ಭಕ್ತಿ, ಆಚರಣೆ ಮತ್ತು ಸಾಧನೆ

ಭಕ್ತಿ, ಆಚರಣೆ ಮತ್ತು ಸಾಧನೆ

 
                              ಇಂದು ಯಾವುದೇ ಪುಣ್ಯ ಕ್ಷೇತ್ರಕ್ಕೆ ಹೋಗಲಿ, ಎಲ್ಲ ಕಡೆಯಲ್ಲಿ ಜನ ಜಂಗುಳಿಯಿಂದ  ತುಂಬಿ ತುಳುಕುತ್ತಿರುತ್ತದೆ. ಎಲ್ಲರಲ್ಲೂ ಭಕ್ತಿ ಉಕ್ಕಿ ಹರಿಯುತ್ತಿದೆಯೇನೋ ಅನ್ನುವಷ್ಟರ ಮಟ್ಟಿಗೆ ನೋಡಿದವರಿಗೆ ಭಾಸವಾಗುತ್ತದೆ. ಆದರೆ, ಇದು ಸತ್ಯವೇ? ಎಂಬ ಪ್ರಶ್ನೆಯೂ ಜೊತೆ ಜೊತೆಗೆ ಬರುತ್ತದೆ.  ಕೇವಲ ಪುಣ್ಯಕ್ಷೇತ್ರದಲ್ಲಿ ಭಗವಂತನ ಮೇಲೆ  ತೋರುವ  ಭಕ್ತಿಯೊಂದೇ ಸಾಕೆ? ಈ ಭಕ್ತಿಯಿಂದಲೇ ಸರ್ವ ಪಾಪ ನಿವೃತ್ತಿ ಎಂದು ನಿರ್ಧಾರ ಮಾಡಲು ಸಾಧ್ಯವಾದೀತೆ? ಇತ್ತೀಚಿನ ದಿನಗಳಲ್ಲಿ ನಮ್ಮ ನಮ್ಮ ಮನೆಯಲ್ಲಿ, ನಮ್ಮ ಅಕ್ಕ ಪಕ್ಕದ ಮನೆಗಳಲ್ಲಿ, ನೆ೦ಟರಿಷ್ಟರ ಮನೆಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದರೆ ಆಗ ತಿಳಿಯುತ್ತದೆ, ನಾವು ಹಿರಿಯರಿಗೆ ನೀಡುತ್ತಿರುವ ಅಗೌರವ, ಹಿರಿಯರ ವಿಷಯದಲ್ಲಿ ತೋರುತ್ತಿರುವ ಅಸಡ್ದೆ, , ವೃದ್ಧ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ವಿಚಾರ,  ಹಿರಿಯರಲ್ಲಿ ನಮಗಿರುವ ನಿರ್ಲಕ್ಷ್ಯವನ್ನು   ಗಮನಿಸಿದರೆ ನಮ್ಮ ಭಕ್ತಿ, ಆಚರಣೆ ಕೇವಲ ದೇವಸ್ಥಾನ ಹಾಗೂ ದೇವರ ಮನೆಗೆ ಮಾತ್ರ ಸಿಮಿತವಾಗಿದೆಯೇನೋ ಎನ್ನುವ ಪ್ರಶ್ನೆ  ಮೂಡದಿರುವುದಿಲ್ಲ. 'ವರ್ಷಂ  ಪ್ರತಿ ದುರಾಚಾರ ಮಾಡಿ ಉಪವಾಸ ಗೈದರೆ, ಮನದಲ್ಲಿ ಕಲ್ಮಷಗಳನ್ನು ಗುಡ್ಡೆಹಾಕಿ ಕೊಂಡು ಪುಣ್ಯ ನದಿಯಲ್ಲಿ ಮಿಂದರೆ ಪಾಪ ದೂರವಾಗುವುದೇ?' ಎನ್ನುತ್ತಾರೆ ದಾಸವರೇಣ್ಯರು.  ಎಂದೋ ಒಂದು ದಿನದ ಆಚರಣೆಯಿಂದ ನಮ್ಮ ಪಾಪದ ಕೊಡದಲ್ಲಿನ  ಕೆಲ ಹನಿಗಳು ಬರಿದಾಗಬಹುದು.  ಆದರೆ ದಿನ ನಿತ್ಯ ಗಂಟು ಹಾಕಿಕೊಂಡ ಪಾಪದ ಕೊಡಗಳು ಕರಗಲು ಎಷ್ಟು ಸಮಯ ಬೇಕಾಗಬಹುದು?  
 

