ನೆನಪು (ಭಾಗ-3)

ನೆನಪು (ಭಾಗ-3)

ಹಳೆಯ ಕಾಲದ ವಿಶಾಲವಾದ ಮನೆ. ‌ಮರದ ಕಂಬಗಳಿಗೆ ಸುಂದರವಾದ ಕುಸುರಿ ಕೆತ್ತನೆ ಹಜಾರಕ್ಕೆ ಮೆರುಗು ತಂದಿತ್ತು. ಅಜ್ಜನ ಕಾಲದಲ್ಲಿ ಕಟ್ಟಿದ್ದು ಅಂತ ಅಪ್ಪಯ್ಯ ಯಾವಾಗಲೂ ಹೇಳುತ್ತಿದ್ದರು. ಅಮ್ಮ ಒಬ್ಬರೆ ಹೇಗೆ ಅಷ್ಟೊಂದು ಆಸ್ತಿ ನೋಡಿಕೊಳ್ಳುತ್ತಿದ್ದಾರೊ. ಚಿಕ್ಕಪ್ಪನ ಮನೆ ಹತ್ತಿರ ಇರೋದರಿಂದ ಪರವಾಗಿಲ್ಲ. ಈಗ ನಾನು ಹೇಗಿದ್ದರು ಇರುತ್ತೇನಲ್ಲ ಇಲ್ಲೆ‌. ಅಮ್ಮ ಆರಾಮಾಗಿರಬೇಕು. ಎಷ್ಟು ಸಾರಿ ಹೇಳಿದ್ದರು ಊರಿಗೆ ಬಂದುಬಿಡು. ಆದರೆ ನನ್ನ ಹಠದ ಮುಂದೆ ಅವರ ಮಾತು ನಡೀಲಿಲ್ಲ. ಜಾಸ್ತಿ ಬರತಾನೂ ಇರಲಿಲ್ಲ. ಬಿಡುವಿಲ್ಲದ ಕೆಲಸ‌. ಅಮ್ಮ ಅದೆಷ್ಟು ಬೇಜಾರು ಮಾಡಿಕೊಂಡಿದಾರೊ ಏನೊ. ಈಗ ಖುಷಿ ಪಡುತ್ತಾರೆ. ಹೀಗೆ ಯೋಚನೆಗಳ ಸರಣಿ ಆಟೊ ನಿಂತಾಗ ಮನೆ ಮುಂದೆ ಮಾಯವಾಯಿತು.
“ಬೆಳಗ್ಗೆಯಿಂದ ಕಾಯುತ್ತಿದ್ದೇನೆ. ಯಾಕೆ ಬಸ್ಸು ಬರೋದು ತಡ ಆಯಿತಾ ಮಗಳೆ.” ಅಮ್ಮನ ವಾಖ್ಯ ಕಿವಿಗಿಂಪಾಗಿತ್ತು. ಮಾತೃ ವಾತ್ಸಲ್ಯದ ಮುಂದೆ ಬೇರೆಲ್ಲ ಶೂನ್ಯ. ಅಮ್ಮ ಕ್ಷಮಿಸು. ಮನಸ್ಸಿನಲ್ಲೆ ಕೇಳಿಕೊಂಡು ಮನೆ ಒಳಗಡೆ ಕಾಲಿಡುತ್ತಾಳೆ.
ಅಮ್ಮ ಮಾತಾಡುತ್ತಲೇ ಇದ್ದರು. ಆದರೆ ನನಗ್ಯಾವುದು ಅಷ್ಟಾಗಿ ಗಮನಕ್ಕೆ ಬರುತ್ತಿರಲಿಲ್ಲ. ಮನಸ್ಸಿನಲ್ಲಿರೊ ನಿದಾ೯ರ ಅವನ ಹತ್ತಿರ ಮಾತಾಡಬೇಕು. ಅವನಿಂದ ಏನು ಪ್ರತಿಕ್ರಿಯೆ ಬರುತ್ತೊ, ಅವನು ಹೇಗೆ ಇದ್ದಾನೊ. ನನ್ನಷ್ಟಕ್ಕೆ ಕನಸು ಕಟ್ಟಿಕೊಂಡು ಊರಿಗೆ ಬಂದು ಬಿಟ್ಟೆ‌. ಇನ್ನೇನು ಕಾದಿದೆಯೊ. ಯೋಚನಾ ಲಹರಿ ಬೆನ್ನು ಬಿಡುತ್ತಿಲ್ಲ.
