ಮತ್ತೊಮ್ಮೆ ಚೆಕಾಫ್
ಮಧ್ಯಾಹ್ನದ ಸಮಯವದು. ತೀಕ್ಷ್ಣ ಕಂಗಳ,ಎತ್ತರದ ನಿಲುವಿನ ನಡುವಯಸ್ಕ ವಾಲ್ಡೆರೆವ್ ಕಚೇರಿಯ ಬಾಗಿಲಲ್ಲಿ ನಿಂತಿದ್ದ .ಧರಿಸಿದ್ದ ಮೇಲಂಗಿಯನ್ನು ಸರಿಪಡಿಸಿಕೊಳ್ಳುತ್ತ ನಿಂತಿದ್ದ
ಆತ ಮಟ್ಟಸವಾಗಿ ತಲೆ ಬಾಚಿದ್ದ.ತನ್ನ ರೇಷ್ಮೆಯ ರುಮಾಲಿನಲ್ಲಿ ಹುಬ್ಬನ್ನೊರಿಸಿಕೊಳ್ಳುತ್ತ ಆ ಸರಕಾರಿ ಕಚೇರಿಯನ್ನು ಪ್ರವೇಶಿಸಿದ್ದ ಅವನ ನಡಿಗೆಯೂ ಕೊಂಚ ವಿಭಿನ್ನತೆಯಿಂದ
ಕೂಡಿತ್ತು. ಸರಕಾರಿ ಕಚೇರಿಯಲ್ಲಿ ಎಂದಿನ ಸೋಮಾರಿತನದ ವಾತಾವರಣ.ಒಂದು ಹರಿವಾಣದ ತುಂಬ ಹತ್ತಾರು ಗ್ಲಾಸುಗಳನ್ನಿಟ್ಟುಕೊಂಡು ಗಡಿಬಿಡಿಯಲ್ಲಿ ನಡೆಯುತ್ತಿದ್ದ
ಜವಾನನೊಬ್ಬನನ್ನು ತಡೆದು ನಿಲ್ಲಿಸಿ,’ನಾನೊಂದು ಮಾಹಿತಿಯನ್ನು ಪಡೆಯಬೇಕಿತ್ತು.’ಎಂದು ಪ್ರಶ್ನಿಸಿದ.ಕ್ಷಣಕಾಲ ವಾಲ್ಡೆರೆವ್ ನನ್ನು ದಿಟ್ಟಿಸುತ್ತ ನಿಂತಿದ್ದ ಜವಾನನ್ನು ಗಮನಿಸಿದ
ವಾಲ್ಡೆರೆವ್ ಮತ್ತೊಮ್ಮೆ " ಸರ್ ನಾನು ತುಂಬ ಅಗತ್ಯವಾದ ಮಾಹಿತಿಯೊಂದನ್ನು ಪಡೆದುಕೊಳ್ಳಬೇಕಿತ್ತು.ಹಾಗೆಯೇ ಮಂಡಳಿ ಪಾಸು ಮಾಡಿದ ಗೊತ್ತುವಳಿಯ ಪ್ರತಿಯೊಂದನ್ನು
ಪಡೆದುಕೊಳ್ಳಬೇಕಿತ್ತು.ಇದನ್ನೆಲ್ಲಿ ವಿಚಾರಿಸಬೇಕೆನ್ನುವುದನ್ನು ದಯವಿಟ್ಟು ತಿಳಿಸಿ"ಎಂದು ಪ್ರಶ್ನಿಸಿದ.
