ಧಾರಾವಾಹಿಗಳ ಜಗದಲ್ಲೊಂದು ಸುತ್ತು....

ಧಾರಾವಾಹಿಗಳ ಜಗದಲ್ಲೊಂದು ಸುತ್ತು....

ಓದು ನನಗಿರುವ ಏಕೈಕ ಹವ್ಯಾಸ. ತುಂಬ ಟಿವಿ ನೋಡುವ ಅಭ್ಯಾಸ ನನಗಿಲ್ಲ.ಆಗೊಮ್ಮೆ ಈಗೊಮ್ಮೆ ಕ್ರಿಕೆಟ್ಟು ನೋಡುವುದು ಬಿಟ್ಟರೆ ನಾನು ಟಿವಿಯಿಂದ ದೂರವೇ.ಕೆಲವು ದಿನಗಳ ಹಿಂದೆ ಸುಮ್ಮನೇ ಟಿವಿಯ ರಿಮೋಟಿನ ಬಟನ್ನುಗಳನ್ನು ಒತ್ತುತ್ತಾ ಚಾನಲ್ಲು ಬದಲಿಸುತ್ತಾ ಕುಳಿತಿದ್ದವನ ಕಣ್ಣಿಗೆ ಬಿದ್ದದ್ದು ಹೊಸ ಧಾರಾವಾಹಿಯೊಂದರ ಜಾಹಿರಾತು.ಸುಮಾರು ಐದಾರು ವರ್ಷದ ಬಾಲಕಿಯೊಬ್ಬಳು ಕುಂಟಾಬಿಲ್ಲೆ ಆಟವಾಡುತ್ತ ಮಾತನಾಡುವ ಜಾಹಿರಾತು ಕೆಲಕಾಲ ನನ್ನ ಗಮನವನ್ನು ತನ್ನತ್ತ ಸೆಳೆಯಿತು.ಅಲ್ಲಿ ಆಡುತ್ತಿದ್ದ ಪುಟ್ಟ ಹುಡುಗಿಯ ಗೆಳೆಯನೊಬ್ಬ ಓಡುತ್ತ ಬಂದು,"ಏಯ್ ಗಂಗಾ ನಿನ್ನ ಗಂಡ ಸತ್ತೋದ್ನಡಾ,ನೀ ವಿಧವೆ ಆದ್ಯಡಾ(ಏಯ್ ಗಂಗಾ ನಿನ್ನ ಗಂಡ ಸತ್ತು ನೀನು ವಿಧವೆಯಾದೆಯಂತೆ)”ಎನ್ನುತ್ತಾನೆ. ಅದಕ್ಕುತ್ತರಿಸುವ ಮುಗ್ದೆ," ಮಳ್ನಂಗ್ ಮಾತಾಡಡ್ದಾ,ಅವನ್ಯಾರೋ ಸತ್ತೋದ್ರೆ,ನಾ ಹ್ಯಾಂಗ್ ವಿಧವೆ ಆಗ್ತೆ "ಎನ್ನುತ್ತ ತನ್ನ ಆಟವನ್ನು ಮುಂದುವರೆಸುತ್ತಾಳೆ.ಜಾಹಿರಾತಿನ ಕೊನೆಯ ಭಾಗದಲ್ಲಿ "ಗಂಗಾಳ ಕುಂಕುಮ ಕರಗಿಹೋಯ್ತು,ಸವೆಯಿತು ಸೌಭಾಗ್ಯ,ಕಳಚಿತು ಕೊರಳ ಮಾಂಗಲ್ಯ" ಎನ್ನುವ ದನಿಯೊಂದು ಕೇಳಿಬರುತ್ತದೆ.ಇಂಥದ್ದೊಂದು ಪ್ರೋಮೊ ನೋಡಿದ ನನಗೆ ಒಂದರೆಕ್ಷಣ ನಖಶಿಖಾಂತ ಉರಿದುಹೋಯಿತು.ಹವಿಗನ್ನಡ ಭಾಷೆಯಲ್ಲಿರುವ ಧಾರಾವಾಹಿಯ ನಿರ್ದೇಶಕ ನನ್ನ ಕಣ್ಣೆದುರಿಗೆ ಬಂದಿದ್ದರೆ ಒಂದೆರಡು ತದುಕಿಬಿಡುವಷ್ಟು ಕೋಪ ಬಂದಿತ್ತು.