ಓ.. ಗಣಿತವೇ ... ನೀನೆಂಥ ನಿರ್ದಯಿ ?
ಓ.. ಗಣಿತವೇ ... ನೀನೆಂಥ ನಿರ್ದಯಿ ?
ಮಾನ್ಯ ಪ್ರಾಚಾರ್ಯರಿಗೆ,
ನಿಮ್ಮ ಶಾಲೆಯ ೯ನೇ ತರಗತಿಯ ಡಿ ವಿಭಾಗದಲ್ಲಿ ಓದುತ್ತಿರುವ ವಿನಯ್ ರಾವ್ ನ ತಂದೆಯಾದ ನಾನು ವಿನಾಯಕ ರಾವ್ ಕೆಲವು ವಿಚಾರಗಳನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತಿದ್ದೇನೆ. ನನ್ನ ಮಗನು ಗಣಿತದಲ್ಲಿ ಅತಿ ಕಡಿಮೆ ಅಂಕಗಳನ್ನು ಪಡೆಯುತ್ತಿದ್ದಾನೆ. ಇದರಿಂದ ಅವನಿಗೆ ಶಾಲೆಗೆ ಬರುವ ಉತ್ಸಾಹವೇ ಇಂಗಿಹೋಗಿದೆ. ಅಲ್ಲದೆ ಅವನ ಗಣಿತಶಿಕ್ಷಕಿಯಿಂದ ಮಾನಸಿಕ ಒತ್ತಡಕ್ಕೂ ಒಳಗಾಗಿದ್ದಾನೆ. ನಿನ್ನೆ ವಿನಯನು ಗಣಿತದ ಮನೆಗೆಲಸ ಮಾಡಲಿಲ್ಲವೆಂದು ಅವರು ನೆಲದ ಮೇಲೆ ಅವನನ್ನು ಕುಳ್ಳಿರಿಸಿ ಲೆಕ್ಕಗಳನ್ನು ಮಾಡಿಸಿದ್ದರಿಂದ ಅವನಿಗೆ ಭಾರೀ ಅವಮಾನವಾಗಿದೆ. ಆದ್ದರಿಂದ ನೀವು ಆ ಗಣಿತಶಿಕ್ಷಕಿಯನ್ನು ಬದಲಿಸಿ ಅಥವಾ ನಾನು ವಿನಯನನ್ನು ಬೇರೆ ಶಾಲೆಗೆ ಸೇರಿಸಲು ನಿರ್ಧರಿಸಿದ್ದೇನೆ.
ಇತಿ ತಮ್ಮ ವಿಶ್ವಾಸಿ
೯’ಡಿ’ ವಿಭಾಗದ ಕ್ಲಾಸ್ ಟೀಚರ್ ಆದ ನನ್ನೆದುರು ಈ ಪತ್ರವನ್ನು ಒಗೆದು ವಿಜಯದ ನಗೆ ಬೀರಿ ಹೋದ ವಿನಯನನ್ನು ಅಸಹಾಯಕತೆಯಿಂದ ದಿಟ್ಟಿಸುವುದನ್ನು ಬಿಟ್ಟರೆ ನಾನು ಬೇರೇನೂ ಮಾಡಲಾಗಲಿಲ್ಲ. ಪತ್ರವನ್ನು ತಲುಪಿಸಿ ಹೊರಬಂದ ನನ್ನ ಕಣ್ಮುಂದೆ ಮಕ್ಕಳ ಬಗ್ಗೆ ಅಪಾರ ಕಳಕಳಿಯುಳ್ಳ , ಸೊಗಸಾಗಿ ಗಣಿತವನ್ನು ಬೋಧಿಸುವ ಆ ಶಿಕ್ಷಕಿಯೂ, ಮಗನ ಮೇಲಿನ ಕುರುಡುಪ್ರೇಮದಿಂದಲೋ ಅಥವಾ ಬೇರೆ ಒತ್ತಡದಿಂದಲೋ ಪತ್ರ ಬರೆದ ತಂದೆಯೂ, ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳೂ, ಇಂತಹ ಸುದ್ದಿಗಾಗಿ ಹಾತೊರೆಯುವ ಮಾಧ್ಯಮಗಳೂ ಸರದಿಯ ಸಾಲಿನಲ್ಲಿ ಮೆರವಣಿಗೆ ನಡೆಸಿದವು. ಕೆಲವೇ ನಿಮಿಷಗಳಲ್ಲಿ ಪ್ರಿನ್ಸಿಪಾಲರ ಕೊಠಡಿಯಿಂದ ಸಪ್ಪೆ ಮೋರೆ ಹಾಕಿಕೊಂಡು ಹೊರಬಂದ ಆ ನನ್ನ ಸಹೋದ್ಯೋಗಿಯನ್ನು ಕಂಡು ಮನಸ್ಸು ರಾಡಿಯಾಯಿತು.
ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ನಮಗೆ ವಾಮನಡೋಂಗ್ರೆ ಎಂಬ ಗಣಿತಶಿಕ್ಷಕರಿದ್ದರು. “ತೆಗೆ ತೆಗೆ ಗಣಿತದ ನೂತನ ಲೋಕ” ಎನ್ನುತ್ತಾ ತರಗತಿಗೆ ಬರುತ್ತಿದ್ದ ಅವರನ್ನು ಕಂಡೊಡನೆ ನನಗೆ ತಳಮಳ ಆರಂಭ.ಅವರೇನೋ ಚೆನ್ನಾಗಿಯೇ ಹೇಳಿಕೊಡುತ್ತಿದ್ದರು. ಆದರೆ ಬೇರೆ ವಿಷಯಗಳಲ್ಲಿ ಜಾಣೆಯಾಗಿದ್ದ ನನಗೆ ವೇಗವಾಗಿ ಲೆಕ್ಕಗಳನ್ನು ಬಿಡಿಸಲು ಆಗುತ್ತಿರಲಿಲ್ಲ. ಅವರು ಬೋರ್ಡನ ಮೇಲೆ ಲೆಕ್ಕವನ್ನು ಬರೆದು ತಿರುಗುತ್ತಿದ್ದಂತೆಯೇ ನಮ್ಮ ತರಗತಿಯಲ್ಲಿದ್ದ ವಿವೇಕಾನಂದ ಜೋಶಿ, ಜೈಶಂಕರ ಮರಾಠೆ, ಸುಧಾಕರ ಪೂಜಾರಿ ಇತ್ಯಾದಿಯಾದ ಅನೇಕ ಬೃಹಸ್ಪತಿಗಳು ಸಾರ್.... ಬಂತು ....ಉತ್ತರ ಬಂತು... ಅಂತ ಗೆಲುವಿನ ಕೇಕೆ ಹಾಕುತ್ತಿದ್ದರು. ನನಗಂತೂ ಆ ಕ್ಷಣದಲ್ಲಿ ಅವರನ್ನು ಕಂಡರೆ ಕೆಂಡದಂಥ ಕೋಪದ ಜೊತೆ ಅಳುವೂ ಬರುತ್ತಿತ್ತು. ಅತ್ಯಂತ ಸ್ನೇಹಪರರೂ, ಹಸನ್ಮುಖಿಗಳೂ ಆದ ಆ ನನ್ನ ಸಹಪಾಠಿಗಳು ಗಣಿತದ ತರಗತಿಯಲ್ಲಿ ಮಾತ್ರ ಅಕ್ಷರಶ: ನನ್ನ ಶತ್ರುಗಳು!!. ಮುಂದೆ ಹೈಸ್ಕೂಲಿನಲ್ಲೂ ವನಮಾಲಾ ಟೀಚರ್ ಎಂಬ ಕರುಣಾಮೂರ್ತಿಯಾದ ಶಿಕ್ಷಕಿ ಇದ್ದರೂ ಯಾಕೋ ಗಣಿತವೆಂದರೆ ಕಷ್ಟ-ಭಯ.ಜೊತೆಗೆ ರೋಶನ್ ಪಾಯಿಸ್, ಜಗನ್ನಾಥ ಶೇರಿಗಾರ್, ಸಂಧ್ಯಾ ಕಾಮತ್ ಮುಂತಾದ ಗಣಿತಬ್ರಹ್ಮರು ಕ್ಷಣಮಾತ್ರದಲ್ಲಿ ಲೆಕ್ಕ ಬಿಡಿಸಿ ನನ್ನನ್ನು ಅಸೂಯೆ-ದು:ಖಗಳೆಂಬ ನರಕಕ್ಕೆ ತಳ್ಳುತ್ತಿದ್ದರು. ನಮ್ಮ ಕ್ಲಾಸಿನ ಹೆಚ್ಚಿನ ಮಕ್ಕಳು ಗಣಿತದಲ್ಲಿ ಫೇಲ್ ಆಗಿ ಅಳುತ್ತಿದ್ದರೆ, ನಮ್ಮ ಜೊತೆ ಅಸಹಾಯಕ ಟೀಚರ್ ಕೂಡಾ ಭಾಗಿಯಾಗುತ್ತಿದ್ದರು.