ಅವನನ್ನೊಮ್ಮೆ ಅಪಾದಮಸ್ತಕವಾಗಿ ನೋಡಿದ ಜವಾನ,’ಅದೋ ಆ ಕಿಟಕಿಯ ಬಳಿಯ ಮೇಜಿನ ಮೇಲೆ ಕುಳಿತಿದ್ದಾರಲ್ಲ ,ಅವರನ್ನು ವಿಚಾರಿಸಿ ಸರ್’ಎನ್ನುತ್ತ ಕೈಯಲಿದ್ದ
ಹರಿವಾಣವನ್ನೇ ಕಿಟಕಿಯ ದಿಕ್ಕಿನತ್ತ ಎತ್ತಿ ವಾಲ್ಡೆರೆವ್ ನಿಗೆ ದಾರಿ ತೋರಿದ.ಜವಾನನಿಗೆ ಧನ್ಯವಾದ ತಿಳಿಸಿದ ವಾಲ್ಡೆರೆವ್ ಕಿಟಕಿಯ ಬಳಿ ತೆರಳಿದ. ಅಲ್ಲಿ ಸ್ವಚ್ಛಂದವಾದ ಮೈಯ ಮೇಲೆ
ಎದ್ದು ಕಾಣುವ ಸಿಡುಬಿನ ಗುಳ್ಳೆಯಂತೆ ಗೋಚರಿಸುತ್ತಿದ್ದ ಹಸಿರು ಟೇಬಲ್ಲಿನ ಮೇಲೆ ಗುಮಾಸ್ತನೊಬ್ಬ ಕುಳಿತಿದ್ದ.ದೊಡ್ಡ ಮೂಗಿನ ,ಜುಟ್ಟು ಕಟ್ಟಿದ್ದ ಕೂದಲುಗಳ ಗುಮಾಸ್ತ ಮಾಸಲು
ಸಮವಸ್ತ್ರವೊಂದನ್ನು ಧರಿಸಿದ್ದ.ತನ್ನ ಬಾಯಿಯನ್ನು ಸೊಟ್ಟಗೆ ತಿರುಗಿಸಿ ಕಷ್ಟಪಟ್ಟು ಗಾಳಿಯೂದುತ್ತ ,ತನ್ನ ಬಲ ಹೊಳ್ಳೆಯ ಪಕ್ಕದಲ್ಲೇ ಹಾರುತ್ತಿದ್ದ ಚಿಕ್ಕದ್ದೊಂದು ನೊಣವನ್ನು
ಹಾರಿಸಲು ಪ್ರಯತ್ನಪಡುತ್ತಿದ್ದ ಆತನ ವಿಕ್ಷಿಪ್ತ ಆಂಗಿಕಭಾಷೆಯಿಂದಾಗಿ ಅವನ ಮುಖ ಇನ್ನಷ್ಟು ವಿಚಿತ್ರವಾಗಿ ಗೋಚರಿಸುತ್ತಿತ್ತು.’ನಮಸ್ಕಾರ ಸರ್,ನಿಮ್ಮಿಂದ ನನಗೊಂದು ಮಾಹಿತಿ
ತಿಳಿಯಬೇಕಿತ್ತು.ಅಲ್ಲದೇ ಮಾರ್ಚ್ ತಿಂಗಳ ಎರಡನೇಯ ತಾರೀಕಿನಂದು ಮಂಡಳಿ ಪಾಸು ಮಾಡಿದ ಗೊತ್ತುವಳಿಯ ಪ್ರತಿಯೊಂದು ನನಗೆ ಬೇಕಿತ್ತು’ಎಂದ ವಾಲ್ಡೆರೆವ್
ಗುಮಾಸ್ತನನ್ನು ನೋಡಿ ನಸುನಕ್ಕ.ಗುಮಾಸ್ತ ತನ್ನ ಕೈಯಲಿದ್ದ ಶಾಯಿಪೆನ್ನನ್ನು ಟೇಬಲ್ಲಿನ ಮೇಲಿದ್ದ ಮಸಿಯ ಬಾಟಲಿಯಲ್ಲೊಮ್ಮೆ ಅದ್ದಿ ಮೇಲಕ್ಕೆತ್ತಿದ.ಬರೆಯಲು ಸಾಕಾಗುವಷ್ಟು
ಮಸಿ ಪೆನ್ನಿಗೆ ಬಳಿದುಕೊಂಡಿದೆ ಎನ್ನುವುದನ್ನು ಖಚಿತಪಡಿಸಿಕೊಂಡ ಆತ ತನ್ನ ಮುಂದಿದ್ದ ದೊಡ್ಡದಾದ ಪುಸ್ತಕದಲ್ಲಿ ಏನನ್ನೋ ಬರೆಯುತ್ತ ತಲೆ ಹುದುಗಿಸಿಕೊಂಡ.ಆತನ ಮುಖದ
ಸುತ್ತಲೇ ಸುತ್ತುತ್ತಿದ್ದ ನೊಣ ಸುಸ್ತಾದವರಂತೆ ಅವನ ಕಿವಿಯ ಮೇಲೆ ಕುಳಿತುಕೊಂಡಿತ್ತು.
