ಬ್ಯಾಂಕನ್ನೇ ಬಡಿದೆಬ್ಬಿಸಿದ ರೈತ ಹೋರಾಟಗಾರ: ಇ. ವಿಠಲ ರಾವ್

ಬ್ಯಾಂಕನ್ನೇ ಬಡಿದೆಬ್ಬಿಸಿದ ರೈತ ಹೋರಾಟಗಾರ: ಇ. ವಿಠಲ ರಾವ್

ಅವರು ೧೯೮೦ರ ದಶಕದ ಆರಂಭದಲ್ಲಿ ರಾಷ್ಟ್ರೀಕೃತ ಬ್ಯಾಂಕಿನಿಂದ ಬೆಳೆಸಾಲ ಪಡೆದಿದ್ದ ರೈತ. ಆ ಸಾಲ ಮರುಪಾವತಿಸಿದರೂ ಐದು ರೂಪಾಯಿ ಬಾಕಿ ಉಳಿಸಿಕೊಂಡಿದ್ದರು.ತನ್ನ ಸಾಲ ಮಂಜೂರಾತಿ ದಾಖಲೆಯ ಯಥಾಪ್ರತಿ ಪಡೆಯಲೇ ಬೇಕೆಬುದು ಅವರ ಉದ್ದೇಶ. (ಸಾಲ ಚುಕ್ತಾ ಮಾಡಿದರೆ ಸಾಲದಾತ–ಸಾಲಗಾರ ಸಂಬಂಧವೂ ಚುಕ್ತಾ.)
ಇವರ ಬಾಯ್ಮಾತಿನ ವಿನಂತಿಗೆ ಬ್ಯಾಂಕ್ ಮೆನೇಜರ್ ಕಿವಿಗೊಡಲಿಲ್ಲ. ಆಗ ಆ ರೈತರು ಸಂಪರ್ಕಿಸಿದ್ದು ಮಂಗಳೂರಿನ ಸಾರ್ವಜನಿಕ ಹಿತಾಸಕ್ತಿ ಸಂಘಟನೆಯಾದ ಬಳಕೆದಾರರ ವೇದಿಕೆ (ರಿ.)ಯನ್ನು. ಅವರು ಬ್ಯಾಂಕಿನ ಬಳಕೆದಾರರಾಗಿದ್ದು, ಸಾಲ ಮಂಜೂರಾತಿ ಪತ್ರವನ್ನು ಪಡೆಯುವುದು ಅವರ ಹಕ್ಕು ಎಂದು ವೇದಿಕೆಯ ಸಂಚಾಲಕನಾದ ನಾನು ಅವರಿಗೆ ತಿಳಿಸಿದೆ. ಈ ಸನ್ನಿವೇಶಕ್ಕೆ ಅನ್ವಯಿಸುವ “ಒಪ್ಪಂದಗಳ ಕಾಯಿದೆ”ಯ (ಕಾಂಟ್ರಾಕ್ಟ್ ಆಕ್ಟ್) ಅಂಶಗಳನ್ನು ವಿವರಿಸಿದೆ. ಕಾಯಿದೆಯ ಪ್ರಕಾರ, ಬೆಳೆಸಾಲದ ಒಪ್ಪಂದದ ಷರತ್ತುಗಳನ್ನು ಸಾಲಗಾರನಿಗೆ ಬ್ಯಾಂಕ್ ಲಿಖಿತವಾಗಿ ತಿಳಿಸಬೇಕಾಗಿತ್ತು. ಅಂದರೆ, ಸಾಲ ಮಂಜೂರಾತಿ ದಾಖಲೆಯ ಯಥಾಪ್ರತಿ ಕೊಡಲೇಬೇಕಾಗಿತ್ತು.

