ಸಾಧನೆಯ ಮಾರ್ಗ

ಸಾಧನೆಯ ಮಾರ್ಗ

                   ಈ ಮನಸ್ಸಿನ ಸ್ವಭಾವವನ್ನು ಅಭ್ಯಾಸದ ಮೂಲಕ ಬದಲಾಯಿಸಲು ಸಾಧ್ಯವಿದೆ. ಅಭ್ಯಾಸದ ವಿಷಯವಾಗಿ ಶ್ರೀ ರಾಮಕೃಷ್ಣರು ಹೀಗೆ ಹೇಳುತ್ತಾರೆ. "ಬಿದಿರಿನಿಂದ ತಯಾರಿಸಿದ ಬೆಂಕಿಯು ಬೇಗ ಆರಿಹೋಗುತ್ತದೆ. ಅದಕ್ಕೆ ಮತ್ತೆ ಮತ್ತೆ ಬಿದಿರನ್ನು ಹಾಕುತ್ತಲೇ ಇರಬೇಕು. ಹೀಗೆಯೇ ನಮ್ಮ ಅಭ್ಯಾಸವೂ ಕೂಡಾ! ನಿರಂತರವಾದ ಅಭ್ಯಾಸದಿಂದ ನಮ್ಮ ಮನಸ್ಸಿನ ಸ್ವರೂಪವೇ ಬದಲಾಗಿಬಿಡುತ್ತದೆ. ಆಗ ಮನಸ್ಸು ತನ್ನ ಒಳಗಿನ ಶಕ್ತಿಯಿಂದಲೇ ಕೆಲಸಮಾಡುತ್ತದೆ. ಆಗ ಭಗವಂತನೇ ಒಳಗಿನಿಂದ ಸ್ಪೂತಿ೯ಯನ್ನು ಇಂಧನರೂಪವಾಗಿ ಒದಗಿಸುತ್ತಾನೆ." 
                  ಭಗವಚ್ಚಿ೦ತನೆಯ ಸಾಧನೆಯೂ ಹೀಗೆಯೇ ನಿರಂತರವಾದಾಗ ಅದು ಅನನ್ಯವಾಗುತ್ತದೆ. ಶ್ರೀರಾಮಕೃಷ್ಣರು ಹೇಳುತ್ತಾರೆ ಸಾಧನೆಗಳಲ್ಲಿ 3 ವಿಧಗಳಿವೆ. 
                 (1) ಹಕ್ಕಿಯಂತೆ (2)ಮಂಗನಂತೆ  (3)ಇರುವೆಯಂತೆ 
                  ಹಕ್ಕಿಯು ಹಣ್ಣಿನವಾಸನೆ ಹಿಡಿದು ಒಂದು  ಕೊಂಬೆಯ ಮೇಲೆ ಕೂತು ಹಣ್ಣುನ್ನು ಕೊಕ್ಕಿನಿ೦ದ ಕುಕ್ಕತೊಡಗುತ್ತದೆ. ಆದರೆ, ಈ ಹಣ್ಣು ಕೊಕ್ಕಿನ ಅಲುಗಾಟದಿಂದ ಹಣ್ಣು ಪೂರ್ಣವಾಗಿ ಹಕ್ಕಿಗೆ ದೊರೆಯದೇ ಕೆಳಗೆ ಬಿದ್ದು ಬಿಡುತ್ತದೆ.ಇದನ್ನು ಶುಕ ಮಾರ್ಗ ಎನ್ನುತ್ತಾರೆ.  ಹೀಗೆಯೇ ಸಾಧಕರು ಪ್ರಾರಂಭದಲ್ಲಿ ಸಾಧನೆಗೆ ಆತುರ ತೋರುತ್ತಾರೆ. ಬೇಗ ಬೇಗ ಕಲಿತುಬಿಡಲು ಪ್ರಾರಂಭಿಸುತ್ತಾರೆ. ಇದರ ಪರಿಣಾಮವಾಗಿ ಸಾಧನೋತ್ಸಾಹ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ. ಒಂದು ದಿನ ಸಾಧನೆ ನಿಂತುಹೋಗುತ್ತದೆ. 
