ಹುಚ್ಚರಾಯಸ್ವಾಮಿ ಜಾತ್ರೆಯ ವಿಶೇಷ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹುಚ್ಚರಾಯಸ್ವಾಮಿ ರಥೋತ್ಸವ ಬಹಳಷ್ಟು ಪ್ರಸಿದ್ದಿ ಪಡೆದಿದೆ. ಇಲ್ಲಿನ ಬ್ರಹ್ಮ ರೋಥೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ನೆರದ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗುತ್ತಾರೆ. ಮೂರು ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಇಲ್ಲಿನ ಮೂಲ ಮೂರ್ತಿ ವಿಶೇಷವಾಗಿದೆ. ವ್ಯಾಸರಾಯರು ಪ್ರತಿಷ್ಠಾಪಿಸಿದ ವಿಗ್ರಹವು ಇದಾಗಿದ್ದು, ಸ್ವಾಮಿಯ ಮೂಲ ಮೂರ್ತಿ ಹಾಗೂ ಮೂಗಿನಲ್ಲಿ ವ್ಯತ್ಯಾಸ ಕಾಣಬಹುದಾಗಿದೆ. ಕೆರೆಯಲ್ಲಿ ಸಿಕ್ಕ ವಿಗ್ರಹದಲ್ಲಿ ಮೂಗು ಮುರಿದಿದ್ದ ಕಾರಣ, ಸಾಲಿಗ್ರಾಮ ಮೂಗನ್ನು ಅಳವಡಿಸಲಾಗಿದೆ. ಇದು ಹಿಮಾಲಯ ಭಾಗದಿಂದ ತಂದು ಜೋಡಿಸಲಾಗಿದೆ ಎನ್ನುವುದು ಇಲ್ಲಿನ ಇತಿಹಾಸದಲ್ಲಿ ದಾಖಲಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಪುರಾತನ ದೇವಸ್ಥಾನವನ್ನು ಪೂರ್ಣ ರೀತಿಯಲ್ಲಿ ಅಭಿವೃದ್ದಿ ಪಡಿಸಿದರು. ನೂತನ ಬ್ರಹ್ಮ ರಥವನ್ನು ಮಾಡಿಸಿದ್ದಾರೆ. ಇದಲ್ಲದೆ ಪುಷ್ಕರಣಿ ಹಾಗೂ ನೂತನ ಉದ್ಯಾನವನ್ನು ದೇವಸ್ಥಾನದ ಸಮೀಪದ ಕೆರೆಯ ಬಳಿ ನಿರ್ಮಾಣ ಮಾಡಿದ್ದು, ಜನರ ಆಕರ್ಷಣೆಯ ಕೇಂದ್ರವಾಗಿದೆ. ನೂರಾರು ಕೋಟಿಗಳ ವೆಚ್ಚೆದಲ್ಲಿ ಕೆರೆಯ ಹೂಳೆತ್ತಿಸಿದ ಕಾರಣ ವರ್ಷ ಪೂರ್ತಿ ಕೆರೆಯಲ್ಲಿ ನೀರು ಇರುತ್ತದೆ. ರಾಜಕಾರಣಿಗೆ ಇಚ್ಛಾಶಕ್ತಿಯಿದ್ದರೆ ಮಾತ್ರ ಇವೆಲ್ಲವೂ ಸಾಧ್ಯ. ಇದೀಗ ಪ್ರವಾಸಿ ತಾಣವಾಗಿರುವ ಶಿಕಾರಿಪುರವನ್ನು ಒಮ್ಮೆ ನೋಡಿ. ಒಂದು ದಿನದ ಪ್ರವಾಸಕ್ಕೆ ಅನುಕೂಲಕರವಾಗಿದೆ. ಇದಲ್ಲದೆ ಬಳ್ಳಿಗಾವಿ, ತಾಳಗುಂದ, ಬಂದಳಿಕೆ ಸ್ಥಳಗಳನ್ನು ಕೂಡ ವೀಕ್ಷಿಸಬಹುದಾಗಿದೆ.
