'ಪದಕಗಳಿಷ್ಟೇ..!?' ಇದು ಸಹಜ ಪ್ರೆಶ್ನೆ. ಆದರೆ.....

'ಪದಕಗಳಿಷ್ಟೇ..!?' ಇದು ಸಹಜ ಪ್ರೆಶ್ನೆ. ಆದರೆ.....

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ರಿಯೋ ಒಲಿಂಪಿಕ್ಸ್ ಶುರುವಾಗಲು ಕೆಲವಾರಗಳ ಮೊದಲಷ್ಟೇ ಬರೆದಿದ್ದ ಈ ಅಂಕಣವನ್ನು ಇಲ್ಲಿ ಲಗತ್ತಿಸಬೇಕೋ ಬೇಡವೋ ಎಂಬ ದ್ವಂದ್ವದಲ್ಲಿದ್ದೆ. ಆದರೀಗ ಭಾರತದ 'ದಿ ಫ್ಲೈಯಿಂಗ್ ಸಿಖ್' ಎಂದೇ ಪ್ರಸಿದ್ಧಿಯ ಮಿಲ್ಕ ಸಿಂಗ್ ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ ಒಲಿಂಪಿಕ್ಸ್ನಲ್ಲಿ ಆಟಗಾರ ಕಳಪೆ ಪ್ರದರ್ಶನಕ್ಕೆ ಪ್ರಸ್ತುತ ಭಾರತೀಯ ಒಲಿಂಪಿಕ್ಸ್ ಫೆಡರೇಶನ್ನೇ ಕಾರಣವೆಂದು ಹೇಳಿಯೇ ಬಿಟ್ಟರು. ಅವರ ಈ ಹೇಳಿಕೆ ಕೆಲವರಿಗೆ ಅವಿವೇಕದ ಮಾತುಗಳೆನಿಸಿದರೂ ಎಲ್ಲೋ ಒಂದೆಡೆ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕೆನಿಸುತ್ತದೆ. ಇಲ್ಲವಾದಲ್ಲಿ ದಶಕಗಳ ಕಾಲ ದೇಶಕ್ಕಾಗೇ ಓಡಿದ ಜೀವ ಎಂದೂ ದೇಶದ ಬಗ್ಗೆ, ಫೆಡೆರೇಶನ್ನ ಬಗ್ಗೆ ಹೀಗೆ ಹೇಳಲಾರದು. ಅವರ ಈ ಹೇಳಿಕೆಯನ್ನು ಬಾಲಿಶ ಹೇಳಿಕೆಯೆಂದು ಪರಿಗಣಿಸದೆ ಕೆಳಗೆ ಗೀಚಿರುವ ಕೆಲ ಪದಗನ್ನು ಓದಿ ಸರಿಯೆನಿಸಿದರೆ ಪ್ರತಿಕ್ರಿಯಿಸಿ.