ಅಸಲಿಗೆ ಹವಿಗನ್ನಡವೆನ್ನುವುದು ಕರಾವಳಿ ಜಿಲ್ಲೆಗಳಲ್ಲಿರುವ ಹವ್ಯಕ ಸಮುದಾಯದ ಮನೆಮಾತು.ಹೆಚ್ಚಾಗಿ ಸಿರಸಿ,ಸಿದ್ದಾಪುರ,ಮಂಗಳೂರು ಯಲ್ಲಾಪುರದ ಸುತ್ತಮುತ್ತ ವಾಸವಾಗಿರುವ ಹವ್ಯಕ ಸಮಾಜ ಸುಮಾರು ಐದತ್ತು ಲಕ್ಷಗಳಷ್ಟು ಜನಸಂಖ್ಯೆಗಳುಳ್ಳ ಸಣ್ಣದ್ದೊಂದು ಬ್ರಾಹ್ಮಣ ಸಮುದಾಯ.ಇವರುಗಳ ನಡುವೆಯೇ ಬದುಕುತ್ತಿರುವ ನನಗೆ ಇವರ ಸಂಸ್ಕೃತಿಯ ಪರಿಚಯ ಸಾಕಷ್ಟಿದೆ.ಸಣ್ಣ ಸಮುದಾಯವೇ ಆಗಿದ್ದರೂ ಭಯಂಕರ ವಿದ್ಯಾವಂತ ಜನಾಂಗವದು.ಗಂಡಸಿನ ಸಮಾನಕ್ಕೆ,ಕೆಲವೊಮ್ಮೆ ಗಂಡಸಿಗಿಂತಲೂ ಹೆಣ್ಣುಮಕ್ಕಳು ಹೆಚ್ಚಾಗಿ ವಿದ್ಯಾವಂತರಾಗಿರುವ ಏಕೈಕ ಸಮುದಾಯವೆಂದರೆ ಹವ್ಯಕ ಸಮುದಾಯವೇ ಇರಬಹುದೇನೋ.ಬೆಂಗಳೂರಿನಲ್ಲಿರಬಹುದಾದ ಸಾಫ್ಟವೇರ್ ಕಂಪನಿಗಳನ್ನೊಮ್ಮೆ ಹೊಕ್ಕು ನೋಡಿದರೆ,ಅಲ್ಲಿ ಕೆಲಸ ಮಾಡುವ ಕನ್ನಡತಿಯರ ಪೈಕಿ ಹವ್ಯಕ ಹುಡುಗಿಯರದ್ದೇ ಸಿಂಹಪಾಲು ಎಂದರೆ ಕೊಂಚ ಉತ್ಪ್ರೇಕ್ಷೆಯೆನಿಸಿದರೂ ಸಂಪೂರ್ಣ ಸುಳ್ಳಲ್ಲ.  ಹೆಣ್ಣುಮಕ್ಕಳು ಹೆಚ್ಚು ಓದಿರುತ್ತಾರೆನ್ನುವ ಕಾರಣಕ್ಕೋ ಏನೋ,ಹೆಚ್ಚಿನ ಹವ್ಯಕ ಯುವಕರಿಗೆ ಮದುವೆಗಾಗಿ ವಧುಅನ್ವೇಷಣೆಯೆನ್ನುವುದು ಅಕ್ಷರಶ: ಯುದ್ದಕ್ಕೆ ಸಮಾನ.ಅದೆಷ್ಟೋ ಪುರುಷರು ತಮ್ಮದೇ ಜಾತಿಯ ಹೆಣ್ಣು ಸಿಗದ ಕಾರಣಕ್ಕೆ ಬೇರೊಂದು ಬ್ರಾಹ್ಮಣ ಸಮುದಾಯದ ಸ್ತ್ರೀಯರನ್ನು ಮದುವೆಯಾಗಿರುವ ಉದಾಹರಣೆಗಳು ಸಾಕಷ್ಟಿವೆ. ಇಂದಿನ ಹವ್ಯಕ ಸಮಾಜಕ್ಕೆ ವಿಧವಾ ವಿವಾಹವೆನ್ನುವುದೂ ಸಹ ತೀರ ಸಹಜ ಸಂಗತಿ.ಬಾಲ್ಯ ವಿವಾಹವೆನ್ನುವುದಂತೂ ಹವ್ಯಕ ಸಮುದಾಯದಿಂದ ನೂರು ವರ್ಷಗಳಷ್ಟು ಹಿಂದೆಯೇ ಅಳಿದು ಹೋಗಿರಲಿಕ್ಕೆ ಸಾಕು.