ಅಹಲ್ಯಾ ಸಂಹಿತೆ - ೧೩ (ನರನ ತಪೋಶಕ್ತಿ ನಷ್ಟ)
ಸುತ್ತ ನೆರೆದಿದ್ದವರೆಲ್ಲ ದಿಗ್ಭ್ರಮೆಯಿಂದ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದರು...
ಮೇಲೆದ್ದು ನಿಂತ ಊರ್ವಶಿ ಮುಂದಡಿಯಿಡಲು ಅನುವಾಗುತ್ತಿದ್ದಂತೆ, ಅದುವರೆವಿಗು ಮೂಲೆಯೊಂದರಲ್ಲಿ ಶಿಲಾಬಾಲಿಕೆಯಂತೆ ಸ್ತಂಭೀಭೂತವಾಗಿ ನಿಂತಿದ್ದ ಅಪ್ಸರಸಿ ರಂಭೆ ಯಾವುದೊ ಅಂತಃಪ್ರಜ್ಞೆ ಬಡಿದೆಬ್ಬಿಸಿದವಳಂತೆ ಸಮಯಪ್ರಜ್ಞೆಯಿಂದ ಅವಳತ್ತ ಧಾವಿಸಿದಳು...
ಮಹರ್ಷಿ ಹೊದಿಸಿದ್ದ ಮೇಲು ಹೊದಿಕೆಯಲ್ಲಿ ಅರೆಬರೆ ಮಾತ್ರ ಮುಚ್ಚಿಕೊಂಡಿದ್ದ ಸುಂದರ ತನುವಿಗೆ ತನ್ನ ಮೈ ಮೇಲೆ ಹೊದ್ದುಕೊಂಡಿದ್ದ ಅರೆಪಾರದರ್ಶಕ ಮೇಲ್ವಸ್ತ್ರದ ಹೊದಿಕೆಯನ್ನು ಹೊದಿಸಿ ಅವಳ ಕೈ ಹಿಡಿದುಕೊಂಡು ಅವಳು ನಿಂತಿದ್ದ ಪೀಠದಿಂದ ಕೆಳಗಿಳಿಸಿಕೊಂಡಳು.
ಆ ಗಳಿಗೆಯವರೆಗೆ ಅದೇ ಸ್ಥಿತಿಯಲ್ಲಿದ್ದ ಮಿಕ್ಕ ದೇವಕನ್ನಿಕೆಯರು, ರಂಭೆಯ ಆ ಚಾತುರ್ಯಪೂರ್ಣ ಪ್ರಕ್ರಿಯೆ ಮುನಿವರನ ಕ್ರೋಧಾವೇಶದ ದೃಷ್ಟಿಯಿಂದ ಪಾರಾಗಿಸುವ ಸರಳೋಪಾಯ ಮಾರ್ಗವೆಂದು ಚಕ್ಕನೆ ಗ್ರಹಿಸಿದರು. ತಾವೂ ಊರ್ವಶಿಯ ಸುತ್ತ ನೆರೆದು ಮೆರವಣಿಗೆಯಲ್ಲಿ ಒಯ್ವ ಮಹಾರಾಜ್ಞಿಯ ಹಾಗೆ ಅವಳನ್ನು ಕರೆದೊಯ್ದರು - ನರಮುನಿಯು ಊರ್ವಶಿಗೆ ಆದೇಶಿಸಿದ ಆಜ್ಞೆಯನ್ನು ತಾವೆ ಶಿರಸಾವಹಿಸಿ ಪಾಲಿಸುವವರ ಹಾಗೆ...
