ಬದಲಾದ ಬಬ್ರುವಾಹನ!

ಬದಲಾದ ಬಬ್ರುವಾಹನ!

ಬಬ್ರುವಾಹನ ಚಿತ್ರದ ಬಗ್ಗೆ ಮತ್ತೆ ಹೇಳಬೇಕು. 1977 ರಲ್ಲಿ ಹುಣಸೂರು ಕೃಷ್ಣ ಮೂರ್ತಿಗಳು ಈ ಸಿನಿಮಾ ನಿರ್ದೇಶಿಸಿದ್ದರು. 38 ವರ್ಷ ಆಗಿದೆ ಈಗ ಈ ಚಿತ್ರಕ್ಕೆ. ಆದರೆ, ಈಗ ಮತ್ತೆ ಒಮ್ಮೆ ಬಬ್ರುವಾಹನನ್ನ ನೆನಪಿಸಿಕೊಳ್ಳ ಸಮಯ ಬಂದಿದೆ. ಅದಕ್ಕೆ ಕಾರಣ ಇದೆ. ಅದು ಬಲವಾದ ಕಾರಣ. ಬನ್ನಿ, ಓದೋಣ.

ಒಂದು ವಿಷಯ ಹೇಳಬೇಕು. ಬಬ್ರುವಾಹನ ನಿಂತು ಶುರುವಾದ ಚಿತ್ರ. ಜಯಣ್ಣ ಅನ್ನೋರು ಚಿತ್ರ ಆರಂಭಿಸಿದ್ದರು. ಒಂದಷ್ಟು ದಿನ ಚಿತ್ರೀಕರಣವೂ ಆಗಿತ್ತು. ಕೆ.ಸಿ.ಎನ್​.ಗೌಡರು ಚಿತ್ರಕ್ಕೆ ಫೈನಾನ್ಸ್ ಮಾಡಿದ್ದರು.ಜಯಣ್ಣ ಕೈಚಲ್ಲಿದರು. ಬಬ್ರುವಾಹನ ಆರಂಭದಲ್ಲಿಯೇ ನಿಂತು ಹೋಗಿತ್ತು. ಒಂದು ವೇಳೆ ಚಿತ್ರ ಪುನ: ಆರಂಭಗೊಳ್ಳದೇ ಇದ್ದಿದ್ದರೇ. ನಾವು ನಿಜವಾಗಲೂ ಕನ್ನಡದ ಕ್ಲಾಸಿಕ್ ಚಿತ್ರ ಬಬ್ರುವಾಹನವನ್ನ ನೋಡಲು ಸಾಧ್ಯವೇ ಆಗುತ್ತಿರಲಿಲ್ಲ.

ಬಬ್ರುವಾಹನ ಚಿತ್ರದ ಕಥೆಯ-ಚಿತ್ರ-ಕಥೆ ಸಂಭಾಷಣೆ ಹುಣಸೂರು ಕೃಷ್ಣಮೂರ್ತಿಗಳು ಬರೆದಿದ್ದರು. ಆದರೆ, ಬಬ್ರುವಾಹನ ತೆಲುಗು ಭಾಷೆಯಲ್ಲಿ ಈ ಮೊದಲೇ ನಿರ್ಮಾಣಗೊಂಡಿತ್ತು. ಸೋಲು ಕಂಡಿತ್ತು. ಹಂಗಿರೋವಾಗ ನಿಂತು ಹೋದ ಕನ್ನಡ ಚಿತ್ರದ ಕಥೆ ಬದಲಾಗಬೇಕು. ಅದರಿಂದ ನಿರ್ಮಾಪಕರಿಗೂ ಒಳ್ಳೆಯದು. ನಮ್ಮಂತಹ ಕಲಾವಿದರಿಗೂ ಕೆಟ್ಟ ಹೆಸರು ಬರೋದಿಲ್ಲ. ಹೀಗಂತ ಡಾಕ್ಟರ್ ರಾಜ್ ಹೇಳಿದ್ದರು.

