ಅಹಲ್ಯಾ ಸಂಹಿತೆ - ೦೮

ಅಹಲ್ಯಾ ಸಂಹಿತೆ - ೦೮

" ಮುಂದಿನ ಹೆಜ್ಜೆಯೇನೆಂದು ಈಗಾಗಲೆ ನಿರ್ಧರಿಸಿದ್ದೀರಾ ?"

ಎಲ್ಲರ ಮನದಲ್ಲಿದ್ದ ಪ್ರಶ್ನೆಗೆ ಮಾತಿನ ಮೂರ್ತರೂಪ ಕೊಟ್ಟವಳು ರತಿದೇವಿ... ಪತಿಯ ಕೆಲಸಕ್ಕೆ ಮುನ್ನ ಅಲ್ಲಿನ ವಾತಾವರಣದ ಸಮೀಕ್ಷೆ ನಡೆಸಿ, ಎಲ್ಲೆಲ್ಲಿ ಯಾವ ರೀತಿಯ ಚಟುವಟಿಕೆ ನಡೆಸಬೇಕೆಂಬ ರೂಪುರೇಷೆಗಳ ಯೋಜನೆ ಹಾಕಿಕೊಟ್ಟಿದ್ದವಳು ಅವಳೆ. ಆ ಹಿನ್ನಲೆಯಲ್ಲಿಯೆ ಈ ಪ್ರಶ್ನೆ ಕೇಳಿದ್ದಳು ರತಿದೇವಿ - ಅದನ್ನು ಕಾರ್ಯರೂಪಕ್ಕೆ ತಂದ ಪತಿಯಿಂದ ಪಡೆದ ವಿವರಣೆಯನ್ನೆಲ್ಲ ಮನದಲ್ಲೆ ಮೆಲುಕು ಹಾಕುತ್ತ..

"ನನಗಂತು ಇದು ಒಬ್ಬರಿಂದಾಗುವ ಕೆಲಸವಲ್ಲವೆಂದೆನಿಸುತ್ತಿದೆ.... " ತನ್ನ ದನಿಯಲ್ಲಿದ್ದ ಸಂಶಯವನ್ನು ಬಚ್ಚಿಡದೆ ತೆರೆದಿಟ್ಟವಳು ಘೃತಾಚಿ.

" ನನಗೂ ಹಾಗೆಯೆ ಅನಿಸುತ್ತಿದೆ ಘೃತಾಚಿ.. ಈ ನರನಾರಾಯಣರು ಸಾಧಾರಣ ಮುನಿಗಳಂತಲ್ಲ. ಒಂದೆಡೆ ಮಹಾನ್ ತಪಸ್ವಿಗಳಾದರೆ ಮತ್ತೊಂದೆಡೆ ಅಸೀಮ ಪರಾಕ್ರಮಿಗಳು.. ವೀರತ್ವದ ಕ್ಷತ್ರೀಯತೇಜ ಮತ್ತು ತಪೋಬಲದ ಬ್ರಹ್ಮತೇಜವೆರಡರ ಸಮಷ್ಟಿತ ಸ್ವರೂಪದವರು.. ಅಂತಹವರೆದುರು ನಮ್ಮ ರೂಪು, ಲಾವಣ್ಯ, ಒನಪು, ವಯ್ಯಾರವೆಲ್ಲ ಎಷ್ಟರ ಮಟ್ಟಿಗೆ ಕೆಲಸಕ್ಕೆ ಬರುವುದೊ ಎಂದು ಹೇಳುವುದು ಕಷ್ಟ..." ಈ ಬಾರಿ ಸಾಧಾರಣವಾಗಿ ಹೆಚ್ಚು ಮಾತಾಡದ ಅಪ್ಸರಸಿ ಮೇನಕಾ ಕೂಡ ತನ್ನನಿಸಿಕೆಯನ್ನು ಮುಂದಿಟ್ಟಳು. ಅವಳು ಅಷ್ಟು ನುಡಿದಿದ್ದೆ ಒಂದೆಡೆ ಅವಳಲಿದ್ದ ಆತಂಕವನ್ನು ಪ್ರತಿಬಿಂಬಿಸುತ್ತ, ಮತ್ತೊಂದೆಡೆ ಮಾಡಬೇಕಾದ ಕಾರ್ಯದ ಗಹನೆತೆಯನ್ನು ಸಾರುತ್ತಿದ್ದಂತಿತು.