ಸರಿ ಸಾಯಂಕಾಲ ಯಾವುದಕ್ಕೂ ಮಾಮೂಲಿ ಜಾಗಕ್ಕೆ. ಹೋಗಿ ನೋಡಬೇಕು‌. ಸಿಗುತ್ತಾನಾ ಅಂತ. ಹಳ್ಳಿ ತುಂಬಾ ಬದಲಾಗಿದೆ ಈಗ. ಆದರೆ ಜನ. ಅದು ಗೊತ್ತಿಲ್ಲ. ಅವನನ್ನೇ ಕೇಳಬೇಕು. ಇಲ್ಲಿ ನಾನು ಕ್ಲಿನಿಕ್ ಓಪನ್ ಮಾಡಿ ನನ್ನ ವೃತ್ತಿ ಮುಂದುವರಿಸೊ ಬಗ್ಗೆ ಅವನಲ್ಲಿ ಹೇಳಬೇಕು.
ಅಮ್ಮ ಮಾಡಿದ ಅಡುಗೆ ರುಚಿಕಟ್ಟಾಗೇ ಇರುತ್ತದೆ ಯಾವಾಗಲೂ. ಆದರೆ ಇವತ್ತು ತಿಂದನ್ನ ಗಂಟಲಿನಲ್ಲಿ ಇಳಿಯುತ್ತಿಲ್ಲ. ಊಟ ಮಾಡಿದ ಶಾಸ್ತ್ರ ಮಾಡಿ ಹೋಗಿ ಮಲಗಿದರೂ ಹೊರಳಾಟ. ಒಂದಧ೯ ಗಂಟೆ ನಿದ್ದೆ ಬಂದಿರಬೇಕು ರಾತ್ರಿ ಪ್ರಯಾಣದ ಸುಸ್ತಿಗೆ. ಎಚ್ಚರವಾದಾಗ ಮಧ್ಯಾಹ್ನದ ನಾಲ್ಕು ಗಂಟೆ.
ಸ್ವಲ್ಪ ಕಾಳಜಿವಹಿಸಿ ಶೃಂಗಾರ ಮಾಡಿಕೊಳ್ಳುತ್ತಾಳೆ ಸಿಂಪಲ್ಲಾಗಿ. ಅವನು ತನ್ನ ಸೌಂದರ್ಯದ ಆರಾಧಕ ಅನ್ನೋದು ಗೊತ್ತು ಅವಳಿಗೆ. “ಸಿನಿಮಾ ನಟಿ ತರ ಡ್ರೆಸ್ ಮಾಡಿಕೊಂಡಿದಿಯಾ” ” ಹೌದು ಕಣೊ ನಾನು ಸಿನಿಮಾ ನಟಿನೇ, ಏನೀಗಾ” ಅಂತ ಕೋಪಿಸಿಕೊಂಡಿದ್ದು ನೆನೆದು ನಗು ಬಂತು. “ಆಹಾ, ಮನ್ಮತ ನೀನು, ನೋಡೋದು ನೋಡು” ಅಂತ ತಾನು ರೇಗಿಸಿದ್ದು. ಅಬ್ಬಾ ಅದೇನೇನು ಆಸೆ ನೆನಪುಗಳು ಇವತ್ತು!
ನಿನ್ನನ್ನು
ಕಾಣುವಾಸೆ
ನಿನ್ನ ಶಿರದಲ್ಲಿ
ಬೆರಳಾಡಿಸಿ
ಮಸ್ತಕವ
ತಂಪಾಗಿಸುವಾಸೆ!
ಉಡುಪಿಗೆ ಒಪ್ಪುವ ಚಪ್ಪಲಿ ಹಾಕಿಕೊಂಡು “ಅಮ್ಮ ಇಲ್ಲೆ ಹೋಗಿ ಬರುತ್ತೇನೆ.” ಅಮ್ಮ ಕೂಗಿ ಕೇಳಿದ ಮಾತು ಕಿವಿಗೆ ಬೀಳಲಿಲ್ಲ. “ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ…..” ಎಂಬತ್ತರ ದಶಕದ ಹಾಡು ಗುಣ್ಗುಣಿಸುತ್ತ ದಾಪುಗಾಲಿಟ್ಟು ಹೋಗುತ್ತಿದ್ದಾಳೆ. ಜೀವದ ಗೆಳೆಯನನ್ನು ಕಾಣಲು!