ಕಾಲ ಉರುಳಿದೆ.ಆದರೆ ಗಣಿತವೆಂಬ ಹುಲಿ ಇಂದೂ ಗರ್ಜಿಸುತ್ತಲೇ ಇದೆ. ಸರಿ...ಗರ್ಜನೆಯಡಗಿಸಲು ಸುಸಜ್ಜಿತಶಾಲೆ - ಪರಿಣತಶಿಕ್ಷಕರೇ ಪರಿಹಾರವೆಂದಾದರೆ ನಗರದ ಅತ್ಯಾಧುನಿಕ ಶಾಲೆಗಳಲ್ಲಿ ಗಣಿತ ಸಮಸ್ಯೆಯಾಗಬಾರದಾಗಿತ್ತು. ಯಾಕೆಂದರೆ ಇಲ್ಲಿ ವೈಜ್ಞಾನಿಕ ನೆಲೆಯಲ್ಲಿ ಪಾಠಗಳು ನಡೆಯುತ್ತವೆ.ಇಲ್ಲಿನ ಮಕ್ಕಳಿಗೆ ವಿದ್ಯಾವಂತ ಪಾಲಕರಿದ್ದಾರೆ, ಸಹಾಯಕ್ಕೆ ಟ್ಯೂಶನ್ ಕ್ಲಾಸ್ ಗಳಿವೆ, ಅಂತರ್ಜಾಲವಿದೆ. ಆದರೂ ಇಲ್ಲಿ ಇದೊಂದು ಭೀಕರಸಮಸ್ಯೆ. ಇಂಥ ಒಂದು ಶಾಲೆಯಲ್ಲಿ ಕೆಲಸ ಮಾಡುವ ನನ್ನ ಅನುಭವವನ್ನು ಈಗಾಗಲೇ ನೀವು ಓದಿದ್ದೀರಿ.ಇರಲಿ.. ನಗರದ ಪಾಲಕರಂತೂ ಕೆಲಸದ ಮಧ್ಯೆ ಮಕ್ಕಳಿಗೆ ಗಮನಕೊಡದವರು, ಸದಾ ಬಿಜಿ ಜನ... ಅದಕ್ಕೇ ಹೀಗೆ... ಎಂದಾದರೆ ಹಳ್ಳಿಗಳಲ್ಲಿ ತಂದೆ-ತಾಯಿ , ಅಜ್ಜ- ಅಜ್ಜಿಯ ಪ್ರೀತಿಯಲ್ಲಿ ಬೆಳೆಯುತ್ತಾ ಒತ್ತಡವಿಲ್ಲದೆ ಬದುಕುವ ಮಕ್ಕಳಿಗೂ ಗಣಿತ ಕೈಲಾಗದು.ಅವರಿಗೂ ಅದೊಂದು ಘೋರನರಕ.