ವಾಸ್ತವಾಂಶ ಹೀಗಿರುವಾಗ,ವಸ್ತುಸ್ಥಿತಿಯ ಅರಿವಿರದೇ,ಪುಟ್ಟ ಮುಗ್ಧ ಬಾಲಕಿಯೊಬ್ಬಳಿಗೆ ಬಿಳಿಯ ಸೀರೆಯುಡಿಸಿ,"ನಿನ್ನ ಗಂಡ ಸತ್ತಿದ್ದಾನೆ,ನಿನ್ನ ತಲೆ ಬೋಳಿಸಬೇಕು"ಎನ್ನುವ ವಿಕೃತ ಸನ್ನಿವೇಶಗಳನ್ನು ಚಿತ್ರಿಸುವ ನಿರ್ದೇಶಕರೆಡೆಗೆ ಸಿಟ್ಟು ಬರದಿದ್ದೀತೆ...?? 
 
ಇಂದಿನ ಧಾರಾವಾಹಿ ಜಗದ ಚಿಂತನಾ ದಾರಿದ್ರ್ಯಕ್ಕೆ ಮೇಲಿನದ್ದು ಒಂದು  ಉದಾಹರಣೆಯಷ್ಟೇ.ಇಂದಿನ ದಿನಗಳ ಬಹುತೇಕ ಧಾರಾವಾಹಿಗಳ ಸ್ಥಿತಿಯೂ ಇದಕ್ಕಿಂತ ತೀರ ಭಿನ್ನವೇನಿಲ್ಲ.ನೀವು ಧಾರಾವಾಹಿಗಳನ್ನು  ನೋಡುವವರಾಗಿದ್ದರೇ ಸುಮ್ಮನೇ ಗಮನಿಸಿ ನೋಡಿ.ಪ್ರಸ್ತುತಕ್ಕೆ ಪ್ರಸಾರವಾಗುತ್ತಿರುವ ಬಹುತೇಕ ಧಾರಾವಾಹಿಗಳಿಗೆ ವಿವಾಹವೇ  ವಿಷಯ ಪ್ರಾಧಾನ್ಯತೆ.  ಒಂದು ಕುಟುಂಬ , ಕುಟುಂಬದೊಳಗೊಂದು ಷಡ್ಯಂತ್ರ,ಅಲ್ಲೊಂದು ಮದುವೆ,ಮದುವೆಯಾದ ಹೆಣ್ಣಿಗೆ  ನಾನಾ ರೀತಿಯ ಸಂಕಷ್ಟಗಳು,ಒಬ್ಬ ಪುರುಷನಿಗೆ ಮೂರ್ನಾಲ್ಕು ಹೆಂಡತಿಯರೆನ್ನುವುದು ಎಲ್ಲ ಧಾರಾವಾಹಿಗಳ  ಸಮಾನ ಅಂಶಗಳು.ಹೆಣ್ಣೊಬ್ಬಳ ಬದುಕಿನಲ್ಲಿ ಜರುಗಬಹುದಾದ ಅತ್ಯಂತ ಮಹತ್ವದ ಸಂಗತಿಯೆಂದರೆ ವಿವಾಹ ಮಾತ್ರ ಮತ್ತು ವಿವಾಹವಾಗದಿದ್ದರೇ ಹೆಣ್ಣಿನ ಬಾಳೆನ್ನುವುದು ಶೂನ್ಯ ಎನ್ನುವುದೇ ಹೆಚ್ಚಿನ ಧಾರಾವಾಹಿಗಳ ಧೋರಣೆ.ಮದುವೆ ಕೇಂದ್ರಿತ ಸನ್ನಿವೇಶಗಳುಳ್ಳ ಇಂಥಹ ಧಾರಾವಾಹಿಗಳಲ್ಲಿ ಹೆಣ್ಣನ್ನು ತೀರ ಕೆಳಮಟ್ಟದಲ್ಲಿ ಚಿತ್ರಿಸಿರುತ್ತಾರೆನ್ನುವುದು ಅತಿಶಯೋಕ್ತಿಯೇನಲ್ಲ. ಕನ್ನಡ ಧಾರಾವಾಹಿಗಳು ಮಾತ್ರ ಹೀಗೆ ಎಂದುಕೊಂಡರೆ ಹಿಂದಿ ಧಾರಾವಾಹಿಗಳ ಬಗ್ಗೆಯಂತೂ ಮಾತನಾಡದಿರುವುದೇ ಒಳಿತು.