ಗುಮಾಸ್ತನಿಂದ ಉತ್ತರಕ್ಕಾಗಿ ಕಾಯುತ್ತಿದ್ದ ವಾಲ್ಡೆರೆವ್,ಒಂದೈದು ನಿಮಿಷಗಳ ಕಾಯುವಿಕೆಯ ನಂತರ ’ಸರ್,ನಾನೊಂದು ವಿಷಯದ ಬಗ್ಗೆ ವಿಚಾರಿಸಬೇಕಿತ್ತು,ನನ್ನ ಹೆಸರು
ವಾಲ್ದೆರೆವ್,ನನ್ನದೊಂದು ಚಿಕ್ಕ ಜಮೀನಿದೆ’ಎಂದು ಪುನರುಚ್ಛರಿಸಿದ.ಆದರೆ ಅವನನ್ನು ಕಂಡೂ ಕಾಣದಂತಾಡಿದ ಗುಮಾಸ್ತ,"ಲೇ ಇವಾನ್ ಅಲೆಕ್ಸಿವಿಚ್’ಎಂದು ಜೋರಾಗಿ
ಜವಾನನತ್ತ ಕೂಗಿದ." ಪೋಲಿಸ್ ದೂರಿಗೆ ಸಹಿ ಹಾಕಲು ಬರುತ್ತಾನಲ್ಲ ಯಾಲಿಕೋವ್,ಅವನಿಗೆ ನನ್ನನ್ನು ಬಂದು ಕಾಣಲು ಹೇಳು.ಆ ವ್ಯಾಪಾರಿಗೆ ನಾನು ಒಂದು ಸಾವಿರ ಸಲ
ಹೇಳಿಯಾಯ್ತಪ್ಪ’ಎಂದು ಕೋಪದಲ್ಲಿ ನುಡಿದು ಪುನ: ಪುಸ್ತಕದಲ್ಲಿ ಮುಖವಡಗಿಸಿದ"ರಾಜಕುಮಾರಿ ಗುಗ್ಲಿನ್ ರವರ ಸಂಬಂಧಿಗಳ ಮೇಲೆ ನಾನು ಹೂಡಿರುವ ಮೊಕದ್ದಮೆಯ ಕುರಿತು
ಕೆಲವು ಸ್ಪಷ್ಟನೆಗಳು ನನಗೆ ಬೇಕಿತ್ತು’ಎಂದು ಮತ್ತೊಮ್ಮೆ ಸಣ್ಣದಾಗಿ ಗೊಣಗಿದ ವಾಲ್ಡೆರೆವ್,"ತುಂಬ ಪ್ರಸಿದ್ಧ ಮೊಕದ್ದಮೆಯಿದು.ದಯವಿಟ್ಟು ನನಗೆ ಕೊಂಚ ಸಹಾಯ ಮಾಡಿ’ಎನ್ನುತ್ತ
ಗುಮಾಸ್ತನನ್ನು ಅಂಗಲಾಚಿದ.ಗುಮಾಸ್ತನಿಗೋ ವಾಲ್ಡೆರೆವ್ ನತ್ತ ದಿವ್ಯ ನಿರ್ಲಕ್ಷ.ಆತ ತನ್ನ ಕಿವಿಯ ಮೇಲೆ ಕುಳಿತಿದ್ದ ನೊಣವನ್ನು ಕೈಯಲ್ಲಿ ಹಿಡಿದುಕೊಂಡ.ಅದನ್ನೊಮ್ಮೆ
ಕೂಲಂಕುಶವಾಗಿ ದಿಟ್ಟಿಸಿ,ಸುಮ್ಮನೇ ಅದನ್ನು ಹಾರಿಬಿಟ್ಟ.ಕೆಲಕಾಲ ಸುಮ್ಮನೇ ನಿಂತಿದ್ದ ವಾಲ್ಡೆರೆವ್ ಒಮ್ಮೆ ಜೊರಾಗಿ ಕೆಮ್ಮಿ,ತನ್ನ ಕೈಲಿದ್ದ ಕರವಸ್ತ್ರದಿಂದ ತನ್ನ ಮೂಗನ್ನೊಮ್ಮೆ
ಒರೆಸಿಕೊಂಡ.ಆದರೆ ಗುಮಾಸ್ತನ ಗಮನವನ್ನು ತನ್ನತ್ತ ಸೆಳೆಯಲು ಮಾಡಿದ ಆತನ ಪ್ರಯತ್ನಗಳೆಲ್ಲ ವಿಫಲವಾದವು.ಕೊನೆಗೊಮ್ಮೆ ನಿರಾಸೆಯ ನಿಟ್ಟುಸಿರು ಬಿಟ್ಟ ಆತ ತನ
ಜೇಬಿನಿಂದ ರೂಬಲ್ಲಿನ ನೋಟೊಂದನ್ನು ಹೊರತೆಗೆದು,ಗುಮಾಸ್ತನ ಪುಸ್ತಕದ ತೆರೆದ ಪುಟಗಳ ಮೇಲಿಟ್ಟ.ಕ್ಷಣ ಕಾಲ ಗುಮಾಸ್ತನ ಮುಖಭಾವ ಬದಲಾಗಿದ್ದನ್ನು ವಾಲ್ಡೆರೆವ್
ಗಮನಿಸಿದ್ದ.ಅಷ್ಟರಲ್ಲಿ ಗುಮಾಸ್ತ ರೂಬಲ್ಲಿನ ನೋಟನ್ನು ತನ್ನ ಮೇಜಿನ ಒಳಖಾನೆಗೆ ಇಳಿಸಿ ಪುನ: ತನ್ನ ಕೆಲಸದಲ್ಲಿ ಮಗ್ನನಾದ.