ಬದಲಾದ ಕಥೆಯಲ್ಲಿಯೇ ಡಾಕ್ಟರ್ ರಾಜ್ ಸಿನಿಮಾ ಮಾಡಲು ಒಪ್ಪಿದರು. ಬಬ್ರುವಾಹನ ಸೆಟ್ಟೇರಿತು. ದ್ವೀಪಾತ್ರದಲ್ಲಿ ರಾಜ್ ಕಾಣಿಸಿಕೊಂಡರು. ನಿರ್ಮಾಪಕರ ಕೆ.ಸಿ.ಎನ್.ಚಂದ್ರಶೇಖರ್​ ಒತ್ತಾಯ ಇನ್ನೂ ಬೇರೆಯದ್ದೇ ಆಗಿತ್ತು.ರಾಜ್ ತ್ರಿಪಾತ್ರದಲ್ಲಿ ಅಭಿನಯಿಸಬೇಕೆಂಬೋದು ಆ ಒತ್ತಾಸೆ. ರಾಜ್ ಒಪ್ಪಬೇಕಲ್ಲ. ಕೃಷ್ಣನ ಪಾತ್ರಕ್ಕೆ ಬೇರೆ ಕಲಾವಿದರನ್ನ ಹಾಕಿ ಅಂದ್ರು. ಆಗ ತಂಡಕ್ಕೆ ಸಿಕ್ಕವರೇ ನಟ ರಾಮಕೃಷ್ಣ.

ರಾಮ್ ಕೃಷ್ಣರ ಆಯ್ಕೆ ಕಥೆನೂ ದೊಡ್ಡದಿದೆ. ಪುಟ್ಟಣ್ಣ ಅವರ ಫಲಿತಾಂಶ ಚಿತ್ರಕ್ಕೆ ರಾಮಕೃಷ್ಣ ಆಯ್ಕೆ ಆಗಿದ್ದರು. ಇತ್ತ ಕಡೆಗೆ ಬಬ್ರುವಾಹನ ಚಿತ್ರಕ್ಕೂ ಸೆಲೆಕ್ಟ್ ಆಗಿದ್ದರು. ಕೊನೆಗೆ ಆಗಿದ್ದು ಒಂದೇ. ಫಲಿತಾಂಶ ಚಿತ್ರಕ್ಕೆ ಜೈಜಗದೀಶ್ ಬಂದರು. ರಾಮಕೃಷ್ಣ ಅವರು ಬಬ್ರುವಾಹನ ಚಿತ್ರದಲ್ಲಿ ಕೃಷ್ಣನಾಗಿ ಕಂಡರು.

ಹಿಂಗೆ ಆರಂಭಗೊಂಡ ಬಬ್ರುವಾಹನ ಚಿತ್ರ, 48 ರಿಂದ 50 ಲಕ್ಷದ ಬಜೆಟ್​ ನಲ್ಲಿ ನಿರ್ಮಾಣಗೊಂಡಿತ್ತು. ಮದ್ರಾಸ್ ಮತ್ತು ಬೆಂಗಳೂರಲ್ಲೂ ಚಿತ್ರೀಕರಣ ಗೊಂಡಿದೆ. ಚಿತ್ರದಲ್ಲಿ ಬರೋ ನಾಗಲೋಕದ ಚಿತ್ರೀಕರಣದ ಕಥೆ ಇಂಟ್ರಸ್ಟಿಂಗ್ ಆಗಿದೆ. ಆಗ ಮದ್ರಾಸ್​ ನಲ್ಲಿ  ಈ ನಾಗಲೋಕ ಸೆಟ್ ಹಾಕಿದ್ದರು. ಸ್ಮೋಕ್ ಎಫೆಕ್ಟ್​ ಗೆ ಬೆಂಗಳೂರಿನಿಂದಲೇ ಆಗ ಡ್ರೈ ಐಸ್ ತೆಗೆದುಕೊಂಡು ಹೋಗಬೇಕಿತ್ತು. ಸರಿಯಾಗಿ ಪ್ಯಾಕ್ ಮಾಡಿ, ಬೆಂಗಳೂರಿನಿಂದಲೇ ಕಳಿಸಿಕೊಡಲಾಗುತ್ತಿತ್ತು. ಡ್ರೈ ಐಸ್. ಹಂಗಿತ್ತು ಸ್ಥಿತಿ.