 

ಒಂಬತ್ತು ಚಿನ್ನ, ನಾಲ್ಕು ಬೆಳ್ಳಿ ಹಾಗು ಹನ್ನೊಂದು ಕಂಚು. ಇದು ಒಲಿಂಪಿಕ್ ಇತಿಹಾಸದಲ್ಲಿ ಈವರೆಗಿನ ಭಾರತದ ಸಾದನೆ. ಒಟ್ಟು ೨೪ ಪದಕಗಳಲ್ಲಿ ಬಹುತೇಕ ಅರ್ಧದಷ್ಟು (ಹನ್ನೊಂದು) ಪದಕಗಳು ಹಾಕಿಯಿಂದ  ಬಂದವುಗಳಾದರೆ ಉಳಿದ ೧೩ ವೈಯಕ್ತಿಕ ಪದಕಗಳು. ೧೮೯೬ ರ ಅಧುನಿಕ ಒಲಿಂಪಿಕ್ಸ್ ಶುರುವಾಗಿ ಸುಮಾರು ನೂರು ವರ್ಷಗಳ ನಂತರವೂ ವೈಯಕ್ತಿಕ  ಮಟ್ಟದಲ್ಲಿ ಭಾರತ ಗಳಿಸಿದ್ದು ಕೇವಲ ಒಂದೇ ಒಂದು ಪದಕ. ಅದು ೧೯೫೨ರ ಹೆಲ್ಸೆಂಕಿ ಒಲಿಂಪಿಕ್ನ ಕುಸ್ತಿಯಲ್ಲಿ  K.D ಜಾಧವ್ರರಿಗೆ ದೊರೆತ ಕಂಚಿನ ಪದಕ. ಪದಕಗಳ ನಿರೀಕ್ಷೆಯಲ್ಲಿ ಶತಕಗಳನ್ನೇ ಕಳೆದ ಭಾರತ ೧೯೯೬ ರಿಂದ ಈಚೆಗೆ ಅಂದರೆ ಕಳೆದ ೨೦ ವರ್ಷಗಳಲ್ಲಿ ಗಳಿಸಿರುವುದು ೧೨ 'ವೈಯಕ್ತಿಕ' ಪದಕಗಳು. ಅದರಲ್ಲೂ ಕೇವಲ ಕಳೆದೆರಡು ಒಲಿಂಪಿಕ್ಸ್ನಲ್ಲೆ  ಒಟ್ಟು ೯ ಪದಕಗಳನ್ನು ಗಳಿಸಿದೆ. ವೈಯಕ್ತಿಕ ಮಟ್ಟದಲ್ಲಿ ಇತ್ತಿಚೆಗೆ ಇಷ್ಟೆಲ್ಲಾ ಸಾಧನೆಗಳನ್ನು ಮಾಡುತ್ತಿರುವ ನಮ್ಮ ಕ್ರೀಡಾಪಟುಗಳು ಒಲಿಂಪಿಕ್ಸ್ಗೆ ಆಯ್ಕೆಯಾಗುವ ಮುನ್ನ ಎದುರಿಸುವ ಸಂದಿಗ್ನತೆ ಹೊಸತೇನಲ್ಲ. ಒಲಿಂಪಿಕ್ಗೆ ಆಯ್ಕೆಯಾಗುವ ಅಷ್ಟೂ ಮಂದಿಯೂ ಸಹಜವಾಗಿಯೇ ಅರ್ಹರಾಗಿರುತ್ತಾರೋ ಅಥವಾ ಅವರಿಗಿಂತ ಮಿಗಿಲಾದ ಅಥವಾ ಹೆಚ್ಚಿನ ಅರ್ಹತೆಯುಳ್ಳ ಕ್ರೀಡಾಪಟುಗಳು ಆಯ್ಕೆಯಾಗದೆ ಉಳಿಯುತ್ತಾರೆಯೋ ಹಾಗು ಆಟಗಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅಥವಾ ನಿಯಮಾವಳಿ ಸಮಂಜಷವಾಗಿದೆಯೋ ಅನ್ನುವುದೇ ಪ್ರೆಶ್ನೆ. ಪ್ರಪಂಚದ ಎರಡನೆ ಅತಿ ದೊಡ್ಡ ಜನಸಂಖ್ಯೆಯನ್ನೊಂದಿರುವ ನಮ್ಮ ದೇಶಕ್ಕೆ ಪ್ರತಿ ಬಾರಿಯೂ ಧಕ್ಕುವ ಪದಕಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟೆ ಮಾತ್ರವೇಕೆ? ಎಂಬ ಪ್ರೆಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ನಮ್ಮ ಕ್ರೀಡಾಪಟುಗಳ ಆಯ್ಕೆ ಪದ್ದತಿಯ ಬಗ್ಗೆಯೂ ಒಮ್ಮೆ ಬೆಳಕು ಚೆಲ್ಲಬೇಕು ಎನಿಸುತ್ತದೆ. ಉದಾಹರಣಗೆ ಇತ್ತಿಚಿನ ರಿಯೊ ಒಲಿಂಪಿಕ್ಸ್ಗೆ ಆಯ್ಕೆ ಆಗುವಾಗ ಕುಸ್ತಿಯಲ್ಲಿ ಸುಶಿಲ್ ಕುಮಾರ್ ಮತ್ತು ನರಸಿಂಗ್ ಯಾದವ್ ಹಾಗು ಪುರುಷರ ಟೆನ್ನಿಸ್ನಲ್ಲಿ ಲಿಯಾನ್ದೆರ್ ಪೇಸ್ ಹಾಗೂ ರೋಹನ್ ಬೋಪಣ್ಣರ ನಡುವೆ ಏರ್ಪಟ್ಟಿದ್ದ ಶೀತಲ ಸಮರ!

