ಕಾದಿರುವೆ ಪ್ರತಿಕ್ರಿಯೆಗೆ
ಬದುಕಿನ ಸಹಭಾಗಿಗೆ ನಿನ್ನ ಸೋನಿ ಮಾಡುವ ನಮಸ್ಕಾರಗಳು . ಪತ್ರ ನೋಡಿ ದಂಗಾದೆಯಾ? ಏನು ಮಾಡುವುದು ಮನಸ್ಸನ್ನು ನೆeರವಾಗಿ ನಿನ್ನೆದುರು ತೆರೆಯಲು ಹಿಂಜರಿಕೆ . ನಿನ್ನನು ಹೇಗೆಂದು ಕರೆಯಲಿ ? ಸ್ನೇಹಿತ, ಅಣ್ಣ , Care Taker ಅಥವಾ ಇನ್ನೇನಾದರೂ ಪದವಿದೆಯೋ . ನಿನ್ನ ನನ್ನ ನಡುವೆ ಇರುವ ಬಂಧಕ್ಕೆ ಹೆಸರೇ ಇಲ್ಲ. ಅದಕ್ಕೆ ನೋಡು ಇಷ್ಟು ಸಮಯ ಬಾಳಿಕೆ ಬಂತು . ನನ್ನ ಪರಿಚಯದ ದಿನದಿಂದ ನನ್ನ ಎಲ್ಲ ನೋವು-ನಲಿವು , ಸುಖ - ದುಃಖ ಎಲ್ಲದರಲ್ಲೂ ಭಾಗಿಯಾಗಿದ್ದಿಯಾ . ನನ್ನ ನೋವನ್ನು ಎಲ್ಲರಿಗಿಂತ ಮೊದಲೇ ಅರ್ಥ ಮಾಡಿಕೊಳ್ಳುತ್ತಿದ್ದೆ. ಇದು ನಿನ್ನನು ನಾನು ತುಂಬಾ ಹಚ್ಚಿಕೊಳ್ಳಲು ಕಾರಣ.
ನೀನು ತರಗತಿಗೆ ಸೇರಿ ಕೆಲವು ದಿನಗಳ ನಂತರ ನಿನ್ನನು ನಾನು ನೋಡಿದ್ದೆ. ನೀನೆಕೇ ನನಗೆ ಇಷ್ಟವಾದೆ ಅನ್ನುವ ಪ್ರಶ್ನೆಗೆ ಸರಿಯಾದ ಉತ್ತರ ನನ್ನಲ್ಲಿಲ್ಲ. ನಿನ್ನ ವಿಚಿತ್ರ ನಡವಳಿಕೆ ನನ್ನನು ನಿನ್ನ ಕಡೆಗೆ ಸೆಳೆಯಿತು. ಎಂಥೆಂಥ ಹುಡುಗರು ನನಗೆ ಕಾಳು ಹಾಕುತ್ತಿದ್ದರು ಗೊತ್ತಾ ? ಆದರೆ ನಾನೇ ನಿನಗೆ ಬಿದ್ದೆ .ಮೊದಲೇ ಹೇಳಿದಂತೆ ನೀನೊಬ್ಬ ವಿಚಿತ್ರ ಮನುಷ್ಯ. ಎಲ್ಲರಿಗೂ ಸೆನ್ಸಾರ್ ಇಲ್ಲದಂತೆ ಉತ್ತರ ಕೊಡುತ್ತಿದ್ದೆ. ತರಗತಿಗೆ ಬರುತ್ತಿರಲಿಲ್ಲ , ಬಂದರೆ ನಿದ್ದೆ ಹೊಡೆಯುತ್ತಿದ್ದೆ, ನೋಟ್ಸ್ ಬರೆಯುತ್ತಿರಲಿಲ್ಲ . ಆದರೆ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುತ್ತಿದ್ದಿ. ಎಲ್ಲರಿಗೂ ಗುರ್ರ್ ಎನ್ನುತ್ತಿದ್ದೆ . ಜಾಸ್ತಿ ಯಾರೊಂದಿಗೆ ಬೆರೆಯುತ್ತಿರಲಿಲ್ಲ , ಹೀಗೆಯೇ ಏನೇನೋ . ಅದರೇನು ನೀನು ಒರಟನಾಗಿ ಕಂಡರೂ ನಿನ್ನ ಮನಸ್ಸು ಒಳ್ಳೆಯದು ಎಂದು ತಿಳಿದ ಕ್ಷಣದಿಂದ ನಿನ್ನ ಮೇಲೊಂದು ಕಣ್ಣಿಟ್ಟಿದ್ದೆ , ನೀನು ಕುಡಿಯುತ್ತಿಯಾ , ಸಿಗರೇಟ್ ಸೇದುತ್ತಿಯಾ ಎಂಬ ಗುಮಾನಿಯಿಂದ ನಿನ್ನ ಗೆಳೆಯ ರನ್ನು ಕೇಳಿದೆ . ನೀನು ಅವೆಲ್ಲ ಅಲ್ಲ ತಿಳಿದಾಗ ಎಷ್ಟು ಸಂತೋಷವಾಗಿತ್ತು ಗೊತ್ತಾ ?