ಹಾಗೆಯೆ ಅವರು ಹೋದ ದಿಕ್ಕಿನತ್ತಲೆ ಗಮನಿಸುತ್ತ, ಯಾಕೊ ತುಸು ಹೆಚ್ಚಾಗಿಯೆ ನವೆಯುತ್ತಿದ್ದಂತೆ ಕಾಣುತ್ತಿದ್ದ ತನ್ನ ಬಲತೊಡೆಯ ಸ್ನಾಯುವನ್ನು ಮೆಲುವಾಗಿ ನೇವರಿಸಿದ ನರ ಬೆಚ್ಚಿಬಿದ್ದ ..! ಎಂದಿನ ಶಕ್ತಿತೇಜದ ಝೇಂಕಾರ ಹೊರಡದೆ ದುರ್ಬಲ ನಾರಿನ ಎಳೆಯೊಂದರ ಸ್ಪರ್ಶ ಮಾಡಿದ ಅನುಭೂತಿಯುಂಟಾಗಿ ಯಾಕೊ ಅನುಮಾನವಾಯಿತು - 'ಅಗತ್ಯಕ್ಕಿಂತ ಹೆಚ್ಚು ಶಕ್ತಿಪಾತವಾಯ್ತೆ ?' ಎಂದು...
ತುಸು ಕಣ್ಣುಮುಚ್ಚಿ ಧ್ಯಾನಾಸಕ್ತನಾಗಿ ಅಂತರಾಳಕ್ಕಿಳಿದು ಏನಾಯ್ತೆಂದು ನೋಡಹತ್ತಿದವನಿಗೆ ತಟ್ಟನೆ ಅರಿವಾಗಿಹೋಯ್ತು - ವರ್ಷಾಂತರದ ಸಂಗ್ರಹಿತ ಶಕ್ತಿಯ ಒಂದು ಪ್ರಮುಖ ಭಾಗ ಊರ್ವಶಿಯೆಂಬ ಈ ಅದ್ಭುತ ಲಾವಣ್ಯವತಿಯನ್ನು ಸೃಷ್ಟಿಸುವ ಪ್ರಕ್ರಿಯೆಯಲ್ಲಿ ವ್ಯಯಿಸಿಹೋಗಿದೆಯೆಂದು..!
ಸಹಜ ಪ್ರಕ್ರಿಯೆಯಲ್ಲಿ ಸುತ್ತಲಿನ ಪರಿಸರದಿಂದಲೆ ಪಂಚಭೂತಗಳ ಮೂಲಸರಕನ್ನು ಆಪೋಷಿಸಿಕೊಂಡು ಪರಿವರ್ತಿಸುತ್ತ, ತನ್ಮೂಲಕ ಭೌತಿಕ ಸೃಷ್ಟಿ ಸ್ವರೂಪವನ್ನು ಆರೋಪಿಸುವುದು ಪ್ರಯೋಗಶಾಲೆಯಲ್ಲಿ ಮಾಮೂಲಿಯಾಗಿ ನಡೆಯುವ ಸಂಗತಿ...
ಆದರೆ ಈ ಗಳಿಗೆಯ ಪೈಪೋಟಿಗೆ ಬಿದ್ದ ಮನಸ್ಥಿತಿಯಲ್ಲಿ ವೇಗಸೃಷ್ಟಿಯ ಬೆನ್ನು ಹಿಡಿದ ಕಾರಣ, ಪರಿಸರದ ಪಂಚಭೂತಪ್ರೇರಿತ ವಸ್ತುಸೃಷ್ಟಿ ಆ ವೇಗ ನಿಭಾಯಿಸಲಾಗದೆ ಹೋಗಿ, ಆ ವೇಗದ ನಷ್ಟಕ್ಕೆ ಪ್ರತಿಯಾಗಿ ಅವನ ತಪೋಬಲದಿಂದ ಶೇಖರಿತವಾಗಿದ್ದ ಅಮೋಘ ಶಕ್ತಿಸಂಚಯವನ್ನೆ ಮೂಲಧನದಂತೆ ಬಳಸಿ ತನ್ನ ಕೆಲಸ ಮುಗಿಸಿಕೊಂಡುಬಿಟ್ಟಿತ್ತು...!