 

ಸುಶಿಲ್ ವೈಯಕ್ತಿಕ  ಮಟ್ಟದಲ್ಲಿ ಎರಡು ಬಾರಿ ಪದಕವನ್ನು ಗೆದ್ದು ದೇಶದ ಒಲಿಂಪಿಕ್ಸ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಸಾದನೆಯ  ಮಾಡಿರುವ ಇವರೆಗಿನ ಏಕೈಕ ಭಾರತೀಯನಾದರೆ, ನರಸಿಂಗ್ ಯಾದವ್ ೭೪ k.g ವರ್ಗದ ಫ್ರೀ ಸ್ಟೈಲ್ ವಿಭಾಗದ ಕುಸ್ತಿಯಲ್ಲಿ ೨೦೧೫ರ ಲಾಸ್ ವೇಗಸ್ನಲ್ಲಿ ನಡೆದ  ವಿಶ್ವಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕವನ್ನು ಗೆದ್ದು ಭಾರತಕ್ಕೆ  ಅದೇ ವಿಭಾಗದಲ್ಲಿ ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ತಂದು ಕೊಡುತ್ತಾನೆ. ಒಲಿಂಪಿಕ್ಸ್ ಶುರುವಾಗಲು ಇನ್ನು ಕೆಲವೇ ತಿಂಗಳುಗಳು ಇರುವಾಗ ಭಾರತೀಯ ಕುಸ್ತಿ ಫೆಡರೇಶನ ಮುಂದೆ ಒಂದು ಸಮಸ್ಯೆ ಉದ್ಬವವಾಗುತ್ತದೆ. ಅದೇ ರಿಯೋ ಒಲಿಂಪಿಕ್ಸ್ ನ ೭೪ k.g ವರ್ಗದ ಫ್ರೀ ಸ್ಟೈಲ್ ವಿಭಾಗದಲ್ಲಿ ಭಾರತವನ್ನು ಯಾರು ಪ್ರತಿನಿದಿಸುವರು ಎಂಬುದರ ಕುರಿತು. ಪಂದ್ಯದಲ್ಲಿ ಆಡಲು ಅರ್ಹತೆಯನ್ನು ಗಳಿಸಿ ತಂದ ನರಸಿಂಗ್ ಯಾದವ್ ದೇಶವನ್ನು ಪ್ರತಿನಿದಿಸುವಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಅನುಭವದಲ್ಲಾಗಲಿ, ಭಲಿಷ್ಟತೆಯಲ್ಲಾಗಲಿ ಅವನಷ್ಟೇ ಅಥವಾ ಅವನಿಗಿಂತ ಹೆಚ್ಚೇ ಎಂದೆನಿಸಿರುವ ಸುಶೀಲ್ ಕುಮಾರ್ ದೇಶವನ್ನು ಪ್ರತಿನಿದಿಸಬೇಕೆಂಬ ವಾದದಲ್ಲೂ ಯಾವುದೇ ಹುಳುಕಿಲ್ಲ. ಇಬ್ಬರು ಕುಸ್ತಿ ಪಟುಗಳ ಬಲ ಹಾಗು ದೌರ್ಬಲ್ಯವನ್ನು ಅಳೆಯುವ ಮೊದಲು ಒಮ್ಮೆ ಅವರ ವೈಯಕ್ತಿಕ ಸಾದನೆಗಳ ಬಗ್ಗೆಯೂ ತಿಳಿಯುವುದು ಲೇಸು.

