ಎಂಕನ ಜಾತ್ರೆ(ಕಥೆ)

ಎಂಕನ ಜಾತ್ರೆ(ಕಥೆ)

“ಅವ್ವೋ ಬಾಯಿಲ್ಲಿ.”
” ಏನ್ ಮಗ?”
“ಅಲ್ಲ ಮತ್ತೆ ಮತ್ತೆ ನೀ ಆ ದಿನ ನನ್ನ ನಮ್ಮೂರ ಜಾತ್ರೆಗೆ ಕರಕಂಡ ಹೋಯ್ತೀನಿ ಅಂತ ಹೇಳಿರಲಿಲ್ವಾ?”
“ಹೂಂ ಹೇಳಿದ್ದೆ. ಏನೀಗಾ?”
“ಅಲ್ಲ ಅವ್ವ ನನಗೆ ಹೋಗಬೇಕು ಅಂತ ಬೋ ಆಸೆ ಆಗದೆ. ಮತ್ತೆ ಮತ್ತೆ ನಂಜೀನೂ ಬತ್ತೀನಿ ಅಂತ ಅವಳೆ. ಅವಳ್ನೂ ಕರಕಂಡ ಹೋಗಾನಾ? ”
“ಏಯ್ ಆ ಹೆಣ್ಮಗ ನಮ್ ಜತಿಗೆ ಬತ್ತೀನಿ ಅಂದ್ರೆ ಅವರಪ್ಪ ಅವ್ವ ಬಿಟತಾರೇನ್ಲಾ?”
” ಒಸಿ ನೀನೆ ಕೇಳವ್ವೋ. ನೀ ಕೇಳ್ದ್ರೆ ಇಲ್ಲ ಅನ್ನಾಕಿಲ್ಲ.”
“ಆಯ್ತು ಕಣಲಾ. ಈಗ ಮನೀಕ. ಹೊತ್ತಾರೆ ಅವರ ಮನಿ ತಾವ ಹೋಯ್ಯತೀನಿ. ಹಂಗೆ ಅವರವ್ವನ್ ತಾವ ವಿಚಾರಿಸ್ಕಂಡ ಬತೀನಿ. ಮಗಾ ನೀ ಮನೀಕ ಮಗಾ.”
ಅಯ್ಯೋ ಈ ಮಗೀಗ್ಯಾಕೆ ಈ ಪಾಟಿ ಜಾತ್ರೆಗೆ ಹೋಗೊ ಹುಚ್ಚು ಅಂತೀನಿ. ನಾ ಬಾಯ್ ತಪ್ಪಿ ಹೇಳ್ಬಿಟ್ಟೆ. ಅದೇ ಹಿಡಕಂಡಬಿಟವನಲ್ಲ; ಜಾತ್ರೆ ಅಂದರೆ ಸುಮ್ಕೆ ಆಯ್ತದಾ. ಅದೆಷ್ಟು ದೂರ ಐತೆ. ಆ ಪಾಟಿ ದೂರ ಹೋಯ್ ಬರಬೇಕು ಅಂದ್ರೆ ಅದೆಷ್ಟು ದುಡ್ಡು ಕಾಸು ಬಸ್ಸಿಗೆ ತಿಕೀಟು. ನಂಜೀನೂ ಕರಕಂಡ ಹೋಗಾವ ಅಂತವ್ನೆ. ನಮ್ಮಂತ ಬಡವರಿಗೆ ಈ ಬಸ್ಸ್ನಾಗೆ ವಷ೯ಕ್ಕೊಂದ ಕಿತಾ ಊರಿಗೋಗದೆ ತ್ರಾಸ ಆಗೈತೆ. ಅದ್ಯಾಕೆ ನಮ್ಮ ಸಿದ್ದಪ್ಪಣ್ಣಾವರು ಈ ಪಾಟಿ ತಿಕೀಟು ಜಾಸ್ತಿ ಮಾಡೌರೊ ಏನೊ. ಅಲ್ಲ ಅಕ್ಕಿ ಒಂದು ರೂಪಾಯಿಗೆ ಕೆಜಿ ಕೊಟ್ಟರೆ ಸಾಕಾ? ಒಸಿ ನಮ್ಮಂತ ಊರ ಬಿಟ್ಟ ಬಂದಿರೊ ಹೈಕ್ಳೀಗೆ ಊರಿಗೋಯ್ಯ ಬರ್ಲಿ ಅಂತ ಒಂದು ಕಾಯ್ಡ ಗೀಯ್ಡ ಕೊಡಬಾರದಾ? ನಾವೇನು ಸದಾ ಹೋಯ್ತೀವಾ?