’ಒಂದು ಸಣ್ಣ ವಿಷಯವಷ್ಟೇ ಸರ್,ಯಾವ ಆಧಾರದ ಮೇಲೆ ರಾಜಕುಮಾರಿಯ ಸಂಬಂಧಿಗಳು ನನ್ನ ಜಾಗವನ್ನು ಆಕ್ರಮಿಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ ದಯವಿಟ್ಟು..’ಎಂದು
ನುಡಿಯುವಷ್ಟರಲ್ಲಿ ಗುಮಾಸ್ತ ತನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ ಎನ್ನುವುದು ವಾಲ್ಡೆರೆವ್ ನ ಗಮನಕ್ಕೆ ಬಂದಿತ್ತು.ಅವನ ಆಲೋಚನೆಗೆ ಪುಷ್ಠಿ ನೀಡುವಂತೆ ವರ್ತಿಸಿದ ಗುಮಾಸ್ತ
ತನ್ನ ಕುರ್ಚಿಯಿಂದ ಮೇಲೆದ್ದು ಮೊಣಕೈಯನ್ನು ತುರಿಸಿಕೊಳ್ಳುತ್ತ,ಏನನ್ನೋ ಹುಡುಕುವವರಂತೆ ಸಮೀಪದ ಕಪಾಟೊಂದರ ಬಳಿ ತೆರಳಿದ.ಪುನ: ತನ್ನ ಕುರ್ಚಿಯತ್ತ ಮರಳಿದ
ಗುಮಾಸ್ತನಿಗೆ ತನ್ನ ಪುಸ್ತಕದ ಮೇಲೆ ಇನ್ನೊಂದು ರೂಬಲ್ ನೋಟು ಕುಳಿತಿರುವುದು ಕಂಡುಬಂದಿತು.ಮೌನವಾಗಿ ಆತ ಮತ್ತೊಮ್ಮೆ ರೂಬಲ್ಲಿನ ನೋಟನ್ನು ತನ್ನ ಟೇಬಲ್ಲಿನ
ಡ್ರಾಯರಿನೊಳಕ್ಕೆ ಸೇರಿಸಿದ."ಬರಿ ಐದು ನಿಮಿಷ ಸರ್,ನನ್ನ ಕೆಲಸ ತುಂಬ ಸಣ್ಣದು ’ಎಂದು ನುಡಿದ ವಾಲ್ಡೆರೆವ್ ನಿಗೆ ಈ ಬಾರಿ ನಿಜಕ್ಕೂ ಕೋಪ ಬಂದಿತ್ತು.ತನ್ನಿಂದ ಹಣ ಪಡೆದು
ತನ್ನ ಮಾತುಗಳನ್ನು ಕೇಳಿಸಿಕೊಳ್ಳದೇ ಎಲ್ಲೋ ನೋಡುತ್ತ ಕುಳಿತಿದ್ದ ಗುಮಾಸ್ತನನ್ನು ನೋಡಿ ’ಹಾಳಾಗಿ ಹೋಗಲಿ ಈ ದರಿದ್ರ ಮನುಷ್ಯ;ಎನ್ನುತ್ತ ಮನದಲ್ಲೇ ಶಪಿಸುತ್ತ,ಕಚೇರಿಯ
ಹೊರಗೆ ಬಂದ.ಹತ್ತಾರು ಲೊಟಗಳನ್ನು ಹರಿವಾಣವೊಂದರಲ್ಲಿ ಹಿಡಿದು ಸಾಗುತ್ತಿದ್ದ ಜವಾನ ವಾಲ್ದೇರೆವ್ ನನ್ನು ಗಮನಿಸಿದ. ದೂರದಿಂದಲೇ ವಾಲ್ಡೆರೆವ್ ನ ಮುಖದಲ್ಲಿದ್ದ ಸಿಟ್ಟು