ಅಲ್ಲಿಂದ ನಿನ್ನ ಜೊತೆಯಲ್ಲಿ ಬೆರೆಯಲು ಪ್ರಯತ್ನಿಸಿ ಸಫಲಳಾದೆ. ಕಾಲೇಜ್ನಿಂದ ಕೆಲಸದವರೆಗೆ ಮನೆಯಿಂದ - ಬದುಕಿನವರೆಗೆ ಎಲ್ಲವನ್ನು ನಿನ್ನೊಂದಿಗೆ ಹಂಚಿಕೊಂಡಿದ್ದೇನೆ , ಅದರೂ ಒಂದು ವಿಷಯ ಮುಚ್ಚಿಟ್ಟಿದ್ದೆ, ಅದೇ ನಾನು ನಿನ್ನ ಪ್ರೀತಿಸುತ್ತಿರುವ Matter . ನಿಜವಾಗಿ ನಿನ್ನ ಮನದಲ್ಲಿ ಇದು ಇದೆಯೋ ಎಂದು ನನಗೆ ಗೊತ್ತಿಲ್ಲ . ಅದರೂ Female First ಎನ್ನುವ Concept ಮೇಲೆ ನಾನೇ ಬಾಯಿ ಬಿಟ್ಟಿದ್ದೇನೆ , ನಮ್ಮ ಸ್ನೇಹ ಪ್ರೀತಿಯಾಗುವುದು ಅಂಥ ದೊಡ್ಡ ವಿಷಯವಲ್ಲವೆಂದು ನನ್ನ ಭಾವನೆ. ಯಾವ ಹುಡುಗಿಯರು ಇಷ್ಟಪಡದ ನಿನ್ನ ಸ್ನೇಹ ಮಾಡಿದ್ದೇನೆ. ಪ್ರೀತಿ ಮಾಡಿದ್ದೇನೆ . ಯಾಕೋ ನಾನು ಹೀಗಾದೆ ? ನನ್ನ ಎಲ್ಲ ಪ್ರಶ್ನೆ , ಸಂದೇಹಗಳಿಗೆ ಉತ್ತರವಿರುವ ನಿನ್ನಲ್ಲಿ ಇದಕ್ಕೂ ಉತ್ತರವಿರಬಹುದು, ನಾನೇನು ನಿನ್ನ ಉತ್ತರವನ್ನು ಅಶೀಸುತ್ತಿಲ್ಲ , ನನ್ನ ಎಲ್ಲ ವಸ್ತುಗಳನ್ನು ನನ್ನಲ್ಲಿ ಕೇಳಿಯೇ ಪಡೆಯಬೇಕೆಂಬ ಮನಸ್ಥಿತಿ ಉಳ್ಳ ನಾನು ನಿನ್ನನು ಕೇಳದೆ ನಿನ್ನ ಎಲ್ಲ ವಸ್ತುಗಳನ್ನೂ ಪಡೆಯುತ್ತಿದ್ದೆ, ನನಗೆ ನೀನು ಅಷ್ಟು ಸ್ವಾತಂತ್ರ್ಯ ನೀಡಿದ್ದೆ . ಇದು ಕೂಡ ಹಾಗೇನೆ , ನಿನ್ನ ಅನುಮತಿ ಇಲ್ಲದೆ ನಿನ್ನ ನನ್ನಲ್ಲಿ ಅಡಗಿಸಿರುವೆ , ಪತ್ತೆ ಹಚ್ಚಿ ಕಿತ್ತುಕೊಳ್ಳಬೇಡ .
