹ ತುಪ್ಪಟದ ಮೃದು ಮುಖಕ್ಕೆ ಕೆನ್ನೆಯಾನಿಸಿ ತನ್ನ ಅಷ್ಟೆ  ಮೃದು ಮಧುರ ಹಸ್ತಗಳಿಂದ ಅದರ ದೇಹವನ್ನು ನೇವರಿಸುತ್ತ -

"ಯಾಕೆ ದುಗುಡದಲ್ಲಿರುವಂತೆ ಕಾಣುವೆ ಹರಿಣಾ? ಎಲ್ಲಿ ಆ ನಿನ್ನಮ್ಮ 'ಅಹರ್ನಿಶಿ'? ಸದಾ ಎಡಬಿಡದೆ ಯಾರಾದರೂ ನಿನ್ನ ಕದ್ದೊಯ್ದು ಬಿಡುವರೋ____ ಎಂಬಂತೆ ನಿನ್ನ ಹಿಂದೆಯೆ ಸುತ್ತುತ್ತಿರುವವಳು, ಇಂದು ನಿನ್ನನ್ನು ನಿರಾಳವಾಗಿ ಆಡಿಕೊಂಡಿರಲು ಬಿಟ್ಟಿದ್ದಾಳಲ್ಲ? ಬಹು ಅಚ್ಚರಿಯಾಗಿದೆಯೆ..?!" ಎಂದಳು.

ಅಮ್ಮ ಹತ್ತಿರವಿಲ್ಲದ ದುಗುಡಕ್ಕೆ ಮೊದಲ ಬಾರಿಗೊಳಗಾದ ಹಸುಗೂಸಿನಂತೆ, ತನ್ನ ಮುಂಗಾಲುಗಳನ್ನು ಮತ್ತಷ್ಟು ಮುಂದಕ್ಕೆ ತೂರಿಸಿ, ಅಹಲ್ಯೆಯ ತೊಡೆಯ ಮೇಲೆ ಸ್ವಸ್ಥವಾಗಿ ಕೂತುಬಿಟ್ಟಳು ಹರಿಣಿ, ತಾಯಿಲ್ಲದ ಹಂಗು ಕ್ಷಣಕಾಲವಾದರೂ ಮರೆಯುವ ಸುಪ್ಪತ್ತಿಗೆಯೆ ದೊರಕಿತೇನೊ ಎಂಬಂತೆ. ಅದರ ಆದರ ಪ್ರದರ್ಶಿಸಿದ ಬಗೆಗೆ ಮತ್ತಷ್ಟು ಪುಳಕಿತಳಾದವಳಂತೆ ಅದನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿ ಹಣೆಗೊಂದು ಹೂ ಮುತ್ತನಿರಿಸಿ, ಹತ್ತಿರದಲಿದ್ದ ಹುಲ್ಲು ಗರಿಕೆಯ ಪುಟ್ಟ ಕಂತೆಯೊಂದನ್ನು ಎಡಗೈಯಿಂದಲೆ ಹತ್ತಿರಕೆಳೆದುಕೊಂಡು ಅದರ ಬಾಯಿಗೆ ಹಿಡಿದಳು ಅಹಲ್ಯೆ. ಜಗದ ಚಿಂತೆಯೆಲ್ಲ ಮರೆತವಳಂತೆ ಅವಳ ಕೈಯ ಹುಲ್ಲನ್ನು ಮೆಲ್ಲ ತೊಡಗಿದ ಹೊತ್ತಲೆ ಹತ್ತಿರದ ಪೊದೆ ಸರಿದಾಡಿದ ಸದ್ದಾದಾಗ, ಅಲ್ಲಿಂದ ಹೊಳೆದ ಫಳಫಳ ಕಣ್ಣುಗಳು, ಅಹರ್ನಿಶಿಯದೇ ಎಂದು ಸುಲಭವಾಗಿ ಕಂಡು ಹಿಡಿದುಬಿಟ್ಟವು, ಅಹಲ್ಯೆಯ ಆ ಚುರುಕಾದ ಅನುಭವಿ ಕಣ್ಣುಗಳು.