ಆ ಸೃಷ್ಟಿಯ ವೇಗ ಅದೆಷ್ಟು ಅಪರಿಮಿತವಿತ್ತೆಂದರೆ, ಹೆಚ್ಚು ಕಡಿಮೆ ಮೂರು ನಾಲ್ಕು ಹಂತಗಳಲ್ಲಿ ಪೇರಿಸಿಟ್ಟುಕೊಂಡಿದ್ದ ಮನಃಶಕ್ತಿಯ ಸಂಘಟಿತ ಮೊತ್ತ ಅದೊಂದು ಗಳಿಗೆಯಲ್ಲಿ ಖರ್ಚಾಗಿ ಹೋಗಿತ್ತು. ಸುದೈವಕ್ಕೆ ಆ ಶಕ್ತಿಮೊತ್ತ ಅಪ್ರತಿಮ ಭೌತಿಕ ಸೌಂದರ್ಯದ ಸಾತ್ವಿಕ ರೂಪಾಗಿ ಅನಾವರಣಗೊಂಡಿತ್ತು. ಸರಿಯಾದ ನಿಯಂತ್ರಣ ಇರದಿದ್ದರೆ ಆ ಶಕ್ತಿ ತಾಮಸರೂಪು ತಾಳಿ ಇನ್ನೇನೆಲ್ಲ ಅನಾಹುತಕ್ಕೆ ಕಾರಣವಾಗುತ್ತಿತ್ತೊ ಏನೊ ? ಮುನಿವರನ ಅದ್ಭುತ ಸಾಮರ್ಥ್ಯದ ದೆಸೆಯಿಂದಾಗಿ ವಿನಾಶದ ದಾರಿ ಹಿಡಿಯದೆ ಸೃಜನಾತ್ಮಕ ಕಲೆಯಾಗಿ ಬಿತ್ತರಗೊಂಡಿತ್ತು - ಊರ್ವಶಿಯೆಂಬ ದಂತಕಥೆಯಾಗಿ.
ಸಮಾನ ಪ್ರಮಾಣದಲ್ಲಿ ವ್ಯಯಿಸದೆ ಅದೇ ಪ್ರಮಾಣದಲ್ಲಿ ಗಳಿಸುವುದು ಸೃಷ್ಟಿನಿಯಮದಲ್ಲಿ ಅಸಾಧ್ಯ ಪ್ರಕ್ರಿಯೆ. ವ್ಯಯಿಸಿದ್ದು ಒಟ್ಟಾರೆ ಸಮಷ್ಟಿಯ ಸ್ಥಿತಿಗಾದ ಲಾಭವೂ ಅಲ್ಲ ಅಥವಾ ನಷ್ಟವೂ ಅಲ್ಲ; ಕೇವಲ ಸ್ವರೂಪ ಬದಲಿಸುವ ರೂಪಾಂತರವಷ್ಟೆ. ಅದೇ ನಿಸರ್ಗದ ಸುವರ್ಣ ನಿಯಮ...
ಆದರೆ ಸಮಷ್ಟಿಯನ್ನು ಹೊರತಾಗಿಸಿ ಬಿಡಿಬಿಡಿಯಾಗಿ ನೋಡಿದರೆ ? ಒಂದೆಡೆ ಲಾಭವಾದದ್ದು ಮತ್ತೊಂದೆಡೆ ನಷ್ಟವಾಗಿ ತೋರಲೇಬೇಕಲ್ಲಾ ? ಈ ಬಾರಿ ಆ ಲಾಭದ ಲಾಭ ಪಡೆದದ್ದು ದೇವರಾಜ - ಊರ್ವಶಿಯೆಂಬ ಅಪ್ಪಟ ಅಪರಂಜಿಯ ಬಳುವಳಿಯ ರೂಪದಲ್ಲಿ..!
ನಷ್ಟ ಅನುಭವಿಸಿದ್ದು ಮಾತ್ರ ನರ ನಾರಾಯಣರು - ಆ ಜಂಜಾಟದಲ್ಲಿ ತಮ್ಮ ನೇರ ಪಾತ್ರವಿರದೆಯು ಅದರಲ್ಲಿ ಸಿಲುಕಿಕೊಂಡು, ಶಕ್ತಿಪಾತದ ನಷ್ಟವನ್ನನುಭವಿಸುವ ತಾಕಲಾಟಕ್ಕೆ ಒಳಗಾದರು...