ಹೊಳೆಯ ದಂಡೆಯ ಅಂಚಲ್ಲಿ ಅದೇ ಜಾಗ ಅದೆ ಅವನು. ಅವಳಿಗೆ ಆಶ್ಚಯ೯, ಖುಷಿ, ಸಂತೋಷ ಎಲ್ಲ ಒಮ್ಮೆಲೇ ದಾಳಿ ಇಡುತ್ತಿವೆ‌. ಆದರೆ ಈಗ ಉದ್ವೇಗ ಇಲ್ಲ, ಗಡಿಬಿಡಿ ಇಲ್ಲ‌.
ಬಳಿಯಲ್ಲಿ ಹೋಗಿ “ಸಂತೋಷ್”, ಕೂಗಿದ ಧ್ವನಿ ಪರಿಚಿತ. ತಿರುಗಿ ನೋಡುತ್ತಿದ್ದಾನೆ, ನೋಡುತ್ತಲೇ ಇದ್ದಾನೆ‌. ಅದೆ ಶಾಮಿ. ನನ್ನ ಶಾಮಿ.
ಇಬ್ಬರಿಗೂ ಮಾತು ಹೊರಡುತ್ತಿಲ್ಲ.
“ಯಾಕೆ ಇಷ್ಟು ವಷ೯ ನನ್ನ ನೋಡೋಕೆ ಬಂದಿಲ್ಲ? ಈಗ ನೆನಪಾಯಿತಾ? ಈಗ್ಯಾಕೆ ಬಂದೆ? ಮಾತು ಆಡುತ್ತಲೇ ಇದ್ದಾನೆ. ”
” ಗೊತ್ತಾಯಿತು ಕಣೊ, ಸಾಕು ಮಾತಾಡಬೇಡ.” ಇವಳಲ್ಲೂ ಇದೇ ಪ್ರಶ್ನೆ ಕೇಳುವ ಹುಚ್ಚು ಮನಸ್ಸು. ಇಬ್ಬರೂ ಮರೆತು ಬಿಟ್ಟಿದ್ದಾರೆ ಆ ಕ್ಷಣ.
“ಶಾಮಿ” ಅದೆ ಕರೆಯೊ ವರಸೆ, ಅದೆ ಬಡ ಬಡ ಮಾತು.
“ಸಂತೂ ಹೇಗಿದಿಯಾ? ಒಬ್ಬನೇ ಬಂದು ಕೂತಿದಿಯಲ್ಲ? ನಿನ್ನ ಹೆಂಡತಿ ಕರೆದುಕೊಂಡು ಬರಬೇಕಿತ್ತು.”
“ಯಾರು ಹೇಳಿದರು ನಾ ಮದುವೆ ಆಗಿದಿನಿ ಅಂತ. ನಿನಗೆಲ್ಲೊ ಹುಚ್ಚು. ನಿನ್ನಂಥ ಹುಡುಗಿ ನನಗ ಬೇಕಿತ್ತು. ಸಿಕ್ಕಲಿಲ್ಲ. ಸಿಕ್ಕರೂ ನನ್ನ ಮನಸಲ್ಲಿ ನೀನೇ ತುಂಬಿಕೊಂಡಿದಿಯಾ. ಮನಸ್ಸು ಒಪ್ಪೋದಿಲ್ಲ. ಅದಕ್ಕೆ ಹಾಗೇ ಇದ್ದುಬಿಟ್ಟೆ ನಿನ್ನ ನೆನಪಲ್ಲಿ! ಸರಿ ನೀನ್ಯಾಕೆ ಒಬ್ಬಳೇ ಬಂದೆ. ಕತ್ತಲ್ಲಿ ಕರಿಮಣಿ ಏನೂ ಕಾಣುತ್ತಿಲ್ಲ. ಯಾಕೆ ಏನಾಯಿತೆ?”
ಜೋರಾಗಿ ನಗು ಬರುತ್ತಿದೆ ಅದ್ಯಾವುದೊ ಸಂತೋಷ.