ಒಟ್ಟಾರೆಯಾಗಿ ಧಾರಾವಾಹಿ ಲೋಕವೇ ಕ್ರಿಯಾಶೀಲತೆಯ ಬರಗಾಲವನ್ನುಅನುಭವಿಸುತ್ತಿದೆ ಎಂದರೆ ತಪ್ಪಿಲ್ಲ.ಕನ್ನಡ ಧಾರಾವಾಹಿ ಲೋಕದ ಬಗ್ಗೆ ಹೇಳುವುದಾದರೆ ಇಂಥದ್ದೊಂದು ಕ್ರಿಯಾಶೀಲಹೀನತೆಯ ಕಾರಣ ಅರ್ಥವಾಗದು. ಸಿರಿಯಲ್ಲುಗಳ ಕಳಪೆ ಗುಣಮಟ್ಟಕ್ಕೆ ಕಾರಣವನ್ನು ಹುಡುಕುತ್ತ ಧಾರಾವಾಹಿ ಲೋಕದ ಪರಿಣಿತರ ಎದುರಿಗೆ ನಿಂತರೆ ಒಬ್ಬೊಬ್ಬರದ್ದೂ ಒಂದೊಂದು ತರ್ಕ.ತಂತ್ರಜ್ನಾನವೆನ್ನುವುದು ಅಭಿವೃದ್ಧಿಯಾದಂತೆ ಹೆಚ್ಚುಹೆಚ್ಚು ಕನ್ನಡ ವಾಹಿನಿಗಳು ಹುಟ್ಟಿಕೊಂಡವು.ಪರಿಣಾಮವಾಗಿ ಹೆಚ್ಚು ಹೊಸ ಹೊಸ ಧಾರಾವಾಹಿಗಳನ್ನು ಹುಟ್ಟು ಹಾಕುವುದು ಅನಿವಾರ್ಯವಾಯಿತು.ಹಾಗಾಗಿ ಅನಿವಾರ್ಯವಾಗಿ ಗುಣಮಟ್ಟಿನೊಂದಿಗೆ ಕೊಂಚ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು ಎನ್ನುವುದು ಕೆಲವರ ಅಭಿಪ್ರಾಯ.ದೈನಂದಿನ ಧಾರಾವಾಹಿಗಳ ಭರಾಟೆ ಹೆಚ್ಚಾದಂತೆ ಸಾಪ್ತಾಹಿಕ ಧಾರಾವಾಹಿಗಳ ಜನಪ್ರಿಯತೆ ತಾನಾಗಿಯೇ ಕಡಿಮೆಯಾಗತೊಡಗಿತು,ಬಹುತೇಕರು ಸಾಪ್ತಾಹಿಕ ಧಾರಾವಾಹಿಗಳ ನಿರ್ಮಾಣವನ್ನು ಕೈಬಿಟ್ಟು ದೈನಂದಿನ ಧಾರಾವಾಹಿಗಳ ಮೊರೆ ಹೊಕ್ಕರು,ಕ್ರಿಯಾಶೀಲತೆಯ ಹರಿವಿನ ಕೊರತೆಯೆನ್ನುವುದು ದೈನಂದಿನ ಧಾರಾವಾಹಿಗಳಲ್ಲಿ ಸಹಜವೇ ಎನ್ನುವುದು ಅನೇಕರ ಅಭಿಪ್ರಾಯ.ಕೆಲವರದ್ದು ’ಧಾರಾವಾಹಿಗಳನ್ನು ನಿರ್ಮಿಸುವ ಕಷ್ಟ ನಿಮಗೇನ್ರಿ ಗೊತ್ತು..? ತಾಕತ್ತಿದ್ದರೆ ಒಂದು ಧಾರಾವಾಹಿ ನಿರ್ಮಿಸಿ ತೋರಿಸಿ’ಎನ್ನುವ ಕೋಪ ಪ್ರದರ್ಶನ.ಒಟ್ಟಾರೆಯಾಗಿ ಒಬ್ಬೊಬ್ಬರದ್ದು ಒಂದೊಂದು ಕಾರಣ.ಆದರೆ ಧಾರಾವಾಹಿಗಳ ಗುಣಮಟ್ಟದ ಕಳಪೆತನಕ್ಕೆ ಇಂಥಹ  ಕಾರಣಗಳು ನಿಜಕ್ಕೂ  ಸಮರ್ಥನೀಯವೇ..??