ಇಲ್ಲಿ ಪ್ಯಾಟೆ ಜನ ಯಾವಾಗಂದ್ರ ಆವಾಗ ಸುಯ್ಯ ಅಂತ ಕಾರ ಹತ್ತಕಂಡ ಹೋಯ್ಯ್ತಾವ್ವರೆ…. ಅದೆ ನಾ ಮುಸುರಿ ತಿಕ್ಕಾಕ ಹೋಯ್ತೀನಲ್ಲ ಅವರ ಮನಿಯಾಗೆ ಎಲ್ಡೇಲ್ಡು ಕಾರು ಮಡಿಕಂಡವರೆ. ಗಂಡಂಗೊಂದು. ಹೆಡ್ತೀಗೊಂದು. ಇಲ್ಕಾಣಿ ಕಾರ್ ಹ್ಯಾಂಗ ಪಳ ಪಳ ಹೊಳಿತಿತ್. ದಿನಾ ನನ್ನ ಮಗನ್ ತಾವ ಕಾರು ತೊಳಿ ಅಂತಿತ್ರ. ಅವ ಅದೇನೊ ನೊರಿ ನೊರಿ ಮಾಡ್ಕಂಡ ತೊಳಿತ್ತಾ‌. ಅಯ್ಯಮ್ಮೀ ನಾವ್ ಮೈನರೂ ಅಷ್ಟು ಸಂದಾಕಿ ತೊಳ್ಕಂತೀವೊ ಇಲ್ವೊ. ಆದರೆ ಅವಂಗ ಕಾಸು ಕೊಂಡ್ತೀರು ಆಯ್ತಾ. ನಾಳಿಗೊಂದಪ ಅಮ್ಮನವರ್ನ ಕೇಳಕಿತ್ತ್. ಮಗನ ಕರಕಂಡ ಜಾತ್ರೀಗ ಹೋಯ್ಯಬೇಕು. ಒಸಿ ಕಾಸ್ ಕೊಡ್ತ್ರಾ ಅಂತ. ಅಲ್ಲ, ಅಮ್ಮ ಏನ್ ಇಲ್ಲ ಅನ್ನಕಿಲ್ಲ: ಆದ್ರೆ ಅಪ್ಪವರು ಏನಂತ್ರೊ ಕಾಣೆ. ಅದಕೆ ಅವರ ತಾವ ಮಗೀನ್ನೆ ಒಸಿ ನೀನೆ ಕೇಳ್ಕಂಬಾ ಹೇಳಕಿತ್ತ್.
ಯಾಕೊ ನಿದ್ದೀನೆ ಬತ್ತಿಲ್ಲ. ಹೊಳ್ಳಿ ಹೊಳ್ಳಿ ಸಾಕಾಯ್ತ್.
“ಎಂಕ ಎಂಕ ಏಳ್ಲಾ. ಏನಿವತ್ತ್ ಈಟೊಂದು ಮನೀಕಂಡಿದಿ. ಹೊತಾರೆ ಅಪ್ಪಾವ್ರ ಮನೀಕೆ ಹೋಗಾಕಿಲ್ವಾ. ಎದ್ದೇಳು ಬಿರೀನೆ. ಅವರ್ ಕಾರ್ ತೊಳಿ ಹೋಗ ಮಗ. ಹಂಗೆ ಊರ ಜಾತ್ರೀಗ ಹೋಯ್ತೀನಿ ಕಾಸು ಒಸಿ ಕೊಡ್ತ್ರಾ ಕೇಣ ಮಗಾ. ಹೊಸ ಬಟ್ಟಿ ತಕಣಕಿತ್ತು. ಚಡ್ಡಿ ಎಲ್ಲ ಹರಿದೋಗೈತೆ ಅಂತ ಹೇಳ್ ಮಗಾ. ಒಸಿ ಮಕಕ್ಕೆ ನೀರಾಕ್ಕಂಡು ಹೋಗು. ಹಂಗೆ ಮಡಕ್ಯಾಗೆ ತಣ್ಗಿನ್ ನೀರೈತೆ ಕುಡಿ ಮಗ. ಎದ್ದೇಳು.”
“ಅವ್ವ ಅವ್ವ ಮತ್ತೆ ಮತ್ತೆ ಜಾತ್ರೀಗೆ ಕರಕಂಡ ಹೋಯ್ತೀಯಲ್ಲ.‌ ”
” ಹೂ ಕಣ್ ಮಗ. ನಾ ಏನ್ ಇಲ್ಲ ಅನ್ನ. ಇದೇನ್ ಈ ಪಾಟಿ ಕೇಳ್ತೀಯ ಹೊತಾರೆ ಹೊತಾರೆ. ನಡಿ ಬಿರೀನೆ. ನಾನಿನ್ನೂ ಎಲ್ಡ ಮನಿ ಕಸಬು ಮಾಡಕ್ಕಿತ್ತು. ಮಗ ನಾನು ಹೋಯ್ತೀನಿ ಹುಸಾರು ಬಾಗಿಲ್ ಹಾಯ್ಕಂಡು ಹೋಗು ಆಯ್ತಾ. ಅಲ್ಲ ನನ್ನ ಎಲಿ ಸಂಚಿ ಎಲ್ಲಿ ಮಡಗದಿ ಕಾಣಾಕಿಲ್ವಲ್ಲ. ನೀ ಏನರ ನೋಡ್ದೇನ್ಲಾ? ”
“ಹೂ ಕಣವ್ವೋ, ನೀ ಮಕ್ಕಂಡ ಮ್ಯಾಗೆ ಅಪ್ಪಯ್ಯ ಹಿಡಕ್ಕಂಡಾಂಗಿತ್ತು. ನಂಗೊಂದಪ ಎಚ್ಚರಾಯ್ತಾ ಆಗ ಕಂಡೆ.”