 

ಇವರಿಬ್ಬರ ವೈಯಕ್ತಿಕ ದಾಖಲೆಗಳ ಬಗ್ಗೆ ಒಮ್ಮೆ ಕಣ್ಣಾಹಿಸಿದರೆ ಸುಶೀಲ್ನ ದಾಖಲೆಗಳದೆ ಮೇಲುಗೈ. ೨೦೦೩ ರಲ್ಲಿ  ಮೊದಲ ಬಾರಿಗೆ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಪದಕ ಗೆಲ್ಲುವುದರ ಮೂಲಕ ಬೆಳಕಿದೆ ಬಂದ ಸುಶೀಲ್ ಕುಮಾರ್ ಇಲ್ಲಿಯವರೆಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟು ೧೫ ಪದಕಗಳನ್ನು ಗೆದ್ದಿರುತ್ತಾನೆ. ಒಲಿಂಪಿಕ್ಸ್ನಲ್ಲಿ ಎರಡು, ಕಾಮಾನ್ವೆಲ್ತ್ ಚಾಂಪಿಯನ್ಶಿಪ್ ನಲ್ಲಿ ಐದು, ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ನಾಲ್ಕು, ಕಾಮಾನ್ವೆಲ್ತ್  ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ತಲಾ ಎರಡು ಹಾಗು ಒಂದು ಪದಕವನ್ನು ಗಳಿಸಿರುವ ಸುಶೀಲ್ ೨೦೧೦ ರ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ವಿಶ್ವ ಚಾಂಪಿಯನ್ ಆಗಿಯೂ ಹೊರಹೊಮ್ಮುತ್ತಾನೆ.  ಒಮ್ಮೆಯೂ ಸೋಲನ್ನೇ ಕಾಣದ ‘ದಿ ಗ್ರೇಟ್ ಗಾಮ’ನನ್ನು ಬಿಟ್ಟರೆ ಭಾರತದ ಕುಸ್ತಿ ಇತಿಹಾಸದಲ್ಲೇ ಈ ಮಟ್ಟಿನ ಸಾಧನೆ ಮಾಡಿರುವರು ಮತ್ತೊಬ್ಬರಿಲ್ಲ!

ಇನ್ನು ನರಸಿಂಗ್ ಯಾದವ್ನ ವಿಚಾರಕ್ಕೆ ಬಂದರೆ ೨೦೧೦ ರಲ್ಲಿ ನೆಡೆದ ಕಾಮಾನ್ವೆಲ್ತ್  ಗೇಮ್ಸ್ನಲ್ಲಿ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಹೆಸರು ಮಾಡುತ್ತಾನೆ. ಅಲ್ಲಿಂದೀಚೆಗೆ ಅಂದರೆ ಸುಮಾರು ಆರು ವರ್ಷಗಳಲ್ಲಿ ನರಸಿಂಗ್ ಗೆದ್ದಿರುವುದು ನಾಲ್ಕು ಪದಕಗಳು. ಇದೇ ಕಾಲಘಟ್ಟದಲ್ಲಿ ಸುಶೀಲ್ ಗೆದ್ದಿರುವುದು ಆರು ಪದಕಗಳು! ಪದಕದಳ ವಿಚಾರ ಅದೇನೇ ಇದ್ದರೂ ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಆಡಿರುವ ಅನುಭವವುಳ್ಳ ಸುಶೀಲ್ನನ್ನು ಕಡೆಗಣಿಸುವುದು ಸುಲಭವಲ್ಲ. ಇದೆ ಕಾರಣಕ್ಕೆ ತನ್ನ ಹಾಗೂ ನರ್ಸಿಂಗ್ನ ನಡುವೆ ಒಂದು ಸ್ಪರ್ಧೆ ಇಟ್ಟು ಜಯಶಾಲಿನ್ನೇ ಒಲಿಂಪಿಕ್ಸ್ಗೆ ಕಳಿಸಿ ಅನ್ನುವ ಸುಶೀಲ್ನ ವಾದದಲ್ಲಿ ತೊಕವಿತ್ತು.

