ವಾವ್! ಎಂಬೋ ಬಾವಿ...

ವಾವ್! ಎಂಬೋ ಬಾವಿ...

 
ಹೌದು ,ಇದು ಅಂಥಿಂಥ ಬಾವಿಯಲ್ಲ. ನೋಡುಗನ ಬಾಯಲ್ಲಿ ವಾವ್... ಎಂಬ ಉದ್ಗಾರ ಹುಟ್ಟಿಸುವ ಬಾವಿ. ಜಲಮೂಲಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಕಳಕಳಿ, ಭಕ್ತಿಯ ದರ್ಶನ ಮಾಡಿಸುವ ಈ ಬಾವಿಯೇ “ ಅದಾಲಜ್ ನಿ ವಾವ್”.ಗುಜರಾತಿಭಾಷೆಯಲ್ಲಿ ಬಾವಿಗೆ ವಾವ್ ಎನ್ನುತ್ತಾರೆ. ಅಹಮದಾಬಾದಿನಿಂದ ೧೮ ಕಿ.ಮೀ. ದೂರದ ಅದಾಲಜ್ ಎಂಬಲ್ಲಿರುವ ಈ ಮೆಟ್ಟಿಲುಬಾವಿ ತನ್ನ ಅಪೂರ್ವ ರಚನೆಯಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
 
                  ಈ ಮೆಟ್ಟಿಲುಬಾವಿ ಅಥವಾ ಕೊಳಗಳು ಭಾರತದಲ್ಲೆಡೆ ಕಂಡುಬರುತ್ತಿದ್ದರೂ ಪಶ್ಚಿಮಭಾರತದಲ್ಲಿ ಇವುಗಳ ಸಂಖ್ಯೆ ಹೆಚ್ಚು. ಕರ್ನಾಟಕದ ಗದುಗಿನ ಎಕ್ಕುಂಡಿಯಲ್ಲಿ ಇಂಥ ಅದ್ಭುತಬಾವಿಯನ್ನು ಕಾಣಬಹುದು. ಮಳೆನೀರು ಸಂಗ್ರಹ, ವರ್ಷವಿಡೀ ಜನ- ಜಾನುವಾರುಗಳಿಗೆ ನೀರುಣಿಸುವುದು  ಇವುಗಳ ಹಿಂದಿನ ಉದ್ದೇಶ. ಹೆಚ್ಚಾಗಿ ಗಾರೆ,ಇಟ್ಟಿಗೆಗಳಿಂದ ಕಟ್ಟಲ್ಪಡುತ್ತಿದ್ದ ಇವುಗಳಲ್ಲಿ ಕೆಲವು ರಾಜ ಮಹಾರಾಜರ ಕೃಪೆಯಿಂದ ಕಲ್ಲಿನಲ್ಲಿ ನಿರ್ಮಾಣವಾಗಿ ಸುಂದರ ಶಿಲ್ಪಕಲಾ ವೈಭವವನ್ನು ಮೆರೆಯಿಸುವ ತಾಣಗಳಾದವು. ಜನರ ದೈನಂದಿನ ಉಪಯೋಗಕ್ಕೆ ನೀರು ಒದಗಿಸುವ ಜೊತೆಗೆ ಉತ್ಸವ, ಮನರಂಜನೆಗಳ ಕೇಂದ್ರಗಳಾಗಿ ಮೆರೆದವು.ನೀರು ತರುವ ಕೆಲಸ ಹೆಚ್ಚಾಗಿ ಹೆಂಗಸರದ್ದೇ ಆಗಿದ್ದರಿಂದ ಅವರ ಬಿಡುವಿನ ಹರಟೆಕಟ್ಟೆಗಳಾಗಿ ಧನ್ಯವಾದವು.ಪುರಾತನ ಇತಿಹಾಸದ ಕೇಂದ್ರ ಮೊಹೆಂಜೋದಾರೋವಿನಲ್ಲಿ ಏಳುನೂರಕ್ಕೂ ಹೆಚ್ಚಿನ ಮೆಟ್ಟಿಲು ಬಾವಿಗಳು ಪತ್ತೆಯಾಗಿವೆಯೆಂದರೆ ಇವುಗಳ ಸಮೃದ್ಧ ಇತಿಹಾಸದ ಕಲ್ಪನೆ ಮಾಡಿಕೊಳ್ಳಬಹುದು. ಭಾರತದಲ್ಲಿ ಇಂದು ಸುಸ್ಥಿತಿಯಲ್ಲಿರುವ ಇನ್ನೂರಕ್ಕೂ ಅಧಿಕ ಬಾವಿಗಳಿವೆ ಎನ್ನಲಾಗಿದೆ.
 