” ಹೌದೆನ್ಲಾ. ನಾ ನಿನ್ನ ತಾವ ಮಾತಾಡ್ತಾ ಎತ್ ಮಡಗದ ಮರತ್ನಾ. ಈಗ್ ನೋಡ್ಲಾ ಆ ಹೆಗಡೀರ ಮನ್ಯಾಗ ಮಗೀನ ಜಳಕ ಮಾಡ್ಸಾಕ್ ಅಂತ ಹೋಗಿದ್ನಾ, ನೂರ್ ರೂಪಾಯಿ ಲೋಟ ಕೊಟ್ಟಿದ್ರ ಕಣ್ಲಾ. ಈ ಮೂದೇವಿ ಎತ್ತಾಕ್ಕಂಡ ಹೋದ್ನಾ ಅಂತ. ಅಯ್ಯೋ ದ್ಯಾವರೆ, ಮಗಿ ಜಾತ್ರೆ ಜಾತ್ರೆ ಅಂತ ಬಡಕ್ಕಂತ. ಇವ್ನ ಹೀಂಗ ಮಾಡಿದ್ರೆ ನಾ ಹ್ಯಾಂಗ ಬಾಳ್ವಿ ಮಾಡಾದು. ಆ ಶೆರಿ ಅಂಗಡಿಗೆ ಆ ಪಾಟಿ ರೊಕ್ಕಾ ಹಾಯ್ತಾನಲ್ಲ. ಈ ಸಿದ್ದಪ್ಪಣ್ಣವರು ನಮ್ಮಂತವರ ಕಷ್ಟ ಒಸಿ ಬಂದ ನೋಡಬಾರದಾ? ಶೆರಿ ಅಂಗಡಿ ಮುಚ್ಚಬಾರದಾ? ಆ ಮಾದೇಸನ ಜಾತ್ಯ್ರಾಗ ಹರಕೆ ಹೊತ್ತ್ಕಂಡ ಹುಟ್ಟಿದ ಮಗಾ ಇವನು‌. ಇವನ ಚಂದಾಕೆ ನೋಡ್ಕಂಡಿಲ್ಲ ಅಂದ್ರೆ ಆ ಮಾದೇಸಾ ಮೆಚ್ಚತಾನಾ‌. ಶಾಪ ಹಾಕಾಕಿಲ್ವ. ”
“ಅವ್ವೋ ಇಕ ನಿನ್ನ ಸಂಚಿ. ಆ ಗಿಳಿ ಗೂಟದಾಗ ನೇತಾಕ್ಕಂಡಿತ್ತ್. ಅವ್ವೋ ಕಾಸು ಕೊಡವ್ವೋ ಚಾಕೀಟು ಬೇಕವ್ವೋ. ಹೋಯ್ತಾ ತಿಂದ್ಕಂಡ ಹೋಯ್ತೀನಿ.”
“ವಸಿ ತಡಿಲಾ ಕಾಸಿತ್ತಾ ಕಾಣ್ತೆ. ಈಕಾ ಎಲ್ಡು ರೂಪಾಯಿ. ತಕ.”
“ಅವ್ವೊ ಈ ಕಾಸಿಗೆ ಬಾರಿನ ಚಾಕೀಟು ಬರಾಂಗಿಲ್ಲ. ಒಂದು ಲೋಟ ಕೊಡು ಮತ್ತೆ.”
“ಅದೆಂತ ಬಾರೊ. ತಕ ಹಿಡಿ. ಹಂಗೆ ಅಪ್ಪವರ ಮನಿಲಿ ನಾಷ್ಟಾ ಮಾಡಿ ಇಸ್ಕೂಲಿಗೆ ಹೋಗು ಬಿರೀನೆ. ಸಂದಾಗಿ ಕಲಿ ಮಗ. ಅದೇನೊ ಇನಿಪಾರಂ ಯಾವಾಗ ಕೊಟ್ಟೀರು. ಸಾಲಿ ಶುರುವಾಗಿ ಬೋ ದಿಸಾತು.”
“ಗೊತ್ತಿಲ್ಲ ಕಣವ್ವೊ.” ಸ್ಕೂಲ್ ಬ್ಯಾಗ್ ಹೆಗಲಿಗೆ ಏರಿಸಿ ಎಂಕನ ಸವಾರಿ ಹೊರಟಿತು ಅಪ್ಪವರ ಮನೆಗೆ.
“ವೆಂಕಟೇಶಾ ಬಂದಾ ಬಾ. ಬೇಗ ಬೇಗ ಕಾರು ತೊಳಿಯಪ್ಪ. ಬೇಗ ಹೋಗಬೇಕು”.
“ಹೂ .” ಅದೆಷ್ಟು ಪಿರೂತಿಯಿಂದ ನನ್ನ ಹೆಸರು ಕರಿತವ್ರೆ ಅಪ್ಪವರು. ಅವ್ವನೂ ಇದಾಳೆ ; ಎಂಕ ಎಂಕ ಅಂತವ್ಳೆ. ಅವ್ವಂಗೆ ಒಸಿ ಹೇಳಬೇಕು. ಸರಿಯಾಗಿ ಕರಿ ಅಂತ‌. ಇವರ ಮನಿಯಾಗೆ ಇದ್ರೆ ಅದೆಷ್ಟು ಖುಷಿ ಆಯ್ತದೆ. ಎಷ್ಟು ದೊಡ್ಡ ಮನಿ. ನೆಲ ಎಲ್ಲ ಪಳ ಪಳ ಹೊಳಿತೈತೆ. ಅಪ್ಪವರ ಮಕ್ಕಳು ಅದೆಷ್ಟು ಚಂದ ಅಂಗಿ ಹಾಕ್ಕಂತವ್ರೆ. ನಂಗೂ ಉಗಾದಿಗೆ ಬಟ್ಟೆ ಕೊಡಿಸ್ತ್ರಲ್ವ. ನಂಗೀದಪ ಚಡ್ಡಿ ಬ್ಯಾಡಾ ಪಾಂಟು ಕೊಡ್ಸ್ತ್ರಾ ಕೇಳ್ಕಿತ್ತ್. ಉದ್ದ ತೋಳಿನ ಅಂಗಿ ಹಾಕ್ಕಂಬೇಕು. ಜಾತ್ರೀಗೆ ಹೋಗೊ ಮುಂದ ಹಾಕ್ಕಬೇಕು.