ಅದುವರೆವಿಗೆ ಅವರ ಮಾತುಗಳನ್ನೆಲ್ಲ ಆಲಿಸುತ್ತ ಕುಳಿತಿದ್ದ ತಿಲೋತ್ತಮೆಯೂ ಸಹಮತದಿಂದ ತನ್ನ ತಲೆಯಾಡಿಸುತ್ತ, "ನಿಜ..ನಿಜ.. ಇದು ಒಬ್ಬರಿಂದಾಗುವ ಕೆಲಸವಲ್ಲ.. ನಮ್ಮೆಲ್ಲರ ವೈಯಕ್ತಿಕ ಸಾಮರ್ಥ್ಯಗಳನ್ನು ಒಗ್ಗೂಡಿಸಿ ಅದರ ಸಮಷ್ಟಿತ ಪ್ರಭಾವದಿಂದ ತಪಸ್ವಿಯ ಮನವೊಲಿಸಿಕೊಳಲು ಸಾಧ್ಯವೆ? ಎಂದು ಪ್ರಯತ್ನಿಸುವುದೆ ಉಚಿತ.. ನಮ್ಮೆಲ್ಲರ ಬೇರೆಬೇರೆ ತರದ ಆಕರ್ಷಣೆಗಳು ಒಂದಾಗಿ ಪ್ರಲೋಭಿಸಿದಾಗ, ಅದೃಷ್ಟದ ಬೆಂಬಲವಿದ್ದು ಮುನಿವರನ ಮನ ಚಂಚಲವಾದರೆ ನಮ್ಮಲ್ಲಾರಾದರೊಬ್ಬರ ವಶನಾಗುವ ಸಾಧ್ಯತೆ ಹೆಚ್ಚು. ಅಪರೂಪದ ರೂಪಲಾವಣ್ಯಗಳ ಮನೋಹರ ಸಂಗಮವಾದಂತಾಗಿ, ಸ್ತ್ರೀ ಮೋಹದ ಮಾಯೆಯ ಬಲೆಯಲ್ಲಿ ಸಿಲುಕಿಕೊಳ್ಳುವುದು ಸುಲಭ.. ಅದರಿಂದ ನಾವೆಲ್ಲಾ ಒಟ್ಟಾಗಿ ಪ್ರಯತ್ನಿಸುವುದೆ ಸರಿಯೆಂದು ನನ್ನ ಭಾವನೆ ಕೂಡ.."

ಆ ಹೊತ್ತಿನಲ್ಲಿ ಎದುರಿನ ಕನ್ನಡಿಯೊಂದರಲ್ಲಿ ತನ್ನ ಪ್ರತಿಬಿಂಬವನ್ನೆ ನೋಡಿಕೊಳ್ಳುತ್ತ ಮುಂಗುರುಳನ್ನು ತಿದ್ದುತ್ತಿದ್ದ ಮಿತ್ರವೃಂದ ತನ್ನ ಸಹವರ್ತಿಗಳತ್ತ ತಿರುಗಿ, "ನಾವು ಒಟ್ಟಾಗಿ ಕಾರ್ಯವೆಸಗುವುದರಿಂದ ಮತ್ತೊಂದು ಅನುಕೂಲವೂ ಇದೆ.." ಎಂದಳು. ಎಲ್ಲರೂ ಅದೇನು ಎನ್ನುವಂತೆ ಅವಳತ್ತ ತಿರುಗಿ ನೋಡಿದಾಗ ಅವಳು ತನ್ನ ಮಾತು ಮುಂದುವರೆಸುತ್ತ ನುಡಿದಳು "ಒಟ್ಟಾಗಿ ನಿಂತಾಗ ಅವರಿಗೆ ಮುನಿಸಾದರೂ, ಶಾಪವೀಯುವ ಮೊದಲು ಕೊಂಚ ಯೋಚಿಸುವಂತೆ ಮಾಡುತ್ತದೆ.. ಒಬ್ಬಳೆ ಇದ್ದಾಗ ತೋರುವ ಉಗ್ರಕೋಪಕ್ಕೂ, ಗುಂಪಿನಲ್ಲಿದ್ದಾಗ - ಅದೂ ಹೆಂಗಳೆಯರ ಗುಂಪಿನ ಮೇಲೆ ತೋರುವ ಕಾಠಿಣ್ಯದಲ್ಲಿ, ಕೊಂಚ ಹೆಚ್ಚು ಮೆದುತ್ವವಿರುತ್ತದೆಯೆನ್ನುವುದು ನನ್ನ ಅನಿಸಿಕೆ.."