 
ನೀವು ಹೊಟೆಲ್ಲೊಂದರಲ್ಲಿ ತಿಂಡಿ ತಿನ್ನುತ್ತಿದ್ದೀರಿ ಎಂದುಕೊಳ್ಳಿ.ತಿಂಡಿ ಚೆನ್ನಾಗಿಲ್ಲ ಎಂದೊಡನೆ ’ಏನ್ರಿ,ತಿಂಡಿ ಚೆನ್ನಾಗಿಲ್ಲ ಅಂತೀರಿ,ತಾಕತ್ತಿದ್ದರೆ ಅಡುಗೆ ಮನೆಗೆ ಬಂದು ತಿಂಡಿ ಮಾಡಿ ತೋರಿಸಿ’ಎಂದು ಅಡುಗೆಭಟ್ಟರು ಅಬ್ಬರಿಸುವುದು ಎಷ್ಟು ಅಸಹಜವೋ ’ಧಾರಾವಾಹಿ ನಿರ್ಮಿಸಿ ತೋರಿಸಿ’ಎಂದುಲಿಯುವ ಕಳಪೆ ನಿರ್ದೇಶಕರು ಮಾತುಗಳೂ ಅಷ್ಟೇ ಅರ್ಥಹೀನ. ನಿರ್ದೇಶನವೆನ್ನುವುದು ನಿರ್ದೇಶಕರ ವೃತ್ತಿಪರತೆಯ ಪ್ರತೀಕ.ಕೆಟ್ಟ ಧಾರಾವಾಹಿಗಳನ್ನು ನಿರ್ಮಿಸುವ ನಿರ್ದೇಶಕರು ತಮ್ಮ ಅಸಮರ್ಥನೆಗಾಗಿ ವೀಕ್ಷಕನನ್ನೋ,ವಿಮರ್ಶಕನನ್ನೋ ಹೀಗಳೆಯುವುದು ತೀರ ಹಾಸ್ಯಾಸ್ಪದ.ನಿಮಗೆ ನೆನಪಿರಬಹುದು.ಕೆಲವು ವರ್ಷಗಳ ಹಿಂದೆ ಖಾಸಗಿ ವಾಹಿನಿಯೊಂದರಲ್ಲಿ ’ಮುಸ್ಸಂಜೆ’ಎನ್ನುವ ಸಾಪ್ತಾಹಿಕ ಧಾರಾವಾಹಿಯೊಂದು ಪ್ರಸಾರವಾಗುತ್ತಿತ್ತು.ಟಿ.ಎಸ್ ನಾಗಾಭರಣ್ ಅದರ ನಿರ್ದೇಶಕರು ಎಂಬ ನೆನಪು ನನಗೆ.ಹೊರಜಗತ್ತಿನ ಪರಿಚಯವೇ ಇರದ  ಹೆಂಗಸೊಬ್ಬಳ ಗಂಡ ಅಚಾನಕ್ಕಾಗಿ ತೀರಿಕೊಂಡಾಗ ಬದುಕಿನ ಕಠೋರ ವಾಸ್ತವಿಕತೆಯನ್ನು  ಆಕೆಯೆದುರು ಬಿಚ್ಚಿಡುವ ಅದ್ಭುತ ಧಾರಾವಾಹಿಯದು.ಮೊದಮೊದಲು ದಿಕ್ಕುತೋಚದಂತಾಡುವ ಹೆಣ್ಣುಮಗಳು ಕಾಲಕ್ರಮೇಣ ಪರಿಸ್ಥಿತಿಗೆ  ಹೊಂದಿಕೊಳ್ಳುವ ಚಿತ್ರಣವಿತ್ತಲ್ಲ ಅದು ನಿಜಕ್ಕೂ ನಾಗಾಭರಣರ ಅದ್ಭುತ ಪ್ರತಿಭೆಗೆ ಸಾಕ್ಷಿ.