,ಅಸಹಾಯಕತೆಯನ್ನು ಕಂಡುಕೊಂಡ ಆತ ವಾಲ್ಡೇರೆವ್ ನನ್ನು ಸಮೀಪಿಸಿ,"ಏನಾಯ್ತು ಸರ್,ನಿಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಂಡಿರಾ"ಎಂದು ವಿಚಾರಿಸಿದ."ಏನು
ವಿಚಾರಿಸುವುದೋ ಏನೋ,ಆ ಪುಣ್ಯಾತ್ಮ ಮಾತೇ ಆಡಲ್ವಲ್ಲ’ಎಂದ ವಾಲ್ಡೆರೆವ್ ಮಾತುಗಳಲ್ಲಿ ಹತಾಶೆಯ ಭಾವ.ಅವನತ್ತ ಬಾಗಿದ ಜವಾನ," ನೀವು ಅವನಿಗೆ ಮೂರು
ರೂಬಲ್ಲುಗಳನ್ನು ಕೊಡಿ,ಆಗ ನೋಡಿ ಅವನ ಕೈ ಚಳಕ"ಎಂದು ಪಿಸುಗುಟ್ಟಿದ."ಆದರೆ ನಾನಾಗಲೇ ಅವನಿಗೆ ಎರಡು ರೂಬಲ್ ಕೊಟ್ಟಾಗಿದೆ"ಎನ್ನುವುದು ವಾಲ್ಡೆರೆವ್ ನ
ಉತ್ತರ."ಇನ್ನೊಂದು ರೂಬಲ್ ಕೊಟ್ಟು ನೋಡಿ,ನಿಮಗೇ ಗೊತ್ತಾಗುತ್ತದೆ"ಎಂದು ಮುಗುಳ್ನಕ್ಕ ಜವಾನ ತನ್ನ ಪಾಡಿಗೆ ತಾನೆಂಬಂತೆ ಹೊರಟು ಹೋದ.ಮತ್ತೊಮ್ಮೆ ಗುಮಾಸ್ತನ
ಟೇಬಲ್ಲಿನ ಬಳಿ ತೆರಳಿದ ವಾಲ್ಡೆರೆವ್ ಏನೊಂದನ್ನೂ ಮಾತನಾಡದೇ ರೂಬಲ್ಲಿನ ನೋಟೊಂದನ್ನು ಮೇಜಿನ ಮೇಲಿಟ್ಟ.ಅದನ್ನು ಗಮನಿಸಿದ ಗುಮಾಸ್ತನ ಹುಬ್ಬುಗಳು ಕೊಂಚ
ಮೇಲೆರಿದ್ದವು. ತನ್ನ ಮುಖವನ್ನು ಮೇಲೆತ್ತಿ ವಾಲ್ಡೆರೆವನತ್ತ ನೋಡಿದ ಗುಮಾಸ್ತ,ಒಮ್ಮೆ ನಸುನಕ್ಕು "ಕುಳಿತುಕೊಳ್ಳಿ ಸರ್,ಏನು ಬೇಕಿತ್ತು ಹೇಳಿ"ಎಂದ.’ನನ್ನ ಹೆಸರು
ವಾಲ್ಡೆರೆವ್,ನನಗೆ ನನ್ನ ಮೊಕದ್ದಮೆಯ ಕುರಿತಾಗಿ ಸಣ್ಣದ್ದೊಂದು ಮಾಹಿತಿ ಬೇಕಿತ್ತು"ಎಂದು ವಾಲ್ಡೆರೆವ್ ಹೇಳಿ ಮುಗಿಸುವಷ್ಟರಲ್ಲಿ "ಖಂಡಿತ ಸರ್,ಗುಗ್ಲಿನ್ ಮೊಕದ್ದಮೆಯಲ್ಲವಾ..?