ಎಲ್ಲರ ಮನದ ಮಾತು ಬಯಲಾಗುತ್ತಿದ್ದಂತೆ, ಸ್ವತಂತ್ರವಾಗಿ ಆ ಕಾರ್ಯ ನಿರ್ವಹಿಸುವಲ್ಲಿರುವ ಅವರ ಮನಗಳ ಅಳುಕು ತಂಡವಾಗಿ ಕಾರ್ಯ ನಿರ್ವಹಿಸುವುದೇ ಸುರಕ್ಷಿತವೆಂಬ ಪರೋಕ್ಷ ಭಾವದಲ್ಲಿ ಪ್ರಕಟವಾಗುತ್ತಿದೆ... ಇಲ್ಲವಾದಲ್ಲಿ ಅವರೆಂದೂ ಹೀಗೆ ಒಂದೇ ಸೂರಡಿ ಒಟ್ಟಾದವರಲ್ಲ - 'ನೀ ಮಾಡು, ಇಲ್ಲವೇ ನನಗೆ ಬಿಡು' ಎಂಬ ಆತ್ಮವಿಶ್ವಾಸದ, ಹಮ್ಮಿನ ಮಾತಾಡಿದ್ದೆ ಹೆಚ್ಚು... ದೇವರಾಜನಿಂದ ತಮ್ಮ ಕಾರ್ಯದ ವಿವರ ಪಡೆದವರೆ ತಂತಮ್ಮ ಸಖಿಯರ ಗುಂಪಿನ ಜೊತೆ ಕಾರ್ಯರಂಗಕ್ಕಿಳಿಯುವ ಸ್ವತಂತ್ರ ಮನೋಭಾವದ ಅಪ್ಸರಾ ಸ್ತ್ರೀಯರೆ ಅಲ್ಲಿದ್ದವರೆಲ್ಲ... ಅವರ ಈ ಮನೋಭಾವದ ಪೂರ್ಣ ಅರಿವಿದ್ದುದಕೊ ಏನೊ ದೇವೇಂದ್ರನಿಗು ಅವರನ್ನೆಲ್ಲ ಹೇಗೆ ಒಗ್ಗೂಡಿಸಿ ಕಾರ್ಯ ನಿರ್ವಹಿಸಬೇಕೆಂಬ ಗೊಂದಲ ಕಾಡಿದ್ದು.. ಅದರಲ್ಲೂ ಕಾರ್ಯಭಾರದ ಭಾಗಗಳನ್ನು ವಿಭಾಗಿಸಿ ವಿತರಿಸಬೇಕೆಂದರೆ ಯಾರಿಗೆ ಯಾವ ಭಾಗ? ಯಾರು ಹೆಚ್ಚು, ಯಾರು ಕಡಿಮೆ ? ಯಾರಿಗೆ ಯಾವುದು ಸೂಕ್ತ ಎಂದೆಲ್ಲ ಜಿಜ್ಞಾಸೆ, ಜಗಳ ಹುಟ್ಟಿಕೊಂಡು ಇವರ ನಡುವಿನ ವ್ಯಾಜ್ಯ ಪರಿಹಾರದಲ್ಲೆ ಸಮಯ ವ್ಯಯವಾಗಿ, ಹೋದ ಕೆಲಸ ಕೆಟ್ಟುಹೋಗುತ್ತದೆ. ಹೆಣ್ಣು ಮನದ ಸೂಕ್ಷ್ಮಗಳನ್ನರಿತ ದೇವರಾಜ ಅವರ ಪ್ರತಿಷ್ಠೆ, ಅಹಮಿಕೆಗೆ ಘಾಸಿ ಬರದಂತೆ, ಜತೆಗೆ ಹೋದ ಕೆಲಸವೂ ಕೆಡದಂತೆ ಈ ಸಂಧರ್ಭವನ್ನು ನಿಭಾಯಿಸುವುದು ಹೇಗೆ ? ಎಂದು ತಲೆ ಕೆಡಿಸಿಕೊಂಡು ಕೂತಿದ್ದಾಗ ಅವನ ನೆರವಿಗೆ ಬಂದವನು ಕಾಮದೇವ. ಅವನ ಸತಿ ರತಿದೇವಿ ಬರಿಯ 'ನಿಸರ್ಗ ವಾಸ್ತುಶಿಲ್ಪ ತಜ್ಞೆ' ಮಾತ್ರವಲ್ಲ, ಸ್ತ್ರೀ ಮನೋವೈಜ್ಞಾನಿಕ ವಿಷಯದಲ್ಲೂ ಪರಿಣಿತಿಯಿರುವ ಜಾಣೆ. ಇಂಥಹ ಸೂಕ್ಷ್ಮ ಸಂಧರ್ಭಗಳಲ್ಲಿ ಅವಳನ್ನು ಜತೆಗಿರಿಸಿಕೊಂಡರೆ ಅಪ್ಸರ ಸ್ತ್ರೀಯರೆಲ್ಲರ ನಡುವಿನ ಸೇತುಬಂಧವಾಗಿ ಕಾರ್ಯ ನಿರ್ವಹಿಸುವುದು ಮಾತ್ರವಲ್ಲದೆ, ಮನ್ಮಥನಿಗೆ ಯೋಜನಾ ರೂಪುರೇಷೆಯ ಸಹಾನುವರ್ತಿಯೂ ಆಗಿರಬಹುದು. ಹೇಗೂ ಅಪ್ಸರೆಯರಿಗೆಲ್ಲ ಅವಳು ಹೊರಗಿನವಳಾದ ಕಾರಣ ಅವಳ ಮುಂದೆ ಸಂಯಮದಿಂದ ಮತ್ತು ಔಚಿತ್ಯದ ಗೆರೆ ದಾಟದ ಹಾಗೆ ಪ್ರವರ್ತಿಸಬೇಕೆನ್ನುವ ಪ್ರಜ್ಞೆಯೂ ಜಾಗೃತವಾಗಿರುತ್ತದಾಗಿ ಕನಿಷ್ಠ ಕಲಹ, ಕಚ್ಚಾಟಗಳಿಗೆ ಅವಕಾಶವಿಲ್ಲದಂತಾಗುತ್ತದೆ... ಕಾಮದೇವನ ಈ ಚಿಂತನೆ ದೇವರಾಜನಿಗು ಪ್ರಿಯವೆನಿಸಿ 'ಅಸ್ತು' ಎಂದಿದ್ದ. ಆ ಭೂಮಿಕೆಯನ್ನು ಅವನ ಮೂಲ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ನಿಭಾಯಿಸಿದ್ದಳು ರತಿದೇವಿ...