ಈಗಲಾದರೂ ಅದನ್ನು ಒದಗಿಸಲಿಕ್ಕಾಗಿ, ಬ್ಯಾಂಕಿನ ಅತ್ಯುನ್ನತ ಅಧಿಕಾರಿಯಾದ ಚೇರ್ಮನ್ನರಿಗೇ ವಿನಂತಿಸಬೇಕೆಂದು ಆ ರೈತರಿಗೆ ಸಲಹೆ ನೀಡಿದೆ. ಅದರಂತೆ ಅವರು ಬ್ಯಾಂಕಿನ ಚೇರ್ಮನ್ನರಿಗೆ ಪತ್ರ ಬರೆದು, ತನ್ನ ಸಾಲ ಮಂಜೂರಾತಿ ದಾಖಲೆ ಒದಗಿಸಲು ಹದಿನೈದು ದಿನಗಳ ಗಡುವು ನೀಡಿದರು. ಆದರೆ ಬ್ಯಾಂಕಿನ ಚೇರ್ಮನ್ನರಿಂದಲೂ ಈ ಪತ್ರಕ್ಕೆ ಉತ್ತರ ಬರಲಿಲ್ಲ. ಹಾಗಾದರೆ, ಬ್ಯಾಂಕುಗಳ ಮೇಲುಸ್ತುವಾರಿ ಜವಾಬ್ದಾರಿ ಹೊತ್ತವರನ್ನೇ ಕೇಳಬೇಕಲ್ಲ? ಆದ್ದರಿಂದ, ವೇದಿಕೆಯ ಸಲಹೆಯಂತೆ, ಭಾರತೀಯ ರಿಸರ್ವ್ ಬ್ಯಾಂಕಿನ ಕರ್ನಾಟಕ ಪ್ರಾದೇಶಿಕ ಕಚೇರಿಗೆ (ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿದೆ) ಪತ್ರ ಬರೆದರು. ಈ ಪ್ರಕರಣದಲ್ಲಿ ತನಗಾದ ಅಂಚೆವೆಚ್ಚ ಮತ್ತು ತನ್ನನ್ನು ಸತಾಯಿಸಿದ್ದಕ್ಕಾಗಿ ಪರಿಹಾರ ಪಾವತಿಸಬೇಕೆಂದೂ ವಿನಂತಿಸಿದರು. ಅವರಿಗೂ ಉತ್ತರಿಸಲು ನೀಡಿದ್ದು ಹದಿನೈದು ದಿನಗಳ ಗಡುವು.

ಅದಾಗಿ ಒಂದು ತಿಂಗಳಿನಲ್ಲಿ ನಡೆಯಿತು ಅಂದಿನ ಕಾಲಘಟ್ಟದಲ್ಲಿ ಊಹಿಸಲಿಕ್ಕೂ ಸಾಧ್ಯವಿಲ್ಲದ ವಿದ್ಯಮಾನ. ಬೆಳೆಸಾಲ ಕೊಟ್ಟಿದ್ದ ಬ್ರ್ಯಾಂಚಿನ ಮೆನೇಜರ್, ಆ ರೈತರಿಗೆ ಫೋನ್ ಮಾಡಿ, “ಬ್ರ್ಯಾಂಚಿಗೆ ಬನ್ನಿ, ನಿಮ್ಮ ಸಾಲ ಮಂಜುರಾತಿ ಪತ್ರ ಕೊಡುತ್ತೇವೆ. ಬಂದು ತಗೊಳ್ಳಿ” ಎಂದರು. ಈಗ ತನ್ನ ಹಕ್ಕು ಚಲಾಯಿಸಲು ಸನ್ನದ್ಧರಾಗಿದ್ದ ಈ ರೈತರು, “ನಾನ್ಯಾಕೆ ನಿಮ್ಮ ಬ್ರ್ಯಾಂಚಿಗೆ ಬರಬೇಕು? ಐದಾರು ಸಲ ಬಂದು ಕೇಳಿದಾಗಲೂ ನೀವು ಅದನ್ನು ಕೊಡಲಿಲ್ಲ. ಈಗ ನೀವೇ ನನ್ನ ಮನೆಗೆ ಬಂದು ಸಾಲ ಮಂಜೂರಾತಿ ಪತ್ರ ಕೊಡಿ” ಎಂದು ಖಡಾಖಂಡಿತವಾಗಿ ಹೇಳಿದರು.