ನನ್ನ ಈ ಪತ್ರವನ್ನು ಓದಿ ತಲೆ ಸರಿಯಿಲ್ಲದ ಹರೆಯದ ಹುಡುಗಿ ಏನೇನೋ ಬರೆದಿದ್ದಾಳೆ ಅಂದುಕೊಳ್ಳಬೇಡ , ತಲೆ ಹಾಗು ನಾನು ಸರಿಯಾಗಿಯೇ ಇದ್ದೇವೆ. ನನ್ನ ಅಷ್ಟೂ ಹುಚ್ಚಾಟಗಳನ್ನು ಸಹಿಸಿಕೊಂಡವ ನೀನು. ಮನೆಯಲ್ಲಿ ತಂದೆ - ತಾಯಿ , ಅಣ್ಣನಿಗೆ ಸದಾ ಕೀಟಲೆ ಮಾಡುತ್ತ ಬೈಗುಳ ತಿನ್ನುವ ತರಲೆಯಾಗಿದ್ದೆ , ನನ್ನ ಈ ಸ್ವಭಾವ ವನ್ನು ನೀನು ನೋಡಿರುತ್ತಿಯೇ , ದಾರಿತಪ್ಪುವ ಅಥವಾ ತಪ್ಪ್ಪು ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ನನ್ನ ಕಾಪಾಡಿರುವೆ , ಪರೀಕ್ಷೆಯಲ್ಲಿ ಸೋತು ಕಣ್ಣಿರಿಡುವ ಸಂದರ್ಭದಲ್ಲಿ ನನ್ನ ಸಂತೈಸಿರುವೆ. ಕೊನೆಯವರೆಗೆ ನಿನ್ನೊಂದಿಗೆ ಹೀಗೆ ಕೀಟಲೆ ಮಾಡುತ್ತ ಇರಲು ನಂಗಿಷ್ಟ , ನೀನಲ್ಲದೆ ಬೇರೆ ಯಾರು ಇದಕ್ಕೆ ಅವಕಾಶ ಕೊಡುತ್ತಾರೆ ನೀನೆ ಹೇಳು. ಈ ನಿನ್ನ ಆಸರೆಯಿಂದ ಹೊರಹಾರಿ ಒಬ್ಬಂಟಿಯಾಗಿ ಬದುಕುವ ಶಕ್ತಿ ಹಾಗೂ ಇಚ್ಛೆ ನನ್ನಲ್ಲಿಲ್ಲ . ಕ್ಷಮಿಸು ಗೆಳೆಯ, ಏಕೆಂದರೆ ನೀನು ನನಗೆ ಏಕಾಂಗಿಯಾಗಿ ಬದುಕುವುದನ್ನು ಹೇಳಿಕೊಟ್ಟಿಲ್ಲ ಮತ್ತು ಕೊಡಬೇಡ. ನೀನು ನನ್ನ ಜೊತೆಗಿರಬೇಕು ಅದೇ ಚಂದ. "ನೀನು ಪ್ರಬುದ್ಧನಾಗಿಲ್ಲ " ಎಂದು ಅವಾಗವಾಗ ಹೇಳುತ್ತಿರುತ್ತಿಯಲ್ಲ , ಅದಕ್ಕೆ ನೀನೆ ಕಾರಣ. ನಿನ್ನ ಪಂಜರದಲ್ಲಿ ಬಂಧಿಯಾಗಿರುವ ಗಿಣಿ ನಾನು, ಏಕಾಏಕಿ ಪ್ರಪಂಚವೆಂಬ ತಿಳಿಯದಿರುವ ಕಾಡಿಗೆ ಬಿಡಬೇಡ ನನ್ನ.