ಬರಿ ಶಕ್ತಿಯ ನಷ್ಟ ಅಷ್ಟು ದೊಡ್ಡ ಮಾತಾಗಿರಲಿಲ್ಲ... ಆದರೆ ಆ ಮೂಲಕ ಕಳುವಾದ ಸಮಯ ಮಾತ್ರ ಮಹತ್ತರ ಭೂಮಿಕೆ ನಿಭಾಯಿಸುವ ಪಾತ್ರ ಹೊತ್ತಿತ್ತು. ಈಗಾಗಲೆ ಸರಿ ಸುಮಾರು ಏಳುನೂರು ವರ್ಷ ತಪದಲ್ಲಿ ಕಳೆದಿದ್ದ ನರ, ಮುನ್ನೂರು ವರ್ಷದ ತಪ ಮುಗಿಸಿದ್ದರೆ ಸಾಕಿತ್ತು, ಮಿಕ್ಕ ಸಾವಿರ ವರ್ಷಗಳ ಕಟ್ಟ ಕಡೆಯ ಕದನದಲ್ಲಿ ನಿರತನಾಗಲು..
ಆದರೆ ಈ ಶಕ್ತಿಪಾತದಿಂದಾಗಿ ಏಳುನೂರು ವರ್ಷಗಳ ತಪದ ನಿವ್ವಳ ಶಕ್ತಿ ನಾನೂರು ವರ್ಷದ ನಿವ್ವಳ ಮೊತ್ತಕ್ಕೆ ಕರಗಿ ಹೋಗಿತ್ತು. ಅದರರ್ಥ ನರನ ತಪಸ್ಸು ಯೋಜನೆಗಿಂತ ಇನ್ನು ಮುನ್ನೂರು ವರ್ಷ ಹೆಚ್ಚು ಕಾಲ ಮುಂದುವರೆಯಬೇಕು.. ಆ ನಂತರ ಸಾವಿರ ವರ್ಷಗಳ ಕದನ ನಡೆಸಬೇಕು.. ಆದರೆ ಆ ಹೆಚ್ಚುವರಿ ಮುನ್ನೂರು ವರ್ಷಗಳ ಅವಧಿಯನ್ನು ಮುಟ್ಟುವ ಹಂತದಲ್ಲಿಯೆ ಪ್ರಸ್ತುತ ಯುಗ ಅಂತಿಮಘಟ್ಟ ತಲುಪುವುದರಿಂದ ಆ ಮುಹೂರ್ತಕ್ಕೆ ಸರಿಯಾಗಿ ಪ್ರಳಯ ಆರಂಭವಾಗಿಬಿಡುತ್ತದೆ - ಕದನ ಮುಗಿದು ನಿರ್ಣಾಯಕ ಫಲಿತವನ್ನು ಮುಟ್ಟುವ ಮೊದಲೆ...
ಅದರರ್ಥ ಮಿಕ್ಕ ಕದನದ ಭಾಗ ಈ ಯುಗದಲ್ಲಿ ಮುಕ್ತಾಯವಾಗುವುದಿಲ್ಲ... ಮಿಕ್ಕುಳಿದ ಕೊನೆಯ ಕವಚದ ಹರಣಕ್ಕಾಗಿ ಮುಂದಿನ ಯುಗದಾರಂಭವನ್ನು ಕಾಯಬೇಕು.. ಅಂದರೆ ಸಹಸ್ರಕವಚನನ್ನು ಈ ಯುಗದೊಳಗೆ ಮುಗಿಸುವ ಯೋಜನೆ ಸಫಲವಾಗದೆ, ತಾವೂ ಮತ್ತೊಮ್ಮೆ ಜನ್ಮವೆತ್ತಿ ಬರಬೇಕು - ಅಪೂರ್ಣಗೊಂಡ ಆ ಕಾರ್ಯವನ್ನು ಮುಗಿಸುವುದಕ್ಕಾಗಿ...!