ಒಂಟಿ ಮಹಿಳೆಯ ಮೇಲೆ ಸಮಾಜದ ದೌರ್ಜನ್ಯವನ್ನು ಮೆಟ್ಟಿ ನಿಲ್ಲುತ್ತ,ತನ್ನ ಮಕ್ಕಳ ಬದುಕಿಗೊಂದು ಗಟ್ಟಿ ನೆಲೆ ಕಲ್ಪಿಸಿಕೊಟ್ಟು,ಮಕ್ಕಳಿಂದಲೇ ತಿರಸ್ಕಾರಕ್ಕೊಳಗಾಗುವ ಸಂದರ್ಭದಲ್ಲಿಯೂ ಅಳುಮುಂಜಿಯಂತೆ ವರ್ತಿಸದೆ ,ಗಟ್ಟಿಗಿತ್ತಿಯಾಗಿ ವರ್ತಿಸುವ ಪಾತ್ರದಲ್ಲಿ ಉಮಾಶ್ರಿಯವರ ಅಭಿನಯವಂತೂ ವರ್ಣಿಸಲಸದಳ.ದೈನದಿಂದ ಧಾರಾವಾಹಿಗಳ ಪ್ರಸಿದ್ಧಿಯೆನ್ನುವುದು ಉಚ್ಛ್ರಾಯ ಸ್ಥಿತಿಯನ್ನು ತಲುಪುವ  ಹೊತ್ತಿನಲ್ಲೂ ಮುಸ್ಸಂಜೆ ತನ್ನ ಖ್ಯಾತಿಯನ್ನು ಉಳಿಸಿಕೊಂಡು ಸಾಗಿತ್ತು.ವಾರದ ಧಾರಾವಾಹಿಗಳಲ್ಲಿನ ಗುಣಮಟ್ಟದ ಇಳಿಕೆಯೇ  ಅವುಗಳ ಜನಪ್ರಿಯತೆಯ ಕುಸಿತಕ್ಕೆ ಕಾರಣವಾಯಿತೆ ಹೊರತು  ಸಾಪ್ತಾಹಿಕ ಧಾರಾವಾಹಿಗಳ ಜನಪ್ರಿಯತೆಯ ಕುಗ್ಗುವಿಕೆಯೆನ್ನುವುದು ಪರೋಕ್ಷವಾಗಿ  ಕಾರ್ಯಕ್ರಮಗಳ ಗುಣಮಟ್ಟದ ತಗ್ಗುವಿಕೆಗೆ ಕಾರಣವೆನ್ನುವುದು  ನಿಜಕ್ಕೂ ಅರ್ಥಹೀನವೆನ್ನುವುದಕ್ಕೆ ಮುಸ್ಸಂಜೆಯಂತಹ ಧಾರಾವಾಹಿಗಳೇ ಸಾಕ್ಷಿ.ಇಷ್ಟಕ್ಕೂ ದೈನಂದಿನ ಧಾರಾವಾಹಿಗಳಲ್ಲಿ ಕ್ರಿಯಾಶೀಲತೆಯ ಕೊರತೆಯೆನ್ನುವುದು ಸಹಜ ಪ್ರಕ್ರಿಯೆಯೇ..? ಎನ್ನುವ ಪ್ರಶ್ನೆಗೆ ಉತ್ತರವಾಗಿ ನಿಲ್ಲುವವರು ಟಿ.ಎನ್ ಸೀತಾರಾಂ,ನಾಗತೀಹಳ್ಳಿ ಚಂದ್ರಶೇಖರ್,ಸೇತೂರಾಂರವರಂಥಹ ಧಾರಾವಾಹಿ ದಿಗ್ಗಜರು.ದಶಕಗಳ ಕಾಲದಿಂದಲೂ ದೈನಂದಿನ ಧಾರಾವಾಹಿಗಳನ್ನು ನಿರ್ದೇಶಿಸುತ್ತ ಬಂದಿರುವ ಇಂಥಹ ಪ್ರಬುದ್ಧ ಸೄಷ್ಟಿಕರ್ತರ ಒಂದು ಧಾರಾವಾಹಿಯೂ  ಕಳಪೆಯಾಗಿ ಮೂಡಿಬಂದಿಲ್ಲ ಎನ್ನುವುದು ಪ್ರತಿಯೊಬ್ಬ ಟಿವಿ ವೀಕ್ಷಕನೂ ಅರಿತಿರುವ ಸತ್ಯ.