ಹೀಗೆ ಸುಮಾರು ಹೊತ್ತು ಅವರ ಮಾತುಕಥೆಯನ್ನೆಲ್ಲ ಆಲಿಸುತ್ತಿದ್ದ ರತಿದೇವಿ ಕೊನೆಗೊಂದು ಮುಕ್ತಾಯ ಹಾಡುವಂತೆ, "ಅಲ್ಲಿಗೆ ಒಟ್ಟಿಗೆ ಸಮಷ್ಟಿಯಲ್ಲಿ ಧಾಳಿ ನಡೆಸುವುದು ಎಂದು ನಿರ್ಧಾರವಾದಂತಾಯ್ತಲ್ಲ ? ಇನ್ನು ಅದನ್ನು ಕಾರ್ಯಗತಗೊಳಿಸುವ ಬಗೆಯನ್ನು ನಿರ್ಧರಿಸಿಕೊಳ್ಳಿ.." ಎಂದು ಮುಂದಿನ ತಾರ್ಕಿಕ ನಡೆಯತ್ತ ಮಾತು ತಿರುಗಿಸಿದಳು. ಅಲ್ಲಿಂದ ಮುಂದೆ ಎಲ್ಲರು ತಮ್ಮ ಸಾಮರ್ಥ್ಯ, ಆಕರ್ಷಣೆಗನುಸಾರ ಏನು ಮಾಡಿದರೆ ಉಚಿತ ಎಂದು ಚರ್ಚಿಸತೊಡಗಿದರು. ವಿವರಗಳೆಲ್ಲ ಮೂಡತೊಡಗಿದಂತೆ ಒಂದು ವಿಚಾರದಲ್ಲಿ ಅವರೆಲ್ಲರ ಸಹಾನುಮತ ನಿಚ್ಚಳವಾಗಿ ಎದ್ದು ಕಂಡಿತ್ತು - ತಾವೇನೇ ಮಾಡಿದರು ಅತಿರೇಕದ ಪ್ರಚೋದನೆಗಿಳಿಯದೆ, ನಯವಿನಯದಲ್ಲಿ ಒಲಿಸಿಕೊಳುವ ಹಾದಿಯನ್ನೆ ಹಿಡಿಯಬೇಕೆಂಬುದು. ಯೋಜನೆಯ ಕಾರ್ಯತಂತ್ರದ ವಿವರಗಳನ್ನೆಲ್ಲ ಪರಸ್ಪರರಲ್ಲೆ ಚರ್ಚಿಸಿ ಉಪಾಯಗಳು ಯಶಸ್ವಿಯಾಗದ ಹೊತ್ತಲ್ಲಿ ಹೂಡಬೇಕಾದ ಬದಲಿ ಮಾರ್ಗೋಪಾಯಗಳನ್ನು ವಿಶದೀಕರಿಸಿಕೊಂಡು ತಮ್ಮ ಕಾರ್ಯಾಚರಣೆಯ ದಿನ, ಹೊತ್ತು, ಮುಹೂರ್ತಗಳನ್ನು ನಿರ್ಧರಿಸಿ, ವಿಶ್ರಮಿಸಿಕೊಳ್ಳಲು ತಂತಮ್ಮ ಬಿಡಾರಗಳಿಗೆ ತೆರಳಿದರು ಮುಂದಿನ ಹೆಜ್ಜೆಗಳನ್ನೆ ಮೆಲುಕು ಹಾಕುತ್ತ.