ಈ ಪ್ರಕರಣದಲ್ಲಿ ಬ್ಯಾಂಕಿನ ನಿಲುವು ಬದಲಾಗಲು ಕಾರಣ ಸ್ಪಷ್ಟ. ಭಾರತೀಯ ರಿಸರ್ವ ಬ್ಯಾಂಕಿನ ಬೆಂಗಳೂರಿನ ಪ್ರಾದೇಶಿಕ ಕಚೇರಿಯು ಆ ಬ್ಯಾಂಕಿನ ಚೇರ್ಮನ್ನರಿಗೇ ಚುರುಕು ಮುಟ್ಟಿಸಿತ್ತು. ಅದಾದ ಮರುದಿನವೇ ಆ ಬ್ರ್ಯಾಂಚ್ ಮೆನೇಜರ್ ಮತ್ತು ಆ ಬ್ಯಾಂಕಿನ ಮಂಗಳೂರಿನ ವಿಭಾಗೀಯ ಕಚೇರಿಯ ಅಧಿಕಾರಿ ಇವರಿಬ್ಬರೂ ರೈತರ ಮನೆಯಲ್ಲಿ ಹಾಜರ್. ಅಂತೂ ಅವರು ಬೆಳೆಸಾಲದ ಮಂಜುರಾತಿ ಪತ್ರವನ್ನು ರೈತರ ಕೈಗಿತ್ತರು. ಈ ಬಗ್ಗೆ ಆ ರೈತರು ಮಾಡಿದ್ದ ಪತ್ರ ವ್ಯವಹಾರದ ಮತ್ತು ಓಡಾಟದ ವೆಚ್ಚವನ್ನೂ ಪಾವತಿಸಿದರು.
ಅನಂತರ ಬ್ಯಾಂಕಿನ ಅಧಿಕಾರಿಗಳು ತಮ್ಮ ಬೇಡಿಕೆಯನ್ನು ರೈತರ ಮುಂದಿಟ್ಟರು: ತನಗಾದ ಸತಾಯಿಸುವಿಕೆಗೆ ರೈತರು ಕೇಳಿದ್ದ ಹಣದ ಪರಿಹಾರದ ಬೇಡಿಕೆಯನ್ನು ಹಿಂಪಡೆಯಬೇಕೆಂದು. ಇದಕ್ಕೆ ಅವರಿತ್ತ ಕಾರಣ: ಅದನ್ನು ಪಾವತಿಸಲು ಬ್ಯಾಂಕಿನ ನಿಯಮಗಳಲ್ಲಿ ಅವಕಾಶ ಇಲ್ಲವೆಂಬುದು. ಅದಲ್ಲದೇ, ಪರಿಹಾರ ಪಾವತಿಸಿದರೆ, ಬ್ರ್ಯಾಂಚ್ ಮೆನೇಜರರಿಗೆ ಬ್ಯಾಂಕಿನ ಶಿಸ್ತುನಿಯಮಗಳ ಪ್ರಕಾರ ತೊಂದರೆ ಆಗುತ್ತದೆಯೆಂದೂ ನಿವೇದಿಸಿದರು.

ಅಂತಿಮವಾಗಿ, ಆ ರೈತರು ಮಾನವೀಯ ಭಾವನೆಯಿಂದ ಹಣ ಪರಿಹಾರದ ತಮ್ಮ ಬೇಡಿಕೆಯನ್ನು ಹಿಂಪಡೆದರು. ಅವರೇ ಇ. ವಿಠಲ ರಾವ್. ರೈತರನ್ನು ಅಸಹಾಯಕರಂತೆ ನಡೆಸಿಕೊಂಡ ರಾಷ್ಟ್ರೀಕೃತ ಬ್ಯಾಂಕನ್ನು ಮಣಿಸಿದರೂ ಮಾನವೀಯತೆ ಮೆರೆದ ಧೀಮಂತ ರೈತ.
ಈ ಪ್ರಕರಣದ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲ ಬ್ಯಾಂಕುಗಳಿಗೂ ಸ್ಪಷ್ಟ ಆದೇಶ ನೀಡಿತು. ಪ್ರತಿಯೊಬ್ಬ ಸಾಲಗಾರನಿಗೂ ಸಾಲ ಮಂಜೂರಾತಿ ಪತ್ರ ನೀಡಿ, ಆ ಬಗ್ಗೆ ಸ್ವೀಕೃತಿ ಪಡೆಯಬೇಕೆಂದು. ಒಂದು ವ್ಯವಸ್ಥೆಯನ್ನೇ ಬದಲಾಯಿಸ ಬಲ್ಲ ತಾಕತ್ತು ಎಂದರೆ ಇದು. ಅನ್ಯಾಯ ಎದುರಿಸುವ ದಿಟ್ಟತನ ವಿಠಲರಾಯರ ವ್ಯಕ್ತಿತ್ವದ ಪ್ರಧಾನ ಗುಣ. ಅವರು ಮಾತನಾಡಿದ್ದು ಕಡಿಮೆ, ಮಾಡಿ ತೋರಿಸಿದ್ದು ಜಾಸ್ತಿ.