ಎಂಕನ ತಲೆಯಲ್ಲಿ ಯೋಚನಾ ಲಹರಿಗೆ ಕೊನೆಯೇ ಇಲ್ಲ. ಈ ಕಡೆ ಅಪ್ಪವರು ಕಾರು ಹತ್ತಿ ಹೊರಟೇ ಬಿಟ್ಟರು. ಎಂಕ ನಾಷ್ಟಾ ಮಾಡಿ ಹೊರಗೆ ಬಂದು ನೋಡುತ್ತಾನೆ ಅಪ್ಪವರು ಇಲ್ಲ ಅವರ ಕಾರೂ ಇಲ್ಲ.
” ಅಯ್ಯೋ, ಎಂತ ಕೆಲಸ ಆಯ್ತವ್ವೊ. ನೀ ಕೇಣು ಅಂದಿದ್ದು ಕೇಣಲಿಲ್ಲ. ಇನ್ ನಾಳೀಕೆ ಆಯ್ತ್. ಬಿರಿನೆ ಸಾಲಿಗೆ ಹೋಗುವಾ. ನಂಜಿಗೂ ಹೇಳಬೇಕು ಜಾತ್ರಿಗೋಗೊ ಸುದ್ದಿ. ”
ರೊಯ್.‌..‌‌‌‌… ಎಂಕನ ಕಾಲ್ ಗಾಡಿ ಹೊರಟಿತು ಸೈಕಲ್ ಸ್ಟೈಲಲ್ಲಿ ಸ್ಪೀಡಾಗಿ ಜಾತ್ರೆ ಅಮಲಿನಲ್ಲಿ.
ಸ್ಕೂಲಲ್ಲಿ ಪಾಠ ಮಾಡುತ್ತಿರುವಾಗಲೂ ವೆಂಕಟೇಶನ ಮನಸ್ಸು ಏನೇನೊ ಜಾತ್ರೆ ಕನಸು ಕಾಣುತ್ತಿತ್ತು. ಊರಿನ ಎಲ್ಲರ ನೆನಪು ತಾನು ಆಟವಾಡುತ್ತಿದ್ದ ಸಂಗಡಿಗರ ನೆನಪು, ಅಪ್ಪಾವರ ಮನೆ ಟೀವಿಯಲ್ಲಿ ಅದ್ಯಾವುದೊ ಊರಿನ ಜಾತ್ರೆ ನೋಡುವಾಗ ತೇರು ಎಳೆಯೋದು, ಅಂಗಡಿ ಮುಂಗಟ್ಟು, ದೊಡ್ಡ ದೊಡ್ಡ ತೊಟ್ಟಿಲು ತಿರುಗೋದು, ಆಟದ ಸಾಮಾನುಗಳ ಅಂಗಡಿ ಸಾಲು, ಬೆಂಡು ಬತ್ತಾಸು ,ಸಿಹಿ ತಿಂಡಿಗಳು ಒಂದಾ ಎರಡಾ. ತನ್ನಷ್ಟಕ್ಕೆ ನಗುತ್ತಿರುವುದು ನೋಡಿ ಅವನ ಟೀಚರ ಕೇಳೇ ಬಿಟ್ಟರು‌
” ವೆಂಕಟೇಶಾ ಅದ್ಯಾಕೊ ಒಬ್ಬನೆ ನಗುತ್ತಿದ್ದಿಯಾ?”
ಇವನು ಎದ್ದು ನಿಂತು ಒಂದೇ ಉಸುರಿಗೆ “ನಾನು ಜಾತ್ರೆಗೆ ಹೊಯ್ತೀನಿ.” ಗೊಳ್ಳೆಂದು ಇಡೀ ಕ್ಲಾಸವರೆಲ್ಲ ನಗಲು ಶರುಮಾಡಿದರು. ಅವನು ಹೇಳಿದ ರೀತಿ ಹಾಗಿತ್ತು.
ಈ ಕಡೆ ಎಂಕನ ತಾಯಿ ನಾಗಿ ನಂಜಿ ಮನೆಗೆ ಬರುತ್ತಾಳೆ. ಬೆಳಿಗ್ಗೆನೆ ಹೋದರೆ ಅವಳ ಅವ್ವ ಸಿಗುತ್ತಾಳೆ. ಮಾತಾಡಿಕೊಂಡು ಜಾತ್ರೆಗೆ ಹೋಗೊ ವಿಷಯ ಹೇಳೋಣ. ನಂಜೀನ ಕಳುಹಿಸುತ್ತಾರೊ ಏನು ; ಅದನ್ನೂ ತಿಳದುಕೊಂಡೆ ಹೋಗೋಣ ಅಂತ. ಇನ್ನೇನು ಅವರ ಮನೆ ಬಾಗಿಲ ಹತ್ತಿರ ಹೋಗೋದಕ್ಕೂ ನಂಜಿ ಅವ್ವ ಕೆಲಸಕ್ಕೆ ಹೊರಟಿದ್ದಳು. ಇವಳನ್ನು ನೋಡಿದ ಅವಳೇ ಮಾತಾಡಿಸುತ್ತಾಳೆ.
“ಏನ್ ನಾಗಿ ಹೊತಾರೆ ಹೊತಾರೆ ನಮ್ಮನಿ ತಾವ್ ಬಂದೆ? ಏನ್ ಇವತ್ತು ಕಸಬಿಲ್ವಾ?”