"ಅಕೋ, ನೋಡಲ್ಲಿ...ನಿನ್ನಮ್ಮ ಆಗಲೆ ಬಂದುಬಿಟ್ಟಳು. ನಿಜಕ್ಕು ಅದೆಲ್ಲಾದರು ಹೋಗಿದ್ದಳೊ ಅಥವಾ ನಿನ್ನನ್ನು ಆಟವಾಡಿಸಲು ಇಲ್ಲೆ ಎಲ್ಲಾದರೂ ಅವಿತಿದ್ದಳೊ ನಾಕಾಣೆ..ಹೋಗು, ನಿನ್ನ ಮುದ್ದಿನಬ್ಬೆಯ ಮಡಿಲಿಗೆ..' ಎಂದು ಅದರ ಬೆನ್ನನ್ನು ಸವರುತ್ತಿದ್ದ ಕೈ ಮೇಲೆತ್ತಿಕೊಂಡವಳೆ, ತನಗೆ ತಾನೆ ಹೇಳಿಕೊಳ್ಳುವವಳಂತೆ 'ಯಾಕಿನ್ನೂ ಗೌತಮನ ಸುಳಿವೆ ಇಲ್ಲವಲ್ಲಾ, ಇಂದು? ಏಕೆ ತಡವಾಯಿತೊ ಕಾಣೆನೆ?' ಎಂದು ಅಲವತ್ತುಗೊಳ್ಳತೊಡಗಿದಳು..

ಅವಳ ಮಾತು ಮುಗಿಯುವ ಮುನ್ನವೆ, ಅವಳ ಮಡಿಲಿಂದ ಚಂಗನೆ ಎಗರಿದ ಹರಿಣಿ, ಅಹರ್ನಿಶಿಯತ್ತ ಓಡಿ ತಾಯಿಯ ಮೈ ನೆಕ್ಕತೊಡಗಿದಳು. ಅ ಕಕ್ಕುಲತೆಯನ್ನು ನೋಡಿ ನಕ್ಕು ಕರಗಿ ಮರುಳಾಗಿಹೋದ ತಾಯಿ ಅಹರ್ನಿಶಿ, ಮಾತಾ ಮಮತೆಯ ಹೊನಲನ್ಹರಿಸುವವಳಂತೆ ತನ್ನ ಕಂದನ ಮೈಯನೆಲ್ಲಾ ನೆಕ್ಕತೊಡಗಿದಳು ಆಗ್ರಹಪೂರ್ಣ ಪ್ರೀತಿಯನ್ನು ಪ್ರದರ್ಶಿಸುತ್ತ. ಬಹುಶಃ ಅಹಲ್ಯೆಯ ಮಡಿಲಲ್ಲಿದ್ದ ಮಗಳನ್ನು ಕಂಡು ಅವಳಿಗೆ ಒಂದರೆಗಳಿಗೆ ಈರ್ಷೆಯಾಗಿರಲಿಕ್ಕೂ ಸಾಕು; ಆ ಅಧಿಕಾರವೆಲ್ಲ ತನಗೆ ಮಾತ್ರವೆಂಬಂತೆ ಪ್ರವರ್ತಿಸುತ್ತಿದ್ದ ಅವಳತ್ತ ಅರಿಮೆಯ ಕಿರುನಗೆಯೊಂದನ್ನು ಬೀರುತ್ತ ಮೇಲೆದ್ದಳು ಅಹಲ್ಯೆ, ತನ್ನ ಕೈಲಿದ್ದ ಹುಲ್ಲಿನ ಕಂತೆಯನ್ನು ಅಹರ್ನಿಶಿಯತ್ತ ಉರುಳಿಸುತ್ತ.