 
ಒಲಿಂಪಿಕ್ಸ್ಗೆ ಸ್ಪರ್ದಾಳುಗಳನ್ನ ಆಯ್ಕೆ ಮಾಡುವ ಮುನ್ನ ಉಂಟಾಗುವ ಸಂದಿಗ್ನತೆ ಇದೇನು ಹೊಸತಲ್ಲ. ೧೯೯೬ ರ ಅಟ್ಲಾಂಟಾ ಒಲಿಂಪಿಕ್ಸ್ನ ೪೮ ಕೆ ಜಿ ವರ್ಗಗಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಭಾರತ ಎಂಟ್ರಿಗೆ ಕಾರಣವಾಗಿದ್ದ  ಕಾಕಾ ಪವಾರ್ನನ್ನು ಬಿಟ್ಟ್ಟು ಪಪ್ಪು ಯಾದವ್ನನ್ನು ಆಡಲು ಕಳುಹಿಸಿತು. ಕಾಕಾ ಪವಾರ್ ಕೂಡ ಅಂದು ತಮ್ಮಿಬ್ಬರ ಮದ್ಯೆ ಒಂದು ಸ್ಪರ್ಧೆಯನ್ನು ನೆಡೆಸಬೇಕೆಂದು ಬೇಡಿಕೊಂಡ. ಆತನ ಕೂಗನ್ನು ಕೇಳದ WFI (Wrestling  Federation of India) ಯಾದವ್ನನ್ನು ಕಳಿಸಿ ಯಾವುದೇ ಪಾಯಿಂಟ್ಸ್ಗಳೂ ಸಹ ಗಳಿಸದೆ  ಒಲಿಂಪಿಕ್ಸ್ನಿಂದ ಸೋತು ಹೊರಬರಬೇಕಾಗುತ್ತದೆ. ೨೦೦೪ ರ ಅಥೆನ್ಸ್ ಒಲಿಂಪಿಕ್ಸ್ ನಲ್ಲೂ  ಸಹ  ಯೋಗೇಶ್ವರ್ ದತ್ತ್ ಆಯ್ಕೆಯಾದದನ್ನು ಪ್ರೆಶ್ನಿಸಿ ಆಗಿನ ಉದಯೋನ್ಮುಖ ಕುಸ್ತಿ ಪಟು ಕೃಪಾಶಂಕೆರ್  ಪಟೇಲ್ ದೆಹಲಿ ಹೈ ಕೋರ್ಟ್ನ ಮೊರೆ ಹೋಗುತ್ತಾನೆ. ಅಂದು ವಿಚಾರಣೆಯನ್ನು ಕೈಗೆತ್ತುಕೊಂಡ ಹೈ ಕೋರ್ಟ್ ದೇಶಕ್ಕೆ ಒಲಿಂಪಿಕ್ಸ್ನಲ್ಲಿ ‘ಆಡುವ ಅರ್ಹತೆಯನ್ನು ತಂದು ಕೊಡುವ’ ವ್ಯಕ್ತಿಯೇ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿದಿಸಬೇಕೆಂಬ ಮಹತ್ವದ ತೀರ್ಪನ್ನು ನೀಡುತ್ತದೆ. ಅಲ್ಲಿಗೆ IOC (International Olympic Committee) ನೆಡೆಸುವ ಅರ್ಹತ ಪಂದ್ಯಗಳಿಗೆ ಕಾರಣಾನಂತರಗಳಿಂದಲೂ ಸ್ಪರ್ದಿಸಲು ಆಗದಿದ್ದರೆ ಆತನ/ಆಕೆಯ ಒಲಿಂಪಿಕ್ಸ್ ಕನಸು ಅಲ್ಲಿಗೆ ಭಗ್ನವಾಗುತ್ತದೆ!