ನಿನಗಾಗಿ ನಾನು ಬದಲಾಗಿರುವೆ , ಸ್ವಲ್ಪ ಮಟ್ಟಿಗೆ ನಿನ್ನ ನಾನು ಬದಲಾಯಿಸಿರುವೆ , ಏಕೆಂದರೆ ಬದಲಾವಣೆಯೇ ಜಗದ ನಿಯಮ , ಹಾಗಂತ ನನ್ನೇ ಬದಲಾಯಿಸಿಬಿಡಬೇಡ ಮಾರಾಯ . ನೋಡು ಏನನ್ನೋ ಹೇಳಲು ಹೊರಟವಳು ಇನ್ನೇನನ್ನೋ ಹೇಳುತ್ತಿದ್ದೇನೆ . ನನ್ನ ಮನದ ತುಮುಲವನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ದಡ್ಡ ನೀನಲ್ಲ . ಒಂದೆರಡು ಬಾರಿ ನಿನಗೆ ಇದರ ಸೂಚನೆಯು ಸಿಕ್ಕಿರಬಹುದು . ಅದರೂನು ಏನು ಅರಿಯದ ಅಮಾಯಕನಂತೆ ನಿಂತಿರುವೆಯಲ್ಲ ಯಾಕೋ ನೀನು ಹೀಗೆ ಮಾಡುತ್ತಿರುವೆ. ಅಂದು ನಾವು ಜತೆಗೂಡಿ ನೋಡಿದ ಆ ಚಿತ್ರಮಂದಿರದಲ್ಲಿ ನಾನು ನಿನ್ನ ಕೈ ಹಿಡಿದಾಗ "ಯಾಕೆ ಭಯವಾಗುತ್ತಿದೆಯಾ ? " ಎಂದು ಕೇಳಿದ್ದೆಯಲ್ಲ . ಹೌದು ಭಯವಾಗುತ್ತಿದೆ , ನೀನು ನನ್ನ ಪತ್ರವನ್ನು ಎಲ್ಲಿ ಹರಿದು ಬಿಸಾಕುತ್ತಿಯೇನೋ ಅಂತ ಭಯವಿದೆ. ಅಂದು ನಿನ್ನ ನೋಡಿ ದೇಹದಲ್ಲಿ ಹರಿದ ಹಾರ್ಮೊನಿನ ಪ್ರಭಾವಕ್ಕೆ ಸಿಲುಕಿ ನಿನ್ನ ಅಪ್ಪುಗೆಗೆ ನಾ ಹಂಬಲಿಸಿದ್ದರೆ ನಿನಗದು ಅರ್ಥವಾಗಲೇ ಇಲ್ಲವೇ . ಒಂದು ಹೇಳುವೆ ಕೇಳು , ನೀನು ನನ್ನ Depend ಮಾಡುವ ತನಕ ಯಾವ ವಿಲನ್ ನನ್ನ ಏನು ಮಾಡಲು ಸಾಧ್ಯವಿಲ್ಲ . ಹೆಣ್ಣಾಗಿ ನನಗೆ ನಿನ್ನ ಮೇಲೆ ಇಷ್ಟು confidence ಇರಲು ನಿನಗೇನೋ ದಾಡಿ ? ನನ್ನ ಇಷ್ಟಪಡಲು.