ಅದನ್ನು ನೆನೆದೆ ನರನ ಮನ ಖೇದಗೊಂಡಿದ್ದು - ಈ ದೇವರಾಜನ ಕುತಂತ್ರದಿಂದ ತಮ್ಮ ವರ್ಷಾಂತರದ ಶ್ರಮ ವ್ಯರ್ಥವಾಗಿ ಹೋಗುವಂತಾಯ್ತಲ್ಲ ಎಂದು...
ಅದೇ ಗಳಿಗೆಯಲ್ಲಿ ಕಿವಿಯಲ್ಲಿ ಯಾರೊ ಪಿಸುಗುಟ್ಟಿದಂತಾಯ್ತು - 'ಕಾರಣವಿಲ್ಲದೆ ಘಟಿಸುವ ಸಂಗತಿಗಳಲ್ಲ ಇವು' ಎಂದು..
ಅದು ಇಬ್ಬರಲ್ಲಿ ಹೆಚ್ಚು ತಾಳ್ಮೆ, ಚಿಂತನಾಶಕ್ತಿಯುಳ್ಳ ನಾರಾಯಣನ ದನಿ...
'ಸರಿ.. ಎಲ್ಲಾ ನಿಯಾಮಕನ ಇಚ್ಛೆಯಿದ್ದಂತಾಗಲಿ' ಎಂದು ನಿಟ್ಟುಸಿರಿಟ್ಟು ಮತ್ತೆ ತಪೋನಿರತನಾಗಲಿಕ್ಕೆ ಬಲವಂತದಿಂದ ಕಣ್ಮುಚ್ಚಿಕೊಂಡ ನರ ಮುನೀಂದ್ರ. ಮನ ಅಂತರಂಗದಾಳಕ್ಕಿಳಿದು ಈಜಾಡತೊಡಗಿದಂತೆ, ನಡೆದಿದ್ದೆಲ್ಲವನ್ನು ಮರೆತು ಮತ್ತೆ ತನ್ನ ಘನ ತಪದಲ್ಲಿ ಮುಳುಗಿಹೋದ ನರಮುನಿಯವತಾರದ ಆದಿಶೇಷ.
***************
ಇದನ್ನೆಲ್ಲಾ ವಿಶ್ರಮಿಸುತ್ತಲೆ ಮೆಲುಕು ಹಾಕಿದ ಗೌತಮನಿಗೆ, ಆ ಗಳಿಗೆಯಲ್ಲೂ ಅಚ್ಚರಿ.. ತಾನ್ಹೇಗೆ ಈ ನಡುವೆ ಬಂದು ಸಿಲುಕಿಕೊಂಡೆ ? ಎಂದು... ಊರ್ವಶಿಯ ಹುಟ್ಟು ಎಬ್ಬಿಸುವ ಪ್ರಲೋಭನೆ , ಪ್ರಚೋದನೆಗಳು ಯಾವುದೊ ಮೂಲೆಯಲ್ಲಿ ವ್ಯಾಸಂಗನಿರತನಾಗಿದ್ದ ತನ್ನನ್ನು ಈ ಮಹಾಪ್ರಯೋಗಕ್ಕೆ ಪಾತ್ರಧಾರಿಯನ್ನಾಗಿ ಸಿಲುಕಿಸಿಬಿಡುವುದೆಂದು ತಾನೆಂದೂ ಊಹಿಸಿರಲಿಲ್ಲ. ಇನ್ನು ಸ್ಪಷ್ಟವಾಗಿ ಹೇಳುವುದಾದರೆ ಊರ್ವಶಿಯ ಸೃಷ್ಟಿಯೆ ಅಹಲ್ಯೆಯೆಂಬ ಕಾರಣಜನ್ಮದ ಪ್ರೇರಣೆಯೆಂದು ಯಾರಿಗೆ ತಾನೇ ಊಹಿಸಲು ಸಾಧ್ಯವಿತ್ತು ?