“ಐತೆ ಕಣಮ್ಮ. ಒಸಿ ಎನೊ ಮಾತಾಡಕಿತ್ತ್. ಅದಕೆ ಬಿರೀನೆ ಬಂದೆ‌”
“ಹೂ ಬಾ ಇಲ್ಲೆ ಕಟ್ಟೀ ಮ್ಯಾಲೆ ಕೂಕಂಡಿ ಮಾತಾಡುವಾ. ಬಾ ಕೂತ್ಕ. ತಕ ಕೌಳ ಹಾಕು‌.”
“ತತ್ತಾ , ನನ್ನ ಎಜಮಾನ ರಾತ್ರಿ ನನ್ನ ಕವಳದ ಸಂಚಿ ತಡಕಾಡಿ ಎಲ್ಲ ಬರಕಾತ್ ಮಾಡಿ ಹೋಯ್ದಾ. ಎಂತಿಲ್ಲೆ. ಬರೀ ಅಡಿಕೊಂದಿತ್ತು. ಬಾಯೆಲ್ಲ ಸಪ್ಪಿ. ”
ವೀಳ್ಯೆದೆಲೆ ತೊಟ್ಟು ಮುರೀತಾ ಸುಣ್ಣ ಸವರಿ ಗೋಟಡಿಕೆ ಪುಡಿ ಹಾಕಿ ಬಾಯಿಗಿಟ್ಟ ಕವಳಕ್ಕೆ ಇನ್ನೊಂದು ಚಿಟಿಕೆ ಸುಣ್ ಬಾಯಿಗೆ ಹಾರಿಸಿ ಜಗಿದು ಮೂಲೆಯಲ್ಲಿ ಹೋಗಿ ಕೆಂಪನೆಯ ಪಿಚಕಾರಿ ಹಾರಿಸಿ ಸಂತೃಪ್ತಿಯಿಂದ ಬಂದು ಕೂತ ನಾಗಿ ಹೇಳುತ್ತಾಳೆ ತಾನು ಇವಳ ಮಗಳಿಗೆ ಜಾತ್ರೆ ತೋರಿಸೊ ಉಮೇದಿಯಲ್ಲಿ.
“ನೋಡವ್ವಿ ನಾನು ಎಂಕ ಇಬ್ಬಳಾರೂ ಈ ಪಟ ಜಾತ್ರೀ ಹೋಗಾಂವಾ ಅಂತ ತೀಮಾ೯ನ ಮಾಡ್ಕಂಡುಬುಟಿವಿ. ಒಸಿ ನಿನ್ನ ಮಗೀನು ನಮ್ಮ ಜತಿ ಕಳಿಸು. ಎಂಕ ಒಂದೇ ಕಿತ ಜಾತ್ರೀಗೋಗವ್ವ ಅಂತವ್ನೆ. ನಂಜಿನೂ ಬರ್ಲಿ ಕೇಳ್ ಮತ್ತೆ ಅಂದವ್ನೆ. ನಿಂದೇನ್ ತೀಮಾ೯ನ ಹೇಳಬಿಡು ಮತ್ತೆ ನಾ ಚಂಜಿ ಮುಂದ ಬತೀನಿ. ಬರ್ಲಾ?”
“ಇರವ್ವೊ, ನಮ್ಮನೀವ್ರ ಎಲ್ಲ್ ಒಪ್ತ್ರು. ಬ್ಯಾಡ್ ಬಿಡವ್ವ್ವೋ. ಉಗಾದಿ ಹಬ್ಬ ಬೇರೆ ಹತ್ರ ಬತ್ತಾ ಐತೆ. ಇರೊ ಒಬ್ಬ ಹೆಣ್ಣ ಮಗೀನ ಬಿಟ್ಟು ಹಬ್ಬ ಮಾಡಕಾಯ್ತದಾ? ನೀವ ಹೋಯ್ ಬನ್ನಿ.
“ಹಾಂಗಂತೀಯಾ, ಆಯ್ತ್ ಬಿಡು. ನಾ ಬತ್ತೀನಿ.”
ಯಾಕೊ ಇವಳ ಮಾತು ಹಿಡಿಸಲಿಲ್ಲ. ಮನಸ್ಸೆಲ್ಲ ಕೆಟ್ಟೋಯಿತು. ಇದೇ ಯೋಚನೆಯಲ್ಲಿ ಕೆಲಸದ ಮನೆಗೆ ಹೋಗುತ್ತಾಳೆ.
“ನಾಗಿ ಎಲ್ಲಿ ಹೋಗಿದ್ದೆ? ಬೇಗ ಬರಬಾರದಾ? ಆಗಲಿಂದ ಕಾಯುತ್ತಾ ಇದ್ದೆ.”
ಅವಳಿಗೊ ನಂಜಿ ಕಳಿಸ್ತಿಲ್ವಲ್ಲ ಅನ್ನುವ ಬೇಜಾರು. ಮಗನಿಗೆ ಹೇಗೆ ಸಮಾಧಾನ ಮಾಡೋದು. ಅಮ್ಮಾವರು ಕೇಳಿದ ಪ್ರಶ್ನೆಗೆ ಯಾವ ಉತ್ತರ ನೀಡದೆ ತನ್ನ ಕೆಲಸದಲ್ಲಿ ಮಗ್ನವಾಗುತ್ತಾಳೆ.
“ಎಲ್ಲ ಕಸಬು ಆಯ್ತವ್ವಾ, ನಾ ಬರ್ಲಾ. ನಾಳೀಕೆ ಬಿರೀನೆ ಬತೀನಿ ಹೊತಾರೆ.”
“ಆಯ್ತು , ತಿಂಡಿ ಇಟ್ಟಿದ್ದೆ ತಿಂದ್ಯಾ?”