ಇಲ್ಲಿ ವಿಚಾರ ಮಾಡಬೇಕಾದ ಒಂದು ವಿಷಯವೇನೆಂದರೆ ಒಲಿಂಪಿಕ್ಸ್ನಲ್ಲಿ ಯಾವುದೇ ಸ್ಪರ್ದಾಳು ಆಡುವುದು ದೇಶದ ಪರವಾಗೇ ವಿನಃ ಆತನ ವೈಯಕ್ತಿಕ ಚಹರೆಗಾಗಿ ಅಲ್ಲ. ದೇಶವನ್ನು ಪ್ರತಿನಿಧಿಸುವ ವ್ಯಕ್ತಿ ದೇಶದ ಅದಷ್ಟೂ ಜನರ ಕನಸನ್ನು ನನಸಾಗಿಸುವಂತವನಾಗಿರಬೇಕು. ಆತ ದೇಶದ 'ದಿ ಟಾಪ್ ಮೋಸ್ಟ್' ಆಟಗಾರನಾಗಿರಬೇಕೇ ವಿನಃ ಕೇವಲ ಒಂದು ಪದಕದ ಬಲದಲ್ಲಿ ದೇಶದ ಮಹತ್ತರ ಕನಸನ್ನು ಹೊತ್ತು ಒಯ್ಯಬಾರದು. ಅದೇ ಕಾರಣಕ್ಕೆ IOC (International Olympic Committee) ಅರ್ಹತೆ ಪಡೆಯುವ ಪ್ರತಿಯೊಂದು ದೇಶಕ್ಕೂ ಆಟಗಾರರನ್ನು ಆಯ್ಕೆ ಮಾಡುವ ಅಂತಿಮ ನಿರ್ಧಾರ ಆಯಾ ದೇಶಕ್ಕೆ ಬಿಟ್ಟಿರುತ್ತದೆ. ಭಾರತದ  ನ್ಯಾಷನಲ್ ಸ್ಪೋರ್ಟ್ಸ್ ಡೆವೆಲಪ್ಮೆಂಟ್  ಕೋಡ್ನ ಪ್ರಕಾರ ( Selection Procedure: 13.1) ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿದಿಸುವ ವ್ಯಕ್ತಿ ಅಥವಾ ತಂಡ ದೇಶದ ಘನತೆಯನ್ನು ಹೆಚ್ಚಿಸಿ ದೇಶಕ್ಕೆ ವೈಭವವನ್ನು ಗಳಿಸಿಕೊಡುವಂತಿರಬೇಕೆಂದು ಹೇಳಲಾಗಿದೆ. ಹಾಗಾಗಿ ದೇಶದ ದಿ ಬೆಸ್ಟ್ ಆಟಗಾರ ಅಥವಾ ತಂಡವನ್ನು ಆಯ್ಕೆ ಮಾಡಬೇಕೆಂದು ಮಾತ್ರ ಹೇಳಿದೆ. ಕೇವಲ ಒಂದು ಪದಕದ ಆಸರೆಯ ಮೇಲೆ ಇತರ ಆಟಗಾರ/ತಂಡವನ್ನು ಕಡೆಗಣಿಸಿ ಎಂದು ಎಲ್ಲೂ ಸಹ ಹೇಳಲಾಗಿಲ್ಲ.
ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿದಿಸಲು ಆಟಗಾರರ ಆಯ್ಕೆಯಲ್ಲಿ ಪಾರದರ್ಶಕ ಹಾಗೂ ಘನವಾದ ನಿಯಮಗಳನ್ನು IOC (Indian Olympic Association) ಜಾರಿಗೊಳಿಸದಿರುವುದೇ ಇಷ್ಟೆಲ್ಲಾ ತೆಲೆನೋವಿಗೆ ಕಾರಣ ಎನ್ನಬಹುದು. ಬಹುತೇಕ ದೇಶಗಳಲ್ಲಿ ಈಗಾಗಲೇ ಸ್ಪರ್ದಾಳುಗಳು ಒಲಿಂಪಿಕ್ಸ್ಗೆ ಬರಪೂರ ತಯಾರಿ ನೆಡೆಸುತ್ತಿದ್ದರೆ ನಮ್ಮಲ್ಲಿ ಆಟಗಾರರು ಕೋರ್ಟ್ನ ಮೊರೆ ಹೋಗುತ್ತಿರುವುದು ವಿಪರ್ಯಾಸ ವೇ ಸರಿ. ಪ್ರತಿಯೊಬ್ಬ ಆಟಗಾರನು ಒಂದೊಂದು ಕಾರಣಕ್ಕೆ ಹೆಸರು ಮಾಡಿರುತ್ತಾನೆ. ನರಸಿಂಗ್ ನ ಸಾಧನೆ ಸುಶೀಲ್ ಗೆ ತಾಳೆಹಾಕಿ ನೋಡಿದರೆ ಕೊಂಚ ಮಟ್ಟಿಗೆ ಕಡಿಮೆ ಎನಿಸಿದರೂ ಆತ ಆಡಿರುವ ಎಲ್ಲ ಪಂದ್ಯಗಳು ಭಾರತಕ್ಕೆ ಅರ್ಹತೆ ಸಿಕ್ಕಿರುವ ೭೪ ಕೆಜಿ ಯ ವರ್ಗದ್ದಾಗಿವೆ. ಸುಶೀಲ್ ಕೇವಲ ಒಂದೇ ಬಾರಿ ಈ ವರ್ಗದಲ್ಲಿ ಗೆದ್ದಿರುತ್ತಾನೆ.
ಇನ್ನು ಪುರುಷರ ಟೆನ್ನಿಸ್ನ ಆಯ್ಕೆಯ ವಿಚಾರದಲ್ಲೂ ಅದೇ ಸಂದಿಗ್ನತೆ.  ವಿಶ್ವದ ಟಾಪ್ ಟೆನ್ ಡಬಲ್ಸ್ ರಾಂಕಿಂಗ್ ಹೊಂದಿರುವ ಒಂದೇ ಕಾರಣಕ್ಕಾಗಿ ರೋಹನ್ ಬೋಪಣ್ಣ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುತ್ತಾನೆ.  ಆದ ಮಾತ್ರಕ್ಕೆ ಆತ 'ತನಗಿಷ್ಟ'ವಾದ ಆಟಗಾರನನ್ನು ಸ್ವತಃ ಆಯ್ಕೆ ಮಾಡಬಹುದು! ಆಯ್ಕೆಯ ವಿಚಾರಕ್ಕೆ ಬಂದಾಗ ಆತ ದೇಶ ಕಂಡ ಅತ್ಯಂತ ಸ್ಪೂರ್ತಿದಾಯಕ ಟೆನ್ನಿಸ್ ಪಟು ಲಿಯಾಂಡರ್ ಪೇಸ್ ನನ್ನು ಬಿಟ್ಟು ಮತ್ಯಾರೋ ಒಬ್ಬಾತನನ್ನು ಆಯ್ಕೆ ಮಾಡಿಕೊಡುವಂತೆ ಆಯ್ಕೆ ಸಮಿತಿಯ ಮುಂದೆ ಕೇಳಿಕೊಳ್ಳುತ್ತಾನೆ. ಆದರೆ ಆಯ್ಕೆ ಸಮಿತಿ ಈತನ ಕೋರಿಕೆಯನ್ನು ಬದಿಗೊತ್ತಿ ಪೇಸ್ ರನ್ನೇ ಜೊತೆ ಮಾಡಿ ಒಲಿಂಪಿಕ್ಸ್ ಗೆ  ಕಳಿಸಲು ಮುಂದಾಗಿದೆ. ನಿಯಮಗಳ ಪೊಳ್ಳುತನ ಎಷ್ಟಿದೆಎಂದು ಇಲ್ಲಿ ಕಾಣಬಹುದು. ದೇಶವನ್ನು ಪ್ರತಿನಿದಿಸಲು ಪ್ರತಿಯೊಬ್ಬನಿಗೂ ಆಸೆ ಇರುತ್ತದೆ. ಹಾಗಂತ ಆಟಗಾರರನ್ನು ಹಾವು-ಏಣಿ ಆಟವಾಡಲು ಅನುವು ಮಾಡಿ ಕೊಡುತ್ತಿರುವುದು ತಪ್ಪು. ಒಲಿಂಪಿಕ್ಸ್ ಶುರುವಾಗಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ನಮ್ಮ ಆಟಗಾರರು ಎದುರಿಸುತ್ತಿರುವ ಒತ್ತಡ ನಿಜವಾಗಿಯೂ ಖೇದವನ್ನುಂಟುಮಾಡುತ್ತದೆ. ದೇಹಸಾಧನೆ ಮಾಡಬೇಕಾದ ಸಮಯದಲ್ಲಿ ದಿನ ಬೆಳಗೆದ್ದು ಕೋರ್ಟನ ತೀರ್ಪಿಗೆ ಕಾಯುವ ವ್ಯವಸ್ಥೆಯಲ್ಲಿ ದೇಶಕ್ಕೆ ಚಿನ್ನ ಗಿಟ್ಟಿಸಿ ಕೊಡಬೇಕೆಂದು ಆಟಗಾರರನ್ನು ಕೇಳುವುದು ಅಪಾಹಾಸ್ಯ ಮಾಡಿದಂತಾಗುತ್ತದೆ. ಜನಸಂಖ್ಯೆ ಕೋಟಿಯಿದ್ದರೂ ಪದಕಗಳು ಬೆರಳೆಣಿಕೆಯಷ್ಟೇ ಎಂದು ಕೇಳುವಾಗ ನಾವುಗಳು ಪದಕ ಗಳಿಸಿ ಕೊಡಲು ಹೊರಡುವ ನಮ್ಮವರ ಆಯ್ಕೆ ಸಮಂಜಶವಾಗಿದೆಯೆ ಎಂದೂ ಕೇಳಬೇಕು.
 
ಅದೇನೇ ಇರಲಿ. ಈ ಬಾರಿ ಆಯ್ಕೆ ಆಗಿರುವ  ಆದಷ್ಟೂ ಆಟಗಾರರು ಇತರ ವಿಷಯಗಳನ್ನು ಬದಿಗಿಟ್ಟು, ದೇಶಕ್ಕಾಗಿ ಸೆಣೆಸಿ ಹೆಚ್ಚು ಹೆಚ್ಚು ಪದಕಗಳನ್ನು ಗೆಲ್ಲಲಿ ಎಂದು ಆಶಿಸೋಣ. ಕೇವಲ ಒಂದಂಕಿಗಳಿಗೆ ಸೀಮಿತವಾಗಿದ್ದ ಪದಕಗಳ ಸಂಖ್ಯೆ ರಿಯೋ ಒಲೆಂಪಿಕ್ಸ್ನಲ್ಲಿ ಎರಡಂಕಿಯಾಗುವ ಕನಸನ್ನೂ ಕಾಣೋಣ.