ಬಹಳ ಚರ್ಚೆಯಲ್ಲಿರುವ ಕೇಸು ಅದು.ಅದರ ಬಗ್ಗೆ ಏನು ತಿಳಿದುಕೊಳ್ಳಬೇಕಿತ್ತು ತಿಳಿಸಿ’ಎಂದ.ವಾಲ್ಡೆರೆವ್ ತನ್ನ ಸಮಸ್ಯೆಯನ್ನು ಗುಮಾಸ್ತನಿಗೆ ವಿವರಿಸಿದ
ಮೂರು ರೂಬಲ್ಲುಗಳನ್ನು ಪಡೆದುಕೊಂಡಿದ್ದ ಗುಮಾಸ್ತನ ಮೈಯಲ್ಲಿ ವಿದ್ಯುತ್ತ ಸಂಚಾರವಾಗಿದೆಯೇನೋ ಎನ್ನುವಷ್ಟು ಲವಲವಿಕೆ ತುಂಬಿಕೊಂಡಿತ್ತು.ಆತ ವಾಲ್ಡೆರೆವ್ ನಿಗೆ ಬೇಕಾದ
ಮಾಹಿತಿಯನ್ನು ಕರಾರುವಕ್ಕಾಗಿ ಒದಗಿಸಿದ್ದ.ಅಷ್ಟಲ್ಲದೇ ಅದರದ್ದೊಂದು ಪ್ರತಿಯನ್ನೂ ಸಹ ನೀಡಿದ್ದ.ಮೊದಮೊದಲು ವಾಲ್ಡೆರೆವ್ ನತ್ತ ತಲೆಯೆತ್ತಿ ಸಹ ನೋಡದ ಗುಮಾಸ್ತ,ಈಗ ಆತ
ತನ್ನ ಹಳೆಯ ಸ್ನೇಹಿತನೇನೋ ಎನ್ನುವಂತೆ ವರ್ತಿಸತೊಡಗಿದ್ದ.ಸುಖಾಸುಮ್ಮನೇ ಹವಾಮಾನದ ಬಗ್ಗೆ,ವಾಲ್ಡೆರೆವ್ ನ ಜಮೀನಿನಲ್ಲಿ ನಡೆದಿರಬಹುದಾದ ವ್ಯವಸಾಯದ ಬಗ್ಗೆ
ವಿಚಾರಿಸಹತ್ತಿದ್ದ.ಕೆಲಸ ಮುಗಿದ ಮೇಲೆ ತನ್ನ ಕುರ್ಚಿಯಿಂದ ಮೇಲೆದ್ದ ಗುಮಾಸ್ತ ,ವಾಲ್ಡೆರೆವ್ ನನ್ನು ಬೀಳ್ಕೊಡಲು ಕಚೇರಿಯ ಹಜಾರದ ವರೆಗೂ ಬಂದ.ಆತನ ಏಕಾಏಕಿ
ಅತಿವಿನಯತೆಯ ವರ್ತನೆಯಿಂದ ಕೊಂಚ ಕಸಿವಿಸಿಗೊಳಗಾದ ವಾಲ್ಡೆರೆವ್ ಇನ್ನೊಂದು ರೂಬಲ್ಲಿನ ನೋಟೊಂದನ್ನುಗುಮಾಸ್ತನ ಕೈಗಿತ್ತ. ಅದ್ಯಾವ ಕ್ಷಣದಲ್ಲಿ ರೂಬಲ್ಲಿನ ನೋಟು
ಗುಮಾಸ್ತನ ಜೇಬು ಸೇರಿತೆನ್ನುವುದು ಸ್ವತ: ವಾಲ್ಡೆರೆವ್ ನಿಗೂ ಗೊತ್ತಾಗಲಿಲ್ಲ.ವಾಲ್ಡೆರೆವ್ ಕಚೇರಿಯ ಆವರಣದಿಂದ ಹೊರನಡೆಯುವವರೆಗೂ ಅವನತ್ತ ಕೈಬೀಸುತ್ತ
,ಮುಗುಳ್ನಗುತ್ತಲೇ ನಿಂತಿದ್ದ ಗುಮಾಸ್ತನ ನಡವಳಿಕೆಯನ್ನು ಕಂಡು." ಥೂ,ಏನು ಜನವಪ್ಪಾ" ಎಂದು ಗೊಣಗಿಕೊಳ್ಳುತ್ತ ಸರ್ಕಾರಿ ಕಚೇರಿಯ ಆವರಣದಿಂದ ಹೊರಬಿದ್ದ ವಾಲ್ಡೆರೆವ್
,ಕರ್ಚೀಫಿನಿಂದ ತನ್ನ ಹಣೆಯನ್ನೊಮ್ಮೆ ಒರೆಸಿಕೊಂಡ.