***********

ಯಾಕೊ ಸುತ್ತಲ ವಾತಾವರಣ ಮೊದಲಿನಂತಿಲ್ಲವೆಂದು ನರನ ಗಮನಕ್ಕು ಬಂದಿದೆ..

ಉಗ್ರತಪದ ಹೆಸರಿನಲ್ಲಿ ಏಕಾಗ್ರತೆಯನ್ನೆಲ್ಲ ಕ್ರೋಢೀಕರಿಸಿ ಮನಃಶ್ಯಕ್ತಿಯ ಸಮಗ್ರತೆಯನ್ನೆಲ್ಲ ಏಕಬಿಂದುವಿನಲ್ಲಿ ಕೇಂದ್ರೀಕರಿಸಿಕೊಳ್ಳುವ ಕಾರ್ಯ ನಿರಂತರವಾಗಿ ನಡೆದಿದೆ. ಆದರದು ಒಂದೆರಡು ದಿನದ ಕೆಲಸವಲ್ಲ - ಒಂದೇ ಸಮನೆ ಒಂದು ಸಹಸ್ರ ವರ್ಷಗಳವರೆಗು ಸತತವಾಗಿ, ನಿರಂತರವಾಗಿ, ನಿಲ್ಲಿಸದೆ ನಡೆಸಬೇಕಾದ ಕಾರ್ಯ. ಹಾಗೆ ನಡೆದರಷ್ಟೆ ನಿತ್ಯವೂ ಅಷ್ಟಿಷ್ಟು ಗಾತ್ರದ ತೇಜೋಪುಂಜ ಮೂಲಶಕ್ತಿಗೆ ಸಂಕಲಿತವಾಗಿ ಸೇರಿಕೊಳ್ಳುವುದು. ಆದರೆ ಹಾಗೆ ಸೇರಿದ ಶಕ್ತಿಪ್ರಮಾಣ ಆ ಪ್ರಯಾಸದಲ್ಲೆ ನಷ್ಟವಾಗದಿರಬೇಕಾದರೆ, ಅದಕ್ಕೆ ಬೇಕಾದ 'ಕನಿಷ್ಠ ಘನಿಷ್ಠ ಮೊತ್ತ'ವನ್ನು ತಲುಪಬೇಕು. ಈ ಘನಿಷ್ಠ ಸ್ಥಿತಿ ಪ್ರತಿ ನೂರು ವರ್ಷದ ತಪಕ್ಕೆ ಸಮನಾದ ಕಾರಣ, ಪ್ರತಿ ನೂರರ ನಡುವೆ ಯಾವ ಅಚಾತುರ್ಯ ಘಟಿಸದಂತೆ ನೋಡಿಕೊಳ್ಳಬೇಕು. ಆಗಷ್ಟೆ ಅದು ಮತ್ತೆ ದ್ರವಿಸಿ ಕರಗಿಹೋಗದೆ, ಸ್ಥಿರಶಕ್ತಿಯ ರೂಪದಲ್ಲಿ ನೆಲೆ ನಿಲ್ಲುವ ಸಾಮರ್ಥ್ಯ ಪಡೆಯುವುದು. ಹೀಗೆ ಪ್ರತಿ ನೂರರ ಕಟ್ಟಿನಲ್ಲಿ ಸಂಗ್ರಹಿತವಾದ ಆ ಶಕ್ತಿತೇಜದ ಸಹಸ್ರ ವರ್ಷಗಳ ಮೊತ್ತವಷ್ಟೆ, ಸಹಸ್ರಕವಚನ ಜತೆಗಿನ ಒಂದು ಬಾರಿಯ ಯುದ್ಧಕ್ಕೆ ಬೇಕಾದ ಶಕ್ತಿಮೂಲದ ಸವಲತ್ತನ್ನೊದಗಿಸುವುದು.