೧೪೯೯ರಲ್ಲಿ ಮುಸ್ಲಿಮ್ ದೊರೆ ಮಹಮದ್ ಬೇಗ್ದನಿಂದ ನಿರ್ಮಿಸಲ್ಪಟ್ಟಿತು ಎಂಬ ಉಲ್ಲೇಖವಿರುವ ಅದಾಲಜ್ ನ ಮೆಟ್ಟಲು ಬಾವಿಯ ಆಳದಲ್ಲಿ ಕಣ್ಣೀರಿನ ಕಥೆಯಿದೆ.೧೪೯೮ರಲ್ಲಿ ವಘೇಲಾ ವಂಶದ ರಾಣಾವೀರಸಿಂಹ ತನ್ನ ಪ್ರಿಯಪತ್ನಿ ರೂಪಬಾ ಗೋಸ್ಕರ ಇದರ ನಿರ್ಮಾಣವನ್ನು ಆರಂಭಿಸಿದ. ಕೆಲಸ ಕಾಲುಭಾಗದಷ್ಟು ಮುಗಿದಿತ್ತಷ್ಟೇ . ಪಕ್ಕದ ರಾಜ್ಯದ ದೊರೆ ಮಹಮದ್ ಬೇಗ್ದ ಯುದ್ಧ ಸಾರಿದ . ಯುದ್ಧದಲ್ಲಿ ವೀರಸಿಂಹ ವೀರಮರಣವನ್ನಪ್ಪಿದ. ವಿಜಯೀ ಮಹಮದ್ ಬೇಗ್ದ ಅಪ್ರತಿಮಸುಂದರಿ ರೂಪಬಾ ಳನ್ನು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಲಾರಂಭಿಸಿದ. ರೂಪಬಾ ಒಂದು ಶರತ್ತನ್ನೊಡ್ಡಿ ಮದುವೆಗೆ ಸಮ್ಮತಿಯಿತ್ತಳು. ತನ್ನ ಪತಿ ಆರಂಭಿಸಿದ ಬಾವಿಯ ನಿರ್ಮಾಣ ಮೊದಲು ಮುಗಿಸಬೇಕು, ನಂತರವೇ ಮದುವೆ. ಸರಿ.. ಮಹಮದ್ ಬೇಗ್ದನ ಆಜ್ಞೆಯಂತೆ ಅತ್ಯಂತ ತ್ವರಿತಗತಿಯಲ್ಲಿ ಬಾವಿಯ ನಿರ್ಮಾಣ ಮುಗಿಯಿತು. ಆದರೆ ರಾಣಿ ರೂಪಬಾ ಒಂದು ರಾತ್ರಿ ಆ ಬಾವಿಯಲ್ಲಿ ಹಾರಿ ಪ್ರಾಣತ್ಯಾಗಗೈಯುವುದರೊಂದಿಗೆ ಮಹಮದ್ ಬೇಗ್ದನ ಕನಸನ್ನು ಭಗ್ನಗೊಳಿಸಿದಳು.ಚರಿತ್ರೆಯಲ್ಲಿ ಅಮರಳಾದಳು. ಮಹಮದ್ ಬೇಗ್ದ ನಿರಾಶನಾದರೂ ಬಾವಿಯನ್ನು ಸಂರಕ್ಷಿಸುವಂತೆ ವ್ಯವಸ್ಥೆ ಮಾಡುತ್ತಾನೆ.  ಈಘಟನೆಗಳು ಬಾವಿಯ ಗೋಡೆಗಳ ಮೇಲೆ ಸುಂದರವಾಗಿ ಕೆತ್ತಲ್ಪಟ್ಟಿವೆ.ಬಾವಿಯ ನಿರ್ಮಾಣದ ದಾಖಲೆಗಳನ್ನು ಮೊದಲ ಮಹಡಿಯ ಗೋಡೆಯ ಮೇಲೆ ಸಂಸ್ಕೃತದಲ್ಲಿ ಕೊರೆಯಲಾಗಿದೆ. ಈ ಮೆಟ್ಟಲುಬಾವಿಯ ಶಿಲ್ಪಕಲೆಯನ್ನು ಸೂಕ್ಶ್ಮವಾಗಿ ಗಮನಿಸಿದರೆ ತಳಹಂತದಲ್ಲಿ ಹಿಂದೂ ದೇವ-ದೇವಿಯರ ಕೆತ್ತನೆಗಳು ಕಂಡುಬಂದರೆ ಮೇಲಿನ ಹಂತಗಳಲ್ಲಿ ಇಸ್ಲಾಮಿಕ್ ಶೈಲಿ ಕಣ್ಣಿಗೆ ರಾಚುತ್ತದೆ.
 