ಅಸ್ತಮಿಸಲು ಸಿದ್ದನಾಗುತ್ತಿದ್ದ ದಿನಕರ ತನ್ನೆಲ್ಲ ಪ್ರಖರತೆಯನ್ನು ಒರೆಯೊಳಗಿಟ್ಟು, ಮೃದುಲ ಕಾಂತಿಯ ಹಳದಿ ಮಿಶ್ರ ಕೆಂಪು ಕಿರಣಗಳನ್ನು ಸೂಸುತ್ತ ಬಾನೆತ್ತರದ ಗಾಢ ಗಿಡಮರದೆಲೆಗಳ ಸಂದಿನಿಂದ ಇಣುಕುತ್ತಿರುವುದನ್ನು ನೋಡಿದವಳೆ, 'ಅರೆ, ಇಳಾದೇವೀಯೂ ತನ್ನ ಪರಿಭ್ರಮಣದ ಸುತ್ತನ್ನು ಮುಗಿಸುವ ಹವಣಿಕೆಯಲ್ಲಿದ್ದಾಳೆ, ಆದಿತ್ಯನಿಗೆ ಬೆನ್ನು ಹಾಕುತ್ತ ; ಅನಂತಾಗಸದ ಕತ್ತಲ ಗರ್ಭದತ್ತ ಮುಖ ತಿರುಗಿಸಿಕೊಂಡು ತಂಪಾಗುವ ಹುನ್ನಾರದಲ್ಲಿ ಹೊರಟಿದ್ದಾಳೆ..ಆದರೂ, ಗೌತಮ ಬರುವ ಕುರುಹು ಕಾಣುತ್ತಿಲ್ಲವಲ್ಲ? ಈ ವೇಳೆಗೆ ಅವನ ಬರುವನ್ನು ಸಾರುವ ಗಿಳಿವಂಕಗಳು, ಇನ್ನು ಮೌನದ ವ್ರತ ಹಿಡಿದೆ ಕುಳಿತಿವೆ... ಅದೋ, ಆ ಹತ್ತಿರದ ಕೊಳದಲ್ಲಿನ ಜಕ್ಕವಕ್ಕಿಗಳೂ ಸಹ ಹಗಲಿನ ಸಾಂಗತ್ಯದ ಪಾಳಿಯನ್ನು ಮುಗಿಸಿ, ಇರುಳಿನ ವಿರಹವನ್ನು ಭರಿಸಲಾರದ ಯಾತನೆಗೇನೊ ಎಂಬಂತೆ ಕಣ್ಣೀರಲಿ ಗೋಳಿಡುತ್ತ ಹೋಗಲಾರದೆ, ಇರಲೂ ಆಗದೆ ಒದ್ದಾಡುತ್ತಿವೆ... ಅವು ಬೇರಾಗುವ ಮುನ್ನವೆ ಗೌತಮನೊಡನೆ ಇಲ್ಲೆ ದಡದ ಕಲ್ಲಿನ ಮೇಲೆ ಕೂತು, ಮೈದಡವಿ ಸಮಾಧಾನಿಸುತ್ತ ಅವೆರಡನ್ನೂ ಒಟ್ಟಾಗಿ ಬೀಳ್ಕೊಡುತ್ತಿರಲಿಲ್ಲವೆ ? ಇಂದೇನಾಯ್ತೋ ಕಾಣೆನೆ ?

ಚಿಂತಾಕ್ರಾಂತಳಾಗಿ ಬಿಗಿದ ಮುಖದ ಚಿಂತೆಯ ಯಾವ ಭಾವವೂ ಹೊರಸೂಸದಂತೆ ಬಚ್ಚಿಡುವುದರಲ್ಲಿ ನಿಷ್ಣಾತಳೊ, ಅಥವಾ ಅದವಳ ಸ್ನಿಗ್ದ, ಮುಗ್ದ ಸೌಂದರ್ಯಕೆ ಪ್ರಕೃತಿದತ್ತವಾಗಿ ಬಂದ ವರವೊ - ಆ ಚಿಂತೆಯೂ ಚಿಂತನೆಯಾದಂತೆ ಹುಬ್ಬುಗಳೆರಡನ್ನೂ ಕ್ರೋಢೀಕರಿಸಿ, ಮೇಧಾವಿ ತೀಕ್ಷ್ಣಮತಿ ಹೆಣ್ಣೊಂದರ ಚಿತ್ತಾರವನ್ನು ಕೆತ್ತಿದಾಗ, ಈ ನೋಟಕ್ಕೆ ಬೆರಗಾಗಿ ತಾನೇ ಗೌತಮ ತನ್ನ ಕೈ ಹಿಡಿಯಬೇಕಾಗಿ ಬಂದ ಸಂಧರ್ಭ ನಿರ್ಮಿತವಾಗಿದ್ದು ಎಂದು ನೆನಪಾಯ್ತು - ಇದೇ ರೀತಿಯ ಸಂಜೆಯೊಂದರ ಸೂರ್ಯ ಮುಳುಗುವ ಹೊತ್ತಲ್ಲಿ..

(ಇನ್ನೂ ಇದೆ )
(picture source from wikipedia )