ಯಾವುದಕ್ಕೂ ಉತ್ತರ ನೀಡದೆ ತನ್ನ ಮನೆ ಹಾದಿ ಹಿಡಿಯುತ್ತಾಳೆ‌. ಮನೆಗೆ ಬಂದರೂ ಯಾಕೊ ಮನಸ್ಸಿಗೆ ಸಮಾಧಾನವೆ ಇಲ್ಲ. ಹೊಟ್ಟೆಯಲ್ಲಿ ತಳಮಳ. ಗಡಿಗೆಯಿಂದ ತಣ್ಣನೆ ನೀರು ಹೊಟ್ಟೆ ತುಂಬಾ ಕುಡಿತಾಳೆ. ಹಾಗೆ ಒರಗಿ ನಿದ್ದೆಗೆ ಜಾರುತ್ತಾಳೆ.
ಕೆಲವೊಮ್ಮೆ ನಾಳಿನ ಆಗು ಹೋಗುಗಳ ಮುನ್ಸೂಚನೆ ಕೊಡುತ್ತದೆ ಮನಸ್ಸು. ಅದೇ sixthsence. ಆದರೆ ಅದರ ಬಗ್ಗೆ ಅಷ್ಟು ಗಮನ ಯಾರೂ ಕೊಡೋದಿಲ್ಲ.
ದಡ್ ಅನ್ನುವ ಶಬ್ದಕ್ಕೆ ಎಚ್ಚರ ಆಗುತ್ತದೆ. ಬಾಗಿಲಲ್ಲೇ ಗಂಡ ಮಹಾಶಯ ಕಂಠ ಪೂತಿ೯ ಕುಡಿದು ಬಂದು ಬಿದ್ದಿದ್ದಾನೆ. ಇದೇನು ಹೊಸತಲ್ಲ. ಆದರೆ ಅವಳಿಗೊಂದೇ ಹೊಟ್ಟೆ ಉರಿ. ಜಾತ್ರೆಗೆ ಅಂತ ಇಟ್ಟ ದುಡ್ಡು ಹೀಗೆ ಕುಡಿದು ಮಗನಿಗೆ ಅನ್ಯಾಯ ಮಾಡಿದನಲ್ಲ. ದುಃಖ ಒತ್ತರಿಸಿ ಬರುತ್ತದೆ. ಮನಸ್ಪೂತಿ೯ ಅತ್ತು ಮಾಡಬೇಕಾದ ಕತ೯ವ್ಯದ ಕಡೆ ಮಗ್ನಳಾಗುತ್ತಾಳೆ.
“ಅವ್ವಾ,”ಮಗನ ಕೂಗು. ಅಪ್ಪನ ಕುಡಿತದ ಅವತಾರ ನೋಡಿ ನೋಡಿ ಅವನಿಗೂ ಮನಸ್ಸು ರೋಸಿ ಹೋಗಿದೆ. ಕುಡಿದು ಬಯ್ಯೋದು, ಸಿಟ್ಟಿನಿಂದ ಕೂಗಾಡೋದು, ಹೊಡೆಯಲು ಹೋಗೋದು, ಅವ್ವ ಅಳೋದು. ಅವನಿಗೆ ಅಪ್ಪ ಅಂದರೆ ಅಷ್ಟಕ್ಕಷ್ಟೆ.
“ಬಾ ಮಗ ಬಾ. ಗಂಜಿ ಕಾಯ್ಸಿ ಮಡಗೀದೀನಿ. ಕುಡುದು ಬರಿಯಕ್ಕಿದ್ರ ಬರಿ.”
” ಹೂ ಕಣವ್ವ. ಇವತ್ತು ಸಾಲ್ಯಾಗೇನಾಯ್ತ್ ಗೊತ್ತಿತ್ತಾ. ನಾ ಟೀಚರ ತಾವ ಜಾತ್ರೀಗೋಗೊ ಸುದ್ದಿ ಎಳದೆ. ಎಲ್ಲ ಆ ಪಾಟಿ ನಗಾಡಾದಾ. ಬೋ ನಾಚಿಕಾಯ್ತ. ಯಾಕವ್ವ ನಾ ಏನಾರ ತಪ್ಪಂದನಾ. ಇರೊ ಇಸಿಯಾ ಹೇಳ್ದೆ ತಾನೆ‌.”
“ಇಲ್ಲ್ ಮಗಾ, ಅವರಂಗೇವಾ. ಪ್ಯಾಟಿ ಮಂದೀಗೆ ನಮ್ಮ ಹಳ್ಳೀ ನಡವಳಿಕೆ ನಗೀ ತರಿಸ್ತೈತೆ. ನೀ ಎನ್ ಬ್ಯಾಸರ ಮಾಡಕಬ್ಯಾಡ‌. ಅಲ್ಲ್ ಮಗಾ ಅಪ್ಪಾವರ ತಾವ ಕಾಸು ಕೇಳ್ದಾ? ”
” ಇಲ್ಲವ್ವ.” ತನ್ನ ವರದಿ ಎಲ್ಲ ಹೇಳುತ್ತಾನೆ.
“ನಂಗೂ ಹಂಗೆ ಅಯ್ತ್. ” ಅವಳು ತನ್ನ ವರದಿ ಹೇಳುತ್ತಾಳೆ. ಇಬ್ಬರೂ ತಮ್ಮದೆ ಬೇಸರದಲ್ಲಿ ಆ ದಿನವೆಲ್ಲ ಕಳೀತಾರೆ. ಇಬ್ಬರ ಮನದಲ್ಲೂ ಆತಂಕ.
“ಅವ್ವ ನಾ ಅಪ್ಪವರ ಹತ್ರ ಹೋಗಿ ಕೇಳ್ಲಾ?”
ಬೆಳಿಗ್ಗೆ ಎದ್ದ ಮಗನ ಮಾತು.
“ಆಯ್ತ್ ಕಣಪ್ಪ‌. ಕೇಳ್, ಅದೇನಂತ್ರೋ ಏನೊ. ನಾ ಹೆಗಡೀರ ಮನೆ ಕೆಲಸ ಮುಗಿಸಿ ಅಮ್ಮವರ ಮನೆ ತಾವ್ ಬತ್ತೆ. ನೀ ಮುಂದ ಹೋಗ್ ಆಯ್ತಾ.”
ಇತ್ತ ಕೆಲಸಕ್ಕೆ ಬಂದ ನಾಗಿ ಕೆಲಸ ಎಲ್ಲ ಮುಗಿಸಿ ಅಮ್ಮವರ ಮುಂದೆ ಸೆರಗಿಗೆ ಕೈ ಒರಸುತ್ತ ನಿಲ್ಲುತ್ತಾಳೆ.
“ಏನ್ ನಾಗಿ ಏನು ಹೇಳು.”
ಅವರಿಗೆ ಗೊತ್ತು ಹಾಗೆಲ್ಲ ಯಾವತ್ತೂ ಏನನ್ನೂ ಕೇಳುವ ಹೆಂಗಸಲ್ಲ‌ ; ಇವತ್ತೇನಾಯಿತು ಇವಳಿಗೆ‌ ನಿನ್ನೆ ನೋಡಿದರೆ ಒಂದು ತರ ಇದ್ದಳು‌. ಪಾಪ! ಗಂಡ ಬೇರೆ ಸರಿ ಇಲ್ಲ. ಇರೊ ಒಬ್ಬ ಮಗನಿಗೋಸ್ಕರ ಒಬ್ಬಳೆ ಹೋರಾಡುತ್ತಾಳೆ. ಇವಳಿರೋದರಿಂದ ನನಗೆಷ್ಟು ಆರಾಮಾಗಿದೆ. ಅಚ್ಚುಕಟ್ಟಾಗಿ ಮನೆ ಕೆಲಸ ಎಲ್ಲ ಮಾಡುತ್ತಾಳೆ. ನಾವಿಲ್ಲದಾಗ ಮನೆ ನೋಡಿಕೊಂಡಿರುತ್ತಾಳೆ‌. ಕೈ ಬಾಯಿ ಶುದ್ಧ ಇರೊ ಹೆಂಗಸು. ಪಾಪ! ಬಡವಳಾದರು ಒಳ್ಳೆ ನಿಯತ್ತಿನ ಹೆಂಗಸು.
“ಅಮ್ಮವ್ರೆ, ನಿಮ್ಮಿಂದ ಒಂದ್ ಉಪಕಾರ ಆಗಕ್ಕಿತ್ತು. ಒಸಿ ಕಾಸ್ ಬೇಕಿತ್ತು. ಮಗಿ ಜಾತ್ರೆ ಜಾತ್ರೆ ಅಂತ ಒಂದೆ ಸಮ ಬಡೀಕ್ಕಂತು. ನಾಕ್ ದೀಸ ಊರಿಗ್ ಹೋಯ್ಬಪ್ಪಾ ಅಂತ. ಅದಕೆ ಬರೋ ತಿಂಗಳೀದು ಸೇರಸಿ ಕೊಡ್ತ್ರಾ ಅಂತ.”
” ನೀ ಹೇಳೋದೇನೊ ಸರಿ. ಆದರೆ ನೋಡು ನಾಗಿ ಈ ಸಾರಿ ಯುಗಾದಿ ಹಬ್ಬ ಊರಲ್ಲಿ ಮಾಡೋದು ಅಂತ ಇವರ ಅಣ್ಣ ತಮ್ಮ ಎಲ್ಲ ಸೇರಿ ತೀಮಾ೯ನ ಮಾಡಿಕೊಂಡಿದ್ದಾರೆ. ಆಗಲೆ ನಾವೆಲ್ಲ ತಯಾರಿನೂ ಮಾಡಿಕೊಂಡಾಗಿದೆ. ನೀನು ನಮ್ಮನೆ ಕಡೆ ಬಂದಿರು. ನಾವಿಲ್ಲದಾಗ ನೀನೆ ತಾನೆ ನೋಡಿಕೊಳ್ಳೋದು. ಜಾತ್ರೆಗೆ ಮುಂದಿನ ವಷ೯ ಕರೆದು ಕೊಂಡು ಹೋಗು. ಹಬ್ಬಕ್ಕೆ ಅಂತ ಮಾಮೂಲಿ ದುಡ್ಡು ಕೊಡ್ತೀನಲ್ಲ. ಬೇಕಾದರೆ ಇನ್ನೂ ನೂರು ರೂಪಾಯಿ ಜಾಸ್ತೀನೆ ಕೊಡ್ತೀನಿ. ಹಬ್ಬ ಮಾಡು ಗಂಡ ಮಗನ ಜೊತೆ.”