ಅದೇನು ವಿಧಿ ಚೋಧ್ಯವೊ.. ಬ್ರಹ್ಮದೇವನ ಆ ಮಹಾಯಜ್ಞದ ಸಮೀಕರಣದಲ್ಲಿ ಊರ್ವಶಿಯೆಂಬ ಮಾನದಂಡವನ್ನು ಬಳಸಿಕೊಂಡೆ, 'ಅಷ್ಟೆ ಉತ್ಕೃಷ್ಟ ಮಟ್ಟದ ತಳಿಯನ್ನು ನೈಸರ್ಗಿಕ ಪ್ರಕ್ರಿಯೆಯಲ್ಲಿ ಸಹಜವಾಗಿ ಸೃಜಿಸಲು ಸಾಧ್ಯವೇ ? ' ಎನ್ನುವ ಪ್ರಶ್ನೆ ಹಿಡಿದು ಹೊರಟವನಿಗೆ ಗೌತಮನೆ ಸ್ಥಪತಿಯಾಗಿ ಸೇವೆ ಸಲ್ಲಿಸಬೇಕಾದ ಸಂಧರ್ಭ ಒದಗಿ ಬಂದಿತ್ತು. ಹೀಗಾಗಿ ಒಂದೆಡೆ ಊರ್ವಶಿಯ ಜತೆಗೆ ಕಾರ್ಯ ನಿರ್ವಹಿಸುತ್ತಲೆ ಮತ್ತೊಂದೆಡೆ 'ಅ-ಹಲ್ಯೆ' ಯೆಂಬ ದಂತದ ಬೊಂಬೆಯನ್ನು ರೂಪಿಸಬೇಕಾದ ಮಹಾತ್ಕಾರ್ಯ. ಅಯೋನಿಜ ರೀತಿಯಲ್ಲಿ ಸೃಜಿಸಲ್ಪಡುವ ಕಾರಣ ಆ ಯೋಜನೆಗೆ 'ಅ - ಹಲ್ಯಾ' ಎಂದೆ ಹೆಸರಿಟ್ಟಿದ್ದರು, ಉತ್ತದೆ, ಬಿತ್ತದೆ ಫಸಲಾಗುವ ಬೆಳೆಯ ಆಧಾರದ ಮೇಲೆ..
ಅದೇಕೊ ಅದೆ ಹೆಸರೆ ನಿಂತುಹೋಗಿತ್ತು ಆ ಪ್ರಯೋಗದ ಫಲಿತವಾದ ಅಹಲ್ಯೆಗೂ ಸಹ ! ಹೆಸರಿಗೆ ತಕ್ಕಂತೆ 'ಅ- ಹಲ್ಯೆ'ಯಾಗಿಯೆ ಉಳಿದುಬಿಟ್ಟ ಅವಳ ಪ್ರಯೋಗ ಕಥಾನಕದ ಉಸ್ತುವಾರಿ ಹೊತ್ತಿದ್ದ ಗೌತಮನೆ ಅವಳನ್ನು ವರಿಸಬೇಕಾಗಿ ಬಂದಿದ್ದು ಮತ್ತೊಂದು ವಿಪರ್ಯಾಸ...
ಅದೆಲ್ಲಾ ಆಗುಹೋಗುಗಳತ್ತ ಮತ್ತೆ ಇಣುಕು ನೋಟ ಬೀರುತ್ತ ಕೂತ ಗೌತಮನ ಮನಃಪಟಲದಲ್ಲಿ ಆ ಹಿನ್ನಲೆಯೂ ನೆನಪಿನ ಅಲೆಗಳಾಗಿ ತೇಲಿ ಬರತೊಡಗಿದವು - ನರನ ತಪೋಭಂಗದ ನಂತರ ನಡೆದ ದೇವೆಂದ್ರನ ಮತ್ತು ಬ್ರಹ್ಮದೇವರ ಭೇಟಿಯಲ್ಲಿ ಈ ಪ್ರಯೋಗಕ್ಕೆ ಮೂಲ ಅಸ್ತಿಭಾರ ಹಾಕಿದ್ದು.. ತನ್ನನ್ನು ಈ ಮಹಾಯಜ್ಞದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದ್ದು... ಅದುವರೆಗೂ ಕಂಡರಿಯದ ರೀತಿಯ ಸ್ತರದಲ್ಲಿ ಆ ಮಹಾನ್ ಪ್ರಯೋಗ ಆರಂಭವಾಗಿದ್ದು.. ಎಲ್ಲವು ಸಾಲುಸಾಲಾಗಿ ನೆನಪಿನ ಯಾತ್ರೆಯಲ್ಲಿ ಮರುಕಳಿಸತೊಡಗಿದವು.. ವರ್ಷಾನುಗಟ್ಟಲೆ ನಡೆದ ಈ ಯೋಜನೆಯ ಕಾರ್ಯತಂತ್ರದಲ್ಲಿ ಗೌತಮನ ಹೆಸರು ಮುಂದೆ ತಂದವನು ದೇವೇಂದ್ರನೆಂಬುದು ಮತ್ತೊಂದು ಸೋಜಿಗ....