ನನ್ನ ಮಿತ್ರರೊಬ್ಬರ ಪ್ರಕಾರ ಗಣಿತದ ಸ್ವರೂಪವೇ ಅರ್ಥಮಾಡಿಕೊಳ್ಳಲು ಕಠಿಣ. ಗಣಿತವನ್ನು ಬಿಡಿಸಲು ತರ್ಕಬದ್ಧ ಚಿಂತನೆಯ ಅವಶ್ಯಕತೆ ಇದೆ. ಜನ್ಮದತ್ತವಾಗಿ ಬರಬೇಕಾದ ಬುದ್ಧಿವಂತಿಕೆ ಬೇಕು.ಇಂಥ ಕೆಲವೇ ಪುಣ್ಯವಂತರಿಗೆ ಗಣಿತವೊಂದು ಗೆಳೆಯ.ಆದರೆ ಭಾವನಾತ್ಮಕ ಸ್ವಭಾವದ ವಿದ್ಯಾರ್ಥಿಗಳಿಗೆ,ಸಾಮಾನ್ಯ ಬುದ್ಧಿಮತ್ತೆಯವರಿಗೆ ಲೆಕ್ಕವನ್ನು ಓದಿ ಅರ್ಥ ಮಾಡಿಕೊಂಡು ,ಗೋಜಲನ್ನು ಬಿಡಿಸಲು ಮೆದುಳು ಸಹಕರಿಸುವುದಿಲ್ಲ. ಕೆಲವು ಲೆಕ್ಕಗಳನ್ನು ಮತ್ತೆ ಮತ್ತೆ ಓದಿ ಮಾಡಿದರೂ,ಹೊಸ ಸಮಸ್ಯೆ ಬಂದಾಗ ಯೋಚಿಸುವಲ್ಲಿ ಇವರು ಸೋಲುತ್ತಾರೆ. ಅವರಿಗದು ಬರುಡು,ರಸಹೀನ ಎನಿಸುತ್ತದೆ. ಆದರೆ ನಮ್ಮ ವ್ಯವಸ್ಥೆ ಅವರನ್ನು ಬಿಡಬೇಕಲ್ಲ.... ನಮ್ಮ ಪಠ್ಯಕ್ರಮದಂತೆ ಹತ್ತನೇ ತರಗತಿಯವರೆಗೆ ಗಣಿತದಿಂದ ಬಿಡುಗಡೆ ಇಲ್ಲ. ಮುಂದೆ ಕೈತುಂಬ ಸಂಬಳ ಬರುವ ಕೆಲಸಗಳಿಗೆ ಸೇರಲು ಓದಬೇಕಾದ ಕೋರ್ಸ್ಗಳಿಗೆ ಸಿ.ಇ.ಟಿ ಯನ್ನು ಪಾಸ್ ಮಾಡಬೇಕು. ಅದಕ್ಕೆ ಗಣಿತ ಬೇಕೇ ಬೇಕು.... ಅಂತೂ ಈ ಭಾವನಾಜೀವಿಗಳೆಂಬ ನತದೃಷ್ಟರಿಗೆ ಅಥವಾ ಸರಳವಾದ ಭಾಷೆಯಲ್ಲಿ ದಡ್ಡರಿಗೆ ಗಣಿತ ಪೆಡಂಭೂತವಾಗಿ ಕಾಡುತ್ತಲೇ ಇರುತ್ತದೆ.
ಸಮಸ್ಯೆಯ ಇನ್ನೊಂದು ಮುಖವೆಂದರೆ ಗಣಿತದ ಪ್ರಶ್ನಪತ್ರಿಕೆ. ಕೆಲ ವರ್ಷಗಳ ಹಿಂದೆ ಪಾಠಪುಸ್ತಕದ ’ಅಭ್ಯಾಸಗಳು’ ವಿಭಾಗದಿಂದಲೇ ಹೆಚ್ಚಿನ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರುತ್ತಿದ್ದವು. ಆದ್ದರಿಂದ ಸಾಧಾರಣ ಬುದ್ಧಿವಂತಿಕೆ ಇದ್ದವರೂ ಕೂಡಾ ಚೆನ್ನಾಗಿ ಅಭ್ಯಾಸ ಮಾಡಿ, ಬೇಕಿದ್ದರೆ ಉರು ಹೊಡೆದು ಪರೀಕ್ಷೆಯಲ್ಲಿ ಪಾಸ್ ಆಗಿ ನಿಟ್ಟುಸಿರು ಬಿಡುತ್ತಿದ್ದರು. ಆದರೆ ಈಗಿನ ವಿದ್ಯಮಾನ ನಿಮಗೆ ಗೊತ್ತೇ? ಈಗಿನ ಗಣಿತದ ಪ್ರಶ್ನಪತ್ರಿಕೆಯ ತುಂಬ ತತ್ತ್ವಾಧಾರಿತ, ಪ್ರಯೋಗಾಧಾರಿತ [conceptual/application based] ಪ್ರಶ್ನೆಗಳು!.ನಮ್ಮ ಶಾಲೆಯಲ್ಲಿ ಮಾಥ್ಸ್ ಟೀಚರ್ಸು ಹೈ ಸ್ಟಾಂಡರ್ಡ್..ಎಂದು ಹೇಳಿಕೊಳ್ಳಲು ಶಾಲೆಗಳ ನಡುವೆ ಪೈಪೋಟಿ. ಸಾಧಾರಣ ಬುದ್ಧಿಮತ್ತೆಯ ವಿದ್ಯಾರ್ಥಿ ಲೆಕ್ಕ ಬಿಡಿಸುವುದಿರಲಿ, ಆ ಪ್ರಶ್ನೆಗಳನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕೇ ಹರಸಾಹಸಪಡುತ್ತಾನೆ.ಪರಿಣಾಮ ಕನಿಷ್ಠ ಅಂಕಗಳು... ನಿರಾಸೆ... ಪಾಲಕರ ಅಸಹನೆ.... ಕಷ್ಟಗಳವಿಷವರ್ತುಲ ಆರಂಭವಾಗುತ್ತದೆ.
