ಅವಳು ಬಿಂದಿಗೆಯಲ್ಲಿ ಹೊತ್ತಿದ್ದು ನೀರನ್ನೋ? ಅಥವಾ ಜಗದ ಪ್ರೇಮವನ್ನೋ?

ಅವಳು ಬಿಂದಿಗೆಯಲ್ಲಿ ಹೊತ್ತಿದ್ದು ನೀರನ್ನೋ? ಅಥವಾ ಜಗದ ಪ್ರೇಮವನ್ನೋ?

ಸೊಂಟದ ಮೇಲೆ ಬಿಂದಿಗೆ ಇಟ್ಟು,
ಬಳುಕುತ್ತಾ ಬರುತ್ತಿದ್ದ ಸುಂದರಿ
ಅಂದೇ 
ಕದ್ದು ಹೋದಳು ನನ್ನೊಳಗಿನ ನನ್ನನ್ನು. 
 
ಅವಳು ನಕ್ಕಾಗ
ಅವಳ ಕಪ್ಪು, ದುಂಡು ಮುಖದ ತುಂಬಾ 
ಬಿಳಿಯ ದಂತಪಂಕ್ತಿ, ಹೊಳೆಯುತ್ತಿತ್ತು 
ದೀಪದಂತೆ. 
 
ನೇರ ನಡೆವುದ ನೋಡೇ ಇಲ್ಲ ನಾನು,,
ಅವಳಲ್ಲೇನೋ ಸದಾ ವಯ್ಯಾರ 
 
ಬಾವಿಗೆ ನಡೆಯುವ ಕಾಲು ಹಾದಿಯಲ್ಲಿ,
ಹೂ ಗಿಡಗಳಿಗೆ ಸದಾ ಮುತ್ತಿಡುತ್ತಿದ್ದವಳು 
ಅಂಬೆಗಾಲಿಡುವ ಮಕ್ಕಳ ಕಣ್ಣಿಗೆ
ಕಾಡಿಗೆ ಹಚ್ಚಿ ಸಂಭ್ರಮಿಸುತ್ತಿದ್ದಳು,
 
ಬಡತನದ ಜೋಪಡಿಯಲ್ಲಿ,
ಸದಾ ಶ್ರೀಮಂತೆಯಾಗಿ, ಮಲ್ಲಿಗೆ ಮುಡಿಯುತ್ತಿದ್ದಳು,
ಹರಿದ ಲಂಗದ ಮೇಲೆ,
ಅವಳವ್ವನ ಸೀರೇ ಚೂರಿನ ತ್ಯಾಪೆ 
ಅವಳ ಅಂದವನು ಹೆಚ್ಚಿಸುತ್ತಿತ್ತು. 
 
ಮೈ ನೆರೆದು, ತಿಂಗಳುಗಟ್ಟಲೆ ಮುದುಡಿ ಕುಳಿತು,
ಮತ್ತವಳ ಮುಖ ಕಂಡಾಗ
ಅದೇನೋ ಹೊಳಪು, 
ಕೆನ್ನೆ ಉಬ್ಬಿ, ಕಣ್ಣು ಕೋರೈಸಿ, 
ತುಟಿ ಕಾವ್ಯ ಬರೆಯುತ್ತಿತ್ತು,
 
ಮೆದು ಹಾಸಿಗೆಯ ಮೇಲೆ ಮಲಗಿದವಳಲ್ಲ ಅವಳು,
ಆದರೂ ಅವಳ ಎದೆಯೊಳಗೆ ಸಾವಿರಾರು ಮೆದು ಭಾವಗಳು 
ವಜ್ರ ವೈಡೂರ್ಯ ಕಂಡೇ ಇಲ್ಲ ಅವಳು,
ಆದರೂ ಅವಳೊಳಗೆ ನಿತ್ಯ ಆಭರಣ ಚಿಲುಮೆ,
 
ಅವಳು ಬಿಂದಿಗೆಯಲ್ಲಿ ಹೊತ್ತು ಹೋಗುತ್ತಿದ್ದುದು ನೀರನ್ನೋ ?
ಅಥವಾ ಜಗದ ಪ್ರೇಮವನ್ನೋ ?
ನನಗದೇ ಅನುಮಾನ !
 
-ಜಿ ಕೆ ನ