ಬಬ್ರುವಾಹನ ಚಿತ್ರದಲ್ಲಿ ಯುದ್ಧದ ಸನ್ನಿವೇಶವೂ ಬರುತ್ತದೆ. ಅದಕ್ಕಾಗಿ ಕಲಾವಿದರೆಲ್ಲ ಬೆಳಗ್ಗೆ 2 ಗಂಟೆಗೇನೆ ಮೇಕಪ್ ಹಾಕಿಕೊಳ್ಳಲು ಕುಳಿತುಕೊಳ್ಳುತ್ತಿದ್ದರು. 8 ಗಂಟೆ ಹೊತ್ತಿಗೆ ಮೊದಲ ಶಾರ್ಟ್ ತೆಗೆಯಲಾಗುತ್ತಿತ್ತು. ಈ ಥರ 70 ದಶಕದಲ್ಲಿ ಬಬ್ರುವಾಹನ ನಿರ್ಮಾಗೊಂಡಿತು. 1977 ರಲ್ಲಿ ಬಬ್ರುವಾಹನ ತೆರೆಗೆ ಬಂತು. ಬೆಂಗಳೂರಿನ ತ್ರಿವೇಣಿ ಥಿಯೇಟರ್​ ನಲ್ಲಿ  ಜನವರಿ ತಿಂಗಳು ಬಿಡುಗಡೆ ಆಯ್ತು. ರಿಲೀಸ್ ಆದ ಆ ದಿನ ಸಂಕ್ರಾಂತಿ ಹಬ್ಬವೂ ಇತ್ತು.

ಬಬ್ರುವಾಹನ ಈಗ ಮಾಡಿದಷ್ಟು ಕ್ರೇಜ್, ಮೊದಲ ರಿಲೀಸ್ ಆದಾಗ ಇರಲೇ ಇಲ್ಲ. ಪರ ಭಾಷಾ ಚಿತ್ರಗಳು ಆಗಲೂ ಹಾವಳಿ ಇಟ್ಟಿದ್ದವು. ಆದರೂ, ರಾಜ್ ಚಿತ್ರ ನಿಧಾನವಾಗಿ ಪಿಕಪ್ ಆಯ್ತು. ಆದರೆ, ಎರಡನೇ ರಿಲೀಸ್ ಹೊತ್ತಿಗೆ, ಟಿ.ಜಿ.ಲಿಂಗಪ್ಪ ಸಂಗೀತದ ಹಾಡು ಜನರ ಮಾನಸದಲ್ಲಿ ಅಚ್ಚಾಗಿದ್ದು. ಸಿನಿಮಾ ಭರ್ಜರಿ ಕಲೆಕ್ಷನ್ನೂ ಮಾಡಿತು.ಬೇಜಾನ್ ಪ್ರಶಂಸೆನೂ ಪಡೀತು.

ಆದರೆ, ಒಂದು ಸಂಗತಿ ಹೇಳಲೇಬೇಕು. ಅದು ಡಾಕ್ಟರ್ ರಾಜ್ ಸಂಭಾವನೆ ವಿಚಾರ. ಚಿತ್ರ ರಿಲೀಸ್ ಆದ ಎರಡನೇ ವಾರಕ್ಕೆ ರಾಜ್ ಸಂಭಾವನೆ ಪಡೆದಿದ್ದರು. ಅದು ಒಂದು ರೀತಿ ರಾಜ್ ಅವರ ಕೆಲಸದ ಮೇಲಿನ ಪ್ರೀತಿ ಮತ್ತು ನಿರ್ಮಾಪಕರ ಮೇಲಿನ ನಂಬಿಕೆ ಎತ್ತಿ ತೋರುತ್ತದೆ.