ಮಾಯಾಮೃಗ,ಮನ್ವಂತರ,ಮುಕ್ತ,ಪ್ರತಿಬಿಂಬ,ವಠಾರ ,ಅನಾವರಣದಂತಹ ಧಾರಾವಾಹಿಗಳ  ಅತ್ಯುತ್ಕೃಷ್ಟ ಗುಣಮಟ್ಟವನ್ನು ಧಾರಾವಾಹಿಪ್ರಿಯ ವೀಕ್ಷಕರು ಎಂದಿಗಾದರೂ ಮರೆಯುವುದು ಸಾಧ್ಯವೇ..?ಇವೆಲ್ಲವೂ ದೈನಂದಿನ ಧಾರಾವಾಹಿಗಳೇ ಆಗಿರಲಿಲ್ಲವೇ..?
 
ಒಟ್ಟಾರೆಯಾಗಿ ಪ್ರಸ್ತುತ ಧಾರಾವಾಹಿಗಳಲ್ಲಿ ಕುಸಿಯುತ್ತಿರುವ ಮೌಲ್ಯಗಳಿಗೆ ನಿರ್ದೇಶಕ ಮಹಾಶಯರುಗಳ ಶೃದ್ಧೆಯ ಕೊರತೆ ಕಾರಣವೇ ಹೊರತು ಬೇರೆನೂ ಅಲ್ಲ ಎನ್ನುವುದು ನನ್ನ ಬರಹದ ತಾತ್ಪರ್ಯ. ಕನ್ನಡ ಕಲಾಜಗತ್ತು ಎನ್ನುವುದೊಂದು ಮಾಯಾಲೋಕ.ಇಲ್ಲಿ ಸದಭಿರುಚಿಯ ಸಾಹಿತ್ಯದ ಅಗಣಿತ ಭಂಡಾರವೇ ಅಡಗಿದೆ.ಮನಸ್ಸು ಮಾಡಿದರೆ,ಧಾರಾವಾಹಿಗಳ ನಿರ್ಮಾಣಕ್ಕೆ ಆಕರವಾಗಿ ಹೇರಳವಾದ ಸೃಜನಶೀಲ ಸಾಹಿತ್ಯ ಇಲ್ಲಿ ಲಭ್ಯವಿದೆ. ಕಾದಂಬರಿ ಆಧಾರಿತವಾಗಿ ನಿರ್ಮಿಸಲ್ಪಟ್ಟ ಒಂದೆರಡು ಧಾರಾವಾಹಿಗಳು ಅದ್ಭುತ ಯಶಸ್ಸು ಕಂಡಿದ್ದರೂ ಕಾದಂಬರಿಗಳನ್ನು ಕಿರುತೆರೆಯ ಮೇಲೆ ತರುವ ಶ್ರಮದ ಕೆಲಸಕ್ಕೆ ಹೊಸ ನಿರ್ದೇಶಕರು ತಯ್ಯಾರಿಲ್ಲ.ಈಗ ಇಂಥಹ ಹಳವಂಡಗಳ ಕಳಶಕ್ಕೆ ಶಿಖರವಿಟ್ಟಂತೆ ಪರಭಾಷಾ ಧಾರಾವಾಹಿಗಳ ಪುನರ್ನಿರ್ಮಾಣವೂ ಶುರುವಾಗಿದೆ ಎಂದ ಮೇಲೆ  ಕನ್ನಡ ಕಿರುತೆರೆಯ ನಿರ್ದೇಶಕರ ಬೌದ್ಧಿಕ ದಿವಾಳಿತನದ ಪರಮಾವಧಿ ಎಂಥದ್ದು ಎನ್ನುವುದನ್ನು ನೀವೆ ಊಹಿಸಿ.