ಇನ್ನೊಬ್ಬರ ಹಣ !!

ಇನ್ನೊಬ್ಬರ ಹಣ !!

 

"ಇಲ್ಲೇ ರೋಡಿನ ಮೂಲೆಯಲ್ಲಿ ನಿಲ್ಲಿಸಿ ಸಾಕು ... ನಾಲ್ಕು ಹೆಜ್ಜೆ ಹೋದರೆ ಮನೆ ಸಿಗುತ್ತೆ ... ನಿಮಗೂ ಅರ್ಜಂಟ್ ಇದೆ ಅಂದ್ರಿ ಇಲ್ದಿದ್ರೆ ಕಾಫಿ ಕುಡಿದು ಹೋಗಬಹಿದಿತ್ತು ..."
 
"ಪರವಾಗಿಲ್ವಾ ಮೇಡಮ್? ಅರ್ಜಂಟ್ ಇಲ್ದೇ ಇದ್ದಿದ್ದ್ರೆ ಖಂಡಿತ ಬರ್ತಿದ್ದೆ ...  ನಾಳೆ ಸಿಗೋಣ ಆಫೀಸಿನಲ್ಲಿ ..."
 
"ಡ್ರಾಪ್ ನೀಡಿದ್ದಕ್ಕೆ ಥ್ಯಾಂಕ್ಸ್ .." 
 
"ಬಾಯ್" ಎಂದವರೇ ವೇಗದಿಂದ ಹೊರಟು ಹೋದರು !
 
ಭಾನುವಾರದ ಮುಸ್ಸಂಜೆಯ ಸಮಯ, ಕೊಲೀಗ್ ಒಬ್ಬರ ಮದುವೆ ಮುಗಿಸಿಕೊಂಡು, ಮತ್ತೊಬ್ಬ ಕೊಲೀಗ್ ಜೊತೆ ಡ್ರಾಪ್ ತೆಗೆದುಕೊಂಡ ಆಕೆ ರಸ್ತೆ ಕೊನೆಯಲ್ಲೇ ಇಳಿದು ಮನೆ ಕಡೆ ಹೋಗುತ್ತಿದ್ದರು ... ನಗರದ ಹೊರವಲಯದಲ್ಲಿ ಲೇ ಔಟ್’ನ ಒಂದು ಬೀದಿ ... ಜಗತ್ತಿನಲ್ಲಿ ಏನಾದರೇನು ತಮ್ಮ ನೆಚ್ಚಿನ ಹೀರೋ ಮನೆಯ ವಿಚಾರ ತಮಗೆ ಮುಖ್ಯ ಎಂದು ಚಾನಲ್ ಮುಂದೆ ಕೂತ ರಸಘಳಿಗೆಯ ಸಮಯದಲ್ಲಿ ಈಕೆ ಒಬ್ಬಳೇ ಆ ಬೀದಿಯಲ್ಲಿ ನೆಡೆದುಬರುತ್ತಿದ್ದಾಗ .... 
 
ನೆಡೆದುಬರುತ್ತಿದ್ದಾಗ .. ರೋಡಿನ ಮೇಲೆ ಏನೂ ಬಿದ್ದಿದ್ದಂತೆ ಕಂಡಿತು ... ಬಾಗಿ ತೆಗೆದುಕೊಳ್ಳುವ ಮುನ್ನ ಒಮ್ಮೆ ಎಲ್ಲೆಡೆ ನೋಡಿದಾಗ ಸುತ್ತಲಲ್ಲಿ ಯಾರೂ ಕಂಡು ಬರಲಿಲ್ಲ ... ಸೂಕ್ಷ್ಮವಾಗಿ ನೋಡಿದಾಗ ಮಡಚಿದಂತೆ ಇದ್ದ ಹಲವು ನೋಟುಗಳು. ತೆಗೆದುಕೊಳ್ಳಲು ಹೋದಾಗ ಚಲಿಸಿದಂತೆ ಅನ್ನಿಸಿತು ... ಆದರೆ ಚಲಿಸಲಿಲ್ಲ ... ಯಾರೂ ಅದಕ್ಕೆ ದಾರಕಟ್ಟಿದ್ದು, ತೆಗೆದುಕೊಳ್ಳಲು ಹೋದಾಗ ಅದನ್ನು ಸೆಳೆದುಕೊಂಡು ಲೇವಡಿ ಮಾಡಿ ನಗುವಂತೆ ಕಾಣಲಿಲ್ಲ. ಕೈಗೆ ತೆಗೆದುಕೊಂಡು ನೋಡಿದಾಗ ಹಲವಾರು ಮಡಚಿದ ನೋಟುಗಳು. ಅರ್ಥಾತ್ ಯಾರೋ ಜೇಬಲ್ಲೋ ಇಟ್ಟುಕೊಂಡು ಹೋಗುವಾಗ  ಏನೋ ತೆಗೆದುಕೊಳ್ಳಲು ಹೋಗಿ ಅದು ಜೇಬಿನಿಂದ ಬಿದ್ದಿರಬೇಕು ... ಯಾರಿಗೆ ಗೊತ್ತು? ಎಲ್ಲ ಊಹಾಪೋಹ. ಎಣಿಸಿ ನೋಡಿದಾಗ ಐದು ಸಾವಿರ ರೂಪಾಯಿಗಳಿದ್ದವು. ಅಲ್ಲೇ ಬಿಟ್ಟರೆ ಅದನ್ನು ಕಳೆದುಕೊಂಡವರೇ ತೆಗೆದುಕೊಳ್ಳುತ್ತಾರೆ ಎಂದು ಏನು ನಂಬಿಕೆ? ಮನೆಗಂತೂ ತೆಗೆದುಕೊಂಡು ಹೋಗಾಯ್ತು.
 