“ಇಲ್ಲ ಕಣೊ ನಾನು ಮದುವೆ ಆಗಲಿಲ್ಲ”
ಅವಳಾಡುತ್ತಿರುವ ಮಾತುಗಳು ಇದುವರೆಗಿನ ಬದುಕಿನ ಚಿತ್ರಣ ತೆರೆದು ಇಟ್ಟಿತು. ಅವನಾಡುವ ಮಾತುಗಳು ಸ್ಪಷ್ಟವಾಗಿ ಅವಳ ಹೃದಯ ಕೇಳಸಿಕೊಳ್ಳುತ್ತಿತ್ತು. ಅವನಿಗಾಗೇ ಬರೆದ ನೂರು ಪ್ರೇಮ ಕವನಗಳ ಪುಸ್ತಕ ಅವನ ಕೈ ಬಾಚಿ ತಬ್ಬಿತ್ತು. ಮನಸ್ಸು ಅವನೆದೆಗೆ ಒರಗಿತ್ತು. ಪ್ರೀತಿಯ ಮುತ್ತು ಹಣೆಯ ಸವರಿತ್ತು!
ಅದೇ ಪ್ರೀತಿ. ಅದೇ ಸ್ನೇಹ. ಅದೇ ನಂಬಿಕೆ. ಬೇರೆಲ್ಲ ಗೌಣ. ಆ ಮೊದಲಿನ ಮಾತುಗಳು ಅಬ್ಬರ ಇಬ್ಬರ ಮದ್ಯ ಮನೆ ಮಾಡಿತು.
ಅದೆ ಸುಂದರ ಮಾತು
ಮನ ಮುಟ್ಟುವ ಮಾತು
ಕಿವಿ ತಣಿಸುವ ಮಾತು
ಬಚ್ಚಿಟ್ಟುಕೊಳ್ಳುವ ಮಾತು
ನೆನಪಿಸಿಕೊಳ್ಳುವ ಮಾತು
ಕಳೆದು ಹೋಗುವ ಮಾತು
ನಾಳೆಗಳ ಮಾತು
ಹಸಿ ಹಸಿ ಮಾತು
ಬಿಸಿ ಬಿಸಿ ಮಾತು
ಮತ್ತೇರಿಸುವ ಮಾತು
ಕೊನೆಯಿಲ್ಲದ ಮಾತು!
ಇಲ್ಲಿ ಬರಿ ಕಾವ್ಯ
ಪ್ರೇಮ ಧಾರೆ
ಪ್ರೀತಿಯ ಮಾತು
ಜಗತ್ತು ನಂಬಲಾರದ ಸತ್ಯ!
“ಆಳವಾದ ನಿಶ್ಕಲ್ಮಶ ಪ್ರೀತಿ, ನಂಬಿಕೆಯೇ ಎಲ್ಲದಕ್ಕೂ ಅಡಿಪಾಯ. ಕಟ್ಟುವವು ಸುಂದರ ಪ್ರೇಮ ಸೌಧ!”
ಮೂಡಣದಲ್ಲಿ ಮುಳುಗುವ ಸೂಯ೯ ಕೆಂಪಾಗಿ ಕಣ್ಮನ ತಂಪಾಗಿಸಿದ್ದ. ಪೃಕೃತಿಯ ಸುಂದರ ಚಿತ್ರಣ ಹೃದಯದ ಹೆಬ್ಬಾಗಿಲಿನಲ್ಲಿ ಬಣ್ಣದ ರಂಗೋಲಿ ಹಾಕಿತ್ತು; ಮುಂದಿನ ದಿನಗಳಿಗೆ ಸ್ವಾಗತ ಕೋರಿ. ಪ್ರೀತಿಸುವ ಹೃದಯಗಳ ಕೂಗು ಆ ಪೃಕೃತಿ ಮಾತೆ ತನ್ನದೆ ರೂಪು ರಂಗು ನೀಡಿ ಬೇದ ಭಾವವಿಲ್ಲದೆ ಉಣಬಡಿಸುತ್ತಿತ್ತು‌. ಒಂದಾದ ಜೋಡಿ ಹಕ್ಕಿಗಳಿಗೆ ಶುಭ ಹಾರೈಸಿ ಮುನ್ನುಡಿಯ ಬರೆದು ಬಾನಲ್ಲಿ ಲೀನವಾದ ಭಾಗ೯ವ.