ಅವರ ಮಾತು ನುಂಗಲಾರದ ತುತ್ತಾಯಿತು ಅವಳಿಗೆ. ಆದರೆ ಅವರ ಮಾತಿಗೆ ಇಲ್ಲ ಅನ್ನುವ ಹಾಗಿಲ್ಲ. ನಮ್ಮನ್ನು ಪ್ರೀತಿಯಿಂದ ಕಾಣುವ ಜನ. ಮಗನಿಗೆ ಶಾಲೆ ಕಲಿಸುತ್ತಿದ್ದಾರೆ. ಕಷ್ಟ ಅಂದರೆ ಅಗುತ್ತಾರೆ. ಆದರೂ ಮಗನ ನೆನಪಾಗಿ ಅಳು ವತ್ತರಿಸಿ ಬರುತ್ತಿದೆ. ಮಗನಿಗೆ ಹೇಗೆ ಸಮಾಧಾನ ಮಾಡೋದು. ಇದೇ ಯೋಚನೆಯಲ್ಲಿ ಮನೆಗೆ ಬರುತ್ತಾಳೆ. ನೋಡಿದರೆ ಮಗ ಮೂಲೆ ಹಿಡಿದು ಅಳುತ್ತ ಮಲಗಿದ್ದಾನೆ.
“ಯಾಕ್ ಮಗಾ ಏನೀಂಗ ಅಳ್ತೀ. ಹುಸಾರಿಲ್ವ. ಏನಾಯ್ತಾ? ”
“ಅವ್ವೊ ಜಾತ್ರೀಗೋಗದು ಬ್ಯಾಡ ಅಂದ್ರು ಅಪ್ಪವರು.”
ಮತ್ತೆ ಅಳು‌.
ಹೆತ್ತ ಕರುಳು ಚುರ್ ಅನ್ನುತ್ತದೆ. ಅವಳಿಗೂ ಕಣ್ಣು ತುಂಬಿ ಬರುತ್ತದೆ. ಮಗನನ್ನು ತೊಡೆ ಮೇಲೆ ಮಲಗಿಸಿಕೊಂಡು ಸಮಾಧಾನ ಮಾಡುತ್ತಾಳೆ.
” ಸಮಾಧಾನ ಮಾಡಿಕ ಮಗ. ಜಾತ್ರೆ ಏನು ಈ ವಸ೯ ಅಲ್ಲ ಅಂದ್ರ ಮುಂದಿನ ವಸ೯ ಹೋಗೋವಾ. ಅದೇನ ಓಡೋಯ್ತದಾ? ಆದ್ರೆ ಇಂತ ದಣಿ ನಮಗೆ ಸಿಗಾದಿತ್ತಾ. ನಮ್ಮ ಕಷ್ಟಕ್ಕೆ ಆಗವ್ರ ಅವರೆ ಕಣ್ಲಾ. ನೀ ಸುಮ್ಮಕಿರು. ನಾವು ಇಲ್ಲಿದ್ದು ಉಗಾದಿ ಹಬ್ಬ ಮಾಡವಾ. ಹೊಸಾ ಬಟ್ಟಿ ಅವ್ರೆ ಕೊಡ್ತೀರು. ಅದಾಕ್ಕ. ನಂಗೂ ಕಾಸು ಹಳೀ ಸೀರಿ ಎಲ್ಲ ಕೊಡ್ತೀರು. ಪಾಯಸಾ ಮಾಡ್ತೀನಿ. ಕುಡೀವಂತಿ. ಬೇಜಾರ ಮಾಡ್ಕ ಬ್ಯಾಡ. ಬಡವರ ಪಾಡು ಈಟೇಯಾ. ಆಸೀ ಅನ್ನದ್ ಮರೀಬೇಕ ಕಣ್ಲಾ. ಜೀವನ ಹ್ಯಾಂಗ ಬರತ್ತ್ ಹಾಂಗ್ ತೂರ್ಕಂಡ ಹೋಗಬೇಕ್ ಕಣ್ಲಾ. ನೀನು ಪಸಂದಾಗಿ ಓದು. ಸಾಲಿ ಕಲಿತು ಆಫೀಸರ್ ಆಗು. ಕೈನಾಗೆ ನಾಕ್ ಕಾಸು ಮಾಡ್ಕ. ಆ ಮಾದೇಸಾ ಒಂದಲ್ಲಾ ಒಂದಿನ ಕಣ್ಣ್ ಬಿಟ್ತಾನೆ. ನಾವು ಬಡೂರು. ನಮಗ್ಯಾವ್ ಜಾತ್ರೆ ಊರು. ಎಲ್ಲಾ ಕನಸೇವಾ. ಅದಕೆ ಅದೇನೊ ಗಾದಿ ಮಾಡಿಟ್ಟವ್ರೆ. “ಬಡವಾ ನೀ ಮಡಗದಾಂಗಿರು.”
ನಾಗಿ ಮಾತಾಡುತ್ತಲೆ ಇದ್ದಾಳೆ. ಎಂಕ ಅತ್ತೂ ಅತ್ತೂ ನಿದ್ದೆಗೆ ಜಾರಿದ.
ಕೆಲವೊಮ್ಮೆ ನಾವು ಅಂದುಕೊಳ್ಳೋದೆ ಒಂದು ಅದಾಗೋದೆ ಇನ್ನೊಂದು. ಬದುಕಲ್ಲಿ ಆಸೆ ಅದರ ಹಿಂದೆ ನಿರಾಸೆ. ಕೆಲವರ ಜೀವನದಲ್ಲಿ ಕನಸು ನನಸಾಗುತ್ತದೆ. ಇನ್ನು ಕೆಲವರ ಜೀವನದಲ್ಲಿ ಕನಸು ಕನಸಾಗೆ ಉಳಿದು ಬಿಡುತ್ತದೆ. ಪರಿಸ್ಥಿತಿಗೆ ತಕ್ಕಂತೆ ಬದುಕುವ ಕಲೆ ರೂಢಿಸಿಕೊಂಡಲ್ಲಿ ನೆಮ್ಮದಿಯ ಜೀವನ ಕಾಣಬಹುದು.