                              ನಮ್ಮ ಪುರಾಣ  ಪುರುಷರನ್ನು, ಅಧ್ಯಾತ್ಮ ಜೀವಿಗಳನ್ನು, ಸಂತವರೇಣ್ಯರ ಜೀವನ ಚರಿತ್ರೆಯನ್ನು  ನೋಡುವಾಗ ನಮಗೆ ಸ್ಪಷ್ಟವಾದ ಒಂದು ವಿಚಾರ ಅರಿವಾಗುತ್ತದೆ. ಕನಕದಾಸರ ಯಾವುದೋ ಒಂದು ದಿನದ ಕರೆಗೆ ಶ್ರೀ ಕೃಷ್ಟ  ಒಲಿದು ದರ್ಶನ ನೀಡಲಿಲ್ಲ. ಪುರಂದರದಾಸರ ಯಾವುದೋ ಒಂದು ರಚನೆಯನ್ನು ಮಾಡಿ  ಹಾಡಿದ ಕೀತ೯ನೆಗೆ ವಿಠಲ ಒಲಿಯಲಿಲ್ಲ. ಪ್ರಹ್ಲಾದನ ಒಂದು ದಿನದ ಕೂಗಿಗೆ ನರಸಿಂಹ ಪ್ರತ್ಯಕ್ಷನಾಗಿ ಬಿಡಲಿಲ್ಲ. ಆದರೆ,  ಈ ಪುಣ್ಯಪುರುಷರ ನಿಷ್ಕಾಮ ನಿರಂತರ ಭಕ್ತಿಗೆ, ನುಡಿದ೦ತೆ ನಡೆದ ಅವರ ಆಚರಣೆಗೆ, ದೇವರು ಎಲ್ಲಲ್ಲೂ ನೆಲೆಸಿಯೇ ಇದ್ದಾನೆ ಎಂಬ ದೃಢವಾದ ನಂಬಿಕೆಗೆ ಮತ್ತು  ವಿಶ್ವಾಸಕ್ಕೆ ಭಗವಂತ ಒಲಿದು ಧರೆಗಿಳಿದು ಬಂದ.  'ಕೂಗಿ ಕರೆದರೆ,  ಓ ಎನ್ನನ್ನೇ ಹರಿಯು?'  ಎಂದು ಪ್ರಶ್ನಿಸುವ ಅಧಿಕಾರ ಇರುವುದು  ಇಂತಹ ಭಕ್ತಗಣ್ಯರಿಗೆ  ಮಾತ್ರ.
   
                              ಪ್ರತಿ ದಿನವೂ ಭಗವಂತನ ನಾಮ ಸ್ಮರಣೆಯಲ್ಲಿ ಮೈಮರೆಯುತ್ತಾ ಕಾಯ, ವಾಚಾ, ಮನಸಾ ತಂದೆ, ತಾಯಿ, ಗುರು ಹಿರಿಯರ  ಸೇವೆ, ಅಶಕ್ತರು,ಅಬಲರು, ವೃದ್ಧರಲ್ಲಿ ಕಾರುಣ್ಯ , ಕೆಲಸದಲ್ಲಿ ಶ್ರದ್ಧೆ,  ಸದಾಚಾರ, ಭ್ರಷ್ಟಾಚಾರರಹಿತ ಜೀವನ, ಪರಧನಗಳ ಕುರಿತು ವೈರಾಗ್ಯವನ್ನು ಪಾಲಿಸಿದಾಗಲೇ  ಪಾಪ ಪರಿಹಾರ, ಮನಸ್ಸಿಗೆ ಶಾಂತಿ-ನೆಮ್ಮದಿ.ಇದ್ದೂ ಇರದಂತೆ, ಮಾಡಿಯೂ ಮಾಡದಂತೆ ಇರುವುದೇ   ದಿನ ನಿತ್ಯದ ಸಾಧನೆ.