ಇಂಥದ್ದೊಂದು ಬರಹ ಬರೆಯುವ ಮುನ್ನ ನಿಜಕ್ಕೂ ಧಾರಾವಾಹಿ ಲೋಕಕ್ಕೆ ಇಂಥದ್ದೊಂದು ವಿಮರ್ಶೆ ಬರೆಯಬೇಕಾ ಎಂದು ಯೋಚಿಸುತ್ತಿದ್ದೆ.ಅಷ್ಟರಲ್ಲಿ ಧಾರಾವಾಹಿ ಲೋಕದಲ್ಲಿ ಈಗಿನ್ನೂ ಚಿಗುರುತ್ತಿರುವ ಮರಿ ನಿರ್ದೇಶಕನೊಬ್ಬ," ಸರ್,ಒಂದು ಅದ್ಭುತ ಕ್ರಿಯೆಟಿವ್ ಧಾರಾವಾಹಿ ಮಾಡಬೇಕು ಅಂತಿದ್ದೀನಿ.ಕಥಾನಾಯಕಿ ಶ್ರೀಮಂತ ಮನೆತನದವಳಾಗಿದ್ದರೂ ಅವಳಿಗೆ ವಿದ್ಯೆ ತಲೆಹತ್ತದು.ತನ್ನ ಇಂಜಿನಿಯರಿಂಗ್ ಅಕ್ಕಂದಿರ ಹೊರತಾಗಿಯೂ ಇವಳಿಗೆ ಹೇಗೆ ಮದುವೆಯಾಗುತ್ತೆ ಎನ್ನುವುದೇ ನನ್ನ ಕತೆಯ ಮೈನ್ ಲೈನ್ ಸರ್"ಎಂದ.ಹೆಣ್ಣಿನ ಕತೆಯೆಂದರೇ ಮದುವೆಯೇ ಪ್ರಧಾನವಾಗಬೇಕೇ..? ಹೆಣ್ಣೊಂದು ತನ್ನೆಲ್ಲ ದೌರ್ಬಲ್ಯಗಳನ್ನು ಮೆಟ್ಟಿನಿಂತು ಜೀವನದಲ್ಲಿ ಯಶಸ್ಸು ಸಾಧಿಸುವ ಸೂತ್ರವನ್ನು ಆಧರಿಸಿ ಧಾರಾವಾಹಿಯೊಂದನ್ನು ನಿರ್ಮಿಸುವುದು ಸಾಧ್ಯವಿಲ್ಲವೇ.? ಧಾರಾವಾಹಿಗಳೆಂದರೆ ವಿವಾಹ,ತಾಳಿ,ಅತ್ತೆಮನೆ,ಹಾದರಗಳಷ್ಟೇ ಆಗಬೇಕೇ..?ಕ್ರಿಯಾಶೀಲತೆಯೆನ್ನುವುದು ಇದೆಲ್ಲವನ್ನೂ ಮೀರಿ ನಿಲ್ಲಬಾರದೇ.?ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಅವನಿಗೆ ಕೇಳಬೇಕೆನ್ನಿಸಿತು.ಇಪ್ಪತ್ತೊಂದನೆಯ ಶತಮಾನದ ಆಧುನಿಕ ಕಾಲದಲ್ಲಿ ಹದಿನೆಂಟನೆಯ ಶತಮಾನಗಳ ಆಲೋಚನೆಗಳೊಂದಿಗೆ ಬದುಕುತ್ತಿರುವ ವ್ಯಕ್ತಿಗೆ ಇಂಥಹ ಪ್ರಶ್ನೆಗಳ ಔಚಿತ್ಯವಾದರೂ ಏನು ಎಂದೆನಿಸಿ ಸುಮ್ಮನಾದೆ.

Comments