                  ಇನ್ನು ಮಂಗನ ವಿಚಾರದಲ್ಲಿ ಹೇಳುವುದಾದರೆ, ತೋಟಕ್ಕೆ ನುಗ್ಗಿದ ಮಂಗ ಒಂದು ಮರದಿಂದ ಇನ್ನೊ೦ದು ಮರಕ್ಕೆ ಹಾರುತ್ತಾ ಹಣ್ಣನ್ನು ಕಚ್ಚಿ ತಿನ್ನುತ್ತಾ ಇರುವಾಗ, ಇನ್ನೊಂದು ಹಣ್ಣನ್ನು  ಕಂಡೊಡನೇ ತನ್ನ ಕೈಯಲ್ಲಿರುವ ಹಣ್ಣನ್ನು ಬಿಸಾಡುತ್ತದೆ. ಹೀಗೆ ಹಣ್ಣಿನಿಂದ ಹಣ್ಣಿಗೆ ಆಸೆಪಡುತ್ತಾ ಒಂದೂ ಹಣ್ಣನ್ನು ಸರಿಯಾಗಿ ತಿನ್ನುವುದಿಲ್ಲ. ಇದನ್ನು ಕಪಿ ಮಾರ್ಗ.  ಹೀಗೆಯೇ ಕೆಲವು ಸಾಧಕರು ಅಧ್ಯಾತ್ಮಿಕ ಆದಶ೯ವನ್ನು ಗಟ್ಟಿಯಾಗಿ ಹಿಡಿದುಕೊಳ್ಳದೆ ಒಂದು ಆದಶ೯ದಿಂದ ಮತ್ತೊ೦ದಕ್ಕೆ ಜಿಗಿಯುತ್ತಾ ಯಾವ ಸಾಧನೆಯನ್ನೂ ಸರಿಯಾಗಿ ಮಾಡದೇ ಇರುವ ಕಾರಣ, ಇವರ  ಸಾಧನಾಪಥ ಸ್ಥಿರವಾಗಿ ನಿಲ್ಲುವುದಕ್ಕೆ ಸಾಧ್ಯವಾಗುವುದಿಲ್ಲ. 
                  ಇರುವೆ ಒಂದು ಸಣ್ಣ ಕೀಟ. ಇದು  ನಿಧಾನವಾಗಿ ಸ್ಥಿರವಾಗಿ ತನ್ನ ಆಹಾರ ಪದಾಥ೯ವನ್ನು ಬಾಯಲ್ಲಿ ಕಚ್ಚಿಕೊಂಡು ತನ್ನ ಗೂಡಿಗೆ ಹೋಗಿ,ಅಲ್ಲಿ ತಾಳ್ಮೆಯಿಂದ ಅದನ್ನು ತಿಂದು ಸುಖಿಸುತ್ತದೆ. ಇದಕ್ಕೆ ಯಾವುದೇ ರೀತಿಯ ಆತುರವಿಲ್ಲ. ತನ್ನ ಶಕ್ತಿ ಸಾಮಥ್ಯ೯ದ ಅರಿವಿದೆ. ತಾಳ್ಮೆಯಲ್ಲಿ ನಂಬಿಕೆ ವಿಶ್ವಾಸವಿದೆ.ಇದನ್ನು ಪಿಪೀಲಿಕಾ  ಮಾರ್ಗ ಎನ್ನುತ್ತಾರೆ.   ಸಾಧಕನಿಗೆ ಈ  ಮಾರ್ಗ ನಿಧಾನವೆನಿಸಿದರೂ ತನ್ನ ಗುರಿಮುಟ್ಟುವ ಖಚಿತತೆ ಇದ್ದೆ ಇರುತ್ತದೆ.  
                  ಸಾಧಕನಿಗೆ ಪಿಪೀಲಿಕಾ ಮಾರ್ಗ ನಿಧಾನವೆನಿಸಿದರೂ ಇಂತಹ ಸಾಧನೆಯಿಂದ ಅಂತರಂಗದ ದರ್ಶನ ಸಾಧ್ಯ. 

 

Comments

Submitted by kavinagaraj Tue, 07/05/2016 - 15:21

ಸಾಧನೆಗೆ ಸಾತತ್ಯತೆ ಮತ್ತು ಅಚಂಚಲತೆ ಅಗತ್ಯವೆಂಬುದರ ಸರಳ ನಿರೂಪಣೆ! ಧನ್ಯವಾದಗಳು, ಪ್ರಕಾಶರೇ.