Comments
ಉ: ಹುಚ್ಚರಾಯಸ್ವಾಮಿ ಜಾತ್ರೆಯ ವಿಶೇಷ
ಶ್ರೀ ಯಡಿಯೂರಪ್ಪನವರ ಇಚ್ಛಾಶಕ್ತಿಯಿಂದ ಅದ ಈ ಕೆಲಸಗಳ ಹಿಂದೆ ಪೂರಕವಾಗಿ ಅಧಿಕಾರಿಗಳ ಕಾರ್ಯವೂ ಇದೆ. ಆದರೆ ಇದು ಜನರ ಕಣ್ಣಿಗೆ ಬೀಳದು. ಇಲ್ಲಿ ತೋರಿಸಿರುವ ಸಿವನ ವಿಗ್ರಹವಿರುವ ಸ್ಥಳವನ್ನು ಸರ್ಕಾರಕ್ಕೆ ತೆಗೆದುಕೊಳ್ಳುವ ಕೆಲಸ ನಾನು ತಹಸೀಲ್ದಾರನಾಗಿದ್ದಾಗ ಮಾಡಿದ್ದು. ಇದಕ್ಕಾಗಿ ಪಟ್ಟ ಶ್ರಮ ವೈಯಕ್ತಿಕವಾಗಿ ನನಗೆ ಸಂತೋಷ ತಂದಿದೆ. ಹುಚ್ಚರಾಯಸ್ವಾಮಿ ದೇವಸ್ಥಾನದ ಜಾಗದ ಖಾತೆಯೇ ಪುರಸಭೆಯ ಲೆಕ್ಕದಲ್ಲಿ ಸರಿಯಾಗಿ ಇರಲಿಲ್ಲ. ಅದನ್ನು ಖಾತೆ ಮಾಡಿಸುವಲ್ಲಿ ಸಹ ನನ್ನ ಶ್ರಮವಿತ್ತು. ಯಡಿಯೂರಪ್ನವರು ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಲ್ಲಿ ತಹಸೀಲ್ದಾರನಾಗಿದ್ದ ನನಗೆ ಸಾರ್ವಜನಿಕ ಉದ್ದೇಶದ ಕಾರ್ಯಗಳಿಗಾಗಿ ಸರ್ಕಾರಿ ಜಮೀನು ಒದಗಿಸುವುದು ಸುಲಭದ ಕೆಲಸವಾಗಿರಲಿಲ್ಲ. ಒತ್ತುವರಿಗಳು, ಹೊಡೆದಾಟಗಳು, ಕೋರ್ಟು-ಕಛೇರಿಗೆ ಅಲೆದಾಟಗಳು, ಕಾನೂನು-ಸುವ್ಯವಸ್ಥೆ ಸಮಸ್ಯೆ ಎಲ್ಲವನ್ನೂ ಪರಿಹರಿಸುವಲ್ಲಿ ಪಟ್ಟ ಪಡಿಪಾಟಲುಗಳು ನಿಮ್ಮ ಈ ಲೇಖನದಿಂದ ನೆನಪಿಗೆ ಬಂದವು.ಅದೆಷ್ಟು ಪ್ರತಿಭಟನಾ ಮೆರವಣಿಗೆಗಳು!! ಅವನ್ನು ಎದುರಿಸಲು ನಾನು ಸರ್ಕಾರದ ಪರವಾಧ ಗುರಾಣಿಯಾಗಿದ್ದೆ. ಇವೆಲ್ಲವೂ ಆಗುವಾಗ ನಾನು ಅಲ್ಲಿಂದ ಹೊರಬಂದೆ ಮತ್ತು ಸ್ವ-ಇಚ್ಛಾ ನಿವೃತ್ತಿ ಪಡೆದಿದ್ದೆ. ನಂತರದಲ್ಲಿ ಆ ಸ್ಥಳಗಳಲ್ಲಿ ಶಂಕುಸ್ಥಾಪನೆಗಳು, ಉದ್ಘಾಟನೆಗಳು ವಿಜೃಂಭಣೆಯಿಂದ ನಡೆದವು. ರಾಜಕಾರಣಿಗಳು ಪರಸ್ಪರ ಬೆನ್ನು ತಟ್ಟಿಕೊಂಡು ಹಾರ ಹಾಕಿಸಿಕೊಂಡರು. ಆ ಸಮಾರಂಭಗಳಿಗೂ ಶ್ರಮ ಪಟ್ಟವರು ಅಧಿಕಾರಿಗಳೇ ಆಗಿದ್ದರು. ನಿವೃತ್ತಿಯ ನಂತರದಲ್ಲೂ ಆ ಸಂದರ್ಭದ ಕೋರ್ಟು ಕೇಸುಗಳಿಗಾಗಿ ಶಿಕಾರಿಪುರ, ಶಿವಮೊಗ್ಗಗಳಿಗೆ ಅಲೆದಾಡಿದ್ದೆ! ಇವೆಲ್ಲಾ ನನ್ನ ಕರ್ತವ್ಯದ ಭಾಗವಾಗಿತ್ತಷ್ಟೆ. ಆದರೂ ನನ್ನ ಕರ್ತವ್ಯದಿಂದ ಶಿಕಾರಿಪುರ ತಾ.ನ ಒಳ್ಳೆಯ ಕೆಲಸಗಳಿಗೆ ಸಹಾಯವಾಯಿತೆಂಬ ಧನ್ಯತಾಭಾವವಿದೆ.