38 ವರ್ಷದ ಬಳಿಕ ಅದೇ ಬಬ್ರುವಾಹನ ಈಗ ರಿಲೀಸ್ ಆಗುತ್ತಿದೆ. Dizipep ಸಂಸ್ಥೆ ಮುಂದೆ ಬಂದು, ಚಿತ್ರದ ಸೌಂಡ 7.1 ಮಾಡಿಸಿದೆ. ಚಿತ್ರದ ಕಲರ್ ಕೂಡ ಅಪಗ್ರೇಡ್ ಆಗಿದೆ. ಎಲ್ಲರು ತಿಳಿದಂತೆ ಬಬ್ರುವಾಹನ ಕಲರ್ ಸಿನಿಮಾ. ಈಗ ಅದರ ಹೊಳಪು  ಹೆಚ್ಚಾಗಿದೆ. ರಾಜ್ ಹೇಳೋ ಡೈಲಾಗ್ ಇನ್ನೂ ಸೂಸ್ಪಷ್ಟವಾಗಿ ಕೇಳಲಿವೆ. ಡಾಕ್ಟರ್ ರಾಜ್ ಜನ್ಮ ದಿನಕ್ಕೆ ಬದಲಾದ ಈ ಬಬ್ರುವಾಹನ ಚಿತ್ರ ತೆರೆ ಕಾಣುತ್ತಿದೆ. ಆದರೆ, ಎರಡು ದಿನ ಮುನ್ನ. ಏಪ್ರೀಲ್ -24 ಕ್ಕೆ ರಾಜ್ 87 ನೇ ಜನ್ಮ ದಿನಾಚರಣೆ. ಏಪ್ರೀಲ್-22 ಕ್ಕೆ ಹೊಸ ಬಬ್ರುವಾಹನ ಬಿಡುಗಡೆ ಆಗಿರುತ್ತದೆ.

ನಿರ್ಮಾಪಕ ಕೆ.ಸಿ.ಎನ್.ಗೌಡರ ಮಕ್ಕಳು ಈಗ ಈ ಚಿತ್ರವನ್ನ ರೀರಿಲೀಸ್ ಮಾಡುತ್ತಿದ್ದಾರೆ. ಕನ್ನಡಿಗರಿಗೆ ಬಬ್ರುವಾಹನ ಚಿತ್ರದ ಸದಭಿರುಚಿಯನ್ನ ಆಸ್ವಾದಿಸಲು ಕೊಡುತ್ತಿದ್ದಾರೆ. ಕಸ್ತೂರಿ ನಿವಾಸವನ್ನ ಕಲರ್ ಮಾಡಿಸಿ ಮತ್ತೆ ರಿಲೀಸ್ ಮಾಡಿದ್ದು ಇದೆ ಫ್ಯಾಮಿಲಿಯ ಕೆ.ಸಿ.ಎನ್. ಮೋಹನ್. ಆ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೇನೂ ಬಂತು. ಜನ ಮುಗಿ ಬಿದ್ದು ಚಿತ್ರ ವೀಕ್ಷಿಸಿದರು. ಈಗ ಬಬ್ರವಾಹನನ ಅಬ್ಬರ ಶುರುವಾಗಲಿದೆ. ಇನ್ನು ಕೆಲವೇ ದಿನಗಳಲ್ಲಿ  ರಾಜ್ ಡೈಲಾಗ್ ಬೋರ್ಗರೆಯಲಿವೆ. ನಿಮ್ಮ ಕಾತರವನ್ನೂ ತಣಿಸಲಿವೆ.
-ರೇವನ್