ಒಂದು ವೇಳೆ ನೂರರ ನಡುವೆ ಏನಾದರೂ ತಪೋಭಂಗವಾಗಿ ಹೋಯ್ತೆಂದರೆ, ಅಲ್ಲಿಯತನಕ ಅರೆ-ಸ್ಥಿರ ರೂಪದಲ್ಲಿದ್ದ ತೇಜೋಪುಂಜದ ಮೇಲಿಟ್ಟಿದ್ದ ಹಿಡಿತ ಸಡಿಲವಾಗಿ, ಅವೆಲ್ಲ ಶಕ್ತಿ ಮತ್ತೆ ಸುತ್ತಲ ಪ್ರಕೃತಿಯಲ್ಲಿ ಕರಗಿ ಮಾಯವಾಗಿ ಹೋಗಿ, ಆ ಹಂತದ ಆರಂಭಿಕ ಬಿಂದುವಿಗೆ ಮರಳಿಬಿಡುವುದು... ಹಾಗೇನಾದರು ಆದಲ್ಲಿ ಆ ಹಂತದಲ್ಲಿ ಅದುವರೆವಿಗು ಮಾಡಿದ ತಪವೆಲ್ಲ ನಷ್ಟವಾದ ಹಾಗೆ ಲೆಕ್ಕ; ಮತ್ತೆ ಅದನ್ನು ಮರು ಗಳಿಸಲು ಮೊದಲಿನಿಂದ ತಪವನ್ನಾರಂಭಿಸಬೇಕು... ಒಂದು ಸಾವಿರ ವರ್ಷವಾಗುತ್ತಿದ್ದಂತೆ ಗಳಿಸಿದ ಸ್ಥಿರಶಕ್ತಿಯ ಸಾಮರ್ಥ್ಯದೊಂದಿಗೆ ನರನು ಕದನರಂಗಕ್ಕಿಳಿದರೆ, ನಾರಾಯಣನು ಹಿಂದಿನ ಕದನ ಮುಗಿಸಿ ವಿಶ್ರಾಂತಿಯ ರೂಪದಲ್ಲಿ ಮತ್ತೆ ಸಹಸ್ರ ವರ್ಷದ ತಪಕಿಳಿಯುತ್ತಾನೆ - ಮುಂದಿನ ಕದನಕ್ಕೆ ಅಣಿಯಾಗಲೆಂದು. ಆ ಹೊತ್ತಿನಲ್ಲಿ ಕಾದಾಡುವ ನರನು ತನ್ನ ತಪದ ಹೊತ್ತಿನ ಶಕ್ತಿಯನ್ನೆಲ್ಲ ಧಾರೆಯೆರೆದು ಅಸುರನನ್ನು ದಮನಿಸಬೇಕು - ಪ್ರತಿ ಕಾದಾಟದಲ್ಲು ಒಂದು ಕವಚ ಬೇಧಿಸಿ ಸಹಸ್ರಕವಚನನ್ನು ಅಷ್ಟರಮಟ್ಟಿಗೆ ದುರ್ಬಲಗೊಳಿಸುತ್ತ...