ಇನ್ನೊಂದು ಆಯಾಮವೆಂದರೆ ಗಣಿತದ ಭಯ ನಮ್ಮಲ್ಲಿ ಆಳವಾಗಿ ಬೇರೂರಿದೆ. ಮನೆಯಲ್ಲಿ ತಂದೆತಾಯಿಯರು ಬಾಲ್ಯದಿಂದಲೇ ಅಯ್ಯಯ್ಯೋ..... ಗಣಿತ ಕಷ್ಟ ಮರೀ.... ಎನ್ನುತ್ತಾ ಭಯದ ಬೀಜ ಬಿತ್ತುತ್ತಾರೆ.ಪರೀಕ್ಷೆಯ ಅಂಕಗಳು ಬಂದಾಗಲೂ ಮಾಥ್ಸ್ ನಲ್ಲಿ ಯಾಕಿಷ್ಟು ಕಮ್ಮಿ?.. ಎಂದು ಪ್ರಾಣ ತಿನ್ನುತ್ತಾರೆ. ಅಥವಾ ಪ್ರಶ್ನಪತ್ರಿಕೆ ನೋಡಿ ಅಲ್ಲಾ... ನಮಗೇ ಈ ಪ್ರಶ್ನೆಗಳು ಅರ್ಥವಾಗಲ್ಲ... ಪಾಪ ಮಗು ... ಹೇಗೆ ಮಾಡಬೇಕು.. ಎಂದು ಅನುಕಂಪ ತೋರಿಸಿ ಗಣಿತದ ಗುಮ್ಮನಿಗೆ ನೀರು-ಗೊಬ್ಬರ ಹಾಕುತ್ತಾರೆ. ಅದಕ್ಕೆ ಸರಿಯಾಗಿ ಹೆಚ್ಚಿನ ಶಾಲೆಗಳಲ್ಲಿ ಗಣಿತವನ್ನು ನೀರಸವಾಗಿ ಬೋಧಿಸಿ ಮಗು ಅದರಿಂದ ವಿಮುಖನಾಗುವಂತೆ ಕೈಲಾದ ಸಹಾಯ ಮಾಡುತ್ತಾರೆ. ನಮ್ಮ ಗಣಿತಪಠ್ಯಪುಸ್ತಕಗಳ ವಿಷಯಗಳೂ ಆಸಕ್ತಿಯನ್ನು ಕೆರಳಿಸುವಂತಿಲ್ಲ. ಅಲ್ ಜೀಬ್ರಾದ ಎಕ್ಸ್, ವೈಗಳನ್ನು ನಿಜಜೀವನದಲ್ಲಿ ಹುಡುಕುತ್ತಾ...ಜ್ಯಾಮಿತಿಯ ಕೋನಗಳಲ್ಲಿ ಮೂಲೆಗುಂಪಾಗುತ್ತಾ, ನಾಚುರಲ್ - ಪ್ರೈಮ್- ರಾಷನಲ್ ನಂಬರುಗಳ ಮಧ್ಯೆ ವಿದ್ಯಾರ್ಥಿಯ ಕಳೆದುಹೋಗುತ್ತಾನೆ.