ಯಾಕೋ ಆ ಗಾಢ ನೆನಪಿನಿಂದಲೆ ದಾಹವಾದಂತೆನಿಸಿ ನೀರು ಕೇಳಲೆಂದು ಅಹಲ್ಯೆಯತ್ತ ತಿರುಗಿದ ಗೌತಮ .. ಅವಳಾಗಲೆ ಯಾವುದರ ಪರಿವೆಯೂ ಇರದಂತೆ ಗಾಢವಾದ ನಿದ್ದೆಯಲ್ಲಿ ಮುಳುಗಿಹೋಗಿದ್ದಂತೆ ಕಂಡಿತು.. ಎಬ್ಬಿಸುವ ಮನಸಾಗದೆ ಮತ್ತೊಂದು ಮೊಗ್ಗಲಿಗೆ ತಿರುಗಿದವನನ್ನು ಜೊಂಪೆಜೊಂಪೆಯಾಗಿ ಮುತ್ತಿಕೊಂಡವು - ನಡೆದ ಬೃಹತ್ಕತೆಯ ಚಕ್ರವನ್ನು ಮನದಲ್ಲಿ ಮತ್ತೆ ಅನುರಣಿಸುತ್ತ..
(ಇನ್ನೂ ಇದೆ)
Comments
ಉ: ಅಹಲ್ಯಾ ಸಂಹಿತೆ - ೧೩ (ನರನ ತಪೋಶಕ್ತಿ ನಷ್ಟ)
11ರಿಂದ13ರವರೆಗಿನ ಕಂತುಗಳನ್ನು ಓದಿದೆ. ಊರ್ವಶಿಯ ಸೃಷ್ಟಿ, ಸಂಚಯಿತ ಶಕ್ತಿಯ ನಷ್ಟದ ಕಥಾನಕ ರೋಚಕವಾಗಿದೆ. ಅಹಲ್ಯೆಯ ಆಗಮನಕ್ಕೆ ಪೀಠಿಕೆ ಸಿದ್ಧವಾಗಿದೆ!!
In reply to ಉ: ಅಹಲ್ಯಾ ಸಂಹಿತೆ - ೧೩ (ನರನ ತಪೋಶಕ್ತಿ ನಷ್ಟ) by kavinagaraj
ಉ: ಅಹಲ್ಯಾ ಸಂಹಿತೆ - ೧೩ (ನರನ ತಪೋಶಕ್ತಿ ನಷ್ಟ)
ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಅಹಲ್ಯೆಯ ಸೃಷ್ಟಿಗೇನೊ ಊರ್ವಶಿಯಿಂದ ನಾಂದಿಯಾಯ್ತು. ಆದರೆ ಅದನ್ನು ಸಾಕ್ಷಾತ್ಕಾರಗೊಳಿಸುವ ಕೆಲಸ ಅಷ್ಟು ಸುಲಭವಲ್ - ಎಷ್ಟೊಂದು ಪ್ರಯೋಗ, ಸಂಶೋಧನೆ ನಡೆಯಬೇಕಿದೆ ಇನ್ನು ! ಆದರೂ ಆಗುವುದಂತೂ ನಿಜ :-)