ಅದಾಲಜದ ಮೆಟ್ಟಲುಬಾವಿ ಐದುಮಹಡಿ[ ಸುಮಾರು ೧೦೦ ಅಡಿ] ಆಳವಿದೆ. ಅಷ್ಟಭುಜಾಕೃತಿಯಲ್ಲಿ ಬಲಿಷ್ಠ ಸ್ತಂಭಗಳ ಮೇಲೆ ಕಟ್ಟಲ್ಪಟ್ಟಿದೆ.ಎಲ್ಲ ದಿಕ್ಕುಗಳಿಂದಲೂ ಸಾಕಷ್ಟು ಗಾಳಿ ಬೆಳಕು ಬರುತ್ತದೆ. ಮೇಲಿನಿಂದ ಬಾವಿಯೊಳಗೆ ಇಳಿಯಲು ಮೂರು ದಿಕ್ಕುಗಳಲ್ಲಿ ಮೆಟ್ಟಲುಗಳಿವೆ. ಪ್ರತಿ ಮಹಡಿಯಲ್ಲೂ ಜನರು ಓಡಾಡಲು ಸಾಕಷ್ಟು ಸ್ಥಳಾವಕಾಶ ಇದೆ. ಬಾವಿಯ ಗೋಡೆಗಳ ಮೇಲೆ ನೀರು ತುಂಬುವ ಪಾತ್ರೆಗಳು, ಕಲ್ಪವೃಕ್ಷ, ನವಗ್ರಹಗಳ ಕೆತ್ತನೆ ಮನಸೆಳೆಯುತ್ತದೆ. ಅಲ್ಲದೆ ಮೊಸರು ಕಡೆಯುವುದು, ಅಲಂಕರಿಸಿಕೊಳ್ಳುವುದು, ರಾಜನ ಆಸ್ಥಾನದಲ್ಲಿ ನೃತ್ಯ-ಸಂಗೀತ ಸಭೆ ಇತ್ಯಾದಿ ಕೆತ್ತನೆಗಳಲ್ಲಿ ಮಹಿಳೆಯರ ದೈನಂದಿನ ಬದುಕು ಅನಾವರಣಗೊಂಡಿದೆ. ಬಾವಿಯ ಒಳಗಿನ ತಾಪಮಾನ ಆಹ್ಲಾದಕರವಾಗಿದ್ದು ಹೊರಗಿನ ಉಷ್ಣತೆಗಿಂತ ಐದು ಡಿಗ್ರಿ ಕಡಿಮೆ ಇರುತ್ತದೆ.
ಭವ್ಯವಾದ ಅರಮನೆಯನ್ನು ಪ್ರವೇಶಿಸುತ್ತಿದ್ದೇವೇನೋ ಎಂಬ ಭಾವನೆಯನ್ನು ಉಂಟುಮಾಡುವ ಅದಾಲಜದ ಬಾವಿ ಸ್ವಚ್ಛವಾಗಿದೆ. ನೀರಿನ ಮೇಲೆ ಲೋಹದ ಬಲೆಯನ್ನು ಹೊದಿಸಲಾಗಿದೆ. ಸುತ್ತಲೂ ಸುಂದರವಾದ ಉದ್ಯಾನವಿದೆ.ಅಹಮದಾಬಾದ್ ನಿಂದ ರಸ್ತೆ ಸಂಪರ್ಕ ಅತ್ಯುತ್ತಮವಾಗಿದ್ದು ಒಳ್ಳೆಯ ಬಸ್ ವ್ಯವಸ್ಥೆ ಇದೆ. ಬಾಡಿಗೆ ಕಾರುಗಳು, ರಿಕ್ಷಾಗಳೂ ಸಿಗುತ್ತವೆ. ಮುಂದೆ ನೀವೆಲ್ಲಾದರೂ ಅಹಮದಾಬಾದಿಗೆ ಭೇಟಿ ಇತ್ತರೆ ಅದಾಲಜದ ಮೆಟ್ಟಲು ಬಾವಿಯನ್ನು ನೋಡಲು ಮರೆಯದಿರಿ.