ಕೇವಲ ಒಂದೆ ಕವಚವಾಗಿದ್ದರೆ ಅದನ್ನು ಹರಿದು ಕೆಡವಿ ದೈತ್ಯ ಸಂಹಾರಗೈಯುವುದೇನು ದೊಡ್ಡ ಕೆಲಸವಾಗಿರಲಿಲ್ಲ ನರನಾರಾಯಣರಿಗೆ. ಆದರೆ ನಿಜವಾದ ತೊಡಕಿದ್ದುದು ಆ ಕವಚಗಳ ಸಂಖ್ಯೆಯಲ್ಲೆ. ಸಹಸ್ರಕವಚನೆಂತಹ ಚಾಣಾಕ್ಷಮತಿಯೆಂದರೆ ವರ ಬೇಡುವ ಹೊತ್ತಲ್ಲಿ ಸಾವಿರ ಕವಚ ಬೇಡಿದ್ದಲ್ಲದ್ದೆ, ಪ್ರತಿಯೊಂದರ ಸಾಮರ್ಥ್ಯ ಸಾವಿರ ವರ್ಷದವರೆಗು ತಾಳಿಕೊಳ್ಳುವ ಹಾಗೆ ಸೂರ್ಯದೇವನಿಂದ ವರ ಪಡೆದುಬಿಟ್ಟಿದ್ದ. ಕವಚವೆಂದರೆ ಅದೇನು ಭೌತಿಕ ಕವಚವಲ್ಲ; ಸೂರ್ಯದೇವ ಅವನ ತಪಸ್ಸಿಗೆ ಮೆಚ್ಚಿ ಪ್ರಕೃತಿದತ್ತವಾಗಿದ್ದ ಪಂಚಭೂತಗಳ ಮೂಲವಸ್ತುವಿನ ಶಕ್ತಿ ಸಮಷ್ಟಿಯನ್ನೆ ಸಮೀಕರಿಸಿ ಬೇಧಿಸಲಸಾಧ್ಯವಾದ ಜೈವಿಕ ಕವಚವನ್ನೆ ಸೃಜಿಸಿಬಿಟ್ಟಿದ್ದ ಅಸುರನಿಗಾಗಿ. ಆಕಾಶ, ಭೂಮಿ, ಜಲ, ವಾಯು, ಅಗ್ನಿಗಳ ಸಮಷ್ಟಿತ ಶಕ್ತಿಯ ಫಲಿತವಾದ ಈ ವಸ್ತು ಜೈವಿಕ ಅಬೇಧ್ಯ ಕವಚದ ರೂಪದಲ್ಲಿ ಅಸುರನ ತನುವನಾವರಿಸಿಬಿಟ್ಟಿತ್ತು ರಕ್ಷಣೆಯ ಭದ್ರ ಕೋಟೆಯಂತೆ. ಅದನ್ನು ಬೇಧಿಸಿದರೂ ಸಹ, ಅದರ ಮೂಲದ ಸತ್ವ ಆ ಛೇಧನದಿಂದಲೆ ಉಂಟಾದ ಮಿಕ್ಕ ಶಕ್ತಿಯನ್ನು ಮೂಲವಸ್ತುವಾಗಿ ಬಳಸಿ, ಅದರಿಂದಲೆ ಹೊಸ ಕವಚವನ್ನು ಸೃಜಿಸುವಂತೆ ಇತ್ತದರ ವಿನ್ಯಾಸ. ಕವಚದಿಂದ ಕವಚ ಸೃಷ್ಟಿಗೆ ಈ ಮಿಕ್ಕುಳಿವ ಶಕ್ತಿ ಕುಂಠಿತವಾಗುತ್ತ ಹೋಗುವುದಾದರು ಸಾವಿರ ಬಾರಿಯ ಪುನರಾವರ್ತನೆಗೆ ಸಾಲುವಷ್ಟು ಇದ್ದ ಕಾರಣ ಹೆಚ್ಚು ಕಡಿಮೆ ಅಮರತ್ವವನ್ನೆ ಪಡೆದಂತಾಗಿತ್ತು ದಂಭೋದ್ಭವ ಸಹಸ್ರಕವಚನಿಗೆ.

(ಇನ್ನೂ ಇದೆ)