ಪ್ರಪಂಚಕ್ಕೆ ಸೊನ್ನೆಯನ್ನು ಕೊಟ್ಟವರೆಂದು, ಪೈ ಬೆಲೆಯನ್ನು ನಿರ್ಧರಿಸಿದವರೆಂದು, ಖಗೋಳದ ವಿದ್ಯಮಾನಗಳನ್ನು ಗಣಿತದ ಮೂಲಕ ವ್ಯಾಖ್ಯಾನಿಸಿದವರು ನಾವೆಂದು ಹೆಮ್ಮೆಪಡುವ ಭಾರತೀಯರು ನಾವು. ಆದರೆ ಇಂದಿಗೂ ಭಾರತೀಯ ಮಗುವಿಗೆ ಗಣಿತವೊಂದು ಕಬ್ಬಿಣದ ಕಡಲೆ. ಗಣಿತದ ಭಯದಿಂದ ಶಾಲೆ ತೊರೆದವರ, ಮನೆ ಬಿಟ್ಟು ಓಡಿಹೋದವರ ಅಸಂಖ್ಯ ಉದಾಹರಣೆಗಳು ನಮ್ಮಲ್ಲಿವೆ. ಕೆಲವೇ ದಿನಗಳ ಹಿಂದೆ ಗಣಿತದಲ್ಲಿ ಕಡಿಮೆ ಅಂಕಗಳು ಬಂದವೆಂದು ೯ನೇ ಮಹಡಿಯ ಮನೆಯ ಬಾಲ್ಕನಿಯಿಂದ ಹಾರಿ ಪ್ರಾಣ ತ್ಯಜಿಸಿದ ವಿದ್ಯಾರ್ಥಿ, ಮನೆಯಿಂದ ಓಡಿಹೋಗಿ ೪ ದಿನ ತಲ್ಲಣ ಸೃಷ್ಟಿಸಿದ್ದ ಬಾಲಕಿ, ಆ ಸಂಖ್ಯೆ ಇಂದೂ ಮುಂದುವರೆಯುತ್ತಿರುವುದರ ಸಂಕೇತಗಳು.ಅಂದರೆ ನಮ್ಮ ತಪ್ಪುಗಳಿಂದ ನಾವು ಪಾಠ ಕಲಿತಿಲ್ಲವೇ? ನಮ್ಮ ಗಣಿತದ ಪಠ್ಯಕ್ರಮವನ್ನು, ಕನಿಷ್ಟ ಪಕ್ಷ ಹತ್ತನೇ ತರಗತಿಯವರೆಗಿನ ಪಠ್ಯವನ್ನಾದರೂ ಮಕ್ಕಳ ಮನಸ್ಸನ್ನು ಅರಳುವಂತೆ ವಿನ್ಯಾಸಗೊಳಿಸಬಹುದೇ?ನಮ್ಮ ಕಲಿಸುವ ವಿಧಾನ ನೀರಸವಾಗಿದೆಯೇ? ಅಥವಾ ನಮ್ಮ ಪರೀಕ್ಷೆಗಳ ಮಾದರಿ ಬದಲಾಗಬೇಕೇ? ಪ್ರಕೃತಿಯಲ್ಲಿ, ಸಂಗೀತದಲ್ಲಿ, ನೃತ್ಯದಲ್ಲಿ, ಚಿತ್ರಗಳಲ್ಲಿ, ಭಾಷೆಗಳಲ್ಲಿ,ಕ್ರೀಡೆಗಳಲ್ಲಿ, ಕಾವ್ಯದಲ್ಲಿ ಅಷ್ಟೇ ಏಕೆ ಪ್ರಮಾಣಬದ್ಧವಾಗಿ ಸೃಷ್ಟಿಯಾದ ನಮ್ಮ ದೇಹದಲ್ಲೂ ಇರುವ ಗಣಿತವನ್ನು ಮಗು ಖುಷಿಯಿಂದ ಕಲಿಯುವಂತೆ ನೋಡುವಲ್ಲಿ ನಾವೇಕೆ ದಯನೀಯವಾಗಿ ಸೋತಿದ್ದೇವೆ? ಮೈತುಂಬಾ ಪ್ರಶ್ನೆಗಳನ್ನೇ ಹೊದ್ದಿರುವ ಗಣಿತವೇ ..ನೀನೇಕೆ ಇಂಥ ಕ್ರೂರಿ?