ರಷ್ಯನ್ ಸರಕಾರಿ ಕಚೇರಿಗಳಲ್ಲಿನ ಲಂಚಾವತಾರವನ್ನು ಹೀಗೊಂದು ಸಣ್ಣಕತೆಯ ರೂಪದಲ್ಲಿ ತೆರೆದಿಟ್ಟವನು ಸಣ್ಣಕಥಾ ಜಗದ ಮಾಂತ್ರಿಕ ಆಂಟೋನ್ ಚೆಕಾಫ್."AN
ENQUIRY'ಎನ್ನುವ ಹೆಸರಿನ ಈ ಸಣ್ಣಕತೆ 1883ರಲ್ಲಿ ಬರೆಯಲ್ಪಟ್ಟಿತು.ಕತೆಯೆಂದ ಕೂಡಲೇ ರಣಗಂಭೀರ ವಿಷಯಗಳೇ ಆಗಬೇಕಿಲ್ಲ,ನಮ್ಮ ದೈನದಿಂದ ಬದುಕಿನಲ್ಲಿ
ನಡೆಯಬಹುದಾದ ಸಣ್ಣಪುಟ್ಟ ಘಟನೆಗಳೂ ಸಹ ಕಥಾವಸ್ತುಗಳಾಗಬಹುದು ಎಂಬುದನ್ನು ತುಂಬ ಪರಿಣಾಮಕಾರಿಯಾಗಿ ತೋರಿಸಿಕೊಟ್ಟವನು ಚೆಕಾಫ್. ರೂಬಲ್ ಎನ್ನುವುದು ರಷ್ಯಾ
ದೇಶದಲ್ಲಿ ಚಲಾವಣೆಯಲ್ಲಿರುವ ಹಣದ ಹೆಸರು.ಈ ಕತೆ ಹತ್ತೊಂಬತ್ತನೇಯ ಶತಮಾನದಲ್ಲಿಯೇ ರಚಿಸಲ್ಪಟ್ಟಿದ್ದರೂ ಭಾರತೀಯರಿಗೆ ಈ ಕತೆ ಇಂದಿಗೂ ವಾಸ್ತವವೆನ್ನುವುದು
ಸುಳ್ಳೇನಲ್ಲ.ಭಾರತೀಯ ಸರಕಾರಿ ಕಚೇರಿಗಳಲ್ಲಿ ಇಂಥಹ ಅನುಭವಗಳು ಸರ್ವೇ ಸಾಮಾನ್ಯ.ಕತೆಯನ್ನೊಮ್ಮೆ ಸುಮ್ಮನೇ ಓದಿಕೊಳ್ಳಿ.ನಿಮಗೂ ಆಗಿರಬಹುದಾದ ಅನುಭವೊಂದರ
ಕಹಿ ನೆನಪು ನಿಮ್ಮನ್ನು ಮೀಟಬಹುದು.
Comments
ಉ: ಮತ್ತೊಮ್ಮೆ ಚೆಕಾಫ್
ಬಹಳ ಚೆನ್ನಾಗಿದೆ. ಗೊಗೊಲ್ ನ' ಇನ್ಸ್ಪೆಕ್ಟರ್ ಜನಲ್' ಕೂಡ ರಷ್ಯದಲ್ಲಿದ್ದ ಭ್ರಷ್ಟಾಚಾರದ ಬಗ್ಗೆ .
ಉ: ಮತ್ತೊಮ್ಮೆ ಚೆಕಾಫ್
ಈ ಸಮಸ್ಯೆ ವಿಶ್ವದ ಎಲ್ಲೆಡೆಯ ಸಮಸ್ಯೆ. ಇತರ ಎಲ್ಲಾ ಸಮಸ್ಯೆಗಳ ಮೂಲವೇ ಈ ಭ್ರಷ್ಠಾಚಾರ! :(