ನಿನ್ನ ಮನಸ್ಸು ನನಗೆ ಗೊತ್ತು , ಈ ಪತ್ರ ಓದಿ ನಗು ಬರಬಹುದು ,ಸ್ವಲ್ಪ ಕೋಪ ಬಂದರೂ ಬರಬಹುದು . ಅಥವಾ ಪೂರ್ತಿ ಖುಷಿಯಾಗಿ ಬಿಡುತ್ತಿಯಾ? ನನ್ನ ಮಾತು ನಿನ್ನಲ್ಲಿ ಅವಿರ್ಭವಿಸಿತ್ತು ಎಂದು. ಹಾಗೆಂದು ತಕ್ಷಣ ನಾನು ನಿನ್ನ ಫೋನ್ಕಾಲ್ ಸ್ವೀಕರಿಸಲಾರೆ , ನಿನ್ನಲ್ಲಿ ಮುಂದೆ ನಡೆಯಬಹುದಾದ ಮಾನಸಿಕ ತೊಳಲಾಟವನ್ನು ನಾನಾಗಲೇ ಅನುಭವಿಸಿದ್ದೇನೆ , ನೀನು ಅನುಭವಿಸು . ಅದರ ಖುಷಿ , ವೇದನೆ , ಹಂಬಲ , ತಾಳ್ಮೆ ,ಮುನಿಸ್ಸು , ಸರಸ ಹಾಸ್ಯ ಹೀಗೆ ಎಲ್ಲವನ್ನು ಅನುಭವಿಸೋಣ . ಮದ್ಯರಾತ್ರಿಯವರೆಗೆ ಹರಟೆ ಹೊಡೆಯೋಣ , ಸಣ್ಣಗೆ ಕೋಪ ಮಾಡಿಕೊಳ್ಳೋಣ. ಪರಸ್ಪರರನ್ನು ಕ್ಷಮಿಸೋಣ , ಮತ್ತಷ್ಟು ಹತ್ತಿರವಾಗೋಣ , ಆದರೆ ನನಗೆ ಪ್ರೀತಿಸಲು ಗೊತ್ತಿಲ್ಲ ಎಂದು ಸುಳ್ಳು ಹೇಳಬೇಡ ನೋಡು , ಪ್ರೀತಿ ಮಾಡಲು ಅನುಭವ ಬೇಡ ದೇವರ ಸುಂದರ ಸೃಷ್ಟಿಯಲ್ಲಿ ಪ್ರೀತಿಯು ಒಂದು . ಮಗುವಿಗೂ ಗೊತ್ತು ತನ್ನ ತಾಯಿಯನ್ನು ಪ್ರೀತಿಸಲು ಅಂಥದರಲ್ಲಿ ನಿಂಗೇನೋ , ನನ್ನ ಪ್ರೀತಿಸಲು. ನನಗೆ ಬೇಕಾದುದನೆಲ್ಲ ನಿನ್ನಿಂದ ಕಿತ್ತು ಪಡೆದಿರುವೆ, ನಿನ್ನ ಮನಸ್ಸಲ್ಲಿ , ಜೀವನದಲ್ಲಿ ಪಾಲು ಬೇಕು , ಇದನ್ನು ಕಿತ್ತು ಪಡೆಯಲು ನನಗೂ ಮನಸ್ಸಿಲ್ಲ .
ಹೇಳಲು ಇನ್ನೇನೇನೋ ಇದೆ ,ನಾನೇನೆ ಹೇಳಿದರು ಈ ಮೊದಲಿನಂತೆ ನನ್ನನು ಅರ್ಥೈಸಿಕೊಳ್ಳುವೆ ನೀನು. ನೀನು ನನ್ನ ಈ ಭಾವನೆಗಳಿಗೆ ಪ್ರತಿಸ್ಪಂದಿಸುತ್ತಿಯಾ ಎಂದು ನಾನು ತಿಳಿದಿದ್ದೇನೆ . ತುಂಬಾ ಹೊತ್ತಾಗುತ್ತ ಬಂತು , ಮೊದಲ ಪತ್ರ ಇಲ್ಲಿಗೆ ಮುಗಿಸುತ್ತೇನೆ. ನಿನ್ನ ಉತ್ತರ ನಿನ್ನ ಕಣ್ಣೆ ನನಗೆ ಹೇಳಲಿ , ನನ್ನ ಕೆನ್ನೆ ಕೆಂಪಾಗುವಂತೆ - ಕಣ್ಣು ನೀರಾಗದಂತೆ .
-Tharanatha Sona