ಇಡೀ ರಾತ್ರಿ ನಿದ್ದೆ ಇಲ್ಲ ... ಬರೀ ಹೊರಳಾಟ ... ಹಣವೇ ಹಾವಾಗಿ ಬಂದು ನುಂಗಿದಂತೆ ಭಾಸವಾಗುತ್ತಿತ್ತು!
 
ಮರುದಿನ ... ಸೋಮವಾರ ... ಕೆಲಸಕ್ಕೆ ಹೋಗುವಾಗ ಅದೇ ಹಾದಿಯಲ್ಲೇ ಹೋಗಬೇಕಿತ್ತು ... ಎಂದೂ ಇಲ್ಲದ ಎಚ್ಚರಿಕೆ ... ಯಾರಾದರೂ ’ನನ್ ದುಡ್ಡು ತೆಗೆದುಕೊಂಡ ಕಳ್ಳಿ’ ಎಂದು ಕೂಗಿ ಸಾರುವರೋ ಎಂಬ ಭಯ. ಆಕೆಗೆ ಅರಿವಿಲ್ಲದೆ ಮನಸ್ಸಿನಲ್ಲೇ ಚೀರಿದಳು ’ನಾನು ತಪ್ಪು ಮಾಡಿಲ್ಲ. ಅದು ಯಾರ ದುಡ್ಡೋ ನನಗೆ ಗೊತ್ತಿಲ್ಲ. ನಾ ಕಳ್ಳಿ ಅಲ್ಲಾ ... ನಾನು ಅಲ್ಲದಿದ್ದರೆ ಅದು ಇನ್ನೊಬ್ಬರ ಪಾಲು ಆಗಿರುತ್ತಿತ್ತು ... ನಾ ಕಳ್ಳಿ ಅಲ್ಲ" ... 
 
ಕೋಟ್ಯಾಂತರ ರುಪಾಯಿ ವಂಚಿಸಿದವರೇ ರಾಜಾರೋಷವಾಗಿ ಇರುವಾಗ ಕೇವಲ ಐದು ಸಾವಿರ ರುಪಾಯಿಗೆ, ಅದೂ ಬೀದಿಯಲ್ಲಿ ಸಿಕ್ಕ ದುಡ್ಡಿಗೆ, ಹೀಗೆ ಮಾನಸಿಕ ತೊಳಲಾಟ ಅನುಭವಿಸುವವರು ಯಾರು ಅಂದಿರಾ? ಇವರೇ, ಸ್ವಲ್ಪ ನೀಯತ್ತು ಇರಿಸಿಕೊಂಡಿರುವ ಮಧ್ಯಮವರ್ಗದವರು .. ಇದೇ ಅವರ ಪರಿಪಾಟಲು. ತಮ್ಮ ನಾಲ್ಕು ಕಾಸು ಹೋದರೂ ಪರವಾಗಿಲ್ಲ ಇನ್ನೊಬ್ಬರ ಹಣ ಕಾರ್ಕೋಟಕ ಸರ್ಪ ಎಂದು ನಂಬಿರುವವರು.
 
ಸೋಮವಾರ ಬೆಳಿಗ್ಗೆ ಎಲ್ಲೆಡೆ ತರಾತುರಿಯ ಸನ್ನಿವೇಶ ಇರುವ ಸಂದರ್ಭದಲ್ಲಿ ಅಲ್ಲೇ ಕಂಡ ದೇವಸ್ಥಾನ ಹೊಕ್ಕಳು ಆಕೆ. ಹಾದಿಯಲ್ಲಿ ಸಿಕ್ಕ ತನ್ನದಲ್ಲದ ಹಣವನ್ನು ಹುಂಡಿಗೆ ಸೇರಿಸಿದ ಮೇಲೆ ಏನೋ ಮೈಭಾರ ಇಳಿದ ಅನುಭವ. ಭಗವಂತನಿಗೆ ನಮಸ್ಕರಿಸಿ ಹಣಕಾಸಿನ ಪರಿಸ್ಥಿತಿ ಸುಧಾರಿಸೋ ತಂದೆ ಎಂದು ಬೇಡಿಕೊಂಡಳು. ಸಂಬಳ ಬರಲು ಇನ್ನೂ ಐದು ದಿನ ಇರುವಾಗ ಖರ್ಚಿಗೆ ಹಣ ಯಾರಲ್ಲಿ ಕೇಳಲಿ ಎಂದೇ ಯೋಚಿಸುತ್ತ ಬಸ್ ಸ್ಟಾಪ್’ನೆಡೆಗೆ ನೆಡೆದಳು ....
 
ಹಣಕ್ಕೆ ಮಾತು ಬರುವ ಹಾಗಿದ್ದರೆ ಅದು ಹೇಳುತ್ತಿತ್ತು ’ಕಳೆದ ಒಂದು ವರ್ಷದಿಂದ ಹಾಗೂ ಹೀಗೂ ಕೂಡಿಟ್ಟು ನಿಮ್ಮಪ್ಪನ ಪಿ.ಎಫ್ ಹಣ ಬಿಡುಗಡೆ ಮಾಡಿಸಲು ನೀ ಲಂಚ ನೀಡಿದ್ದ ಅದೇ ಹಣ ನಾನು’ ಎಂದು !!!
 

 

Comments

Submitted by kavinagaraj Fri, 03/18/2016 - 12:00

ತನ್ನದಲ್ಲದುದು ದಕ್ಕುವುದಿಲ್ಲ ಎಂಬ ನೀತಿಯ ಪ್ರತಿಪಾದನೆ ಚೆನ್ನಾಗಿದೆ, ಭಲ್ಲೆಯವರೇ.