ಇಂದು ಅವರು ನಮ್ಮನ್ನು ಅಗಲಿದ್ದಾರೆ (೧-೭-೨೦೧೬ರಂದು) ಎಂಬುದನ್ನು ಅರಗಿಸಿಕೊಳ್ಳಲು ಸಂಕಟವಾಗುತ್ತಿದೆ. ಯಾಕೆಂದರೆ, ಹಲವಾರು ರೈತರ ಯೋಚನಾಕ್ರಮವನ್ನೇ ಬದಲಾಯಿಸಿದ ವ್ಯಕ್ತಿ ಅವರು – ತಮ್ಮ ಅಗಾಧ ಜ್ನಾನದಿಂದ, ದೂರದರ್ಶಿತ್ವದಿಂದ, ಸೂಕ್ಷ್ಮ ನೋಟದಿಂದ ಮತ್ತು ಚಿಂತನಾ ತಾಕತ್ತಿನಿಂದ.
ದಕ್ಷಿಣ ಕನ್ನಡದ ಕೃಷಿರಂಗದಲ್ಲಿ ಹೊಸ ಅಲೆಗಳನ್ನು ಎಬ್ಬಿಸಿದ “ಕೃಷಿ ಅನುಭವ ಕೂಟ”ದ ಸ್ಥಾಪಕರಲ್ಲಿ ಅವರೊಬ್ಬರು. ರೈತ ಸಮ್ಮೇಳನಗಳನ್ನು ನಡೆಸಿ, ರೈತ ಸಾಧಕರಿಗೆ ಪ್ರಶಸ್ತಿ ನೀಡುವ ಪದ್ಧತಿ ಆರಂಭಿಸಿ, ರೈತರಲ್ಲಿ ಆತ್ಮಗೌರವ ಮೂಡಲು ಕಾರಣವಾದ ಸಂಘಟನೆ ಅದು. ೧೯೮೦ರ ದಶಕದಲ್ಲಿ ನಾನು ಆ ಕೂಟದ ಕಾರ್ಯದರ್ಶಿಯಾಗಿ ಪ್ರತಿ ತಿಂಗಳೂ ಕಾರ್ಯಕ್ರಮ ಜರಗಿಸುತ್ತಿದ್ದಾಗ ಸಲಹೆ, ಸೂಚನೆ, ಮಾರ್ಗದರ್ಶನ ನೀಡಿದವರು ಅವರು.
ವ್ಯಾಪಕ ಓದಿನಿಂದ ಗಳಿಸಿದ ಜ್ನಾನ ಖಜಾನೆಯ ಒಡೆಯ ವಿಠಲರಾವ್. ಯಾವುದೇ ವಿಷಯದ ವಿವಿಧ ಮಗ್ಗುಲುಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಬಲ್ಲ ಸಾಮರ್ಥ್ಯ ಅವರದು. ಇಂತಹ ಲೇಖಕ, ಈ ಪುಸ್ತಕದಲ್ಲಿ ಇದರ ಬಗ್ಗೆ ಹೀಗೆ ಬರೆದಿದ್ದಾರೆ ಎಂದು ನಿಖರವಾಗಿ ಹೇಳಬಲ್ಲವರು.
ಸರಳ ಬದುಕು ನಡೆಸಿದ ಸಜ್ಜನ ವಿಠಲ ರಾಯರು ಮಂಗಳೂರು ತಾಲೂಕಿನ ಕಿನ್ಯಾದ ತಮ್ಮ ಕರ್ಮಭೂಮಿಯಲ್ಲಿ ನಡೆಸಿದ ಕೃಷಿ ಪ್ರಯೋಗಗಳ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದು. ಆ ದಿನ ಬೇಗನೇ ಬರಲಿ; ಆ ಮೂಲಕ ಅವರ ಸಂದೇಶಗಳು ಚಿರಕಾಲ ಉಳಿಯಲಿ ಎಂದು ಹಾರೈಸೋಣ.